ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊನ್ಸಾಂಟೊ ಬಾಣಲೆಯ ಕೆಳಗೆ ಬಾಯರ್ ಬೆಂಕಿ

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ಹಿಂದೆ ಬಿ.ಟಿ ಬದನೆಯ ವಿವಾದ ತಾರಕಕ್ಕೇರಿದ್ದಾಗ ‘ಹಂದಿಗೂ ಬದನೇಕಾಯಿಗೂ ಮದ್ವೆಯಂತೆ- ಲ್ಯಾಬಿನಲ್ಲಿ, ಟ್ಯೂಬಿನಲ್ಲಿ ಸೋಬನವಂತೆ’ ಎಂಬ ಲಾವಣಿಯೊಂದು ಅನೇಕರ ಬಾಯಲ್ಲಿ ನಲಿಯುತ್ತಿತ್ತು. ಉಡುಪಿ ಮೂಲದ ಮಟ್ಟುಗುಳ್ಳ ಬದನೆ ಸಸ್ಯಕ್ಕೆ ವಿಜ್ಞಾನಿಗಳು ಬಿ.ಟಿ ಹೆಸರಿನ ಏಕಾಣುಜೀವಿಯ ತುಣುಕನ್ನು ತೂರಿಸಿ ಹೊಸ ಕುಲಾಂತರಿ ಬದನೆಯನ್ನು ಸೃಷ್ಟಿಸಹೊರಟ ಸಂದರ್ಭದಲ್ಲಿ ನಮ್ಮ ಜನಪದ ಕವಿ ಜನಾರ್ದನ ಕೆಸರಗದ್ದೆಯವರು ಮದುವೆಯ ರೂಪಕವನ್ನು ಹಾಡಾಗಿ ಹೆಣೆದಿದ್ದರು. ಈ ಹಾಡಿಗೆ ಈಗ ಹೊಸ ಅರ್ಥ ಬಂದಂತಾಗಿದೆ: ಕಳೆದ ವಾರವಷ್ಟೇ ಜರ್ಮನಿ ಮೂಲದ ಬಾಯರ್ ಹೆಸರಿನ ಬಹುರಾಷ್ಟ್ರೀಯ ಕೃಷಿ ಕಂಪನಿ ಅಮೆರಿಕ ಮೂಲದ ಮೊನ್ಸಾಂಟೊ ಕಂಪನಿಯನ್ನು 66 ಶತಕೋಟಿ ಡಾಲರ್‌ಗೆ ತನ್ನೊಳಗೆ ವಿಲೀನಗೊಳಿಸುವ ಒಪ್ಪಂದ ಮಾಡಿಕೊಂಡಿತು.

ಈ ಎರಡೂ ಕಂಪನಿಗಳು ಬಹಳಷ್ಟು ರಾಷ್ಟ್ರಗಳಲ್ಲಿ ತಮ್ಮ ಸ್ವತಂತ್ರ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿವೆ. ಬೀಜ, ಆಹಾರ, ಔಷಧ, ರಸವಿಷಗಳ ಎಲ್ಲ ವ್ಯವಹಾರಗಳನ್ನೂ ತಮ್ಮ ಮುಷ್ಟಿಗೆ ತೆಗೆದುಕೊಂಡು ಜಗತ್ತಿನ ಬಹುಪಾಲು ಎಲ್ಲರ ಬದುಕಿನ ಮೇಲೆ ನಿಯಂತ್ರಣವನ್ನು ಸಾಧಿಸಿವೆ. ನಮ್ಮಲ್ಲೂ ಅಂಗಡಿಗಳಲ್ಲಿ, ಮಾಲ್‌ಗಳಲ್ಲಿ ಇವರ ಉತ್ಪನ್ನಗಳನ್ನು ನೋಡಬಹುದು. ವಿಶೇಷ ಏನೆಂದರೆ ಈ ಎರಡೂ ಕಂಪನಿಗಳಿಗೆ ಕರಾಳ ಚರಿತ್ರೆ ಇದೆ. ಅಮೆರಿಕದ ಮಿಲಿಟರಿಗಾಗಿ ಮೊನ್ಸಾಂಟೊ ಕಂಪನಿ ವಿಯೆಟ್ನಾಮಿ ಯೋಧರು ಅಡಗಿದ್ದ ಅರಣ್ಯದ ಮೇಲೆ ಎರಚಲೆಂದು ‘ಏಜೆಂಟ್ ಆರೆಂಜ್’ ಎಂಬ ಘೋರ ಕಳೆನಾಶಕ ರಸಾಯನವನ್ನು ಉತ್ಪಾದಿಸುತ್ತಿತ್ತು.

ಈ ಎರಚಾಟಕ್ಕೆ ಬಲಿಯಾಗಿ ಬದುಕುಳಿದ ನತದೃಷ್ಟರಿಗೆ ಈಗಲೂ ಅಂಗವಿಕಲ ಮೊಮ್ಮಕ್ಕಳು ಜನಿಸುತ್ತಿದ್ದಾರೆ. ಅತ್ತ ಜರ್ಮನಿಯಲ್ಲಿ ಬಣ್ಣ ಮತ್ತು ಕೆಮಿಕಲ್‌ಗಳ ಉತ್ಪಾದನೆ ಮಾಡುತ್ತಿದ್ದ ಬಾಯರ್, ಹೆಕ್ಸ್ಟ್ ಮತ್ತು ಬಿಎಎಸ್‌ಎಫ್ ಮುಂತಾದ ಕಂಪನಿಗಳು ಸೇರಿ ಹಿಟ್ಲರನ ಆಳ್ವಿಕೆಯ ಅವಧಿಯಲ್ಲಿ ಒಕ್ಕೂಟ ರಚಿಸಿಕೊಂಡು ‘ಐಜಿ ಫಾರ್ಬೆನ್’ ಕಂಪನಿಯನ್ನು ಸ್ಥಾಪಿಸಿದವು. ಆತನ ನರಮೇಧದ ತಾಣವಾಗಿದ್ದ ಆಶ್ವಿಝ್ ಎಂಬಲ್ಲಿ ವಿಷ ರಸಾಯನಗಳ ಉತ್ಪಾದನೆಯ ಬಹುದೊಡ್ಡ ಫ್ಯಾಕ್ಟರಿಯನ್ನು ಈ ಹೊಸ ಕಂಪನಿ ಸ್ಥಾಪಿಸಿಕೊಂಡಿತ್ತು. ‘ಝೈಕೆನ್ ಬಿ’ ಹೆಸರಿನ ಕೀಟನಾಶಕ ವಿಷದ ತಯಾರಿಕೆಯಲ್ಲಿ 83 ಸಾವಿರ ಜನರನ್ನು ಕೂಲಿಗಳನ್ನಾಗಿ, ಯುದ್ಧಾಸ್ತ್ರ ತಯಾರಿಕೆಯ ಪ್ರಯೋಗ ಪಶುಗಳನ್ನಾಗಿ ಬಳಸಿಕೊಂಡಿತ್ತು.

ಎರಡನೆಯ ಮಹಾಯುದ್ಧದಲ್ಲಿ ಈ ಕಂಪನಿಯ ಉತ್ಪನ್ನಗಳನ್ನೇ ಬಳಸಿ ಎರಡೂ ಪಡೆಗಳು ತಂತಮ್ಮಲ್ಲಿ ಬಡಿದಾಡಿಕೊಂಡಿದ್ದೂ ಆಯಿತು. ಮುಂದೆ ಜರ್ಮನಿಯಲ್ಲಿ ಯುದ್ಧಾಪರಾಧಗಳ ತನಿಖೆಗೆಂದೇ ‘ನೂರೆಂಬರ್ಗ್ ವಿಚಾರಣೆ’ ನಡೆಸಿ ಐಬಿ ಫಾರ್ಬೆನ್ ಕಂಪನಿಯ 13  ನಿರ್ದೇಶಕರನ್ನು ಜೈಲಿಗೆ ಕಳಿಸಲಾಯಿತು. ಫಾರ್ಬೆನ್ ಕಂಪನಿ ಹೋಳಾಗಿ ಮತ್ತೆ ಬಾಯರ್, ಹೆಕ್ಸ್ಟ್, ಬಿಎಎಸ್‌ಎಫ್ ಮುಂತಾದ ಕಂಪನಿಗಳಾಗಿ ಮರುಜನ್ಮ ತಾಳಿದವು. ನೊಬೆಲ್ ವಿಜೇತರನ್ನೂ ಊಳಿಗದಲ್ಲಿಟ್ಟುಕೊಂಡು ಕೈದಿಗಳ ಜೀವತೆಗೆದ ಕಂಪನಿಗಳು ನಂತರ ಜೀವರಕ್ಷಕ ಔಷಧ, ಔದ್ಯಮಿಕ ಕೆಮಿಕಲ್ ಮತ್ತು ಆಹಾರ ಉತ್ಪಾದನೆಗೆ ಬೇಕಾದ ಕೀಟನಾಶಕಗಳ ಉತ್ಪಾದನೆಗೆ ತೊಡಗಿದವು.

ಏಕಾಣುಜೀವಿಗಳ ಹಾಗೆ ಇಂಥ ಕಾರ್ಪೊರೇಟ್ ಸಂಸ್ಥೆಗಳು ಬೇಕೆಂದಾಗ ತಮ್ಮನ್ನೇ ಹೋಳು ಮಾಡಿ ಮಾರಿಕೊಳ್ಳುತ್ತವೆ. ಅಥವಾ ಒಂದುಗೂಡಿ ಏಕಸ್ವಾಮ್ಯ ಸ್ಥಾಪಿಸಿಕೊಂಡು ಪ್ರಪಂಚಕ್ಕೆಲ್ಲ ವ್ಯಾಪಿಸುತ್ತವೆ. ಹೆಕ್ಸ್ಟ್ ಕಂಪನಿ ಫ್ರಾನ್ಸಿನಲ್ಲಿ ಅವೆಂಟಿಸ್ ಆಗುತ್ತದೆ. ಸಿಂಜೆಂಟಾ ಹೋಗಿ ಕೆಂಚೈನಾವನ್ನು ಕೂಡಿಕೊಳ್ಳುತ್ತದೆ. ಯೂನಿಯನ್ ಕಾರ್ಬಾಯಿಡ್ ಕಂಪನಿ ಡೌ ಕೆಮಿಕಲ್ಸ್ ಆಗುತ್ತದೆ. ಡ್ಯೂಪಾಂಟ್ ಜೊತೆ ಡೌ ಸೇರಿ ಡೌಡ್ಯೂಪಾಂಟ್ ಆಗುತ್ತದೆ.

ಔಷಧ ರಂಗದಲ್ಲಿ ಎಡವಟ್ಟಾದಾಗ ಇಲ್ಲವೆ ಭೋಪಾಲದಂಥ ದುರಂತ ಸಂಭವಿಸಿದಾಗ ಮಾಯಾಜಿಂಕೆಯಂತೆ ಬಣ್ಣ ಬದಲಿಸಿ ಶಿಕ್ಷೆಯ ಪಂಜದಿಂದ ನುಣುಚಿಕೊಳ್ಳುತ್ತವೆ. ಕಾನೂನುಗಳನ್ನು ರೂಪಿಸುವವರನ್ನೂ ವಶೀಕರಿಸಿ ತಮಗೆ ಸೂಕ್ತವಾಗುವಂತೆ ಕಾಯ್ದೆಗಳನ್ನು ಬದಲಿಸಿಕೊಳ್ಳುತ್ತವೆ. ವಿಜ್ಞಾನ-ತಂತ್ರಜ್ಞಾನ ರಂಗದ ಮುಂಚೂಣಿ ಸಂಶೋಧನೆಗಳನ್ನು ತಾವೇ ಕೈಗೊಳ್ಳುತ್ತವೆ (ನೆನಪಿದೆಯೆ, ಬೆಂಗಳೂರಿನ ಐಐಎಸ್‌ಸಿ ಆವರಣದೊಳಗೇ ಮೊನ್ಸಾಂಟೊ ತನ್ನ ಪ್ರಯೋಗ ಶಾಲೆಯನ್ನು ಸ್ಥಾಪಿಸಿಕೊಂಡಿದ್ದು?) ಈ ಕಂಪನಿಗಳು ಸರ್ಕಾರಿ  ಸಂಶೋಧನೆಗಳನ್ನು ಬೇಕಂತಲೇ ನಿಧಾನಗೊಳಿಸುತ್ತವೆ, ಬೇಕೆಂದಾಗ ವಿಫಲಗೊಳಿಸುತ್ತವೆ.

ಯಾವುದೇ ದೇಶಕ್ಕೆ ಬೇಕಾದ ಯುದ್ಧಾಸ್ತ್ರ, ಔಷಧ, ಆಹಾರಗಳ ಮೇಲೆ ನಿಯಂತ್ರಣ ಸಾಧಿಸಿ, ದೇಶದ ನಾಯಕರನ್ನು ತಮ್ಮ ಸೂತ್ರದ ಬೊಂಬೆಗಳನ್ನಾಗಿ ಮಾಡುತ್ತವೆ. ಬೇಕಾದಾಗ ಕಾರ್ಟೆಲ್ ಎಂಬ ಮುಷ್ಟಿಕೂಟ ಮಾಡಿಕೊಂಡು ಪ್ರತಿಸ್ಪರ್ಧಿ ಕಂಪನಿಗಳು ಒಂದಾಗಿ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸುತ್ತವೆ. ದೇಶ ದೇಶಗಳ ಮಧ್ಯೆ ಯುದ್ಧಗಳನ್ನು ಸೃಷ್ಟಿಸುತ್ತ, ಅಂಥ ಸಂದರ್ಭಗಳಲ್ಲಿ ತಮ್ಮ ಅನಿವಾರ್ಯತೆಯನ್ನು ಸಾಬೀತುಗೊಳಿಸುತ್ತ, ತಮ್ಮೆಲ್ಲ ಅಪರಾಧಗಳಿಗೆ ಮಾಫಿ ಗಿಟ್ಟಿಸುತ್ತ ಸರ್ಕಾರಗಳನ್ನು ಭ್ರಷ್ಟಗೊಳಿಸುತ್ತವೆ ಇಲ್ಲವೆ ಶಿಥಿಲಗೊಳಿಸುತ್ತವೆ.

ಯುದ್ಧದಿಂದ ಕಂಗೆಟ್ಟ ನಿರಾಶ್ರಿತರಿಗೆ ಸಹಾಯಹಸ್ತ ಚಾಚುತ್ತ, ಜನಸ್ತೋಮವನ್ನು ಹಸಿವೆ ಹಾಗೂ ರೋಗರುಜಿನಗಳಿಂದ ಬಿಡುಗಡೆ ಮಾಡುವುದಾಗಿ ಹೇಳುತ್ತ, ಕ್ರೀಡೆಗಳನ್ನು ಆಯೋಜಿಸುತ್ತ, ಸಮಾಜದ ಕಲ್ಯಾಣಸೂತ್ರಗಳನ್ನೆಲ್ಲ ತಾವೇ ಕೈಗೆತ್ತಿಕೊಂಡು ಪ್ರಜಾತಂತ್ರದ ಮೂಲತತ್ವಗಳನ್ನೇ ಪೊಳ್ಳು ಮಾಡುತ್ತವೆ. ಆಧುನಿಕ ಪ್ರಪಂಚದ ಇತಿಹಾಸವೆಂದರೆ ಬಹುರಾಷ್ಟ್ರೀಯ ಕಂಪನಿಗಳ ಇಂದ್ರಜಾಲದ ಇತಿಹಾಸವೆಂದೇ ಹೇಳಬೇಕು. ‘ಇಲ್ಲಿ ನೀತಿ, ನ್ಯಾಯ, ಪ್ರಜಾತಂತ್ರ, ಬದುಕುವ ಹಕ್ಕು, ಸಮಾನತೆ, ನಿಸರ್ಗ ಸಮತೋಲ ಎಲ್ಲವೂ ಬಿಕರಿಯ ಸರಕುಗಳಾಗುತ್ತವೆ’ ಎನ್ನುತ್ತಾರೆ, ಕೃಷಿ ಕಂಪನಿಗಳ ಏಕಸ್ವಾಮ್ಯದ ಹುನ್ನಾರಗಳ ವಿರುದ್ಧ ನಿರಂತರ ಸಮರ ಸಾರುತ್ತಿರುವ ಡಾ. ವಂದನಾ ಶಿವ.

ಇತ್ತ ಬಹುರಾಷ್ಟ್ರೀಯ ಕಂಪನಿಗಳ ಸಮರ್ಥನೆಗೂ ಬೇಕಾದಷ್ಟು ವಾದಗಳಿವೆ. ಕಾರು, ವಿಮಾನ, ಕಂಪ್ಯೂಟರ್, ಫ್ರಿಜ್, ಬ್ಯಾಟರಿ, ಫೋನ್, ಪಾದರಕ್ಷೆಗಳಂಥ ಉತ್ಪಾದನಾ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಸಾಧನೆ ಆಗುತ್ತಿರುವುದಕ್ಕೂ ನಿರಂತರ ಉದ್ಯೋಗ ಸೃಷ್ಟಿಯಾಗುತ್ತಿರುವುದಕ್ಕೂ ಇಂಥ ಜಗದ್ವ್ಯಾಪಿ ಕಂಪನಿಗಳೇ ಕಾರಣವಾಗಿವೆ. ಬ್ಯಾಂಕಿಂಗ್, ವಿಮೆ, ವಾಣಿಜ್ಯ ವಹಿವಾಟು, ಸರಕು ಸಾಮಗ್ರಿ ಪೂರೈಕೆಯಂಥ ಸೇವಾ ಕ್ಷೇತ್ರಗಳಲ್ಲಿ ಇವುಗಳ ಹೂಡಿಕೆ ಮತ್ತು ಸಾರಥ್ಯದಿಂದಾಗಿಯೇ ಅಭಿವೃದ್ಧಿಯ ಪಥದಲ್ಲಿ ರಾಷ್ಟ್ರಗಳು ಮುನ್ನಡೆಯುತ್ತಿವೆ. ಇಂಥ ಕಂಪನಿಗಳು ನಮ್ಮ ಕೃಷಿಕರಿಗಾಗಿ ಔಷಧ, ರಸಗೊಬ್ಬರ, ಕೀಟನಾಶಕಗಳನ್ನೂ, ಹೈಬ್ರಿಡ್ ಬೀಜಗಳನ್ನೂ ಕೊಡದಿದ್ದರೆ ಹಸಿವೆಯಿಂದ ಇಷ್ಟೊಂದು ಕೋಟಿ ಜನರು ತತ್ತರಿಸುತ್ತಿದ್ದರಲ್ಲವೆ? ಕೃಷಿಯ ಈ ಒಳಸುರಿಗಳನ್ನೆಲ್ಲ ಸರ್ಕಾರವೇ ಪೂರೈಸಲು ಸಾಧ್ಯವಿತ್ತೆ?

ಈ ಪ್ರಶ್ನೆಗಳಿಗೆ ಹೀಗೂ ಮರುಪ್ರಶ್ನೆ ಹಾಕಲು ಸಾಧ್ಯವಿದೆ: ಸರ್ಕಾರಿ ಕೃಷಿ ಇಲಾಖೆ ಇಂಥ ಕೆಲಸಗಳನ್ನು ನಿಭಾಯಿಸಲು ಅಸಮರ್ಥವೆಂದು ಸರ್ಕಾರಕ್ಕೆ ಬಿಂಬಿಸಿದ್ದು ಇವೇ ಕಂಪನಿಗಳೇ ಅಲ್ಲವೆ? ಪ್ರಜೆಗಳಿಗೆ ಮಿತಬೆಲೆಯಲ್ಲಿ ಬಿ.ಟಿ ಹತ್ತಿ ಬೀಜಗಳನ್ನು ಪೂರೈಸೋಣವೆಂದು ಸರ್ಕಾರಿ ವಿಜ್ಞಾನಿಗಳು ಏನೋ ಕಷ್ಟಪಟ್ಟು ಸಂಶೋಧನೆ ಮಾಡುತ್ತಿದ್ದರೆ ಅದನ್ನು ಕುಲಗೆಡಿಸಿದ್ದು ಇವೇ ಕಂಪನಿಗಳೇ ಅಲ್ಲವೆ? ಲಾಭದ ಏಕಮೇವ ಉದ್ದೇಶದಿಂದ ಕೃಷಿರಂಗದಲ್ಲಿ ಅತಿಶಯ ಗೊಬ್ಬರ, ಅತಿ ನೀರನ್ನು ಬೇಡುವ ತಳಿಗಳನ್ನು ಸೃಷ್ಟಿಸಿ ಕೀಟಗಳ ದಾಳಿಗೆ, ಕೀಟನಾಶಕಗಳ ಹಾವಳಿಗೆ ಕಾರಣವಾಗಿ ರೈತರೆಲ್ಲ ನೀರಿಗಾಗಿ ಹಪಹಪಿಸುವಂತೆ ಮಾಡಿ, ಸರ್ಕಾರಗಳ ಕೈಕಟ್ಟಿದ್ದು ಈ ಕಂಪನಿಗಳೇ ಅಲ್ಲವೆ? ವಿಷ ಯಾವುದು ಔಷಧ ಯಾವುದು ಎಂಬುದರ ವ್ಯತ್ಯಾಸವೇ ರೈತರಿಗೆ ಗೊತ್ತಾಗದಂತೆ ಗೊಂದಲ ಸೃಷ್ಟಿಸಿ, ಸುಸ್ಥಿರ ಕೃಷಿ ವಿಧಾನಗಳನ್ನೂ ದೇಶೀ ತಳಿಗಳನ್ನೂ ಮೂಲೆಗುಂಪಾಗಿಸಿ ಕೃಷಿಕರನ್ನೆಲ್ಲ ತೆಕ್ಕೆಗೆ ತೆಗೆದುಕೊಂಡಿದ್ದು ಇವೇ ಅಲ್ಲವೆ? ಹಣವನ್ನು ನೀರಿನಂತೆ ಸುರಿದರೆ ಪ್ರಜಾತಂತ್ರದ ಎಲ್ಲ ನಾಲ್ಕು ಆಧಾರ ಸ್ತಂಭಗಳನ್ನೂ ಸಡಿಲಿಸಿ ಬೇಕೆಂದಂತೆ ಸರಿಸಬಹುದೆಂದು ತೋರಿಸಿದ್ದು ಇವೇ ಕಂಪನಿಗಳೇ ಅಲ್ಲವೆ?

ಇದುವರೆಗೆ ಮೊನ್ಸಾಂಟೊ ತನ್ನ ಬಿ.ಟಿ ಹತ್ತಿಯಿಂದಾಗಿ ಇಡೀ ದೇಶದ ಕೃಷಿರಂಗವನ್ನು ಆಕ್ರಮಿಸಿಕೊಂಡು ನಾನಾ ಬಗೆಯ ತುಮುಲಗಳಿಗೆ ಕಾರಣವಾಗಿತ್ತು. ಬಿ.ಟಿ ಹತ್ತಿಯ ಆಮಿಷದಿಂದಾಗಿ ರೈತರು ಮೆಣಸು, ಕುಸುಬೆ, ಎಳ್ಳು, ಅಕ್ಕಡಿಗಳಿಗೆ ತಿಲಾಂಜಲಿ ಕೊಡುವಂತಾಯಿತು; ದೇಸೀ ಹತ್ತಿ ತಳಿಗಳನ್ನು ಕಳೆದುಕೊಳ್ಳುವಂತಾಯಿತು, ಸಾವಿರಾರು ರೈತರು ನೇಣು ಹುಡುಕುವಂತಾಯಿತು. ಅಷ್ಟೆಲ್ಲ ಸಾಧನೆ ಸಾಲದೆಂದು ನಮ್ಮದೇ ವಿಜ್ಞಾನಿಗಳ ನೆರವಿನಿಂದ ಈ ಕಂಪನಿ ಕಳ್ಳಮಾರ್ಗದಲ್ಲಿ ಬದನೆ ಗಿಡಕ್ಕೂ ಬಿ.ಟಿ ತಳಿಗುಣವನ್ನು ತೂರಿಸಲು ಹೊರಟಾಗ ಕರ್ನಾಟಕದ ಪ್ರಜ್ಞಾವಂತರು ಕೋರ್ಟಿನ ಕಟ್ಟೆ ಏರಿ ಇಡೀ ಹುನ್ನಾರಕ್ಕೆ ತಡೆಯಾಜ್ಞೆ ತಂದರು. ಬದನೆಗೆ ಬಿಗಿದಿದ್ದ ಮೊನ್ಸಾಂಟೊ ಕುಣಿಕೆ ಸಡಿಲಗೊಂಡಿತು.

ಈಗ ಉತ್ತರ ಭಾರತದ ಸಾಸಿವೆ ಬೆಳೆಗಾರರು ಬಾಯರ್ ಕುಣಿಕೆಗೆ ಬೀಳುವಂತಾಗಿದೆ. ದಿಲ್ಲಿ ವಿ.ವಿ.ಯ ಕುಲಪತಿಯಾಗಿದ್ದ ವಿಜ್ಞಾನಿ ದೀಪಕ್ ಪೆಂತಾಲ್ ತಾನು ನಿವೃತ್ತಿಯಾದ ನಂತರ ಅದೇ ವಿ.ವಿ.ಯ ಪ್ರಯೋಗಶಾಲೆಯಲ್ಲಿ ‘ಡಿಎಮ್‌ಎಚ್ 11’ ಹೆಸರಿನ ಕುಲಾಂತರಿ ಸಾಸಿವೆಯನ್ನು ಸೃಷ್ಟಿ ಮಾಡಿದರು. ಮೊನ್ಸಾಂಟೊ ಕಂಪನಿಗೂ ತನಗೂ ಸಂಬಂಧವೇ ಇಲ್ಲವೆಂದು ಹೇಳಿದರು. ಆಮೇಲೆ ನೋಡಿದರೆ ಆ ಸಾಸಿವೆಯ ಸಸ್ಯದೊಳಕ್ಕೆ ತೂರಿಸಿದ ಏಕಾಣುಜೀವಿಯ ಹಕ್ಕುಸ್ವಾಮ್ಯ ಬಾಯರ್ ಕಂಪನಿಯ ಹೆಸರಿನಲ್ಲಿದೆ (ಇದರ ವಿವರಗಳು ಈ ವರ್ಷ ಏಪ್ರಿಲ್ 7ರ ಇದೇ ಅಂಕಣದಲ್ಲಿ ‘ಸಾವಿಲ್ಲದ ನಮೂನೆಯ ಸಾಸಿವೆ’ಯಲ್ಲಿವೆ).

ಕುಲಾಂತರಿ ಸಾಸಿವೆಯನ್ನು ಹೊಲಕ್ಕಿಳಿಸಲು ಏನೆಲ್ಲ ರಾಜಕೀಯ ಸರ್ಕಸ್ ನಡೆಯುತ್ತಿದೆ. ವಾಸ್ತವವಾಗಿ ನಮ್ಮ ದೇಶಕ್ಕೆ ಸಾಸಿವೆಯ ಹೊಸ ತಳಿಯ ಅಗತ್ಯವೇ ಇಲ್ಲ. ಸೂಕ್ತ ಬೆಂಬಲ ಸಿಕ್ಕರೆ ನಮ್ಮ ರೈತರು ಈಗಿರುವ ತಳಿಗಳನ್ನೇ ಬಳಸಿ ಈಗಿನ ದುಪ್ಪಟ್ಟು ಸಾಸಿವೆ ಬೆಳೆಯುತ್ತಾರೆ. ಈ ಹೊಸ ತಳಿಯ ವಿಶೇಷ ಏನೆಂದರೆ ಅದರ ಮೇಲೆ ಬಾಯರ್ ಕಂಪನಿಯ ಕಳೆನಾಶಕ ವಿಷವನ್ನು ಸುರಿಯುತ್ತ ಹೋದರೆ ಸಾಸಿವೆ ಗಿಡಕ್ಕೆ ಏನೂ ಆಗುವುದಿಲ್ಲ, ಆದರೆ ಅದರ ಆಸುಪಾಸಿನಲ್ಲಿ ಬೆಳೆದ ಕಳೆಯೆಲ್ಲ ಸುಟ್ಟುಹೋಗುತ್ತದೆ.

ನಾಳೆ ದೊಡ್ಡ ಕಂಪನಿಗಳು ಸಾವಿರಾರು ಎಕರೆಯಲ್ಲಿ ಸಾಸಿವೆ ಬೆಳೆದು ದೊಡ್ಡ ಯಂತ್ರಗಳ ಮೂಲಕ  ಕಳೆನಾಶಕವನ್ನು ಸುರಿಯುತ್ತ ಸಾಗಬಹುದು. ಯಂತ್ರಗಳ ಬದಲು ಮನುಷ್ಯರೇ ಕಳೆನಾಶಕ ವಿಷವನ್ನು ಎರ್ರಾಬಿರ್ರಿ ಎರಚುತ್ತ ಹೋದರೆ ಮಣ್ಣಿಗೆ, ನೀರಿಗೆ, ಪರಿಸರಕ್ಕೆ, ಮನುಷ್ಯರಿಗೆ ಅಪಾಯ ತಪ್ಪಿದ್ದಲ್ಲ. ಅಮೆರಿಕದ ಜೇನುತುಪ್ಪದಲ್ಲೂ ಈ ಕಳೆನಾಶಕ ವಿಷ ಪತ್ತೆಯಾಗಿದ್ದನ್ನು ಅಲ್ಲಿನ ಆಹಾರ ವಿಜ್ಞಾನ ಸಂಸ್ಥೆ ಈಚೆಗೆ ವರದಿ ಮಾಡಿದೆ. ಅದಕ್ಕೇ ಇರಬೇಕು, ‘ಕ್ಯಾನ್ಸರ್‌ಗೆ ಔಷಧ ಕೊಡುವ ಕಂಪನಿಯೇ ಕೊನೆಗೆ ಕ್ಯಾನ್ಸರ್ ರೋಗಕ್ಕೂ ಕಾರಣವಾಗಲಿದೆ’ ಎಂದೊಬ್ಬರು ಟ್ವೀಟ್ ಮಾಡಿದ್ದಾರೆ.

ಇಂಥ ಕುಲಾಂತರಿ ತಳಿಗಳನ್ನು ನಿಯಂತ್ರಿಸಬೇಕಾದ ಜಿಇಎಸಿ ಸಮಿತಿಯೇ ದುರ್ಬಲವಾಗಿದೆ. ಅದರಲ್ಲಿ ವೈದ್ಯವಿಜ್ಞಾನಿಗಳೇ ಇಲ್ಲ. ಈ ಸಮಿತಿಯ ತೀರ್ಮಾನಗಳನ್ನು ಮರು ಪರಿಶೀಲನೆ ಮಾಡಬೇಕಾದ ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ)ಗೆ ಹೈಟೆಕ್ ಸಂಶೋಧನೆಯ ಹೊಣೆ ಇದೆ ವಿನಾ ರೈತರ ಹಿತಾಸಕ್ತಿ ಅದರದ್ದಲ್ಲ.

ಈ ಯಾವುದನ್ನೂ ಗಣನೆಗೆ ತಾರದೆ ಇದೀಗ ಅರಣ್ಯ ಮತ್ತು ಪರಿಸರ ಇಲಾಖೆ ‘ಕುಲಾಂತರಿ ಸಾಸಿವೆಯನ್ನು ಹೊಲಕ್ಕಿಳಿಸುವ ವಿಷಯದಲ್ಲಿ ಯಾರದಾದರೂ ಆಕ್ಷೇಪಣೆ ಇದೆಯೇ?’ ಎಂದು ಸಾರ್ವಜನಿಕರನ್ನು ಕೋರಿದೆ. ಆದರೆ ಈ ಸಸ್ಯದಿಂದ ಬರುವ ಅಪಾಯಗಳು ಏನೇನು ಎಂಬ ವೈಜ್ಞಾನಿಕ ವರದಿಯನ್ನು ಬಹಿರಂಗಪಡಿಸಿಲ್ಲ. ಇಳುವರಿ ಪರೀಕ್ಷೆಯ ವರದಿಯನ್ನೂ ಜೊತೆಗಿಟ್ಟಿಲ್ಲ. ಜನರಿಂದ ಆಕ್ಷೇಪಣೆ ಕೋರುವ ಮುನ್ನ ರಾಜ್ಯ ಸರ್ಕಾರಗಳ ಅನುಮತಿ ಕೋರಬೇಕಿತ್ತು. ಅವೆಲ್ಲವನ್ನೂ ಕಡೆಗಣಿಸಿ ಕುಲಾಂತರಿ ಸಾಸಿವೆಯನ್ನು ಹೊಲಕ್ಕಿಳಿಸಲು ಅಷ್ಟೆಲ್ಲ ಅವಸರ ಏತಕ್ಕೆ ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. 

ಈ ಎರಡು ದಿಗ್ಗಜ ಕಂಪನಿಗಳ ವಿಲೀನದಿಂದ ಜಗತ್ತಿನ ಎರಡು ಸಾವಿರ ಬಗೆಯ ಆಹಾರ ಬೀಜಗಳು ಬಾಯರ್ ಕಂಪನಿಯ ಬುಟ್ಟಿಗೆ ಬಂದಂತಾಗಿದೆ. ಭಾರತದಲ್ಲಿ ಬಾಯರ್ ಬೆಂಕಿಯ ಮೇಲೆ ಮೊನ್ಸಾಂಟೊ ಬಾಣಲೆ ಕೂತಂತಾಗಿದೆ. ಬಿ.ಟಿ ಹತ್ತಿಯಲ್ಲಿ ಬೆಂದವರು ಹುಷಾರಾಗಿ ಕೆಳಕ್ಕೆ ಜಿಗಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT