ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಭೂತವಾದಿಗಳ ಅಬ್ಬರದ ನಡುವೆ...

Last Updated 23 ಜುಲೈ 2013, 19:59 IST
ಅಕ್ಷರ ಗಾತ್ರ

ಪಾಕಿಸ್ತಾನದಲ್ಲಿ ನಾಗರಿಕ ಸೇವೆ ಅಥವಾ ಜನಪ್ರತಿನಿಧಿಗಳ ಶಕ್ತಿಗಿಂತಲೂ ಸೇನೆಯೇ ಪ್ರಭಾವಶಾಲಿ. ಪಾಕ್ ಸರ್ಕಾರದ ಆಯೋಗವೊಂದರ ವರದಿಯ ಕೆಲವು ತುಣುಕುಗಳು ಈಚೆಗೆ ಬಯಲುಗೊಂಡಾಗ ಕೆಲವು ವಾಸ್ತವಾಂಶಗಳೂ ಗೊತ್ತಾದವು.

ತಾಲಿಬಾನ್‌ನ ಸ್ಫೂರ್ತಿಯ ಕೇಂದ್ರವಾಗಿದ್ದ ಒಸಾಮಾ ಬಿನ್ ಲಾಡೆನ್ ಜತೆಗೆ ಪಾಕ್‌ನ ಗುಪ್ತಚರ್ಯ ಸಂಸ್ಥೆ ಐಎಸ್‌ಐ ಕೈಜೋಡಿಸಿದ್ದು, ಸೇನೆಗೆ ಗೊತ್ತಿರಲಿಲ್ಲ ಎಂದೇನಲ್ಲ. ಆದರೆ ಎಲ್ಲವೂ ನಡೆದು ಹೋಯಿತಲ್ಲ. ಅಂತಹ ಸಂಗತಿಗಳೂ ಆ ವರದಿಯಲ್ಲಿದ್ದವು. ಆ ವರದಿಯಿಂದ ಸೋರಿಕೆಯಾದ ಕೆಲವು ವಿಷಯಗಳನ್ನು ಕುತೂಹಲದಿಂದ ನಾನು ಗಂಭೀರವಾಗಿಯೇ ಓದಿದೆ. ಕೆಲವೇ ದಿನಗಳಲ್ಲಿ ಪ್ರಧಾನಿ ನವಾಜ್ ಷರೀಫ್ ಅವರು ಐಎಸ್‌ಐ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದರು.

ಆಗ ಅವರ ಜತೆಯಲ್ಲಿ ಒಳಾಡಳಿತ ಸಚಿವರಿದ್ದರು. ಸೇನಾ ಮುಖ್ಯಸ್ಥ ಪರ್ವೇಜ್ ಕಯಾನಿ ಕೂಡಾ ಹಾಜರಿದ್ದರು. ಆಫ್ಘಾನಿಸ್ತಾನದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದು ಚರ್ಚಿಸಲು ಪ್ರಧಾನಿಯವರು ಅಲ್ಲಿಗೆ ಹೋಗಿದ್ದರೆಂದು ಸರ್ಕಾರದ ವಕ್ತಾರರು ನಂತರ ತಿಳಿಸಿದರು!
ಪಾಕ್‌ನಲ್ಲಿ ರಕ್ಷಣಾ ಇಲಾಖೆಯು ಕೇವಲ ಸೇನಾ ಚಟುವಟಿಕೆಗಷ್ಟೇ ತನ್ನನ್ನು ಸೀಮಿತಗೊಳಿಸಿಕೊಂಡಿಲ್ಲ ಎಂಬುದು ಇಷ್ಟರಿಂದಲೇ ಗೊತ್ತಾಗುತ್ತದೆ. ಅಲ್ಲಿ ಸೇನಾ ಮುಖ್ಯಸ್ಥನಿಗೆ ಇರುವ ಸ್ಥಾನಮಾನ ಅಚ್ಚರಿ ತರುತ್ತದೆ. ಅಂದು ನವಾಜ್ ಷರೀಫ್ ಅವರು ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ತೆರಳಿದ್ದರಲ್ಲಾ, ಅವರು ಹೋಗುವುದಕ್ಕೆ ಮೊದಲೇ ಸೇನಾ ಮುಖ್ಯಸ್ಥರ ಕಾರು ಮತ್ತು ಅವರ ಪರಿವಾರ ಆಡಂಬರದಿಂದ ಒಳ ಹೋಗಿತ್ತು.

ಪಾಕ್‌ನ ಹಿಂದಿನ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಅವರ ಮೇಲೆ ರಾಜದ್ರೋಹದ ಆರೋಪದ ತನಿಖೆ ನಡೆದಿದೆ. ಅವರು ನಂತರ ದೇಶದ ಅಧ್ಯಕ್ಷ ಪಟ್ಟಕ್ಕೇರಿ ಕಾರ್ಯ ನಿರ್ವಹಿಸಿದ್ದರು. ನಂತರ ಅವರು ಯೂರೋಪ್‌ಗೆ ಹೋಗಿ ಹಲವು ವರ್ಷಗಳ ಕಾಲವಿದ್ದು ವಾಪಸಾದರು. ಆಗ ಕೋರ್ಟ್‌ನ ಆದೇಶದ ಮೇರೆಗೆ ಅವರನ್ನು ಬಂಧಿಸಲಾಯಿತು. ಆದರೆ ಅವರನ್ನು ಜೈಲಿಗೆ ಕಳುಹಿಸಲಿಲ್ಲ. ಅಚ್ಚುಕಟ್ಟಾದ ವ್ಯವಸ್ಥೆ ಇರುವ ಸುಂದರವಾದ ಮನೆಯೊಂದರಲ್ಲಿ ಅವರನ್ನು ಇರಿಸಲಾಯಿತು. ಕೋರ್ಟ್‌ನ ಆದೇಶವಿದ್ದರೂ ಪೊಲೀಸರು ಮಾತ್ರ ಮುಷರಫ್ ವಿರುದ್ಧ ದೂರು ದಾಖಲಿಸಿಕೊಳ್ಳಲಿಲ್ಲ. ಅಷ್ಟರಮಟ್ಟಿಗೆ ಮುಷರಫ್ ಪಾಕ್‌ನಲ್ಲಿ ಸುರಕ್ಷಿತವಾಗಿಯೇ ಇದ್ದಾರೆ. ಒಂದು ವೇಳೆ ಅವರು ಮತ್ತೆ ತಾವು ಪಾಕಿಸ್ತಾನಕ್ಕೆ ಬರುವುದಿಲ್ಲ ಎಂಬ ಆಶ್ವಾಸನೆ ನೀಡಿ ಯೂರೋಪ್‌ಗೆ ಹೊರಟು ನಿಂತರೆ, ಅವರನ್ನು ಗೌರವಯುತವಾಗಿಯೇ ಆ ದೇಶದಿಂದ ಹೊರಗೆ ಕಳುಹಿಸುವ ವ್ಯವಸ್ಥೆಯೇ ಇದೆ ಎಂದರೆ ತಪ್ಪಾಗಲಾರದು.

ಪಾಕಿಸ್ತಾನಕ್ಕೆ ಬರುವ ಮೊದಲು ಸೇನೆಯ ಉನ್ನತ ವಲಯದವರೊಡನೆ ಮುಷರಫ್ ಮಾತುಕತೆ ನಡೆಸಿದ್ದಿರಬಹುದೆಂಬ ದಟ್ಟ ಅನುಮಾನ ನನಗಿದೆ. ತಮ್ಮನ್ನು ಯಾವುದೇ ಕಾರಣಕ್ಕೂ ಜೈಲಿಗೆ ಕಳುಹಿಸುವುದೇ ಆಗಲಿ ಅಥವಾ ಇನ್ನಾವುದೇ ರೀತಿಯ ಶಿಕ್ಷೆ ವಿಧಿಸುವುದೇ ಆಗಲಿ ಮಾಡುವುದಿಲ್ಲ ಎಂಬ ಆಶ್ವಾಸನೆಯನ್ನು ಸೇನೆಯಿಂದ ಪಡೆದ ಮೇಲೆಯೇ ಮುಷರಫ್ ಪಾಕಿಸ್ತಾನದೊಳಗೆ ಕಾಲಿಟ್ಟಿರಬಹುದೆನ್ನಿಸುತ್ತಿದೆ. ಇಂತಹ ಸಂಗತಿಗಳು ಪಾಕ್‌ನಲ್ಲಷ್ಟೇ ನಡೆಯಲು ಸಾಧ್ಯ ನೋಡಿ. ಮುಷರಫ್ ಅವರಿಗೆ ಎಷ್ಟರಮಟ್ಟಿಗೆ ಶಿಕ್ಷೆಯಾಗುತ್ತದೆ ಎಂಬುದರ ಮೇಲೆ ಪಾಕಿಸ್ತಾನದಲ್ಲಿ ಪ್ರಜಾಸತ್ತೆ ಎಷ್ಟರಮಟ್ಟಿಗೆ ಆಳವಾಗಿ ಬೇರೂರಿದೆ ಎಂದು ನಾವು ತಿಳಿದುಕೊಳ್ಳಬಹುದು.

ಇಸ್ಲಾಂ ಚಿಂತನೆ, ವ್ಯವಹಾರಗಳಲ್ಲಿ ನಾನು ತಜ್ಞನೇನಲ್ಲ. ಆದರೆ ನನ್ನ ಮುಸಲ್ಮಾನ ಗೆಳೆಯರೊಬ್ಬರು ಹೇಳುವ ಪ್ರಕಾರ “ಇಸ್ಲಾಮ್‌ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕ ಸ್ಥಿತಿಯಂತೂ ಇಲ್ಲ”. ಆದರೆ ಅಂತಹ ಸ್ನೇಹಿತರಿಗೆಲ್ಲಾ ನಾನು ಹೇಳುವುದೊಂದೇ “ಮತ ಪೆಟ್ಟಿಗೆ ಅಥವಾ ಜನಾಭಿಪ್ರಾಯದ ತೀರ್ಪಿಗೂ ಮನ್ನಣೆ ನೀಡಿ”. ಅರಬ್ ನೆಲದಲ್ಲಿ ಆಡಳಿತಗಾರರ ವಿರುದ್ಧವೇ ಜನಾಂದೋಲನ ನಡೆದದ್ದನ್ನು ಕಂಡು ಜಗತ್ತಿನ ಜನ ಆಶ್ಚರ್ಯ ಪಟ್ಟಿದ್ದಾರೆ. ಅದೇನೇ ಇರಲಿ, ಸುಭದ್ರ ಮತ್ತು ಶಾಂತಿಯುತವಾದ ಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆಯೊಂದು ರೂಪುಗೊಳ್ಳಲು ದೀರ್ಘ ಕಾಲ ಬೇಕು ಎನ್ನುವುದಂತೂ ನಿಜ. ಅರಬ್‌ನಲ್ಲಿ ನಡೆದಿರುವ ಆಂದೋಲನದಲ್ಲಿ ಮೂಲಭೂತವಾದಿಗಳೇ ಎದ್ದು ಕಾಣುತ್ತಿದ್ದು, ಇದು ಬೂದಿ ಮುಚ್ಚಿದ ಕೆಂಡದಂತಿದೆ ಎಂದರೆ ಅತಿಶಯೋಕ್ತಿಯಂತೂ ಅಲ್ಲ.

ಈ ನಡುವೆ ಪ್ರಜಾಸತ್ತಾತ್ಮಕ ಬೇರುಗಳಿಲ್ಲದ ಸಂಗತಿಯೊಂದು ಜಗತ್ತಿನ ವಿವಿಧೆಡೆ ಹೊಸ ಆಯಾಮ ಕಂಡುಕೊಳ್ಳುತ್ತಿರುವುದೊಂದು ವಿಪರ್ಯಾಸ. ಮುಸ್ಲಿಮರಷ್ಟೇ ಅಲ್ಲ, ಭಾರತದಲ್ಲಿ ಹಿಂದೂಗಳು ಮತ್ತು ಯೂರೋಪ್‌ನಲ್ಲಿ ಕ್ರೈಸ್ತರು ತಮ್ಮದೇ ಗುಂಪು ಕಟ್ಟಿಕೊಳ್ಳುವ ಅಥವಾ ಭಾವನಾತ್ಮಕ ನೆಲೆಯಲ್ಲಿ ಒಂದಾಗಿ ಗುರುತಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗಾಳಿಗೆ ತೂರಿರುವುದು ಎದ್ದು ಕಾಣುತ್ತದೆ. ತಲೆಯ ಮೇಲೆ ಶಿರೋವಸ್ತ್ರ (ಹಿಜಾಬ್) ಹೊದ್ದುಕೊಂಡಿರುವ ಯುವತಿಯರು ಮತ್ತು ಗಡ್ಡ ಬಿಟ್ಟುಕೊಂಡ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ ಮತ್ತು ದೆಹಲಿಯ ಜಾಮಿಯ ಮಿಲಿಯ ಶಿಕ್ಷಣ ಸಂಸ್ಥೆಗಳಲ್ಲಿ ಕಂಡು ಬರುತ್ತಿದ್ದಾರೆ. ಆರ್‌ಎಸ್‌ಎಸ್‌ನ ಮುಖವಾಣಿಯಾಗಿರುವ ಬಿಜೆಪಿಯು ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರತ್ತಲೇ ಹೆಚ್ಚು ವಾಲುತ್ತಿದೆ. ಮೋದಿ ಅವರಂತೂ ಕಟ್ಟಾ ಹಿಂದೂತ್ವವಾದಿ. ಈಚೆಗೆ ಮೋದಿ ವಿದೇಶಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ, `ನಾನು ಕಾರೊಂದರಲ್ಲಿ ಹೋಗುತ್ತಿದ್ದಾಗ ಒಂದು ವೇಳೆ ನಾಯಿ ಮರಿಯೊಂದು ಅಡ್ಡ ಬಂದು ಚಕ್ರದಡಿ ಸಿಲುಕಿ ಸತ್ತರೆ ನನ್ನ ಮನಸ್ಸಿಗೆ ನೋವಾಗುತ್ತದೆ. ಅದೇ ರೀತಿ 2002ರಲ್ಲಿ ಗುಜರಾತಿನಲ್ಲಿ ನಡೆದ ಗಲಭೆಯಲ್ಲಿ ಸತ್ತವರ ಬಗ್ಗೆಯೂ ನನಗೆ ನೋವಾಗುತ್ತದೆ' ಎಂದಿದ್ದರು. ಇಂತಹ ಹಲವು ಘಟನೆಗಳನ್ನೆಲ್ಲಾ ನೋಡಿದಾಗ ನನ್ನ ಮನಸ್ಸಿನಾಳದಲ್ಲಿ ಒಂದು ತೆರನಾದ ಭಯ ಉಂಟಾಗುತ್ತಿದೆ. ಮನುಷ್ಯರೆಲ್ಲಾ ಒಗ್ಗೂಡಿ ನಡೆಯುವುದನ್ನು, ಬದುಕುವುದನ್ನು ಮೋದಿ ಚಿಂತನೆ ಮತ್ತು ಬಿಜೆಪಿ ಸಹಿಸುತ್ತಿಲ್ಲ ಎಂದು ಕಂಡು ಬರುತ್ತಿದೆ.

ಇನ್ನೊಂದು ಕಡೆ ಇಗರ್ಜಿಗಳಿಗೆ ಹೋಗುವ ಕ್ರೈಸ್ತರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲಿ ಉಪನ್ಯಾಸ ವೇದಿಕೆಯ ಎದುರು ನಿಂತವರ ಪ್ರಚೋದನಕಾರಿ ಮಾತುಗಳಿಗೆ ಅವರು ಕಿವಿಗೊಡುವುದಂತೂ ಇದ್ದೇ ಇದೆ. “ಜಾಗತೀಕರಣ ಪ್ರಕ್ರಿಯೆ ತಾರಕಕ್ಕೇರುತ್ತಿರುವಾಗ ಇಂತಹ ಮನೋಭಾವ ಕೂಡಾ ಹೆಚ್ಚಾಗುತ್ತಿದೆ” ಎಂದು ನನ್ನ ಮುಸಲ್ಮಾನ ಗೆಳೆಯರೊಬ್ಬರು ಹೇಳುತ್ತಿರುತ್ತಾರೆ. ಆದರೆ ಧರ್ಮಕ್ಕೂ ಜಾಗತೀಕರಣ ಪ್ರಕ್ರಿಯೆಗೂ ಎತ್ತಣಿಂದೆತ್ತ ಸಂಬಂಧ, ಅಲ್ಲವೇ ? ನನ್ನ ಗೆಳೆಯನ ಆ ವಾದ ಸಮರ್ಥನೀಯ ಎಂದೆನಿಸುತ್ತಿಲ್ಲ. ಸಾಮಾಜಿಕವಾಗಿ ಅಥವಾ ಮತೀಯವಾಗಿ ಒಗ್ಗೂಡುವಿಕೆ ಇದೆಯಲ್ಲಾ ಅದು ಧಾರ್ಮಿಕ ತಳಹದಿಯ ಮೇಲೆ ಅಥವಾ ಪ್ರಾದೇಶಿಕ ಹಿತಾಸಕ್ತಿಯ ಆಳದಿಂದ ಹುಟ್ಟು ಪಡೆಯುವ ಸಾಧ್ಯತೆಯೇ ಹೆಚ್ಚು.

ಪಾಕಿಸ್ತಾನ ಒಂದು ಇಸ್ಲಾಂ ದೇಶ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಆದರೆ ಅದು ತನ್ನ ಮೊದಲ ದಿನಗಳಲ್ಲಿ ಜಾತ್ಯತೀತ ಆಶಯಗಳನ್ನು ಹೊಂದಿತ್ತು ಎನ್ನುವುದೂ ನಿಜ. ಪಾಕಿಸ್ತಾನ ಹುಟ್ಟು ಪಡೆಯಲು ಕಾರಣರಾದ ಮಹಮ್ಮದ್ ಅಲಿ ಜಿನ್ನಾ ಅವರು ತಮ್ಮ ಅಂದಿನ ಮೊದಲ ಭಾಷಣದಲ್ಲಿ ದೇಶದ ರಾಜಕಾರಣ ಅಥವಾ ಆಡಳಿತದಲ್ಲಿ ಧಾರ್ಮಿಕ ವಿಷಯಗಳನ್ನು ಬೆರೆಸಬಾರದು ಎಂದಿದ್ದನ್ನು ಯಾರೂ ಮರೆಯುವಂತಿಲ್ಲ. ಆದರೆ ಅವರ ಆ ಮಾತು ಇದೀಗ ಎಲ್ಲರೂ ಮರೆತುಬಿಟ್ಟಿದ್ದಾರೆ. ಅಲ್ಲಿ ಷಿಯಾಗಳ ಮೇಲೆ ದೌರ್ಜನ್ಯಕ್ಕೆ ಕೊನೆ ಮೊದಲಿಲ್ಲದಂತಾಗಿದೆ. ಅಹಮದೀಯ ಪಂಥದವರನ್ನಂತೂ ಮುಸ್ಲಿಮೇತರರು ಎಂದು ಘೋಷಿಸಿ ಅಲ್ಲಿ ದೂರವೇ ಇಟ್ಟು ಬಿಟ್ಟಿದ್ದಾರೆ. ಅವರ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿಗಳೂ ನಡೆದಿವೆ.

ಇಂತಹ ಘಟನೆಗಳೆಲ್ಲದರ ನಡುವೆ ಮುಷರಫ್ ಅವರ ಸಕಾರಾತ್ಮಕ ನಿಲುವೊಂದು ಗಮನ ಸೆಳೆಯುತ್ತದೆ. ಅವರು ಪಾಕ್‌ನೊಳಗೆ ಉಗ್ರಗಾಮಿಗಳ ಚಟುವಟಿಕೆಗಳಿಗೆ ತೀವ್ರವಾದ ಆಘಾತ ನೀಡಿದ್ದರು. ವಜೀರಿಸ್ತಾನದಲ್ಲಿ ತಾಲಿಬಾನ್ ಉಗ್ರರ ಮೇಲೆ ಸೇನೆ ನಡೆಸಿದ ಪರಿಣಾಮಕಾರಿ ದಾಳಿಗೆ ಮುಷರಫ್ ಅವರೇ ಕಾರಣ. ಆದರೆ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಆಧಾರ ಸ್ತಂಭಗಳಲ್ಲಿ ಒಂದಾದ ನ್ಯಾಯಾಂಗದ ಅಡಿಪಾಯವನ್ನು ಮುಷರಫ್ ಅವರೇ ಅಲ್ಲಾಡಿಸಲು ಯತ್ನಿಸಿದ್ದೊಂದು ವಿಪರ್ಯಾಸ. ಅದಲ್ಲದೆ ವೈಯಕ್ತಿಕ ಕಾರಣಗಳಿಗಾಗಿ ಬುಗ್ತಿ ಬುಡಕಟ್ಟಿನ ಮುಖ್ಯಸ್ಥರ ಮೇಲೆ ದಾಳಿಗೆ ಮುಷರಫ್ ಆದೇಶ ನೀಡಿದ್ದರು. ತಾಲಿಬಾನ್‌ಗೆ ತಮ್ಮ ಅಧಿಕಾರ ಅವಧಿಯಲ್ಲಿ ದೊಡ್ಡ ಮಟ್ಟದಲ್ಲಿ ಆಘಾತ ನೀಡಿದ್ದ ಮುಷರಫ್ ಇವತ್ತೂ ಪಾಕ್‌ನೊಳಗೆ ಸುಭದ್ರವಾಗಿಯೇ ಇದ್ದಾರೆ ಎನ್ನುವುದನ್ನು ನಾವು ಮರೆಯುವಂತಿಲ್ಲ.

ಪ್ರಸಕ್ತ ಪ್ರಧಾನ ಮಂತ್ರಿ ನವಾಜ್ ಷರೀಫ್ ಅವರು ಬಲು ದೊಡ್ಡ ಸವಾಲು ಎದುರಿಸುತ್ತಿದ್ದಾರೆ. ಅವರ ಸರ್ಕಾರದಲ್ಲಿ ಜತೆಗೂಡಿ ಹೆಜ್ಜೆ ಇಡುತ್ತಿರುವವರಲ್ಲಿ ಹಲವರು ತಾಲಿಬಾನ್ ಚಿಂತನೆಯನ್ನೇ ಮೈಗೂಡಿಸಿಕೊಂಡವರಾಗಿದ್ದಾರೆ. ಇಲ್ಲದಿದ್ದರೆ ಅವರು ಜಮಿಯತ್ ಇ ದವಾ ಎಂಬ ಸಂಘಟನೆಗೆ ಸರ್ಕಾರದಿಂದಲೇ 30 ಕೋಟಿ ರೂಪಾಯಿಗಳನ್ನು ಮಂಜೂರು ಮಾಡುವ ಅಗತ್ಯವಾದರೂ ಏನಿತ್ತು?

ಮುಂದಿನ ವರ್ಷ ಆಫ್ಘಾನಿಸ್ತಾನದಿಂದ ಅಮೆರಿಕ ಮತ್ತು ಯೂರೋಪ್ ತಮ್ಮ ಸೇನೆಯನ್ನು ವಾಪಸು ಕರೆಸಿಕೊಳ್ಳಲಿವೆ. ಆ ನಂತರ ಪಾಕ್ ಕೂಡಾ ಪರದಾಡಬೇಕಿದೆ. ಭಾರತಕ್ಕೂ ಅಪಾಯವಿದೆ. ನಾವು ಅಲ್ಲಿ ನಿರ್ಮಿಸಿರುವ ಆಸ್ಪತ್ರೆ ಮತ್ತು ಶಾಲಾ ಕಟ್ಟಡಗಳನ್ನು ತಾಲಿಬಾನ್ ಉಗ್ರರು ಸ್ಫೋಟಿಸಿದರೆ ಅಚ್ಚರಿ ಪಡುವಂತಹದ್ದೇನಿಲ್ಲ. ತಾಲಿಬಾನ್ ಶಕ್ತಿಗಳ ವಿರುದ್ಧ ಆಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜೈ ನೇತೃತ್ವದ ಸರ್ಕಾರ ಹೋರಾಡಲು ಶಕ್ತಿ ತುಂಬಿಕೊಳ್ಳಲಿ ಎಂದಷ್ಟೇ ಆಶಿಸಬಹುದು ಮತ್ತು ಹಾರೈಸಬಹುದು.

ತಾಲಿಬಾನ್‌ಗಳ ವಿರುದ್ಧ ಭಾರತ ಮತ್ತು ಪಾಕಿಸ್ತಾನ ಜಂಟಿಯಾಗಿ ಕಾದಾಡಬೇಕೆನ್ನುವ ಮತ್ತು ಉಗ್ರರ ವಿರುದ್ಧದ ಸಮರದಲ್ಲಿ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುವ ಪಾಕಿಸ್ತಾನ ಸರ್ಕಾರದ ಪ್ರಸ್ತಾಪವನ್ನು ಭಾರತ ಸರ್ಕಾರ ನಿರ್ಲಕ್ಷಿಸಿರುವುದು ಅಚ್ಚರಿ ಎನಿಸಿದೆ. ತಾಲಿಬಾನ್ ವಿರುದ್ಧದ ಹೋರಾಟಕ್ಕೆ ಭಾರತ ಈವರೆಗೆ ಆಫ್ಘಾನಿಸ್ತಾನಕ್ಕೆ ಯಾವುದೇ ತೆರನಾದ ಶಸ್ತ್ರಾಸ್ತ್ರವನ್ನು ನೀಡಿಲ್ಲ ಎನ್ನುವುದೂ ನಿಜ.

ಈ ನಡುವೆ ತಾಲಿಬಾನ್ ಸಂಘಟನೆಯ ಉನ್ನತ ವಲಯದಲ್ಲಿರುವವರೊಡನೆ ಮಾತುಕತೆ ನಡೆಸುತ್ತಿರುವ ಅಮೆರಿಕದ ಧೋರಣೆಯ ವಿರುದ್ಧ ಕರ್ಜೈ ಆವೇಶದಿಂದ ಧ್ವನಿ ಎತ್ತಿದ್ದಾರೆ. ಅಮೆರಿಕ ತನ್ನ ಹಿತಾಸಕ್ತಿಯ ಆಚೆಗಿರುವ ಏನನ್ನೂ ಯೋಚಿಸುತ್ತಿರುವಂತೆ ಕಂಡು ಬರುತ್ತಿಲ್ಲ. ಇಂತಹ ಸಂದಿಗ್ಧದಲ್ಲಿ ನವದೆಹಲಿಯಲ್ಲಿರುವ ಆಡಳಿತಗಾರರು ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ಸರ್ಕಾರಗಳ ಜತೆಗೆ ಸಂವಾದ ನಡೆಸಿ ಉಗ್ರರ ವಿರುದ್ಧದ ಹೋರಾಟಕ್ಕೆ ಪೂರಕವಾದ ನೀತಿಯೊಂದನ್ನು ರೂಪಿಸಬೇಕಿದೆ. ದುರದೃಷ್ಟವೆಂದರೆ, ತಾಲಿಬಾನ್ ಉಗ್ರರು ಆಫ್ಘಾನಿಸ್ತಾನದ ಸೇನೆಯೊಳಗೂ ದೊಡ್ಡ ಪ್ರಮಾಣದಲ್ಲಿ ನುಸುಳಿದ್ದು, ತನ್ನ ನೆಲೆಯನ್ನು ವಿಸ್ತರಿಸಿಕೊಂಡಿದ್ದಾರೆ. ಇತ್ತ ಪಾಕಿಸ್ತಾನದಲ್ಲಿಯೂ ಇಸ್ಲಾಮಾಬಾದ್‌ನ ಆಡಳಿತಗಾರರ ಪ್ರತಿ ನಿರ್ಧಾರಗಳೂ ಸೇನಾ ಕೇಂದ್ರ ಕಚೇರಿಯಲ್ಲಿ ಒಪ್ಪಿಗೆ ಪಡೆಯಬೇಕಿದೆ. ಹಾಗಿದ್ದರೆ ಮುಂದಿನ ದಿನಗಳು...?

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT