ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ವಿರುದ್ಧ ಮಮತಾ ಹಳವಂಡಗಳು

Last Updated 11 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಕಮ್ಯುನಿಸ್ಟ್ ಕೆಂಪಿನ ರಂಪದ ಕಡುಶತ್ರುವೆಂದು ಬಣ್ಣಿಸಿಕೊಂಡ ದಿನಗಳಿಂದಲೂ ದೀದಿಯನ್ನು  ಭ್ರಮೆ  ಬೇಟೆಯಾಡಿದೆ
 
***
ನೋಟು ರದ್ದು  ಕ್ರಮಕ್ಕಾಗಿ ನರೇಂದ್ರ ಮೋದಿಯವರ ಮೇಲೆ ಗದೆ ಎತ್ತಿದ್ದಾರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.  ಕಂಡಲ್ಲೆಲ್ಲ ಕಾರಸ್ಥಾನಗಳೇ ಕಣ್ಣಿಗೆ ಬಿದ್ದು ಅವರನ್ನು  ಕಾಡತೊಡಗಿವೆ.
 
ದೀದಿಯ ಹತ್ಯೆಗೆ ಪ್ರಧಾನಿ ಸಂಚು ನಡೆಸಿದ್ದಾರೆಂದು ತೃಣಮೂಲ ಕಾಂಗ್ರೆಸ್ ಆಪಾದಿಸಿದೆ. ಅವರು ಪಯಣಿಸುತ್ತಿದ್ದ ಇಂಡಿಗೊ ವಿಮಾನ ಕೋಲ್ಕತ್ತದಲ್ಲಿ ಇಳಿಯುವುದು ತಡವಾಯಿತೆಂದು ರಂಪ ರಾದ್ಧಾಂತ ಎಬ್ಬಿಸಿದರು. ಕೋಲ್ಕತ್ತದ ಎರಡು ಟೋಲ್ ಪ್ಲಾಜಾಗಳಲ್ಲಿ ಸೇನೆಯ ನಿಯುಕ್ತಿ ತಮ್ಮ ಪದಚ್ಯುತಿಯ ಸನ್ನಾಹ ಎಂದರು ಮಮತಾ. ಒಕ್ಕೂಟ ವ್ಯವಸ್ಥೆಯ ಮೇಲೆ ಮೋದಿ ನೇತೃತ್ವದ ಸರ್ಕಾರ ನಡೆಸಿದ ದಾಳಿಯೆಂದು ಬಿರುಗಾಳಿಯೇ ಆಗಲು ನೋಡಿದರು. ಸಂಸತ್ತಿನಲ್ಲಿ ತೃಣಮೂಲ ಸದಸ್ಯರು ಅಬ್ಬರಿಸಿ ಬೊಬ್ಬಿರಿದುಬಿಟ್ಟರು.
 
ಕುಳಿತಲ್ಲಿ ನಿಂತಲ್ಲಿ ತಮ್ಮ ವಿರುದ್ಧ ಒಳಸಂಚುಗಳನ್ನು ಕಾಣುವ, ಬದನೆಕಾಯಿಯನ್ನು ಭೂತವೆಂದು ಭ್ರಮಿಸುವ ಮಮತಾ ಜಾಯಮಾನ ನೆನ್ನೆ ಮೊನ್ನೆಯದಲ್ಲ. ವಂಗಭೂಮಿಯಲ್ಲಿ ಕಮ್ಯುನಿಸ್ಟ್ ಕೆಂಪಿನ ರಂಪದ ಕಡುಶತ್ರುವೆಂದು ತಮ್ಮನ್ನು ಬಣ್ಣಿಸಿಕೊಂಡ ಆ ಹಳೆಯ ದಿನಗಳಿಂದಲೂ ಇಂತಹ ಹಳವಂಡಗಳು ಅವರನ್ನು ಬೇಟೆಯಾಡಿವೆ.  ಕಾಣದ ಕಮ್ಯುನಿಸ್ಟ್ ಕೈವಾಡಗಳ ಕುರಿತು ಭಯಮಿಶ್ರಿತ ಭ್ರಮೆಗಳು ಅವರ ಚಿತ್ತದಲ್ಲಿ ನೆಲೆ ನಿಂತಿವೆ. ಇಂತಹ ಭ್ರಮೆಗೆ ನೀರೆರೆದು ಬೆಳೆಸಿದ ಘಟನೆಯೊಂದು ನಡೆದದ್ದು ಹೌದು. ಸೋಮನಾಥ ಚಟಜಿ೯ ಅವರನ್ನು ಸೋಲಿಸಿದ್ದ ಮಮತಾ 1989ರ ಲೋಕಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟು ಮೂಲೆಗುಂಪಾಗಿದ್ದರು. ಒಂದೇ ವಷ೯ದ ನಂತರ ಕೋಲ್ಕತ್ತದ ಬೀದಿಗಳಲ್ಲಿ ಕಮ್ಯುನಿಸ್ಟ್  ಕಾರ್ಯಕರ್ತರು ನಡೆಸಿದ ಮಾರಣಾಂತಿಕ ಹಲ್ಲೆ ಆಕೆಯನ್ನು ಮತ್ತೊಮ್ಮೆ ಚಲಾವಣೆಯ ಮುಂಬೆಳಕಿಗೆ ಕರೆತಂದು ನಿಲ್ಲಿಸಿತ್ತು.
 
ತಲೆಯ ಮೇಲೆ ಎರಗಿದ್ದ ಸಿಪಿಎಂ ಲಾಠಿ ದೀದಿಯ ಬುರುಡೆಯನ್ನೇ ಬಿಚ್ಚಿತ್ತು. ತಿಂಗಳುಗಳನ್ನು ಆಸ್ಪತ್ರೆಯಲ್ಲಿ ಕಳೆದು ಹೊರಬಿದ್ದ ದೀದಿಗೆ ದೈಹಿಕ ಪುನರ್ಜನ್ಮ ಮಾತ್ರವಲ್ಲ, ರಾಜಕೀಯ ಮರುಹುಟ್ಟು ಕೂಡ ದೊರೆತಿತ್ತು. ಹಾಗೆಯೇ ಭಯ ಮತ್ತು ಸಂಶಯಗಳ ಭೂತಗಳನ್ನೂ ಮನಸಿನಾಳಕ್ಕೆ ತಳ್ಳಿತ್ತು.  ಕಮ್ಯುನಿಸ್ಟರನ್ನು ಎದುರು ಹಾಕಿಕೊಂಡು ಸೆಣೆಸಬಲ್ಲ ಸಾಮರ್ಥ್ಯವನ್ನು ವಂಗಲೋಕ ಅವರಲ್ಲಿ ಗುರುತಿಸಿದ್ದು ಆ ಹಂತದಲ್ಲೇ ಎನ್ನುತ್ತಾರೆ ರಾಜಕೀಯ ವೀಕ್ಷಕರು. 34 ವರ್ಷಗಳ ಸುದೀರ್ಘ ವಾಮರಂಗ ಆಡಳಿತಕ್ಕೆ ಕೊನೆ ಹಾಡಲು ಅವರು ಇನ್ನಿಲ್ಲದಷ್ಟು ಸೆಣೆಸಿದರು.
 
ಪಿ.ವಿ.ನರಸಿಂಹರಾವ್ ನೇತೃತ್ವದ ಸಕಾ೯ರದ ಮಂತ್ರಿ ಸ್ಥಾನಕ್ಕೆ ಅವರು ರಾಜೀನಾಮೆ ಘೋಷಿಸಿದ್ದು ಬಂಗಾಳದ ಬಹಿರಂಗ  ಸಭೆಯೊಂದರಲ್ಲಿ! ಅವರ ಕಮ೯ಭೂಮಿ  ಭಾರೀ ಬಹಿರಂಗಸಭೆಗಳ ಮೈದಾನಗಳೇ ವಿನಾ ಅಧಿಕಾರದ ಪಡಸಾಲೆಗಳಲ್ಲ. ಮೂರೂವರೆ ದಶಕಗಳ ಕಾಲ ಆಳಿದ ವಾಮವಾದಿಗಳನ್ನು ಅವರು ಪಳಗಿಸಿದ್ದು ವಂಗಭೂಮಿಯ ಮೈದಾನಗಳಲ್ಲೇ ಎಂಬ ಆಶೀಶ್  ಚಕ್ರವರ್ತಿ ಅವರ ಮಾತುಗಳು ಎಲ್ಲ ಕಾಲಕ್ಕೂ ಸತ್ಯ.
 
ಕಾಂಗ್ರೆಸ್ ಹೈಕಮಾಂಡು ಪಶ್ಚಿಮ ಬಂಗಾಳದ ವಾಮರಂಗ ಸಕಾ೯ರದೊಂದಿಗೆ ಒಳ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ರೊಚ್ಚಿಗೆದ್ದಿದ್ದ ಮಮತಾ ಒಮ್ಮೆ ಕೋಲ್ಕತ್ತದ ಬಹಿರಂಗ ಸಭೆಯೊಂದರಲ್ಲಿ ಹೊದ್ದಿದ್ದ ಶಾಲನ್ನೇ ಹುರಿ ಮಾಡಿ ಕೊರಳಿಗೆ ಹಗ್ಗದಂತೆ ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಕೆ ಹಾಕಿದ್ದರು.
2011ರಲ್ಲಿ ಮುಖ್ಯಮಂತ್ರಿಯಾದ ನಂತರವೂ ಸಿಪಿಎಂ ಹಂಚಿಕೆ ಹುನ್ನಾರಗಳ ಹಳವಂಡ ಅವರನ್ನು ಕಾಡುವುದು ನಿಲ್ಲಲಿಲ್ಲ.
 
ಸೀದಾ ಸಾದಾ ವ್ಯಂಗ್ಯಚಿತ್ರವೊಂದರಲ್ಲಿ ತಮ್ಮ ಹತ್ಯೆಯ ಸಂಚನ್ನು ಕಂಡರು. ಆಸ್ಪತ್ರೆಗಳಲ್ಲಿನ ಶಿಶುಮರಣಗಳು ಮತ್ತು ರೈಲ್ವೆ ಅಪಘಾತಗಳ ಹಿಂದೆ ಕಮ್ಯುನಿಸ್ಟ್್ ಪಿತೂರಿಯನ್ನು ಕಲ್ಪಿಸಿಕೊಳ್ಳುವುದು ಮಮತಾಗೆ ಮಾತ್ರವೇ ಸಾಧ್ಯವಿದ್ದೀತು.
 
ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣಗಳನ್ನು ತಮ್ಮ ಸರ್ಕಾರದ ಹೆಸರಿಗೆ ಮಸಿ ಬಳಿಯಲು ಹುಟ್ಟಿಸಿರುವ ಕಟ್ಟು ಕಥೆಗಳು ಎಂದರು. ತಮ್ಮನ್ನು ಟೀಕಿಸುವ ಪತ್ರಿಕೆಗಳನ್ನು ಸರ್ಕಾರಿ ಗ್ರಂಥಾಲಯಗಳಿಂದ ಬಹಿಷ್ಕರಿಸಿದರು. ತಲೆ ಕೆಡಿಸುವ ಸುದ್ದಿ ವಾಹಿನಿಗಳನ್ನು ನೋಡುವ ಬದಲಿಗೆ ಸಂಗೀತ ಆಲಿಸಿರಿ ಎಂದು ಬಹಿರಂಗ ಸಭೆಗಳಲ್ಲಿ ಕಿವಿಮಾತು ಹೇಳಿದರು. ಬಂಗಾಳಿಗಳ ದಿನನಿತ್ಯದ ಬದುಕಿನಲ್ಲಿ ಕಮ್ಯುನಿಸ್ಟ್ ದಬ್ಬಾಳಿಕೆ ವಿರುದ್ಧ ಹೋರಾಡಿದ್ದ ಆಕೆ ಅಂತಹುದೇ ತೃಣಮೂಲದ ದಬ್ಬಾಳಿಕೆಯನ್ನು ಸಮರ್ಥಿಸಿಕೊಂಡರು.  ತಮ್ಮ ಬೆನ್ನಿಗೆ ನಿಂತ ಹಿರಿಯ ಸಾಹಿತಿ ಮಹಾಶ್ವೇತಾದೇವಿ ಅವರಿಂದ ‘ಫ್ಯಾಸಿಸ್ಟ್’  ಎನ್ನಿಸಿಕೊಂಡರು.
 
ಸಂವಾದವೊಂದರಲ್ಲಿ ತಮ್ಮ ಸಕಾ೯ರದ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸಿದ ಜಾಧವಪುರ ವಿಶ್ವವಿದ್ಯಾಲಯದ ವಿದ್ಯಾಥಿ೯ನಿಯನ್ನು ಮಾವೊವಾದಿ ಎಂದು ಗದರಿಸಿದ್ದರು. 
 
ಜನರ ನಡುವೆ ಸಂಚರಿಸುವ ಈ ಮುಖ್ಯಮಂತ್ರಿ ಮೈದಾನಗಳು- ಜನಸಭೆಗಳ ರಾಜಕಾರಣ ಮಾಡಿದವರು. ನಿಂತಲ್ಲಿ ಕುಳಿತಲ್ಲಿ ನಿದ್ರಾವಸ್ಥೆಯಲ್ಲಿ ಕಮ್ಯುನಿಸ್ಟರ ವಿರುದ್ಧ ಕನಲಿ ಕನವರಿಸಿದರು. ಮಾವೊವಾದಿ ಬಂಡುಕೋರರು ಮಾತ್ರವೇ ಅಲ್ಲ ಪಾಕಿಸ್ತಾನದ ಐಎಸ್ಐ ಕೂಡ ತಮ್ಮ ಹತ್ಯೆಯ ಸಂಚು ನಡೆಸಿದೆಯೆಂದು  ದೂರಿದ್ದರು.
 
 ಸ್ಥಳೀಯ ಕಾಂಗ್ರೆಸ್ ತಲೆಯಾಳುಗಳು ಆಳುವ ಮಾಕ್ಸ್೯ವಾದಿ ಕಮ್ಯುನಿಸ್ಟರ ಜೊತೆ ಶಾಮೀಲಾಗಿದ್ದಾರೆ...  ಪ್ರದೇಶ ಕಾಂಗ್ರೆಸ್ ನಾಯಕರು ಕಲ್ಲಂಗಡಿ ಹಣ್ಣಿದ್ದಂತೆ- ಹೊರಗೆ ಹಸಿರಾದರೂ ಒಳತಿರುಳು ಕೆಂಪು ಕೆಂಪು (ಕಮ್ಯುನಿಸ್ಟ್ ಕೆಂಪು) ಎಂಬುದು ಆಕೆಯ ಟೀಕೆಯಾಗಿತ್ತು.
 
ಪ್ರದೇಶ ಕಾಂಗ್ರೆಸ್ ಅಧ್ಯಕ್ಷತೆ ಕೈ ತಪ್ಪಿದಾಗ ವಂಗ ನೆಲದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಗರಿಕೆ ನೆಟ್ಟರು. ಕೆಂಪನ್ನು ಎದುರಿಸಲು ಕೇಸರಿಯೇ ಸರಿಯೆಂದು ಬಗೆದು ಮುಂದೊಂದು ದಿನ ವಾಜಪೇಯಿ ನೇತೃತ್ವದ ಸಕಾ೯ರ ಸೇರಿದರು. ಮಿತ್ರರು ಶತ್ರುಗಳೆನ್ನದೆ ಎಲ್ಲರೊಂದಿಗೆ ಕದನಕ್ಕಿಳಿಯುವ ದೀದಿ, ಕಡೆಗೆ ಯಾರೂ ಸಿಗದೆ ಹೋದರೆ ತನ್ನೊಂದಿಗೆ ತಾನೇ ಜಗಳಕ್ಕೆ ಬಿದ್ದಾರು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
 
ಅವರ ಸಿಟ್ಟು ಸೆಡವಿನ ನಾಟಕೀಯ ತಂತ್ರಗಳಿಗೆ ಲೋಕಸಭೆಯೂ ಸಾಕ್ಷಿ. ಒಮ್ಮೆ ಸ್ಪೀಕರ್ ಶಿವರಾಜ ಪಾಟೀಲರ ಮೇಲೆ ಮುನಿದು  ಅಧಿವೇಶನವನ್ನೇ ಬಹಿಷ್ಕರಿಸಿದ್ದರು. ಸ್ಪೀಕರ್ ಸಂಗ್ಮಾ ಕುಳಿತಿದ್ದ ಪೀಠದತ್ತ ಶಾಲನ್ನು ತೂರಿ ಒಗೆದು ಸದನದಿಂದ ಹೊರ ಧಾವಿಸಿದ್ದರು. ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡಲಿಲ್ಲವೆಂದು ಸ್ಪೀಕರ್ ಸೋಮನಾಥ ಚಟರ್ಜಿ ಅವರತ್ತ ಕೈಲಿದ್ದ ಕಾಗದದ ಕಂತೆಗಳನ್ನು ಎಸೆದು ರಾಜೀನಾಮೆ ಸಲ್ಲಿಸುವುದಾಗಿ ಕಿರುಚಿದ್ದರು.
 
ಸಾಮಾಜಿಕ-ಆರ್ಥಿಕ- ರಾಜಕೀಯ ಅಧಿಕಾರ ಕೇಂದ್ರಿತ ಆಗಿರುವುದು ಇಂದಿಗೂ ಮೇಲ್ಜಾತಿಗಳು ಮತ್ತು ಮಧ್ಯಮ ಮೇಲ್ಜಾತಿಗಳ ಕೈಯಲ್ಲೇ. ಕಮ್ಯುನಿಸ್ಟ್ ಸಿದ್ಧಾಂತವನ್ನು ಅಳವಡಿಸಿಕೊಂಡರೂ ಹಿಂದೂವಾದಿ ಆಚರಣೆಗಳಲ್ಲಿ ಈ ಜಾತಿಗಳ ವಿಶ್ವಾಸದ ಬೇರು ಇನ್ನೂ ಭದ್ರ.  ಜಾತಿದ್ವೇಷದ ಹಿಂಸಾಚಾರ ಇಲ್ಲ ಎಂದಾಕ್ಷಣ ಜಾತೀಯತೆ ಇಲ್ಲವೇ ಇಲ್ಲ ಎಂದು ಭಾವಿಸುವಂತಿಲ್ಲ. ದೇಶದ ಎರಡನೆಯ ಅತಿ ಹೆಚ್ಚು ದಲಿತಬಾಹುಳ್ಯದ ಸೀಮೆ ಪಶ್ಚಿಮ ಬಂಗಾಳ. ಆದರೂ ಇಲ್ಲಿ ದಲಿತ ಅಸ್ಮಿತೆಯ ಪ್ರಶ್ನೆ ಎದ್ದು ನಿಂತಿಲ್ಲ. ಎಡರಂಗ ಸರ್ಕಾರಗಳು ಜಾರಿಗೆ ತಂದ ಭೂಮಿಯ ಮರು ಹಂಚಿಕೆ ಮತ್ತು ಪಂಚಾಯಿತಿ ವ್ಯವಸ್ಥೆಯಲ್ಲಿ ದಲಿತರ ಸೀಮಿತ ಸಶಕ್ತೀಕರಣ ಮತ್ತು ದಲಿತ ಅಸ್ಮಿತೆ ಅಸ್ತಿತ್ವಗಳೊಂದಿಗೆ ನೇರ ಘರ್ಷಣೆಗೆ ಇಳಿಯದೆ ಮೇಲ್ಜಾತಿಗಳು ಮಾಡಿಕೊಂಡಿರುವ ಸಣ್ಣಪುಟ್ಟ ಹೊಂದಾಣಿಕೆಗಳ ಕಾರಣ ಸಾರ್ವಜನಿಕ ಸಂವಾದದಲ್ಲಿ ಜಾತಿಯ ಪ್ರಶ್ನೆ ದೊಡ್ಡದಾಗಿ ಬೆಳೆದು ನಿಂತಿಲ್ಲ ಎನ್ನುತ್ತಾರೆ ಸಮಾಜ ವಿಜ್ಞಾನಿಗಳು.
 
ಉತ್ತರಪ್ರದೇಶದಲ್ಲಿ ‘ಮೌಲ್ವಿ ಮುಲಾಯಂ’ ಅಭಿದಾನವನ್ನು ಹೆಮ್ಮೆಯಿಂದ ಹಣೆಯ ಮೇಲೆ ಧರಿಸುತ್ತಾರೆ ಮುಲಾಯಂ ಸಿಂಗ್ ಯಾದವ್. ಅಲ್ಲಿ ಅವರ ಸರ್ಕಾರ ನಡೆಸಿರುವ ಮುಸ್ಲಿಂರ ಅತಿ ಓಲೈಕೆಯಿಂದ ಕೆರಳಿರುವ ಹಿಂದೂಗಳು ಬಲಪಂಥೀಯರ ತೆಕ್ಕೆಗೆ ಜಾರುತ್ತಿದ್ದಾರೆ. ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ತಿಳಿದೂ ತಿಳಿದೂ ಇದೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತ ನಡೆದಿದ್ದಾರೆ. ಮುಸಲ್ಮಾನರನ್ನು ಅದರಲ್ಲಿಯೂ ಕಟ್ಟರ್‌ವಾದಿ ಮುಸಲ್ಮಾನರ ಓಲೈಕೆಯಲ್ಲಿ ತೊಡಗಿರುವ ಗಂಭೀರ ಆರೋಪಗಳನ್ನು ಎದುರಿಸಿದ್ದಾರೆ.
 
ಬಂಗಾಳ ವಿಭಜನೆಯ ನಂತರ ಬಾಬ್ರಿ ಮಸೀದಿ ಧ್ವಂಸದ ಪ್ರಕ್ಷುಬ್ದ ದಿನಗಳಲ್ಲಿಯೂ ಕೋಮುವಾದಿ ಹಿಂಸೆ ಬಂಗಾಳವನ್ನು ತಾಕಿರಲಿಲ್ಲ. 2011ರಲ್ಲಿ ಅಧಿಕಾರ ಸೂತ್ರ ಮಮತಾ ಕೈವಶ ಆಗುತ್ತಿದ್ದಂತೆ ಕೋಮುಘರ್ಷಣೆಗಳು ಮೊದಲಾದವು.
 
ಹಾವು ಮತ್ತು ಕಪ್ಪೆ ಎರಡಕ್ಕೂ ಮುತ್ತು ಕೊಡುವ ಅಪಾಯಕಾರಿ ಹಾದಿ ಹಿಡಿದಿರುವ ತೃಣಮೂಲ ಕಾಂಗ್ರೆಸ್ಸು ಈ ಹಿಂದೆ ರಾಜಕೀಯ ಲಾಭಕ್ಕಾಗಿ ಬಿಜೆಪಿಯನ್ನು ಆಲಿಂಗಿಸಿತ್ತು. ಇದೀಗ ಅಂತಹುದೇ ಚುನಾವಣಾ ರಾಜಕೀಯ ಲಾಭಗಳಿಗಾಗಿ ಮುಸಲ್ಮಾನರನ್ನು ತಲೆ ಮೇಲೆ ಇರಿಸಿಕೊಂಡು ಮೆರವಣಿಗೆ ಮಾಡುತ್ತಿದೆ. ತನ್ನ ಈ ಚರ್ಯೆಯು ಬಂಗಾಳದಲ್ಲಿ ಕೋಮುವಾದಿ ರಾಜಕಾರಣಕ್ಕೆ ದಾರಿ ಮಾಡೀತು ಎಂಬುದನ್ನೂ ಮಮತಾ ಲೆಕ್ಕಿಸುತ್ತಿಲ್ಲ ಎಂಬ ಟೀಕೆಯಲ್ಲಿ ವಾಸ್ತವವನ್ನು ಕಂಡಿದ್ದಾರೆ ರಾಜಕೀಯ ವಿಮರ್ಶಕರು.
 
ಈ ಹಿಂದೆ ಬಿಜೆಪಿಯ ಸಖ್ಯ ಬೆಳೆಸಿದ್ದಾಗ ‘ಬಾಂಗ್ಲಾದೇಶಿ ಅಕ್ರಮ ಮುಸ್ಲಿಮ್ ವಲಸೆ’ಯ ವಿಷಯವನ್ನು ಚರ್ಚಿಸಲು ಅವಕಾಶ ಮಾಡಿಕೊಡಲಿಲ್ಲವೆಂದು ಹೊದ್ದಿದ್ದ ಶಾಲು ಎಸೆದು, ಕಾಗದ ಹರಿದು ತೂರಿ ರಂಪ ಮಾಡಿದ್ದವರು ಮಮತಾ. ಇದೀಗ ಈ ವಿಷಯ ಕುರಿತು ಅವರ ನಿಲುವು ಸಂಪೂರ್ಣ ತಲೆಕೆಳಗಾಗಿದೆ.
 
2011ರಲ್ಲಿ ವಾಮರಂಗ ಸರ್ಕಾರದ ಘೋರ ಪರಾಭವದ ನಂತರ 2014ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಮೊದಲ ಬಾರಿಗೆ ಎಲ್ಲ 42 ಕ್ಷೇತ್ರಗಳಲ್ಲಿ ಸ್ಪರ್ಧಿಸಿತು. ಗೆದ್ದದ್ದು ಎರಡೇ ಸ್ಥಾನಗಳೇ. ಆದರೆ ಗಳಿಸಿದ ಮತಗಳ ಪ್ರಮಾಣ ಹೆಚ್ಚು ಕಡಿಮೆ ಶೇ 17. ಬಹುತೇಕ ವಾಮರಂಗದ ಮತ ಗಳಿಕೆಗೆ ಹತ್ತಿರ ಹತ್ತಿರವಾಗತೊಡಗಿದೆ.
 
ಬಿಜೆಪಿಯ ಈ ದಾಪುಗಾಲು ದೀದಿಯನ್ನು ಬೆಚ್ಚಿ ಬೀಳಿಸಿದೆ. ಹೀಗಾಗಿ ಅವರು  ಕೆಂಪನ್ನು ಹಳಿಯುವ ಕಾಯಕ ಬಿಟ್ಟು ಇದೀಗ ಕೇಸರಿಯ ಮೇಲೆ ಮುಗಿಬೀಳುತ್ತಿದ್ದಾರೆ. ಮೋದಿಯವರ ನೋಟು ರದ್ದಿನ ವಿರುದ್ಧ ತಮ್ಮ ಆಜನ್ಮ ವೈರಿ ಎಂದು ಪರಿಗಣಿಸಿರುವ ಕಮ್ಯುನಿಸ್ಟರ ಜೊತೆಗೆ ಕೈ ಜೋಡಿಸುವ ಹಂತ ತಲುಪಿದ್ದಾರೆ.
 
 ಹಸಿ ಹಸಿ ನಾಟಕೀಯತೆ ಬೆರೆತ ಬಂಡಾಯ ಆಕೆಯ ರಾಜಕಾರಣದ ಜೀವಾಳವೆಂದು ವ್ಯಾಖ್ಯಾನ ಮಾಡಲಾಗಿದೆ. ‘ನಾನೊಬ್ಬ ಭಾವ ಪರವಶ ವ್ಯಕ್ತಿ. ಹೀಗಾಗಿ ಪ್ರತಿಕ್ರಿಯಿಸುತ್ತೇನೆ. ಪ್ರತಿಕ್ರಿಯಿಸದೆ ಹೋದರೆ ನೀವು ಯಂತ್ರ ಮಾನವ ಆಗುವಿರೇ ವಿನಾ ರಾಜಕಾರಣಿ ಅಲ್ಲ’ ಎಂಬುದು ದೀದಿಯ ಸಮಜಾಯಿಷಿ.
editpagefeedback@prajavani.co.in

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT