ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಕರ್ತವ್ಯ ಮರೆಸುವ ಆಕರ್ಷಣೆ

Last Updated 7 ಮೇ 2012, 19:30 IST
ಅಕ್ಷರ ಗಾತ್ರ

ಮೊನ್ನೆ ನನಗೊಬ್ಬ ಹಿರಿಯ ಅಧಿಕಾರಿಗಳು ಹೇಳುತ್ತಿದ್ದರು, `ನಾನು ಬೆಳಿಗ್ಗೆ ಎದ್ದು ಇಂದು ಆಫೀಸಿನಲ್ಲಿ ಮಾಡಬೇಕಾದ ಕೆಲಸಗಳ ಪಟ್ಟಿ ಮಾಡಿ ಡೈರಿಯಲ್ಲಿ ಬರೆದುಕೊಳ್ಳುತ್ತೇನೆ. ಅದರಂತೆಯೇ ಮಾಡಲು ಪ್ರಯತ್ನಿಸುತ್ತೇನೆ.
 
ಆದರೆ ಆಫೀಸಿಗೆ ಹೋದ ಮೇಲೆ ಏನಾಗುತ್ತದೆಯೋ ತಿಳಿಯದು. ಇಡೀ ದಿನ ಕೆಲಸ ಮಾಡಿಯೇ ಮಾಡುತ್ತೇನೆ. ಕೊನೆಗೆ ಏನೇನೋ ಕೆಲಸಗಳನ್ನು ಮಾಡಿ, ಮಾಡಬೇಕೆಂದು ಯೋಜಿಸಿದ್ದನ್ನು ಮಾಡಿರುವುದೇ ಇಲ್ಲ. ಅದು ಏಕೆ ಹೀಗಾಗುತ್ತದೆಯೋ ತಿಳಿಯುವುದಿಲ್ಲ.~
ಆಗ, ಇತ್ತೀಚೆಗೆ ಒಂದು ಜಪಾನೀ ಪತ್ರಿಕೆಯಲ್ಲಿ ಬಂದ ಒಂದು ಲೇಖನ ನೆನಪಾಯಿತು.

ಜಪಾನ್‌ನಲ್ಲಿ ವೈಜ್ಞಾನಿಕ ಆವಿಷ್ಕಾರಗಳು ನಡೆಯುವುದು ತುಂಬ ಹೆಚ್ಚು. ಪ್ರತಿದಿನವೂ ಹೊಸಹೊಸ ಯಂತ್ರಗಳು, ತಂತ್ರಗಳು ಮಾರುಕಟ್ಟೆಗೆ ಬರುತ್ತವೆ. ಅಲ್ಲಿಯ ತಂತ್ರಜ್ಞರು ಇತ್ತೀಚೆಗೆ ಒಂದು ತೂಕ ನೋಡುವ ಹೊಸ ಯಂತ್ರವನ್ನು ತಯಾರು ಮಾಡಿದ್ದರಂತೆ. ಆ ಯಂತ್ರಗಳನ್ನು ರೇಲ್ವೆ ನಿಲ್ದಾಣಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ, ಬಸ್ ತಂಗುದಾಣಗಳಲ್ಲಿ ಸ್ಥಾಪಿಸಿದ್ದರು.

ಈ ಯಂತ್ರದ ವಿಶೇಷವೇನೆಂದರೆ ಯಾರಾದರೂ ತಮ್ಮ ತೂಕವನ್ನು ನೋಡಿಕೊಳ್ಳಲು ಅದರ ಕಟ್ಟೆಯ ಮೇಲೆ ನಿಂತರೆ ಅದು ತೂಕ ಹೇಳುವುದರ ಜೊತೆಗೆ ಆ ವ್ಯಕ್ತಿಯ ಎತ್ತರ, ಬಣ್ಣ, ಮೂಲ ದೇಶ ಮತ್ತು ಅವರ ಪ್ರವಾಸದ ವಿವರವನ್ನು ಸ್ಪಷ್ಟವಾಗಿ ಹೇಳಿಬಿಡುತ್ತಿತ್ತು.

ಹೀಗಾಗಿ ತೂಕದಯಂತ್ರ, ಎಲ್ಲ ನಿಲ್ದಾಣಗಳಲ್ಲಿ ಒಂದು ಬಹುದೊಡ್ಡ ಆಕರ್ಷಣೆಯಾಗಿತ್ತು.
ಒಬ್ಬ ಅಮೆರಿಕನ್ ಪ್ರವಾಸಿ ತೂಕ ನೋಡಲು ಈ ಯಂತ್ರದ ಕಟ್ಟೆಯನ್ನೇರಿ ನಿಂತ. ಯಂತ್ರದ ಒಳಗಿದ್ದ ಕ್ಯಾಮರಾ ಅವರ ಚಿತ್ರ ತೆಗೆಯಿತು.

ಕ್ಷಣದಲ್ಲಿ ಯಂತ್ರದ ಹೊಟ್ಟೆಯಿಂದ ಕೀರಲು ಧ್ವನಿ ಹೊರಟಿತು, `ನಮಸ್ಕಾರ. ನೀವೊಬ್ಬ ಅಮೆರಿಕನ್. ನಿಮ್ಮ ತೂಕ ತೊಂಬತ್ತು ಕಿಲೋಗ್ರಾಂ, ನಿಮ್ಮ ಎತ್ತರ ಆರು ಅಡಿ ಮೂರು ಅಂಗುಲ, ಬಣ್ಣ ಬಿಳೀ ಕೆಂಪು. ನೀವೀಗ ಟೋಕಿಯೋದಿಂದ ಅಮೆರಿಕದ ನ್ಯೂಯಾರ್ಕಿಗೆ ಹೊರಟಿದ್ದೀರಿ. ಇನ್ನು ಒಂದು ಗಂಟೆಗೆ ನಿಮ್ಮ ವಿಮಾನ ಹೊರಡಲಿದೆ.

ನಿಮ್ಮ ಯಾತ್ರೆ ಶುಭವಾಗಲಿ.~ ಇದನ್ನು ಕೇಳಿ ಪ್ರವಾಸಿಗನಿಗೆ ಬಹಳ ಆಶ್ಚರ್ಯವಾಯಿತು. ಈ ಯಂತ್ರಕ್ಕೆ ಇಷ್ಟೊಂದು ವಿಚಾರ ಹೇಗೆ ತಿಳಿಯಿತು? ಇನ್ನೊಮ್ಮೆ ಪರೀಕ್ಷೆ ಮಾಡಿಯೇ ಬಿಡೋಣ ಎಂದು ಪ್ರವಾಸಿಗರ ಕೊಠಡಿಗೆ ಹೋಗಿ ಬಟ್ಟೆ ಬದಲಾಯಿಸಿದ, ತಲೆಯ ಮೇಲೊಂದು ಹ್ಯಾಟ್ ಹಾಕಿಕೊಂಡು ಮುಖ ಕಾಣದಂತೆ ಮಾಡಿಕೊಂಡು, ಮೊಳಕಾಲ ವರೆಗೆ ಬರುವಷ್ಟು ಉದ್ದಾದ ಕೋಟು ಧರಿಸಿದ.

ನಂತರ ಕಣ್ಣಿಗೆ ಕಪ್ಪು ಕನ್ನಡಕ ಹಾಕಿಕೊಂಡ. ಕನ್ನಡಿಯಲ್ಲಿ ನೋಡಿಕೊಂಡಾಗ ತನಗೇ ಮತ್ತೊಮ್ಮೆ ಗುರುತು ಸಿಗದ ಹಾಗೆ ಬದಲಾದದ್ದು ತಿಳಿಯಿತು. ಬ್ಯಾಗು ಹಿಡಿದುಕೊಂಡು ಯಂತ್ರದ ಬಳಿಗೆ ನಡೆದ.

ಯಂತ್ರದ ಕಟ್ಟೆಯನ್ನೇರಿ ನಿಂತು ನಾಣ್ಯವನ್ನು ತೂರಿಸಿದ. ಕ್ಷಣದಲ್ಲೇ ಮತ್ತೆ ಧ್ವನಿ ಕೇಳಿ ಬಂತು, `ನಮಸ್ಕಾರ, ನೀವೊಬ್ಬ ಅಮೆರಿಕನ್. ನಿಮ್ಮ ತೂಕ ತೊಂಬತ್ತು ಕಿಲೋಗ್ರಾಂ, ನಿಮ್ಮ ಎತ್ತರ ಆರು ಅಡಿ ಮೂರು ಅಂಗುಲ, ಬಣ್ಣ ಬಿಳೀ ಕೆಂಪು, ನೀವು ಟೋಕಿಯೋದಿಂದ ನ್ಯೂಯಾರ್ಕಕ್ಕೆ ಹೋಗಲು ಟಿಕೆಟ್ ಪಡೆದಿದ್ದೀರಿ.
 
ಆದರೆ ವೇಷ ಬದಲಿಸಿಕೊಂಡು ನನ್ನನ್ನು ಮೋಸಗೊಳಿಸುವ ಆತುರದಲ್ಲಿ ಸಮಯ ಕಳೆದುಕೊಳ್ಳುವುದಲ್ಲದೇ ನಿಮ್ಮ ವಿಮಾನವನ್ನೂ ಕಳೆದುಕೊಂಡಿದ್ದೀರಿ. ಈಗ ವಿಮಾನ ಹಾರಲು ಹೊರಡುತ್ತಿದೆ. ನಿಮ್ಮ ಸ್ಥಿತಿಯ ಬಗ್ಗೆ ವಿಷಾದವಾಗುತ್ತದೆ. ದಯವಿಟ್ಟು ಮುಂದಿನ ವಿಮಾನದ ಸಮಯ ನೋಡಿಕೊಳ್ಳಿ, ಆಗಲೂ ತಪ್ಪಸಿಕೊಳ್ಳಬೇಡಿ. ನಿಮಗೆ ಶುಭವಾಗಲಿ.~ ಪ್ರವಾಸಿಗ ಗಡಿಯಾರ ನೋಡಿಕೊಂಡ, ವಿಮಾನ ತಪ್ಪಿಹೋಗಿತ್ತು.

ಅವನ ಮುಖ್ಯ ಉದ್ದೇಶ ವಿಮಾನ ಪ್ರಯಾಣವಾಗಿದ್ದರೂ, ತೂಕದ ಯಂತ್ರದ ಆಕರ್ಷಣೆಗೆ ತೊಡಗಿಕೊಂಡು ತನ್ನ ಮುಖ್ಯ ಕರ್ತವ್ಯವನ್ನೇ ಮರೆತಿದ್ದ. ನಮ್ಮ ಕೆಲಸದಲ್ಲೂ, ಜೀವನದಲ್ಲೂ ಮುಖ್ಯ ಗುರಿಗಳನ್ನು ಮರೆತು, ಸಣ್ಣ ಸಣ್ಣ ಆಕರ್ಷಣೆಗಳಿಗೆ ಮನಸೋತು ಸಮಯ ಕಳೆಯುವುದು ವ್ಯರ್ಥ. ಮಾಡಲೇಬೇಕಾದ ಕರ್ತವ್ಯಗಳನ್ನು ಸಮರ್ಪಕವಾಗಿ ಮುಗಿಸಿ ನಂತರ ಇತರ ಮಾಡಬಹುದಾದ ಕೆಲಸಗಳಿಗೆ ಮನನೀಡುವುದು ಸಾಧಕರ ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT