ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿಸಿಕೊಂಡ ಮಳೆರಾಯ ಮತ್ತು ಹೊಣೆ ಮರೆತ ಸರ್ಕಾರ

Last Updated 30 ಜೂನ್ 2012, 19:30 IST
ಅಕ್ಷರ ಗಾತ್ರ

ಮಳೆರಾಯ ಮುನಿಸಿಕೊಂಡಿದ್ದಾನೆ. ಅವನ ಬರವಿಗೆ ಕಾದು ಕಾದು ಬೇಸತ್ತ ಭೂಮಿತಾಯಿ ಸೆಟಗೊಂಡಿದ್ದಾಳೆ. ಮೊಣಕಾಲು ಮಟ್ಟ ಬೆಳೆ ನಿಂತು ನಳನಳಿಸಬೇಕಿದ್ದ ಹೊಲದಲ್ಲಿ ಎಲ್ಲಿಯೂ ಒಂದು ಹುಲ್ಲು ಕಡ್ಡಿ ಕಾಣುತ್ತಿಲ್ಲ. ರೈತ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಂಡಿದ್ದಾನೆ. ಈಚಿನ ವರ್ಷಗಳಲ್ಲಿ ಮಳೆರಾಯ ಹೀಗೆ ಕೈ ಕೊಟ್ಟಿರಲಿಲ್ಲ. ಕಳೆದ ಮುಂಗಾರು ಮಳೆಯೂ ಸರಿಯಾಗಿ ಆಗಲಿಲ್ಲ. ಈ ವರ್ಷ ಆರಂಭವೇ ಸರಿಯಿಲ್ಲ. ಆರಂಭ ಸರಿಯಿರದ ಯಾವ ಕೆಲಸವೂ ಸರಿಯಾಗಿ ಮುಗಿಯುವುದಿಲ್ಲ.

ಮೇ ತಿಂಗಳ ಕೊನೆಯಲ್ಲಿ ರೋಹಿಣಿ ಮಳೆ ಆಗಬೇಕು. ರೋಹಿಣಿ ಮಳೆಯಾದರೆ ಓಣಿಯಲ್ಲೆಲ್ಲ ಜೋಳ. ಮಾರ್ಚ್-ಏಪ್ರಿಲ್‌ನಲ್ಲಿ ರಾಶಿ ಮುಗಿಸಿಕೊಂಡ ರೈತ ಜಾತ್ರೆ, ಯಾತ್ರೆಯೆಲ್ಲ ಮಾಡಿ ಮತ್ತೆ ಭೂಮಿಯನ್ನು ಹರಗಬೇಕು. ಹರಗುವುದಕ್ಕಿಂತ ಮುಂಚೆ ಕೊಂಚ ಮಳೆಯಾಗಬೇಕು. ಹರಗಿದ ನಂತರ ಮತ್ತೆ ಮಳೆ ಬೀಳಬೇಕು.

ಮಳೆ ಬಿದ್ದ ನೆಲವನ್ನು ಹರಗುವುದು ಹಗುರ. ಕೆಳಗಿನ ಮಣ್ಣು ಮೇಲೆ ಬಂದು, ಮೇಲಿನ ಮಣ್ಣು ಕೆಳಗೆ ಹೋಗಿ ಭೂಮಿಯ ಒಡಲಲ್ಲಿ ಹಸಿರು ಚಿಗುರಲು ಇಂಥ ಹೊರಳಾಟ ಬೇಕು. ರೋಹಿಣಿ ಬೀಳಲಿಲ್ಲ. ಭೂಮಿಯನ್ನು ರೈತ ಹರಗಲೇ ಇಲ್ಲ. ಈಗ ಭೂಮಿ ಎಷ್ಟು ಬಿರುಸಾಗಿದೆ ಎಂದರೆ ಹರಗಲು ಕುಂಟೆ ನಾಟುವುದೇ ಇಲ್ಲ. ಮಣ್ಣು ಹೊರಳುವುದು, ಬೀಜ ಬಿತ್ತುವುದು, ಚಿಗುರು ನಳನಳಿಸುವುದು ಇನ್ನೆಲ್ಲಿ ಸಾಧ್ಯ?

ರೋಹಿಣಿ ಮಾತ್ರವಲ್ಲ ಮೃಗಶಿರವೂ ಬೀಳಲಿಲ್ಲ. ಆಕಾಶದಲ್ಲಿ ಆಗೀಗ ಮೋಡ ಕಟ್ಟಿದುವು. ಹಾಗೆಯೇ ತೇಲಿ ಹೋದುವು. ಬಿದ್ದ ಮಳೆಗೂ ರಭಸ ಇರಲಿಲ್ಲ. ಬೀಳಲೋ ಬೇಡವೋ ಎನ್ನುವಂತೆ, ಎಲ್ಲಿ ಬೀಳಬೇಕೋ ಅಲ್ಲಿ ಬೀಳಬಾರದು ಎನ್ನುವಂತೆ ಆಗೀಗ ಕೊಂಚ ಮಳೆಯಾಯಿತು; ಕೃಷಿ ಇಲಾಖೆಯ ಲೆಕ್ಕಕ್ಕೆ ಸೇರಿತು. ಆದರೆ, ರೈತನಿಗೆ ಏನೂ ಪ್ರಯೋಜನ ಆಗಲಿಲ್ಲ. ಕಳೆದ ವರ್ಷ 124 ತಾಲ್ಲೂಕುಗಳಲ್ಲಿ ಬರ ಬಿದ್ದಿತ್ತು. ಈ ವರ್ಷ ಪರಿಸ್ಥಿತಿ ಅದಕ್ಕಿಂತ ನಿಕೃಷ್ಟ. ಗಾಯದ ಮೇಲೆ ಬರೆ ಹಾಕುವುದು ಎಂದರೆ ಇದೇ ಇರಬೇಕು. ಈಗ ರಾಜ್ಯದ ಶೇ 90ಕ್ಕಿಂತ ಹೆಚ್ಚು ಒಣ ಭೂಮಿಯಲ್ಲಿ ಬಿತ್ತನೆ ಆಗಿಲ್ಲ.

ಮುಂದೆಯೂ ಮಳೆ ಯಾವಾಗ ಬರುತ್ತದೆ ಎಂದು ಗೊತ್ತಿಲ್ಲ. ಆಷಾಢದ ಗಾಳಿಗೆ ಮೋಡಗಳನ್ನು ಕಸಿದುಕೊಂಡು ಹೋಗುವುದೇ ರೂಢಿ. ನಮ್ಮ ರೈತನದು ನಿಸರ್ಗದ ಜತೆಗೆ ನಿತ್ಯ ಜೂಜು. ಇನ್ನು ಮಳೆ ಬಂದರೂ ಒಂದು ಪೀಕು ಕೈ ಕೊಟ್ಟಿದೆ. ಇನ್ನೊಂದು ಪೀಕು ತೆಗೆಯಲೂ ಬರುವುದಿಲ್ಲ. ಮುಂಗಾರು ಹೋದಂತೆಯೇ. ಹಿಂಗಾರು ಮಳೆಗೆ ಮತ್ತೆ ಕಾಯುತ್ತ ಕೂರಬೇಕು.

ಈ ವರ್ಷವಾದರೂ ಮಳೆ ಸಕಾಲದಲ್ಲಿ ಬಂದೀತು ಎಂದು ರೈತರು ಅಂದುಕೊಂಡಿದ್ದರು. ಕೋಡಿಹಳ್ಳಿ ಸ್ವಾಮೀಜಿಗಳಂಥವರು ಈ ಸಾರಿ ಕೆಂಡದಂಥ ಮಳೆ ಎಂದೆಲ್ಲ ಹೆದರಿಸಿದ್ದರು. ಯುಗಾದಿ ದಿನ ಪಂಚಾಂಗ ಓದಿದ ಪುರೋಹಿತರೂ ಈ ಸಾರಿ ಮಳೆ-ಬೆಳೆ ಉತ್ತಮ ಎಂದಿದ್ದರು.
 
ಹವಾಮಾನ ಇಲಾಖೆಯವರು ಸಮುದ್ರದಲ್ಲಿ ನೈರುತ್ಯ ಮುಂಗಾರು ಮಾರುತ ಬರುವುದನ್ನು ಹೋಗಿ ನೋಡಿಕೊಂಡು ಬಂದವರಂತೆ ಜೂನ್ 1ನೇ ತಾರೀಖು ಕೇರಳಕ್ಕೆ, 3ನೇ ತಾರೀಖು ಕರ್ನಾಟಕಕ್ಕೆ ಮಳೆ ಮಾರುತ ಪ್ರವೇಶವಾಗುತ್ತದೆ ಎಂದಿದ್ದರು.

ಯಾರ ಮಾತೂ ನಿಜವಾಗಲಿಲ್ಲ. ಇವರೆಲ್ಲರ ಮಾತು ನಂಬಿಕೊಂಡು ರೈತ ಬೀಜ ತಂದು ಇಟ್ಟಿದ್ದ. ಗೊಬ್ಬರ ಕೊಂಡಿದ್ದ. ಈ ಸಾರಿ ಗೊಬ್ಬರದ ದರ ಕಳೆದ ವರ್ಷಕ್ಕಿಂತ ದುಪ್ಪಟ್ಟು ಆಗಿತ್ತು.
 
ಬೀಜಕ್ಕಾಗಿ ಹಾವೇರಿಯಲ್ಲಿ ಹೊಡೆದಾಡಿ ಪೊಲೀಸರಿಂದ ಏಟು ತಿಂದಿದ್ದ! ಕಳೆದ ಸಾರಿ ಬಂದ ಬೆಳೆಯನ್ನೆಲ್ಲ ಮಾರಿ ಬಂದ ಹಣವನ್ನು ಇದೆಲ್ಲದಕ್ಕಾಗಿ ಖರ್ಚು ಮಾಡಿದ್ದ. ಹೊಲದಲ್ಲಿ ಬೆಳೆ ಇದ್ದರೆ ಅಡತಿ ಅಂಗಡಿಯ ದಲಾಲರು ಬೆಳೆಸಾಲ ಕೊಡುತ್ತಿದ್ದರು.

ಬಿರುಕು ಬಿದ್ದ ಬಂಜರು ಹೊಲದ ಮೇಲೆ ಯಾರು ಸಾಲ ಕೊಡುತ್ತಾರೆ? ಸರ್ಕಾರ ಸೊನ್ನೆ ಬಡ್ಡಿ ದರದಲ್ಲಿ ಸಾಲ ಕೊಡುತ್ತದೆ ಎಂದಿದ್ದರಿಂದ ಕಳೆದ ಸಾರಿಯ ಬೆಳೆ ಸಾಲವನ್ನೂ ಕಟ್ಟಿಬಿಟ್ಟಿದ್ದ. ಈಗ ಅವನ ಕೈಯಲ್ಲಿ ಬಿಡಿಗಾಸೂ ಇಲ್ಲ.
 
ಎಲ್ಲಿಯಾದರೂ ಹೋಗಿ ದುಡಿದು ಬಂದರೆ ಊಟಕ್ಕೆ ದಾರಿ. ಮಳೆ ಸರಿಯಾಗಿ ಆಗಿ, ಹೊಲದಲ್ಲಿ ಬೆಳೆ ಬೆಳೆದು ನಿಂತಿದ್ದರೆ ಹಾಡು ಹೇಳುತ್ತ ಕಳೆ ಕೀಳಬೇಕಿದ್ದ ಹೆಂಗಳೆಯರು ಈಗ ಗೌಂಡಿ ಕೆಲಸ ಮಾಡಲು ಹೊರಟಿದ್ದಾರೆ. ಹೊಟ್ಟೆ ಬಟ್ಟೆಗೆ ಬೇರೆ ದಾರಿ ಏನೂ ಇಲ್ಲ. ದುಡಿಯಬೇಕು, ತಿನ್ನಬೇಕು.

ಜನರು ಹೇಗೋ ಎಲ್ಲಿಯೋ ದುಡಿದು ಏನಾದರೂ ತಿಂದು ಮಲಗುತ್ತಾರೆ. ಸರ್ಕಾರ ಕೊಡುವ ರೇಷನ್ ಅಕ್ಕಿಯಾದರೂ ಅವರ ಹೊಟ್ಟೆ ತುಂಬುತ್ತದೆ. ಮೂಕಪ್ರಾಣಿಗಳು ಏನು ಮಾಡಬೇಕು? ಕಳೆದ ವರ್ಷವೂ ಮಳೆಯಾಗದೆ ಬೆಳೆ ಬರಲಿಲ್ಲ. ಮೇವೂ ಹುಟ್ಟಲಿಲ್ಲ.
 
ಈ ವರ್ಷ ಆರಂಭದಲ್ಲಿ ಮಳೆಯಾಗಿ ಗುಡ್ಡಗಾಡಿನಲ್ಲಿ ಒಂದಿಷ್ಟು ಹಸಿರು ಉಕ್ಕಿದ್ದರೆ ಅದನ್ನಾದರೂ ತಿಂದು ಅವು ಬದುಕುತ್ತಿದ್ದುವು. ಈಗ ಒಣ ಮೇವೂ ಇಲ್ಲ. ಹಸಿ ಮೇವೂ ಇಲ್ಲ. ರೈತ ತಾನು ಉಣ್ಣುವಾಗ ಗೋದಲಿಯಲ್ಲಿ ಕಣ್ಣೀರು ಹಾಕುತ್ತ ನಿಂತ ಆಕಳು, ಎತ್ತು, ಎಮ್ಮೆ ಕಡೆ ನೋಡುತ್ತಾನೆ. ತಾನೂ ಕಣ್ಣೀರು ಹಾಕುತ್ತಾನೆ.
 
ಆತ ತನ್ನನ್ನು ಯಾರಾದರೂ ಒತ್ತೆಯಿಟ್ಟುಕೊಂಡಾದರೂ ಮೇವು ಕೊಟ್ಟಿದ್ದರೆ ತಂದು ದನಗಳಿಗೆ ಹಾಕುತ್ತಿದ್ದೆ ಎನ್ನುತ್ತಾನೆ. ಮೇವನ್ನು, ಹುಲ್ಲನ್ನು ಸೃಷ್ಟಿಸಲು ಆಗುತ್ತದೆಯೇ? ಮನುಷ್ಯನ ಅಹಂಕಾರಕ್ಕೆ ಹೀಗಲ್ಲದೆ ಇನ್ನು ಹೇಗೆ ಪೆಟ್ಟು ಬೀಳಲು ಸಾಧ್ಯ?

ರಾಯಚೂರು ಜಿಲ್ಲೆಯಲ್ಲಿ ಬತ್ತ ಬೆಳೆಯುವ ರೈತರು ಒಂದಿಷ್ಟು ಹುಲ್ಲು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಐದರಿಂದ ಆರು ಸಾವಿರ ರೂಪಾಯಿ ಕೊಟ್ಟರೆ ಒಂದು ಟ್ರ್ಯಾಕ್ಟರ್ ಲೋಡು ಹುಲ್ಲು ಕೊಡುತ್ತಾರೆ. ಟ್ರ್ಯಾಕ್ಟರಿಗೆ ಒಂದೂವರೆಯಿಂದ ಎರಡು ಸಾವಿರ ರೂಪಾಯಿ ಬಾಡಿಗೆ ಬೇರೆ ಕೊಡಬೇಕು.

ಒಂದು ಲೋಡು ಹುಲ್ಲಿಗೆ ಕನಿಷ್ಠ ಏಳು ಸಾವಿರ ರೂಪಾಯಿ ಖರ್ಚು ಬರುತ್ತದೆ. ಯಾರಾದರೂ ಹಾಗೆಯೇ ತೆಗೆದುಕೊಂಡು ಹೋದರೆ ಸಾಕು ಎನ್ನುತ್ತಿದ್ದ ಹುಲ್ಲಿಗೂ ಈಗ ಎಲ್ಲಿಲ್ಲದ ಬೆಲೆ, ಬೇಡಿಕೆ. ಅದೂ ಸಾಕಷ್ಟು ಸಿಗುವುದಿಲ್ಲ. ಕುರಿಗಾಹಿಗಳು ಗುಡ್ಡಗಾಡಿನಲ್ಲಿ ಕುರಿಗಳನ್ನು ಮೇಯಿಸಿಕೊಂಡು ಬಂದು ಹರಗಿದ ಹೊಲದಲ್ಲಿ ಗೊಬ್ಬರಕ್ಕೆ ಬಿಡುತ್ತಿದ್ದರು. ಈಗ ಕುರಿಗಳಿಗೆ ಮೇವು ಇಲ್ಲ. ರೈತರಿಗೆ ಗೊಬ್ಬರ ಇಲ್ಲ. ಕುರಿಗಾರರಿಗೆ ಹೊಟ್ಟೆಗೆ ಹಿಟ್ಟೂ ಇಲ್ಲ.

ಮಳೆ ಆಗಲಿಲ್ಲ ಎಂದರೆ ಬರುವ ಕಷ್ಟಗಳು ಒಂದೆರಡಲ್ಲ. ಕಳೆದ ವರ್ಷವೇ ಅಣೆಕಟ್ಟೆಗಳು ತುಂಬಿರಲಿಲ್ಲ. ಈ ವರ್ಷದ ಬೇಸಿಗೆಯಲ್ಲಿ ಕೃಷ್ಣಾ ತೀರದ ಜನರಿಗೆ ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟೆಯಿಂದ ನೀರು ಖರೀದಿಸಬೇಕಾಯಿತು. ಎಲ್ಲ ನದಿಗಳು ತಮ್ಮ ಹರಿವಿನ ಗುಂಟ ಒಣಗಿಬಿಟ್ಟಿವೆ. ಅಣೆಕಟ್ಟೆಗಳಲ್ಲಿ ಅಷ್ಟೋ ಇಷ್ಟೋ ಮಾತ್ರ ನೀರು ಇದೆ.
 
ಊರ ಹೊರಗಿನ ಕೆರೆಗಳಲ್ಲಿಯೂ ನೀರು ಉಳಿದಿಲ್ಲ. ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನ ಬಳಿಯ ದರೋಜಿ ಕೆರೆಯಲ್ಲಿ ಒಂದು ಹನಿ ನೀರು ಇಲ್ಲ. ರಾಜ್ಯದ ಎರಡನೇ ಅತಿ ದೊಡ್ಡ ಕೆರೆಯದು. 2,275 ಎಕರೆಯಷ್ಟು ವಿಸ್ತೀರ್ಣ. ದೊಡ್ಡ ಕೆರೆಗಳೇ ಒಣಗಿದ ಮೇಲೆ ಸಣ್ಣಕೆರೆಗಳ ಪಾಡು ಕೇಳುವುದು ಬೇಡ. ನದಿಗಳು, ಕೆರೆಗಳು ಒಣಗಿ ಹೋದ ಮೇಲೆ ಊರಿನ ಬಾವಿಗಳಲ್ಲಿ ನೀರು ಉಳಿಯಲು ಸಾಧ್ಯವಿಲ್ಲ.
 
ಕೊಳವೆ ಬಾವಿಗಳ ಆಳದಿಂದ ಗೊರ ಗೊರ ಸದ್ದು ಮಾತ್ರ ಕೇಳಿ ಬರುತ್ತಿದೆ. ಮಧ್ಯರಾತ್ರಿ ಎರಡು ಗಂಟೆಗೆ ಎದ್ದು ಜನರು ನೀರು ತುಂಬುತ್ತಿದ್ದಾರೆ. ಆಗಲಾದರೂ ಒತ್ತಡ ಕಡಿಮೆಯಾಗಿ ಒಂದಿಷ್ಟು ನೀರು ಸಿಕ್ಕೀತು ಎಂದು ಅವರಿಗೆ ಆಸೆ. ವಿಜಾಪುರ ಜಿಲ್ಲೆಯಲ್ಲಿ ಆಳದ ಬಾವಿಗಳ ಒಳಗೆ ಮಕ್ಕಳನ್ನು ಇಳಿಸಿ ನೀರು ತುಂಬಿಸುವುದು ಸಾಮಾನ್ಯವಾಗಿದೆ. ಜನರು ಬದುಕಲು ಎಷ್ಟೆಲ್ಲ ಕಷ್ಟ ಪಡುತ್ತಾರೆ!

ನಲ್ಲಿಯಲ್ಲಿ ವಾರಕ್ಕೆ, ಹದಿನೈದು ದಿನಕ್ಕೆ ಬರುವ ನೀರನ್ನು ಕೊಡ, ಹಂಡೆ, ಡ್ರಮ್ಮು ಎಂದು ಸಿಕ್ಕ ಸಿಕ್ಕಲ್ಲಿ ತುಂಬಿ ಇಟ್ಟುಕೊಳ್ಳುತ್ತಾರೆ. ಮತ್ತೆ ಎಂಟು, ಹತ್ತು ದಿನ ಕಾಯುತ್ತಾರೆ.

ಆದರೆ, ಹೀಗೆ ನೀರು ಸಂಗ್ರಹಿಸಿ ಇಟ್ಟ ಡ್ರಮ್ಮುಗಳನ್ನು, ಸಂಪುಗಳನ್ನು, ತೊಟ್ಟಿಗಳನ್ನು ಸರಿಯಾಗಿ ಮುಚ್ಚದೇ ಇರುವ ಕಾರಣ ಕೋಲಾರ ಜಿಲ್ಲೆಯಲ್ಲಿ ಡೆಂಗೆ ರೋಗ ಮೊದಲಿಟ್ಟಿದೆ.

ಈಗಾಗಲೇ ನಾಲ್ವರು ಸತ್ತಿದ್ದಾರೆ. ಡೆಂಗೆ ಹಬ್ಬಿಸುವ ಸೊಳ್ಳೆ ತಿಳಿ ನೀರಿನಲ್ಲಿಯೇ ಮೊಟ್ಟೆ ಇಡುತ್ತದೆ. ಎಂಟು ದಿನ ಸಂಗ್ರಹಿಸಿ ಇಟ್ಟ ನೀರು ಸಿಕ್ಕರಂತೂ ಅದರ ಸಂತಾನ ಸಾಮರ್ಥ್ಯ ಇಮ್ಮಡಿ ಮುಮ್ಮಡಿ ಹೆಚ್ಚುತ್ತದೆ. ಹೀಗೆ ನೀರು ಸಂಗ್ರಹಿಸಿ ಇಡಬಾರದು ಎಂದು ವೈದ್ಯಾಧಿಕಾರಿಗಳು ಹೇಳುವ ಮಾತನ್ನು ಜನರು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಹಾಗೆ ನೀರು ಸಂಗ್ರಹಿಸಿ ಇಡದೇ ಅವರಿಗೆ ಬೇರೆ ದಾರಿಯೇ ಇಲ್ಲ.

ಜನರಿಗೆ ಬೇರೆ ಏನು ದಾರಿ ಇದೆ? ರಾಜ್ಯದಲ್ಲಿ ಒಂದು ಜವಾಬ್ದಾರಿಯುತ ಸರ್ಕಾರ ಇದೆ ಎಂದು ಅವರಿಗೆ ಅನಿಸುತ್ತಿಲ್ಲ. ಇದ್ದಿದ್ದರೆ ಸರ್ಕಾರ ಏನಾದರೂ ಮಾಡುತ್ತಿತ್ತು. ಯಾರು ಮುಖ್ಯಮಂತ್ರಿಯಾಗಬೇಕು ಎಂದು ಅವರು ಪಕ್ಕಾ ಹೊಣೆಗೇಡಿಗಳ ಹಾಗೆ ಹೊಡೆದಾಡುತ್ತಿರುವಾಗ ಜನರ ಕಡೆಗೆ ಅವರಿಗೆ ಲಕ್ಷ್ಯ ಹೇಗೆ ಹೋಗುತ್ತದೆ? ವಿರೋಧ ಪಕ್ಷದವರೇನು ಕಡಿಮೆಯಿಲ್ಲ. ಅವರಿಗೂ ಮುಂದಿನ ಚುನಾವಣೆಯದೇ ಲೆಕ್ಕ.

ಈ ಸರ್ಕಾರ ಯಾವಾಗ ಬೀಳುತ್ತದೆ? ನಾವು ಯಾವಾಗ ಅಧಿಕಾರ ಹಿಡಿಯಬೇಕು ಎಂದೇ ಅವರಿಗೂ ನಿತ್ಯ ಕನಸು. ಜನರು ಅದಕ್ಕೇ ನಾಯಕರ ಗೊಡವೆ ಬಿಟ್ಟು ಕತ್ತೆಗಳ ಮದುವೆ, ಮೆರವಣಿಗೆ ಮಾಡುತ್ತಿದ್ದಾರೆ. ರಾತ್ರಿಯಿಡೀ ಒದ್ದೆ ಬಟ್ಟೆ ತೊಟ್ಟು ಭಜನೆ ಮಾಡುತ್ತಿದ್ದಾರೆ.
 
ಹುನಗುಂದ ತಾಲ್ಲೂಕಿನ ಒಂದು ಹಳ್ಳಿಯಲ್ಲಿ ಇಡೀ ಊರಿಗೆ ಊರೇ ದೇವರಿಗೆ ದೀಡ ನಮಸ್ಕಾರ ಹಾಕಿದೆ. ಮುತ್ತೈದೆಯರು ತಲೆಯ ಮೇಲೆ ಕೊಡ ಹೊತ್ತುಕೊಂಡು ಹೋಗಿ ಮಳೆಪ್ಪಯ್ಯನಿಗೆ ಹುಯ್ದು ಬೀಳೋ ಮಳೆರಾಯ ಎಂದು ಆರ್ತವಾಗಿ ಮೊರೆ ಇಟ್ಟಿದ್ದಾರೆ.
ಮುಸ್ಲಿಂ ಬಾಂಧವರು ಪ್ರಾರ್ಥನೆಯ ಗಳಿಗೆಯಲ್ಲಿ ಮಳೆರಾಯನಿಗೂ ಸಲಾಮು ಹಾಕಿದ್ದಾರೆ... ಇನ್ನೇನು ಮಾಡಬೇಕು? ನಮ್ಮಿಂದ ತಪ್ಪಾಗಿದೆ ಮಾರಾಯ. ಇನ್ನೆಷ್ಟು ದಿನ ಹೀಗೇ ಸಿಟ್ಟು ಮಾಡಿಕೊಳ್ಳುತ್ತಿ? ಹುಯ್ಯೋ. ಹುಯ್ಯೋ. ನಿನಗೆ ಕೈ ಮುಗಿಯುತ್ತೇವೆ ಎನ್ನದೆ ಬೇರೆ ದಾರಿ ಇದ್ದಂತೆ ಕಾಣುವುದಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT