ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರು ಪ್ರೇಮಿಗಳು‌

Last Updated 7 ಮೇ 2014, 19:30 IST
ಅಕ್ಷರ ಗಾತ್ರ

ಅದೊಂದು ಹಳ್ಳಿ ಕಾಲೇಜು. ಆ ಕಾಲೇಜಿಗೆ ಬರುವ ಹೆಣ್ಣು ಮಕ್ಕಳಲ್ಲಿ ಚೆಲುವಾದ ಹುಡುಗಿಯೊಬ್ಬಳಿದ್ದಳು. ಅವಳು ಮನೆಯಿಂದ ಕತ್ತು ಬಗ್ಗಿಸಿ ಹೊರಟರೆ ಮತ್ತೆ ಕತ್ತು ಎತ್ತುವುದು ಕಾಲೇಜು ಸಿಕ್ಕ ಮೇಲೆಯೆ. ಅವಳು ಸಭ್ಯ ಹುಡುಗಿ. ಸದ್ಯ ಅವಳ ಹೆಸರನ್ನು ರಾಜೇಶ್ವರಿ ಅಂದುಕೊಳ್ಳೋಣ. ಈಗ ಅವಳನ್ನು ಮನದಲ್ಲೇ ಪ್ರೇಮಿಸುವ ಮೂವರು ಹುಡುಗರು ಆ ಹಳ್ಳಿಯಲ್ಲಿದ್ದಾರೆ. ಆ ಮೂವರೂ ಅವಳಿಗಾಗಿ ದಿನಾ ಕಾಯುತ್ತಾರೆ. ಅವಳ ಹಿಂದೆ ಹಿಂದೇಯೇ ಕಾಲೇಜಿನ ಗೇಟಿನ ತನಕ ಬಂದು ಬಿಟ್ಟು ಹೋಗುತ್ತಾರೆ. ಇದು ಅವರ ನಿತ್ಯದ ದಿನಚರಿ. ಇವರ ಈ  ಹಿಂಬಾಲಿಸುವ ಪ್ರೇಮ ಆ ಹುಡುಗಿಗೆ ಕೊಂಚವೂ ತಿಳಿದಿಲ್ಲ. ಇದು ಹೀಗೇ ಸಾಗುತ್ತಿತ್ತು.

ರಾಜೇಶ್ವರಿಗೆ ಏನಾದರೊಂದು ಅಮೋಘ ಸಹಾಯ ಮಾಡಿ ಅವಳ ಮನ ಗೆಲ್ಲುವ ಹೆಬ್ಬಯಕೆ ಆ ಮೂವರ ಮನದಲ್ಲಿ ಮೂಡಿ ಬಿಟ್ಟಿತ್ತು. ಅಂಥದ್ದೊಂದು ಸದವಕಾಶಕ್ಕಾಗಿ ಆ ಮೂವರೂ ಕಾಯುತ್ತಿದ್ದರು. ರಾಜೇಶ್ವರಿ ತಂದೆ ಆ ಊರಿನ ಒಬ್ಬ ರೈತ. ಆಕೆಯನ್ನು ಕಾಲೇಜಿಗೆ ಸೇರಿಸಿದವನು ಫೀಸನ್ನು ನಾಳೆ ಬಂದು ಕಟ್ಟುತ್ತೀನಿ ಎಂದು ಪ್ರಿನ್ಸಿಪಾಲರಿಗೆ ಸಾಲ ಹೇಳಿ ಹೋದವನು ಅದ್ಯಾಕೋ ಕಾಲೇಜಿನ ಕಡೆಗೇ ಬಂದಿರಲಿಲ್ಲ. ನಿಮ್ಮಪ್ಪನಿಗೆ ನಿನ್ನ ಫೀಸು ತಂದು ಕಟ್ಟಲು ಹೇಳು. ಇಲ್ಲ ನೀನಾದರೂ ಕೇಳಿ ಇಸ್ಕೊಂಡು ಬಾ ಎಂದು ಪ್ರಿನ್ಸಿಪಾಲರು ರಾಜೇಶ್ವರಿಗೆ ಕರೆದು ಹೇಳಿದ ವಿಷಯ ಅದು ಹೇಗೋ ಆ ಮೂವರಿಗೆ ತಿಳಿದು ಹೋಯಿತು. ಅವಳ ಮನಸ್ಸನ್ನು ಅಮೋಘ ಸಹಾಯ ಮಾಡುವ ಮೂಲಕ ಗೆಲ್ಲಲು ಹವಣಿಸುತ್ತಿದ್ದ ಈ ಮೂವರಿಗೆ ಇದೊಂದು ಛಾನ್ಸು ಸಿಕ್ಕೇ ಬಿಟ್ಟಿತು.

ಅದರಲ್ಲಿ ಒಬ್ಬನು ಮಾರನೆಯ ದಿನವೇ ಫೀಸಿನ ದುಡ್ಡನ್ನು ಜೋಡಿಸಿಕೊಂಡು ಪ್ರಿನ್ಸಿಪಾಲರ ಹತ್ತಿರ ಬಂದನು. ಅವರು ಏನಪ್ಪ ಎಂದು ವಿಚಾರಿಸಿದರು. ಅವರ ಕಿವಿಯ ಹತ್ತಿರ ಬಂದು ಪಿಸುಗುಟ್ಟಿದ ಅವನು ‘ಸಾರ್ ರಾಜೇಶ್ವರಿ ಫೀಸು ಕಟ್ಟಿಲ್ಲವಂತೆ ಹೌದಾ?’ಎಂದು ಕೇಳಿದನು. ಅವರು ‘ಹ್ಞೂ ಕಣಪ್ಪ ಅವಳಿನ್ನೂ ಫೀಸು ಕಟ್ಟಿಲ್ಲ. ನಾಳೆ ಬಂದು ಕಟ್ತೀನಿ ಅಂತ ಹೋದ ಅವರಪ್ಪ ತಿರುಗಿ ಯಾಕೋ ಬಂದಿಲ್ಲ’ ಎಂದವರೆ ತಲೆ ಎತ್ತಿ ‘ಆ ವಿಷಯ ನೀನ್ಯಾಕೆ ಕೇಳ್ತಿದ್ದೀಯಾ? ನಿನಗೂ ಅವಳ ಫೀಸಿಗೂ ಏನು ಸಂಬಂಧ’ ಎಂದು ಪೊಲೀಸ್ ಪ್ರಶ್ನೆ ಕೇಳಿದರು. ಅದಕ್ಕವನು ಸ್ವಲ್ಪವೂ ಅಂಜದೆ ‘ಅಂಥದ್ದೇನು ಇಲ್ಲಾ ಸಾರ್. ಅವಳ ಫೀಸನ್ನು ನಾನು ಕಟ್ಟಬೇಕು ಅಂತಿದ್ದೀನಿ. ಇದು ಭಾಳ ಸೀಕ್ರೇಟ್ ವಿಷಯ ನೀವು ಯಾರಿಗೂ ಹೇಳಬಾರದು. ನಾನು ಅವಳನ್ನ ಲವ್ವು ಮಾಡ್ತಿದ್ದೀನಿ ಸಾರ್’ ಎಂದು ನುಲಿಯುತ್ತಾ ಸಂಭ್ರಮದಿಂದ ಹೇಳಿದನು. ಈ ತರಹದ ನೂರಾರು ಪ್ರೇಮಿಗಳನ್ನು ಕಂಡಿದ್ದ  ಪ್ರಿನ್ಸಿಪಾಲರ ಮನಸ್ಸಲ್ಲಿ ನೂರಾರು ಹೂವುಗಳು ಅರಳಿದವು.

ಅದನ್ನು ಸ್ವಲ್ಪವೂ ತೋರಗೊಡದ ಪ್ರಿನ್ಸಿಪಾಲರು ಗತ್ತಾಗಿ ಕೂತು ‘ಅಪ್ಪನೇ ಫೀಸು ಕಟ್ಟಬೇಕು. ಪ್ರೇಮಿಗಳು ಕಟ್ಟಬಾರದು ಅಂತೇನೂ ನಮ್ಮಲ್ಲಿ ರೂಲ್ಸಿಲ್ಲ. ಯಾರು ಕಟ್ಟಿದರೂ ಫೀಸು ತಗೋತೀವಿ. ನಮಗೇನು ಅಂಥ ಅಭ್ಯಂತರ ಇಲ್ಲ. ಆದರೆ, ನೀನು ಫೀಸು ಕಟ್ಟಿದ್ದೀನಿ ಅಂತ ಹಕ್ಕುದಾರಿಕೆ ಮಾಡ್ಕೊಂಡು ಕಾಲೇಜಿನ ಹತ್ತಿರ ಬರೋದು, ಅವಳ ಮಾತಾಡಿಸೋದು, ಇದೆಲ್ಲಾ ಚಿಲ್ಲರೆ ಕೆಲಸ ಮಾಡೋ ಹಂಗಿಲ್ಲ. ಈ ಮಾತಿಗೆ ನಿನ್ನ  ಪೂರ್ತಿ ಒಪ್ಪಿಗೆ ಇದ್ದರೆ ಈಗಲೇ ಕಟ್ಟು ಫೀಸು’ ಎಂದರು. ‘ಎಷ್ಟು ಸಾರ್ ಫೀಸು’ಎಂದಾಗ, ಪ್ರಿನ್ಸಿಪಾಲರು ಐನೂರು ಎಂದರು. ಅವನು ದುಡ್ಡು ತೆಗೆದುಕೊಟ್ಟು ಥ್ಯಾಂಕ್ಯೂ ಸಾರ್ ಎಂದ. ಇವರು ‘ಇರ್ಲಿ ಬಿಡಪ್ಪ ಅದಕ್ಯಾಕೆ ಥ್ಯಾಂಕ್ಸ್’ ಎಂದು ಐನೂರನ್ನು ಜೇಬಿಗೆ ಆರಾಮಾಗಿ ಇಳಿಸಿಕೊಂಡರು. ಅವನು ಮತ್ತೆ ಮೆಲ್ಲಗೆ ‘ರಸೀತಿ ಸಾರ್’ ಎಂದ. ‘ಅದನ್ನ ರೂಲ್ಸ್ ಪ್ರಕಾರ ನಿನ್ನ ಕೈಲಿ ಕೊಡಕ್ಕಾಗಲ್ಲ. ರಾಜೇಶ್ವರಿಗೆ ಕೊಡ್ತೀನಿ ನೀನು ಹೋಗು’ ಎಂದು ಕಳಿಸಿಕೊಟ್ಟರು. ಪ್ರಿನ್ಸಿಪಾಲರಿಗೆ ಬಕರನೊಬ್ಬ ತಾನಾಗಿಯೇ ಬಂದು, ಗುಂಡಿಗೆ ಬಿದ್ದು, ದುಡ್ಡು ಕೊಟ್ಟು ಹೋಗಿದ್ದು ತಡೆದುಕೊಳ್ಳಲಾಗದ ಸಂತೋಷ ತರಿಸಿತ್ತು.

ಇದಾದ ಮಾರನೆಯ ದಿನ ಮತ್ತೊಬ್ಬ ಪ್ರೇಮಿಯೂ ಪ್ರಿನ್ಸಿಪಾಲರನ್ನು ಹುಡುಕಿಕೊಂಡು ಬಂದ. ಅವನೂ ರಾಜೇಶ್ವರಿಯ ಬಗ್ಗೆ ತನಗಿರುವ ಪ್ರೇಮದ ಕಾಳಜಿಯನ್ನು ಹೇಳಿ ದುಡ್ಡು ಕಕ್ಕಿದ. ಅದನ್ನೂ ಪ್ರಿನ್ಸಿಪಾಲರು  ಅನಾಮತ್ತಾಗಿ ಜೇಬಿಗೆ ಇಳಿಸಿಕೊಂಡರು. ‘ಇದನ್ನ ಯಾರಿಗೂ ಹೇಳಬೇಡಿ ಸಾರ್. ಭಾರಿ ಸೀಕ್ರೇಟು’ ಎಂದ. ಪ್ರಿನ್ಸಿಪಾಲರು ‘ಹಂಗೇ ಆಗಲಪ್ಪ. ಯಾರಿಗೆ ನಾನ್ಯಾಕೆ ಹೇಳಲಿ. ನೀನು ಮಾತ್ರ ಹುಶಾರು. ಅಪ್ಪಿತಪ್ಪಿ ಯಾರಿಗೂ ಹೇಳಕ್ಕೆ ಹೋಗಬೇಡ. ರಶೀದಿ ಅವಳ ಕಡೆ ಜಾಗ್ರತೆಯಿಂದ ಕೊಟರ್ತೀನಿ ಈಗ ನೀನು ಹೋಗು’ ಎಂದು  ತುಂಬು ಪ್ರೀತಿಯಿಂದ ಹೇಳಿ ಕಳಿಸಿದರು. ‘ಇಷ್ಟೊಳ್ಳೆ  ಪ್ರಿನ್ಸಿಪಾಲರು ಈ ಜಗತ್ತಿನಲ್ಲೇ ಇಲ್ಲ’ ಅಂತ ಖುಷಿಗೊಂಡ ಅವನೂ ಹೃದಯದಲ್ಲಿದ್ದ  ಹೂಗಳ ಇನ್ನಷ್ಟು ಅರಳಿಸಿಕೊಂಡು ಖುಷಿಯಿಂದ ಹೋದನು.

ಅವತ್ತಿನ ದಿನವೇ ಮಟಮಟ ಮಧ್ಯಾಹ್ನಕ್ಕೆ ಮೂರನೇ ಪ್ರೇಮಿಯೂ ಬಂದು ನಿಂತನು. ಅವನು ನಡೆದು ಬರುವ ಧಾಟಿಯಲ್ಲೇ ಎಲ್ಲಾ ಅರ್ಥ ಮಾಡಿಕೊಂಡ ಚಾಣಾಕ್ಷ  ಪ್ರಿನ್ಸಿಪಾಲರು ತಾವೇ ಮೊದಲು ‘ರಾಜೇಶ್ವರಿ ಫೀಸು ತಾನೆ. ಕಟ್ಟಿ ಹೋಗಪ್ಪ. ನಾನು ಯಾರಿಗೂ ಹೇಳಲ್ಲ’ ಎಂದು ಬಿಟ್ಟರು. ಈ ಮಾತಿಗೆ ಹೌಹಾರಿದ ಅವನು ‘ನಾನು ಈ ವಿಷಯಕ್ಕೇ ಬಂದಿದ್ದು ಅಂತ ನಿಮಗೆ ಮೊದಲೇ ಹೆಂಗೆ ಗೊತ್ತಾಯಿತು ಸಾರ್’ ಎಂದು ಗಾಬರಿಯಿಂದ ಕೇಳಿದನು.

ಅದಕ್ಕವರು ತಡವರಿಸದೆ ‘ಲೇ ಹುಚ್ಚ ಅಷ್ಟೂ ಗೊತ್ತಾಗಲ್ವೇನೋ? ಇಪ್ಪತ್ತು ವರ್ಷದಿಂದ ಈ ಹಳ್ಳೀಲಿ ಕೆಲಸ ಮಾಡ್ತಾ ಇದ್ದೀನಿ. ಯಾವ ಹುಡುಗ ಯಾವ ಹುಡುಗಿ ಬೆನ್ನು ಬಿದ್ದಾನಂತ ಒಂದು ಸೂಕ್ಷ್ಮದಲ್ಲೇ ಕಂಡು ಹಿಡೀತಿನಿ. ಅಷ್ಟು ಪರ್ಫೆಕ್ಟ್ ಮನುಷ್ಯ ನಾನು. ನೀನು ಆಕೀನ ಬೆನ್ನ ಹಿಡಿದು ಕಾಲೇಜಿನ ತಂಕ ಬಂದು ದಿನಾ ಡ್ರಾಪ್ ಕೊಡ್ತಿ ಹೌದಲ್ಲ. ಅದ ನಾನು ನೋಡೀನೋ ತಮ್ಮಾ. ರೂಲ್ಸ್ ಪ್ರಕಾರ ನೀನು ಹಂಗ ಮಾಡೋದು ತಪ್ಪಾದರೂ ಅದು ಕಾಲೇಜಿಂದ ಹೊರಗೆ ಬೀದೀಲಿ ನಡಿಯೋದ್ರಿಂದ ನಾನು ರೂಲ್ಸ್ ಪ್ರಕಾರ ಕೇಳೋಕೆ ಬರೋಂಗಿಲ್ಲ. ಒಂದು ಹುಡುಗೀಗೆ ಫೀಸು ಕಟ್ಟಿ ಓದಿಸೋದು ಪುಣ್ಯದ ಕೆಲಸ. ನೀನು ಅದನ್ನ ಮಾಡಕ್ಕ ಹೊಂಟಿ.  ನಾನ್ಯಾಕ ಬ್ಯಾಡ ಅನ್ನಲಿ. ನೀನು ಫೀಸು ರೊಕ್ಕ ಕೊಟ್ಟು ಹೋಗು. ನಾನೂ ಯಾರಿಗೂ ಹೇಳಲ್ಲ,  ನೀನೂ ಯಾರಿಗು ಹೇಳಬ್ಯಾಡ. ತಿಳೀತಿಲ್ಲೋ. ಫೀಸಿನ ರಶೀತಿನ ರೂಲ್ಸ್ ಪ್ರಕಾರ ಅವಳ ಕಡೇನೆ ಕೊಡ್ತೀನಿ. ನೀನು ಹೋಗು ಬಾ ತಮ್ಮ ದೇವರು ಒಳ್ಳೇದು ಮಾಡಲಿ’ ಅಂತ ಅವನಿಂದಲೂ ಐನೂರು ಕಿತ್ತುಕೊಂಡು ಓಡಿಸಿದರು. ಅವನೂ ‘ದೇವರಂಥ ಪ್ರಿನ್ಸಿಪಾಲರು’ ಎಂದು ಮನಸ್ಸಲ್ಲೇ ಗೌರವ ಸಲ್ಲಿಸಿಕೊಂಡು ಹೊರಟು ಹೋದನು.

ಆನಂತರ, ರಾಜೇಶ್ವರಿಯನ್ನು ಕರೆಸಿದ ಪ್ರಿನ್ಸಿಪಾಲರು ‘ನಿಮ್ಮಪ್ಪನಿಗೆ ನಾಳೇನೆ ಬಂದು ಫೀಸು ಕಟ್ಟಬೇಕಂತೆ ಅಂತ ಹೇಳು ತಂಗಿ. ಮತ್ತೆ ಮರೆತು ಬಿಟ್ಟೀಯಾ! ಹುಶಾರು. ಭಾಳ ಜರೂರು ಅಂತ ಹೇಳು’ ಎಂದು ಹೇಳಿ ಕಳಿಸಿದರು.  ಇದು ತಿಳಿದ ರಾಜೇಶ್ವರಿಯ ಅಪ್ಪ ಎದ್ದುಬಿದ್ದು ಓಡಿ ಬಂದು ಮಗಳ ಫೀಸು ಕಟ್ಟಿ ರಶೀದಿ ಪಡೆದುಕೊಂಡನು. ಇತ್ತ ಮೂರು ಪ್ರೇಮಿಗಳು ಒಂದು ದಿನ ಕೆರೆ ದಡದಲ್ಲಿ ಕೂತು ಹರಟೆ ಹೊಡೆಯುತ್ತಿದ್ದರು. ಮಾತು ಮಾತಲ್ಲಿ  ಪ್ರೀತಿ ಪ್ರೇಮದ ವಿಷಯ ತಾನಾಗಿಯೇ ಬಂದು ಬಿಟ್ಟಿತು. ಒಬ್ಬೊಬ್ಬರೂ ತಮ್ಮ ತಮ್ಮ ಮನಸ್ಸಿನ ಪ್ರೇಮಗಳ ಹೇಳಿಕೊಂಡು ಖುಷಿಪಟ್ಟರು. ಕೊನೆಯಲ್ಲಿ ರಾಜೇಶ್ವರಿಗೆ ಫೀಸನ್ನು ಕಟ್ಟಿದ ವಿಷಯವನ್ನು ಪರಸ್ಪರ ಮೂರು ಪ್ರೇಮಿಗಳೂ ಬಾಯಿ ಬಿಟ್ಟರು. ಮೂವರಿಗೂ ಆಘಾತ, ಆಶ್ಚರ್ಯಗಳು ಉಂಟಾಗಿ ಬಿಟ್ಟವು. ನಾನು ಕಟ್ಟಿದ್ದೇನೆ, ನಾನೂ ಕಟ್ಟಿದ್ದೇನೆ ಎಂದು ಮೂವರು ಪರಸ್ಪರ ಒದರಾಡಿಕೊಂಡರು. ತಾವು ಮೂವರೂ ಒಟ್ಟಾಗಿ ಮೂರ್ಖರಾಗಿರುವ ವಿಷಯ ಕೊನೆಯಲ್ಲಿ ಗಮನಕ್ಕೆ ಬಂದು ಅವರ ಹೃದಯಗಳು ಒಟ್ಟಿಗೆ ಢಂ ಎಂದು ಹೊಡೆದುಕೊಂಡವು. ಮೂವರೂ ಅಸಹಾಯಕರಾಗಿ ಕೈ ಕೈ ಹಿಸುಕಿಕೊಂಡರು. ‘ಐನಾತಿ ಪ್ರಿನ್ಸಿಪಾಲ ಮೂವರಿಗೂ ಸರಿಯಾಗಿ ಗೂಟ ಜಡಿದ ಕಣೋ’ ಎಂದು ಪರಸ್ಪರ ಹಲ್ಲು ಕಡಿದರು.

ಅವತ್ತಿನಿಂದ ಆ ಮೂವರಲ್ಲಿ ಯಾರ ಮುಖ ಊರಲ್ಲಿ ಕಂಡರೂ ಪ್ರಿನ್ಸಿಪಾಲರು ತಪ್ಪದೆ ನಮಸ್ಕಾರ ಮಾಡುತ್ತಾರೆ. ಅವರು ಬಾಯಿ ಬಿಡುವ ಮೊದಲೇ ಪ್ರಿನ್ಸಿಪಾಲರದು ಒಂದೇ ಉತ್ತರ ‘ನಾನು ಆ ವಿಷಯ ಯಾರಿಗೂ ಹೇಳಿಲ್ಲಪ್ಪ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT