ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈ ಲಾರ್ಡ್ಸ್! ಸತ್ಯ ಇಷ್ಟೇನಾ?

Last Updated 15 ಜನವರಿ 2018, 19:30 IST
ಅಕ್ಷರ ಗಾತ್ರ

ಈ ದೇಶದಲ್ಲಿ ಕೊನೆಗೆ ಇದನ್ನೂ ನೋಡಬೇಕಾಯಿತು. ಸಮಸ್ತ ಜಗಳಗಳ ನ್ಯಾಯಾನ್ಯಾಯ ನಿರ್ಣಯಿಸುವ ಭಾರತದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಜಗಳವಾಡುವುದನ್ನು ನೋಡಬೇಕಾಯಿತು. ಆ ಜಗಳ ಅಕ್ಷರಶಃ ಬೀದಿಗೆ ಬಂದದ್ದನ್ನು ನೋಡಬೇಕಾಯಿತು. ಕಾಣಲು ಇನ್ನೇನು ಉಳಿದಿದೆ? ಪ್ರಜಾಸತ್ತೆಯ ವೇದಿಕೆಯಲ್ಲಿ ಇದಕ್ಕಿಂತ ದೊಡ್ಡ ದುರಂತ ನಾಟಕವೊಂದನ್ನು ಊಹಿಸಲೂ ಸಾಧ್ಯವಿಲ್ಲ. ಒಂದು ವೇಳೆ ಸ್ವತಃ ಸೇನಾ ಪಡೆಗಳೇ ದಂಗೆ ಎದ್ದಿದ್ದರೂ ಅದು ಇಷ್ಟೊಂದು ಗಂಭೀರ ವಿಚಾರವಾಗುತ್ತಿರಲಿಲ್ಲ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ನಾಲ್ಕು ಜನ ಹಿರಿಯ ನ್ಯಾಯಮೂರ್ತಿಗಳು ಬಂಡೆದ್ದದ್ದು ಮತ್ತು ಆ ಬಂಡಾಯ ಎತ್ತಿದ ಗಂಭೀರ ಪ್ರಶ್ನೆಗಳೆಲ್ಲಾ ಹಾಗೆಯೇ ಉಳಿದು ಪ್ರಕರಣ ‘ತಣ್ಣಗಾದದ್ದು’ ನೋಡಿದರೆ ಹಿಂದೊಮ್ಮೆ ಬ್ರಿಟಿಷ್ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಭಾರತದ ಭವಿಷ್ಯದ ಬಗ್ಗೆ ಹೇಳಿದ್ದು ಮುಂದೊಂದು ದಿನ ಸತ್ಯವಾಗಲಿದೆಯೇ ಎಂಬ ಭಯ ತಣ್ಣಗೆ ಕಾಡುತ್ತದೆ.

ನಾಲ್ವರು ನ್ಯಾಯಮೂರ್ತಿಗಳು ತಮ್ಮ ಅಸಮಾಧಾನವನ್ನು ದೇಶಕ್ಕೆ ಸಾರಲು ಪತ್ರಿಕಾಗೋಷ್ಠಿ ನಡೆಸಿದ್ದೇ ತಪ್ಪು ಎನ್ನುವ ವಾದವಾಗಲೀ, ಅವರ ಈ ನಡವಳಿಕೆಯಿಂದಾಗಿ ನ್ಯಾಯಾಂಗದ ಬಗ್ಗೆ ಜನರಿಗಿರುವ ವಿಶ್ವಾಸವೇ ಕುಸಿದುಹೋಗಲಿದೆ ಎಂಬ ವಾದವಾಗಲೀ ಒಪ್ಪತಕ್ಕದ್ದಲ್ಲ. ಸಕಾರಣವಿದ್ದದ್ದೇ ಆದರೆ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ಮಾತ್ರವಲ್ಲ, ಸಾರ್ವಜನಿಕ ಸಭೆ ಕರೆದು ತಮ್ಮ ನಿಲುವು ಮಂಡಿಸಿದರೂ ಅದನ್ನು ಒಪ್ಪಿಕೊಳ್ಳಬಹುದು. ಆದರೆ ಸಕಾರಣ ಏನು ಎನ್ನುವುದನ್ನು ಸಂಬಂಧಪಟ್ಟ ನ್ಯಾಯಮೂರ್ತಿಗಳು ಸಂಶಯಾತೀತವಾಗಿ ದೇಶದ ಮುಂದಿಡಬೇಕು. ನ್ಯಾಯ ಕೇಳಿ ನ್ಯಾಯಾಲಯಕ್ಕೆ ಹೋದ ಸಾಮಾನ್ಯ ಜನರು ಯಾವ ರೀತಿ ಸ್ಪಷ್ಟ ಸಾಕ್ಷ್ಯ, ಪುರಾವೆಗಳನ್ನು ಒಪ್ಪಿಸಿ ಕೈಕಟ್ಟಿ ನಿಂತು ಕೊಳ್ಳಬೇಕೋ, ಹಾಗೆಯೇ ಜನತಾ ನ್ಯಾಯಾಲಯದ ಮುಂದೆ ನಿಂತಿರುವ ಈ ನಾಲ್ವರು ತಾವು ಎತ್ತಿದ ವಿಚಾರಗಳಿಗೆ ಸಂಬಂಧಿಸಿದಂತೆ ನಿಸ್ಸಂಶಯವಾದ ಪುರಾವೆಗಳನ್ನು ಒದಗಿಸಬೇಕಿತ್ತು. ಅವರು ಹಾಗೆ ಮಾಡಲಿಲ್ಲ.

ಸುಪ್ರೀಂ ಕೋರ್ಟ್‌ನಲ್ಲಿ ನಡೆಯಬಾರದ್ದು ನಡೆಯುತ್ತಿದೆ, ನ್ಯಾಯಮೂರ್ತಿಗಳ ನೇಮಕದಲ್ಲಿ, ನ್ಯಾಯನಿರ್ಣಯದಲ್ಲಿ ಆಗಬಾರದ ಎಡವಟ್ಟುಗಳು ಆಗುತ್ತಿವೆ ಎನ್ನುವ ಆಪಾದನೆಗಳು ಈಗ ಗುಸುಗುಸು ಮಾತ್ರವಲ್ಲ, ಬಹಿರಂಗವಾಗಿಯೇ ಇಂತಹ ಆಪಾದನೆಗಳು ಕೇಳಿಬರುವುದು ಬಹಳ ಸಮಯದಿಂದ ನಡೆಯುತ್ತಿದೆ. ಈ ನಾಲ್ವರು ನ್ಯಾಯಮೂರ್ತಿಗಳಿಗೆ ಇವುಗಳ ಬಗ್ಗೆ ತಿಳಿದಿರಲೇಬೇಕು. ತಮಗೆ ತಿಳಿದ ಸತ್ಯಗಳನ್ನು ಹೇಳುವ ಧೈರ್ಯ ಮಾಡದೆ ಕತ್ತಲಲ್ಲಿ ಕಲ್ಲು ಹೊಡೆಯಲು ಪತ್ರಿಕಾಗೋಷ್ಠಿ ನಡೆಸುವ ಅಗತ್ಯವೇನಿತ್ತು ಎನ್ನುವುದಷ್ಟೇ ಇಲ್ಲಿನ ಪ್ರಶ್ನೆ. ಇವರ ಅರೆಬರೆ ಸಾಹಸ, ಇವರ ಅಸ್ಪಷ್ಟ ನೈತಿಕ ನಿಲುವು ನ್ಯಾಯಾಂಗದ ಬಗ್ಗೆ ಈಗಾಗಲೇ ಇದ್ದ ಆತಂಕಗಳನ್ನು ಇನ್ನೂ ಹೆಚ್ಚಿಸಿವೆ.

ಈ ದೇಶದ ನ್ಯಾಯಾಂಗವನ್ನು, ಈ ದೇಶದ ಪ್ರಜಾಸತ್ತೆಯನ್ನು, ತನ್ಮೂಲಕ ಈ ದೇಶದ ಸಂವಿಧಾನವನ್ನು ಉಳಿಸಲು ಅನ್ಯಥಾ ಗತಿರ್ನಾಸ್ಥಿ ಎಂದು ಹೀಗೆ ಮಾಡಿದ್ದೇವೆ ಎಂದು ಅವರು ತಮ್ಮ ಸಂಘರ್ಷಕ್ಕೊಂದು ಉದಾತ್ತ ಸಮರ್ಥನೆ ನೀಡಿದ್ದಾರೆ. ಆದರೆ, ಕ್ಷಮಿಸಿ. ಅವರು ಸಾರಿದ ಜಗಳ ಆ ಉದಾತ್ತ ಮಟ್ಟಕ್ಕೆ ಏರಿಲ್ಲ. ಅವರೆಲ್ಲಾ ಸಮರ್ಥ, ಧೀಮಂತ, ಪ್ರಾಮಾಣಿಕ ನ್ಯಾಯನಿರ್ಣಾಯಕರು ಎನ್ನುವುದನ್ನು ಒಪ್ಪೋಣ. ಅವರ ಉದ್ದೇಶ ಒಳ್ಳೆಯದೇ ಇತ್ತು ಎಂದೂ ಭಾವಿಸೋಣ. ಆದರೆ ಈ ಇಡೀ ಪ್ರಕರಣದಲ್ಲಿ ಅವರ ನಡವಳಿಕೆ ಮತ್ತು ಅದಕ್ಕೆ ಅವರು ನೀಡಿದ ಸಮರ್ಥನೆ ಅವರ ಹುದ್ದೆಯಿಂದ ಜನ ಅಪೇಕ್ಷಿಸುವ ಗಾಂಭೀರ್ಯ ಮತ್ತು ಕ್ಷಮತೆಗೆ ಒಪ್ಪುವಂತಹುದು ಆಗಿರಲಿಲ್ಲ. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಬೇಕು, ನ್ಯಾಯ ನೀಡಿದರೆ ಸಾಲದು- ಸಂಶಯಾತೀತವಾಗಿ ಎದ್ದು ಕಾಣುವಂತೆ ನ್ಯಾಯ ನೀಡಬೇಕು ಎನ್ನುವಂತಹ ಉನ್ನತೋನ್ನತ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿದ್ದ ಹುದ್ದೆಗಳಲ್ಲಿರುತ್ತಾ ಸ್ವತಃ ತಮ್ಮ ವಿಚಾರದಲ್ಲೇ ಈ ತತ್ವಗಳನ್ನು ಪಾಲಿಸದೆ ಹೋದದ್ದು ಏನನ್ನು ತೋರಿಸುತ್ತದೆ ಎಂದರೆ ಅವರು ದೇಶದ ಮುಂದಿಟ್ಟ ಸಾಂಸ್ಥಿಕ ಪತನದ ದುರಂತ ಕಥನದಲ್ಲಿ ಅವರೂ ಪರೋಕ್ಷ ಪಾತ್ರಧಾರಿಗಳಾಗಿದ್ದಾರೆ ಎನ್ನುವ ಸತ್ಯವನ್ನು. ಕೆಟ್ಟವರ ಕತೆ ಹೇಳಲು ಹೊರಟ ಒಳ್ಳೆಯವರ ಕತೆ ಹೀಗಾದರೆ ಹೇಗೆ ಎಂದು ದೇಶ ಕೇಳುವ ಹಾಗಾಗಿದೆ.

ಭಾರತದ ಪ್ರಜಾಸತ್ತೆ ಆಪತ್ತಿನಲ್ಲಿದೆ, ಭಾರತದ ನ್ಯಾಯಾಂಗದ ಸ್ವಾಯತ್ತತೆಯ ಅಡಿಪಾಯ ಕಂಪಿಸುತ್ತಿದೆ, ಭಾರತದ ಸಂವಿಧಾನದ ಆಶಯಗಳು ಕಣ್ಣಮುಂದೆಯೇ ನೆಲಕಚ್ಚುತ್ತಿವೆ ಎನ್ನುವ ಘನ ಗಂಭೀರ ಕಾರಣಕ್ಕೆ ಈ ಅಭೂತಪೂರ್ವ ಕ್ರಮಕ್ಕೆ ಮುಂದಾಗಿದ್ದೇವೆ ಎಂದ ನಾಲ್ವರು ನ್ಯಾಯಮೂರ್ತಿಗಳು ಯಾವ ಪ್ರಕರಣಗಳಿಂದ, ಯಾವ ಕಾರಣಗಳಿಂದ, ಯಾವ ಉಲ್ಲಂಘನೆಗಳಿಂದಾಗಿ ಭಾರತದ ನ್ಯಾಯಾಂಗ ವ್ಯವಸ್ಥೆ ಅಪಾಯ ಎದುರಿಸುತ್ತಿದೆ ಎಂದು ಮನಬಿಚ್ಚಿ, ಸ್ಪಷ್ಟ ನುಡಿಗಳಲ್ಲಿ ಹೇಳಲಿಲ್ಲ. ವರದಿಗಾರರು ಕೇಳಿದ್ದಕ್ಕೆ ‘ಎಲ್ಲವನ್ನೂ ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದೇವೆ’ ಅಂತ ಜಾರಿಕೊಂಡರು.

ಆ ಏಳು ಪುಟಗಳ ಪತ್ರ ನೋಡಿದರೆ ಅದರಲ್ಲಿ ಯಾವುದೂ ಸ್ಪಷ್ಟವಿಲ್ಲ. ಅಲ್ಲಿ ಎರಡು ಕಾರಣಗಳನ್ನು ನೀಡಲಾಗಿದೆ. ಯಾವ ಪ್ರಕರಣವನ್ನು ಯಾವ ನ್ಯಾಯಮೂರ್ತಿಗಳು ನಿಭಾಯಿಸಬೇಕು ಎಂದು ನಿರ್ಧರಿಸುವ ತಮ್ಮ ಅಧಿಕಾರವನ್ನು ಮುಖ್ಯ ನ್ಯಾಯಮೂರ್ತಿಗಳು ಸರಿಯಾಗಿ ನಿಭಾಯಿಸುತ್ತಿಲ್ಲ, ತಮಗೆ ಬೇಕಾದ ನ್ಯಾಯಪೀಠಗಳಿಗೆ ಪ್ರಮುಖ ಪ್ರಕರಣಗಳನ್ನು ವಹಿಸುತ್ತಿದ್ದಾರೆ ಎನ್ನುವುದು ಅವರ ಮೊದಲನೆಯ ಆತಂಕ. ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರದ ಜತೆ ನಡೆಸುತ್ತಿರುವ ಅಧಿಕೃತ ವ್ಯವಹಾರವನ್ನು ಮುಖ್ಯ ನ್ಯಾಯಮೂರ್ತಿಗಳು ಸರಿಯಾಗಿ ನಡೆಸುತ್ತಿಲ್ಲ ಎನ್ನುವುದು ಅವರ ಎರಡನೆಯ ದೂರು.

ಅಂದರೆ ಅವರ ಆತಂಕ ಮತ್ತು ಅಪಸ್ವರ ಈಗಿನ ನ್ಯಾಯಮೂರ್ತಿಗಳ ಕಾರ್ಯವೈಖರಿಯ ಕುರಿತಾಗಿಯೋ ಅಥವಾ ಇಡೀ ನ್ಯಾಯಾಂಗ ವ್ಯವಸ್ಥೆಯ ಬುಡ ಕುಸಿಯುತ್ತಿದೆ ಎನ್ನುವ ಅಪಾಯದ ಕುರಿತಾಗಿಯೋ ಎನ್ನುವುದು ಅವರ ಮಾತುಗಳಿಂದಲೂ ಸ್ಪಷ್ಟವಾಗುವುದಿಲ್ಲ, ಅವರ ಪತ್ರದಿಂದಲೂ ಸ್ಪಷ್ಟವಾಗುವುದಿಲ್ಲ. ಸುಪ್ರೀಂ ಕೋರ್ಟ್‌ನ ಪತನದ ಸಂಕತನ ಸುದೀರ್ಘವೂ, ಸಂಕೀರ್ಣವೂ ಆದದ್ದು. ಅದನ್ನು ಈ ನಾಲ್ವರು ನ್ಯಾಯಮೂರ್ತಿಗಳು ಈಗಿನ ಮುಖ್ಯ ನ್ಯಾಯಮೂರ್ತಿಯ ಕಾರ್ಯಶೈಲಿಯ ಲೋಪಗಳಿಗೆ ಮಾತ್ರ ಸೀಮಿತಗೊಳಿಸಿದ್ದು ಅವರು ಸಾರಿದ ನೈತಿಕ ಸಮರದ ಮೊದಲನೆಯ ದೌರ್ಬಲ್ಯ.

ಅವರು ಕರೆದ ಪತ್ರಿಕಾಗೋಷ್ಠಿ ಗಲಿಬಿಲಿ, ಗೊಂದಲಗಳಿಂದ ಕೂಡಿತ್ತು. ದೇಶಕ್ಕೆ ದೇಶವನ್ನೇ ಚಕಿತಗೊಳಿಸಿದ ಘನಗಂಭೀರ ಪತ್ರಿಕಾಗೋಷ್ಠಿಯಲ್ಲಿ ಏನು ಹೇಳಬೇಕು, ಎಷ್ಟು ಹೇಳಬೇಕು ಎನ್ನುವ ಕನಿಷ್ಠ ತಯಾರಿಯೂ ಇದ್ದಿರಲಿಲ್ಲ. ವರದಿಗಾರರ ಎದುರೇ ಏನು ಹೇಳಬೇಕು ಎಂದು ಪಿಸುಮಾತಿನಲ್ಲಿ ಪರಸ್ಪರ ಚರ್ಚಿಸುತ್ತಾ, ತಾವು ಚರ್ಚಿಸುವುದನ್ನು ನೀವು ಕೇಳಿಸಿಕೊಳ್ಳಬಾರದು ಎಂದು ವರದಿಗಾರರಿಗೆ ಎಚ್ಚರಿಕೆ ನೀಡುತ್ತಾ ಸಾಗಿದ ಪತ್ರಿಕಾಗೋಷ್ಠಿಯ ಸ್ವರೂಪ ಮತ್ತು ಸಂದೇಶ ಎರಡೂ ಅಪ್ರಬುದ್ಧವಾಗಿ ಕಾಣಿಸಿದವು.

ಸೂಕ್ಷ್ಮ, ಪ್ರಮುಖ ಮತ್ತು ರಾಜಕೀಯ ಆಯಾಮಗಳುಳ್ಳ ಪ್ರಕರಣಗಳನ್ನು ಮುಖ್ಯ ನ್ಯಾಯಮೂರ್ತಿಯು ಆಯ್ದ, ಕಿರಿಯ ನ್ಯಾಯಮೂರ್ತಿಗಳಿಗೆ ವಹಿಸುತ್ತಿದ್ದಾರೆ ಮತ್ತು ಅಂತಹ ಪ್ರಕರಣಗಳು ಹಳ್ಳಹತ್ತುತ್ತವೆ ಅಂತ ನಾಲ್ವರು ನ್ಯಾಯಮೂರ್ತಿಗಳು ಆಪಾದಿಸಿದ್ದಾರೆ. ಇಷ್ಟು ಹೇಳಿದರೆ ಸಾಕೇ? ಯಾವ ಪ್ರಕರಣವನ್ನು, ಯಾರಿಗೆ ವಹಿಸಿದ್ದು ಯಾವ ಕಾರಣಕ್ಕೆ ಪ್ರಶ್ನಾರ್ಹ ಅಂತ ಅವರು ಹೇಳುವುದು ಬೇಡವೇ? ಯಾರಿಗೆ ವಹಿಸಿದ್ದ ಯಾವ ಗಂಭೀರ ಪ್ರಕರಣ ಹೇಳಹೆಸರಿಲ್ಲದೆ ಬಿದ್ದುಹೋಯಿತು ಎಂದು ಹೇಳುವುದು ಬೇಡವೇ? ಲೋಯಾ ಪ್ರಕರಣವನ್ನು (ಮುಂಬೈಯ ನ್ಯಾಯಾಧೀಶರೊಬ್ಬರ ಅನುಮಾನಾಸ್ಪದ ಸಾವಿನ ಪ್ರಕರಣ) ಇತ್ಯರ್ಥಪಡಿಸಲು ರಚಿಸಿದ ನ್ಯಾಯಪೀಠದಲ್ಲಿ ತಮ್ಮನ್ನು ಸೇರಿಸಿಲ್ಲ, ಆಧಾರ್ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಪೀಠದಲ್ಲಿ ತಮ್ಮನ್ನು ಸೇರಿಸಿಕೊಳ್ಳಲಾಗಲಿಲ್ಲ, ಇನ್ಯಾವುದೋ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಹೊರಗಿಡಲಾಗಿದೆ ಎನ್ನುವ ಕಾರಣಗಳನ್ನಷ್ಟೇ ಹಿಡಿದುಕೊಂಡು ನ್ಯಾಯಾಂಗ ದಾರಿತಪ್ಪುತ್ತಿದೆ, ಪ್ರಜಾತಂತ್ರ ಕುಸಿಯುತ್ತಿದೆ ಎನ್ನುವ ವಾದವನ್ನು ಈ ನ್ಯಾಯಮೂರ್ತಿಗಳು ಮುಂದಿಡುತ್ತಿರುವ ಹಾಗಿದೆ. ಹಾಗಂತ ಪತ್ರಿಕೆಗಳು ಊಹಿಸಿ ಬರೆಯುವುದಕ್ಕೆ ಅವರ ಪತ್ರಿಕಾಗೋಷ್ಠಿ ಅವಕಾಶ ಮಾಡಿಕೊಟ್ಟಿದೆ.

ಪ್ರಮುಖ ಪ್ರಕರಣಗಳನ್ನು ಕಿರಿಯ ನ್ಯಾಯಮೂರ್ತಿಗಳಿಗೆ ವಹಿಸಿದ್ದು ಆಕ್ಷೇಪಾರ್ಹ ಎನ್ನುವ ಈ ನಾಲ್ವರ ವಾದ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಮೊದಲನೆಯದಾಗಿ ‘ಮುಖ್ಯ ನ್ಯಾಯಮೂರ್ತಿಗಳೂ ಸೇರಿದಂತೆ ಎಲ್ಲಾ ನ್ಯಾಯಮೂರ್ತಿಗಳು ಸಮಾನ’ ಎನ್ನುವ ತತ್ವಕ್ಕೆ ಈ ವಾದ ವಿರುದ್ಧವಾಗುತ್ತದೆ.

ಇನ್ನೊಂದು ವಿಚಾರ. ಒಂದು ವೇಳೆ ಈ ಪ್ರಕರಣಗಳನ್ನು ಆಲಿಸುತ್ತಿರುವ ಕಿರಿಯ ನ್ಯಾಯಮೂರ್ತಿಗಳ ಸಾಮರ್ಥ್ಯ ಅಥವಾ ಅವರ ರಾಜಕೀಯ ಒಳಸಂಬಂಧಗಳ ಬಗ್ಗೆ ಈ ನಾಲ್ವರಿಗೆ ಏನಾದರೂ ಸುಳಿವಿದ್ದು, ಅದು ವಿಷಯ ಎಂದಾದರೆ ಅಂತಹ ಅಸಮರ್ಥ, ರಾಜಕೀಯಪ್ರೇರಿತ ನ್ಯಾಯಮೂರ್ತಿಗಳು ಯಾವ ಪ್ರಕರಣಗಳನ್ನೂ ನಿಭಾಯಿಸಬಾರದು ಮತ್ತು ಅವರು ಸುಪ್ರೀಂ ಕೋರ್ಟ್‌ನಲ್ಲಿ ಇರಲೇಬಾರದು ಅಂತ ವಾದಿಸುವುದು ಸರಿ.

ಆದರೆ ಅಂತಹವರು ಸುಪ್ರೀಂ ಕೋರ್ಟ್‌ನಲ್ಲಿ ಇದ್ದಾರೆ ಎನ್ನುವುದು ಈ ನಾಲ್ವರ ಸಮಸ್ಯೆಯಲ್ಲ. ಗಂಭೀರ ಪ್ರಕರಣಗಳನ್ನು ಅವರು ವಿಚಾರಣೆ ನಡೆಸಬಾರದು ಎನ್ನುವುದಷ್ಟೇ ಅವರ ಬೇಡಿಕೆ. ಅಂದರೆ ಗಂಭೀರ ಪ್ರಕರಣವನ್ನು ತಾವೇ ವಿಚಾರಣೆ ನಡೆಸಲು ಸಾಧ್ಯವಾದರೆ ಸುಪ್ರೀಂ ಕೋರ್ಟ್‌ನಲ್ಲಿ ಎಂತಹವರಾದರೂ ಇರಬಹುದು ಎಂದೇ? ಇವರೆಲ್ಲಾ ಇನ್ನೊಂದು ವರ್ಷದ ಅವಧಿಯಲ್ಲಿ ನಿವೃತ್ತರಾಗಿ ಮನೆ ಸೇರಿದಾಗ ಕಿರಿಯ ನ್ಯಾಯಮೂರ್ತಿಗಳೇ ಹಿರಿಯರಾಗಿ ನ್ಯಾಯಾಂಗದ ಭವಿಷ್ಯ ನಿರ್ಣಯಿಸುತ್ತಾರಲ್ಲ. ಆಗ?

ಬೇರೆ ದಾರಿ ಇಲ್ಲದೆ ಪತ್ರಿಕಾ ಗೋಷ್ಠಿ ಕರೆದಿದ್ದೇವೆ ಎನ್ನುವುದೂ ಸಕಾರಣವಾಗಿ ತೋರುವುದಿಲ್ಲ. ಮುಖ್ಯ ನ್ಯಾಯಮೂರ್ತಿಯವರಿಂದ ಇವರ ಅಹವಾಲಿಗೆ ಸರಿಯಾದ ಸ್ಪಂದನೆ ಬಂದಿಲ್ಲ ಎಂದಾದರೆ ಸುಪ್ರೀಂ ಕೋರ್ಟಿನ ಅಷ್ಟೂ ನ್ಯಾಯಮೂರ್ತಿಗಳಿಗೆ ನೇಮಕಾತಿ ಆದೇಶ ನೀಡುವ ಮತ್ತು ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸುವ ರಾಷ್ಟ್ರಪತಿಗಳಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಆಗುವ ವಿದ್ಯಮಾನಗಳಿಂದಾಗಿ ಪ್ರಜಾಸತ್ತೆಗೆ ಅಪಾಯ ಬಂದಿದ್ದರೆ ಎಲ್ಲವನ್ನೂ ಕೂಲಂಕಷವಾಗಿ ರಾಷ್ಟ್ರಪತಿಗಳಿಗೆ ಬರೆಯಬಹುದಿತ್ತು. ಪತ್ರಿಕಾಗೋಷ್ಠಿಯಲ್ಲಿ ಹೇಳಲಾಗದ ಸೂಕ್ಷ್ಮಗಳನ್ನು ರಾಷ್ಟ್ರಪತಿಗಳಿಗೆ ಬರೆಯುವ ಪತ್ರದಲ್ಲಿ ಹೇಳಬಹುದಿತ್ತು. ಆ ಪತ್ರ ಮಾಧ್ಯಮಗಳ ಮೂಲಕ ಜನಕ್ಕೆ ತಲುಪಿದ್ದರೆ ಆಗ ಇಡೀ ಪ್ರಕರಣದ ವರಸೆಯೇ ಬೇರೆ ಇರುತ್ತಿತ್ತು.

ಮುಖ್ಯ ನ್ಯಾಯಮೂರ್ತಿ ಮತ್ತು ಇನ್ನೊಬ್ಬರು ನ್ಯಾಯಮೂರ್ತಿಗಳ ಬಗ್ಗೆ ನ್ಯಾಯಾಂಗದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರದಲ್ಲಿ ಹೋದ ನವೆಂಬರ್ ತಿಂಗಳಲ್ಲಿ ಒಂದು ಸಂಘರ್ಷ ಏರ್ಪಟ್ಟಿತ್ತು. ಆಗ ನ್ಯಾಯಾಡಳಿತ ತಜ್ಞ ಪ್ರತಾಪ್ ಬಾನು ಮೆಹ್ತಾ ಹೀಗೆ ಬರೆದಿದ್ದರು: ‘ಈಗ ಸುಪ್ರೀಂ ಕೋರ್ಟ್ ಉಳಿದಿಲ್ಲ. ಕಾನೂನಿನ ನಡೆ ನ್ಯಾಯಾಂಗದ ನಡೆ ಆಗಬೇಕು. ಆದರೆ ಭಾರತದಲ್ಲಿ ನ್ಯಾಯಾಂಗದ ನಡೆಯೇ ಕಾನೂನಿನ ನಡೆ ಆಗುತ್ತಿದೆ. ನ್ಯಾಯಮೂರ್ತಿಗಳ ಅರಾಜಕ ನಡವಳಿಕೆಗಳು ನ್ಯಾಯಾಂಗದ ನಡೆಗಳಾಗುತ್ತಿವೆ’. ಮೆಹ್ತಾ ಅವರು ಕಟ್ಟಿಕೊಡುವ ಈ ಚಿತ್ರಣದ ಮುಂದುವರಿದ ಭಾಗವಾಗಿ ನ್ಯಾಯಮೂರ್ತಿಗಳ ಪತ್ರಿಕಾಗೋಷ್ಠಿಯನ್ನು ಮತ್ತು ಅದಕ್ಕೆ ಕಾರಣರಾದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಶೈಲಿಯನ್ನು ಕಾಣಬೇಕಾಗಿದೆ.

ಒಟ್ಟಿನಲ್ಲಿ ಸುಪ್ರೀಂ ಕೋರ್ಟೇ ನ್ಯಾಯ ಬೇಡಬೇಕಾದ ವಿಲಕ್ಷಣ ಸನ್ನಿವೇಶ ನಿರ್ಮಾಣವಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಪ್ರಜಾಸತ್ತೆ ಅಪಾಯದಲ್ಲಿದೆ ಎಂದ ನಾಲ್ವರಲ್ಲಿ ಈರ್ವರು ಮರುದಿನ ‘ಬಿಕ್ಕಟ್ಟು ಏನೂ ಇಲ್ಲ, ಆಡಳಿತಾತ್ಮಕ ಸಮಸ್ಯೆಗಳಿವೆ, ಪರಿಹರಿಸಿಕೊಳ್ಳುತ್ತೇವೆ’ ಎನ್ನುತ್ತಾರೆ. ಇದೇನು? ಘನತೆವೆತ್ತ ನ್ಯಾಯಮೂರ್ತಿಗಳೂ ‘ಹಿಟ್ ಅಂಡ್ ರನ್’ ಆಪಾದನೆ ಮಾಡಲು ಹೊರಟಿದ್ದಾರೆಯೇ?

ಬಿಕ್ಕಟ್ಟು ಇದೆ ನ್ಯಾಯಮೂರ್ತಿಗಳೇ. ಅದು ನಿಮಗೆ ಕೆಲ ಕೇಸುಗಳನ್ನು ಕೊಡದೇ ಹೋದ ಇಂದಿನ ಮುಖ್ಯ ನ್ಯಾಯಮೂರ್ತಿಗಳ ಪ್ರಶ್ನಾರ್ಹ ನಡವಳಿಕೆ ಪ್ರಾರಂಭವಾಗುವ ಮುನ್ನವೇ ಪ್ರಾರಂಭವಾಗಿದೆ. ನೀವು ಅದನ್ನು ಹೇಳಲು ಹೋಗಿ ಅರ್ಧಕ್ಕೆ ನಿಲ್ಲಿಸಿದ್ದು ನೀವು ಆ ಬಿಕ್ಕಟ್ಟಿನ ಭಾಗ ಎನ್ನುವುದನ್ನು ಪ್ರಪಂಚಕ್ಕೆ ಸಾರುತ್ತಿದೆ.

ಕೊನೆಯದಾಗಿ ಒಂದು ಮಾತು. ಸುಪ್ರೀಂ ಕೋರ್ಟ್‌ನ ಬಗ್ಗೆ ಹೀಗೊಂದು ಅಂಕಣ ಬರೆಯಬೇಕಾದ ಸ್ಥಿತಿ ನಿರ್ಮಾಣವಾಗಬಾರದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT