ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಕನ್ನಡಿಯಲ್ಲಿ ಇಣುಕುತ್ತಿರುವ ಇಂದಿರಾ!

Last Updated 17 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಸರ್ಕಾರದ ಅಧಿಕಾರ ಚಲಾವಣೆ, ರಾಜಕೀಯ ಮತ್ತು ಆರ್ಥಿಕ ಚಿಂತನೆಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರ ಆಡಳಿತ ಪಾಲಿಸುತ್ತಿರುವ ಕಾರ್ಯವಿಧಾನಗಳ ಬಗ್ಗೆ ಹೊಸ ಒಳನೋಟ ನೀಡಿರುವುದು, ನೋಟುಗಳ ರದ್ದತಿ ನಿರ್ಧಾರದ ಇನ್ನೊಂದು ಮಹತ್ವದ ಆಸಕ್ತಿ ಮೂಡಿಸುವ ಸಂಗತಿಯಾಗಿದೆ. ಇಂದಿರಾ ಗಾಂಧಿ ಅವರ ಪ್ರಶ್ನಾತೀತ ನಾಯಕತ್ವ ಉತ್ತುಂಗದಲ್ಲಿದ್ದ ದಿನಗಳಲ್ಲಿ ಅಂದರೆ,  1971ರಲ್ಲಿ ಬಾಂಗ್ಲಾದೇಶ ವಿಮೋಚನೆಗಾಗಿ ಪಾಕಿಸ್ತಾನದ ಜತೆಗೆ ನಡೆದ ಯುದ್ಧದಲ್ಲಿ ಭಾರತ ಗೆಲುವು ಸಾಧಿಸಿದ 45ನೇ ವರ್ಷಾಚರಣೆಯ ವಾರದಲ್ಲಿಯೇ ಈ ಬಗ್ಗೆ ಬರೆಯುತ್ತಿರುವುದು ಎನ್ನುವುದೂ ಇನ್ನೊಂದು ಕುತೂಹಲಕರ ಬೆಳವಣಿಗೆಯಾಗಿದೆ.

ಇಲ್ಲಿ ಇನ್ನೊಂದು ಮಾತು ಉಲ್ಲೇಖಿಸಲೇಬೇಕು. ಮೋದಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಜಾಗತಿಕ ದೃಷ್ಟಿಕೋನವು, ನೆಹರೂ ಅವರು ಬಲವಾಗಿ ನಂಬಿದ್ದ ವಿಚಾರಧಾರೆಗಳನ್ನು ನಿರಾಕರಿಸುವುದರ ಮೇಲೆಯೇ ಹೆಚ್ಚಾಗಿ ಅವಲಂಬಿತವಾಗಿತ್ತು. ಆದರೆ, ಇಂದಿರಾ ಗಾಂಧಿ ಅವರ ಆಡಳಿತ ವಿಧಾನ, ಕಾರ್ಯಶೈಲಿ, ರಾಜಕೀಯ ಚಿಂತನೆ ಮತ್ತು ಆರ್ಥಿಕತೆಯ ರಾಜಕೀಯ ವಿಚಾರಧಾರೆಗಳನ್ನು ಹತಾಶೆಯಿಂದ ನಕಲು ಮಾಡುವುದು ಅತ್ಯಂತ ಅಪಾಯಕಾರಿಯಾದ ನಿಲುವಾಗಿದೆ.

ಇದಕ್ಕೆ ಸಂಬಂಧಿಸಿದ ಚರ್ಚೆಯನ್ನು, ಕೇಂದ್ರ ಸರ್ಕಾರದ ಅಚ್ಚುಮೆಚ್ಚಿನ ಆರ್ಥಿಕ ತಜ್ಞ ಪ್ರೊ. ಜಗದೀಶ್‌ ಭಗವತಿ ಅವರ ಚಿಂತನೆಗಳಿಂದಲೇ ಆರಂಭಿಸೋಣ. ನೋಟು ರದ್ದತಿ ಕುರಿತು ಅವರು ಇತ್ತೀಚೆಗೆ ವ್ಯಕ್ತಪಡಿಸಿದ ಅಭಿಪ್ರಾಯಗಳು ತಡವಾಗಿದ್ದರೂ, ಸರ್ಕಾರದ ನಿಲುವನ್ನು ಅವರು ಬೆಂಬಲಿಸಿ ಮಾತನಾಡಿದ್ದಾರೆ. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಹಲವಾರು ವರ್ಷಗಳ ಕಾಲ ಭಾರತದ ಸಂವಿಧಾನ ಬೋಧಿಸಿರುವುದಾಗಿ ಹೇಳಿಕೊಂಡಿರುವ ಅವರು, ನೋಟುಗಳ ಚಲಾವಣೆ ಮೇಲೆ ನಾಗರಿಕರ ಹಕ್ಕು ನಿರಾಕರಿಸುವ (ನೋಟು ರದ್ದತಿಯ) ಸರ್ಕಾರದ ನಿರ್ಧಾರವು ಕಾನೂನುಬಾಹಿರವಾಗಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಸಂವಿಧಾನದ ಆರಂಭಿಕ ತಿದ್ದುಪಡಿಗಳಲ್ಲಿಯೇ, ಸಾಮಾಜಿಕ ಉದ್ದೇಶಕ್ಕಾಗಿ ನಾಗರಿಕರ ಸಂಪತ್ತನ್ನು ವಶಪಡಿಸಿಕೊಳ್ಳುವ, ಅದಕ್ಕೆ ಪರಿಹಾರ ನೀಡುವ ಅಧಿಕಾರವನ್ನು ಸರ್ಕಾರಕ್ಕೆ ಒದಗಿಸಲಾಗಿದೆ ಎನ್ನುವುದರತ್ತ ಅವರು ಗಮನ ಸೆಳೆದಿದ್ದಾರೆ. ಇದೇ ಕಾರಣಕ್ಕಾಗಿಯೇ, ಜಮೀನುದಾರಿ ಪದ್ಧತಿ ಮತ್ತು ರಾಜವಂಶಸ್ಥರಿಗೆ ನೀಡುತ್ತಿದ್ದ ರಾಜಧನ ರದ್ದುಪಡಿಸಿದ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿತ್ತು ಎಂದೂ ಅವರು ಉದಾಹರಣೆ ನೀಡಿದ್ದಾರೆ. ಅರಸೊತ್ತಿಗೆ ಕಳೆದುಕೊಂಡ ರಾಜವಂಶಸ್ಥರಿಗೆ ಮತ್ತು ಜಮೀನುದಾರರಿಗೆ ನೀಡಿದ್ದ ಪರಿಹಾರ ಮೊತ್ತದ ಬಗ್ಗೆ ನಾವು ಇಲ್ಲಿ ಕೇಳುತ್ತಿಲ್ಲ. ಅವರೆಲ್ಲ ಜನಾನುರಾಗಿಗಳೂ ಆಗಿರಲಿಲ್ಲ ಮತ್ತು ಸದ್ಯದ ನೋಟು ರದ್ದತಿ ವಿಷಯದ ಮಟ್ಟಿಗೆ ಅದು ಪ್ರಸ್ತುತವೂ ಆಗಿಲ್ಲ. 

ಸುಧಾರಣಾ ಪರ ಆರ್ಥಿಕ ತಜ್ಞರೂ ಆಗಿರುವ ಪ್ರೊ. ಭಗವತಿ ಅವರು, ದೇಶಿ ಅರ್ಥವ್ಯವಸ್ಥೆಯನ್ನು ತಾತ್ಕಾಲಿಕವಾಗಿಯಾದರೂ ಅವ್ಯವಸ್ಥೆಗೆ ಬಲವಂತವಾಗಿ ದೂಡುವ ಸರ್ಕಾರದ ನಿರಂಕುಶ ಅಧಿಕಾರದ ಸಮರ್ಥನೆ ಮಾಡಲು ಹೊರಟಿದ್ದಾರೆ. ಹಾಗಿದ್ದರೆ ಇದೆಂತಹ ಸುಧಾರಣಾ ಪರ ಸರ್ಕಾರ ಎನ್ನುವ ಪ್ರಶ್ನೆ ಇಲ್ಲಿ ಕಾಡುತ್ತದೆ. ‘ಕಡಿಮೆ ಸರ್ಕಾರ, ಹೆಚ್ಚು ಅಧಿಕಾರ’ ತತ್ವದಲ್ಲಿ ನಂಬಿಕೆ ಇರಿಸಿರುವ ಸರ್ಕಾರವೊಂದು, ಇಂತಹ ಅಧಿಕಾರ ಕೇಂದ್ರೀಕರಣದ, ದೇಶಿ ಅರ್ಥ ವ್ಯವಸ್ಥೆ ಮತ್ತು ಹಣಕಾಸು ವ್ಯವಸ್ಥೆಯನ್ನು ಸರ್ಕಾರದ ನಿರ್ದೇಶನದಂತೆಯೇ ಪುನರ್‌ರಚಿಸಲು ಮುಂದಾಗಿರುವ ಕ್ರಮದ ವ್ಯಾಪಕ ಆರ್ಥಿಕ ಪರಿಣಾಮವನ್ನು, ರಿಕ್ಟರ್‌ ಮಾಪಕದಲ್ಲಿ ದಾಖಲಾಗುವ 8ರಷ್ಟು ಭೂಕಂಪದ ತೀವ್ರತೆಗೆ ಹೋಲಿಸಬಹುದಾಗಿದೆ.

ಈ ಯೋಜಿತ ಬದಲಾವಣೆಯ ಅಗಾಧತೆಯನ್ನು, ಭಾರತದ ಸಾಂಖ್ಯಿಕ ಸಂಸ್ಥೆಯ ಸ್ಥಾಪಕರೂ ಮತ್ತು ಮೊದಲ ಯೋಜನಾ ಆಯೋಗದ ಸದಸ್ಯರೂ ಆಗಿದ್ದ ಪಿ.ಸಿ.ಮಹಾಲನೊಬಿಸ್‌ ಅವರಿಗೂ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಈ ಅಭಿಪ್ರಾಯ ವೈಯಕ್ತಿಕವಾದುದಲ್ಲ.   ಪ್ರೊ. ಭಗವತಿ ಅವರಿಗಷ್ಟೇ ಸಂಬಂಧಿಸಿದ ಮಾತೂ ಇದಲ್ಲ. ಅರ್ಥಶಾಸ್ತ್ರಜ್ಞರಾದ ಪ್ರೊ. ಭಗವತಿ ಮತ್ತು ಅಮರ್ತ್ಯ ಸೇನ್‌ ಅವರು ನೋಟು ರದ್ದತಿ ಬಗ್ಗೆ ವಿಭಿನ್ನ ನಿಲುವು ತಳೆದಿರುವುದನ್ನೂ ಇಲ್ಲಿ ಪ್ರಮುಖವಾಗಿ ಪರಿಗಣಿಸಬಹುದು.

ಆರ್ಥಿಕ ಸುಧಾರಣೆಯ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ, ಗುಜರಾತ್‌ನಲ್ಲಿ ಆರ್ಥಿಕ ಬೆಳವಣಿಗೆಯ ಹರಿಕಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ, ಜಾಗತಿಕ ಅರ್ಥಿಕ ತಜ್ಞರಿಂದಲೂ ಶಹಬ್ಬಾಸ್‌ಗಿರಿ ಪಡೆದಿದ್ದ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ನಾವೀಗ ಇಂದಿರಾ ಗಾಂಧಿ ಅವರ ಆಡಳಿತದ ಶೈಲಿ, ವಿಧಾನವನ್ನು ಹಲವಾರು ಬಗೆಗಳಲ್ಲಿ ಕಾಣುತ್ತಿದ್ದೇವೆ. ಇಂದಿರಾ ಅವರ ಅನಾಹುತಕಾರಿ ಆರ್ಥಿಕ ನೀತಿಗಳ ಅನುಕರಣೆಯನ್ನೂ ನಾವೀಗ ಮೋದಿ ಅವರಲ್ಲಿ ಕಾಣುತ್ತಿದ್ದೇವೆ.

ಇದನ್ನು ಇನ್ನೊಂದು ಬಗೆಯಲ್ಲಿಯೂ ವಿವರಿಸಬಹುದು. ಯೋಜನಾ ಆಯೋಗವನ್ನು ರದ್ದುಪಡಿಸುವ ಮೂಲಕ ಮೋದಿ ಅವರು ತಮ್ಮ ಆರ್ಥಿಕ ಸುಧಾರಣಾ ಕ್ರಮಗಳಿಗೆ ಚಾಲನೆ ನೀಡಿ ಗಮನ ಸೆಳೆದಿದ್ದರು. ಬ್ಯಾಂಕ್‌ಗಳ ರಾಷ್ಟ್ರೀಕರಣದ ನಂತರ ಅದೇ ಮೊದಲ ಬಾರಿಗೆ ದೇಶಿ ಅರ್ಥ ವ್ಯವಸ್ಥೆಗೆ ಸಂಬಂಧಿಸಿದಂತೆ ಕೇಂದ್ರೀಕೃತ ಬದಲಾವಣೆಯ ಮಹತ್ವದ ನಿರ್ಧಾರ ಅದಾಗಿತ್ತು.

1971ರ ಯುದ್ಧದಲ್ಲಿನ ಗೆಲುವಿಗೆ 45 ವರ್ಷ ಪೂರ್ಣಗೊಂಡಿರುವುದರ  ಸ್ಮರಣಾರ್ಥ, ಕೇಂದ್ರ ಸರ್ಕಾರದ ಪರವಾಗಿ ಅಧಿಕೃತವಾಗಿ ಯಾವುದೇ ಸ್ಮರಣೀಯ ಕಾರ್ಯಕ್ರಮ ಏರ್ಪಡಿಸದಿರುವುದು ಅರ್ಥವಾಗುವಂತಹದ್ದು. ಆದರೆ, ಯಾರಾದರೂ ನರೇಂದ್ರ ಮೋದಿ ಅವರ ರಾಜಕೀಯ ನಡೆ ಮತ್ತು ನಿರ್ಧಾರಗಳನ್ನು ಆಳವಾಗಿ ವಿಶ್ಲೇಷಿಸಿದರೆ ಅವರು ತೆಗೆದುಕೊಂಡಿರುವ ತೀರ್ಮಾನಗಳಿಗೂ, ಇಂದಿರಾ ಗಾಂಧಿ ಅವರು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳಿಗೂ ಸಾಕಷ್ಟು ಹೋಲಿಕೆ ಇರುವುದು ಅನುಭವಕ್ಕೆ ಬರುತ್ತದೆ.

ಕೆಳ ಹಂತದ ಅಧಿಕಾರಿಗಳಿಗೆ ವಿವೇಚನಾ ಅಧಿಕಾರ ನೀಡುವ ಮತ್ತು 25 ವರ್ಷಗಳ ಉದಾರೀಕರಣ ನೀತಿಗೆ ತೀವ್ರ ಧಕ್ಕೆ ಒದಗಿಸುವ ಮಹತ್ವದ ಆದಾಯ ತೆರಿಗೆ ತಿದ್ದುಪಡಿ ಕಾಯ್ದೆ ಮಸೂದೆಯನ್ನು ಲೋಕಸಭೆಯಲ್ಲಿನ ಗೌಜು ಗದ್ದಲದ ಮಧ್ಯೆಯೇ ಯಾವುದೇ ಚರ್ಚೆ ಇಲ್ಲದೆ ಧ್ವನಿಮತದಿಂದ ಅಂಗೀಕರಿಸಲಾಗಿದೆ. ಹೈಕೋರ್ಟ್‌  ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಶಿಫಾರಸನ್ನು ಮರಳಿಸಲಾಗಿದೆ.

ಅಧಿವೇಶನದ ಉದ್ದಕ್ಕೂ ಕಲಾಪಕ್ಕೆ ಅಡ್ಡಿಪಡಿಸಿದ ವಿರೋಧ ಪಕ್ಷಗಳನ್ನು ಶಪಿಸುತ್ತಲೇ, ಚಳಿಗಾಲದ ಅಧಿವೇಶನದ ಕೊನೆಯ ಎರಡು ದಿನ ಆಡಳಿತ ಪಕ್ಷದ ಸದಸ್ಯರಿಂದಲೇ ಕಲಾಪಕ್ಕೆ ಭಂಗ ಉಂಟಾಗಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಹುದ್ದೆಯ ಘನತೆಯನ್ನು ಹಣಕಾಸು ಸಚಿವಾಲಯದಲ್ಲಿನ ಜಂಟಿ ಕಾರ್ಯದರ್ಶಿ ಮಟ್ಟಕ್ಕೆ ಕುಂದಿಸಲಾಗಿದೆ. ನೋಟುಗಳ ರದ್ದತಿಗೆ ಸಂಬಂಧಿಸಿದ ನೀತಿಯಲ್ಲಿ ಸರ್ಕಾರಿ ಅಧಿಕಾರಿಗಳು ದಿನಕ್ಕೊಂದು ಧೋರಣೆ ಪ್ರಕಟಿಸುತ್ತಿದ್ದಾರೆ. 

ಹಣಕಾಸು ಸಚಿವಾಲಯದ ಕಿರಿಯ ಸಚಿವರೊಬ್ಬರು, ಸರ್ಕಾರವು 2017–18ರ ಸಾಲಿನ ಬಜೆಟ್‌ನಲ್ಲಿ ತೆರಿಗೆ ಮತ್ತು ಬಡ್ಡಿ ದರ ಕಡಿತ ಮಾಡಲಾಗುವುದು ಎಂದೂ ಪ್ರಕಟಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಮೋದಿ ನೇತೃತ್ವದ ಸರ್ಕಾರದ ಸಿದ್ಧಾಂತ ಮತ್ತು ಆದರ್ಶಗಳಲ್ಲಿ ಮನ ಒಲಿಸುವಿಕೆಗೆ ಅವಕಾಶವೇ ಇಲ್ಲ. ಸರ್ಕಾರವು ಬದಲಾವಣೆಯನ್ನು ಬಲವಂತದಿಂದ ಜನರ ಮೇಲೆ ಹೇರುತ್ತಿದೆ. ನಿರಂಕುಶಾಧಿಕಾರದಿಂದ ಅಧಿಕಾರ ನಡೆಸುವ ಮತ್ತು ಅಗತ್ಯ ಬಿದ್ದರೆ ಬಲಪ್ರಯೋಗದ ಬಳಕೆಗೂ ಸರ್ಕಾರ ಹಿಂಜರಿಕೆ ತೋರುತ್ತಿಲ್ಲ. 

ಸಚಿವ ಸಂಪುಟದ ಉನ್ನತ ಸಮಿತಿ, ನ್ಯಾಯಾಂಗದ ಉನ್ನತ ಸಮಿತಿಗೆ ಸಂಬಂಧಿಸಿದಂತೆ ನಿಯಮಗಳನ್ನು ಸಮರ್ಪಕವಾಗಿ ಪಾಲನೆ ಮಾಡಲಾಗುತ್ತಿಲ್ಲ.  ನೋಟು ರದ್ದತಿಯ ಅಧಿಸೂಚನೆಗೆ ಸಂಬಂಧಿಸಿದ ನಿಯಮಾವಳಿಗಳನ್ನು ‘ಟಿ–20’ ಕ್ರಿಕೆಟ್ ಪಂದ್ಯದ ಸ್ಕೋರ್ ಬೋರ್ಡ್‌ನಂತೆ ಅತ್ಯಲ್ಪ ಅವಧಿಯಲ್ಲಿ ಬದಲಾಯಿಸಲಾಗುತ್ತಿತ್ತು. ಹೀಗೆ ಎಲ್ಲೆಡೆ ಇಡೀ ವ್ಯವಸ್ಥೆಯನ್ನೇ ತಿರಸ್ಕರಿಸುವುದನ್ನು ವ್ಯವಸ್ಥಿತವಾಗಿ ಕಾರ್ಯಗತಗೊಳಿಸಲಾಗುತ್ತಿದೆ.

ಇದನ್ನೆಲ್ಲ ನೋಡಿದಾಗ, ತನ್ನ ತಂದೆ ನೆಹರೂ ಮತ್ತು ಅತ್ಯಲ್ಪ ಕಾಲದವರೆಗೆ ನೆಹರೂ ಅವರ ಉತ್ತರಾಧಿಕಾರಿಯಾಗಿದ್ದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರಿಂದ ಬಳುವಳಿಯಾಗಿ  ಬಂದಿದ್ದ ವ್ಯವಸ್ಥೆಯನ್ನು ಇಂದಿರಾ ಗಾಂಧಿ ಅವರು ತಿರಸ್ಕರಿಸಿದ್ದರು ಎಂಬುದು ಇಲ್ಲಿ ನೆನಪಾಗುತ್ತದೆ.

1967ರ ಚುನಾವಣೆಯಲ್ಲಿ ಪಕ್ಷದ ಸಾಧನೆ ತೃಪ್ತಿಕರವಾಗಿರದ ಕಾರಣಕ್ಕೆ ಇಂದಿರಾ ಗಾಂಧಿ ಅವರು ವ್ಯವಸ್ಥೆಯನ್ನು ಹಾಳು ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದ್ದರು. ತಮ್ಮ ಸಚಿವ ಸಂಪುಟ ಮತ್ತು ಪಕ್ಷದ ಮುಖಂಡರನ್ನು ಹೌದಪ್ಪಗಳನ್ನಾಗಿ ಮಾಡಿ ಅವರ ಮಹತ್ವ ಕುಗ್ಗಿಸಿದ್ದರು. ಸಮಾಜಕ್ಕೆ ಬದ್ಧತೆ ತೋರುವ ನ್ಯಾಯಾಂಗ ಮತ್ತು ಅಧಿಕಾರಶಾಹಿ ವ್ಯವಸ್ಥೆ ಮೂಲಕ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮಹತ್ವ ಕುಗ್ಗಿಸಿದ್ದರು.    ರಾಷ್ಟ್ರೀಯ ಭಾವನೆ ಉದ್ದೀಪಿಸಿ ಪಾಶ್ಚಿಮಾತ್ಯ ದೇಶಗಳ ಬಗ್ಗೆ ಪರಕೀಯರ ಭಯ ಮೂಡಿಸಿ, ಸ್ವದೇಶಿ ಹೆಮ್ಮೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅತಿರೇಕದ ಮತ್ತು ಕಪಟ ಸಮಾಜವಾದದ ಪರಿಕಲ್ಪನೆ ಪ್ರಚುರಪಡಿಸಿದ್ದರು.

ನೆಹರೂ ಅವರ ರಾಜಕೀಯ ಮತ್ತು ತತ್ವಾದರ್ಶಗಳನ್ನು ದ್ವೇಷಿಸುತ್ತಿದ್ದ ಆರ್‌ಎಸ್‌ಎಸ್‌, ಇಂದಿರಾ ಅವರ ಇಂತಹ ನಿರ್ಧಾರಗಳನ್ನು ಪ್ರಶ್ನಿಸುವ ಗೋಜಿಗೆ ಹೋಗಿರಲಿಲ್ಲ. ನೆಹರೂ ಅವರು ನಿರ್ಮಿಸಿದ್ದ ಉದಾರವಾದಿ ಪ್ರಜಾಸತ್ತಾತ್ಮಕ ಭವ್ಯ ಮಹಲಿನ ನೈತಿಕತೆಯನ್ನು ಇಂದಿರಾ ಗಾಂಧಿ  ಅವರು ತಮ್ಮ ಅಧಿಕಾರಾವಧಿಯಲ್ಲಿ ಅದರಲ್ಲೂ ವಿಶೇಷವಾಗಿ 1969–77ರ ಅವಧಿಯಲ್ಲಿ ಅಧಃಪತನಗೊಳಿಸಿದ್ದರು.

ತಂದೆಯಿಂದ ಬಳುವಳಿಯಾಗಿ ಬಂದಿದ್ದ ಪ್ರಜಾಸತ್ತಾತ್ಮಕ ಮೌಲ್ಯ ಮತ್ತು ಸಂಸ್ಥೆಗಳನ್ನು ಸ್ವತಃ ಮಗಳೇ ಹಾಳು ಮಾಡಿದ್ದಳು. ನಾಗರಿಕರ ಹಕ್ಕುಗಳನ್ನು ಹತ್ತಿಕ್ಕಿ, ವಿರೋಧಿಗಳನ್ನೆಲ್ಲ ಜೈಲಿಗೆ ಹಾಕಿದ್ದರು. ನೆಹರೂ ಅವರು ಕನಸಲ್ಲೂ ಊಹಿಸದ ಘಟನೆಗಳನ್ನು ಮಗಳು ಕಾರ್ಯಗತಗೊಳಿಸಿದ್ದಳು.

ಸರ್ಕಾರದ ನೀತಿ ನಿರ್ಧಾರಗಳು ಕಠಿಣ ಸ್ವರೂಪದ್ದು ಆಗಿರಬೇಕು ಎಂಬುದೇ ಮೋದಿ ಮತ್ತು ಆರ್‌ಎಸ್‌ಎಸ್‌ನ ಮೂಲ ನೀತಿಯೂ ಆಗಿದೆ. ಅಗತ್ಯ ಬಿದ್ದಲ್ಲೆಲ್ಲ ಅದು ದಂಡ ಪ್ರಯೋಗ ನಡೆಸುತ್ತಿದೆ. ಮಾಧ್ಯಮ, ನಾಗರಿಕ ಸಮಾಜ, ಪರಿಣತರು, ತಂತ್ರಜ್ಞರು ಮತ್ತು ನ್ಯಾಯಮೂರ್ತಿಗಳನ್ನೂ ತಬ್ಬಿಬ್ಬುಗೊಳಿಸುತ್ತಿದೆ.
ಈಗ ಅಥವಾ ಮೋದಿ ಅಧಿಕಾರಕ್ಕೆ ಬರುವ ಮುಂಚಿನ ದಿನಗಳಲ್ಲೂ, ಬಿಜೆಪಿ– ಆರ್‌ಎಸ್‌ಎಸ್‌, ಇಂದಿರಾ ಗಾಂಧಿ ಅವರ ರಾಜಕೀಯ ನಡೆಯನ್ನಷ್ಟೇ ಟೀಕಿಸುತ್ತಿದ್ದವೇ ಹೊರತು, ಅವರ ಆರ್ಥಿಕ ನೀತಿಗಳನ್ನಲ್ಲ.

1977ರಲ್ಲಿ ಜನತಾ ಪಕ್ಷವು ಇಂದಿರಾ ಗಾಂಧಿ ಅವರನ್ನು ಸೋಲಿಸಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ, ಅವರು ಜಾರಿಗೆ ತಂದಿದ್ದ ರಾಜಕೀಯ ಕಾಯ್ದೆ ಮತ್ತು ಕ್ರಮಗಳನ್ನು ರದ್ದುಪಡಿಸಿದ್ದರೂ, ಆರ್ಥಿಕ  ನೀತಿಗಳನ್ನು ಮುಟ್ಟುವ ಗೋಜಿಗೆ ಹೋಗಿರಲಿಲ್ಲ. ಸಮಾಜವಾದಿ ಚಿಂತನೆಗಳ ಸಿಕ್ಕುಗಳಲ್ಲಿ ಸಿಲುಕದಿರಲು ಯಾರೊಬ್ಬರೂ ಮನಸ್ಸು ಮಾಡಿರಲಿಲ್ಲ. 

ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣಕ್ಕೆ ಚಾಲನೆ ನೀಡಿದ್ದರು.  ಆದರೆ, ಅದಕ್ಕೆ ಆರ್‌ಎಸ್‌ಎಸ್‌ನಿಂದ ತಕ್ಷಣ ವಿರೋಧ ವ್ಯಕ್ತವಾಗಿತ್ತು. ಜಾಗತಿಕ ಆರ್ಥಿಕತೆಗೆ ತೆರೆದುಕೊಳ್ಳುವ ಮತ್ತು ಶೀತಲ ಸಮರ ನಂತರದ ರಾಜಕೀಯ  ವ್ಯವಸ್ಥೆಯ ಪ್ರಭಾವಕ್ಕೆ ಒಳಗಾಗುವ ನೀತಿ ಜಾರಿಯ ಮುಂಚೂಣಿಯಲ್ಲಿದ್ದ ಬ್ರಜೇಶ್‌ ಮಿಶ್ರಾ ಅವರನ್ನೇ ಸಂಘ ಪರಿವಾರವು ಪರಕೀಯ ಎನ್ನುವಂತೆ ಪರಿಗಣಿಸಲು ಆರಂಭಿಸಿತ್ತು.

ನರೇಂದ್ರ ಮೋದಿ ಅವರು ಗುಜರಾತ್‌ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರಲು ಆರಂಭಿಸುತ್ತಿದ್ದಂತೆ, ಇಂದಿರಾ ಗಾಂಧಿ ಅವರ ಆರ್ಥಿಕ ಧೋರಣೆಗಳನ್ನು ನಿರಾಕರಿಸುವುದು ಹೆಚ್ಚು ಸ್ಪಷ್ಟಗೊಳ್ಳತೊಡಗಿತು. ಇದೇ ಕಾರಣಕ್ಕೆ ಅವರು ಗುಜರಾತ್‌ನಲ್ಲಿ ಯಶಸ್ಸು ಕಂಡಿದ್ದರು.

ಈಗ, ಐದು ವರ್ಷಗಳ ಅಧಿಕಾರಾವಧಿಯ ಎರಡೂವರೆ ವರ್ಷ ಪೂರ್ಣಗೊಂಡಿರುವ ಸದ್ಯದ ಸಂದರ್ಭದಲ್ಲಿ, ಮೋದಿ ಅವರು ನೆಹರೂ ಅವರ ಉದಾರ, ಶಾಂತಿ ಮಂತ್ರ ಜಪಿಸುವ ಮತ್ತು ಕಠಿಣ ಧರ್ಮನಿರಪೇಕ್ಷವಾದಕ್ಕೆ ಸಂಪೂರ್ಣ ಭಿನ್ನವಾದ ಚಿಂತನೆಗೆ ಬದ್ಧರಾಗಿದ್ದಾರೆ. ಇನ್ನೊಂದೆಡೆ ಇಂದಿರಾ ಗಾಂಧಿ ಅವರ ಕೆಟ್ಟ ಆರ್ಥಿಕ ಚಿಂತನೆಗಳನ್ನು ಬಲಪಡಿಸುತ್ತಿದ್ದಾರೆ.

ನಿರಂಕುಶ ಬಲಿಷ್ಠ ಸರ್ಕಾರ ಮತ್ತೆ ಮುಂಚೂಣಿಗೆ ಬರುತ್ತಿದೆ. ತೆರಿಗೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಪೊಲೀಸರಲ್ಲಿ ಕೋಪಾವೇಶದ ವರ್ತನೆ ಕಂಡು ಬರುತ್ತಿದೆ. ಹಳೆಯ ಕೇಂದ್ರೋದ್ಯಮಗಳನ್ನು ಖಾಸಗೀಕರಣಗೊಳಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಆದಾಗ್ಯೂ, ಸರ್ಕಾರ 24 ರಸಗೊಬ್ಬರ ಘಟಕಗಳನ್ನು ಪುನಶ್ಚೇತನಗೊಳಿಸುವುದಾಗಿ ಪ್ರಕಟಿಸಿದೆ.

ಬಲಿಷ್ಠ ಸರ್ಕಾರವು ತನ್ನೊಂದಿಗೆ ತನ್ನದೇ ಆದ ಕೆಲ ಚಿಂತನೆಗಳನ್ನೂ  ಹೊತ್ತುಕೊಂಡು ಬರುತ್ತದೆ. ಅಧಿಕಾರವು ನಿರ್ದಿಷ್ಟ ವ್ಯಕ್ತಿಯ ಬಳಿ ಕೇಂದ್ರೀಕೃತವಾಗಿರುವುದನ್ನು ಪ್ರಶ್ನಿಸುವವರ ಬಗ್ಗೆ ಇಂತಹ ಸರ್ಕಾರವು ಅಸಹನೆ ಧೋರಣೆ ತಳೆದಿರುತ್ತದೆ. ನಾಗರಿಕರ ಬಗ್ಗೆ ಕಡಿಮೆ ವಿಶ್ವಾಸ ಹೊಂದುವುದರ ಜತೆಗೆ, ಸರ್ಕಾರಿ ನೌಕರರಲ್ಲಿ ಅತಿಶಯ ಎನ್ನುವಷ್ಟು ನಂಬಿಕೆ ಇರಿಸಿರುತ್ತದೆ. ಈ ವಿಷಯದಲ್ಲಿ ಇಂದಿರಾ ಮತ್ತು ಮೋದಿ ಮಧ್ಯೆ ಸಾಕಷ್ಟು ಸಾಮ್ಯತೆ ಇರುವುದು ಸ್ಪಷ್ಟವಾಗುತ್ತಿದೆ. 

ಜಾನ್‌ ಮೆನಾರ್ಡ್ ಕೇನ್ಸ್ ಅವರ ಮಾತೊಂದನ್ನು ಇಲ್ಲಿ ಉಲ್ಲೇಖಿಸುವುದು ಹೆಚ್ಚು ಸೂಕ್ತ ಎನಿಸುತ್ತದೆ. ‘ಹಳೆಯ ಆಲೋಚನೆಗಳಿಂದ ಪಲಾಯನ ಮಾಡುವುದಕ್ಕಿಂತ ಹೊಸ ಚಿಂತನೆಗಳನ್ನು ಬೆಳೆಸುವುದರಲ್ಲಿ  ಹೆಚ್ಚು ತೊಂದರೆ ಏನಿಲ್ಲ’. ಅಂದರೆ, ಹಳೆಯ ಚಿಂತನೆಗಳಿಂದ ದೂರ ಉಳಿಯುವುದೇ ದೊಡ್ಡ ಸವಾಲಾಗಿರುತ್ತದೆ. ಈ ಮಾತು ಈಗ ಮೋದಿ ಸರ್ಕಾರಕ್ಕೂ ಅನ್ವಯಿಸಲಿದೆ. ಇಂದಿರಾ ಗಾಂಧಿ ಪಾಲಿಸಿಕೊಂಡು ಬಂದಿದ್ದ ರಾಜಕೀಯ ಶೈಲಿ, ದರ್ಪದ ಆಡಳಿತ ಮತ್ತು ಕೆಟ್ಟ ಆರ್ಥಿಕ ಚಿಂತನೆಗಳಿಂದ ಹೊರ ಬರುವುದು ಮೋದಿ ಸರ್ಕಾರಕ್ಕೂ ಸವಾಲಾಗಿ ಪರಿಣಮಿಸಿರುವುದು ವೇದ್ಯವಾಗುತ್ತಿದೆ.
(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT