ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರಿದು ಕಟ್ಟುವ ಸವಾಲು...

Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನನ್ನ ಬಂಧುಗಳ ಮನೆಯಲ್ಲಿ ಅಜ್ಜಿ­ಯೊ­ಬ್ಬರು ಮೊಮ್ಮಗುವಿಗೆ ಊಟ ಮಾಡಿಸು­ತ್ತಿದ್ದರು. ಆಕಾಶದತ್ತ ಕೈತೋರಿಸಿ, ‘ಮೂನ್ ನೋಡಪ್ಪಾ ಮೂನ್’ ಎನ್ನುತ್ತಿದ್ದರು. ಚಂದ­ಮಾಮ­ನನ್ನು ನೋಡಿ ಬೆಳೆದ ನನಗೆ ಇದೇಕೋ ವಿಚಿತ್ರವೆನಿಸಿತು.

ಸ್ವಲ್ಪ ಹೊತ್ತಿಗೆ ಮಗುವಿಗೆ ಮೂಲೆ­ಯಲ್ಲಿದ್ದ ಜಿರಲೆ ತೋರಿಸಿ, ‘ಬೇಬಿ ಕಾಕ್ರೋಚ್ ನೋಡಪ್ಪಾ’ ಎಂದರು. ಅವರಿಗೆ ಗೊತ್ತಿದ್ದ ಕೆಲವು ಪದಗಳನ್ನು ಹೇಳಿಕೊಡುವ ಪ್ರಯತ್ನ ನಡೆದಿತ್ತು. ಮಗುವಿನ ತೊದಲು ನುಡಿಯಲ್ಲೇ ಇಂಗ್ಲಿಷ್ ಕೇಳುವ ಬಯಕೆ ಅವರದು. ಅಷ್ಟೇನೂ ಹಣವಂತರಲ್ಲದ ಅವರು ತಮ್ಮ ಸಾಮಾಜಿಕ ಘನತೆಯನ್ನು ಹೆಚ್ಚಿಸಿ­ಕೊ­ಳ್ಳಲು ಇಂಗ್ಲಿಷ್ ಭಾಷೆಯ ಮೊರೆ ಹೋಗಿ­ದ್ದರು. ಒಟ್ಟಿನಲ್ಲಿ ಮಗುವಿನ ಅನ್ನದ ತುತ್ತಿ­ನೊಳಕ್ಕೂ ವಸಾಹತುಶಾಹಿಯ ನರಳಾಟ ಇಳಿದಿತ್ತು.

ಇದು ವಸಾಹತು ಕಾಲದ ನರಳಾಟವಲ್ಲ. ವಸಾಹತು ಕಾಲಕ್ಕೆ ಇಂಗ್ಲಿಷ್ ಬಲ್ಲವರ ಸಂಖ್ಯೆ ಬಹಳ ಕಡಿಮೆ. ಬಹುಶಃ ತಮ್ಮ ಮಕ್ಕಳು ಇಂಗ್ಲಿಷ್ ಕಲಿತು ಕಲೆಕ್ಟರ್ ಆಗಲಿ ಎಂದು ನಗರದ ಹಿಡಿಮಂದಿ ಮಾತ್ರ ಬಯಸಿರಬಹುದು. ಇಂಗ್ಲಿಷ್‌ನವರ ಮುಂದೆ ಒಳ್ಳೆ ಇಂಗ್ಲಿಷ್ ಮಾತನಾಡಿ ಮೆಚ್ಚುಗೆ ಪಡೆದು ಬದುಕು ಸಾರ್ಥಕವಾಯಿತೆಂದು ಭಾವಿಸಿದವರು ಇದ್ದರು. ಅದರೆ ಅದು ಬಹುಸಂಖ್ಯಾತರ ಕನಸಾಗಿರಲಿಲ್ಲ. ಹಾಗೆ ಕನಸಾಗಿ ಮಾರ್ಪಾಡಾಗಿದ್ದು ಮಾತ್ರ ೭೦ರ ದಶಕದಿಂದ ಈಚೆಗೆ.

ಶಿಕ್ಷಣ ಕ್ಷೇತ್ರದಲ್ಲಂತೂ ಈ ನರಳಾಟ ಬಹುಆಯಾಮವನ್ನು ಪಡೆದುಕೊಂಡಿದೆ. ಶಿಕ್ಷಣದ ಭಾಷಾ ಮಾಧ್ಯಮವನ್ನು ಕುರಿತ ಚರ್ಚೆ, ಹೋರಾಟ ಇವೆಲ್ಲಾ ಅರಂಭವಾಗಿ ದಶಕಗಳೇ ಕಳೆದುಹೋಗಿವೆ. ಮಾತೃ ಭಾಷೆಯಲ್ಲಿ ಬೋಧನೆ, ರಾಜ್ಯ ಭಾಷೆಯಲ್ಲಿ  ಬೋಧನೆ ಈ ಎಲ್ಲಾ ಘೋಷಣೆಗಳ ನಂತರವೂ ವಿಶ್ವವಿದ್ಯಾಲಯಗಳಲ್ಲಿ ಮಾತ್ರ ಅಧಿಕೃತವಾಗಿ ಇಂಗ್ಲಿಷ್ ಬೋಧನಾ ಮಾಧ್ಯಮವಾಗಿದೆ.

ಎಷ್ಟೋ ವರ್ಷಗಳ ಕೋರಿಕೆಯ ನಂತರ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಉತ್ತರ ಬರೆಯಲು ಅವಕಾಶ ಸಿಕ್ಕಿತು. ಎಷ್ಟೋ ಜನ ಬೋಧಕರೂ ನಿರಾಳವಾಗಿ ಕನ್ನಡದಲ್ಲಿ ಪಾಠ ಮಾಡ­ತೊಡಗಿದರು. ವಿಜ್ಞಾನ ವಿಷಯಗಳನ್ನು ಪಿಯುಸಿ ಹಂತದಿಂದ ಬೋಧಿಸದಿರುವುದರಿಂದ ಉನ್ನತ ಶಿಕ್ಷಣದಲ್ಲಿ   ಮಾಧ್ಯಮದ ಬಗ್ಗೆ ಯಾರೂ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಅಷ್ಟಲ್ಲದೇ ಹಳ್ಳಿ ಮಕ್ಕಳ ಬಗ್ಗೆ ತಲೆ ಕೆಡಿಸಿಕೊಳ್ಳುವವರು ಯಾರು?

ಮಾನವಿಕ ವಿಷಯಗಳಿಗೆ ಬಂದಾಗ ಭಾಷಾಭಿವ್ಯಕ್ತಿಯ ಅಗತ್ಯ ಹೆಚ್ಚಾಗಿರುವುದರಿಂದ ಶೇಕಡಾ ಹತ್ತರಷ್ಟು ವಿದ್ಯಾರ್ಥಿಗಳು ಮಾತ್ರವೇ ಕನ್ನಡದಲ್ಲಿ ಉತ್ತರಿಸುತ್ತಿದ್ದಾರೆ. ಸಂಶೋಧನಾ ಮಹಾಪ್ರಬಂಧವನ್ನೂ ಕನ್ನಡದಲ್ಲೇ ಬರೆಯುತ್ತಿ­ದ್ದಾರೆ. ಆದರೆ ಕನ್ನಡ ಮಾಧ್ಯಮದಲ್ಲೂ ಅಧ್ಯಯನ ಮಾಡಬಹುದೆಂದು ಹೇಳಲು ವಿಶ್ವ­ವಿದ್ಯಾ­ಲಯಗಳು ಹಿಂಜರಿಯುತ್ತಿವೆ. ಪತ್ರವ್ಯವ­ಹಾರವೂ ಇಂಗ್ಲಿಷ್‌ನಲ್ಲಿ ನಡೆಯುತ್ತದೆ. ಕನ್ನಡದ ಬಳಕೆಯನ್ನು ವಿ.ವಿ.ಗಳು ಅವಮಾನವೆಂದು ಭಾವಿಸುತ್ತವೆಯೋ, ಅಥವಾ ಬ್ರಿಟಿಷರ ಕಾಲದ ಶಿಕ್ಷಣ ನೀತಿಯನ್ನು ಉಳಿಸಿಕೊಳ್ಳಲು ಹೋರಾಡು­ತ್ತಿವೆಯೋ ತಿಳಿಯದು.  ಕರ್ನಾಟಕ­ದಲ್ಲಿ ಮಾತ್ರವಲ್ಲ; ಭಾರತದ ಎಲ್ಲಾ ರಾಜ್ಯಗಳ ವಿ.ವಿ.ಗಳ ಪರಿಸ್ಥಿತಿಯೂ ಇದೇ ಆಗಿದೆ.

ಇಂಗ್ಲಿಷ್ ಭಾಷೆ ಹಲವು ರೀತಿಯಲ್ಲಿ ಜೀವ ಹಿಂಡುತ್ತಿದೆ. ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಹೊರ ರಾಜ್ಯಗಳಿಂದ ಮೂರು ನಾಲ್ಕು ಜನರನ್ನಾದರೂ ಕರೆದಿರುತ್ತಾರೆ. ಉಳಿದಂತೆ ಪ್ರಬಂಧ ಮಂಡನಕಾರರು ಸ್ಥಳೀಯರೇ ಆಗಿರುತ್ತಾರೆ. ಅಂತಹದೊಂದು ವಿಚಾರ ಸಂಕಿರಣದಲ್ಲಿ ಸಭೆಯಲ್ಲಿದ್ದ ವಿದ್ಯಾರ್ಥಿಗಳಲ್ಲಿ ಶೇ ೯೯ರಷ್ಟು  ಮಂದಿ ಕನ್ನಡಿಗರಿದ್ದರು. ಉದ್ಘಾಟನೆ, ಹಾಡು, ಸಂಭ್ರಮ ಈ ಎಲ್ಲದರಾಚೆಗೆ ಪ್ರಬಂಧ ಮಂಡನೆಯ ಹಂತಕ್ಕೆ ಬಂದಾಗ ಸಭಿಕರಿಗೂ ವೇದಿಕೆಯ ಮೇಲಿನ ವಿದ್ವಾಂಸರಿಗೂ ಸಂಬಂಧ ಕಡಿದು ಹೋಗಿತ್ತು.

ಇಂಗ್ಲಿಷ್‌ನಲ್ಲೇ ವಿಚಾರ­ವನ್ನು ಮಂಡಿಸುವ ಹಟಕ್ಕೆ ಬಿದ್ದಂತೆ, ಕೆಲವರು ಓದಿದರು, ಮತ್ತೆ ಕೆಲವರು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಬಳಸಿ ಸಂಭಾಳಿಸಿದರು. ಪ್ರಬಂಧ ಮಂಡನೆ ಮುಗಿದಾಗ ವಿದ್ಯಾರ್ಥಿಗಳು ಜೋರಾಗಿ ಚಪ್ಪಾಳೆ ಹೊಡೆಯುತ್ತಿದ್ದರು. ಅಧ್ಯಕ್ಷರು ‘ನೌ ದ ಫ್ಲೋರ್ ಈಸ್ ಓಪನ್ ಫಾರ್ ಡಿಸ್ಕಷನ್’ ಎನ್ನುತ್ತಿದ್ದರು. ಹೊರಗಿನಿಂದ ಬಂದ ವಿದ್ವಾಂಸರಲ್ಲಿ ಯಾರಾದರೊಬ್ಬರು ಪ್ರಶ್ನೆ ಕೇಳುತ್ತಿದ್ದರು.

ಸಭಿಕರು ಮೂಕ ಪ್ರೇಕ್ಷಕರಾಗಿ  ವೇದಿಕೆ ಮೇಲೆ ನಡೆಯುತ್ತಿದ್ದ ಒಟ್ಟಾರೆ ಪ್ರಸಂಗವನ್ನು ವೀಕ್ಷಿಸುತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ಅವರೊಳಗೆ ಮಾತು ಆರಂಭ­ವಾಗುತ್ತಿತ್ತು. ನಡು ನಡುವೆ ಬರುವ ಕಾಫಿ, ಬಿಸ್ಕತ್ ಅವರಿಗೆ ಪರಿಹಾರ ನೀಡಿದಂತಿತ್ತು. ಮತ್ತೆ ಗೋಷ್ಠಿ ಆರಂಭವಾದರೆ ಊಟದ ವಿರಾಮಕ್ಕಾಗಿ ಕಾದು ಕುಳಿತಿರುತ್ತಿದ್ದರು. ಕಡೆಗೆ ನನ್ನ ಮತ್ತು ನನ್ನ ಮಿತ್ರರ ಸರದಿ ಬಂತು. ನಾಲ್ಕು ಜನ ವಿದ್ವಾಂಸರ ಹಿತಕ್ಕಿಂತ ವಿದ್ಯಾರ್ಥಿಗಳ ಹಿತ ಮುಖ್ಯ ಎಂದು ಭಾವಿಸಿ  ಕನ್ನಡದಲ್ಲಿ ಮಾತು ಆರಂಭಿಸಿದೆವು. ಮುಂದೆ ಮೂರು ದಿನ ಮಾತನಾಡಬೇಕಾದವರ ದಾರಿ ಸುಗಮಗೊಳಿಸಿದೆವು. 

ಏನೂ ಅರ್ಥವಾಗದಿದ್ದರೂ ಗಂಭೀರವಾಗಿ ಕೂರುವ ಸೌಜನ್ಯ, ಅರ್ಥವಾದಂತೆ ಅಭಿನಯಿ­ಸುವ ಅನಿವಾರ್ಯಕ್ಕೆ  ವಿದ್ಯಾರ್ಥಿಗಳು ಒಳಗಾ­ದಂತಿತ್ತು. ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದಕ್ಕಾಗಿ ಸರ್ಟಿಫಿಕೇಟ್ ಪಡೆದ ಧನ್ಯತೆ ಅಧ್ಯಾಪಕರಿಗೆ, ಕಾರ್ಯಕ್ರಮವನ್ನು ಏರ್ಪಡಿಸಿದ್ದಕ್ಕಾಗಿ ವಿ.ವಿಗೆ ಹೆಮ್ಮೆ. ಹೀಗೆ ಸಾರ್ಥಕ್ಯದ ಭ್ರಮೆಯಲ್ಲಿ ವಸಾಹತೋತ್ತರ ಭಾರತದ ಶೈಕ್ಷಣಿಕ ಸಾಧನೆಗೆ ಇಂಗ್ಲಿಷ್  ಭಾಷೆ ಹೊಣೆಯಾಗಿದೆ.

ಇನ್ನು ವಸಾಹತುಶಾಹಿ ಹುಟ್ಟುಹಾಕಿದ ವ್ಯವಸ್ಥೆಗಳಲ್ಲಿ ನ್ಯಾಯಾಂಗವೂ ಒಂದು. ಬ್ರಿಟಿಷರ ಕಂದಾಯ ವಸೂಲಾತಿಗೆ ಪೂರಕವಾಗಿ ಹುಟ್ಟು­ಹಾಕಿದ ಸಂಸ್ಥೆ ಅದು. ನ್ಯಾಯಾಧೀಶರುಗಳ ಸಂಘಕ್ಕೊಮ್ಮೆ ಭಾಷಣ ಮಾಡಲು ಹೋದಾಗ ಅವರ ನಡೆ ನುಡಿ ನನ್ನನ್ನು ಶತಮಾನಗಳ ಹಿಂದಕ್ಕೆ ಕರೆದುಕೊಂಡು ಹೋಗಿತ್ತು.

ಕೋರ್ಟ್‌ ಹಾಲ್‌ನ ಹೊರಗೂ, ಸಾರ್ವಜನಿಕ ಸಭೆ ಸಮಾರಂಭಗಳಲ್ಲೂ ‘ಹೈರಾರ್ಕಿ’ಯನ್ನು ಬಿಡಲಾಗದೆ ಬಿಗಿಯಾದ ವಾತಾವರಣವನ್ನು ಅಲ್ಲಿ ಸೃಷ್ಟಿಸಿಕೊಂಡಿದ್ದರು. ಕಾಫಿ ತಂದುಕೊಡಲಾ ಲಾರ್ಡ್‌ ಎಂದು ಸಂಬೋಧಿಸುವ ಕಿರಿಯ ಜಡ್ಜ್‌­ಗಳು, ಸೊಂಟದವರೆಗೂ ಬಾಗಿ ನಮಸ್ಕರಿಸುವ ಅವರ ನಡತೆ, ಅವರಿಗೆ ಪ್ರಜಾಪ್ರಭುತ್ವದ ಬದುಕಿನ ಅರಿವಿದ್ದಂತೆ ಕಾಣಲಿಲ್ಲ. ಕೋರ್ಟ್‌ನಲ್ಲಿ ಕೆಲವು ವಕೀಲರು ಕನ್ನಡದಲ್ಲಿ ವಾದಿಸುತ್ತಿದ್ದಾರೆ, ಮತ್ತೆ ಕೆಲವು ನ್ಯಾಯಾಧೀಶರು ಕನ್ನಡದಲ್ಲಿ ಆದೇಶಗಳನ್ನು ಕೊಡುತ್ತಿದ್ದಾರೆ ಎಂಬುದು ನ್ಯಾಯಾಲಯ, ವಸಾಹತು ನೆರಳಿನಿಂದ ಅಷ್ಟು ದೂರಕ್ಕೆ ಬಂದಿದೆ ಎಂದು ಅರ್ಥವಾಗುತ್ತದೆ.

ಭಾರತದಲ್ಲಿ ಬ್ಯಾಂಕ್ ವ್ಯವಸ್ಥೆ ಹುಟ್ಟುಹಾಕಿದ ಬ್ರಿಟಿಷರು ಸಾಂಪ್ರದಾಯಿಕ ವ್ಯವಸ್ಥೆಗೆ ತಿಲಾಂಜಲಿ ನೀಡುವಂತೆ ಮಾಡಿದರು. ನಾನು   ಈವರೆಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾತ್ರ ವ್ಯವಹರಿಸಿ ಬಲ್ಲೆ. ಸಾಲ ತೆಗೆದುಕೊಳ್ಳಲು  ಹೋದರೆ ಹತ್ತಾರು ಪುಟಗಳಿಗೆ ಸಹಿ ಹಾಕ­ಬೇಕಾಗುತ್ತದೆ. ಕೆಂಪು ಹಳದಿ ಹಸಿರು ಬಣ್ಣದ ಹಾಳೆಗಳೂ ಅಲ್ಲಿರುತ್ತವೆ. ಅವರು ತೋರಿಸಿದ ಜಾಗದಲ್ಲಿ ಜನ ಸಹಿ ಹಾಕುತ್ತಾರೆ. ಸಹಿ ಹಾಕುವುದಕ್ಕೂ ಹೆಬ್ಬೆರಳನ್ನು ಒತ್ತು­ವುದಕ್ಕೂ ಹೆಚ್ಚೇನೂ ವ್ಯತ್ಯಾಸವಿರುವುದಿಲ್ಲ.

ಏಕೆಂದರೆ ಒಳಗೇನಿದೆಯೆಂದು ತಿಳಿಯಲು ಸಮಯ­ವಾಗಲೀ ವ್ಯವಧಾನವಾಗಲೀ ಇರುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಆ ಪತ್ರಗಳೆಲ್ಲಾ ಇಂಗ್ಲಿಷ್‌ನಲ್ಲಿರುತ್ತವೆ. ಸಾಲ ಪಡೆಯುವವರು ಇಂಗ್ಲಿಷ್ ಬಲ್ಲವರಾಗಿರಬೇಕೆಂಬುದು  ಬ್ಯಾಂಕ್‌ನ ನೀತಿಯೋ ಅಥವಾ ಇಂಗ್ಲಿಷ್‌ಗೆ  ಹೆದರಿ ಓದದೇ ಸಹಿ ಹಾಕಲೆಂಬ ಉದ್ದೇಶವೋ ಅಥವಾ ವಸಾಹತು  ಹಾಕಿಕೊಟ್ಟ ವ್ಯವಸ್ಥೆಯನ್ನು ಮುರಿಯಲಾಗದ ದೌರ್ಬಲ್ಯವೋ ಒಟ್ಟಿನಲ್ಲಿ ಇಡೀ ಜನಾಂಗವೇ ವಸಾಹತು ಭಾಷಾ ಹೇರಿಕೆಯನ್ನು ಹೊತ್ತ ಕತ್ತೆಗಳಾಗಿದ್ದೇವೆ.

ಕಾಫಿ ಡೇಗಳಲ್ಲಿ, ಮಾಲ್‌ಗಳಲ್ಲಿ ಸೇಲ್ಸ್ ಹುಡುಗ ಹುಡುಗಿಯರಿಗೆ ಇಂಗ್ಲಿಷ್‌ನಲ್ಲಿ ಮಾತನಾಡಬೇಕು ಎಂದು ಆದೇಶಿಸ­ಲಾಗಿರು­ತ್ತದೆ. ಪಾಪದ ಹುಡುಗಿಯರು, ಕಲಿತ ಕೆಲವೇ ಇಂಗ್ಲಿಷ್ ಪದಗಳಲ್ಲಿ ವ್ಯವಹರಿಸುತ್ತಾರೆ. ಹೀಗೆ ಒಮ್ಮೆ ಸೇಲ್ಸ್ ಹುಡುಗನೊಬ್ಬನ ಫಜೀತಿಯನ್ನು ನೋಡಲಾರದೆ ‘ಕನ್ನಡದಲ್ಲಿ ಮಾತಾಡಪ್ಪ, ಯಾಕೆ ಒದ್ದಾಡ್ತೀಯ’ ಎಂದಾಗ, ‘ಕನ್ನಡದಲ್ಲಿ ಮಾತನಾಡಿದರೆ ಕೆಲಸದಿಂದ ತೆಗೆದು ಹಾಕ್ತಾರೆ, ಸಿ.ಸಿ ಟಿ.ವಿ ಬೇರೆ ಇಟ್ಟಿದ್ದಾರೆ’ ಎಂದು ಅವನ ಕಷ್ಟ ಹೇಳಿಕೊಂಡ.

ಯಾವ ದೇಶದಲ್ಲೂ ಕಾಣದ ಇಂಗ್ಲಿಷ್ ನಿಷ್ಠೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾಣು­ತ್ತದೆ. ವಿಮಾನ ನಿಲ್ದಾಣದಲ್ಲಾಗಲೀ, ವಿಮಾನದ ಒಳಭಾಗದಲ್ಲಾಗಲೀ ವಿಮಾನ ಹಾರಾಟಕ್ಕೆ ಸಂಬಂಧಿಸಿದ ಮಾಹಿತಿಗಳನ್ನು  ಯಾರೂ ಕನ್ನಡ­ದಲ್ಲಿ ಪ್ರಕಟಿಸುವುದಿಲ್ಲ. ಅವರ ಉಡುಗೆ ತೊಡುಗೆ ಮೇಕಪ್‌ಗೆ ಕನ್ನಡ ಒಪ್ಪುವುದಿಲ್ಲವೋ ಏನೋ! ವಿಮಾನ ನಿಲ್ದಾಣದಲ್ಲೇ ತಾವು ಬೇರೆ ದೇಶದಲ್ಲಿ ಇದ್ದವರಂತೆ ಜನ ಭಾವಿಸಬೇಕಾ­ಗುತ್ತದೆ. ನಾವು ಇನ್ನೂರು ವರ್ಷಗಳ ಕಾಲ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದೆವೆಂಬ ನೆನಪು ಹೆಜ್ಜೆ ಹೆಜ್ಜೆಗೂ ಮರುಕಳಿಸುತ್ತದೆ.

ಇಂಗ್ಲಿಷ್ ಭಾಷೆಯಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡಬೇಕೆಂಬ ಒತ್ತಾಯಕ್ಕೆ ಕನ್ನಡದ ಜನತೆ ಮಾತ್ರವಲ್ಲ; ಪಂಜಾಬಿ, ಬಂಗಾಳಿ, ಮರಾಠಿ ಎಲ್ಲಾ ಭಾಷಿಕರೂ ಒಳಗಾಗಿದ್ದಾರೆ. ಮೊದಲ ಪೀಳಿಗೆ ಶಿಕ್ಷಿತ ಸಮುದಾಯ ತಮ್ಮ ಮಕ್ಕಳಿಗೆ ಇಂಗ್ಲಿಷ್ ಭಾಷೆಯಲ್ಲಿ ಕಲಿಸುವುದನ್ನು ಹೆಗ್ಗಳಿಕೆಯ ಸಂಕೇತವಾಗಿ ಭಾವಿಸಿದರೆ,  ಎರಡು, ಮೂರು ಪೀಳಿಗೆ ಶಿಕ್ಷಣ ಪಡೆದವರು ಅದೊಂದು ಸಹಜ ಪ್ರಕ್ರಿಯೆಯೆಂದು ಭಾವಿಸುತ್ತಿದ್ದಾರೆ.

ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಾ ಬಂದ ಮಕ್ಕಳು ಎಷ್ಟೋಬಾರಿ ಮನೆ ಮಾತನ್ನು ಕಳೆದುಕೊಂಡು, ಇಂಗ್ಲಿಷನ್ನು ತಮ್ಮದಾಗಿಸಿ­ಕೊಳ್ಳದೇ ಅವರ ಭಾಷಾಭಿವ್ಯಕ್ತಿ ಹಳಸಿ ಹೋಗಿರುತ್ತದೆ. ಶಾಲೆಗೆ ಹೋಗದ ಮಕ್ಕಳಲ್ಲಿ ಇರುವ ಭಾಷಾ ಗಟ್ಟಿತನವೂ ಇವರಲ್ಲಿ ಕಾಣುವುದಿಲ್ಲ. ಎಡಬಿಡಂಗಿತನದಲ್ಲೂ ಒಂದು ಸೌಂದರ್ಯವಿದ್ದರೆ ಉಳಿಸಿ ಬೆಳೆಸಬಹುದಿತ್ತು. ಆದರೆ ಆ ಸ್ಥಿತಿ ಒಂದು ತಲೆಮಾರಿನ ಅಭಿವ್ಯಕ್ತಿ­ಯನ್ನೇ ಹಾಳುಗೆಡವಿದೆ. ವಸಾಹತೋತ್ತರ ಕಾಲದ (ಪೋಸ್ಟ್‌ ಕಲೋನಿಯಲ್) ಲಕ್ಷಣಗಳಲ್ಲಿ ಇದೂ ಒಂದು.

ಒಂದು ಕಾಲಕ್ಕೆ ಬ್ರಿಟನ್, ಜರ್ಮನಿ, ಫ್ರಾನ್ಸ್, ಬೆಲ್ಜಿಯಂ, ಪೋರ್ಚುಗೀಸ್, ಸ್ಪೇನ್ ಹೀಗೆ ಯಾವುದೋ ಒಂದು ದೇಶದಾಳ್ವಿಕೆಗೆ ತುತ್ತಾಗಿ ಎರಡನೇ ಮಹಾಯುದ್ಧಾನಂತರ ಸ್ವತಂತ್ರ­ಗೊಂಡ ದೇಶಗಳಲ್ಲಿ ವಿಚಿತ್ರ ಸನ್ನಿವೇಶ ಇದಾಗಿದೆ. ವಸಾಹತುವಾಗಿದ್ದು ಸ್ವಾತಂತ್ರ್ಯ ಪಡೆದ ದೇಶ­ಗಳಲ್ಲಿ ಜನ ಮಾನಸಿಕವಾಗಿ ನರಳುತ್ತಿದ್ದಾರೆ. ವಸಾಹತು ಸರ್ಕಾರಗಳು ಹೇರಿದ್ದ ಭಾಷೆ, ಧರ್ಮ ಉಡುಗೆ ತೊಡುಗೆ ಹೀಗೆ ಹತ್ತು ಹಲವು ವಿಚಾರಗಳು ರಕ್ತನಾಳಗಳಿಗೆ ಇಳಿದು ಅದರಿಂದ ಹೊರಬರಬೇಕೆಂಬ ಅರಿವು ಇಲ್ಲದಂತಾಗಿದೆ.

ಭಾರತದಲ್ಲಿ ಈಗ ಇರುವುದು ಸಮ್ಮಿಶ್ರ  ಸಂಸ್ಕೃತಿ (ಹೈಬ್ರಿಡ್ ಕಲ್ಚರ್). ಒಂದು ಸಮಾಜ ಮತ್ತೊಂದರ ಮೇಲೆ ನಡೆಸಿದ ಹಲ್ಲೆಯಿಂದ ಹುಟ್ಟಿದ ಸಂಸ್ಕೃತಿ. ಅದನ್ನು ಗೌರವದಿಂದ ಒಪ್ಪಿ ಮುಂದುವರಿಯುವುದು ಎಲ್ಲರಿಗೂ ಸಾಧ್ಯ­ವಾಗುವ ವಿಚಾರವಲ್ಲ. ಗುಲಾಮಗಿರಿಯಿಂದ ಕುಗ್ಗಿದ ಮನಸ್ಥಿತಿ ಇಂದಿಗೂ ಹಲವು ರೂಪದಲ್ಲಿ ಕಾಡುತ್ತಿದೆ. ಅರಿವಿಗೆ ಬಾರದಂತೆ ಮಾನಸಿಕ ಜಾಡ್ಯಗಳನ್ನೂ ಚಟಗಳನ್ನೂ ನಮ್ಮದಾಗಿಸಿ­ಕೊಂಡಿರುತ್ತೇವೆ– ಕಾಫಿ, ಟೀ, ತಂಬಾಕು ಸೇವನೆಯಂತೆ. ಸರ್, ಮೇಡಂ ನಮ್ಮನ್ನು ಬಿಟ್ಟು ಹೋಗುವುದಿಲ್ಲ.

ಕ್ರೈಸ್ತರಾದ ಕನ್ನಡಿಗರು ಕ್ರಿಸ್ತನನ್ನು ಕುರಿತಾದ ಹಾಡುಗಳನ್ನು ಕಟ್ಟಿ ಇಂಗ್ಲಿಷ್ ದನಿಯಲ್ಲಿ ಹಾಡುವ ಹಾಡುಗಳು ಮಧುರವಾಗಿವೆಯೋ ಇಲ್ಲವೋ ಎಂದು ಅರಿವಿಗೆ ಬಾರದೆ ಅದನ್ನೇ ಭಕ್ತಿಯಿಂದ ಒಪ್ಪಿ ತಲೆದೂಗುವ ಸ್ಥಿತಿಯನ್ನು ತಲುಪಿರುತ್ತಾರೆ. ಜಾನಪದ ಗಾಯನ ಸ್ಪರ್ಧೆ­ಯೊಂದರಲ್ಲಿ  ನಾಗಾಲ್ಯಾಂಡ್‌ನ ಹುಡುಗನೊಬ್ಬ ಪಾಶ್ಚಾತ್ಯ ರಾಗದಲ್ಲಿ ಹಾಡತೊಡಗಿದಾಗ ಜನ ನಗತೊಡಗಿದರು. ಅದನ್ನು ಜಾನಪದವೆಂದು ಒಪ್ಪುವುದು ಜನರಿಗೆ ಸಾಧ್ಯವಾಗಿರಲಿಲ್ಲ. ಸಂಸ್ಕೃತಿಗಳ ಸಮ್ಮಿಲನ ಸಹಜವಾಗಿದ್ದರೆ ಅದು ಒಂದರೊಳಗೊಂದು ಮಧುರವಾಗಿ ಸೇರಿ ಹೋಗಿರುತ್ತದೆ.

ಇಂದು ವಸಾಹತುಶಾಹಿ ಹೇರಿಕೆಯಿಂದ ವಿಕೃತಗೊಂಡ ಸಾಂಸ್ಕೃತಿಕ ರೂಪಗಳ ಕುರಿತು ಆಫ್ರಿಕಾದ ಬರಹಗಾರರು ಚರ್ಚಿಸುತ್ತಿದ್ದಾರೆ. ವಸಾಹತೋತ್ತರ ಪರಿಸ್ಥಿತಿಯ ದೊಡ್ಡ ಅಧ್ಯಯ­ನವೇ ಆರಂಭಗೊಂಡಿದೆ. ವಸಾಹತು ವ್ಯವಸ್ಥೆ ಸೃಷ್ಟಿಸಿದ ಮೂರನೇ ವಿಶ್ವದ ಐಡೆಂಟಿಟಿ ಪ್ರಶ್ನೆ ಇಂದು ನಮ್ಮ ಮುಂದಿದೆ. ವಾಸ್ತವದಲ್ಲಿ ಅದು ವಸಾಹತುಶಾಹಿಯ ಅತ್ಯಾಚಾರಕ್ಕೆ ಬಸುರಾದ ಹೆಣ್ಣಿನ ಮನಸ್ಥಿತಿ. ಹೀಗೆ ಕಟ್ಟಿ ಹಾಕಿದ ಬಾಯಿಗೆ ದನಿ ಬರಬೇಕಾದರೆ ಸಾಮಾಜಿಕ, ಮಾನಸಿಕ ಕುಬ್ಜತೆಯಿಂದ ಹೊರಬರಬೇಕಾಗು­ತ್ತದೆ.

ಬ್ರಿಟನ್ ಸರ್ಕಾರ, ೧೯೫೦-ರ ದಶಕದಲ್ಲಿ ಕೀನ್ಯಾದ ಜನತೆ ನಡೆಸಿದ ಸ್ವಾತಂತ್ರ್ಯ ಹೋರಾಟ­ದಲ್ಲಿ ೫,೨೦೦ ಜನರನ್ನು ಹತ್ಯೆಮಾಡಿತ್ತು. ಅದಕ್ಕೆ ಪ್ರಾಯಶ್ಚಿತ್ತವಾಗಿ ಇಂದು ಕ್ಷಮೆ ಕೋರುತ್ತಾ ೧೩.೯ ದಶಲಕ್ಷ   ಪೌಂಡ್‌ಗಳನ್ನು ಕೊಡಲು ಮುಂದಾ­ಗಿದೆ. ಆ ಸಮಯದಲ್ಲಿ ಮಾಡಿದ ಪುರುಷತ್ವ ಶಕ್ತಿ ಹರಣಕ್ಕಾಗಿ ಆರು ದಶಲಕ್ಷ  ಪೌಂಡ್‌­­ಗಳನ್ನು ನೀಡುತ್ತಿದೆ. ಇದು ಅಪರೂಪದ ನಿರ್ಧಾರವೇ ಸರಿ. ಜೀವಹಾನಿ ಕಣ್ಣಿಗೆ ಕಾಣು­ತ್ತದೆ. ಹಣದ ರೂಪದ ಪರಿಹಾರದಿಂದ ಇಂಗ್ಲೆಂಡ್ ಅಪರಾಧಿ ಭಾವದಿಂದ ಹೊರ­ಹೋಗ­­ಬಹುದು. ಆದರೆ ಹದಗೆಡಿಸಿದ ಕೀನ್ಯಾದ ಸಂಸ್ಕೃತಿಯನ್ನು ಸರಿಪಡಿಸಲಾದೀತೇ?

ಗುಂಗುರು ಗುಂಗುರಾದ ಅವರ ಕೂದಲು­ಗಳನ್ನು ಬೋಳಿಸಿಕೊಂಡು ಮಕ್ಕಳು ಶಾಲೆಗೆ ಹೋಗುತ್ತಾರೆ.  ಉದ್ದನೆಯ ಜಡೆಯನ್ನು ಕತ್ತರಿಸಿ­ಕೊಂಡರೆ ತನ್ನ ಸಮಾಜವನ್ನು ಉಳಿಸಿಕೊಳ್ಳ ಬಹುದೇನೋ ಎಂಬ ನಿರ್ಧಾರಕ್ಕೆ ಬಂದ ಕೆಂಪು ಇಂಡಿಯನ್ ಮಕ್ಕಳ ಕಥೆ ಯಾರಿಗಾದರೂ ಕಣ್ಣೀರು ತರಿಸುತ್ತದೆ.

ಕೀನ್ಯಾದ ಪ್ರಸಿದ್ಧ ಲೇಖಕ ಗೂಗಿ- ವಾ-ಥಿಯಾಂಗೊ ಇಂಗ್ಲಿಷ್ ಬರಹವನ್ನು ಬಿಟ್ಟು ದೇಸಿ ಭಾಷೆಯಲ್ಲಿ ಬರೆಯತೊಡಗಿದ್ದು ಇದೇ ಕಾರಣಕ್ಕೆ. ‘ಡಿಕಾಲೋನೈಸಿಂಗ್ ದ ಮೈಂಡ್’ ಕೇವಲ ಗೂಗಿಯ ಬರಹವಾಗಿ ಉಳಿದಿಲ್ಲ. ಅದು ಅವರ ಚಳವಳಿಯ ಕರೆಯಾಗಿದೆ. ಆಫ್ರಿಕಾದ ಬುಡಕಟ್ಟು ಧರ್ಮಗಳ ಮೇಲೆ ಪಾಶ್ಚಿಮಾತ್ಯ  ನಾಗರಿಕತೆ ನಡೆಸಿದ ಹಲ್ಲೆ ಕುರಿತು ಬರೆದ ಕಾದಂಬರಿಯ ಕಾರಣಕ್ಕೆ ಗೂಗಿ ಸೆರೆಮನೆ­ವಾಸವನ್ನೂ ಅನುಭವಿಸಬೇಕಾಗಿ ಬಂದಿತು.

ವಸಾಹತುಶಾಹಿ ವಿರೋಧಕ್ಕೆ  ದೇಶಗಳು ನೇರವಾಗಿ ಕೈಜೋಡಿಸಲು ಸಾಧ್ಯವಾಗಲಿಲ್ಲ. ಆದರೆ ಸಿದ್ಧಾಂತಗಳು ಬೆಂಬಲಿಸಿದವು. ಇವತ್ತು ತಾತ್ವಿಕವಾಗಿ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳ ಬೇಕಾಗಿದೆ. ಇದು ಬೇರೆ ಯಾರದೋ ವಿರುದ್ಧ ನಡೆಸುವ ಹೋರಾಟವಲ್ಲ. ನಮಗೆ ನಾವೇ ಕಂಡು­ಕೊಳ್ಳಬೇಕಾದ ಮಾರ್ಗವಾಗಿದೆ.
ಪಾಶ್ಚಾತ್ಯರು ಕಂಡ ಭಾರತವನ್ನು ನಮ್ಮ ಚರಿತ್ರೆ, ಸಂಸ್ಕೃತಿ, ಸಮಾಜವೆಂದು ಪಠ್ಯಕ್ರಮವಾಗಿಸಿ­ಕೊಂಡು ಓದುತ್ತಿದ್ದೇವೆ. ಅವರ ಗ್ರಹಿಕೆಗೆ ಸಿಕ್ಕ ವಿಚಾರಗಳೆಷ್ಟು ಎಂಬ ಅವಲೋಕನಕ್ಕಿಂತ ಆ ಮಾದರಿಗಳನ್ನೇ ಮುಂದುವರಿಸಿ ಸಂಭ್ರಮಿಸುತ್ತಿ­ದ್ದೇವೆ. ಅದನ್ನೇ ನಿಜವಾದ ವಿದ್ಯೆ ಎಂದು ಕಲಿಯುತಿದ್ದೇವೆ. ಅದನ್ನು ಓರಿಯಂಟಲ್ ವಾದ ಎಂದು ಕರೆದು ಹೊಸ ಸಂಶೋಧನೆಗೆ ತೊಡಗುವುದು, ಮತ್ತು ಪಾಶ್ಚಿಮಾತ್ಯ ಕಲ್ಪಿತ ಭಾರತ ಚರಿತ್ರೆಯನ್ನು ಮುರಿದು ಕಟ್ಟುವುದು ವಸಾಹತೋತ್ತರ ಕಾಲದ ಒಂದು ಸವಾಲು.

ನಿಮ್ಮ ಅನಿಸಿಕೆ ತಿಳಿಸಿ: : editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT