ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರ್ತಿ ಮತ್ತು ಅಮೂರ್ತತೆಗಳ ನಡುವೆ

Last Updated 28 ಜೂನ್ 2014, 6:46 IST
ಅಕ್ಷರ ಗಾತ್ರ

ಎರಡು ಸಾವಿರ ವರ್ಷಗಳ ಭಾರತೀಯ ಪರಂಪರೆ­ಗಳಲ್ಲಿ ಎಲ್ಲ ಬಗೆಯ ವಿಶ್ವಾಸ­ಗ­ಳಿಗೂ ಜಾಗ ಕೊಡಲಾಗಿದೆ. ನಮ್ಮ ಧಾರ್ಮಿಕ ಪರಂ­ಪರೆ ಏಕಮುಖವಲ್ಲವೆನ್ನುವುದೇ ಅದರ ಪ್ರಧಾನ ವೈಶಿಷ್ಟ್ಯ. ಪುಷ್ಪದಂತಾ­ಚಾ­ರ್ಯನ ‘ಶಿವ­ಮಹಿಮ್ನಾ ಸ್ತೋತ್ರ’ದಲ್ಲಿ  ‘ಋಜು ಕುಟಿಲ ನಾನಾ ಪಥಜುಷಾಂ ನೃಣಾನೇಕೋ ಗಮ್ಯ­ಸ್ತ್ವ­ಮಸಿ ನದೀನಾಂ ಸಾಗರಂ ಇವ’ ಎನ್ನ­ಲಾಗಿದೆ.

ಹೇಗೆ ನೇರವಾದ, ಕುಟಿಲವಾದ ದಾರಿ­ಗಳನ್ನು ಕ್ರಮಿಸಿ ನದಿಗಳು ಸಾಗರವನ್ನೇ ಕೊನೆಗೆ ಸೇರು­ತ್ತವೋ ಹಾಗೆಯೇ ಉಪಾಸನೆಯ ಎಲ್ಲ ಮಾರ್ಗ­ಗ­ಳೂ ಒಂದೇ ಗುರಿಯನ್ನು ತಲುಪುತ್ತವೆ ಎಂಬುದು ಆ ಮಾತಿನ ಅರ್ಥ. ಸ್ವಾಮಿ ವಿವೇಕಾ­ನಂ­ದರು ತಮ್ಮ ಇತಿಹಾಸಪ್ರಸಿದ್ಧ ಷಿಕಾಗೊ ಭಾಷಣ­­ದಲ್ಲಿ ಭಾರತೀಯ ಪರಂ­ಪರೆಯ ವೈಶಿಷ್ಟ್ಯ­ವನ್ನು ವಿವರಿಸಲು ಉಲ್ಲೇಖಿಸಿದ್ದು ಈ ವಾಕ್ಯವನ್ನೇ.

ಯಹೂದಿ ಮೂಲದ ಧರ್ಮಗಳ ದೃಷ್ಟಿಗೂ ಭಾರ­ತೀಯ ಧರ್ಮಗಳ ಮೂಲದೃಷ್ಟಿಗೂ ಇರುವ ಒಂದು ಮೂಲಭೂತ ವ್ಯತ್ಯಾಸವನ್ನು ಮರೆ­ಯುವ ಹಾಗಿಲ್ಲ. ಯಹೂದಿ ಮೂಲದ ಧಾರ್ಮಿಕ ಕಲ್ಪನೆಯ ಪ್ರಕಾರ ದೇವರಿಗೊಂದು ಮಾನವರೂಪಿ ಆಕಾರ ನೀಡುವುದು ಪಾಪ.

ಆದ್ದರಿಂದ ಮೂರ್ತಿಗಳನ್ನು ಮುರಿಯುವುದು, ದೇಗುಲಗಳನ್ನು ಕೆಡಹುವುದು ಅವರಿಗೆ ಧಾರ್ಮಿಕ ಕರ್ತವ್ಯ. ಈ ಮತಾಂಧ ದೃಷ್ಟಿಯಿಂದ ಏಷ್ಯಾದಲ್ಲಿ, ದಕ್ಷಿಣ ಅಮೆರಿಕದಲ್ಲಿ, ಆಫ್ರಿಕಾ­ದಲ್ಲಿ ಅದೆಷ್ಟೋ ದೇವತಾಮೂರ್ತಿಗಳು ನೆಲ ಕಚ್ಚಿದವು. ಆದರೆ ಸ್ವತಃ ಮೂರ್ತಿಭಂಜಕರೂ ಸಂಕೇತಗಳಿಂದ ಬಿಡುಗಡೆ ಹೊಂದಲಿಲ್ಲ. ಅಮೂರ್ತ ಸಂಕೇತಗಳ ಅರಾಧನೆಗೆ ಅವರು ಮುಂದಾ­ದುದರಿಂದ ಈ ಅಮೂರ್ತ ಸಂಕೇತ­ಗಳೇ ಮೂರ್ತಿಯ ಸ್ಥಾನವನ್ನು ಆಕ್ರಮಿಸಿ­ದವು. ಕ್ರೈಸ್ತ ಧರ್ಮದಲ್ಲಿ ಮೂರ್ತಿ ಆರಾಧನೆ ಹಿಂಬಾ­ಗಿ­ಲಿನಿಂದ ಹಿಂತಿರುಗಿತು. ಯೂರೋ­ಪಿನ ಮಾತೃ­ದೇವತೆಗಳು ರೋಮನ್ ಕ್ಯಾಥೊಲಿಸಿಸಂನ ವರ್ಜಿನ್ ಮರಿಯಾಳ ಮೂರ್ತಿ­ಗಳ ರೂಪದಲ್ಲಿ ಆರಾಧಿತವಾಗ­ತೊಡ­ಗಿದವು.

ಶಿಲುಬೆಯೇರಿದ ಯೇಸುವಿನ ಪ್ರತಿಮೆಗಳು ಕ್ರೈಸ್ತರಿಗೆ ಪವಿತ್ರ ಮೂರ್ತಿ­ಗ­ಳಾದವು. ಮುಂದೆ ಇಂಗ್ಲೆಂಡಿನಲ್ಲಿ ಪ್ಯೂರಿಟನ್ನರು ಮೇಲುಗೈ ಪಡೆದಾಗ ಅವರು ರೋಮನ್ ಕ್ಯಾಥೊಲಿಕರನ್ನು ಮೂರ್ತಿಪೂಜಕ­ರೆಂದು ನಿಂದಿಸಿದರು. ಆದರೆ ಅವರೂ ಶಿಲುಬೆ­ಯನ್ನು ಪವಿತ್ರವೆಂದು ಒಪ್ಪಿಕೊಳ್ಳುವುದರಿಂದ ಅವರೂ ಸಾಂಕೇತಿಕತೆಯನ್ನು ಬಿಡಲಾಗಲಿಲ್ಲ. ಅವಸ್ಥಾತ್ರಯಗಳನ್ನು ದಾಟುವ ತನಕ ನಾಮ-ರೂಪಗಳ ವಾಸನೆ ನಮ್ಮನ್ನು ಬಿಡುವುದಿಲ್ಲ.

ಭಾರತದ ನಿರೀಶ್ವರವಾದಿ ಧರ್ಮಗಳಾದ ಬೌದ್ಧ ಮತ್ತು ಜೈನ ಧರ್ಮಗಳಲ್ಲೂ ಮೂರ್ತಿ­ಪೂಜೆ­ಯಿದೆ. ಎಲ್ಲ ಬೌದ್ಧರಿಗೂ ಬುದ್ಧಮೂರ್ತಿ­ಗಳು ಪವಿತ್ರ ಮತ್ತು ಪೂಜನೀಯ. ಥೇರವಾದಿ ಬೌದ್ಧಧರ್ಮ ಪ್ರಧಾನವಾದ ಶ್ರೀಲಂಕಾ, ಮ್ಯಾನ್ಮಾರ್ ಮುಂತಾದ ಕಡೆ ಬೌದ್ಧ ವಿಹಾರ­ಗಳಲ್ಲಿ ಸುಂದರ ಬುದ್ಧ ಮೂರ್ತಿಗಳು ಕಂಗೊಳಿ­ಸು­ತ್ತವೆ. ಅವು ಬೌದ್ಧಧರ್ಮೀಯರ ಶ್ರದ್ಧೆಯ ಕೇಂದ್ರ­ಗಳಾಗಿವೆ. ಮಹಾಯಾನ ಬೌದ್ಧಧರ್ಮ ಪ್ರಧಾನ­ವಾದ ಚೀನಾ, ಜಪಾನ್ ಮುಂತಾದ ದೇಶಗಳಲ್ಲಿ ಮೂರ್ತಿಪೂಜೆಯ ಮಹತ್ವ ಇನ್ನೂ ಹೆಚ್ಚಿನದು.

ಬುದ್ಧನೆಂದರೆ ಅದು ಮಾನ­ವಾಂತ­ರಂಗದ ಒಂದು ಜಾಗೃತ ಹಂತವೆಂದು ಹೇಳುವ ಜೆನ್ ಪಂಥದ ಬೌದ್ಧ ಮಂದಿರಗಳಲ್ಲೂ  ಬುದ್ಧತ್ವದ ಹಲವು ಆಯಾಮಗಳನ್ನು ಸಂಕೇತಿ­ಸುವ ಸ್ತ್ರೀ-ಪುರುಷ ದೇವತಾಮೂರ್ತಿಗಳು ಬುದ್ಧಮೂರ್ತಿಗಳೊಂದಿಗೆ ಪೂಜಿತವಾಗುತ್ತವೆ. ನಾರಾ­ದಲ್ಲಿರುವ ಜಗತ್ ಪ್ರಸಿದ್ಧ ಬೌದ್ಧ ವಿಹಾರ­ದಲ್ಲಿ ಬುದ್ಧನ ಬೃಹತ್ ಮರದ ಪ್ರತಿಮೆ ಆರಾಧನೆಯ ವಸ್ತುವಾದರೆ, ಕ್ಯೋತೋ ನಗರದ ಪವಿತ್ರಚಿಲುಮೆಯ ದೇವಸ್ಥಾನದಲ್ಲಿ ಬುದ್ಧನ ಕರುಣೆಯ ಸ್ತ್ರೀರೂಪವಾದ ಕ್ವೆಂಗಾನ್ ದೇವ­ತೆಯ ಪೂಜೆ ನಡೆಯುತ್ತಾ ಬಂದಿದೆ. ಜೈನ­ಮಂದಿ­ರ­­ಗಳಲ್ಲಿ ಆ ಪರಂಪರೆಯ ಅಗ್ಗಳ­(ಶ್ರೇಷ್ಠ)ರಾದ ತೀರ್ಥಂಕರರ ಮನೋಹರ ಮೂರ್ತಿಗಳು ಜೈನರ ಧಾರ್ಮಿಕ ಶ್ರದ್ಧೆಯ ಆಗರಗಳಾಗಿವೆ.

ಕ್ರೈಸ್ತಧರ್ಮಪೂರ್ವ ಯೂರೋಪು ಮತ್ತು ದಕ್ಷಿಣ ಅಮೆರಿಕಗಳಲ್ಲಿ, ಆಫ್ರಿಕಾದಲ್ಲಿ ಇಸ್ಲಾಂ­ಪೂರ್ವ ಅರೇಬಿಯಾ ಅಥವಾ ಮಧ್ಯ ಏಷ್ಯಾದ ಎಡೆಗಳಲ್ಲಿ ಮೂರ್ತಿಪೂಜೆಯಿಲ್ಲದ ಧಾರ್ಮಿಕ ಸಂಸ್ಕೃತಿಗಳು ಇರಲಿಲ್ಲ. ರೋಮ್, ವೆನಿಸ್, ಫ್ಲಾರೆನ್ಸ್ ನಗರಗಳ ಇಂದಿನ ಬಹುತೇಕ ಚರ್ಚು­ಗಳು ಪೇಗನ್ ಧರ್ಮಗಳ ಮೂರ್ತಿಪೂಜಕ ಮಂದಿರ­ಗಳನ್ನು ಕೆಡವಿ ಕಟ್ಟಿದಂಥವು. ರೋಮ್‌ನಲ್ಲಿ ಕ್ರೈಸ್ತಧರ್ಮ ಹಬ್ಬತೊಡಗಿದಾಗ ಹೊಸ­ತಾಗಿ ಕ್ರೈಸ್ತಧರ್ಮ ಸ್ವೀಕರಿಸಿದ ಮತಾಂಧರು ಪೂರ್ವಿಕರ ಪೂಜಾಸ್ಥಾನಗಳನ್ನು ಬರ್ಬರ ರೀತಿಯಲ್ಲಿ ಕೆಡವತೊಡಗಿದರು.

ಆಗ ರೋಮ್‌ನ ಸೆನೆಟರನಾಗಿದ್ದ ಸಿಮ್ಮೇಕಸ್ ಎಂಬಾತ ಕ್ರೈಸ್ತ ನಾಯಕರಿಗೊಂದು ಬರೆದ ಪತ್ರದಲ್ಲಿ ಹೀಗೆ ಹೇಳಿದ: ‘ಅಂಥ ಮಹಾನ್ ನಿಗೂಢ ತತ್ವದ ಗುರಿ ತಲುಪಲಿಕ್ಕೆ ಒಂದೇ ಒಂದು ದಾರಿಯಿರಲು ಸಾಧ್ಯವಿಲ್ಲ’.  ‘ಏಕಂ ಸತ್ ವಿಪ್ರಾನಾಂ ಬಹುಧಾ ವದಂತಿ’ (ಸತ್ಯ ಒಂದೇ, ಜ್ಞಾನಿಗಳು ಅದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ). - ಈ ವೇದೋಕ್ತ ವಾಕ್ಯವನ್ನು ಹೋಲುವ ಆತನ ಮಾತುಗಳು ಮತಾಂಧ ಕಿವಿಗಳಿಗೆ ಕೇಳಿಸಲೇ ಇಲ್ಲ. ಆಕ್ರಮಣಕಾರಿ  ಹಿಂಸೆಯ ಒಂದು ಅಂಗ­ವಾಗಿ ಮೂರ್ತಿಭಂಜನೆ ಎಲ್ಲ ಕಡೆ ನಡೆ­ದವು.  ಆದರೆ ಬೌದ್ಧಧರ್ಮವು ಸ್ಥಾಪಿತ­ವಾದ ದೇಶ­ಗಳಲ್ಲಿ ಈ ರೀತಿ ಮೂರ್ತಿಭಂಜನೆ ನಡೆಯ­ಲಿಲ್ಲ.

ಚೀನಾದ ರಾಜರು ಬೌದ್ಧಧರ್ಮವನ್ನು ಸ್ವೀಕರಿಸಿ­ದಾಗ ಅಲ್ಲಿನ ತಾವೋ ಮತ್ತು ಕುಂಗ್-ಫು-ತ್ಸೆ ಧರ್ಮ­ಗಳ ಮಂದಿರಗಳನ್ನೇನೂ ಕೆಡವಲಿಲ್ಲ. ಇದೇ ರೀತಿ ಜಪಾನಿನಲ್ಲಿ ಬೌದ್ಧಪೂರ್ವದ ಷಿಂಟೋ ಮಂದಿರಗಳ ಧ್ವಂಸ ನಡೆಯಲಿಲ್ಲ. ಟಿಬೆಟ್‌ನಲ್ಲಿ ವಜ್ರಯಾನ ಬೌದ್ಧಪಂಥೀಯರು ಆ ಪ್ರದೇಶದ ಬೌದ್ಧಪೂರ್ವ ಬಾನ್ ಧರ್ಮ­ವನ್ನು ದ್ವೇಷಿಸಲಿಲ್ಲ.

ಶ್ರೀಲಂಕಾದ ಜನಪದ ಧರ್ಮಗಳನ್ನು ಬೌದ್ಧರು ಶಾಂತಿಯುತವಾಗಿ ತಮ್ಮ ಹೊಸಧರ್ಮದ ಚೌಕಟ್ಟಿನಲ್ಲಿ ಅಳವಡಿಸಿ­ಕೊಂ­ಡರು. ಇಂಥ ಸೈರಣೆ ಮತ್ತು ಹೊಂದಾ­ಣಿಕೆಯ ಮನೋಧರ್ಮ ಭಾರತದ ಜೈನರಲ್ಲೂ ಕಂಡುಬರುತ್ತದೆ. ಸನಾತನ ಧರ್ಮಗಳ ಈ ಹೊಂದಾ­ಣಿಕೆಯ ಮಾದರಿ ಯಹೂದಿ-ಕ್ರೈಸ್ತ ಪರಂ­ಪರೆಯ ಧ್ವಂಸ ಮತ್ತು ದಮನದ ಮಾರ್ಗಕ್ಕಿಂತ ಭಿನ್ನ.

ಭಾರತದಲ್ಲಿ ಮೂರ್ತಿಪೂಜೆ ಪ್ರಾಚೀನ. ಅದಕ್ಕೆ ಮೊದಲು ಮತ್ತು ಅದಕ್ಕೆ ಸಮಾನಾಂ­ತರ­ವಾಗಿ ನಿಸರ್ಗದ ಅಂಗಗಳಾದ ಮಲೆಗಳನ್ನು, ನದಿಗಳನ್ನು, ಸರೋವರಗಳನ್ನು, ಕುಲಸಂಕೇತ­ಗಳಾದ ಪ್ರಾಣಿಗಳನ್ನು ಪವಿತ್ರ ಸಂಕೇತಗಳಾಗಿ ಆರಾ­ಧಿಸುವ ಪ್ರತೀತಿಯೂ ಇದೆ.

ಇವುಗಳಲ್ಲಿ ಕೆಲವು ಪದ್ಧತಿಗಳು ಇಂದಿಗೂ ಜಾರಿಯಲ್ಲಿವೆ. ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಇಡೀ ಮಲೆ­ಯನ್ನೇ ಶಿವನೆಂದು ಭಕ್ತರು ನಂಬುತ್ತಾರೆ. ಗಂಗೆ, ಯಮುನೆ, ನರ್ಮದೆ, ಕಾವೇರಿ ಮುಂತಾದ ಪ್ರಾಚೀನ ನದಿಗಳನ್ನು  ಇಂದಿಗೂ ಶ್ರದ್ಧಾಳುಗಳು ದೇವಿಯರೆಂದು ಕಲ್ಪಿಸಿ­ಕೊಳ್ಳು­ತ್ತಾರೆ. ಶಿವ-ಶಕ್ತಿಯರ ಕುರುಹುಗಳಾದ ಲಿಂಗ-ಯೋನಿ ಪೂಜೆಗೂ ಪ್ರಾಚೀನ ಇತಿಹಾಸವಿದೆ.

ಈ ಉಪಾಸನಾ ಪದ್ಧತಿಗಳಿಗಿಂತ ಹೆಚ್ಚು ಸಂಕೀರ್ಣ­ವಾಗಿ, ಪರಿಷ್ಕೃತವಾಗಿ ವಿಕಸನಗೊಂಡ ತಂತ್ರಾ­ಗಮ ಪರಂಪರೆಯಲ್ಲಿ ಆರಾಧಿಸುವ ದೇವತೆ­ಗಳಿಗೆ ಮೂರು ರೂಪಗಳಿವೆ. ಮೊದಲನೆಯದು ಮಂತ್ರ. ಇದು ದೇವತೆಯ ಶಾಬ್ದಿಕ ರೂಪ. ಎರ­ಡನೆಯದು ಯಂತ್ರ. ಇದು ದೇವತೆಯ ಅಮೂರ್ತ­ರೂಪ. ಮೂರನೆಯದು ಮಂಡಲ. ಇದು ದೇವತೆಯ ಮಾನವರೂಪೀ ಸಂಕೇತ. ಹೀಗೆ ತಾಂತ್ರಿಕ ಪರಂಪರೆಯಲ್ಲಿ ಸಾಕಾರ ನಿರಾಕಾರ­ಗಳನ್ನು ಅಳವಡಿಸಿಕೊಳ್ಳಲಾಗಿದೆ.

ತಂತ್ರಾಗಮ ಸಂಪ್ರದಾಯಗಳಂತೆ ಭಾರ­ತೀಯ ಭಕ್ತಿಪರಂಪರೆಗಳೂ ಸಾಕಾರ-ನಿರಾಕಾರ, ಸಗುಣ-­ನಿರ್ಗುಣ ಧ್ರುವಗಳ ನಡುವೆ ತುಯ್ದಾ­ಡುತ್ತಾ ಬಂದಿವೆ. ಉತ್ತರ ಭಾರತೀಯ ವಿದ್ವಾಂಸರು ಸಗುಣ, ನಿರ್ಗುಣ ಎಂಬ ಎರಡು ಬಗೆಗಳನ್ನು ಭಕ್ತಿಪರಂಪರೆಯಲ್ಲಿ ಗುರುತಿಸು­ತ್ತಾರಾ­ದರೂ ಭಕ್ತಿಗೆ ಮೂರ್ತತೆಯಿಂದ, ಸಂಕೇತ ವ್ಯವಸ್ಥೆಯಿಂದ ಬಿಡುಗಡೆಯಿಲ್ಲ. ಸ್ಥಾವರ ಲಿಂಗಗಳನ್ನು ಬಿಟ್ಟ ವೀರಶೈವರು ಅದರ ಬದಲಿಗೆ ಇಷ್ಟಲಿಂಗೋಪಾಸಕರಾದರು.

೧೨ನೇ ಶತಮಾನದ ಹೊತ್ತಿಗೆ ಮಂದಿರ ಪ್ರವೇಶ ಕೆಲವು ವರ್ಗ­ದವರಿಗೆ ಸೀಮಿತವಾದ ಕಾರಣಕ್ಕೆ ಹೀಗಾಗಿರಬಹುದು. ಮಂದಿರ ಪ್ರವೇಶದ ವಿಷಯದಲ್ಲಿ ಹೀಗೆ ಭಿನ್ನಭೇದ ನಡೆದಾಗ ವೀರಶೈವ ಪರಂಪರೆಗಿಂತ ಭಿನ್ನವಾದ ಪ್ರತಿಕ್ರಿಯೆ­ಗಳನ್ನು ಇತರ ಭಕ್ತಿಪಂಥಗಳು ಅನುಸರಿಸಿದವು. ಸ್ವತಃ ವೈದಿಕರಾದರೂ ಶೂದ್ರಗುರುವನ್ನು ಸ್ವೀಕರಿಸಿದ ರಾಮಾನುಜಾಚಾರ್ಯರು ಶೂದ್ರ­ರಿಗೂ ಮಂದಿರ ಪ್ರವೇಶದ ಅವಕಾಶ ಕಲ್ಪಿಸಿ­ದರು.

ಇದೇ ರೀತಿಯ ಮುಕ್ತ ಮನಸ್ಸನ್ನು ತೋರಿ­ದವರು ಬಂಗಾಳದ ಚೈತನ್ಯ ಮಹಾಪ್ರಭು. ಮಹಾರಾಷ್ಟ್ರದ ವಾರಕರಿ ಪಂಥದವರು ಮೇಲುವರ್ಣ­ದವರ ಸ್ವತ್ತಾಗಿದ್ದ ದೇವಸ್ಥಾನ­ಗಳಿಗೆ ಪ್ರತಿಯಾಗಿ ಎಲ್ಲರಿಗೂ ದಕ್ಕುವ ಪಂಢರ­ಪುರದ ವಿಠೋಬನ ದೇವಸ್ಥಾನವನ್ನು ತಮ್ಮ ಪಂಥದ ಧಾರ್ಮಿಕ ಕೇಂದ್ರವಾಗಿಸಿಕೊಂಡರು. ಉತ್ತರಭಾರತದ ವಲ್ಲಭಪಂಥೀಯರು ಇದೇ ರೀತಿ ನಾಥಪರಂಪರೆಯ ಶ್ರೀನಾಥ ಮಂದಿರವನ್ನು ತಮ್ಮ ಶ್ರದ್ಧೆಯ ಕೇಂದ್ರವಾಗಿಸಿಕೊಂಡರು.

ಹೀಗೆ ಸದಾ ಚಲನಶೀಲವಾಗಿರುವ ಭಾರ­ತೀಯ ಧಾರ್ಮಿಕ ಇತಿಹಾಸದ ಗತಿತಾರ್ಕಿ­ಕತೆಯ ಹಿನ್ನೆಲೆಯಲ್ಲಿ ಮೂರ್ತಿ­ಪೂಜೆಯ ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಭಾರತೀಯ ಪರಂಪರೆಯಲ್ಲಿ ಮರುಕಳಿಸಿದ ಮೂರ್ತಿಪೂಜೆ ಕುರಿತ  ಟೀಕೆಗಳನ್ನೂ ಇದೇ ಸಂದರ್ಭದಲ್ಲಿಟ್ಟು ನೋಡಬೇಕಾಗಿದೆ. ಅವುಗಳಿಗೂ ಮತ್ತು ಆಧು­ನಿಕ ಕಾಲದ ಪಶ್ಚಿಮಬುದ್ಧಿಯ ಪೆರಿಯಾರ್ ಮಾದರಿಯ ವಿಚಾರವಾದಿ ನಿರಾಕರಣೆಗಳಿಗೂ ಇರುವ ಗುಣಾತ್ಮಕ ವ್ಯತ್ಯಾಸವನ್ನೂ ಅರ್ಥ ಮಾಡಿಕೊಳ್ಳಬೇಕಾಗಿದೆ.

ಭಕ್ತಿಸಂತರು ತಮ್ಮ ಪಾಂಥಿಕ ಉತ್ಸಾಹ ಮತ್ತು ಆವೇಶಗಳ ಗಳಿಗೆಗಳಲ್ಲಿ ಜನಪದರ ‘ಬಣಗು ದೈವ’ಗಳನ್ನು ನಿಂದಿಸಿರುವುದು ನಿಜ. ಆದರೆ ಈ ನಿಂದನೆ ಅವರ ಬೋಧನೆಗಳ ಅತ್ಯಂತ ಮಹತ್ತರ ಅಂಶಗಳೆಂದು ನಾವೇಕೆ ತಿಳಿಯ­ಬೇಕು? ಅವರ ಕೆಲವು ಟೀಕೆಗಳಲ್ಲಿ ಇಂದಿ­ನಂತೆ ಹಿಂದೆಯೂ ಮಾನವೀಯ ಕಾರಣಗಳಿದ್ದುದೂ ನಿಜ. ನಿಜದ ನಾಗರ­ವನ್ನು ಕಂಡೊಡನೆ ಕಿರುಚಿ ಕಾಲು­ತೆಗೆ­ಯುವ ಮಂದಿ ಕಲ್ಲುನಾಗರವನ್ನು ಪೂಜಿ­ಸುವ; ಉಣ್ಣದ ಲಿಂಗಕ್ಕೆ ಬೋನವನ್ನಿಟ್ಟು ಹಸಿದ ಜಂಗಮರಿಗೆ ಅನ್ನ ನೀಡದ; ತಾನು ಪೂಜೆ ಮಾಡಿದ ಪವಿತ್ರ ವಿಗ್ರಹವನ್ನು ಅವಸರಕ್ಕೆ ಮಾರಿ­ಕೊಳ್ಳುವ ಬೂಟಾಟಿಕೆಯ ಬಗೆಗಳನ್ನು ಬಸವಣ್ಣ ಟೀಕಿ­ಸಿದ್ದು ಸರಿಯೇ.ಆದರೆ ಇಂಥಾ ಬೂಟಾ­ಟಿಕೆಗೆ ಪ್ರತಿಯಾಗಿ ಬಸವಾದಿಗಳು ಇಷ್ಟಲಿಂಗ ಕೇಂದ್ರಿತ ಪ್ರತಿಸಂಕೇತ ವ್ಯವಸ್ಥೆಯನ್ನು ನಿರ್ಮಿಸಿ­ದರು.

ಮುಂದೊಮ್ಮೆ ಇಷ್ಟಲಿಂಗವೂ ಬೂಟಾ­ಟಿಕೆಯ ಸಂಕೇತವಾಗುವ ವ್ಯಂಗ್ಯವನ್ನು ಸ್ವತಃ ವಚನಕಾರರೇ ಗುರುತಿಸಿದ್ದಾರೆ. ‘ಲಾಂಛನಕ್ಕೆ ತಕ್ಕ ನಡೆಯಿಲ್ಲ’ ದವರಿಗೆ ಛೀಮಾರಿ ಹಾಕುತ್ತಾನೆ ಬಸವಣ್ಣ. ಶರಣ ಪರಂಪರೆಯ ಮುಂದುವರಿದ ಘಟ್ಟವಾದ ಮಂಟೇಸ್ವಾಮಿಯ ಕತೆಯಲ್ಲಿ ಇಷ್ಟಲಿಂಗಧಾರಿಗಳ ಆಷಾಢಭೂತಿತನ ವಿಡಂ­ಬನೆ­­ಗೊಳಗಾಗುತ್ತದೆ. ಕಲ್ಯಾಣದ ಜಂಗಮರ ಇಷ್ಟ­ಲಿಂಗಗಳನ್ನು ಕಾಣೆಮಾಡಿದ ಮಂಟೇ­ಸ್ವಾಮಿ ಅವರಿಗೆ ‘ಉಳಿ ಮುಟ್ಟದ ಲಿಂಗದ’ ದೀಕ್ಷೆ ನೀಡುತ್ತಾನೆ.

ಹೀಗೆ ಸ್ಥಾವರಲಿಂಗಗಳನ್ನು ಟೀಕಿಸಿದ ವೀರಶೈವರಾಗಲಿ, ಇಷ್ಟಲಿಂಗವನ್ನು ವಿಡಂಬಿಸಿದ ಮಂಟೇ­ಸ್ವಾಮಿಯಾಗಲಿ, ತಮ್ಮ ಕಾಲದ ಮಂದಿರಗಳಲ್ಲಿ ತಲೆಯೆತ್ತುತ್ತಿದ್ದ ಭ್ರಷ್ಟತೆಯನ್ನು ತೊಲಗಿಸಲು ಹಲವಾರು ಸುಧಾರಣೆಗಳನ್ನು ಪ್ರತಿಪಾದಿಸಿದ ರಾಮಾನುಜರಾಗಲಿ, ಪವಿತ್ರ ಸಂಕೇತಗಳ ಬಗ್ಗೆ ಅಸಾಂಪ್ರದಾಯಿಕವಾಗಿ ನಡೆದು­ಕೊಂಡ ಕಾಶಿಯ ತ್ರೈಲಿಂಗಸ್ವಾಮಿ­ಯಂ­ತಹ ಕೆಲವು ಅಘೋರಿಗಳಾಗಲಿ ಪವಿತ್ರತೆಯ ಸಾಂಪ್ರ­ದಾಯಿಕ ಸಂಕೇತಗಳನ್ನು ಆವರಿಸುತ್ತಿದ್ದ ಮನದ ಕಾಳಿಕೆಯನ್ನು ನೀಗಿಸಲು ಹೆಣಗಿದರೇ ಹೊರತು ಪವಿತ್ರತೆಯನ್ನೇ ನಿರಾಕರಿಸಲು ಹೊರ­ಡಲಿಲ್ಲ. ಅವರೆಲ್ಲರ ಸುಧಾರಣೆ, ನಿರಾಕರಣೆಗಳ ಕ್ರಮಗಳು ಪ್ರಧಾನವಾಗಿ ಆಧ್ಯಾತ್ಮಿಕ­ವಾದು­ವೆನ್ನು­ವದನ್ನು ಮರೆಯಲಾಗದು.

ಈ ಸ್ವವಿಮರ್ಶಾಪರ, ವಿಕಸನಶೀಲ ಪರಂ­ಪರೆಗೆ ವ್ಯತಿರಿಕ್ತವಾದುದು ಪೆರಿಯಾರ್ ಮಾದ­ರಿಯ ಮೂರ್ತಿಭಂಜನಾಕ್ರಮ. ಅದು ಪಶ್ಚಿಮ­ಬುದ್ಧಿಯ ಭೌತಿಕವಾದಿ ಮಾನವ­ಕೇಂದ್ರಿತ ದೃಷ್ಟಿ­ಯಿಂದ ಪ್ರೇರಿತವಾಗಿದ್ದು, ಭಾರತದ ಬಹು­ಮುಖಿ ಮತ್ತು ಗತಿತಾರ್ಕಿಕ ಪರಂಪರೆಗಳನ್ನು ಕೇವಲ ಬ್ರಾಹ್ಮಣವಾದಿ ದಬ್ಬಾಳಿಕೆಯೆಂದು ಸಾರಾ­­ಸಗಟಾಗಿ ತೀರ್ಪು ನೀಡಿತು.

ಮಿಷನರಿಗಳು ಹೇಳಿ­­ದ್ದನ್ನೇ ಇನ್ನೊಂದು ರೀತಿಯಲ್ಲಿ ಹೇಳಿತು, ಅಷ್ಟೆ. ಪೆರಿಯಾರ್ ಮಾದರಿಯ ಮೂರ್ತಿ­ಭಂಜನಾ ಕ್ರಮಗಳು ತಮಿಳುನಾಡನ್ನು ಮೂರ್ತಿ­ಮುಕ್ತ­­ಗೊಳಿಸಲಿಲ್ಲ. ತಮಿಳುನಾಡಿನ ಸುಂದರ ಮಂದಿರಗಳು ಇಂದಿಗೂ ಜನಪ್ರಿಯವಾಗಿ ಕಂಗೊ­ಳಿ­­­ಸುತ್ತಿವೆ. ಜೊತೆಗೆ ಸಮಕಾಲೀನ ಸಿನಿಮಾ ಸ್ಟಾರ್‌ಗಳ ಮೂರ್ತಿಪೂಜೆಯೂ ಆರಂಭ­ವಾಗಿದೆ!

ಅದ್ವೈತದ ಹಂತದಲ್ಲಿ ಮೂರ್ತಿಯ ವಾಸನೆಯಿರುವುದಿಲ್ಲ. ಒಡಿಶಾದ ಸಂತಕವಿ ಭೀಮಾ­ಬೋಯಿ ಹೇಳುತ್ತಾನೆ: ‘ಶೂನ್ನ ಮಂದಿರೆ ವಿಹರ..ಊಪರ್ ನೀಚೆ ನಹಿ..’ (ಶೂನ್ಯ­ಮಂದಿರ­ದಲ್ಲಿ ವಿಹರಿಸು. ಅಲ್ಲಿ ಮೇಲೂ ಇಲ್ಲ, ಕೆಳಗೂ ಇಲ್ಲ’). ಆದರೆ ಈ ಸ್ಥಿತಿಯನ್ನು ಎಲ್ಲರೂ ಇಚ್ಛಿಸು­ವುದಿಲ್ಲ. ‘ಏನನುಪ­ಮಿ­ಸುವೆ­ನಯ್ಯ?’ ಎಂಬ ಅಲ್ಲಮನ ವಾಸನಾಮುಕ್ತ ನಿರಮ್ಮಳ ಸ್ಥಿತಿ ಎಲ್ಲ­ರಿಗೂ ಎಟಕುವುದಲ್ಲ.

ಇಂದ್ರಿಯವಾಸನೆಯ ಚಿತ್ತ­ವುಳ್ಳ­ವರಿಗೂ ಒಂದು ಆಧ್ಯಾತ್ಮಿಕ ಮಾರ್ಗ ಬೇಕಲ್ಲ. ಅಂಥವರಿಗಾಗಿಯೇ ನಮ್ಮ ಪರಂಪರೆ­ಗಳು ನಾಮ-ರೂಪಗಳ, ಮೂರ್ತಿ-ಸಂಕೇತಗಳ ವ್ಯವ­ಸ್ಥೆ­ಯನ್ನು ಏರ್ಪಡಿಸಿರುವುದು. ಆದ್ದರಿಂದಲೇ ತಮ್ಮ ‘ಅನುಭವಾಮೃತ’ದಲ್ಲಿ ಅದ್ವೈತವನ್ನು ಕೊಂಡಾ­ಡಿದ ಸಂತ ಜ್ಞಾನೇಶ್ವರರು ತಮ್ಮ ಅಭಂಗ­ಗಳಲ್ಲಿ ವಿಠಲನ ಕುರಿತ ದ್ವೈತಭಕ್ತಿಯನ್ನು ಕೀರ್ತಿಸಿದ್ದು. ಮಾನವಚೇತನದ ಮರ್ಮಗಳನ್ನು ಅತ್ಯಂತ ಸೂಕ್ಷ್ಮವಾಗಿ ಅರಿತುಕೊಂಡ ಭಾರ­­ತೀಯ ಧಾರ್ಮಿಕ ಪರಂಪರೆಗಳು ಮೂರ್ತಿ­ಪೂಜೆಯ ದ್ವೈತಕ್ಕೂ ಅಮೂರ್ತ ಅದ್ವೈತಕ್ಕೂ ಸರಿ­ಸಮನಾದ ಸ್ಥಾನ ನೀಡಿವೆ. ಅಲ್ಲಮನೆಂದಂತೆ ‘ಸಾಕಾರ ನಿರಾಕಾರಂ­ಗಳೆರಡೂ ಸ್ವರೂಪಂ­ಗಳು­...­ಉಭಯ­ಕುಳ­ರಹಿತ ನಮ್ಮ ಗೊಗ್ಗೇಶ್ವರನು.’

ಏಕತ್ವಕ್ಕೆ ಧಕ್ಕೆ ತರದಂತೆ ದಿಗ್ಭ್ರಮೆಗೊಳಿಸುವ ವೈವಿಧ್ಯಗಳನ್ನು ಒಳಗೊಂಡ ಕಾರಣ ಇಂದು ಭಾರ­ತೀಯ ಪರಂಪರೆಗಳ ಈ ಇತ್ಯಾತ್ಮಕ ಅಂಶ­ಗಳು ಇಂದಿನ ವೈವಿಧ್ಯಮಯವಾದ ಜಗತ್ತಿಗೆ ಮಾದರಿಯಾಗಬಲ್ಲುದೆನ್ನುತ್ತಾನೆ ಮೆಕ್ಸಿಕೊದ ಕವಿ-ಚಿಂತಕ ಅಕ್ತೇವಿಯೋ ಪಾಜ್. ಏಕತ್ವ-ಬಹುತ್ವ­ಗಳ ನಡುವೆ ಏಕರಸತ್ವವನ್ನು ಕಂಡರಸಿ, ಅದನ್ನು ಪ್ರತಿಪಾದಿಸಿದ ಭಾರತೀಯ ಧಾರ್ಮಿಕ ಪ್ರತಿಭೆಯ ವೈಶಾಲ್ಯ ಮತ್ತು ಮಹತ್ವಗಳನ್ನು ನಮ್ಮ ಪ್ರಜಾ­ಸತ್ತಾತ್ಮಕ ಯುಗದಲ್ಲಿ ಉಳಿಸಿ­ಕೊಳ್ಳು­ವುದು ಅಗತ್ಯವಾಗಿದೆ.

ಇನ್ನಾದರೂ ಮೂರ್ತಿಗಳ ಮೇಲೆ ಉಚ್ಚೆಹೊಯ್ದ ಹುಡುಗಾಟದ ಪರಾಕ್ರಮಗಳನ್ನು ವಿಜೃಂಭಿಸುವ ಬೇಜವಾಬ್ದಾರಿ ತೀಟೆಗಳನ್ನು ನಮ್ಮ ಬುದ್ಧಿಜೀವಿಗಳು ಕೈಬಿಡಲಿ. ಸರ್ವಜನಾಂಗದ ಸುಂದರ ತೋಟವಾಗಬೇಕಾದ ನಮ್ಮ ನಾಡಿನಲ್ಲಿ ಇತರರ ಆಚರಣೆಗಳ ಬಗೆಗಿನ ಅಲ್ಪತಿಳಿವಳಿಕೆಯ, ಅಸಡ್ಡೆಯ, ಅಸಹನೆಯ ವಿಷಮತೆಯನ್ನು ಹಬ್ಬಿಸದಿರಲಿ ಎಂದು ಹಾರೈಸೋಣ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT