ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರಿದು ಕಟ್ಟಬನ್ನಿ ಹೊಸ ನಾಳೆಗಳನು

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ಬೆಳಕು ನೀಡುವ ಮರಗಳ ಬಗ್ಗೆ ಗೊತ್ತೆ? ಬೀದಿಯ ಎರಡೂ ಬದಿಗೆ ಅಂಥದ್ದೇ ಮರಗಳನ್ನು ಬೆಳೆಸಿದರೆ ವಿದ್ಯುತ್ ದೀಪಗಳೇ ಬೇಕಾಗಿಲ್ಲ. ವಿಜ್ಞಾನಿಗಳು ಇಪ್ಪತ್ತು ವರ್ಷಗಳ ಹಿಂದೆಯೇ ಪುಟ್ಟ ಸಸ್ಯಗಳ ಮೇಲೆ ಈ ಪ್ರಯೋಗವನ್ನು ನಡೆಸಿದ್ದರು. ಮಿಂಚು ಹುಳದ ಗುಣಾಣುವನ್ನು ತೆಗೆದು ಅದನ್ನು ತಂಬಾಕಿನ ಸಸ್ಯದ ಡಿಎನ್‌ಎಯೊಳಕ್ಕೆ ತೂರಿಸಿ ಕತ್ತಲಲ್ಲೂ ಪಳಪಳಿಸಬಲ್ಲ ಹೊಸ ಸಸ್ಯಗಳನ್ನು ರೂಪಿಸಿದ್ದರು.

ಅಷ್ಟೇಕೆ, ಕೋತಿಯ ಭ್ರೂಣಕ್ಕೂ ಅದೇ ಜೀನನ್ನು ಸೇರಿಸಿ ಮರಿಕೋತಿಯನ್ನೂ ಮಿನುಗಿಸಿದ್ದರು. ಈಗ ಅದೇ ತಂತ್ರವನ್ನು ಇನ್ನಷ್ಟು ಸುಧಾರಿಸಿ, ಹೂಕುಂಡಗಳಲ್ಲಿ ಬೆಳೆಸಬಹುದಾದ ವಿವಿಧ ಸಸ್ಯಗಳಲ್ಲಿ ಬೆಳಕು ಮಿಂಚುವಂತೆ ಮಾಡಿದರು. ಎಲೆ, ಮೊಗ್ಗುಗಳಷ್ಟೇ ಅಲ್ಲ, ಹೂಗಳೂ ಕತ್ತಲಲ್ಲಿ ಮಿನುಗುತ್ತಿದ್ದರೆ ಎಷ್ಟು ಚೆನ್ನಾಗಿರುತ್ತದೆ. ಕುಂಡಗಳಿಗೆ ಬಂದ ಚಂದ ಆಮೇಲೆ ಮರಗಳಿಗೆ ಬಾರದೆ?

ಎತ್ತರ ಬೆಳೆಯಬಲ್ಲ ವೃಕ್ಷಗಳ ಜೀವಕೋಶದಲ್ಲೂ ಮಿಂಚುಹುಳದ ಲೂಸಿಫೆರೇಸಿ ಜೀನನ್ನು ತೂರಿಸಿದರೆ, ಅಹಾ, ಕೊಂಬೆರೆಂಬೆಗಳಲ್ಲಿ ತಾರಾಲೋಕ. ಮಿನುಗುವ ಕೋತಿಗಳನ್ನೂ ಅಂಥ ಮರಕ್ಕೇರಿಸಿ ಸ್ವಪ್ನನಗರಿಯನ್ನೇ ನಿರ್ಮಿಸಬಹುದು. ಕತ್ತಲಲ್ಲಿ ಬೀದಿ ಬೆಳಗಿಸಿ ವಿದ್ಯುತ್ ವೆಚ್ಚವನ್ನು ಉಳಿಸಿ, ಕಳ್ಳಕಾಕರ ಮತ್ತು ಬೀದಿ ಕಾಮಣ್ಣರ ಕನಸುಗಳನ್ನೆಲ್ಲ ಮಣ್ಣುಪಾಲು ಮಾಡಬಹುದು.

ಇಂಥ ಹೊಸ ಹೊಸ ಐಡಿಯಾಗಳಿಗೆ ‘ಮುರಿದು ಕಟ್ಟುವ ತಂತ್ರಜ್ಞಾನ’ (ಡಿಸ್ರಪ್ಟಿವ್ ಇನ್ನೊವೇಶನ್) ಎನ್ನುತ್ತಾರೆ. ಬೀದಿಬದಿಯ ಹಳೇ ಮರಗಳನ್ನೆಲ್ಲ ಮುರಿದು ಕೆಡವಿ ಹೊಸ ಮರಗಳನ್ನು ಬೆಳೆಸುವ ವಿಷಯ ಇಲ್ಲಿ ಉದಾಹರಣೆಯಾಗಿ ಬಂದಿದೆ ಅಷ್ಟೆ. ವಿಜ್ಞಾನ ತಂತ್ರಜ್ಞಾನ ಲೋಕದಲ್ಲಿ ಹೀಗೆ ಮುರಿದು ಕಟ್ಟುವ ಸಾಹಸಗಳು ಚರಿತ್ರೆಯುದ್ದಕ್ಕೂ ಕಾಣಸಿಗುತ್ತವೆ.

1879ರಲ್ಲಿ ಕಾರ್ಲ್ ಬೆಂಝ್ ಎಂಬಾತ ಮೋಟಾರು ಗಾಡಿಗೆ ಪೇಟೆಂಟ್ ಪಡೆದಿದ್ದೇ ಕುದುರೆಗಾಡಿ, ಸಾರೋಟುಗಳು ಮೂಲೆಗುಂಪಾದವು. ಕಂಪ್ಯೂಟರ್ ಬಂದಮೇಲೆ ಟೈಪ್‌ರೈಟರ್‌ಗಳ ಇತಿಶ್ರೀಯಾಯಿತು; ಇಂಟರ್‌ನೆಟ್ ಬಂದಮೇಲೆ ಅಂಚೆಪೆಟ್ಟಿಗೆಗಳು ಕಾಣೆಯಾದವು.

ಸ್ಮಾರ್ಟ್ ಫೋನ್ ಬಂದಮೇಲೆ ರೇಡಿಯೊ, ಹ್ಯಾಮ್ ರೇಡಿಯೊ, ಅಲಾರ್ಮ್ ಗಡಿಯಾರ, ಡೈರಿ, ಕ್ಯಾಲೆಂಡರು, ಕೊನೆಗೆ ಕಂಪ್ಯೂಟರೂ ನಿರುಪಯುಕ್ತ ಎನ್ನುವಲ್ಲಿಗೆ ಬಂದು ಮುಟ್ಟಿದೆ (1876ರಲ್ಲಿ ಅಲೆಕ್ಸಾಂಡರ್ ಗ್ರಹಾಂ ಬೆಲ್ ಎಂಬಾತ ಟೆಲಿಫೋನನ್ನು ರೂಪಿಸಿ ಸಂಪರ್ಕ ಕ್ರಾಂತಿಗೆ ನಾಂದಿ ಹಾಡಿದ್ದು, 1903ರಲ್ಲಿ ರೈಟ್ ಸಹೋದರರು ಹಾರುವ ಯಂತ್ರವನ್ನು ರೂಪಿಸಿ ಇಡೀ ಮನುಕುಲಕ್ಕೇ ರೆಕ್ಕೆ ಮೂಡಿಸಿದ್ದು- ಇವೆಲ್ಲ ಕ್ರಾಂತಿಕಾರಿ ಸಂಗತಿಗಳೇ ಹೌದಾದರೂ ಇವು ಆಗ ಅಸ್ತಿತ್ವದಲ್ಲಿದ್ದ ಯಾವುದನ್ನೂ ಭಗ್ನ ಮಾಡಲಿಲ್ಲ; ಹಾಗಾಗಿ ಮುರಿದು ಕಟ್ಟಿದ ಶ್ರೇಯ ಅವಕ್ಕಿಲ್ಲ). ಈಗಂತೂ ತಂತ್ರಜ್ಞಾನಕ್ಕೆ ಅದೆಂಥ ವೇಗ ಬಂದಿದೆ ಎಂದರೆ ಭವಿಷ್ಯ ನಮ್ಮ ಮೇಲೆ ಹೇಗೆ ಮುಗಿಬೀಳಲಿದೆ ಎಂದು ಊಹಿಸಲೂ ಸಾಧ್ಯವಿಲ್ಲ.

ಅದಕ್ಕೇ ಕಳೆದವಾರ ತಿರುಪತಿಯಲ್ಲಿ ನಡೆದ 104ನೇ ಸೈನ್ಸ್ ಕಾಂಗ್ರೆಸ್ ಮೇಳದಲ್ಲಿ ಪ್ರಧಾನಿ ಮೋದಿಯವರು ‘ಅಂಥ ಭಗ್ನಕಾರಕ ತಂತ್ರಜ್ಞಾನದ ಮೇಲೆ ಕಣ್ಣಿಡಿ’ ಎಂದು ಭಾರತೀಯ ವಿಜ್ಞಾನಿಗಳಿಗೆ ಸಲಹೆ ನೀಡಿದರು (ಅವರೇ ಸ್ವತಃ ನಿರ್ಮನೀಕರಣದ ಮಂತ್ರದಂಡವನ್ನು ಪ್ರಯೋಗಿಸಿ ಇಡೀ ದೇಶದ ಗೃಹಿಣಿಯರ ಒಬ್ಬಜ್ಜಿ ಉಳಿತಾಯಗಳನ್ನೆಲ್ಲ ಭಗ್ನ ಮಾಡಿದ್ದನ್ನು ಇಲ್ಲಿ ಕಡೆಗಣಿಸೋಣ). ಇಂದಿನ ಗಣಕ ತಂತ್ರಶಕ್ತಿ ಮತ್ತು ಯಂತ್ರಜಗತ್ತು- ಈ ಎರಡರ ವಿರಾಟ್ ಬೆಸುಗೆಯ ಬಗ್ಗೆ ಎಚ್ಚರಾಗಿರಬೇಕೆಂದು ಅಲ್ಲಿ ನೆರೆದಿದ್ದ ಆರು ಸಾವಿರ ವಿಜ್ಞಾನ ಪ್ರತಿನಿಧಿಗಳಿಗೆ ಕರೆ ಕೊಟ್ಟರು.

ಅವರು ಅಲ್ಲಿ ಈ ಮಾತುಗಳನ್ನು ಹೇಳುತ್ತಿರುವಾಗ ಅಮೆರಿಕದ ಲಾಸ್ ವೆಗಾಸ್ ನಗರದಲ್ಲಿ ನಾಳಿನ ತಂತ್ರಜ್ಞಾನಗಳ ವಿಶ್ವಮೇಳ ಅದೇ ತಾನೆ ಆರಂಭವಾಗಿತ್ತು. ಜಗತ್ತಿನ ಎಲ್ಲ ಹೈಟೆಕ್ ಕಂಪನಿಗಳು ತಂತಮ್ಮ ಸಾಧನ ಸಲಕರಣೆಗಳನ್ನು ಅಲ್ಲಿ ಪ್ರದರ್ಶನಕ್ಕೆ ತಂದಿದ್ದರು. ಅಲ್ಲೊಂದು ಮಾಯಾವಾಸ್ತವ, ಅತಿವಾಸ್ತವ ಲೋಕವೇ ಮೈದಳೆದಿತ್ತು. ಕ್ಯಾಲೆಂಡಿರನ ಹಾಗೆ ಸುರುಳಿ ಬಿಚ್ಚಿ ತೂಗು ಹಾಕಬಹುದಾದ ಟಿ.ವಿ ಇತ್ತು.

ಓಡಾಡುತ್ತ ಮಾತಾಡುವ ಫ್ರಿಜ್ ಇತ್ತು. ‘ನುಗ್ಗೇಕಾಯಿ ಕೂಟು ಮಾಡುವುದು ಹೇಗೆ?’ ಎಂದು ನೀವು ಕೂತಲ್ಲೇ ಆ ತಂಗಳು ಪೆಟ್ಟಿಗೆಯತ್ತ ತಿರುಗಿ ಕೇಳಿದರೆ ಸಾಕು, ಅದು ತಾನಾಗಿ ಜಾಲತಾಣಗಳನ್ನು ಹುಡುಕಿ, ರಿಸಿಪಿ ತೆಗೆದು ಉತ್ತರ ಹೇಳುತ್ತದೆ ಅಥವಾ ಬೇಕಿದ್ದ ಸಾಮಗ್ರಿ ಏನೇನೆಂದು ಪಟ್ಟಿ ಮಾಡಿ ತನ್ನ ಬಾಗಿಲ ಮೇಲೆಯೇ ಮೂಡಿಸುತ್ತದೆ. ಪೆಟ್ಟಿಗೆಯೊಳಗೆ ನುಗ್ಗೇಕಾಯಿ ಇದೆಯೊ ಇಲ್ಲವೊ, ಉದ್ದಿನ ಬೇಳೆಯ ಸ್ಟಾಕ್ ಎಷ್ಟಿದೆ ಎಂಬುದನ್ನು ಹೇಳುತ್ತದೆ. ಅಷ್ಟರಲ್ಲಿ ನಿಮ್ಮ ಮೂಡ್ ಬದಲಾಗಿದ್ದರೆ ಸಮೀಪದ ದರ್ಶಿನಿ ಹೊಟೆಲ್‌ನ ನಂಬರನ್ನು ಡಯಲ್ ಮಾಡುತ್ತಿತ್ತೇನೊ.

ಲಾಸ್‌ವೆಗಾಸ್‌ನ ಸಿಇಎಸ್ ಮೇಳದಲ್ಲಿ ಪ್ರದರ್ಶನಕ್ಕಿರುವ ತರಾವರಿ ರೋಬಾಟ್‌ಗಳಂತೂ ಕೇಳಲೇಬೇಡಿ. ತೊಟ್ಟಿಲ ಮಗುವಿನಿಂದ ಹಿಡಿದು ಲಕ್ವ ಹೊಡೆದ ಅಜ್ಜನವರೆಗೆ ಎಲ್ಲರ ಸೇವೆ ಮಾಡಬಲ್ಲ, ಕತೆ ಹೇಳಿ ರಂಜಿಸಬಲ್ಲ, ನೀರು-ವಿದ್ಯುತ್ತಿನ ಬಿಲ್ ಸಂದಾಯ ಮಾಡಬಲ್ಲ ರೋಬಾಟ್‌ಗಳು. ಇವೆಲ್ಲವುಗಳ ಜೊತೆ, ನಾಳಿನ ಬುದ್ಧಿವಂತ ಮನೆಗಳೂ ಅಲ್ಲಿದ್ದವು.

ಅದರೊಳಕ್ಕೆ ಹೋಗಿ ಅಲ್ಲಿದ್ದ ಒಂದೇ ಒಂದು ರಿಮೋಟ್‌ನಿಂದ ಮನೆಯೊಳಗಿನ ಎಲ್ಲವಕ್ಕೂ ಚಾಲನೆ ಕೊಡುವ ವ್ಯವಸ್ಥೆ ಇತ್ತು. ಟಿ.ವಿ, ಮಿಕ್ಸಿ, ಫ್ರಿಜ್, ದೀಪದ ಬಲ್ಬ್, ಕಿಟಕಿ ಪರದೆ, ಕೊನೆಗೆ ಮುಚ್ಚಿದ ಬಾಗಿಲತ್ತ ಅದೇ ರಿಮೋಟ್ ಹಿಡಿದರೆ ಹೊರಗಡೆಯ ತಾಪಮಾನ ಎಷ್ಟಿದೆ, ಯಾರು ಭೇಟಿಗೆ ಬಂದಿದ್ದಾರೆ ಎಲ್ಲವೂ ಗೊತ್ತಾಗುತ್ತಿತ್ತು.

ಇನ್ನು ತೊಡುವ, ಧರಿಸುವ ಕಂಪ್ಯೂಟರ್‌ಗಳ ಕತೆಯೇ ಬೇರೆ. ವಾಚು, ಅಂಗಿಬಟನ್ನು, ಪಾದರಕ್ಷೆ, ತೋಳಿನ ತ್ವಚೆಗೇ ಅಂಟಿಕೂರಬಲ್ಲ ಪ್ಯಾಚು ಎಲ್ಲವೂ ಡಿಜಿಟಲ್ ಆಗಿರುತ್ತವೆ. ಕನ್ನಡಕದ ಫ್ರೇಮಿನ ಮೂಲೆಯಲ್ಲೇ ಪುಟ್ಟ ಬಿಂದುವಿನಂತೆ ಕೂತು ನಿಮ್ಮ ಕಣ್ಣಿನ ಅಕ್ಷಿಪಟದ ಹಿಂದಿನ ರಕ್ತನಾಳಗಳನ್ನೂ ಗಮನಿಸುತ್ತ ನಿಮ್ಮ ಆರೋಗ್ಯದ ಮೇಲೆ ಕಣ್ಣಿಡುವ (ಕಣ್‌ಡಾಕ್ಟರ್) ಬೇಕೆ?

ನಿಮಗೆ ಬೇಡವಾಗಿದ್ದರೆ ಮನೆಯಲ್ಲಿ ಒಬ್ಬಳೇ ಕೂತಿರಬೇಕಾದ ನಿಮ್ಮ ಅಸ್ವಸ್ಥ ಅಮ್ಮನಿಗೆ ಅದನ್ನು ತೊಡಿಸಿ ನೀವು ಕೆಲಸಕ್ಕೆ ಹೋಗಬಹುದಲ್ಲ? ಅಥವಾ ಸರಿರಾತ್ರಿಯಲ್ಲಿ ವಾಹನ ಓಡಿಸಬೇಕಾದ ಚಾಲಕ ತಾನು ಕೂತಲ್ಲೇ ತೂಕಡಿಸದ ಹಾಗೆ ಎಚ್ಚರಿಸಲು ಅಂಥ ಕನ್ನಡಕ ಬೇಕಲ್ಲ?

ನೀವು ಕಚೇರಿಯಲ್ಲಿ ಯಾವುದೋ ವರದಿಯನ್ನು ಟೈಪ್ ಮಾಡುತ್ತ ಕೂತಿರುವಾಗ ನಿಮ್ಮ ಬೆರಳ ತುದಿಯ ತಾಪಮಾನವನ್ನು, ರಕ್ತ ಪರಿಚಲನೆಯನ್ನು ಸೂಕ್ಷ್ಮವಾಗಿ ಗ್ರಹಿಸಿ, ನಿಮ್ಮದೇ ಆರೋಗ್ಯದ ವರದಿಯನ್ನು ಕೊಡಬಲ್ಲ ಕೀಲಿಮಣೆ ಬೇಕಲ್ಲ?

ನಮ್ಮೆಲ್ಲರ ನಾಳೆಗಳನ್ನು ಬದಲಿಸಬಹುದಾದ ಆ ಜಗತ್ತಿಗಾಗಿ ಭಾರತೀಯರು ಹೇಗೆ ಸಜ್ಜಾಗಬೇಕು? ಕಿರಿಯರಿಗೆ ನೀಡಬೇಕಾದ ಸಲಹೆ, ಉಪದೇಶ, ಮಾರ್ಗದರ್ಶನ, ಶಿಕ್ಷಣ ಎಲ್ಲವೂ ನಾಳೆ ಅವರು ತೊಡುವ ಯಂತ್ರಗಳಿಂದಲೇ ಬರುತ್ತವೆ. ಶಿಕ್ಷಕರು, ಡಾಕ್ಟರು, ಹಿರಿಯರು, ಗುರುಗಳು, ಸ್ನೇಹಿತರು ಎಲ್ಲರೂ ನಗಣ್ಯರಾಗಿ ಕೊನೆಗೆ ಸ್ವಾಮಿಭಕ್ತ ನಾಯಿಯೂ ಇಂಟೆಲಿಜೆಂಟ್ ಯಂತ್ರವೇ ಆಗಿರುತ್ತದೆ.

ಅಂಥ ಹೈಟೆಕ್ ಪ್ರಪಂಚದ ಸಾಧ್ಯತೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ಮಾತಿನ ಸಂದೇಶ ಸ್ಪಷ್ಟವಾಗಿತ್ತು: ನಮ್ಮ ದೇಶದ ಸಶಕ್ತ, ಸುಶಿಕ್ಷಿತ ಯುವಕೋಟಿಯೇ ನಮ್ಮ ಹೆಮ್ಮೆಯ ಆಸ್ತಿಯೆಂದು ನಾವು ಈಚೀಚೆಗಷ್ಟೇ ಎದೆಯುಬ್ಬಿಸಿ ಹೇಳತೊಡಗಿದ್ದೆವು. ಜನಸಂಖ್ಯೆ ಕಮ್ಮಿಯಾಗುತ್ತಿರುವ ದೇಶಗಳಿಗೆಲ್ಲ ನಮ್ಮವರನ್ನೇ ರಫ್ತು ಮಾಡಿ ಡಾಲರ್ ಗಳಿಸಬಹುದೆಂದು ಹೇಳುತ್ತಿದ್ದೆವು. ಆದರೆ ಅಲ್ಲಿನ ಲೋಕದಲ್ಲಿ ಕೃತಕ ಬುದ್ಧಿಮತ್ತೆಯ ವ್ಯಾಪ್ತಿ ಹೆಚ್ಚಾದಷ್ಟೂ ಭಾರತದ ಹಿತಾಸಕ್ತಿಗೆ ಧಕ್ಕೆ ಆದೀತೆಂಬ ಆತಂಕ ಮೋದಿಯವರ ಮಾತಿನಲ್ಲಿ ವ್ಯಕ್ತವಾಗಿತ್ತು.

ಅಂಥ ಭಗ್ನಕಾರಿ ತಂತ್ರಜ್ಞಾನ ನಮಗಲ್ಲವೆಂದು ಬೆನ್ನು ತಿರುಗಿಸುವ ಬದಲು, ನಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ತಿರುಗಿಸಬೇಕೆಂಬುದು ಅವರ ಇಂಗಿತವಾಗಿತ್ತು. ಆರೋಗ್ಯ, ಶಕ್ತಿ ಉತ್ಪಾದನೆ, ಸಂಚಾರ, ಶಿಕ್ಷಣ, ನೀರಾವರಿ, ಕೃಷಿ ಹೀಗೆ ಎಲ್ಲ ರಂಗಗಳಲ್ಲೂ ಕೃತಕ ಬುದ್ಧಿಮತ್ತೆ ಮತ್ತು ಜೈವಿಕ ಎಂಜಿನಿಯರಿಂಗ್ ಮಿಲನದ ಸಾಧ್ಯತೆಯನ್ನು ಹುಡುಕಬೇಕು; ‘ಅದಕ್ಕೆ ಬೇಕಿದ್ದ ಸಂಸ್ಥೆಗಳನ್ನು ಕಟ್ಟೋಣ, ಬಂಡವಾಳ ಹೂಡೋಣ’ ಎಂದು ಅವರು ಎಂದಿನಂತೆ ಘಂಟಾಘೋಷಣೆ ಮಾಡಿದರು.

ಹೂಡೋಣವೆ? ಈಗಿನ್ನೂ 19ನೇ ಶತಮಾನವನ್ನೇ ಬಿಟ್ಟು ಹೊರಡಲಾಗದ ಜನರಿಗೆ 21ನೇ ಶತಮಾನದ ಝಲಕನ್ನೂ ನಗರಗಳ ಮಾಯಾಕಂಕಣವನ್ನೂ ತೊಡಿಸೋಣವೆ? ಗ್ರಾಮವಾಸಿಗಳ, ಅರಣ್ಯವಾಸಿಗಳ, ಕೊಳೆಗೇರಿಗಳ ಕಟುವಾಸ್ತವಕ್ಕೂ ಸೈಬರ್ ಲೋಕದ ಅತಿವಾಸ್ತವಕ್ಕೂ ನಡುವೆ ಸೇತುವೆ ಕಟ್ಟುವುದು ಹೇಗೆ? ಅವರ ಶಿಥಿಲ ನಾಳೆಗಳಿಗೆ ತುಸು ಬಣ್ಣ ತುಂಬುವುದು ಹೇಗೆ?

ಈ ಪ್ರಶ್ನೆಗೆ ಒಂದು ಉತ್ತರ ಇದೀಗ ಅಮೆರಿಕದ ಸ್ಟಾನ್‌ಫೋರ್ಡ್ ವಿ.ವಿಯಿಂದ ಬಂದಿದೆ: ಅಲ್ಲಿನ ಬಯೊಇಂಜಿನಿಯರ್ ಮನು ಪ್ರಕಾಶ್ ಎಂಬ ಭಾರತೀಯ ಯುವಕ ನಿಜಕ್ಕೂ ಬೆರಳು ಕಚ್ಚುವಂಥ ಸಂಶೋಧನೆ ಮಾಡಿದ್ದಾರೆ. ಎರಡು ಕೈಗಳ ಎರಡು ಬೆರಳುಗಳ ನಡುವೆ ದಾರಕ್ಕೆ ಪೋಣಿಸಿದ ಪುಟ್ಟ ಚಕ್ರವೊಂದನ್ನು ತಿರುಗಿಸುತ್ತ ಅವರು ಅದನ್ನೊಂದು ವೈದ್ಯಕೀಯ ಸಲಕರಣೆಯಾಗಿ ಪರಿವರ್ತಿಸಿದ್ದಾರೆ.

ಅದರ ವಿವರ ಹೀಗಿದೆ: ಮಲೇರಿಯಾ, ಏಡ್ಸ್, ಚಿಕುನ್‌ಗುನ್ಯದಂಥ ಹತ್ತಾರು ರೋಗಗಳ ಪತ್ತೆಗೆ ರಕ್ತಪರೀಕ್ಷೆ ಮಾಡುವುದು ನಮಗೆಲ್ಲ ಗೊತ್ತಿದೆ. ರೋಗಿಯ ಅರ್ಧ ಚಮಚೆಯಷ್ಟು ರಕ್ತವನ್ನು ಒಂದು ಶೀಶೆಯಲ್ಲಿಟ್ಟು ದೊಡ್ಡ ಯಂತ್ರದೊಳಕ್ಕೆ ಜೋರಾಗಿ ತಿರುಗಿಸುತ್ತಾರೆ. ನಿಮಿಷಕ್ಕೆ ಲಕ್ಷ ಸುತ್ತು ತಿರುಗುವಾಗ ರಕ್ತದಲ್ಲಿನ ನೀರಿನಂಥ ಪ್ಲಾಸ್ಮಾ ಬೇರೆಯಾಗುತ್ತದೆ. ಕೆಂಪು ಕಣಗಳ ಗಸಿ ತಳಕ್ಕಿಳಿಯುತ್ತದೆ.

ಅದನ್ನೇ ಸೂಕ್ಷ್ಮದರ್ಶಕದಲ್ಲಿ ಇಟ್ಟು ರಕ್ತಗುಣವನ್ನು, ರೋಗಕ್ಕೆ ಕಾರಣವಾಗುವ ಸೂಕ್ಷ್ಮಾಣುವನ್ನು ಪತ್ತೆ ಹಚ್ಚಬಹುದು. ಆದರೆ ಈ ಪರೀಕ್ಷೆಗೆ ಬೇಕಾದ ‘ಸೆಂಟ್ರಿಫ್ಯೂಜ್’ ಎಂಬ ತಿರುಗಣೆ ಯಂತ್ರಕ್ಕೆ ಲಕ್ಷಾಂತರ ರೂಪಾಯಿ ಬೇಕು, ಜೊತೆಗೆ ಸದಾಕಾಲ ವಿದ್ಯುತ್ ಇರಬೇಕು. ಅದರ ಬದಲು ಪುಟ್ಟ ಕೊಳವೆಗೆ ನಾಲ್ಕು ಹನಿ ರಕ್ತ ಹಾಕಿ ಮಕ್ಕಳ ಈ ಆಟಿಗೆಗೆ ಜೋಡಿಸಿದರೆ ಅದು ನಿಮಿಷಕ್ಕೆ ಒಂದೂವರೆ ಲಕ್ಷ ಬಾರಿ ತಿರುಗುತ್ತದೆ.

ಒಂದೆರಡು ನಿಮಿಷಗಳಲ್ಲಿ ಪರೀಕ್ಷೆಗೆ ಬೇಕಾದ ಪ್ಲಾಸ್ಮಾ ದ್ರವ ಮತ್ತು ಗಸಿ ಅಲ್ಲೇ ಬೇರ್ಪಡುತ್ತದೆ. ಹಳ್ಳಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದವರೂ ಇನ್ನು ಮೇಲೆ ರಕ್ತ ಪರೀಕ್ಷೆ ಮಾಡಲು ಸಾಧ್ಯವಾಗುತ್ತದೆ. ಕಾನಪುರ ಐಐಟಿಯಲ್ಲಿ ಓದಿದ ಈ ಮೀರಠ್ ಹುಡುಗ ಕಳೆದ ವರ್ಷ ರಟ್ಟಿನ ಕಾಗದದಲ್ಲೇ ಹತ್ತು ರೂಪಾಯಿ ವೆಚ್ಚದ ಮೈಕ್ರೊಸ್ಕೋಪ್ ತಯಾರಿಸಿ ವಿಜ್ಞಾನಲೋಕಕ್ಕೆ ಅಚ್ಚರಿ ಮೂಡಿಸಿದವರು.

ಎರಡು ವರ್ಷಗಳ ಹಿಂದೆ ಮಕ್ಕಳಿಗಾಗಿ ಪಂಚ್ ಕಾರ್ಡ್ ದ್ರವಪರೀಕ್ಷಾ ಸಾಧನವನ್ನು ನಿರ್ಮಿಸಿ ಅರ್ಧಲಕ್ಷ ಡಾಲರ್ ಬಹುಮಾನ ಮತ್ತು ಪ್ರತಿಷ್ಠಿತ ‘ಮೆಕಾರ್ಥರ್ ಜೀನಿಯಸ್ ಗ್ರಾಂಟ್’ ಪಡೆದವರು. ಇದೀಗ ದಾರದ ಚಕ್ರವನ್ನೇ ರಕ್ತಪರೀಕ್ಷೆಯ ಅಗ್ಗದ ಸಲಕರಣೆಯನ್ನಾಗಿ ಪರಿವರ್ತಿಸಿ ಮೊನ್ನೆ, ನಿನ್ನೆ ಜಾಗತಿಕ ಮಟ್ಟದ ಎಲ್ಲ ವಿಜ್ಞಾನ ಮಾಧ್ಯಮಗಳಲ್ಲಿ ಸುದ್ದಿಯ ಕೇಂದ್ರವಾಗಿದ್ದಾರೆ.

ನಮ್ಮ ದೇಶದಲ್ಲಿ ಸೆಂಟ್ರಿಫ್ಯೂಜ್ ಯಂತ್ರಗಳ ಖರೀದಿಯ ಹೆಸರಿನಲ್ಲಿ ಕೋಟಿಗಟ್ಟಲೆ ಹಣವನ್ನು ಗೋಲ್‌ಮಾಲ್ ಮಾಡುವವರಿಗೆ ಅಡ್ಡಗಾಲು ಹಾಕಿ, ಭಾರತದ ಮಟ್ಟಿಗೆ ‘ಭಗ್ನಕಾರಕ ತಂತ್ರಜ್ಞಾನ’ ಎಂದರೆ ಹೇಗಿರಬೇಕು ಎಂದು ತೋರಿಸಿದ್ದಾರೆ.

ಅಂದಹಾಗೆ, ಬೆಳಕು ಮಿನುಗಿಸುವ ಬೀದಿವೃಕ್ಷಗಳು ನಿಜಕ್ಕೂ ಬರುತ್ತಿವೆಯೆ? ಇಲ್ಲ, ಅಮೆರಿಕದ ಕಿಕ್‌ಸ್ಟಾರ್ಟರ್ ಹೆಸರಿನ ಕಂಪನಿಯೊಂದು ಕುಂಡಗಳಲ್ಲಿ ಮಿಂಚುಸಸ್ಯಗಳನ್ನು ಮಾರುತ್ತೇನೆಂದು ವಿಜ್ಞಾನಿಗಳ ಶಿಫಾರಸಿನಿಂದ ಹಣ ಸಂಗ್ರಹಿಸಿದ್ದು ನಿಜ. ಭಗ್ನಕಾರಿ ತಂತ್ರಜ್ಞಾನದ ಬದಲು ಅದು 2016ರ ವಿಫಲ ಸಂಶೋಧನೆಗಳ ಸಾಲಿಗೆ ಸೇರಿ, ಹೂಡಿಕೆದಾರರ ಕನಸನ್ನು ಭಗ್ನ ಮಾಡಿತು ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT