ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ಪರ್ಯಾಯ ಬರೀ ಕನಸೇ?

Last Updated 9 ಜುಲೈ 2016, 19:30 IST
ಅಕ್ಷರ ಗಾತ್ರ

ಇವರೆಲ್ಲ ಒಳ್ಳೆಯವರು. ಜನರಿಗೆ  ಒಳ್ಳೆಯದು ಮಾಡಬೇಕು ಎನ್ನುವವರು. ಇವರಲ್ಲಿ ಕೆಲವರು ಸದಾ ಸುದ್ದಿಯಲ್ಲಿ ಇರುವವರು. ವ್ಯವಸ್ಥೆಯನ್ನು ಸರಿಪಡಿಸಬೇಕು ಎನ್ನುವವರು ಮತ್ತು ಅದನ್ನು ಎದುರು ಹಾಕಿಕೊಳ್ಳಲು ಹೆದರದೇ ಇರುವವರು.

ಸರ್ಕಾರದಲ್ಲಿ ಬಲಿಷ್ಠರಾಗಿರುವ ಸಚಿವರಿಗೆ ‘ನೀನೊಬ್ಬ ಪರಮ ಭ್ರಷ್ಟ’ ಎಂದು ಅವರ ಎದುರು ಕುಳಿತುಕೊಂಡೇ ಹೇಳಲು ಅಳುಕದವರು, ನಿಮ್ಮನ್ನು ಜೈಲಿಗೆ ಕಳಿಸುವೆ ಎನ್ನುವ ನ್ಯಾಯಮೂರ್ತಿಗೆ ‘ಕಳಿಸುವಿರಂತೆ ತಡೆಯಿರಿ. ಅದಕ್ಕೆ ಮುಂಚೆ ನಾನು ನಿಮ್ಮ ಮೇಲೆ ಆರೋಪ ಮಾಡುವುದಿದೆ’ ಎಂದು ಅಂಜದೇ ಹೇಳುವವರು...!

ರಾಜಕಾರಣದ ಒಳಗೆ ಹೋಗಿ ಅದನ್ನು ಸರಿ ಮಾಡಬೇಕು ಎಂದು ಹೀಗೆ ಹೇಳಿದವರು ಇವರೇ ಮೊದಲಿಗರೇನೂ ಅಲ್ಲ. ಹಿಂದೆಯೂ ಹೇಳಿದವರು ಇದ್ದರು. ಮುಂದೆಯೂ ಬರಬಹುದು. ಧಾರವಾಡದಲ್ಲಿ ನಿನ್ನೆ ಮತ್ತು ಇಂದು ಇಂಥದೇ ಕನಸುಗಾರರ ಸಮಾವೇಶ ನಡೆದಿದೆ. ಹೋರಾಟದ ದಿವ್ಯ ಹಿಡಿದಿರುವ  ಹಿರೇಮಠರು, ಬರವಣಿಗೆಯ ದೀವಟಿಗೆ ಹಿಡಿದಿರುವ ದೇವನೂರರು ಅಲ್ಲಿ ರಾಜಕೀಯ ಪರ್ಯಾಯದ ಹುಡುಕಾಟದಲ್ಲಿ ಇದ್ದಾರೆ.

ಅವರಿಗೆ  ಕೇಂದ್ರದ ಬಿಜೆಪಿ ಸರ್ಕಾರದ ಬಗೆಗೂ ಸಮಾಧಾನ ಇಲ್ಲ. ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ಬಗೆಗೂ ತೃಪ್ತಿ ಇಲ್ಲ. ಹಾಗೆಂದು ದೆಹಲಿಯ ಆಮ್‌ ಆದ್ಮಿ ಪಾರ್ಟಿ ಪರ್ಯಾಯವೇ? ಅದರಿಂದ ಭ್ರಮನಿರಸನಗೊಂಡವರೂ ಧಾರವಾಡಕ್ಕೆ ಬಂದಿದ್ದಾರೆ. ಸ್ಥಾಪಿತ ಪಕ್ಷ ರಾಜಕಾರಣಕ್ಕೆ ಪರ್ಯಾಯ ಹುಡುಕುವುದು ಎಷ್ಟು ಕಷ್ಟ ಅಲ್ಲವೇ?

ಅದು 1980ರ ದಶಕ. ರಾಜ್ಯದಲ್ಲಿ ರೈತ ಚಳವಳಿ ಉಚ್ಛ್ರಾಯ ಸ್ಥಿತಿಯಲ್ಲಿ ಇತ್ತು. ಆರ್‌.ಗುಂಡೂರಾಯರು ಆಗ ಮುಖ್ಯಮಂತ್ರಿ. ಸಾವಿರ ಸಾವಿರ ಸಂಖ್ಯೆಯಲ್ಲಿ ರೈತರು ಬೆಂಗಳೂರಿಗೆ ಬರುತ್ತಿದ್ದರು. ಇಡೀ ಕಬ್ಬನ್‌ ಪಾರ್ಕು ಅವರಿಂದ ತುಂಬಿ ತುಳುಕುತ್ತಿತ್ತು. ತಮ್ಮ ಊರಿನಿಂದ ರೈತರೇ ಬುತ್ತಿ ಕಟ್ಟಿಕೊಂಡು ಬರುತ್ತಿದ್ದರು. ಬೆಂಗಳೂರಿಗೆ ಬರುವ ಯಾವ ರೈಲೂ ಅವರಿಗೆ ಸಾಲುತ್ತಿರಲಿಲ್ಲ.  ಅವರು ತಾವು ಬೆಳೆದ ಬೆಲೆಗೆ ನ್ಯಾಯವಾದ ಬೆಲೆ ಮಾತ್ರ ಕೇಳುತ್ತಿದ್ದರು.

1983ರಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಿತು. ಕಾಂಗ್ರೆಸ್ಸೇತರ ಮೊದಲ ಸರ್ಕಾರ ಅಧಿಕಾರಕ್ಕೆ ಬಂತು. ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಅದು ಮೊದಲ ಪರ್ಯಾಯದ ಪ್ರಯೋಗ. ಆಗ ಜನತಾ ಸರ್ಕಾರ ಅಧಿಕಾರಕ್ಕೆ ಬಂದುದರ ಹಿಂದೆ, ಶಿಕ್ಷಣದಲ್ಲಿ ಕನ್ನಡದ ಸ್ಥಾನಮಾನಕ್ಕಾಗಿ ನಡೆದ ಗೋಕಾಕ್‌ ಚಳವಳಿಯ ಪಾತ್ರ ಎಷ್ಟು ಇತ್ತೋ ನ್ಯಾಯಯುತ ಬೆಲೆಗಾಗಿ ಹೋರಾಡಿದ ರೈತರ ಪಾಲೂ ಅಷ್ಟೇ ಇತ್ತು.

ಹಾಗೆಂದು ಜನತಾ ಸರ್ಕಾರ ಜನರು ಬಯಸಿದ ನೈಜ ಪರ್ಯಾಯ ಆಗಿತ್ತೇ? ಅದರ ಆಡಳಿತ ಅಂಥ ಭಾವನೆಯನ್ನು ತುಂಬಲಿಲ್ಲ. 1977ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಜನರು ಕೇಂದ್ರದಲ್ಲಿ ಸರ್ಕಾರ ರಚನೆಗೆ ಜನತಾ ಪಕ್ಷವನ್ನು ಆಯ್ಕೆ ಮಾಡಿದರು.

ಅದು, ಸರ್ವಾಧಿಕಾರದ ವಿರುದ್ಧ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ನೀಡಿದ ಜನಾದೇಶವಾಗಿತ್ತು. ಆದರೆ, ಇಂದಿರಾ ಗಾಂಧಿಯವರ ಕಾಂಗ್ರೆಸ್‌ ಪಕ್ಷವನ್ನು ಸೋಲಿಸಿ ಅಧಿಕಾರಕ್ಕೆ ಬಂದ ಜನತಾ ಸರ್ಕಾರ ಒಂದು ಪರ್ಯಾಯವಾಗಿತ್ತೇ? ಅವರ ಕಚ್ಚಾಟ ಜನರನ್ನು ಕಂಗೆಡಿಸಿತು.

ಪರ್ಯಾಯದ ಹುಡುಕಾಟ ಎಂಬುದು ಸೆಗಣಿಯ ಉಂಡೆಯನ್ನು ಮೇಲೆ ತಳ್ಳುತ್ತ ಹೋಗಲು ಯತ್ನಿಸುವ ಹುಳುವಿನ ಕಥೆಯೇ? ಉಂಡೆ ಕೆಳಗೆ ಉರುಳಿ ಬರುತ್ತದೆ. ಹುಳು ಮತ್ತೆ ಅದನ್ನು ಒಮ್ಮೆ ಮುಂಗಾಲಿನಿಂದ ಇನ್ನೊಮ್ಮೆ ಹಿಂಗಾಲಿನಿಂದ  ಮೇಲೆ ತಳ್ಳುತ್ತದೆ.

ಮತ್ತೆ ಅದು ಕೆಳಗೆ ಉರುಳುತ್ತದೆ. ಮತ್ತೆ ಅದು ಮೇಲೆ ತಳ್ಳುತ್ತದೆ. ಹಾಗೆ ನೋಡಿದರೆ ಪ್ರತಿ ಚುನಾವಣೆಯೂ ಪರ್ಯಾಯದ ಒಂದು ಹುಡುಕಾಟವೇ ಅಲ್ಲವೇ? ಜನರು ಒಂದು ಪಕ್ಷದ ಸರ್ಕಾರವನ್ನು ಬದಲಿಸಿ ಮತ್ತೊಂದು ಪಕ್ಷದ ಸರ್ಕಾರವನ್ನು ಅಧಿಕಾರಕ್ಕೆ ತರುವ ಉದ್ದೇಶ ಅದೇ ಅಲ್ಲವೇ?

ಆದರೆ, ಪರ್ಯಾಯದ ಪ್ರಯತ್ನಗಳು ಮೊಳಕೆಯಲ್ಲಿಯೇ ಏಕೆ ಚಿವುಟಿ ಹೋಗುತ್ತವೆ? ಅಥವಾ ಪ್ರಯತ್ನಗಳು ಫಲ ನೀಡಿಯೂ ನಾವು ಬಯಸಿದ ಫಲ ಇದು ಅಲ್ಲ ಎಂದು ಏಕೆ ಅನಿಸಲು ಆರಂಭಿಸುತ್ತದೆ? ದೇವನೂರರು ತುಂಬಾ ಭರವಸೆ ಇಟ್ಟುಕೊಂಡಿದ್ದ ಆಮ್‌ ಆದ್ಮಿ ಪಾರ್ಟಿ ದೆಹಲಿಯಲ್ಲಿ ಭರ್ಜರಿಯಾಗಿ ಅಧಿಕಾರ ಹಿಡಿದ ನಂತರ ಏನಾಯಿತು? ಅವರು ಅದನ್ನು ನಿರೀಕ್ಷಿಸಿದ್ದರೇ? ಯಾಕೆ ಹೀಗೆ ಆಗುತ್ತದೆ? ಅಧಿಕಾರ ಎನ್ನುವುದು ಭ್ರಷ್ಟಗೊಳಿಸುವ ಒಂದು ದಾರಿ ಮಾತ್ರವೇ ಅಥವಾ ಅದರಿಂದ ಬೇರೆ ಏನಾದರೂ ಸಾಧಿಸುವುದು ಸಾಧ್ಯವೇ?

ಆಮ್‌ ಆದ್ಮಿ ಪಾರ್ಟಿ, ಸ್ಥಾಪಿತ ರಾಜಕಾರಣಕ್ಕೆ ಸಂಪೂರ್ಣವಾಗಿ ಭಿನ್ನವಾಗಿತ್ತು. ಜನರ ಚಳವಳಿಯ ನಡುವಿನಿಂದ ಅರವಿಂದ ಕೇಜ್ರಿವಾಲ್‌ ಹುಟ್ಟಿಕೊಂಡು ಬಂದಿದ್ದರು. ಚಳವಳಿಯ ನೇತಾರರು ಅವರೇ ಆಗಿರಲಿಲ್ಲ. ಅಣ್ಣಾ ಹಜಾರೆ ನೇತಾರರಾಗಿದ್ದರು. ಅಣ್ಣಾ ಹಜಾರೆ ಅವರ ಚಳವಳಿಯ ಲಾಭವನ್ನು ಬರೀ ಕೇಜ್ರಿವಾಲ್‌ ಮಾತ್ರ ಪಡೆಯಲಿಲ್ಲ.

ಅದಕ್ಕೂ ಮೊದಲೇ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೂ ಅದರ ಲಾಭ ಸಿಕ್ಕಿತ್ತು. ಆದರೆ, ಹಜಾರೆ ಅವರಿಗೆ ಕೇಂದ್ರದಲ್ಲಿ ಕಾಂಗ್ರೆಸ್ಸನ್ನು ಬದಲಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂಬ ಉದ್ದೇಶ ಇತ್ತೇ? ಹಾಗೆ ಇರಲಾರದು. ಆದರೆ, ಅವರ ಚಳವಳಿಯ ಲಾಭ ಬೇರೆಯವರಿಗೆ ಸಿಕ್ಕಿತು.

ಇದು ಪರಿಸ್ಥಿತಿಯ ಹುನ್ನಾರ ಇರಬಹುದೇ? ಒಂದು ವೇಳೆ ಅಣ್ಣಾ ಹಜಾರೆ ಮಹಾರಾಷ್ಟ್ರದ ಯಾವುದಾದರೂ ಕ್ಷೇತ್ರದಲ್ಲಿ ಚುನಾವಣೆಗೆ  ನಿಂತಿದ್ದರೆ ಗೆಲ್ಲುತ್ತಿದ್ದರೇ? ನನಗೆ ಅನುಮಾನ! ಆಮ್‌ ಆದ್ಮಿ ಪಾರ್ಟಿಯ ಕಥೆಯನ್ನು ಬಿಟ್ಟು ಬಿಡೋಣ.

ಕರ್ನಾಟಕದಲ್ಲಿ ಅದೇ ಆಗ ಗುಂಡೂರಾಯರ ಕಾಂಗ್ರೆಸ್‌ ಸರ್ಕಾರ ಅಧಿಕಾರ ಕಳೆದುಕೊಂಡು ರಾಮಕೃಷ್ಣ ಹೆಗಡೆಯವರ ಜನತಾ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ರೈತರು ಮತ್ತೆ ಸಾವಿರ ಸಾವಿರ ಸಂಖ್ಯೆಯಲ್ಲಿ ಬೆಂಗಳೂರಿಗೆ ಬಂದಿದ್ದರು. ಈ ಸಾರಿ ಅವರು ವಿಧಾನಸೌಧದ ಮೂರನೇ ಮಹಡಿಗೇ ನುಗ್ಗಿದ್ದರು. ಅಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಧರಣಿ ಕುಳಿತಿದ್ದರು. ಅವರ ನೇತೃತ್ವವನ್ನು ಎಂ.ಡಿ.ನಂಜುಂಡಸ್ವಾಮಿ ವಹಿಸಿದ್ದರು.

ಧರಣಿ ಕುಳಿತ ರೈತರ ಜೊತೆಗೆ ಸಂಧಾನಕ್ಕೆ  ಹಿರಿಯ ಸಚಿವ ಆರ್‌.ಎಲ್‌.ಜಾಲಪ್ಪ ಅವರ ನೇತೃತ್ವದಲ್ಲಿ ಕೆಲವರು ಸಚಿವರು ಸಮ್ಮೇಳನ ಸಭಾಂಗಣಕ್ಕೆ ಬಂದರು. ಆಗಲೇ ಸಂಜೆ ಕಳೆದು ರಾತ್ರಿ ಎಂಟು ಗಂಟೆ ಸಮಯ. ಮಾತುಕತೆ ಶುರುವಾಯಿತು. ಜಾಲಪ್ಪನವರನ್ನು ಕುರಿತು ನಂಜುಂಡಸ್ವಾಮಿ ಕೇಳಿದರು. ‘ಜಾಲಪ್ಪನವರೇ ಬಿಯರ್‌ ಬಾಟಲಿ ಬೆಲೆ ಯಾರು ನಿಗದಿ ಮಾಡುತ್ತಾರೆ?’ ಜಾಲಪ್ಪನವರು, ‘ತಯಾರಕರು’ ಎಂದರು.

‘ಮತ್ತೆ ರೈತರ ಬೆಳೆಗೆ ಯಾರು ಬೆಲೆ ನಿಗದಿ ಮಾಡುತ್ತಾರೆ’ ಎಂದು ನಂಜುಂಡಸ್ವಾಮಿ ಮರುಪ್ರಶ್ನೆ ಹಾಕಿದರು. ಜಾಲಪ್ಪ ಉತ್ತರ ಕೊಡಲಿಲ್ಲ. ನಂಜುಂಡಸ್ವಾಮಿ ಎಷ್ಟು ಜನಪ್ರಿಯ ನಾಯಕರಾಗಿದ್ದರು ಎಂದರೆ ಸರ್ಕಾರ ನಡುಗಿ ಹೋಗುತ್ತಿತ್ತು. ಅವರ ಒಂದು ಕರೆಗೆ, ರೈತರು ಎಲ್ಲಿ ಇದ್ದರೂ ಹೆಗಲಿಗೆ  ಹಸಿರು ಶಾಲು ಹಾಕಿಕೊಂಡು ಹೊರಟು ಬರುತ್ತಿದ್ದರು.

ಯಾವ ಗ್ರಾಮಕ್ಕೂ ಅಧಿಕಾರಿಗಳು ರೈತರ ಅನುಮತಿ ಕೇಳದೆ ಒಳಗೆ ಬರುವಂತೆ ಇರಲಿಲ್ಲ. ಎಲ್ಲ ಗ್ರಾಮಗಳ ಪ್ರವೇಶದಲ್ಲಿಯೇ, ‘ಅನುಮತಿ ಇಲ್ಲದೇ ಒಳಗೆ ಬರುವಂತಿಲ್ಲ’ಎಂದು ಅಧಿಕಾರಿಗಳಿಗೆ ತಾಕೀತು ಮಾಡುವ ಫಲಕಗಳು ಇದ್ದುವು.

1989ರ ವಿಧಾನಸಭೆ ಚುನಾವಣೆ ಬಂತು. ರಾಜ್ಯ ವಿಧಾನಸಭೆಯ 224 ಸೀಟುಗಳ ಪೈಕಿ 111 ಸೀಟುಗಳಿಗೆ ರೈತ ಸಂಘದ ಅಭ್ಯರ್ಥಿಗಳು ಸ್ಪರ್ಧಿಸಿದರು. ಎರಡು ಕ್ಷೇತ್ರಗಳಲ್ಲಿ ಮಾತ್ರ ಸಂಘದ ಅಭ್ಯರ್ಥಿಗಳು ಗೆದ್ದರು. ಆದರೆ, ಎರಡೂ ಕ್ಷೇತ್ರಗಳಲ್ಲಿ ಗೆದ್ದವರು ಒಬ್ಬರೇ ಆಗಿದ್ದರು. ಅವರು ಬಾಬಾಗೌಡ ಪಾಟೀಲರು. ಅವರು ಧಾರವಾಡ ಗ್ರಾಮೀಣ ಮತ್ತು ಕಿತ್ತೂರು ವಿಧಾನಸಭಾ ಕ್ಷೇತ್ರಗಳಿಂದ ಗೆದ್ದು ಬಂದಿದ್ದರು.

ಬಾಬಾಗೌಡರು ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟು ನಂಜುಂಡಸ್ವಾಮಿಯವರನ್ನು ಗೆಲ್ಲಿಸಿಕೊಂಡು ಬಂದರು. ರೈತ ಸಂಘ ಆಗ ಗಳಿಸಿದ ಮತಪ್ರಮಾಣ ಕೇವಲ ಶೇಕಡ 3.6 ಮಾತ್ರ ಆಗಿತ್ತು. ಸಂಘದಿಂದ ಸ್ಪರ್ಧಿಸಿದ್ದ ಬಹುತೇಕ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು.

1994ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕೆ.ಎಸ್‌.ಪುಟ್ಟಣ್ಣಯ್ಯ ಒಬ್ಬರೇ ಗೆದ್ದರು. ಆಗ ಸಂಘ ಗಳಿಸಿದ ಮತಪ್ರಮಾಣ ಇನ್ನೂ ಕುಸಿಯಿತು. ಅದು ಗಳಿಸಿದ್ದು ಶೇ 2.73 ಮತ ಮಾತ್ರ. ಹಾಗಾದರೆ ರೈತರಿಗೆ ಸಕ್ರಿಯ ರಾಜಕಾರಣ ಬೇಕಿರಲಿಲ್ಲವೇ? ಅವರಿಗೆ ಕೇವಲ ಸೈದ್ಧಾಂತಿಕ ರಾಜಕಾರಣ ಬೇಕಿತ್ತೇ? ಜನರು ಚಳವಳಿಗಾರರಿಂದ ಏನನ್ನು ಬಯಸುತ್ತಾರೆ?

1990ರ ದಶಕದ ಮಧ್ಯಭಾಗದಲ್ಲಿ ಮೇಧಾ ಪಾಟ್ಕರ್‌, ಅರುಣಾ ರಾಯ್‌, ಯೋಗೇಂದ್ರ ಯಾದವ್‌ ಮತ್ತು ಕಿಷನ್‌ ಪಟ್ನಾಯಕ್‌ ಅವರೆಲ್ಲ ಸೇರಿಕೊಂಡು ಮಧ್ಯಪ್ರದೇಶದಲ್ಲಿ ‘ಸಮಾಜವಾದಿ ಜನ ಪರಿಷತ್‌’ ಎಂಬ ಸಂಘಟನೆ ಕಟ್ಟಿಕೊಂಡರು. ‘ವಿಕೇಂದ್ರೀಕೃತ, ಸಮಾನ ಅಧಿಕಾರದ ಪರ್ಯಾಯ ರಾಜಕಾರಣಕ್ಕಾಗಿ ನಾವು ಹೋರಾಟ ಮಾಡದೇ ಇದ್ದರೆ ಜನರು ಸಶಕ್ತರಾಗುವುದಿಲ್ಲ’ ಎಂದು ಇವರೆಲ್ಲ ಹೇಳಿದ್ದರು.

ನರ್ಮದಾ ಬಚಾವೊ ಆಂದೋಲನಕ್ಕೆ ಸಿಕ್ಕ ಅದ್ಭುತ ಬೆಂಬಲದಿಂದ ಇವರೆಲ್ಲ ಪ್ರೇರೇಪಿತರಾಗಿದ್ದರು. 2004ರಲ್ಲಿ ಮಧ್ಯಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಸಮಾಜವಾದಿ ಜನ ಪರಿಷತ್ತಿನ ವತಿಯಿಂದ ನಾಲ್ವರು ಅಭ್ಯರ್ಥಿಗಳು ಕಣಕ್ಕೆ ಇಳಿದರು.

ಅವರೆಲ್ಲ ಗಳಿಸಿದ್ದು ಕನಿಷ್ಠ 789 ಮತ್ತು ಗರಿಷ್ಠ 9,000 ಮತ! ಯಾರೂ ಗೆಲ್ಲಲಿಲ್ಲ ಎಂದು ಬಿಡಿಸಿ ಹೇಳಬೇಕಿಲ್ಲ ಹಾಗೂ ಯಾರಿಗೂ ಠೇವಣಿ ಮರಳಿ ಬರಲಿಲ್ಲ. ದುರಂತ ಏನು ಎಂದರೆ  ನರ್ಮದಾ ಯೋಜನೆಯಡಿ ಮುಳುಗಡೆಯಾದ ಮಂದಿಯೇ ಇವರಿಗೆ ಮತ ಹಾಕಲಿಲ್ಲ! ಹಾಗಾದರೆ ಮೇಧಾ ಮತ್ತು ಅವರ ಗೆಳೆಯರು ಸಕ್ರಿಯ ರಾಜಕಾರಣ ಮಾಡಬಾರದು ಎಂದು ಸಂತ್ರಸ್ತರು ಬಯಸಿದರೇ ಅಥವಾ ಪಕ್ಷ ರಾಜಕಾರಣದ ಲೆಕ್ಕಾಚಾರಗಳು ಹೋರಾಟಗಾರರಿಗೆ ತಿಳಿಯುವುದೇ ಇಲ್ಲವೇ?

ಒಂದು ಸಾರಿ ಪಕ್ಷ ರಾಜಕಾರಣಕ್ಕೆ ಬಂದ ಹೋರಾಟಗಾರರು ನಿಧಾನವಾಗಿ ತಮ್ಮ ಖದರನ್ನು ಕಳೆದು ಕೊಳ್ಳುತ್ತ ಹೋಗುತ್ತಾರೆ. ಈಗ ಕರ್ನಾಟಕದಲ್ಲಿ ರೈತ ಸಂಘಟನೆ ಛಿನ್ನಛಿದ್ರವಾಗಿ ಹೋಗಿದೆ. ವಿಧಾನಸೌಧಕ್ಕೆ ಬಿಡಿ, ಕಬ್ಬನ್‌  ಉದ್ಯಾನದವರೆಗೂ ಅವರನ್ನು ಬಿಟ್ಟುಕೊಳ್ಳುವುದಿಲ್ಲ.

ಆಗ ಎಲ್ಲ ಹಳ್ಳಿಗಳ ಪ್ರವೇಶದಲ್ಲಿಯೇ ಇದ್ದ ತಾಕೀತು ಫಲಕಗಳು ಈಗ ಎಲ್ಲಿಯೂ ಕಾಣುವುದಿಲ್ಲ. ಪ್ರತಿ ಹಳ್ಳಿಯಲ್ಲಿ ಹೆಚ್ಚೂ ಕಡಿಮೆ ಎಲ್ಲ ರೈತರ ಹೆಗಲ ಮೇಲೆ ಇರುತ್ತಿದ್ದ ಹಸಿರು ಶಾಲುಗಳು ಈಗ ಎಲ್ಲಿಯೋ ಅಲ್ಲಿ ಒಂದು ಇಲ್ಲಿ ಒಂದು ಎನ್ನುವಂತೆ ಕಾಣುತ್ತವೆ. ಹಾಗಾದರೆ ರೈತ ಚಳವಳಿಗಾರರು ರಾಜಕೀಯ ಪ್ರವೇಶಿಸಿದ್ದೇ ತಪ್ಪಾಯಿತೇ? ಸ್ಥಾಪಿತ ರಾಜಕೀಯ ಪಕ್ಷಗಳು ಇಂಥ ಸ್ವತಂತ್ರ ಚಳವಳಿಗಳನ್ನು ಸಹಿಸಿಕೊಳ್ಳುವುದಿಲ್ಲ.

ರೈತ ಚಳವಳಿ, ಕನ್ನಡ ಚಳವಳಿ, ದಲಿತ ಚಳವಳಿಗಳು ಕಳೆದ  ಮೂರು ದಶಕಗಳ ಅವಧಿಯಲ್ಲಿ ನಮ್ಮ ಕಣ್ಣ ಮುಂದೆಯೇ ಒಡೆದು ಒಡೆದು ತುಂಡು ತುಂಡಾಗಿ ಹೋದುವು. ಈಗ ಅವು ತಮಾಷೆಯ ಸಂಘಟನೆಗಳ ಹಾಗೆ ಕಾಣುತ್ತವೆ. ಎಲ್ಲ ಪಕ್ಷಗಳಲ್ಲಿಯೂ ರೈತರ, ದಲಿತರ, ಅಲ್ಪಸಂಖ್ಯಾತರ ಒಂದೊಂದು ವಿಭಾಗಗಳು ಇವೆ. ಇದು ತಮಾಷೆ ಇರಬಹುದೇ ಅಥವಾ ವ್ಯಂಗ್ಯ ಇರಬಹುದೇ?

ಮತ್ತೆ ಅದೇ 80ರ ದಶಕದ ಕೊನೆಯ ವರ್ಷದ ಮಾತು. ‘ಲಂಕೇಶ್ ಪತ್ರಿಕೆ’ ಜನಪ್ರಿಯವಾಗಿತ್ತು. ಪತ್ರಿಕೆ, ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆದಿತ್ತು. 1989ರ ಚುನಾವಣೆಯಲ್ಲಿ ಪ್ರಗತಿ ರಂಗ ಎಂದು ಸಂಘಟನೆ ಕಟ್ಟಿಕೊಂಡು ಚುನಾವಣೆಗೆ ಇಳಿಯಬೇಕು ಎಂದು ಲಂಕೇಶರಿಗೆ ಹುಕಿ ಬಂದಿತ್ತು.

ಚುನಾವಣೆ ಘೋಷಣೆಯಾದ ನಂತರ ಏನಾಯಿತೋ ಏನೋ ತಿಳಿಯದು. ಪ್ರಗತಿ ರಂಗ ಚುನಾವಣೆ ಕಣಕ್ಕೆ ಇಳಿಯುವುದಿಲ್ಲ ಎಂಬ ಪ್ರಕಟಣೆ ಹೊರಬಿತ್ತು. ಚುನಾವಣೆ ಕಣಕ್ಕೆ  ಇಳಿದಿದ್ದರೆ ಸ್ವತಃ ಲಂಕೇಶರು ಸ್ಪರ್ಧಿಸುತ್ತಿದ್ದರೇ, ಸ್ಪರ್ಧಿಸಿದ್ದರೆ ಅವರು ಗೆಲ್ಲುತ್ತಿದ್ದರೇ? ಅವರು ಗೆಲ್ಲುತ್ತಿರಲಿಲ್ಲ ಎಂದು ದಾರಿಯಲ್ಲಿ ಹೋಗುವ ದಾಸಯ್ಯನೂ ಹೇಳಬಹುದಿತ್ತು.

ಭಾರತದ ಪ್ರಜಾಪ್ರಭುತ್ವ ಅತ್ಯಂತ ಸಂಕೀರ್ಣವಾದುದು. ನಮ್ಮ ಚುನಾವಣೆಗಳಲ್ಲಿ ಕಡಿಮೆ ಸಾಕ್ಷರ ಜನರೇ ಹೆಚ್ಚು ಮತ ಹಾಕುತ್ತಾರೆ. ಹಾಗೆಂದು ಅವರಿಗೆ ಭಾರತದ ರಾಜಕೀಯ ಅರ್ಥವಾಗುವುದಿಲ್ಲವೇ? ಹಾಗೆ ಅನಿಸುವುದಿಲ್ಲ. ಇಡೀ ಜಗತ್ತು ಬೆರಳು ಕಚ್ಚುವ ಹಾಗೆ ಅವರು  ಮತ ಹಾಕುತ್ತಾರೆ.

ಆದರೆ, ಅವರ  ಮುಂದೆ ‘ಕಡಿಮೆ ಕೆಟ್ಟ’ ಆಯ್ಕೆ ಮಾತ್ರ  ಇದೆಯೇ? ಒಂದು ಸಾರಿ ಇವರು ಕಡಿಮೆ ಕೆಟ್ಟವರು ಎಂದು ಅನಿಸಿದರೆ ಇನ್ನೊಂದು ಸಾರಿ ಅವರು ಕಡಿಮೆ ಕೆಟ್ಟವರು ಎಂದು ಅನಿಸುತ್ತಾರೆ. ಒಂದೋ ಇವರು ಅಧಿಕಾರಕ್ಕೆ ಬರುತ್ತಾರೆ. ಇಲ್ಲವೋ ಅವರು ಅಧಿಕಾರಕ್ಕೆ ಬರುತ್ತಾರೆ.

ಇದರ ಆಚೆಗೆ ಯೋಚಿಸಲು ಮತದಾರರು ಏಕೆ ನಿರಾಕರಿಸುತ್ತಿದ್ದಾರೆ? ಯೋಚಿಸಿದರೂ ಏಕೆ ಬಹುಬೇಗ ಭ್ರಮ ನಿರಸನ ಆಗುತ್ತಿದೆ? ಮತ್ತೆ ಸ್ಥಾಪಿತ ರಾಜಕಾರಣದ ತೆಕ್ಕೆಗೇ ಜನರು ಏಕೆ ಹೋಗುತ್ತಾರೆ? ಹಾಗಾದರೆ, ಮೂರನೇ ಪರ್ಯಾಯ ಎಂಬುದು ಕೇವಲ ಭೋಳೆ ಮಂದಿಯ ಕನಸೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT