ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಡಗಳ ನಾಡಿನಲ್ಲಿ ಪ್ರಮೀಳೆಯರೇ ‘ಪುರುಷ’ರು!

Last Updated 3 ಸೆಪ್ಟೆಂಬರ್ 2017, 19:02 IST
ಅಕ್ಷರ ಗಾತ್ರ

ದೇಶದ ಎಲ್ಲೆಡೆ ಹೆಣ್ಣನ್ನು ಅಮಾನುಷವಾಗಿ ತುಳಿದಿಟ್ಟ ಗಂಡಾಳಿಕೆ ಎಗ್ಗುಸಿಗ್ಗಿಲ್ಲದೆ ಮೆರೆದಿರುವ ದಿನಗಳಲ್ಲಿ ಇಲ್ಲೊಂದು ಅಪವಾದ. ಪುಟ್ಟ ರಾಜ್ಯ ಮೇಘಾಲಯದ ಖಾಸಿ ಬುಡಕಟ್ಟು ಜನರು ಸಾವಿರಾರು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಮಾತೃಪ್ರಧಾನ ಕುಟುಂಬ ಪದ್ಧತಿಯಲ್ಲಿ ಪುರುಷಪ್ರಧಾನ ಸಮಾಜದ ಅನೇಕ ಅನಿಷ್ಟಗಳಿಗೆ ಅವಕಾಶವೇ ಇಲ್ಲ.

ಅರ್ಧ ಭೂಮಿಯ ಒಡತಿಯನ್ನು ಇನ್ನಿಲ್ಲದಂತೆ ಅದುಮಿಟ್ಟು ಅತ್ಯಾಚಾರ ನಡೆಸಿರುವ ನಮ್ಮ ತಥಾಕಥಿತ ಸಮಾಜ, ಈ ಬುಡಕಟ್ಟು ಜನರು ಬದುಕಿರುವ ಪರಿಯತ್ತ ಒಮ್ಮೆ ಹೊರಳಿ ನೋಡಿದರೆ ಗಳಿಸಿಕೊಳ್ಳಬಹುದೇ ವಿನಾ ಕಳೆದುಕೊಳ್ಳುವುದು ಏನೂ ಇಲ್ಲ. ಗಂಡಾಳಿಕೆ ಮತ್ತು ವರ್ಣವ್ಯವಸ್ಥೆಗೆ ಅಗ್ರಾಸನ ಹಾಕಿರುವ ಮನುಧರ್ಮ ಶಾಸ್ತ್ರದಲ್ಲಿ ಕೆಲವು ಬದಲಾವಣೆಗಳನ್ನು ತರುವ ಅಗತ್ಯವಿದೆ ಎಂಬ ಮಾತನ್ನು ಸಂಘಪರಿವಾರವೇ ಇತ್ತೀಚೆಗೆ ಆಡಿರುವುದನ್ನು ಈ ಸಂದರ್ಭದಲ್ಲಿ ನೆನೆಯುವುದು ಪ್ರಸ್ತುತ.

ದೇಶದ ಇತರೆಡೆ ಪಿತೃಪ್ರಧಾನ ಕುಟುಂಬಗಳಲ್ಲಿ ಮನೆಮಗಳಿಗೆ ಹೆತ್ತವರು ಕಣ್ಣೀರುಗರೆದು ವಿದಾಯ ಹೇಳಿ ಗಂಡನ ಮನೆಗೆ ಕಳುಹಿಸಿಕೊಟ್ಟರೆ ಮೇಘಾಲಯದಲ್ಲಿ ಗಂಡು ಮಗನನ್ನು ಹಾಗೆ ಕಳಿಸಿಕೊಡುತ್ತಾರೆ. ಗಂಡು ತಾನು ಹುಟ್ಟಿದ ಮನೆಯನ್ನು ತೊರೆದು ಅತ್ತೆಯ ಮನೆಗೆ ತೆರಳಿ ಅಲ್ಲಿಯೇ ನೆಲೆಸಿ ಪತ್ನಿಯೊಂದಿಗೆ ಬಾಳುವೆ ಮಾಡಬೇಕು.

ಮೇಘಾಲಯದ ಮಾತೃಪ್ರಧಾನ ಕುಟುಂಬ ಪದ್ಧತಿಯಲ್ಲಿ ಮಹಿಳೆಯ ಬದುಕು ಘನತೆಯದು. ವಿಶೇಷ ಸ್ಥಾನಮಾನದ ಅಗ್ಗಳಿಕೆ ಆಕೆಯದು. ಕುಟುಂಬದ ಆಸ್ತಿಪಾಸ್ತಿಗೆ ಆಕೆಯೇ ಪೋಷಕಿ ಮತ್ತು ಸಂರಕ್ಷಕಿ. ಕುಟುಂಬದ ಆಗುಹೋಗುಗಳಲ್ಲಿ ಆಕೆಯದೇ ಕಡೆಯ ಮಾತು. ಆಸ್ತಿಪಾಸ್ತಿ, ಹೆಸರು, ಅಧಿಕಾರ, ಸಾಮಾಜಿಕ ದರ್ಜೆ ಎಲ್ಲವೂ ತಾಯಂದಿರಿಂದ ಹೆಣ್ಣುಮಕ್ಕಳಿಗೆ ದಾಟುತ್ತದೆಯೇ ವಿನಾ ಗಂಡುಮಕ್ಕಳಿಗೆ ಅಲ್ಲ. ಬ್ರಿಟಿಷ್ ಆಕ್ರಮಣಕ್ಕೆ ಮುನ್ನವೂ ರಾಜನ ಅಧಿಕಾರ ತನ್ನ ಮಗನಿಗೆ ದಾಟುತ್ತಿರಲಿಲ್ಲ. ರಾಜನ ಚಿಕ್ಕ ತಂಗಿಗೆ ವರ್ಗವಾಗುತ್ತಿತ್ತು. ಚಿಕ್ಕ ತಂಗಿಯ ಮಗನೇ ಮುಂದಿನ ರಾಜನಾಗುತ್ತಿದ್ದ. ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಪದ್ಧತಿಗೆ ಭಾರತ ಸಂವಿಧಾನದ ರಕ್ಷಣೆ ಉಂಟು. ತಮ್ಮ ಪರಂಪರಾಗತ ಕಾನೂನು ಕಟ್ಟಳೆಗಳನ್ನು ಪಾಲಿಸಿಕೊಂಡು ಹೋಗುವ ಹಕ್ಕನ್ನು ಬುಡಕಟ್ಟು ಮಂಡಳಿಗಳಿಗೆ ಸಂವಿಧಾನವೇ ನೀಡಿದೆ. The Khasi Social Custom of Lineage Act ಅಡಿಯಲ್ಲಿ ಮಾತೃಪ್ರಧಾನ ವ್ಯವಸ್ಥೆಯನ್ನು ಪೊರೆಯಲಾಗಿದೆ. ಮೇಘಾಲಯದ ಖಾಸಿ ಮತ್ತು ಜೈಂತಿಯಾ ಬುಡಕಟ್ಟುಗಳ ರಾಜರು ದೀರ್ಘಕಾಲ ಯುದ್ಧಗಳಿಗೆ ಹೋದಾಗ ಮನೆವಾರ್ತೆಯನ್ನು ರಾಣಿಯರಿಗೆ ಒಪ್ಪಿಸಿ ಹೋಗುತ್ತಿದ್ದರು. ಈ ಪದ್ಧತಿಯೇ ಕಾಲಾನುಕ್ರಮದಲ್ಲಿ ಮಹಿಳೆಯನ್ನು ಕೌಟುಂಬಿಕ ಅಧಿಕಾರ ಕೇಂದ್ರದಲ್ಲಿ ಸ್ಥಾಪಿಸಿತು ಎನ್ನಲಾಗಿದೆ.

ಕುಟುಂಬದ ಆಸ್ತಿಪಾಸ್ತಿಯ ಸಿಂಹಪಾಲು ತಾಯಿಯಿಂದ ಕಿರಿಯ ಮಗಳಿಗೆ ದಾಟುತ್ತದೆ. ಒಂದಷ್ಟು ಅಂಶ ಇತರೆ ಹೆಣ್ಣುಮಕ್ಕಳಿಗೆ ದೊರೆಯುತ್ತದೆಯೇ ವಿನಾ ಗಂಡುಮಕ್ಕಳಿಗೆ ಅಲ್ಲ. ಮದುವೆಯಾಗದ ತನ್ನ ಅಕ್ಕಂದಿರು, ವಿಕಲಾಂಗ ಸೋದರ ಸೋದರಿಯರು, ವಿಧವೆ ಅಥವಾ ವಿಚ್ಛೇದಿತ ಅಕ್ಕಂದಿರು ಹಾಗೂ ತೀರಿ ಹೋದ ಅಕ್ಕಂದಿರ ಮಕ್ಕಳು ಮರಿಗಳನ್ನು ಈ ಕಿರಿಯ ಮಗಳೇ ಸಾಕಿ ಸಲಹಬೇಕು. ತಂದೆ ತಾಯಂದಿರನ್ನು ಅವರ ಕಡೆಗಾಲದ ತನಕ ಪೊರೆಯುವ ಜವಾಬ್ದಾರಿಯೂ ಆಕೆಯದೇ. ಆಕೆಯ ಕುಟುಂಬದ ಎಲ್ಲ ಸದಸ್ಯರಿಗೂ ಕಿರಿ ಮಗಳ ಮನೆಯೇ ದಿಕ್ಕು ದೆಸೆ.

ಪಿತೃಪ್ರಧಾನ ಕುಟುಂಬಗಳಲ್ಲಿ ಪೋಷಕರು ಗಂಡು ಸಂತಾನಕ್ಕೆ ಹಂಬಲಿಸಿದಂತೆ ಇಲ್ಲಿ ಹೆಣ್ಣು ಸಂತಾನಕ್ಕೆ ಹಾತೊರೆಯಲಾಗುತ್ತದೆ. ಕಿರಿಮಗಳ ಸೋದರಮಾವನಿಗೂ ಆಸ್ತಿಪಾಸ್ತಿಯ ಮೇಲೆ ಸಮಾನ ನಿಯಂತ್ರಣವಿರುತ್ತದೆ. ಕುಟುಂಬದ ಗಂಡುಮಕ್ಕಳಿಗೆ ಕವಡೆ ಕಾಸಿನ ಅಧಿಕಾರವೂ ಇರುವುದಿಲ್ಲ. ಹುಟ್ಟಿದ ಎಲ್ಲ ಮಕ್ಕಳ ಹೆಸರಿನ ತುದಿಯಲ್ಲಿ ಉಳಿಯುವುದು ತಾಯಿಯ ನಾಮಧೇಯವೇ. ಆಕೆ ಒಂದಕ್ಕಿಂತ ಹೆಚ್ಚು ಮದುವೆಗಳನ್ನು ಮಾಡಿಕೊಳ್ಳಬಹುದು. ಎಲ್ಲ ಗಂಡಂದಿರಿಗೆ ಜನಿಸಿದ ಮಕ್ಕಳು ಆಕೆಯ ಬಳಿಯೇ ಉಳಿಯುತ್ತವೆ. ವಿವಾಹಿತ ಮಹಿಳೆ ವಿವಾಹ ವ್ಯವಸ್ಥೆಯ ಹೊರಗೆ ಸಂಬಂಧ ಬೆಳೆಸಿ ಮಕ್ಕಳನ್ನು ಹೆರುವುದು ಇಲ್ಲಿ ಸಾಧಾರಣ ಸಂಗತಿ. ಹಾಗೆ ಸಂಬಂಧ ಬೆಳೆಸಿದ ಮಹಿಳೆ ಅಥವಾ ಹುಟ್ಟಿದ ಮಗುವಿಗೆ ಯಾವ ಸಾಮಾಜಿಕ ಕಳಂಕವೂ ಬಾಧಿಸುವುದಿಲ್ಲ.

ಮೇಘಾಲಯದ ಖಾಸಿ-ಜೈಂತಿಯಾ-ಗಾರೋ ಬುಡಕಟ್ಟುಗಳ ಸಾಕಷ್ಟು ಹೆಣ್ಣುಮಕ್ಕಳು ಹೊರಗಿನ ಹಲವು ಸಂಸ್ಕೃತಿಗಳೊಂದಿಗೆ ಮುಖಾಮುಖಿಯಾಗಿದ್ದರೂ ಬುಡಕಟ್ಟಿನ ಹೊರಗಿನ ಭಾರತೀಯ ಮತ್ತು ವಿದೇಶಿ ಪುರುಷರನ್ನು ವರಿಸಿದ್ದರೂ ಮಾತೃಪ್ರಧಾನ ಸಂಸ್ಕೃತಿಯನ್ನು ಬಿಟ್ಟುಕೊಟ್ಟಿಲ್ಲ. ಮಕ್ಕಳು ಖಾಸಿ ಸಂಸ್ಕೃತಿಯನ್ನೇ ಅನುಸರಿಸಿದ್ದಾರೆ.

ಇಲ್ಲಿ ಆಸ್ತಿಪಾಸ್ತಿ ಹಣ ಮಾತ್ರವಲ್ಲ, ಲೌಕಿಕ ಬದುಕಿನಲ್ಲಿ ಮುಖ್ಯವೆನಿಸಿದ ಎಲ್ಲ ವ್ಯವಹಾರಗಳ ನಿಯಂತ್ರಣ ಮಹಿಳೆಯ ಕೈಯಲ್ಲಿ. ಅತಿ ಕಿರಿಯ ಮಗಳೇ ಅಮ್ಮನ ವಾರಸುದಾರಳು. ಕಿರಿಯ ಮಗಳು ಕುಟುಂಬದ ಉಳಿದೆಲ್ಲ ಸದಸ್ಯರಿಗಿಂತ ಹೆಚ್ಚು ಕಾಲ ಬದುಕಿರುತ್ತಾಳೆ ಮತ್ತು ಈ ಕಾರಣದಿಂದಾಗಿ ಎಲ್ಲರ ಯೋಗಕ್ಷೇಮ ನೋಡಿಕೊಳ್ಳಬಲ್ಲಳು ಎಂಬುದು ಕಿರಿಯ ಮಗಳ ಆಯ್ಕೆಯ ಹಿಂದಿನ ತರ್ಕ. ಹಣಕಾಸು ಮತ್ತಿತರೆ ಮುಖ್ಯ ವಿಚಾರಗಳು ಬಂದರೆ ಪುರುಷರು ದ್ವಿತೀಯ ದರ್ಜೆ ಪ್ರಜೆಗಳು. ಬಹಳಷ್ಟು ಪುರುಷರು ಹೊಲಗದ್ದೆಗಳಲ್ಲಿ ಕೆಲಸ ಮಾಡಲೆಂದು ಶಾಲೆಯನ್ನು ಬಿಡುತ್ತಾರೆ. ತಮ್ಮ ಆದಾಯವನ್ನು ಪತ್ನಿಗೆ ಒಪ್ಪಿಸಿ ಮನೆಗೆಲಸವನ್ನೂ ಮಾಡುತ್ತಾರೆ ಎನ್ನುತ್ತದೆ
ಬಿ.ಬಿ.ಸಿ. ಅಧ್ಯಯನ.

ಪುರುಷರಿಗೆ ಇದೇ ಇಷ್ಟ ಎನ್ನುತ್ತಾರೆ ಮಹಿಳೆಯರು. ಮಹಿಳೆಯರಿಗಂತೂ ಅದು ಇಷ್ಟವೇ ಇಷ್ಟ. ಹೆಣ್ಣುಮಗು ಹುಟ್ಟದಿರುವ ಕುಟುಂಬ ಅತ್ಯಂತ ದುರದೃಷ್ಟದ ಕುಟುಂಬ ಎಂದು ಪರಿಗಣಿಸಲಾಗುತ್ತದೆ. ಹೆಣ್ಣು ಮಗುವಿನ ಜನನವನ್ನು ಸಿಹಿ ಹಂಚಿ ಸಂಭ್ರಮಿಸಲಾಗುವುದು. ಗಂಡು ಮಗು ಹುಟ್ಟಿದರೆ, ಅಯ್ಯೋ ದೇವರು ಕೊಟ್ಟಿದ್ದನ್ನು ಸ್ವೀಕರಿಸಲೇಬೇಕು ಎಂದು ಜೋಲುಮೋರೆಯ ತತ್ವಜ್ಞಾನ ಕೇಳಿ ಬರುವುದು. ಹಾಗೆಂದು ಇಲ್ಲಿ ಗಂಡುಶಿಶುವನ್ನು ಗರ್ಭದಲ್ಲೇ ಹತ್ಯೆ ಮಾಡುವ ದುಷ್ಟ ಪದ್ಧತಿ ಇಲ್ಲ. ಸಾಮೂಹಿಕಅತ್ಯಾಚಾರ ಇಲ್ಲಿ ಕಾಣದ ಸಂಗತಿ. ಇಲ್ಲಿನ ಲಿಂಗ ಸಮಾನತೆಯಅನುಪಾತ ಪ್ರಪಂಚದಲ್ಲೇ ಅತ್ಯಂತ ಆರೋಗ್ಯಕರ ಪ್ರಮಾಣದ್ದು ಎಂದು ಪರಿಗಣಿಸಲಾಗಿದೆ.

ಪ್ರತಿ 1,035 ಹೆಣ್ಣುಮಕ್ಕಳಿಗೆ 1,050 ಗಂಡು ಮಕ್ಕಳಿದ್ದಾರೆ. ಹೆಣ್ಣುಮಗು ಹುಟ್ಟದೆ ಹೋದರೂ ಗಂಡು ಮಗುವಿಗೆ ಉತ್ತರಾಧಿಕಾರ ದೊರೆಯುವುದಿಲ್ಲ. ದತ್ತು ತೆಗೆದುಕೊಂಡ ಹೆಣ್ಣು ಮಗುವೇ ಉತ್ತರಾಧಿಕಾರಿ. ಅಧ್ಯಯನಗಳ ಪ್ರಕಾರ ಈ ಮಾತೃಪ್ರಧಾನ ವ್ಯವಸ್ಥೆ ಶಿಥಿಲಗೊಳ್ಳುವ ದೂರದ ಸೂಚನೆಗಳು ಮೂಡಲಾರಂಭಿಸಿವೆ. ಇತರೆ ಪಿತೃಪ್ರಧಾನ ಪದ್ಧತಿಯ ನೆರೆಹೊರೆಯ ಕುಟುಂಬಗಳೊಂದಿಗೆ ಒಡನಾಟ, ಆಧುನೀಕರಣ, ನಗರೀಕರಣ ಹಾಗೂ ವಸಾಹತೀಕರಣವೇ ಇದರ ನಶಿಸುವಿಕೆಗೆ ಕಾರಣ. ಮೂಲ ಮಾತೃಪ್ರಧಾನ ಪದ್ಧತಿ ವಿರೂಪದತ್ತ ಮುಖ ಮಾಡಿದೆ.

ಕಳೆದ ಕೆಲ ದಶಕಗಳಿಂದ ಈ ಬುಡಕಟ್ಟಿನ ನೂರಾರು ಮಂದಿ ಪುರುಷರು ಪಿತೃಪ್ರಧಾನ ವ್ಯವಸ್ಥೆಗೆ ಆಗ್ರಹಿಸಿ ‘ಹೊಸ ಮನೆ-ಹೊಸ ಒಲೆಗಾಗಿ ಅಡಿಪಾಯ’ ಎಂಬ ಅರ್ಥದ ಸಂಘಟನೆಯನ್ನು (ಸಿಂಖಾಂಗ್ ರಿಂಪಿ ಥಿಮ್ಮೈ- ಎಸ್.ಆರ್.ಟಿ) ಕಟ್ಟಿಕೊಂಡಿದ್ದಾರೆ. ಈ ಸಂಘಟನೆಗೀಗ 27ರ ವಯಸ್ಸು. ಮಾತೃಪ್ರಧಾನ ಸಂಸ್ಕೃತಿಯೇ ಸಾಮಾಜಿಕ ತಾರತಮ್ಯಗಳ ಮೂಲ ಬೇರು ಎನ್ನುವ ಈ ಸಂಘಟನೆಯ ಮುಖ್ಯ ಗುರಿ ಖಾಸಿ ಪುರುಷನ ಗತ ವೈಭವವನ್ನು ಮರು ಸ್ಥಾಪಿಸುವುದು. ತಂದೆಯೇ ಕುಟುಂಬದ ತಲೆಯಾಳು ಮತ್ತು ತಾಯಿ ಅದರ ಹೃದಯ ಎಂಬುದು ಈ ಸಂಘಟನೆಯ ಗಟ್ಟಿ ನಂಬಿಕೆ. ಮಹಿಳೆಯ ‘ದಬ್ಬಾಳಿಕೆ’ಯಿಂದ ಪುರುಷನ ‘ವಿಮೋಚನೆ’ಯೇ ತನ್ನ ಗುರಿ ಎನ್ನುತ್ತದೆ. ಮಹಿಳೆಯರ ಹಕ್ಕುಗಳನ್ನು ತಾವು ಕೈವಶ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಅವುಗಳ ಶಕ್ತಿಹರಣ ಮಾಡುವುದು ಈ ಸಂಘಟನೆಯ ಧ್ಯೇಯ. ಪುರುಷಪ್ರಧಾನ ಹೊರಜಗತ್ತಿನ ತಮ್ಮ ಸೋದರಕೋಟಿಗೆ ಅನಾಯಾಸವಾಗಿ ಹಸ್ತಗತ ಆಗಿರುವ ಸಹಜ ಹಕ್ಕುಗಳಿಂದ ತಾವು ವಂಚಿತರು ಎಂಬ ಅಳಲು ಇವರದು.

ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಮಹಿಳೆಯರ ಪಾಲಿಗೆ ಒಳ್ಳೆಯದೇ. ಆದರೆ ಪುರುಷರ ಹಿತಕ್ಕೆ ಮಾರಕ. ಅವರಿಗೆ ಯಾವ ಜವಾಬ್ದಾರಿಯೂ ಇಲ್ಲವಾದ ಕಾರಣ ಬದುಕನ್ನು ಹಗುರವಾಗಿ ಪರಿಗಣಿಸಿದ್ದಾರೆ... ಮಾದಕ ದ್ರವ್ಯಗಳು ಮತ್ತು ಮದ್ಯಪಾನದ ಚಟಕ್ಕೆ ಶರಣಾಗಿ ಅವಧಿಗೆ ಮುನ್ನವೇ ಸಾವಿಗೆ ಸಮೀಪವಾಗುತ್ತಿದ್ದಾರೆ ಎಂಬುದು ಎಸ್.ಆರ್.ಟಿ.ಯ ಕೀತ್ ಪರಿಯತ್ ದೂರು. ಆದರೆ ಹಾಲಿ ವ್ಯವಸ್ಥೆಗೆ ಬಹಿರಂಗ ಸವಾಲೆಸೆದು ಪ್ರತಿಭಟಿಸುವ ಧೈರ್ಯ ಈ ಸಂಘಟನೆಗೆ ಇನ್ನೂ ಬಂದಿಲ್ಲ.

ಪುರುಷರ ಹಕ್ಕುಗಳ ಆಂದೋಲನ 60ರ ದಶಕದಲ್ಲಿ ಅಂಕುರಗೊಂಡಿತ್ತು. ಆದರೆ ಕತ್ತಿ, ಕುಡುಗೋಲು ಹಿಡಿದು ಬಂದ ಖಾಸಿ ಮಹಿಳೆಯರು ಅಂತಹ ಪುರುಷರ ಸಭೆಯೊಂದನ್ನು ಚೆದುರಿಸಿ ದಿಕ್ಕುಪಾಲಾಗಿ ಓಡಿಸಿಬಿಟ್ಟದ್ದು ದಾಖಲಾಗಿರುವ ಸತ್ಯ. ಚಿರಾಪುಂಜಿಯಲ್ಲಿ ನಡೆದ ಈ ಸಭೆಯ ಮೇಲೆ ದಾಳಿ ನಡೆಸಿದ ಮಹಿಳೆಯರಿಂದ ಪ್ರಾಣ ಉಳಿಸಿಕೊಳ್ಳಲು ಸತ್ತೆವೋ ಕೆಟ್ಟೆವೋ ಎಂದು ಪರಾರಿ ಆಗಿದ್ದೆವು ಎನ್ನುತ್ತಾನೆ 80 ವರ್ಷ ಪ್ರಾಯದ ಎ.ಲಿಂಗ್ವಿ.

ಕೀತ್ ಪರಿಯತ್ ಅವರ ಎಸ್.ಆರ್.ಟಿ. ಹುಟ್ಟಿದ್ದು ಅದಾದ ಮೂವತ್ತು ವರ್ಷಗಳ ನಂತರ 1990ರಲ್ಲಿ. ಈ ಬುಡಕಟ್ಟುಗಳೊಂದಿಗೆ ಮಾತಾಡಿದ ಪ್ರಸಿದ್ಧ ವಿದೇಶಿ ಟಿ.ವಿ. ಚಾನೆಲ್‌ಗಳಿಗೆ ಕಾರ್ಯಕ್ರಮಗಳನ್ನು ನಿರ್ಮಿಸುವ ಪತ್ರಕರ್ತೆ ಮತ್ತು ಲೇಖಕಿ ಜೋ ಪಿಯಾಜಾ ಮಾತುಗಳಲ್ಲಿ ಹೇಳುವುದಾದರೆ- ‘ಪಿತೃಪ್ರಧಾನ ಸಮಾಜದಲ್ಲಿ ಜೀವಿಸುತ್ತಿರುವ ಮಹಿಳೆಯರ ಪಾಲಿನ ರಮ್ಯ ಕನಸುಗಳು ನನಸಾಗುವ ನಂಬಲಾರದ ಸ್ಥಿತಿ ಇದು’.

‘ನಾನು ಕಂಡು ಮಾತಾಡಿಸಿದ ಪುರುಷರು ಅತ್ಯಂತ ಮೆಲು ಮಾತಿನವರು ಮತ್ತು ತಮ್ಮ ಪತ್ನಿಯರಿಗೆ ವಿಧೇಯರು, ತಮ್ಮ ವೈವಾಹಿಕ ಬದುಕಿನ ಕುರಿತು ಹೆಚ್ಚು ಮಾತಾಡಲು ಅಳುಕುವವರು. ಆದರೆ ಅಂತರ್ಜಾಲ ಮತ್ತು ಟೆಲಿವಿಷನ್ ಮಾಧ್ಯಮಗಳು ಖಾಸಿ ಪುರುಷರಲ್ಲಿ ಪಿತೃಪ್ರಧಾನ ಹೊರಪ್ರಪಂಚ ಕುರಿತು ಅರಿವು ಮೂಡಿಸುತ್ತಿವೆ. ಎರಡನೆಯ ದರ್ಜೆಯ ಪ್ರಜೆಗಳಂತೆ ಬದುಕುವುದು ಅವರಿಗೆ ಇಷ್ಟವಿಲ್ಲ’ ಎನ್ನುತ್ತಾಳೆ ಪಿಯಾಜಾ.

‘ಷಿಲ್ಲಾಂಗ್ ಟೈಮ್ಸ್’ ಪತ್ರಿಕೆಯ ಸಂಪಾದಕಿ ಪಾಟ್ರೀಷಿಯಾ ಮುಖಿಮ್ ಅವರ ಮಾತುಗಳನ್ನು ಕೇಳಿ- ‘ಪುರುಷರಲ್ಲಿ ಹತಾಶೆ ಬೆಳೆಯತೊಡಗಿದೆ... ನಾವು ಕೇವಲ ಬೀಜದ ಹೋರಿಗಳಂತಾಗಿಬಿಟ್ಟಿದ್ದೇವೆ. ನಮ್ಮ ಮಕ್ಕಳ ಮೇಲೆ ಕೂಡ ನಮಗೆ ಅಧಿಕಾರ ಇಲ್ಲ ಎಂಬುದು ಅವರ ಅಳಲು’.

ಖಾಸಿ ಮಹಿಳೆ ಕುಟುಂಬದ ತಲೆಯಾಳಿನ ಆಲಂಕಾರಿಕ ಸ್ಥಾನ ಆಕೆಯ ಹಿರಿಯ ಸೋದರ ಮಾವನಿಗೆ ಸಂದಿದೆ. ಕುಟುಂಬದ ರಾಜಕೀಯ ಮತ್ತು ಸಾಮಾಜಿಕ ಹಿತಗಳ ನಿರ್ಧಾರ ಆತನದೇ. ಆತನ ಶಕ್ತಿಮೂಲವೂ ಆತನ ತಾಯಿಯೇ. ಈ ಬುಡಕಟ್ಟಿನ ರಾಜಕಾರಣ ಅಥವಾ ಧರ್ಮದಲ್ಲಿ ಮಹಿಳೆ ಯಾವುದೇ ಸ್ಥಾನಮಾನ ಬಯಸಿಲ್ಲ. ಖಾಸಿ ಬುಡಕಟ್ಟಿನಲ್ಲಿ ರಾಜರಿದ್ದರೇ ವಿನಾ ರಾಣಿಯರು ರಾಜ್ಯಭಾರ ಮಾಡಲಿಲ್ಲ. ಪುರುಷರೇ ಪೂಜಾರಿಗಳು.

ಖಾಸಿ ಸಮಾಜದ ಪಾರಂಪರಿಕ ಗ್ರಾಮ ಪಂಚಾಯಿತಿಯಲ್ಲಿ ಮಹಿಳೆಗೆ ಯಾವ ಪಾತ್ರವೂ ಇಲ್ಲ. ಈಗಲೂ ಮಹಿಳೆ ಸ್ಪರ್ಧಿಸುವಂತಿಲ್ಲ. ಗ್ರಾಮ ಪಂಚಾಯಿತಿಗೆ ಮತ ಚಲಾಯಿಸುವ ಹಕ್ಕೂ ಆಕೆಗೆ ಇಲ್ಲ. ಈ ಸಮಿತಿಯಲ್ಲಿ ಪುರುಷ ಸದಸ್ಯರಿಗೆ ಮಾತ್ರವೇ ಜಾಗ. ಆ ಸದಸ್ಯರನ್ನು ಆರಿಸುವವರೂ ಪುರುಷರೇ. ಧಾರ್ಮಿಕ ಕ್ರಿಯೆಗಳನ್ನು ನೆರವೇರಿಸುವವರು ಸಂಪೂರ್ಣವಾಗಿ ಪುರುಷರೇ. ಖಾಸಿ ಮಹಿಳೆಗೆ ಸ್ಥಾನಮಾನದ ಜೊತೆಗೆ ಸಾಂಕೇತಿಕ ಅಧಿಕಾರ ಇರುತ್ತದಾದರೂ ಆ ಅಧಿಕಾರದ ಕೇಂದ್ರ ಗಂಡಸಿನ ಕೈಯಲ್ಲೇ ಕೇಂದ್ರೀಕೃತ ಆಗಿರುತ್ತದೆ ಎನ್ನಲಾಗುತ್ತದೆ. ಅರವತ್ತು ಮಂದಿ ಸದಸ್ಯಬಲದ ಮೇಘಾಲಯ ವಿಧಾನಸಭೆಯಲ್ಲಿ ಮಹಿಳಾ ಸದಸ್ಯರ ಸಂಖ್ಯೆ ಕೇವಲ ಐದು.

ಬದಲಾವಣೆಯ ವಾಸನೆಯನ್ನು ಖಾಸಿ ಹೆಣ್ಣುಮಕ್ಕಳು ಹಿಡಿದಿದ್ದಾರೆ. ಹಣಕಾಸು ಆಸ್ತಿಪಾಸ್ತಿ ವ್ಯವಹಾರಗಳಲ್ಲಿ ಪುರುಷರನ್ನು ಹೆಚ್ಚು ಹೆಚ್ಚು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಅವರನ್ನು ಸಮಾನರೆಂದು ಒಪ್ಪಿಕೊಳ್ಳುವ ದಿನಗಳು ಸನಿಹದಲ್ಲೆಲ್ಲೂ ಕಾಣುತ್ತಿಲ್ಲ. ಅಧಿಕಾರ ಎಂಬುದು ಒಬ್ಬಂಟಿಯಲ್ಲ, ಹೊಣೆಗಾರಿಕೆ ಅದರ ಎಡೆಬಿಡದ ಸಂಗಾತಿ. ಜವಾಬ್ದಾರಿಯ ರೂಢಿ ಪುರುಷರಿಗೆ ಇಲ್ಲವೇ ಇಲ್ಲ. ಸೊನ್ನೆಯಿಂದ ಆರಂಭಿಸಿ ಎವೆಯಿಕ್ಕುವಷ್ಟರಲ್ಲಿ 60 ಕಿ.ಮೀ. ವೇಗ ದಕ್ಕಿಸಿಕೊಂಡು ವಾಹನ ನಡೆಸುವುದು ಅಷ್ಟು ಸುಲಭ ಅಲ್ಲ ಎನ್ನುತ್ತಾರೆ ಖಾಸಿ ಮಹಿಳೆಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT