ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಹಿಂದರ್ ಮತ್ತು ಜೋಕರ್‌ಗಳ ಗುಂಪು

Last Updated 30 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಭಾರತದ ಕ್ರಿಕೆಟ್‌ನಲ್ಲಿ ಯಾವತ್ತೂ ಸುದ್ದಿಗೆ ಬರ ಇರುವುದಿಲ್ಲ. ಒಮ್ಮಮ್ಮೆ ಮೈದಾನದೊಳಗಿನ ಆಟಕ್ಕಿಂತ ಮೈದಾನದ ಹೊರಗೆ ಕ್ರಿಕೆಟ್ ಮಂಡಳಿ ಅಧಿಕಾರಿಗಳು ಆಡುವ ಆಟವೇ ಕುತೂಹಲಕಾರಿಯಾಗಿರುತ್ತದೆ. ಇಂಥ ಒಂದು ಆಟದಲ್ಲಿ ಮಂಡಳಿ ಒಂದು ದೊಡ್ಡ ವಿಕೆಟ್ ಉರುಳಿಸಿದೆ.

ಮೊಹಿಂದರ್ ಅಮರನಾಥ್ ತಮ್ಮ ಆಟದ ದಿನಗಳಲ್ಲಿ ಎಷ್ಟೋ ಸಲ ಮಂಡಳಿಯ ಬೌನ್ಸರುಗಳಿಗೆ ತಲೆ ಕೊಟ್ಟಿದ್ದಾರೆ. ಆಯ್ಕೆಗಾರರನ್ನು `ಜೋಕರುಗಳ ಗುಂಪು~ ಎಂದು ಟೀಕಿಸಿದ್ದ ಅವರು ಫೀನಿಕ್ಸ್ ಹಕ್ಕಿಯಂತೆ ಮತ್ತೆ ಮತ್ತೆ ಬೂದಿಯಿಂದ ಎದ್ದು ಬರುತ್ತಿದ್ದರಾದರೂ, ಈಗ ಆಯ್ಕೆಗಾರರಾಗಿ ತಮ್ಮ ತಲೆ ಉಳಿಸಿಕೊಳ್ಳಲಾಗಲಿಲ್ಲ.

ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿ ಉತ್ತರ ವಲಯವನ್ನು ಪ್ರತಿನಿಧಿಸುತ್ತಿದ್ದ ಅವರು ಸಮಿತಿಯ ಅಧ್ಯಕ್ಷರಾಗುವ ಕನಸು ಕಂಡಿದ್ದರು. ಅಧ್ಯಕ್ಷರಾಗುವುದಿರಲಿ ಸದಸ್ಯನಾಗಿಯೂ ಮುಂದುವರಿಯಲು ಅವರಿಗೆ ಸಾಧ್ಯವಾಗಲಿಲ್ಲ.
ಮೊಹಿಂದರ್ ಅಮರನಾಥ್ ಅವರಿಗೆ ಬಂಡಾಯ ಎಂಬುದು ರಕ್ತಗತವಾಗಿ ಬಂದದ್ದು.

ಅವರ ತಂದೆ ಲಾಲಾ ಅಮರನಾಥ್ ಮಂಡಳಿಯ ವಿರುದ್ಧ ಯಾವಾಗಲೂ ಕತ್ತಿ ಮಸೆದವರೇ. ಭಾರತ 1983 ರಲ್ಲಿ ವಿಶ್ವ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಲ್‌ರೌಂಡರ್ ಮೊಹಿಂದರ್ ಕೂಡ ಆಯ್ಕೆಗಾರರನ್ನು ಎದುರು ಹಾಕಿಕೊಂಡವರೇ.

ಯಾವ ವ್ಯವಸ್ಥೆಯನ್ನು ಅವರು ಕಟುವಾಗಿ ಟೀಕಿಸುತ್ತಿದ್ದರೋ ಅದೇ ವ್ಯವಸ್ಥೆಯಲ್ಲಿ ಭಾಗಿಯಾದ ಅವರು ತಮ್ಮ ಕಠೋರ ನಿಲುವನ್ನು ಬದಲಿಸದಿರುವುದೇ ಮುಳುವಾದಂತಿದೆ. ಅವರು ಆಯ್ಕೆ ಸಮಿತಿಯೊಳಗೆ ಬಂದು ಒಂದು ವರ್ಷವಾಗಿತ್ತಷ್ಟೇ.
 
ಮಹೇಂದ್ರ ಸಿಂಗ್ ದೋನಿ ವಿಶ್ವ ಕಪ್ ಗೆದ್ದ ಮೇಲೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿಗಳನ್ನು ಸೋತರು. ದೋನಿ ಅವರನ್ನು ಬದಲಿಸಬೇಕು ಎಂದು ನಿಷ್ಠುರವಾಗಿ ಹೇಳಿದವರು ಮೊಹಿಂದರ್ ಒಬ್ಬರೇ. ಅಧ್ಯಕ್ಷ ಕೆ. ಶ್ರೀಕಾಂತ್ ಬದಲಾವಣೆಗೆ ಸಿದ್ಧರಿರಲಿಲ್ಲ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಎನ್. ಶ್ರೀನಿವಾಸನ್, ಐಪಿಎಲ್‌ನಲ್ಲಿ ಆಡುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರು. ದೋನಿ ತಂಡದ ನಾಯಕ. ಶ್ರೀನಿವಾಸನ್ ಅವರ ಕೃಪಾಕಟಾಕ್ಷ ದೋನಿ ಮೇಲೆ ಇದೆ. ಯಾವಾಗಲೂ ಮುಳ್ಳಿನಂತೆಯೇ ಚುಚ್ಚುವ ಮೊಹಿಂದರ್ ಅಮರನಾಥ್ ಅವರನ್ನು ಹೊರಹಾಕುವುದೇ ಲೇಸು ಎಂದು ಮಂಡಳಿ ಅಧ್ಯಕ್ಷರು ಭಾವಿಸಿರಬೇಕು. ಈ ಆಟದಲ್ಲಿ ಮೊಹಿಂದರ್ ಅಮರನಾಥ್ ಮತ್ತೆ ಎದ್ದು ಬರುವುದು ಕಷ್ಟ.

ಆಯ್ಕೆ ಮಂಡಳಿಯಲ್ಲಿ ಯಾರಿರಬೇಕು ಎಂದು ನಿರ್ಧರಿಸುವ ಪೂರ್ಣ ಅಧಿಕಾರ ಮಂಡಳಿ ಕೈಯಲ್ಲೇ ಇದೆ. ಇದನ್ನು ಯಾರೂ ಪ್ರಶ್ನಿಸುವಂತೆಯೂ ಇಲ್ಲ. ಬಹುಶಃ ಇದೇ ಕಾರಣಕ್ಕಾಗಿಯೇ ಸುನೀಲ್ ಗಾವಸ್ಕರ್ ಎಂದೂ ಆಯ್ಕೆ ಸಮಿತಿ ಸದಸ್ಯರಾಗಲಿಲ್ಲ. ಮೊಹಿಂದರ್ ಅವರಂತೆಯೇ ಗಾವಸ್ಕರ್ ಕೂಡ ಮಂಡಳಿ ವಿರುದ್ಧ ಸಿಡಿದೆದ್ದವರೇ. ಅವರೂ ಒಮ್ಮೆ ಆಯ್ಕೆ ಸಮಿತಿಯವರನ್ನು `ಜೋಕರುಗಳು~ ಎಂದು ಕರೆದಿದ್ದರು.

ಆದರೆ ಅವರು ಟೆಲಿವಿಷನ್ ವೀಕ್ಷಕ ವಿವರಣೆಗಾರರಾದ ಮೇಲೆ ಮಂಡಳಿ ವಿರುದ್ಧ ಎಂದೂ ದನಿ ಎತ್ತಲೇ ಇಲ್ಲ. ಮಂಡಳಿಯ ಕೆಲವು ಸಮಿತಿಗಳಲ್ಲಿ ಇದ್ದ ಗಾವಸ್ಕರ್ ಕೆಲವು ಆಟಗಾರರ ಆಟದ ಬಗ್ಗೆ ಟೀಕಿಸಿದ್ದಾರೆಯೇ ಹೊರತು ಮಂಡಳಿಯ ರಾಜಕೀಯದ ಬಗ್ಗೆ ಎಂದೂ ಮಾತನಾಡಿದವರಲ್ಲ.
 
ಹಣ ಎಂಥವರ ಬಾಯಿಯನ್ನೂ ಮುಚ್ಚಿಸುತ್ತದೆ ಎಂಬುದಕ್ಕೆ ಮಂಡಳಿಯಲ್ಲಿ ಹಲವು ಉದಾಹರಣೆಗಳು ಸಿಗುತ್ತವೆ. ಈಗ ಆಯ್ಕೆಗಾರರಿಗೆ ವರ್ಷಕ್ಕೆ 60 ಲಕ್ಷ ರೂಪಾಯಿ ಸಂಭಾವನೆ ಸಿಗುತ್ತದೆ. ಜೊತೆಗೆ ಪಂದ್ಯಗಳು ನಡೆಯುವಾಗ ರಾಜಾತಿಥ್ಯವೂ ಇರುತ್ತದೆ. ಇಲ್ಲಿ ಮೌನ ಅಕ್ಷರಶಃ ಬಂಗಾರ. ತಂಡದ ಆಯ್ಕೆ ಸಂಪೂರ್ಣ ನಿಷ್ಪಕ್ಷಪಾತವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಕೆ. ಶ್ರೀಕಾಂತ್ ಅವರ ಸ್ಥಾನಕ್ಕೆ ಸಂದೀಪ್ ಪಾಟೀಲ್ ಆಯ್ಕೆಯಾಗಿದ್ದಾರೆ. ದಕ್ಷಿಣ ವಲಯದಿಂದ ರೋಜರ್ ಬಿನ್ನಿ ಸಮಿತಿಯೊಳಗೆ ಬಂದಿದ್ದಾರೆ. ಶ್ರೀಕಾಂತ್ ಅವರ ಮಗನೂ ಆಟಗಾರ. ಅವರಂತೆಯೇ ಬಿನ್ನಿ ಕೂಡ ಧರ್ಮಸಂಕಟ ಎದುರಿಸಬೇಕಾಗುತ್ತದೆ.
 
ಸ್ಟುವರ್ಟ್ ಬಿನ್ನಿ ರಾಷ್ಟ್ರೀಯ ತಂಡದ ಬಾಗಿಲು ತಟ್ಟುತ್ತಿದ್ದಾರೆ. `ಮಗನ ಆಯ್ಕೆ ಸಂದರ್ಭ ಬಂದಾಗ ನಾನು ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ~ ಎಂದು ರೋಜರ್ ಹೇಳಿದ್ದಾರೆ. ಅದರಂತೆಯೇ ಅವರು ನಡೆದುಕೊಳ್ಳಲೂಬಹುದು. ಸ್ಟುವರ್ಟ್ ಪ್ರತಿಭೆಯ ಆಧಾರದ ಮೇಲೆಯೇ ಆಯ್ಕೆಯಾಗಬಹುದು. ಆದರೂ ಅಪಸ್ವರ ಕೇಳಿಬರುವುದು ಖಂಡಿತ.

ರೋಜರ್ ಇದನ್ನು ಲೆಕ್ಕಿಸಬೇಕಿಲ್ಲ. ಯಾಕೆಂದರೆ ಅವರಿಗೆ ಕ್ರಿಕೆಟ್ ರಂಗದ ಅನುಭವ ಸಾಕಷ್ಟಿದೆ. 1983 ರ ವಿಶ್ವ ಕಪ್ ಹೀರೋಗಳಲ್ಲಿ ಅವರೂ ಒಬ್ಬರಾಗಿದ್ದರು. ಒಬ್ಬ ಆಟಗಾರನಾಗಿ, ತರಬೇತುದಾರನಾಗಿ, ಕರ್ನಾಟಕ ತಂಡದ ಆಯ್ಕೆಗಾರನಾಗಿ ಅವರು ಪಡೆದಿರುವ ಅನುಭವ ಅಪಾರ.
 
ಇದುವರೆಗೆ ಅವರ ವಿರುದ್ಧ ಒಂದೇ ಒಂದು ಕಪ್ಪು ಚುಕ್ಕೆಯೂ ಕಂಡಿಲ್ಲ. ಮಗನ ಆಯ್ಕೆಗಾಗಿ ವಶೀಲಿ ನಡೆಸುವ ಸಂದರ್ಭ ಅವರಿಗೆ ಬರಲಿಕ್ಕಿಲ್ಲ. ಸ್ಟುವರ್ಟ್ ಚೆನ್ನಾಗಿ ಆಡಿದರೆ ಅವರನ್ನು ಯಾರೂ ತಡೆಯಲು ಆಗುವುದಿಲ್ಲ. ಅಗ್ನಿಪರೀಕ್ಷೆಯಲ್ಲಿ ಪಾಸಾಗುವ ಸವಾಲು ಸ್ಟುವರ್ಟ್ ಮೇಲೆಯೇ ಇರುತ್ತದೆ. 

ತಂಡದ ಯಶಸ್ಸೊಂದೇ ಆಯ್ಕೆ ಸಮಿತಿಯ ಸಾಧನೆಗೆ ಅಳತೆಗೋಲು. ಶ್ರೀಕಾಂತ್ ನೇತೃತ್ವದ ಆಯ್ಕೆ ಸಮಿತಿಯನ್ನು ಹಾಗೂ ರಾಷ್ಟ್ರೀಯ ಜೂನಿಯರ್ ಆಯ್ಕೆ ಸಮಿತಿಯನ್ನು ದೂರುವಂತೆಯೇ ಇಲ್ಲ. ಯಾಕೆಂದರೆ ಕಳೆದ ವರ್ಷ ದೋನಿ ಪಡೆ ವಿಶ್ವ ಕಪ್ ಗೆದ್ದರೆ, ಈ ವರ್ಷ ಭಾರತದ 19 ವರ್ಷದೊಳಗಿನವರ ತಂಡ ವಿಶ್ವ ಕಪ್‌ನಲ್ಲಿ ಜಯಭೇರಿ ಬಾರಿಸಿತು.

ಈಗ ಸಂದೀಪ್ ಪಾಟೀಲ್‌ಗೆ ನಿಜವಾದ ಸವಾಲು ಎದುರಾಗಲಿದೆ. ಟ್ವೆಂಟಿ-20 ವಿಶ್ವ ಕಪ್ ಟೂರ್ನಿ ನಂತರ ಭಾರತ ಚಳಿಗಾಲದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ರಾಹುಲ್ ದ್ರಾವಿಡ್ ಮತ್ತು ವಿ.ವಿ.ಎಸ್. ಲಕ್ಷ್ಮಣ್ ನಿವೃತ್ತಿ ನಂತರ ಮಧ್ಯಮ ಕ್ರಮಾಂಕದಲ್ಲಿ ಉಳಿದುಕೊಂಡಿರುವವರು ಸಚಿನ್ ತೆಂಡೂಲ್ಕರ್ ಮಾತ್ರ. ಕ್ರಿಕೆಟ್‌ನಲ್ಲಿ ಎಲ್ಲವನ್ನೂ ಸಾಧಿಸಿರುವ ಸಚಿನ್ ನಿವೃತ್ತಿಯ ಬಗ್ಗೆ ಮಾತುಗಳು ಕೇಳಿಬರುತ್ತಿವೆ.

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅವರು ಮೂರು ಸಲ `ಬೌಲ್ಡ್~ ಆದಾಗ ಅವರ ತಾಂತ್ರಿಕ ಕೌಶಲ ಕಡಿಮೆಯಾಗಿದೆ ಎಂಬ ಟೀಕೆ ಕೇಳಿಬಂತು. ಸಚಿನ್‌ಗೆ ಬ್ಯಾಟಿಂಗ್ ಹೇಳಿಕೊಡುವುದು ಮೂರ್ಖತನ. ಅವರಿಗೆ ವಯಸ್ಸಾಗಿರಬಹುದು ಅಥವಾ ನಿವೃತ್ತಿಯ ದಿನಗಳು ಸಮೀಪಿಸಿರಬಹುದು. ಯಾವಾಗ ನಿವೃತ್ತಿಯಾಗಬೇಕು ಎಂಬುದು ಸಚಿನ್‌ಗೇ ಗೊತ್ತಿರುತ್ತದೆ.

ಬೆಂಗಳೂರಿನ ಶೇಷಾದ್ರಿಪುರ ಕಾಲೇಜಿಗೆ ಉಪನ್ಯಾಸಕ್ಕೆ ಹೋಗಿದ್ದಾಗ ಹುಡುಗ-ಹುಡುಗಿಯರಿಗೆ, `ಸಚಿನ್ ನಿವೃತ್ತಿಯಾಗಬೇಕೆ~ ಎಂದು ಪ್ರಶ್ನೆ ಕೇಳಿದ್ದೆ. ಹುಡುಗಿಯರೆಲ್ಲ `ಆಗಬಾರದು~ ಎಂದು ಕಿರುಚಿದಾಗ ಬಹಳಷ್ಟು ಹುಡುಗರೂ ಅದಕ್ಕೆ ತಮ್ಮ ಧ್ವನಿ ಸೇರಿಸಿದ್ದರು. ಆದರೆ ಒಬ್ಬ ಹುಡುಗ ಮಾತ್ರ ಎದ್ದು ನಿಂತು,~ ಇಲ್ಲ ಸರ್. ಸಚಿನ್ ನಿವೃತ್ತಿ ಯಾಗಬೇಕು.

ಅವರು ಚೆನ್ನಾಗಿ ಆಡುವಾಗಲೇ ನಿವೃತ್ತಿಯಾದರೆ ಅದಕ್ಕೆ ಬೆಲೆ ಬರುತ್ತದೆ. ರಾಹುಲ್ ದ್ರಾವಿಡ್ ಅವರ ಬಗ್ಗೆ ಗೌರವ ಮೂಡುವುದು ಇದೇ ಕಾರಣಕ್ಕಾಗಿ~ ಎಂದು ಹೇಳಿದ. ಪಾಕಿಸ್ತಾನದ ಇಮ್ರಾನ್ ಖಾನ್ ಕೂಡ ಹೀಗೇ ಹೇಳಿದ್ದಾರಲ್ಲವೇ? ಸಂದೀಪ್ ಪಾಟೀಲ್ ಮತ್ತು ಅವರ ಗುಂಪಿಗೆ ಸಚಿನ್ ನುಂಗಲಾಗದ ತುತ್ತೇ ಆಗುತ್ತಾರೆ.

ಸಚಿನ್ ನಿವೃತ್ತಿಯಾಗುವುದು ಖಂಡಿತವಾಗಿಯೂ ಬೇಸರದ ವಿಷಯವೇ. ಯಾಕೆಂದರೆ ಅವರಿಗೆ ಸರಿಸಾಟಿ ಯಾರೂ ಇಲ್ಲ. ಸಚಿನ್ ಬಗ್ಗೆ ಗೊತ್ತಿಲ್ಲದೇ ಇರುವ ಒಬ್ಬನೇ ಒಬ್ಬ ವ್ಯಕ್ತಿ ಈ ದೇಶದಲ್ಲಿ ಸಿಗುವುದಿಲ್ಲ. ಆದರೆ ಎಲ್ಲ ಒಳ್ಳೆಯ ಸಂಗತಿಗಳಿಗೂ ಅಂತ್ಯ ಎಂಬುದೊಂದು ಇರುತ್ತದೆ. ಸಚಿನ್ ಬ್ಯಾಟ್ ಕೆಳಗಿಡುವ ನಿರ್ಧಾರ ಆಯ್ಕೆಗಾರರಿಂದ ಮಾತ್ರ ಬರಬಾರದಷ್ಟೇ.

ಸಚಿನ್ ಅವರಂತೆಯೇ ವೀರೇಂದ್ರ ಸೆಹ್ವಾಗ್ ಕೂಡ ಟೀಕಾಕಾರರ ಪಟ್ಟಿಯಲ್ಲಿದ್ದಾರೆ. ಸೆಹ್ವಾಗ್ ಆಡಲು ಬಂದರೆ ಚೆಂಡನ್ನು ಹೊಡೆಯುತ್ತಲೇ ಇರಬೇಕು ಎಂದು ಜನ ಬಯಸುತ್ತಾರೆ. ಎರಡು ಸಲ ವಿಫಲರಾದರೆ `ಮುಗಿಯಿತು ಇವರ ಆಟ~ ಎಂದೇ ಯೋಚಿಸತೊಡಗುತ್ತಾರೆ.
 
ಕ್ರಿಕೆಟ್ ಹುಚ್ಚಿನ ನಮ್ಮ ದೇಶದಲ್ಲಿ ಎಲ್ಲವೂ ಅತಿಯಾಗಿಯೇ ಇರುತ್ತದೆ. ಹೊಗಳುವುದರಲ್ಲೂ ಮುಂದು, ತೆಗಳುವುದರಲ್ಲೂ ಮುಂದು. ಸಚಿನ್ ಬಗ್ಗೆ ಎಲ್ಲರಿಗೂ ವಿಪರೀತ ಮೋಹ ಇದೆ. ಸಚಿನ್‌ಗೂ ಇದು ಗೊತ್ತಿದೆ. ಬೇರೆಯವರ ಮಾತು ಕೇಳಿ ಅವರು ನಿವೃತ್ತರಾಗಬೇಕಿಲ್ಲ. ಅದನ್ನು ಅವರೇ ನಿರ್ಧರಿಸಬೇಕು. ಅವರು ಆಡುವುದನ್ನು ನಿಲ್ಲಿಸಿದರೂ ಜನ ಅವರನ್ನು ಮರೆಯುವುದಿಲ್ಲ. ಸಚಿನ್ ತೆಂಡೂಲ್ಕರ್ ದಾಖಲೆಗಳು ಮುಂದಿನ ಪೀಳಿಗೆಯವರಿಗೂ ಅವರ ಪರಿಚಯ ಮಾಡಿಕೊಡುತ್ತಲೇ ಇರುತ್ತವೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT