ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸಂಪುಟದಲ್ಲಿ ಪ್ರತಿಭೆಗಿಲ್ಲ ಮಣೆ!

Last Updated 2 ಜುಲೈ 2016, 19:30 IST
ಅಕ್ಷರ ಗಾತ್ರ

ವಿವಿಧ ಬಗೆಯ ಸೈದ್ಧಾಂತಿಕ ಹಿನ್ನೆಲೆಗೆ ಸೇರಿದ ದೇಶದ ಪ್ರತಿಭಾನ್ವಿತರ ಸೇವೆ ಪಡೆಯಲು ನರೇಂದ್ರ ಮೋದಿ ಅವರಿಗೆ ಯಾವುದೇ ಅಡಚಣೆ ಇಲ್ಲ. ಆದರೂ ಅವರು ಇಂತಹ ಆಲೋಚನೆಯನ್ನು ಕಾರ್ಯರೂಪಕ್ಕೆ ತರಲು ಇದುವರೆಗೂ ಮನಸ್ಸು ಮಾಡಿಲ್ಲ.

ಈ ವಾರದ ಆರಂಭದಲ್ಲಿ ದೆಹಲಿಯ ಭಾರತ ಅಂತರ ರಾಷ್ಟ್ರೀಯ ಕೇಂದ್ರದಲ್ಲಿ (ಐಐಸಿ) ಅಪರೂಪದ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ವಿನಯ್‌ ಸೀತಾಪತಿ ಅವರು ಬರೆದ, ಮಾಜಿ ಪ್ರಧಾನಿ ದಿವಂಗತ ಪಿ.ವಿ.ನರಸಿಂಹರಾವ್‌ ಅವರ ಜೀವನಚರಿತ್ರೆ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಗಣ್ಯರು, ಬುದ್ಧಿಜೀವಿಗಳು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಗ್ರಂಥ ಕರ್ತೃ ಸೀತಾಪತಿ ಅವರು ವೇದಿಕೆ ಮೇಲಿದ್ದ ಪ್ರತಾಪ್‌ ಭಾನು ಮೆಹ್ತಾ, ಸಿ.ರಾಜಾ ಮೋಹನ್‌, ಕೆ.ನಟವರ ಸಿಂಗ್ ಮತ್ತು ನನಗೆ ಒಂದು ಪ್ರಶ್ನೆ ಮುಂದಿಟ್ಟಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು, ನರಸಿಂಹರಾವ್‌ ಅವರಿಂದ ಯಾವ ಪಾಠ ಕಲಿಯಬಹುದಾಗಿತ್ತು ಎನ್ನುವುದೇ ಅವರ ಪ್ರಶ್ನೆಯಾಗಿತ್ತು.

‘ಸದ್ಯದ ಸಂದರ್ಭದಲ್ಲಿ ಪ್ರಧಾನಿಗೆ ಇಂತಿಂತಹ ಕೌಶಲದ ಕೊರತೆ ಇರುವುದರಿಂದ ಅವುಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದು ಸಲಹೆ ಕೊಡುವುದು ಅಜಾಗರೂಕತೆಯ ನಡೆಯಾಗಲಿದೆ’ ಎಂದು ನಾನು ಕಳವಳ ವ್ಯಕ್ತಪಡಿಸಿದೆ. ಆದರೆ, ಈ ಬಗ್ಗೆ ಮೌನ ವಹಿಸುವುದಾಗಲಿ ಅಥವಾ ತಟಸ್ಥ ಧೋರಣೆ ತಳೆಯುವುದಾಗಲಿ ಉಚಿತವಾಗಲಾರದು ಎಂದು ಭಾವಿಸಿದ ನಾನು, ಸಭಿಕರ ಮುಂದೆ ಕೆಲ ಪ್ರಶ್ನೆಗಳನ್ನಿಟ್ಟೆ.

‘2014ರಲ್ಲಿ ನರೇಂದ್ರ ಮೋದಿ ಅವರು ಭಾರತದ ಜನತೆಗೆ ಹೊಸ ಆಶಾವಾದದ ಭರವಸೆ ನೀಡಿ, ಅಭೂತಪೂರ್ವ ಜನಬೆಂಬಲ ಪಡೆದು ಪ್ರಧಾನಿಯಾಗಿ ಚುನಾಯಿತರಾದರು. ಸರ್ಕಾರದ ಇದುವರೆಗಿನ ಸಾಧನೆಯನ್ನು ಅಳೆದು ತೂಗಿ ನೋಡಿರುವ ಜಾಣ ಸಭಿಕರು ಮೋದಿ ಅವರ ಭರವಸೆ ಈಡೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಕೆಲ ಸಚಿವರ ಹೆಸರುಗಳನ್ನು ಸೂಚಿಸಿ’ ಎಂದು ಕೇಳಿಕೊಂಡೆ.

ನನ್ನ ಪಟ್ಟಿಯಲ್ಲಿ ಕೃಷಿ, ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಗ್ರಾಮೀಣಾಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಗಳನ್ನು ಗುರುತು ಮಾಡಿಕೊಂಡಿದ್ದೆ. ಸಭಾಂಗಣದಲ್ಲಿ ಸೇರಿದ್ದ ಸುಮಾರು 500 ಗಣ್ಯರ  ಪೈಕಿ ಕೇವಲ 10 ಜನರು ಮಾತ್ರ (ಶೇ 2ರಷ್ಟು) ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌ ಪರ ಕೈ ಎತ್ತಿದರು.

ಅದೇ ಗರಿಷ್ಠ ಮಟ್ಟದ್ದಾಗಿತ್ತು. ಅತಿ ಕಡಿಮೆ ಸಂಖ್ಯೆಯ ಬೆಂಬಲವು ಗ್ರಾಮೀಣಾಭಿವೃದ್ಧಿ ಸಚಿವ ಬೀರೆಂದರ್‌ ಸಿಂಗ್‌ ಅವರಿಗೆ ದೊರೆತಿತ್ತು. ಕೇವಲ ಇಬ್ಬರು ಅವರ ಪರವಾಗಿ ಕೈಎತ್ತಿದ್ದರು.

ಆರೋಗ್ಯ ಸಚಿವ ಜೆ.ಪಿ.ನಡ್ಡಾ, ಹರ್ಷವರ್ಧನ್‌ (ವಿಜ್ಞಾನ ಮತ್ತು ತಂತ್ರಜ್ಞಾನ) ಮತ್ತು ಥಾವರ್‌ ಚಂದ್‌ ಗೆಹ್ಲೋಟ್‌ (ಸಾಮಾಜಿಕ ನ್ಯಾಯ) ಅವರ ಬಗ್ಗೆಯೂ ಕೆಲ ಮಟ್ಟಿಗೆ ಬೆಂಬಲ ವ್ಯಕ್ತವಾಯಿತು. ಗೆಹ್ಲೋಟ್‌ ಅವರ ಬಗ್ಗೆ ಇನ್ನೊಂದು ವಿಷಯವನ್ನು ನಾನು ಇಲ್ಲಿ ಓದುಗರೊಂದಿಗೆ ಹಂಚಿಕೊಳ್ಳಲು ಬಯಸುವೆ.

ಮುಂದಿನ ವರ್ಷ ಪ್ರಣವ್‌ ಮುಖರ್ಜಿ ಅವರ ರಾಷ್ಟ್ರಪತಿ ಅಧಿಕಾರಾವಧಿ ಪೂರ್ಣಗೊಳ್ಳಲಿದೆ. ಗೆಹ್ಲೋಟ್‌ ಅವರನ್ನು ರಾಷ್ಟ್ರಪತಿ ಹುದ್ದೆಗೆ ದಲಿತ ಅಭ್ಯರ್ಥಿಯನ್ನಾಗಿ ಬಿಂಬಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿರುವುದರಿಂದ ಇವರ ಹೆಸರನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಮರೆಯಬೇಡಿ.

ಇನ್ನೂ ಕೆಲವು ಸಚಿವರ ಹೆಸರುಗಳನ್ನು ಇಲ್ಲಿ ಉಲ್ಲೇಖಿಸಿದರೂ ಅವರು ಕೂಡ ಗಮನ ಸೆಳೆಯುವಂತಹ ಸಾಧನೆಯನ್ನೇನೂ ಮಾಡಿಲ್ಲ. ಕಾರ್ಮಿಕ ಮತ್ತು ಉದ್ಯೋಗ ಸಚಿವ ಬಂಡಾರು ದತ್ತಾತ್ರೇಯ ಅವರು, ರೋಹಿತ್‌ ವರ್ಮಾಗೆ ಸಂಬಂಧಿಸಿದಂತೆ ಬರೆದ ಪತ್ರಗಳಿಗಾಗಿ ನೆನಪಾಗುತ್ತಾರಷ್ಟೆ. ಆದಿವಾಸಿಗಳ ವ್ಯವಹಾರ ಸಚಿವ ಜುಅಲ್‌ ಓರಮ್‌, ಗಣಿಗಾರಿಕೆಯ ನರೇಂದ್ರ ಸಿಂಗ್‌ ಥೋಮರ್‌ ಅವರಂತೂ ಸಂಪುಟದಲ್ಲಿ ಇದ್ದೂ ಇಲ್ಲದಂತೆ ಇದ್ದಾರೆ.

ಇನ್ನು, ರಾಂ ವಿಲಾಸ್‌ ಪಾಸ್ವಾನ್‌ ಮತ್ತು ಉಮಾ ಭಾರತಿ ಅವರೂ ಮೋದಿ ಸಂಪುಟದಲ್ಲಿ ಇದ್ದರೂ, ಇವರು  ತಮ್ಮ ಖಾತೆಗಳಾದ ಆಹಾರ ಹಾಗೂ ಗ್ರಾಹಕರ ವ್ಯವಹಾರ ಮತ್ತು ಜಲ ಸಂಪನ್ಮೂಲ ವಿಷಯದಲ್ಲಿ ಹೇಳಿಕೊಳ್ಳುವಂತಹ ಸಾಧನೆಯನ್ನೇನೂ ಮಾಡಿಲ್ಲ. ಬೇಕಿದ್ದರೆ ಓದುಗರೂ ಈ ವಿಷಯವನ್ನು ಸ್ವತಃ  ಪರಿಶೀಲಿಸಬಹುದು.

ನ್ಯಾಯಯುತವಾಗಿ ಮಾತನಾಡುವುದಾದರೆ, ಇತ್ತೀಚಿನ ದಿನಗಳಲ್ಲಿ ಕೇಂದ್ರ ಸಂಪುಟದಲ್ಲಿ ಇರುವ ಸಚಿವರು ಮತ್ತು ಅವರು ನಿರ್ವಹಿಸುತ್ತಿರುವ ಖಾತೆಗಳ ಬಗ್ಗೆ ಬಹುತೇಕ ಜನರಿಗೆ ಹೆಚ್ಚಿನ ಮಾಹಿತಿಯೇ ಇರಲಾರದು. ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದಾಗ ನಾನು ನನ್ನ ಕಚೇರಿಯಲ್ಲಿನ ಸುದ್ದಿಮನೆಯ ಹೊರಗೆ ಬಂದು ಸುತ್ತು ಹೊಡೆಯುವಾಗ, ಸಂಪುಟ ಸದಸ್ಯರ ಬಗ್ಗೆ ಸುತ್ತಮುತ್ತಲಿನವರನ್ನು ಪ್ರಶ್ನೆ ಕೇಳುತ್ತಿದ್ದೆ.

ಅದಕ್ಕೆ ಬಹುತೇಕರು ತಮಗೆ ಗೊತ್ತಿಲ್ಲ ಎಂದೇ ಹೇಳುತ್ತಿದ್ದರು. ಮುಂಗಾರು ಕೈಕೊಡಲಿರುವುದರಿಂದ ದೇಶದಾದ್ಯಂತ ನೀರಿಗೆ ತತ್ವಾರ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದ್ದರೂ ಜಲ ಸಂಪನ್ಮೂಲ ಸಚಿವರ ಹೆಸರೂ ಅನೇಕರಿಗೆ ಗೊತ್ತಿರಲಿಲ್ಲ.

ಆದರೆ, ಯುಪಿಎ ಸರ್ಕಾರದ ಆರೋಗ್ಯ ಸಚಿವ ರಾಮದಾಸ್ ಹೆಸರನ್ನು ಓದುಗರಲ್ಲಿ ಅನೇಕರು ನೆನಪಿನಲ್ಲಿ ಇಟ್ಟುಕೊಂಡಿರಬಹುದು. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್‌) ಜತೆಗಿನ ಸಂಘರ್ಷದ ಕಾರಣಕ್ಕೆ ರಾಮದಾಸ್ ಅವರು ಹೆಚ್ಚು ಸುದ್ದಿಯಲ್ಲಿದ್ದರು.

ಗುಲಾಂ ನಬಿ ಆಜಾದ್‌ ಅವರು ಕಾಂಗ್ರೆಸ್‌ ಪಕ್ಷದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದಾರೆ. ಯುಪಿಎ–2 ಸರ್ಕಾರದಲ್ಲಿ ಐದು ವರ್ಷಗಳ ಕಾಲ ಇವರು ಆರೋಗ್ಯ ಸಚಿವರಾಗಿದ್ದರೂ ಏನಾದರೂ ಮಹತ್ವದ ಸಾಧನೆ ಮಾಡಿ ಸೈ ಎನ್ನಿಸಿಕೊಳ್ಳಬೇಕೆಂಬ ಬಗ್ಗೆ ಅವರು ಯಾವತ್ತೂ ತಲೆಕೆಡಿಸಿಕೊಂಡಿರಲಿಲ್ಲ.

ಐದು ವರ್ಷಗಳ ಯುಪಿಎ–2 ಸರ್ಕಾರದ ಅಧಿಕಾರಾವಧಿಯಲ್ಲಿ ಏಳು ಮಂದಿ ರೈಲ್ವೆ ಸಚಿವರು ಕಾರ್ಯ ನಿರ್ವಹಿಸಿದರೂ ಪ್ರತಿಯೊಬ್ಬರೂ ತಮಗಿಂತ ಮುಂಚಿನವರಿಗಿಂತ ಹೆಚ್ಚು ಕೆಟ್ಟದ್ದಾಗಿಯೇ ಕಾರ್ಯ ನಿರ್ವಹಿಸಿದ ಕುಖ್ಯಾತಿಗೆ ಗುರಿಯಾಗಿದ್ದರು. ಕೆಲಸ ಮಾಡದ ಸಚಿವರನ್ನು ಕಟ್ಟಿಕೊಂಡು ಏಗಿದ ಸರ್ಕಾರಕ್ಕೆ ಜನರು ಕೊನೆಗೂ ಸರಿಯಾದ ಪಾಠ ಕಲಿಸಿದರು.

ದೇಶದ ರಾಜಕೀಯ ಇತಿಹಾಸದಲ್ಲಿ ಕೇಂದ್ರದಲ್ಲಿನ ಅಧಿಕಾರಾರೂಢ ಪಕ್ಷವೊಂದನ್ನು ಅತ್ಯಂತ ಹೀನಾಯವಾಗಿ ಸೋಲಿಸಿ, ಆಶಾವಾದದ ಭರವಸೆ ನೀಡಿದ ಮೋದಿ ಅವರನ್ನು ಅಭೂತಪೂರ್ವವಾಗಿ ಬೆಂಬಲಿಸಿದರು.

ಆರೋಗ್ಯ, ಕೃಷಿ, ಗ್ರಾಮೀಣಾಭಿವೃದ್ಧಿ, ಸಾಮಾಜಿಕ ನ್ಯಾಯ, ಜಲ, ಉದ್ಯೋಗ, ಆಹಾರ ಮುಂತಾದವು ಸದ್ಯಕ್ಕೆ ಹೆಚ್ಚು ಭರವಸೆ ಮೂಡಿಸಿರುವ ಸಚಿವಾಲಯಗಳಾಗಿವೆ. ಈ ಸಚಿವಾಲಯಗಳಿಗೆ ಮೋದಿ ಅವರು ಆಯ್ಕೆ ಮಾಡಿರುವ ಸಚಿವರಲ್ಲಿ ಮೂಲತಃ ಜಿದ್ದಿಗೆ ಬಿದ್ದು ಕೆಲಸ ಮಾಡುವ ಗುಣ ಕಂಡು ಬರುತ್ತಿಲ್ಲ. ತಮಗೆ ಒಪ್ಪಿಸಿದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯವನ್ನೇ ಇವರು ಹೊಂದಿಲ್ಲ. ಇವರೆಲ್ಲರ ಒಟ್ಟಾರೆ ಕಾರ್ಯವೈಖರಿ ತುಂಬ ನಿರಾಶಾದಾಯಕವಾಗಿದೆ.

ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌ ಅವರು ಸಾವಯವ ಕೃಷಿ ಆಕಳ ಸಗಣಿ ಮತ್ತು ಗೋಮೂತ್ರಕ್ಕಿಂತ ಹೆಚ್ಚಿನ ವಿಷಯಗಳ ಬಗ್ಗೆ ಮಾತನಾಡಬೇಕಾಗಿದೆ. 

ಜಲಸಂಪನ್ಮೂಲ ಸಚಿವಾಲಯವು ಕಳೆದ ಎರಡು ವರ್ಷಗಳ ಬರಗಾಲದಿಂದಾಗಿ ಹೊಸ ಚಿಂತನೆಗಳಿಂದ ಬತ್ತಿ ಹೋಗಿದ್ದು, ಸಚಿವೆ ಉಮಾ ಭಾರತಿ ಅವರು  ಇದುವರೆಗೂ ಯಾವುದೇ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಿಲ್ಲ. ಆರೋಗ್ಯ ಸಚಿವಾಲಯವು (ಜಗತ್‌ ಪ್ರಕಾಶ್‌ ನಡ್ಡಾ) ಆಯುಷ್‌ ಎದುರು ತನ್ನ ಮಹತ್ವವನ್ನು ಕಳೆದುಕೊಂಡು ಬಿಟ್ಟಿದೆ.

ಗ್ರಾಮೀಣಾಭಿವೃದ್ಧಿ ಸಚಿವ ಚೌಧರಿ ಬಿರೇಂದರ್‌ ಸಿಂಗ್‌ ಅವರಂತೂ ತಮ್ಮ  ರಾಜ್ಯದಲ್ಲಿನ ವಿದ್ಯುತ್‌ ಸಮಸ್ಯೆ ಬಗ್ಗೆ ಮಾತ್ರ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್‌ ಅವರು ದೆಹಲಿಯಲ್ಲಿನ ಪಕ್ಷದ ನಾಯಕತ್ವವನ್ನು ಕಿರಣ್‌ ಬೇಡಿ ಅವರಿಗೆ ಬಿಟ್ಟುಕೊಟ್ಟಿದ್ದರಿಂದ ತಮಗಾಗಿರುವ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ.

ಭಾರತೀಯ ವೈದ್ಯಕೀಯ ಮಂಡಳಿಗೆ ತೊಂದರೆ ಕೊಟ್ಟ ಕಾರಣಕ್ಕೆ, ಆನಂತರ ಅವರನ್ನು ಆರೋಗ್ಯ ಖಾತೆಯಿಂದಲೂ ಅಗೌರವದಿಂದಲೇ ಹೊರ ಹಾಕಲಾಯಿತು.

ಮೋದಿ ಅವರ ಸರ್ಕಾರ ಸದ್ಯಕ್ಕೆ ವಿನಾಶದ ಅಂಚಿಗೆ ಏನೂ ತಲುಪಿಲ್ಲ. ಅಂತಹ ವಿಪತ್ತಿನಿಂದ ಸಾಕಷ್ಟು ದೂರವೂ ಇದೆ. ಸವಾಲಿನಿಂದ ಕೂಡಿರುವ ಜಾಗತಿಕ ಪರಿಸ್ಥಿತಿಯಲ್ಲಿ ದೇಶಿ ಆರ್ಥಿಕ ಬೆಳವಣಿಗೆಯು ಸದೃಢವಾಗಿದೆ. ಕಾಶ್ಮೀರದಲ್ಲಿನ ಪರಿಸ್ಥಿತಿ ಬಿಗಡಾಯಿಸುತ್ತಿದ್ದರೂ, ದೇಶದಲ್ಲಿನ ಒಟ್ಟಾರೆ ಸಾಮಾಜಿಕ ಸಾಮರಸ್ಯಕ್ಕೇನೂ ಧಕ್ಕೆ ಕಂಡು ಬಂದಿಲ್ಲ. 

ಆದರೆ, ಅಧಿಕಾರಕ್ಕೆ ಬರುವ ಮುಂಚೆ ಮೂಡಿಸಿದ್ದ ಆಶಾವಾದ ನಿಜ ಮಾಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆಯೇ ಎನ್ನುವ ಪ್ರಶ್ನೆಗೆ ಸಮಾಧಾನಕರ ಉತ್ತರ ಮಾತ್ರ ಸಿಗಲಾರದು.

ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶ ಮತ್ತು ಮುಬರುವ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಕೆಲ ಸಣ್ಣ ರಾಜ್ಯಗಳಲ್ಲಿ ಆಮ್‌ ಆದ್ಮಿ ಪಾರ್ಟಿಯ (ಎಎಪಿ) ಹೆಚ್ಚುತ್ತಿರುವ ಪ್ರಭಾವ ಗಮನಿಸಿದರೆ, ಮೋದಿ ಅವರ ಸರ್ಕಾರ ಅನೇಕ ವಿಷಯಗಳಲ್ಲಿ ಜನರಿಗೆ ಇದುವರೆಗೆ ಭ್ರಮನಿರಸನ ಉಂಟು ಮಾಡಿದೆ ಎಂದೇ ಹೇಳಬೇಕಾಗುತ್ತದೆ.

ಇದಕ್ಕೆಲ್ಲ ನರೇಂದ್ರ ಮೋದಿ ಅವರನ್ನಾಗಲಿ ಅಥವಾ ದೇಶದ ಹಣೆಬರಹವನ್ನಾಗಲಿ ದೂಷಿಸುವಂತಿಲ್ಲ. ಕೇಂದ್ರ ಸಚಿವ ಸಂಪುಟದಲ್ಲಿ ಮತ್ತು ಸರ್ಕಾರದ ಆಯಕಟ್ಟಿನ ಜಾಗದಲ್ಲಿ ಪ್ರತಿಭಾವಂತರಿಗೆ ಅವಕಾಶ ಇಲ್ಲದಿರುವುದೇ ಇದಕ್ಕೆಲ್ಲ ಕಾರಣವಾಗಿದೆ.

ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ವಿದ್ಯುತ್‌, ವಿತ್ತೀಯ ಶಿಸ್ತು ಮತ್ತು ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿ ಸುಧಾರಣೆಗೆ ಸಂಬಂಧಿಸಿದ ಬೆಳವಣಿಗೆಗಳನ್ನು ನೋಡಿದರೆ, ಈ ಮಹತ್ವದ ಖಾತೆಗಳನ್ನು ನಿಭಾಯಿಸುತ್ತಿರುವವರ ಪ್ರತಿಭೆಗೆ ಈ ವಲಯಗಳಲ್ಲಿನ ಸಾಧನೆಗಳನ್ನು ಒರೆಗಲ್ಲಿಗೆ ಹಚ್ಚಬಹುದು.

ಎರಡು ವರ್ಷಗಳ ಹಿಂದೆ ನರೇಂದ್ರ ಮೋದಿ ಅವರು ತಮ್ಮದೇ ಆದ ಸ್ವಂತ ಬಲ ಆಧರಿಸಿ ಸರ್ಕಾರ ರಚಿಸಿದಾಗ ಅವರು ಯಾವುದೇ ಮೈತ್ರಿಕೂಟದ ಒತ್ತಡದಿಂದ ಸಂಪೂರ್ಣವಾಗಿ ಮುಕ್ತರಾಗಿದ್ದರು. ಅವರು ತಮ್ಮ ಸಚಿವ ಸಂಪುಟಕ್ಕೆ ಪ್ರತಿಭಾನ್ವಿತರನ್ನೇ ಸೇರಿಸಿಕೊಳ್ಳಲು ಅವರಿಗೆ ಯಾವುದೇ ನಿರ್ಬಂಧಗಳೇ ಇದ್ದಿರಲಿಲ್ಲ.

ಸಂಪುಟ ಸದಸ್ಯರನ್ನಾಗಿ ಮತ್ತು ಉನ್ನತ ಅಧಿಕಾರಿಗಳನ್ನಾಗಿ ತಂತ್ರಜ್ಞಾನ ಪ್ರವೀಣರನ್ನು ನೇಮಿಸಿಕೊಳ್ಳಲು ಅವರ ಬಳಿ ರಾಜಕೀಯ ಅಧಿಕಾರ ಇತ್ತು. ವಿಶೇಷ ಉದ್ದೇಶಗಳನ್ನು ಕಾರ್ಯಗತಗೊಳಿಸಲು ಪರಿಣತರ ಪ್ರತ್ಯೇಕ ತಂಡ ರಚಿಸಲು ಮತ್ತು ಹಲವಾರು ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತರಲು ವಿವಿಧ ಕ್ಷೇತ್ರಗಳ ಪ್ರತಿಭಾಶಾಲಿಗಳ ಸೇವೆ ಪಡೆಯಬಹುದಾಗಿತ್ತು.

ವಿವಿಧ ಬಗೆಯ ಸೈದ್ಧಾಂತಿಕ ಹಿನ್ನೆಲೆಗೆ ಸೇರಿದ ದೇಶದ ಅನೇಕ ಪ್ರತಿಭಾನ್ವಿತರ ಸೇವೆ ಪಡೆಯಲು ಅವರಿಗೆ ಯಾವುದೇ ಅಡಚಣೆಯೂ ಇದ್ದಿರಲಿಲ್ಲ. ಆದರೆ, ಅವರು ಇಂತಹ ಆಲೋಚನೆಯನ್ನು ಕಾರ್ಯರೂಪಕ್ಕೆ ತರಲು ಇದುವರೆಗೂ ಮನಸ್ಸು ಮಾಡಿಲ್ಲ.

ರಾಜಕೀಯಕ್ಕೆ ಹೊರತಾದ ಪ್ರತಿಭಾನ್ವಿತರನ್ನು ಸರ್ಕಾರದಲ್ಲಿ ಸೇರ್ಪಡೆ ಮಾಡಿಕೊಳ್ಳಲು ಹಿಂದೇಟು ಹಾಕುವ ಪ್ರವೃತ್ತಿ ಮೊದಲಿನಿಂದಲೂ ಬಳಕೆಯಲ್ಲಿ ಇದೆ. ಆದರೆ, ಯುಪಿಎ–2 ಸರ್ಕಾರವು ತನ್ನೆಲ್ಲ ಗೊಂದಲಗಳ ಮಧ್ಯೆ, ಇನ್ಫೊಸಿಸ್‌ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾದ ನಂದನ್‌ ನಿಲೇಕಣಿ ಅವರಿಗೆ ‘ಆಧಾರ್’ ಜಾರಿಗೆ ತರುವ ಹೊಣೆ ಒಪ್ಪಿಸಿತ್ತು. ಈಗ ಮೋದಿ ಸರ್ಕಾರದ ಹಲವಾರು ಮುಂಚೂಣಿ ಯೋಜನೆಗಳಿಗೆ ‘ಆಧಾರ್‌’ ಪ್ರಮುಖ ಆಧಾರಸ್ತಂಭವಾಗಿದೆ.

ಮೋದಿ ಸರ್ಕಾರದಲ್ಲಿ ನಂದನ್‌ ನಿಲೇಕಣಿ ಅವರಂತಹವರು ಇರುವರೇ? ‘ಆಧಾರ್‌’ದಂತಹ ಕ್ರಾಂತಿಕಾರಿ ಹೊಸ ಆಲೋಚನೆಯನ್ನು ಏನಾದರೂ ಸರ್ಕಾರವು ಕಾರ್ಯಗತಗೊಳಿಸುತ್ತಿದೆಯೇ ಎನ್ನುವ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ಸಿಗುತ್ತಿಲ್ಲ.  ಇಂದಿರಾ ಗಾಂಧಿ ಅವರು ಕಾರ್ಪೊರೇಟ್‌ ಜಗತ್ತಿನ ಪ್ರತಿಭಾನ್ವಿತರನ್ನು ಕನಿಷ್ಠ ಗುರುತಿಸುವ ಕೆಲಸವನ್ನಾದರೂ ಮಾಡುತ್ತಿದ್ದರು. ಅವರ ಪ್ರತಿಭೆಯನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿದ್ದರೊ ಇಲ್ಲವೊ ಎನ್ನುವುದು ಬೇರೆ ಮಾತು.

ರಾಜೀವ್‌ ಗಾಂಧಿ ಅವರು ಸ್ಯಾಮ್‌ ಪಿತ್ರೋಡಾ ಅವರ ಸೇವೆ ಪಡೆದುಕೊಂಡು ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದರು. ಅಟಲ್‌ ಬಿಹಾರಿ ವಾಜಪೇಯಿ ಅವರು ಆರ್‌.ವಿ.ಶಾಹಿ ಅವರನ್ನು ಇಂಧನ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರು. ಶಾಹಿ ಅವರ ಸುಧಾರಣಾ ಕ್ರಮಗಳು ಈಗ ಫಲ ನೀಡುತ್ತಿವೆ.

ಅತಿ ಕಡಿಮೆ ಅವಧಿಗೆ ಪ್ರಧಾನಿಯಾಗಿದ್ದರೂ ಮತ್ತು ಹೆಚ್ಚಿನ ರಾಜಕೀಯ ಅಧಿಕಾರ ಹೊಂದಿರದಿದ್ದರೂ ವಿ.ಪಿ.ಸಿಂಗ್‌ ಅವರು, ನಮ್ಮ ರಕ್ಷಣಾ ಸಚಿವಾಲಯ ಮತ್ತು ಮೂರೂ ಸೇನಾಪಡೆಗಳ ಆಧುನೀಕರಣ ಉದ್ದೇಶಕ್ಕೆ ರಾಜೀವ್‌ ಗಾಂಧಿ ಅವರಿಂದ ಅರುಣ್‌ ಸಿಂಗ್‌ ಅವರನ್ನು ತಮ್ಮೆಡೆಗೆ ಸೆಳೆದುಕೊಳ್ಳುವಲ್ಲಿ ಸಫಲರಾಗಿದ್ದರು. ಅರುಣ್‌ ಸಿಂಗ್‌ ಅವರು ಸಿದ್ಧಪಡಿಸಿದ್ದ ವರದಿ ಈಗಲೂ ಪ್ರಸ್ತುತವಾಗಿದೆ.

ಆಯಕಟ್ಟಿನ ಸ್ಥಳಗಳಲ್ಲಿ ಬೇರುಬಿಟ್ಟಿರುವ ಅಧಿಕಾರಿಗಳು ಹೊರಗಿನ ಪ್ರತಿಭಾನ್ವಿತರನ್ನು  ಒಳಗೆ ಬಿಟ್ಟುಕೊಳ್ಳಲು ಅವಕಾಶ ನೀಡುವುದಿಲ್ಲ. ಆದರೆ, ನಿಜವಾದ ನಾಯಕನು ಇಂತಹ ಹೊರಗಿನವರನ್ನು ಕರೆತಂದು ಅವರು ಯಶಸ್ವಿಯಾಗುವಂತೆ ಮಾಡಬಲ್ಲ.

ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ರಘುರಾಂ ರಾಜನ್‌ ಅವರನ್ನು  ಉಳಿಸಿಕೊಳ್ಳಲು ಸಾಧ್ಯವಾಗದಿರುವುದನ್ನು ಈ ದೃಷ್ಟಿಕೋನದಿಂದಲೇ ವ್ಯವಸ್ಥೆಯ ವೈಫಲ್ಯ ಎಂದು ಪರಿಗಣಿಸಬೇಕು.

ಈ ಎಲ್ಲ ಸಂಗತಿಗಳಿಗೆ ಹೋಲಿಸಿ ಹೇಳುವುದಾದರೆ, ಪಿ.ವಿ.ನರಸಿಂಹರಾವ್‌ ಅವರು ಕಡಿಮೆ ಜನಪ್ರಿಯತೆಯ ಮತ್ತು ಅತ್ಯಂತ ದುರ್ಬಲ ಪ್ರಧಾನಿಯಾಗಿದ್ದರು.

ಅವರನ್ನು ಈಗ ಅಭಿಮಾನದಿಂದ ನೆನಪಿಸಿಕೊಳ್ಳುವಾಗ, ಪ್ರತಿಭಾನ್ವಿತರು ಎಲ್ಲಿದ್ದರೂ ಅವರನ್ನು ವಿಶಾಲ ಹೃದಯದಿಂದ ಸ್ವಾಗತಿಸುತ್ತಿದ್ದ ಅವರ ವಿಶೇಷ ಗುಣ ನೆನಪಾಗುತ್ತದೆ.  ಮನಮೋಹನ್‌ ಸಿಂಗ್ ಅವರನ್ನು ಗುರುತಿಸಿ, ಅವರನ್ನು ಹಣಕಾಸು ಸಚಿವರನ್ನಾಗಿ ಮಾಡಿದರು.

ಅವರ ಹಣಕಾಸು ಕಾರ್ಯದರ್ಶಿ ಮೊಂಟೆಕ್‌ ಸಿಂಗ್‌ ಅಹ್ಲುವಾಲಿಯ ಅವರೊಬ್ಬರು ಐಎಎಸ್‌ಯೇತರ ಆರ್ಥಿಕ ತಜ್ಞರಾಗಿದ್ದರು. ಪಿ.ಚಿದಂಬರಂ ಅವರನ್ನು ತಮ್ಮ ವಾಣಿಜ್ಯ ಸಚಿವರನ್ನಾಗಿ ನೇಮಿಸಿಕೊಂಡಿದ್ದರು. ರಾಜೇಶ್‌ ಪೈಲಟ್‌ ಅವರಿಗೆ ಎಸ್‌.ಬಿ.ಚವಾಣ್‌ ಅವರ ಕೈಕೆಳಗೆ ಆಂತರಿಕ ಭದ್ರತೆ ಹೊಣೆಗಾರಿಕೆಯನ್ನೂ ನೀಡಿದ್ದರು.

ಇವರೆಲ್ಲ ರಾಜೀವ್‌ ಗಾಂಧಿ ಅವರ ಕಟ್ಟಾ ಬೆಂಬಲಿಗರಾಗಿದ್ದರೂ ಅವರಲ್ಲಿ ‘ಪಿವಿಎನ್‌’ ವಿಶ್ವಾಸ ಇರಿಸಿ ಮಹತ್ವದ ಹೊಣೆ ಒಪ್ಪಿಸಿದ್ದರು. ಈ ಮೂಲಕ ಹೊಸ ಪರಂಪರೆ ಕಟ್ಟಿ ಬೆಳೆಸಿದರು. ಇದನ್ನು ಅವರಿಂದ ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ. ಅದೊಂದು ‘ಪಿವಿಎನ್‌’ ಅವರ ಕೌಶಲ ಮತ್ತು ಸಹಜ ಗುಣಧರ್ಮವಾಗಿತ್ತು. ಹೀಗಾಗಿ ಪಿ.ವಿ.ನರಸಿಂಹರಾವ್‌ ಅವರಿಂದ ನರೇಂದ್ರ ಮೋದಿ ಅವರು ಕಲಿಯುವುದು ಸಾಕಷ್ಟಿದೆ.

‘ಪಿವಿಎನ್‌’ಗೆ ಹೋಲಿಸಿದರೆ, ನರೇಂದ್ರ ಮೋದಿ ಅವರು ಹೆಚ್ಚು ಜಾಣ, ಜನಪ್ರಿಯ ಮತ್ತು ಅತಿದೊಡ್ಡ ನಾಯಕರಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ವಯಸ್ಸೂ ಅವರ ಪರವಾಗಿದೆ. ಅವರಲ್ಲಿ ಹೊಸ ಹೊಸ ಆಲೋಚನೆಗಳಿವೆ.

ಆದರೆ ಹೊಸ ಆಶಾವಾದ ಮೂಡಿಸುವ, ಭರವಸೆಗಳನ್ನು ಜಾರಿಗೆ ತರುವ ಸಮರ್ಥ ತಂಡವನ್ನು ಮಾತ್ರ ಅವರು ಹೊಂದಿಲ್ಲ. ಕಾಲ ಮಿಂಚುವ ಮೊದಲೇ ಅವರು ಕಾರ್ಯಪ್ರವೃತ್ತರಾಗದಿದ್ದರೆ, ಸಹನೆ ಕಳೆದುಕೊಂಡ, ಯಾವುದೇ ಸಿದ್ಧಾಂತಕ್ಕೆ ಕಟ್ಟುಬೀಳದ ಭಾರತದ ಮತದಾರ ಅವರನ್ನು ಕಠಿಣವಾಗಿ ಪ್ರಶ್ನಿಸುವುದನ್ನು ಆರಂಭಿಸಲಿದ್ದಾನೆ. 
(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT