ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳ್ಳಿನ ಗಿಡದಲ್ಲಿ ಹೂವು ಅರಳಿಸಿದವರು

Last Updated 19 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಇದೇ ತಿಂಗಳು 29 ರಂದು ಧ್ಯಾನಚಂದ್ ಅವರ ಹುಟ್ಟುಹಬ್ಬ. ದೇಶ ಅಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸುತ್ತದೆ. ಈ ಸಲದ ಸಂಭ್ರಮ ಸ್ವಲ್ಪ ಹೆಚ್ಚೇ ಇರಲಿದೆ.

ಯಾಕೆಂದರೆ ಭಾರತದ ಕ್ರೀಡಾಪಟುಗಳು, ಲಂಡನ್ ಒಲಿಂಪಿಕ್ಸ್‌ನಲ್ಲಿ ಆರು ಪದಕಗಳನ್ನು ಗೆದ್ದಿದ್ದಾರೆ. ಭಾರತ ಹಿಂದೆ ಎಂದೂ ಇಷ್ಟೊಂದು ಪದಕಗಳನ್ನು ಗೆದ್ದಿರಲಿಲ್ಲ. ಇದು ಸಂತೋಷ ಪಡುವ ವಿಷಯವೇ ಹೌದು. ಆದರೂ ಧ್ಯಾನಚಂದ ಅವರ ಆತ್ಮ ಅಳುತ್ತಿದೆ. ಒಲಿಂಪಿಕ್ ಕ್ರೀಡೆಗಳಲ್ಲಿ ಭಾರತಕ್ಕೆ ಸ್ಥಾನ ಮಾನ ತಂದುಕೊಟ್ಟ ಹಾಕಿ ಆಟದಲ್ಲಿ ಮಾತ್ರ ಭಾರತ ಪದಕ ಗೆಲ್ಲಲಿಲ್ಲ. ಅದಕ್ಕಿಂತ ಹೆಚ್ಚು ನೋವು ಕೊಟ್ಟಿದ್ದು ಭಾರತ ಆಡಿದ ರೀತಿ. ಆಡಿದ ಎಲ್ಲ ಪಂದ್ಯಗಳಲ್ಲಿ ಸೋತು ಕೊನೆಯ ಸ್ಥಾನಕ್ಕೆ (ಇಂಗ್ಲಿಷ್‌ನಲ್ಲಿ ಅದಕ್ಕೆ ಸುಂದರವಾಗಿ `ವುಡನ್ ಸ್ಪೂನ್~ ಎನ್ನುತ್ತಾರೆ) ದೂಡಿಸಿಕೊಂಡಿತು. ಲಂಡನ್‌ನಲ್ಲಿ ಭಾರತದ ಹಾಕಿ ಮಾನ ಹರಾಜಾಗಿ ಹೋಯಿತು.

ಭಾರತಕ್ಕೆ ಇದು ಹೊಸತೇನಲ್ಲ. 1996 ಒಲಿಂಪಿಕ್ ಕ್ರೀಡೆಗಳಲ್ಲೂ ಭಾರತ ಕೊನೆಯ ಸ್ಥಾನಕ್ಕೇ ಕುಸಿದಿತ್ತು. ಬೇರೆ ತಂಡಗಳು ಭಾರತವನ್ನು ಸದೆಬಡಿಯತೊಡಗಿ ದಶಕಗಳೇ ಕಳೆದಿವೆ. ಆದರೂ ದೇಶದ ಹಾಕಿಪ್ರಿಯನಿಗೆ ಎಲ್ಲೋ ಒಂದು ಆಶಾಭಾವನೆ ಅರಳುತ್ತದೆ. ಪ್ರತಿಯೊಂದು ಒಲಿಂಪಿಕ್ಸ್ ಬಂದಾಗಲೂ, ಈ ಸಲ ಭಾರತ ಚೆನ್ನಾಗಿ ಆಡುತ್ತದೆ ಎಂಬ ಕನಸು ಕಾಣುತ್ತಾನೆ. ಕನಸು ಛಿದ್ರಗೊಂಡಾಗ ನಾಲ್ಕು ದಿನ ಕೆರಳಿ, ಹಾಕಿ ಆಟಗಾರರನ್ನು, ಅಧಿಕಾರಿಗಳನ್ನು, ಕ್ರೀಡಾ ವ್ಯವಸ್ಥೆಯನ್ನು ಬಾಯಿಗೆ ಬಂದ ಹಾಗೆ ಬೈಯ್ದು ಸುಮ್ಮನಾಗುತ್ತಾನೆ. ಮುಂದೆ ನಾಲ್ಕು ವರ್ಷಗಳ ನಂತರವೇ ಎಲ್ಲರಿಗೂ ಎಚ್ಚರವಾಗುತ್ತದೆ. ಪದಕ ಗೆದ್ದಿರುವ ಪೈಲ್ವಾನರೂ, ಬಾಕ್ಸರುಗಳೂ ಅಥವಾ ಷೂಟರುಗಳೂ ನೆನಪಿನಲ್ಲಿ ಉಳಿಯುವುದಿಲ್ಲ. ಗೆದ್ದಕೂಡಲೇ ಉಧೋ ಉಧೋ ಎಂದು ಹಾಡಿಹೊಗಳಿ ನಂತರ ಮರೆತುಬಿಡುವುದು ನಮ್ಮ ಕ್ರೀಡಾ ವ್ಯವಸ್ಥೆಯಲ್ಲಿ ಹೊಸದಲ್ಲ. ಕಳೆದ ಗುರುವಾರ ಪದಕ ವಿಜೇತರಿಗೆ ನವದೆಹಲಿಯಲ್ಲಿ ನಡೆದ ಸನ್ಮಾನ ಸಮಾರಂಭದ ಅವ್ಯವಸ್ಥೆಯೇ ಇದಕ್ಕೆ ಸಾಕ್ಷಿ.
ಆದರೂ ಈ ಸಲ ಬಹುಮಾನಗಳ ವಿಷಯದಲ್ಲಿ ಗಮನಾರ್ಹ ಸುಧಾರಣೆ ಆಗಿದೆ. ಕ್ರೀಡಾಪಟುಗಳ ಅಭ್ಯಾಸಕ್ಕೂ ಸಾಕಷ್ಟು ಹಣ ಖರ್ಚು ಮಾಡಲಾಗಿದೆ. ಪದಕ ಗೆದ್ದವರು ಖುಷಿಯಿಂದಲೇ ಸ್ವೀಕರಿಸುವಷ್ಟು ಮೊತ್ತವನ್ನು ಕೊಡಲಾಗಿದೆ. ಬರೀ ಕ್ರಿಕೆಟ್‌ಪಟುಗಳು ಮಾತ್ರ ಕೋಟಿಯಲ್ಲಿ ದುಡ್ಡು ಎಣಿಸುತ್ತಾರೆಂಬ ವಾತಾವರಣದಲ್ಲಿ ಈ ಸುಧಾರಣೆ ಸ್ವಾಗತಾರ್ಹ. ಇದನ್ನು ಇನ್ನೂ ಹೆಚ್ಚು ಆಕರ್ಷಕವಾಗಿ ಮಾಡಬಹುದು. 2020 ರ ಒಲಿಂಪಿಕ್ಸ್‌ನಲ್ಲಿ ಭಾರತ ಕನಿಷ್ಠ 25 ಪದಕಗಳನ್ನು ಗೆಲ್ಲುವುದು ಅಥವಾ ಗೆಲ್ಲುವ ಕ್ರೀಡಾಪಟುಗಳನ್ನು ತಯಾರು ಮಾಡಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವರು ಹೇಳುತ್ತಿದ್ದಾರೆ. ವಿಶ್ವ ಕ್ರೀಡಾರಂಗದಲ್ಲಿ ಭಾರತದ ಗುಣಮಟ್ಟ ಇನ್ನೂ ಸಾಕಷ್ಟು ಹಿಂದಿರುವುದರಿಂದ, ತಯಾರಿ ನಡೆಸಲು ಎಂಟು ವರ್ಷಗಳು ಬೇಕು. ನಿರ್ದಿಷ್ಟ ಗುರಿ ಇಟ್ಟುಕೊಂಡು ತಯಾರಿ ನಡೆಸಿದಲ್ಲಿ ಗುರಿ ಮುಟ್ಟುವುದು ಕಷ್ಟವಲ್ಲ. ಹಾಗೆಯೇ ಬಹುಮಾನದ ಮೊತ್ತವನ್ನೂ ಅಂದರೆ ಚಿನ್ನಕ್ಕೆ ಐದು ಕೋಟಿ, ಬೆಳ್ಳಿಗೆ ಮೂರು ಕೋಟಿ, ಕಂಚಿಗೆ ಎರಡು ಕೋಟಿ (ಇನ್ನು ಎಂಟು ವರ್ಷಗಳ ನಂತರ ಇದರ ಕಿಮ್ಮತ್ತು ಎಷ್ಟಿರುತ್ತದೆಯೋ ಗೊತ್ತಿಲ್ಲ!) ಎಂದು ಘೋಷಿಸಿದರೆ ಯುವ ಕ್ರೀಡಾಪಟುಗಳು ಇನ್ನಷ್ಟು ಛಲದಿಂದ ಅಭ್ಯಾಸ ಮಾಡಬಹುದು. ಕ್ರಿಕೆಟ್‌ಗೆ ಲಕ್ಷಾಂತರ ಮಕ್ಕಳು ನುಗ್ಗುವುದು ಅಲ್ಲಿರುವ ಹಣದ ಮೇಲಿನ ಮೋಹಕ್ಕೇ ತಾನೇ! ದುಡ್ಡಿನ ಮುಂದೆ ಬೇರೆ ಯಾವ ಸ್ಫೂರ್ತಿಯೂ ಇಲ್ಲ.

ಚೀನಾದಲ್ಲಿ ಬಹುಮಾನದ ವಿಷಯದಲ್ಲಿ ಏನು ಮಾಡುತ್ತಾರೋ ಗೊತ್ತಿಲ್ಲ. ಆದರೆ, ಚೀನಾ ನಿರ್ದಿಷ್ಟ ಗುರಿಯೊಂದಿಗೆ ಕ್ರೀಡಾ ನೀತಿ ನಿರೂಪಿಸಿದ್ದೇ, ಅದು ವಿಶ್ವ ಕ್ರೀಡಾರಂಗದ ದೊಡ್ಡ ಶಕ್ತಿಯಾಗಿ ರೂಪುಗೊಳ್ಳಲು ಕಾರಣ. 2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಮೊದಲ ಸ್ಥಾನ ಪಡೆಯಲೇಬೇಕೆಂಬ ಗುರಿಯೊಂದಿಗೆ 2001 ರಲ್ಲೇ `ಪ್ರಾಜೆಕ್ಟ್ 119~ ಎಂಬ ಕಾರ್ಯಕ್ರಮ ಹಾಕಿಕೊಂಡು, ಹೆಚ್ಚು ಪದಕಗಳಿರುವ ಕ್ರೀಡೆಗಳನ್ನೇ ಆರಿಸಿ, ಅಭ್ಯಾಸ ಆರಂಭಿಸಿತು. ಅದರಂತೆಯೇ ಬೀಜಿಂಗ್‌ನಲ್ಲಿ 51 ಚಿನ್ನದ ಪದಕಗಳೊಡನೆ ಚೀನಾ ವಿಜೃಂಭಿಸಿತು. ಸೋವಿಯತ್ ಒಕ್ಕೂಟ ಛಿದ್ರಗೊಂಡ ನಂತರ, ಪದಕ ಪಟ್ಟಿಯ ಅಗ್ರಸ್ಥಾನದಲ್ಲೇ ಇದ್ದ ಅಮೆರಿಕವನ್ನು ಎರಡನೇ ಸ್ಥಾನಕ್ಕೆ ದೂಡಿದ ಶ್ರೇಯಸ್ಸು ಚೀನಾದ್ದು. ಕ್ರೀಡೆಯ ಹೊಸ `ಸೂಪರ್ ಪವರ್~ ಅಗಿ ರೂಪುಗೊಂಡ ಚೀನಾ ಲಂಡನ್‌ನಲ್ಲೂ ಅಮೆರಿಕಕ್ಕೆ ತೀವ್ರ ಪೈಪೋಟಿ ನೀಡಿತು. ಅದರಲ್ಲೂ ಈಜು ಸ್ಪರ್ಧೆಗಳಲ್ಲಿ ಚೀನಿಯರ ಸಾಧನೆ ಅಮೆರಿಕದವರನ್ನು ಕಕ್ಕಾಬಿಕ್ಕಿಯಾಗಿಸಿತು. ಆದರೆ ಅಥ್ಲೆಟಿಕ್ಸ್‌ನಲ್ಲಿ ಅಮೆರಿಕನ್ನರ ಮೇಲುಗೈ ಅದಕ್ಕೆ ಪದಕಪಟ್ಟಿಯಲ್ಲಿ ಅಗ್ರಸ್ಥಾನ ತಂದುಕೊಟ್ಟಿತಾದರೂ, ಚೀನೀಯರ ಪ್ರಗತಿ ಅದಕ್ಕೆ ಎಚ್ಚರಿಕೆಯ ಗಂಟೆಯೇ ಆಗಿದೆ. ಭಾರತ ಇಂಥ ವ್ಯವಸ್ಥೆಯನ್ನು ಮಾದರಿಯಾಗಿಟ್ಟುಕೊಳ್ಳಬೇಕು.

ಹಾಕಿ ಆಟಕ್ಕೂ ಇದೇ ಮಾತು ಅನ್ವಯಿಸುತ್ತದೆ. ಮೊದಲು ಅದರಲ್ಲಿ ತುಂಬಿರುವ ಭ್ರಷ್ಟ ಪದಾಧಿಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ ಹೊರಹಾಕಬೇಕು. ಭಾರತ ಹಾಕಿ ಫೆಡರೇಷನ್ ರಾಜಕೀಯಕ್ಕೆ ಸೆಡ್ಡು ಹೊಡೆದ ಹಾಕಿ ಇಂಡಿಯಾವನ್ನು ಹುಟ್ಟುಹಾಕಿದ್ದೇ ಸುರೇಶ್ ಕಲ್ಮಾಡಿ ಎಂದ ಮೇಲೆ ಅದು ಹೇಗೆ ಪಾರದರ್ಶಕವಾಗಿ ಕೆಲಸ ಮಾಡಲು ಸಾಧ್ಯ? ಜೈಲಿಗೆ ಹೋಗಿ ಬಂದರೂ ಅವರು ಒಲಿಂಪಿಕ್ ಸಂಸ್ಥೆಯಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟಿಲ್ಲ. ಲಂಡನ್‌ಗೆ ಅವರು ಯಾವ ಮುಖ ಇಟ್ಟುಕೊಂಡು ಹೋಗಿದ್ದರೋ ಗೊತ್ತಿಲ್ಲ. ಅವರಂತೆಯೇ ಹಾಕಿ ಪದಾಧಿಕಾರಿಗಳೂ ಲಂಡನ್ ಪ್ರವಾಸದ ಮಜಾ ಅನುಭವಿಸಲು ಹೋಗಿದ್ದರು. ಕೇಂದ್ರ ಕ್ರೀಡಾ ಇಲಾಖೆ ಒಂದು ದಿಟ್ಟ ನಿರ್ಧಾರ ತೆಗೆದುಕೊಂಡು ಈ ಹಾಕಿ ಫೆಡರೇಷನ್ ಮತ್ತು ಹಾಕಿ ಇಂಡಿಯಾ ಕಚೇರಿಗೆ ದೊಡ್ಡ ಬೀಗ ಜಡಿಯಬೇಕು. ಮಾಜಿ ಆಟಗಾರರು ಅಥವಾ ಹಾಕಿ ಬಗ್ಗೆ ನಿಜವಾದ ಪ್ರೀತಿ, ಕಳಕಳಿ ಇರುವವರನ್ನು ತಂದು ಹೊಸ ಸಂಸ್ಥೆಯನ್ನೇ ಕಟ್ಟಬೇಕು. ಆಟಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನೂ ಒದಗಿಸಲಿ. ಹಾಗೆಯೇ ನಿರೀಕ್ಷಿತ ಫಲಿತಾಂಶ ಬರದಿದ್ದರೆ ದಂಡಿಸುವುದಾಗಿಯೂ ತಿಳಿಸಲಿ. ಈ ಎಲ್ಲ ಕ್ರೀಡಾ ಮಂಡಳಿಗಳಿಗೆ ಯಾವುದೇ ರೀತಿಯ ಉತ್ತರದಾಯಿತ್ವ ಇಲ್ಲದಿರುವುದೇ ಸ್ವೇಚ್ಛಾಚಾರಕ್ಕೆ ದಾರಿಯಾಗುತ್ತದೆ. ಸೈನಿಕ ಶಿಸ್ತೊಂದೇ ಉಳಿದಿರುವ ಮಾರ್ಗ.

ಧ್ಯಾನಚಂದರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಭಾರತ ಹಾಕಿಯಲ್ಲಿ ಗತವೈಭವವನ್ನು ಮರಳಿ ಗಳಿಸಲೇಬೇಕು. ಹಾಕಿಯ ತೊಟ್ಟಿಲುಗಳೆನಿಸಿಕೊಂಡ ಪಂಜಾಬ್, ಕೊಡಗು ಹಾಗೂ ಹಾಕಿ ಬಗ್ಗೆ ವಿಶೇಷ ಆಸಕ್ತಿ ಇರುವ ರಾಜ್ಯಗಳಲ್ಲಿ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಹಾಕಿ ಆಡಿದರೆ ಭವಿಷ್ಯ ಇದೆ, ಆರ್ಥಿಕ ಭದ್ರತೆ ಇದೆ ಎಂದು ಆಟಗಾರನಿಗೆ ಮನವರಿಕೆಯಾಗಬೇಕು. ಬರೀ ಕ್ರೀಡೆಯ ಮೇಲಿನ ಪ್ರೀತಿಗಾಗಿ ಆಡುವ ದಿನಗಳು ಹೋದವು. ಇದು ಪಕ್ಕಾ ವೃತ್ತಿಪರ ಯುಗ. ಆರೋಗ್ಯಕ್ಕಾಗಿ ಆಡುವ, ಓಡುವ ಜನ ಅದನ್ನು ಮಾಡುತ್ತಲೇ ಇರುತ್ತಾರೆ. ಆದರೆ ಕ್ರೀಡೆಯನ್ನು ಜೀವನವನ್ನಾಗಿ, ವೃತ್ತಿಯನ್ನಾಗಿ ಪರಿಗಣಿಸುವ ಯುವಕರಿಗೆ ಆರ್ಥಿಕ ಭದ್ರತೆಯ ವಿಶ್ವಾಸ ಮೂಡಬೇಕಾಗುತ್ತದೆ. ಆಗಲೇ ಯುವಕರು ಸಾಧನೆಯ ಮೆಟ್ಟಿಲೇರಲು ಸಾಧ್ಯ. ಈಗ ಸೋತು ಬಂದಿರುವ ಆಟಗಾರರನ್ನು ಬೈಯ್ದು ಪ್ರಯೋಜನವಿಲ್ಲ. ಅವರ ಹೃದಯ ಒಡೆದುಹೋಗಿದೆ. ಗಾಯದ ಮೇಲೆ ಉಪ್ಪು ಸವರಬಾರದು. ಭಾರತ ತಂಡ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವುದೇ ದೊಡ್ಡ ವಿಷಯವಾಗಿತ್ತು. ಇಂಥ ಸ್ಥಿತಿಯಲ್ಲಿ ಪದಕ ಗೆಲ್ಲುವ ಅವಕಾಶಗಳು ಹೆಚ್ಚಿರಲೇ ಇಲ್ಲ. ಆಸ್ಟ್ರೇಲಿಯದ ತರಬೇತುದಾರ ರಾತ್ರೋರಾತ್ರಿ ಪವಾಡ ಮಾಡಲು ಸಾಧ್ಯವೂ ಇರಲಿಲ್ಲ. ಮುಂದೆ ಏನು ಮಾಡಬೇಕು ಎಂಬುದೇ ಈಗಿರುವ ಸವಾಲು. ಕ್ರೀಡಾ ಸಚಿವರ ಆಶಾಭಾವನೆಯಂತೆ, 2020 ರಲ್ಲೇ ಭಾರತ ಹಾಕಿ ತಂಡ ಪದಕ (ಚಿನ್ನವೇ ಸರಿಯಾದ ಪದಕ) ಗೆಲ್ಲಲಿ ಎಂಬ ಛಲದೊಂದಿಗೆ ತಂಡವನ್ನು ರೂಪಿಸುವ ಅಗತ್ಯ ಇದೆ. ಜರ್ಮನಿ, ಹಾಲೆಂಡ್ ಮತ್ತು ಆಸ್ಟ್ರೇಲಿಯ ತಂಡಗಳೇನೂ ಸುಮ್ಮನೆ ಕುಳಿತಿರುವುದಿಲ್ಲ. ಅವುಗಳ ಪ್ರಗತಿ ಗಮನಿಸುತ್ತಲೇ, ಅವರನ್ನು ಹಿಂದೂಡುವ ನಕ್ಷೆ ಸಿದ್ಧವಾಗಬೇಕು. ಆಟಗಾರರು ದೈಹಿವಾಗಿ, ಮಾನಸಿಕವಾಗಿ ಉನ್ನತ ಮಟ್ಟಕ್ಕೇರಬೇಕು. ಈ ಒಂದು ಪ್ರಯತ್ನದಲ್ಲಿ ಕ್ರೀಡಾಪ್ರೇಮಿಗಳೂ ಕೈಜೋಡಿಸಬೇಕು. ಕ್ರೀಡಾಪಟುಗಳು ದೇಶದ ಆಸ್ತಿ ಎಂದು ಪರಿಗಣಿಸಿದಾಗಲೇ ಕ್ರೀಡಾ ಸಂಸ್ಕೃತಿ ಚಿಗುರುತ್ತದೆ.

ಇನ್ನು ಎಂಟು ವರ್ಷಗಳಲ್ಲಿ ನಮ್ಮ ಕ್ರೀಡಾಪಟುಗಳು ಬಹು ದೊಡ್ಡ ಸಾಧನೆ ಮಾಡುವರು ಎಂಬ ಕನಸು ಬಿತ್ತಿದ ಆರೂ ಮಂದಿಗೆ ಅಂದರೆ ಲಂಡನ್ ಒಲಿಂಪಿಕ್‌ನಲ್ಲಿ ಪದಕ ಗೆದ್ದ ಸುಶೀಲ್ ಕುಮಾರ್, ವಿಜಯ್‌ಕುಮಾರ್, ಯೋಗೇಶ್ವರ ದತ್, ಮೇರಿ ಕೋಮ್, ಗಗನ್ ನಾರಂಗ್, ಸೈನಾ ನೆಹ್ವಾಲ್ ಅವರಿಗೆ ಅಭಿನಂದನೆಗಳು. ಇವರೆಲ್ಲರೂ ಮುಳ್ಳೇ ತುಂಬಿರುವ ನಮ್ಮ ಕ್ರೀಡಾ ವ್ಯವಸ್ಥೆಯಲ್ಲೂ ಪದಕ ಗೆಲ್ಲುವುದರೊಂದಿಗೆ ನಮ್ಮೆಲ್ಲರ ಮನಸ್ಸಿನಲ್ಲಿ ಹೂವನ್ನು ಅರಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT