ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಷ್ಟ್ರ ಚಾಕರಿ

Last Updated 25 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ನಾವು ಏಳನೇ ಕ್ಲಾಸಿನಲ್ಲಿ ಓದುವಾಗ ಕನ್ನಡಕ್ಕೆ ಕಟ್ಟುಮಸ್ತಾದ ಮೇಷ್ಟ್ರಿದ್ದರು. ಅವರನ್ನು ಗೌಡ್ರು ಎಂದು ಕರೆಯುತ್ತಿದ್ದೆವು. ನೋಡಲು ಸುರದ್ರೂಪಿ ಆಗಿದ್ದರು. ಅಪರೂಪಕ್ಕೆ ಸಿಟ್ಟು ಬಂದಾಗ ಹಿಡಿದು ಬಾರಿಸುತ್ತಿದ್ದರು. ಬೇರೆ ಸಮಯದಲ್ಲಿ ಅಷ್ಟೇ ಸಂಯಮದಿಂದ ಇರುತ್ತಿದ್ದರು. ಆದರೂ ಅವರನ್ನು ನೋಡಿದಾಗ ಒಂಥರ ಹೆದರಿಕೆ ಆಗುತ್ತಿತ್ತು. ಕನ್ನಡ ಪಾಠವನ್ನು ಚೆನ್ನಾಗಿ ಮಾಡುತ್ತಿದ್ದರು.

ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರ್ತಿಸಿ ಬೆನ್ನು ತಟ್ಟುತ್ತಿದ್ದರು. ಹಾಡು ಕಲಿಸುತ್ತಿದ್ದರು. ಜೊತೆಗೆ ಸಿ.ಆರ್. ಎಂಬ ಮೇಷ್ಟ್ರು ನಾಟಕ ಕಲಿಸಿ ಕೊಡುತ್ತಿದ್ದರು. ಕನ್ನಡ ಮೇಷ್ಟ್ರು ಪ್ರತಿ ಶನಿವಾರ ಕಿವಿ ಹಿಂಡಿ ಡ್ರಿಲ್ಲು ಮಾಡಿಸುತ್ತಿದ್ದರು. ಶನಿವಾರ ಮಾರ್ನಿಂಗ್ ಸ್ಕೂಲ್ ಬೇರೆ. ಹಳ್ಳಿ ಮನೆಗಳಲ್ಲಿ ಹಿಟ್ಟು ಹುಟ್ಟಿರುವುದಿಲ್ಲ. ಹೀಗಾಗಿ ನಾವೆಲ್ಲಾ ಉಪವಾಸದಲ್ಲೇ ಇರುತ್ತಿದ್ದೆವು.

ಕೆಲ ಸಿರಿವಂತರ ಮಕ್ಕಳು ‘ಬಿಸ್ಕತ್ತು ತಿಂದೆ, ಹಾಲು ಕುಡಿದು ಬಂದೆ’ ಎಂದು ನಮ್ಮೆದುರು ಅಪಶಕುನದ ಮಾತಾಡುತ್ತಿದ್ದವು. ಹತ್ತು ಗಂಟೆಯ ನೇರ ಮುದ್ದೆ ಊಟಕ್ಕೆ ನಿಗದಿಯಾಗಿದ್ದ ನನ್ನಂಥ ಕೆಲವರು ಪೆಚ್ಚು ಮುಖದಲ್ಲಿ ಇರುತ್ತಿದ್ದೆವು. ಖಾಲಿ ಹೊಟ್ಟೆಯಲ್ಲಿ ಡ್ರಿಲ್ಲು ಮಾಡುವುದು ತುಂಬಾ ಕಷ್ಟ ಎನಿಸುತ್ತಿತ್ತು. ಮೇಷ್ಟ್ರು ಮಾತ್ರ ಡ್ರಿಲ್ಲನ್ನು ಮಾಡಿಸದೇ ಬಿಡುತ್ತಿರಲಿಲ್ಲ. ಮನಸ್ಸಲ್ಲೇ ಮೇಷ್ಟ್ರಿಗೆ ಬೈದುಕೊಂಡು ಕಾಟಾಚಾರದ ಡ್ರಿಲ್ಲನ್ನು ಅಂತೂ ಮಾಡಿ ಮುಗಿಸುತ್ತಿದ್ದೆವು.

ಅದೇನು ದುರಾದೃಷ್ಟವೋ, ಶಾಪವೋ ಗೊತ್ತಿಲ್ಲ. ಆರನೇ ತರಗತಿ ತನಕ ನಾನು ಕಲಿತ ಎಲ್ಲಾ ಶಾಲೆಗಳು ಬಾಯ್ಸ್ ಸ್ಕೂಲ್‌ಗಳೇ ಆಗಿದ್ದವು. ಹೀಗಾಗಿ, ಹೆಣ್ಣು ಮಕ್ಕಳ ಜೊತೆ ಓದುವ ಸೌಭಾಗ್ಯ ನನಗೆ ಸಿಕ್ಕಿದ್ದೇ ಏಳನೇ ಕ್ಲಾಸಿಗೆ. ನಮ್ಮಪ್ಪ ನನ್ನ ಮೇಲೆ ಯಾಕಿಂಥ ಪಿತೂರಿ ಮಾಡಿದರು ಎಂಬುದು ನನಗಿನ್ನೂ ಅರ್ಥವಾಗಿಲ್ಲ. ಅಲ್ಲೀ ತನಕ ಒರಟೊರಟಾಗಿ, ಟಾರ್ಜನ್‌ಗಳ ಥರ ಇದ್ದ ನನ್ನಂಥ ಅನೇಕರು ಇಲ್ಲಿ ಹೆಣ್ಣು ಮಕ್ಕಳ ಮುಖದರ್ಶನ ಸಿಕ್ಕ ಮೇಲೆ ಒಂದು ಸಣ್ಣ ಶಿಸ್ತಿಗೆ ಬಂದೆವು. ಹುಡುಗಿಯರು ಎದುರಿಗಿದ್ದಾಗ ಬೇಕಾಗುವ ಕೆಲ ನಯ, ನಾಜೂಕು, ನಾಚಿಕೆ, ಮಾನ, ಮರ್ಯಾದೆಗಳನ್ನು ಕಲಿತೆವು.

ಆದರೇನು ಮಾಡುವುದು, ನಾವು ಹಾಕುತ್ತಿದ್ದ ಅರೆಚಡ್ಡಿಗಳೇ ನಮಗೆ ತಲೆಬಿಸಿಯಾಗಿದ್ದವು. ತಿಂದುಂಡು ಬೆಳೆದ ಹಾಳು ನಗ್ನ ತೊಡೆಗಳು ಎದ್ದು ಕಾಣುತ್ತಿದ್ದವು. ಹುಡುಗಿಯರು ಇವುಗಳ ಕಡೆ ಕಣ್ಣು ಹಾಯಿಸದಂತೆ ನೋಡಿಕೊಳ್ಳುವುದು ನಮಗೊಂದು ಸವಾಲಾಗಿತ್ತು. ಅವರು ನೋಡುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೂ ಶಾಲೆಯಲ್ಲಿ ಕೂತಾಗ ಬೋಳು ತೊಡೆಗಳ ನೋಡಿಯೇ ಬಿಡುತ್ತಾರೆ ಎಂಬ ಸಂಕೋಚ ನಮ್ಮದು. ಅವೇನು ಅವರು ನೋಡಿ ಸಂತೋಷ ಪಡುವಷ್ಟು ಸುಂದರ ವಸ್ತುಗಳಲ್ಲದೇ ಹೋದರೂ ಆ ಸುಡುಗಾಡು ವಯಸ್ಸಿನಲ್ಲಿ ಏನೋ ಹಾಗನ್ನಿಸುತ್ತಿತ್ತು.

ಹುಡುಗಿಯರು ನಮ್ಮ ಕಾಲುಗಳನ್ನು ನೋಡಿ ಕಿಸಕ್ಕಂತ ನಗ್ತಾರೆ. ಪ್ಯಾಂಟು ಹೊಲಿಸಿ ಎಂದು ಮನೆಯಲ್ಲಿ ರಚ್ಚೆ ಹಿಡಿದೆವು. ಮನೆಯವರಿಗೆ ನಮ್ಮ ಸಂಕಟಗಳು ತಮಾಷೆ ಮಾತುಗಳಂತೆ ಕಂಡವು. ‘ಪ್ಯಾಂಟು ಹಾಕೋವಷ್ಟು ನೀವಿನ್ನೂ ದೊಡ್ಡವರಾಗಿಲ್ಲ. ಹೋಗ್ರಲೇ ಮುಚ್ಕೊಂಡು’ ಎಂದವರು ಉಡಾಫೆ ಉತ್ತರ ಕೊಟ್ಟರು. ಮನೆಯವರ ಪ್ರಕಾರ ನಾವಿನ್ನೂ ಬೆಳೆದಿರಲಿಲ್ಲ. ಆದರೆ, ಕಿರು ನಗೆಯ ಹುಡುಗಿಯರ ಪ್ರಕಾರ ನಾವಾಗಲೇ ಮೆಜಾರಿಟಿಗೆ ಬಂದು ಬಿಟ್ಟಿದ್ದೆವು.

ನಾವು ಹುಡುಗರು. ನಮ್ಮೊಳಗೆ ಏನೋ ಬದಲಾವಣೆ ಆಗ್ತಾ ಇದೆ. ನಮ್ಮ ನಡತೆ, ಸ್ಟೈಲುಗಳು ಬದಲಾಗುತ್ತಿವೆ. ನಾಚಿಕೆ, ಕಸಿವಿಸಿ, ಪ್ರೀತಿ, ಮುಜುಗರ ಏನೇನೋ ಆಗ್ತಾ ಇದ್ದಾವೆ. ಅಂದ ಮೇಲೆ ನಮಗೆ ಪ್ರೀತಿಯ ಎಳೆ ಸೆಲೆ ನಮ್ಮೆದೆಯೊಳಗೆ ಮೂಡುತ್ತಿದೆ. ಪ್ರಕೃತಿಯಲ್ಲಿ ನಾವು ಬದಲಾಗುತ್ತಿದ್ದೇವೆ. ಏನೋ ಅರ್ಥವಾಗದ ಹೊಸ ಪಾಠವೊಂದನ್ನು ಕಲಿಯುತ್ತಿದ್ದೇವೆ. ಅಂದ ಮೇಲೆ ನಮ್ಮ ಶಾಲೆಯ ಹುಡುಗಿಯರೂ ನಮ್ಮ ಪ್ರೀತಿ ಪ್ರೇಮದ ಮೊದಲ ಗುರುಗಳಾದರಲ್ಲ. ಸದ್ಯ ಗುರು ಕಾಣಿಕೆ ಕೇಳಲಿಲ್ಲ.

ಬಾಯ್ಸ್ ಶಾಲೆಯಿಂದ ಬಂದ ನಮ್ಮನ್ನವರು ಬದಲಾಯಿಸಿ ಬಿಟ್ಟರು. ಪ್ಯಾಂಟು ಹಾಕಿಕೊಂಡು ಮೈ ಮುಚ್ಚಿಕೊಳ್ಳಬೇಕೆಂಬ ನದರು ಬಂದಿದ್ದೇ ಇವರಿಂದ. ನಮ್ಮ ಪ್ಯಾಂಟಿನ ವಿಷಯವನ್ನು ಅಲ್ಲಿಗೇ ಕೈಬಿಟ್ಟ ನಾವು ಇದ್ದ ನಿಕ್ಕರುಗಳನ್ನೇ ಭದ್ರವಾಗಿ ಕಟ್ಟಿಕೊಳ್ಳುವತ್ತ ಗಮನ ಹರಿಸಿದೆವು. ನಮ್ಮ ಒರಟುತನದ ದೆಸೆಯಿಂದ ಅವು ಆಯಕಟ್ಟಿನ ಜಾಗಗಳಲ್ಲೇ ಹರಿದು ಹೋಗಿರುತ್ತಿದ್ದವು. ಆ ಸ್ಥಳಗಳು ಯಾರ ಕಣ್ಣಿಗೂ ಬೀಳದಂತೆ ಜಾಗ್ರತೆ ವಹಿಸಬೇಕಿತ್ತು. ಈ ವಿಷಯದಲ್ಲಿ ನಮ್ಮ ಬಟ್ಟೆ ಕೈಚೀಲಗಳು ಉಪಯೋಗಕ್ಕೆ ಬರುತ್ತಿದ್ದವು.

ಮನೆಯಲ್ಲಿ ಅಳತೆಗೂ ಮೀರಿ ಹೊಲಿಸುತ್ತಿದ್ದ ದೊಗಳೆ ಶರ್ಟುಗಳು ಒಂದು ಕಡೆ ಕಾಣುವ ಮಾನ ತೆಗೆದು ಮತ್ತೊಂದು ಕಡೆ ಕಾಣದ ಮರ್ಯಾದೆ ಉಳಿಸುತ್ತಿದ್ದವು. ಇನ್ನು ನಮ್ಮ ಕನ್ನಡ ಮೇಷ್ಟ್ರು ಗೌಡ್ರು, ಹುಡುಗರಾದ ನಾವು ಏನಾದರೂ ತಪ್ಪು ಮಾಡಿದಾಗ ಹುಡುಗಿಯರ ಕೈಯಿಂದ ಕೋಲಲ್ಲಿ ಹೊಡೆಸುತ್ತಿದ್ದರು. ಹುಡುಗಿಯರ ಕೈಯಿಂದ ಹೊಡೆತ ತಿಂದು ಇವಕ್ಕೆ ಒಂದಿಷ್ಟು ಅವಮಾನವಾಗಲಿ, ಆ ಅಪಮಾನದಿಂದಾದರೂ ಈ ಬಡ್ಡೀಮಕ್ಕಳು ಸುಧಾರಿಸಲಿ ಎಂಬ ಸದುದ್ದೇಶವನ್ನು ಅವರಿಟ್ಟುಕೊಂಡಿದ್ದರು. ಆದರೆ ಹಡಬೆಗಳಾದ ನಾವು ಹುಡುಗಿಯರ ಕೈಯ ಆ ಹೊಡೆತಗಳನ್ನು ಖುಷಿಯಿಂದ ಎಂಜಾಯ್ ಮಾಡತೊಡಗಿದೆವು.

ಇವತ್ತು ‘ನಂಗೆ ಪೂರ್ಣಿಮಾ ಹೊಡೆದಳು ನನ್ನ ಜನ್ಮ ಸಾರ್ಥಕವಾಯಿತು’ ಎಂದು ನಾನೆಂದರೆ, ‘ನನಗೆ ಲತಾ ಹೊಡೆದಳು ನಾನೆಷ್ಟು ಪುಣ್ಯವಂತ’ ಎಂದು ಫಯಾಜ್ ಸಂಭ್ರಮ ಪಡುತ್ತಿದ್ದ. ಫಾತಿಮಾ ಕೈಯಲ್ಲಿ ಹೊಡೆಸಿಕೊಂಡ ಗುರುಮೂರ್ತಿ ಪ್ರೇಮಲೋಕಕ್ಕೇ ಹೋಗುತ್ತಿದ್ದ. ಇದಾದ ಮೇಲೆ ಹುಡುಗಿಯರು ನಮ್ಮ ಮೂಗು ಹಿಡಿದು ಕಪಾಳಕ್ಕೆ ಹೊಡೆಯಬೇಕಿತ್ತು. ಇದು ಭಾರಿ ಅವಮಾನ ಅತ್ಯುನ್ನತ ಶಿಕ್ಷೆ ಎಂದೇ ಗೌಡರು ಭಾವಿಸಿದ್ದರು. ನಮಗೆ ಇದು ಅವಮಾನಕ್ಕಿಂತ ಸನ್ಮಾನದಂತೆ ಕಾಣತೊಡಗಿತು.

ದೂರದಿಂದ ಮಾತ್ರ ನೋಡಿ ಸುಖಪಡುತ್ತಿದ್ದ ಹುಡುಗಿಯರೇ ತಾವಾಗಿ ಹತ್ತಿರ ಬಂದು ನಿಲ್ಲುವುದು ಎಂದರೇನು? ಮುಟ್ಟುವುದೆಂದರೇನು? ಇದಕ್ಕಿಂತ ಸೌಭಾಗ್ಯ ಇನ್ನೇನಿದೆ ಎಂದು ಖುಷಿಯಿಂದ ರೆಡಿಯಾಗಿ ಬಿಟ್ಟೆವು. ಆಹಾ... ಇಂಥ ಮಧುರ ಶಿಕ್ಷೆಯನ್ನು ಬಿಟ್ಟು ಕೆಟ್ಟವರುಂಟೆ? ಆದರೆ ಹಾಳು ಹುಡುಗಿಯರೇ ನಮ್ಮ ಸುಂದರ ಮೂಗುಗಳ ಹಿಡಿದು ಬಡಿಯಲು ಅದೇಕೋ ಹಿಂದೇಟು ಹಾಕಿಬಿಟ್ಟರು. ಈ ಅತಿಮಧುರ ಶಿಕ್ಷೆ ತಪ್ಪಿಸಿದ್ದು ಸಂದೀಪನ ಮೂಗು ಎಂಬುದು ನಮಗೆ ಆಮೇಲೆ ತಿಳಿಯಿತು.

ಅದನ್ನು ಆ ಸೃಷ್ಟಿಕರ್ತನೂ ಮುಟ್ಟಲು ಹೇಸುತ್ತಿದ್ದ. ಅಷ್ಟೇ ಏಕೆ ಸ್ವಯಂ ಸಂದೀಪನೇ ಮುಟ್ಟಿಕೊಳ್ಳಲು ಹೆದರುತ್ತಿದ್ದ. ಅದು ಆ ಪರಿಯಿತ್ತು. ಅವನ ಮೂಗು ಮುಟ್ಟಿದರೆ ಸಾಕು ಅದು ಫಳಫಳ ಸೋರುತ್ತಿತ್ತು. ಅಕಸ್ಮಾತ್ ಏನಾದರೂ ಹಿಡಿದು ಹಿಂಡಿ ಬಿಟ್ಟರೆ ಕಳ್ಳಿ ಹಾಲಿನಂತೆ ಎರಡು ಮೆತ್ತನೆಯ ಸೊಡಿಲುಗಳು ಇಳಿಯುತ್ತಿದ್ದವು. ಈ ಘನಘೋರ ಅಸಹ್ಯವ ಕಂಡು ಬೆಚ್ಚಿಬಿದ್ದ ಹುಡುಗಿಯರು ಮೂಗು ಹಿಡಿದು ಕೆನ್ನೆಗೆ ಹೊಡೆಯುವ ಕೆಲಸಕ್ಕೆ ವಿದಾಯ ಹೇಳತೊಡಗಿದರು. ಹೀಗಾಗಿ, ಗೌಡರು ಈ ಸುಂದರ ಸುಖದ ಶಿಕ್ಷಾ ಪದ್ಧತಿಯನ್ನೇ ನಿಲ್ಲಿಸಿ ಬಿಟ್ಟರು.

ಹುಡುಗಿಯರೂ ನಮ್ಮ ಅಸಹ್ಯದ ಮೂಗುಗಳನ್ನು ಮುಟ್ಟುವ ಪಾಪದ ಕೆಲಸದಿಂದ ಮುಕ್ತರಾದರು. ಈ ಪದ್ಧತಿ ಹೀಗೆ ಅಚಾನಕ್ಕಾಗಿ ಖೈದಾಗಿದ್ದು ನಮ್ಮ ಮನಸ್ಸಿಗೆ ಬೇಸರ ತಂದಿತು. ನಮಗೆ ಅವಮಾನವಾಗಲಿ ಎಂದು ಶುರುವಾಡಿದ ಈ ಹೊಸ ಶಿಕ್ಷೆ ಹೀಗೆ ದುರಂತದಲ್ಲಿ ಸಮಾಪ್ತಿಯಾಗುತ್ತದೆ ಎಂದು ಗೌಡರು ಕನಸು ಮನಸ್ಸಿನಲ್ಲಿಯೂ ಊಹಿಸಿರಲಿಲ್ಲವೇನೋ?  ಆಗ ನಾನು ನನ್ನ ಸಣ್ಣಕ್ಕನ ಮನೆಯಲ್ಲಿ ಓದುತ್ತಿದ್ದೆ. ನಮ್ಮ ಮೇಷ್ಟ್ರುಗಳು ಆಗಾಗ ಕರೆದು ಏನಾದರೊಂದು ಕೆಲಸ ಹೇಳುತ್ತಿದ್ದರು.

ಅವರು ಹೀಗೆ ಕೆಲಸ ಹೇಳುವುದು ನಮಗೆ ಖುಷಿ ಎನಿಸುತ್ತಿತ್ತು. ಬೋರು ಹೊಡೆಸುವ ತರಗತಿಗಳ ನಡುವೆ ಹೊರಗೆ ಹೋಗಿ ಬರುವ ಚಿಲ್ಲರೆ ಕೆಲಸ ಸಿಕ್ಕರೆ ಸಖತ್ ಹಿತ ಎನಿಸುತ್ತಿತ್ತು. ತಾ ಮುಂದು ನಾ ಮುಂದು ಎಂದು ಮೇಷ್ಟ್ರುಗಳು ಕರೆದಾಗ ತರಗತಿಯಿಂದ ಎದ್ದು ಓಟ ಕೀಳಲು ಕಾಯುತ್ತಿದ್ದೆವು. ನಮ್ಮ ಗೌಡರಿಗೆ ಹುಡುಗರಿಗೆ ಕರೆದು ಕೆಲಸ ಹೇಳುವ ಅಭ್ಯಾಸ ತುಸು ಹೆಚ್ಚೇ ಇತ್ತು. ಅದು ಶಾಲೆಯ ಕೆಲಸವಾಗಿರುತ್ತಿದ್ದರೆ ಪರ್ವಾಗಿರಲಿಲ್ಲ. ಆದರವರು ಕರೆದು ಸೂಚಿಸುವ ಕೆಲಸಗಳೆಲ್ಲಾ ಅವರ ಮನೆಗೆ ಸಂಬಂಧ ಪಟ್ಟಿರುತ್ತಿದ್ದವು.

ಅವರೊಂದು ದಿನ ನಮ್ಮನ್ನು ಕರೆದು ಮನೆಗೆ ಹೋಗಿ ಒಂದಿಷ್ಟು ನೀರ್ ತುಂಬ್ಸಿ ಎಂದರು. ನಾವೊಂದಿಷ್ಟು ಹುಡುಗರು ಅಷ್ಟು ಹೇಳಿದ್ದೇ ಸಾಕೆಂದು ಕೇಕೆ ಹಾಕಿಕೊಂಡು ಓಡೋಡಿ ಹೋದೆವು. ದೂರದ ಬೋರ್‌ವೆಲ್‌ನಿಂದ ನೀರು ತಂದು ಅವರ ಮನೆಯ ರಾಕ್ಷಸ ಗಾತ್ರದ ತೊಟ್ಟಿಯನ್ನು ತುಂಬಿಸಿದೆವು. ಅಷ್ಟರಲ್ಲೇ ಮೇಷ್ಟರ ಹೆಂಡತಿ ಮತ್ತೊಂದಿಷ್ಟು ಕೆಲಸ ಹೇಳಿದರು. ಅದನ್ನೂ ಪೂರೈಸಿದೆವು. ಉಳಿದ ಪಳಿದ ತಿಂಡಿ ತೀರ್ಥ ಏನಾದರೂ ನಮ್ಮ ಕಡೆ ಬಿಸಾಕಬಹುದಾ ಎಂದು ಮೇಷ್ಟರ ಹೆಂಡತಿ ಕೈಬಾಯಿ ನೋಡಿದೆವು. ಆ ತಾಯಿ ಜಪ್ಪಯ್ಯ ಅನ್ನದಿದ್ದಾಗ ಮತ್ತೆ ಶಾಲೆಗೆ ಓಟ ಕಿತ್ತೆವು.

ಇಷ್ಟು ಸಂಗತಿಗಳನ್ನೆಲ್ಲಾ ಅದೇ ಬೀದಿಯಲ್ಲಿ ವಾಸವಿದ್ದ ನನ್ನ ಅಕ್ಕ ನೋಡಿಬಿಟ್ಟಳು. ಆ ಗೌಡರ ಹೆಂಡತಿಗೂ ನನ್ನಕ್ಕನಿಗೂ ಅಷ್ಟಕ್ಕಷ್ಟೆ ಇತ್ತಂತೆ. ಅದು ನನಗೆ ಗೊತ್ತಿಲ್ಲದ ವಿಷಯ. ಅಕ್ಕ ಕರೆದು ನೋಡು ನಿಮ್ ಮೇಷ್ಟ್ರು ಸ್ಕೂಲಿನ ಕೆಲ್ಸ ಏನ್ ಹೇಳಿದ್ರು ಮಾಡು. ನಾನದನ್ನ ಬ್ಯಾಡ ಅನ್ನಲ್ಲ. ಆದ್ರೆ ನಮ್ಮ ಮನೆ ಅನ್ನ ತಿಂದು ನೀನ್ ಅವರ ಮನೆ ಚಾಕರಿ ಮಾಡೋದು ನನಗಿಷ್ಟವಾಗಲ್ಲ. ಮೇಷ್ಟ್ರು ಏನಾನ ಇನ್ಮುಂದೆ ಮನೆಕೆಲಸ ಹೇಳಿದರೆ ನಮ್ಮಕ್ಕ ಬೈತಾಳೆ ಸಾರ್ ಆಗಲ್ಲ ಅನ್ನು. ಅವನ್ಹೆಂಡ್ತಿಗೇನು ದಾಡಿ ಬಂದಿದೆ.

ಅವರವರ ಮನೆ ಕೆಲ್ಸ ಅವರೇ ಮಾಡ್ಕೋಬೇಕು. ಬಡವರ ಮಕ್ಕಳು ಸಿಕ್ಕಿದ್ದಾರೆ ಅಂತ ದುಡಿಸ್ಕೋತಾ ಇದ್ದಾರಲ್ಲಾ. ಅವರಿಗೇನ್ ಹೇಳೋರು ಕೇಳೋರು ಯಾರೂ ಇಲ್ವಾ? ಎಂದು ಹೇಳಿದಳು. ಬೇಕಾದ್ರೆ ನಿಮ್ ಹೆಡ್‌ಮಾಸ್ಟ್ರಿಗೆ ನಾನೇ ಬಂದು ಕೇಳ್ತೀನಿ. ಹಿಂಗೆಲ್ಲಾ ಬಿಟ್ಟಿ ಚಾಕ್ರಿ ಮಾಡಿಸ್ಕೊಳ್ಳೋದು ಸರಿನಾ ಸರ್ ಅಂತನೂ ಜೋರು ಮಾಡಿದಳು. ನಾನು ಅದೆಲ್ಲಾ ಮಾಡಬೇಡ ಅಕ್ಕ. ಶಾಲೆಯಲ್ಲಿ ನನ್ನ ಮರ್ಯಾದೆ ಹೋಗುತ್ತೆ. ನಾನೇ ಹೇಳ್ತೀನಿ ಎಂದು ಸಮಾಧಾನ ಹೇಳಿದೆ.

ಆ ಗೌಡರ ಹೆಂಡತಿಗೂ ನನ್ನ ಅಕ್ಕನಿಗೂ ಒಮ್ಮೆ ಅದೇನೋ ಮಾತಿಗೆ ಜಗಳವಾಗಿತ್ತಂತೆ. ಈ ಹಳೆಯ ದ್ವೇಷ ಹೊಗೆಯಾಡುತ್ತಿದ್ದರಿಂದ ಅವಳು ಮತ್ತಷ್ಟು ಖಾರವಾಗಿದ್ದಳು. ಇದು ತಮ್ಮನ ಮೇಲಿರುವ ಕಾಳಜಿಯಿಂದ ಹೇಳಿದ್ದಲ್ಲ, ಗೌಡರ ಹೆಂಡತಿ ಮೇಲಿನ ಸಿಟ್ಟಿನಿಂದ ಎನ್ನುವುದು ನನಗೂ ಚೆನ್ನಾಗಿ ಗೊತ್ತಿತ್ತು. ಯಾಕೆಂದರೆ ಅಕ್ಕ ತನ್ನ ಮನೆಯಲ್ಲಿ ಇಪ್ಪತ್ತು ಕತ್ತೆಗಳಿಗೆ ಕೊಟ್ಟಷ್ಟು ಕೆಲಸವನ್ನು ನನಗೆ ಕೊಡುತ್ತಿದ್ದಳು.

ಅಕ್ಕ ಹೇಳಿದ ಯಾವ ಸಂಗತಿಯನ್ನೂ ನಾನು ಗೌಡರಿಗಾಗಲಿ, ಹೆಡ್‌ಮೇಷ್ಟ್ರಿಗಾಗಲಿ ಹೇಳಲು ಹೋಗಲಿಲ್ಲ. ಇದಾದ ಐದು ತಿಂಗಳ ನಂತರ ನಮ್ಮ ಮೇಷ್ಟ್ರು ನನಗೆ ಮತ್ತೊಮ್ಮೆ ಮಹತ್ವದ ಕೆಲಸ ಹೇಳಿದರು. ಹೆರಿಗೆಗೆಂದು ತವರಿಗೆ ಹೋಗಿದ್ದ ಅವರ ಹೆಂಡತಿ ತೊಟ್ಟಿಲು ಮತ್ತು ಮಗು ಸಮೇತ ರೈಲಿಗೆ ಬರುವವರಿದ್ದರು. ನಮ್ಮ ಶಾಲೆಯಿದ್ದ ಹಳ್ಳಿಯಿಂದ ರೈಲು ನಿಲ್ದಾಣ ಒಂದೆರಡು ಮೈಲು ದೂರದಲ್ಲಿತ್ತು. ಅಲ್ಲಿಗೆ ಹೋಗಿ ಲಗೇಜ್ ಹೊತ್ಕೊಂಡು ಬನ್ನಿ ಎಂದು ನನ್ನ ಜೊತೆ ಒಂದಿಬ್ಬರು ಕಟ್ಟಾಳುಗಳನ್ನು ಕಳಿಸಿದರು. ನಾವು ಯಥಾ ಪ್ರಕಾರ ಸಂತಸದಿಂದ ಕುಣಿಕುಣಿದುಕೊಂಡು ರೈಲ್ವೆ ಸ್ಟೇಷನ್‌ಗೆ ಹೋದೆವು.

ಅವರ ಲಗೇಜ್ ಹೊತ್ಕೊಂಡು ಹಮಾಲಿಯಂತೆ ಬರುವುದನ್ನು ಮತ್ತೆ ನಮ್ಮಕ್ಕ ನೋಡಿ ಬಿಟ್ಟಳು. ಅವಳ ಮೈ ಉರಿದು ಹೋಯಿತು. ಬಂದವಳೇ ಬ್ಯಾಗುಗಳನ್ನು ಕೆಳಗೆ ಬಿಸಾಡು, ನೀನು ಕೂಲಿ ಆಳಲ್ಲ ಎಂದು ಅಬ್ಬರಿಸಿದಳು. ನಾನು ಲಗೇಜ್ ಇಟ್ಟು ಶಾಲೆಗೆ ಓಡಿ ಹೋಗಿ ಬಿಟ್ಟೆ. ಅಲ್ಲಿ ಗೌಡರ ಹೆಂಡತಿಗೂ ನನ್ನ ಅಕ್ಕನಿಗೂ ದ್ವಂದ್ವ ಯುದ್ಧವೇ ನಡೆಯಿತಂತೆ. ಜಗಳದಲ್ಲಿ ಎತ್ತಿದ ಕೈಯಾದ ನಮ್ಮಕ್ಕ ಮೇಷ್ಟ್ರ ಕುಟುಂಬದವರ ಚಳಿಜ್ವರ ಬಿಡಿಸಿದ್ದಳು. ಈ ರಾದ್ಧಾಂತದ ವಿಷಯ ಗೌಡರಿಗೆ ಗೊತ್ತಾಗಿ ಹೋಯಿತು.

ಆಗವರು ನನ್ನ ಕರೆದು ನಿಮ್ಮಕ್ಕನ ಸವಾಸ ಅಲ್ಲಪ್ಪ. ಇನ್ಮೇಲೆ ನಿನಗೆ ಯಾವುದೇ ಕೆಲ್ಸ ಹೇಳಲ್ಲ. ನೀನು ದೊಡ್ಡಮನುಷ್ಯ ಕಣಪ್ಪ. ನನ್ನ ಕ್ಷಮಿಸಿಬಿಡು ಎಂದು ಧೀನರಾಗಿ ಹೇಳಿದರು. ಗುರುಗಳ ಸೇವೆ ಮಾಡುವ ಅವಕಾಶವನ್ನು ತಪ್ಪಿಸಿದ ನನ್ನ ಅಕ್ಕನ ಮೇಲೆ ಆಗ ಸಖತ್ ಸಿಟ್ಟು ಬಂತು. ನನ್ನ ಅಕ್ಕನ ತಾರಾಮಾರಿ ಜಗಳದ ದೆಸೆಯಿಂದ, ಮೇಷ್ಟ್ರು ಮನೆಗೆ ಆಗಾಗ ಪಾತ್ರೆ ತೊಳೆಯಲು ಬರುತ್ತಿದ್ದ ಕೆಲ ಹುಡುಗಿಯರ ಕೆಲಸವೂ ನಿಂತು ಹೋಯಿತು. ನಾವೆಲ್ಲಾ ಶಾಲೆ ಬಿಟ್ಟು ಸಂಭ್ರಮದಿಂದ ಕಾಲ ಕಳೆಯುತಿದ್ದ ಒಂದು ಅವಕಾಶವನ್ನು ನಮ್ಮಕ್ಕ ಕಳೆದು ಹಾಕಿದ್ದಳು. ಅಕ್ಕ ಆಗ ಮಾಡಿದ್ದು ಸರಿಯಲ್ಲ ಅನ್ನಿಸಿತ್ತು. ಈಗ ಅವಳು ಹೇಳಿದ್ದು ಸರಿ ಅನ್ನಿಸುತ್ತಿದೆ.

ಗುರುಗಳು ಏನು ಕೆಲಸ ಹೇಳಿದರೂ ಅದನ್ನು ಒಂದು ವರಪ್ರಸಾದ ಎಂದು ಭಾವಿಸುತ್ತಿದ್ದ ದಿನಗಳು ಈಗಿಲ್ಲ. ಅಂಥ ಮೇಷ್ಟ್ರುಗಳೂ ಈಗಿಲ್ಲ. ಶಿಷ್ಯರನ್ನು ಸ್ವಂತ ಕೆಲಸಗಳಿಗೆ ಪುಕ್ಕಟೆಯಾಗಿ ಉಪಯೋಗಿಸಿಕೊಳ್ಳುವ ಅನೇಕ ಅಧ್ಯಾಪಕರು ಇಂದೂ ಇದ್ದಾರೆ. ಶಿಷ್ಯರ ಮುಗ್ಧತೆ, ಭಯ ಭಕ್ತಿಗಳನ್ನು ದುರುಪಯೋಗ ಪಡಿಸಿಕೊಳ್ಳುವುದು ಕೆಲ ಮೇಷ್ಟ್ರುಗಳಿರುವ ಒಂದು ರೋಗ. ಇದರ ಬಗ್ಗೆ ಬರೆಯುತ್ತಾ ಹೋದರೆ ಅದೇ ಒಂದು ಪುರಾಣವಾಗುವಷ್ಟು ಸಂಗತಿಗಳಿದ್ದಾವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT