ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಹಕ ನಗರ ಲಂಡನ್ ವಾಸದ ಅನುಭವಲೋಕ..

Last Updated 26 ಜುಲೈ 2012, 19:30 IST
ಅಕ್ಷರ ಗಾತ್ರ

ಜೂನ್ ತಿಂಗಳ ಕಡೆಯ ದಿನ ನಾಟ್‌ವೆಸ್ಟ್ ಬ್ಯಾಂಕ್‌ನ ಹತ್ತಿರದ ಶಾಖೆಗೆ ಹೋಗಿ 43 ಪೌಂಡ್‌ಗಳು ಹಾಗೂ 94 ಪೆನ್ಸ್ ಹಣ ಸಲ್ಲಿಸಿದೆ. ಅದು ವೆಸ್ಟ್‌ಮಿನ್‌ಸ್ಟರ್ ಸಿಟಿ ಕೌನ್ಸಿಲ್‌ಗೆ ನಾನು ಪಾವತಿಸಬೇಕಾಗಿದ್ದ ಹಣ. ಆ ಮೂಲಕ, ವಿಶ್ವದ ಅತ್ಯಂತ ಆಸಕ್ತಿದಾಯಕವಾದ ನಗರದ ಪ್ರಾಮಾಣಿಕ, ತೆರಿಗೆದಾರ ನಿವಾಸಿಯಾಗಿ ನನ್ನ ಒಂದು ವರ್ಷದ ಅವಧಿಯನ್ನು ಪೂರೈಸಿದ್ದೆ.

 ಈ  ನನ್ನ ಮಾತಿಗೆ ನ್ಯೂಯಾರ್ಕ್ ನಗರಿಗರು ಆಕ್ಷೇಪ ಎತ್ತಬಹುದು. ಆದರೆ `ಬಿಗ್ ಆ್ಯಪಲ್~(ನ್ಯೂಯಾರ್ಕ್ ನಗರ)ನ ಅನೇಕ ಆಕರ್ಷಣೆಗಳ ನಡುವೆಯೂ ಲಂಡನ್‌ದು ಈಗಲೂ ಒಂದು ಕೈ ಮೇಲು. ಲಂಡನ್‌ನ ವಾಸ್ತುಶಿಲ್ಪ ಹೆಚ್ಚು ಮಿಗಿಲಾದದ್ದು. ಇಲ್ಲಿನ ಕಟ್ಟಡಗಳು ಮನಮೋಹಕ. ಗಗನಚುಂಬಿಗಳು ಮಾತನಾಡದ ರೀತಿ ಅವು ನಿಮ್ಮ ಜತೆ ಮಾತನಾಡುತ್ತವೆ.

ಅರ್ಧಚಂದ್ರಾಕೃತಿಗಳು, ಚೌಕಗಳು ಒಂದು ಬಗೆಯ ವಿಲಕ್ಷಣ ಮೋಹಕತೆಯನ್ನು ನಗರಕ್ಕೆ ನೀಡುತ್ತವೆ. ಇಂತಹ ಮೋಹಕತೆ ಮ್ಯಾನ್‌ಹಟನ್‌ನ ನೇರ  ರೇಖೆಗಳಲ್ಲಿ ಬರುವುದಿಲ್ಲ. ಲಂಡನ್‌ನಲ್ಲಿ ಹಲವು ವಿಧದ ಪಾರ್ಕ್‌ಗಳಿವೆ. ಜೊತೆಗೆ ವಿವಿಧ ಆಕಾರ, ಗಾತ್ರಗಳ ನೀರಿನ ಚಿಲುಮೆಗಳಿವೆ.

ಅಷ್ಟೇ ಅಲ್ಲ, ನ್ಯೂಯಾರ್ಕ್‌ಗಿಂತ ಲಂಡನ್ ಹೆಚ್ಚು ವೈವಿಧ್ಯಪೂರ್ಣ ಹಾಗೂ ಸಮಗ್ರವಾದದ್ದು. ಅದರ ಬೀದಿಗಳು, ಸಬ್‌ವೇಗಳಲ್ಲಿ ಇಂಗ್ಲಿಷ್, ಫ್ರೆಂಚ್ (ಮತ್ತು  ಹೆಚ್ಚಾಗುತ್ತಿರುವ ಪೋಲಿಷ್) ಜೊತೆಗೇ ಅರೇಬಿಕ್ ಹಾಗೂ ಹಿಂದಿ ಭಾಷೆಗಳೂ ಒಟ್ಟಾಗಿ ಕಾಣಸಿಗುತ್ತವೆ.
 
ಇದಕ್ಕೆ ತದ್ವಿರುದ್ಧವಾಗಿ ನ್ಯೂಯಾರ್ಕ್ ಏಕಭಾಷೆಯ ಬೀಡು. (ಮೊದಲ ಪೀಳಿಗೆಯ ವಲಸಿಗರು ತಮ್ಮ ಮನೆಯಲ್ಲಿ ತಮ್ಮ ಭಾಷೆ ಮಾತನಾಡುತ್ತಾರೆ. ಆದರೆ ರಸ್ತೆಯಲ್ಲಿ ಕನಿಷ್ಠ ಬಹುತೇಕ  ಎಲ್ಲವೂ  ಇಂಗ್ಲಿಷ್).
 
ಸಾಮಾಜಿಕ ವರ್ಗ ಅಥವಾ  ವಸತಿ ಪ್ರದೇಶಗಳ ಅನುಸಾರವಾಗಿ ಕರಿಯರು, ಬಿಳಿಯರು ಹಾಗೂ ವಿವಿಧ ವರ್ಣೀಯರನ್ನು ಲಂಡನ್‌ನಲ್ಲಿ  ಹೆಚ್ಚು ಪ್ರತ್ಯೇಕಿಸಲಾಗುವುದಿಲ್ಲ. ಹೀಗಾಗಿಯೇ,  ಮ್ಯಾನ್‌ಹಟನ್‌ನ ಪಾರ್ಕುಗಳು, ರೆಸ್ಟೋರೆಂಟ್‌ಗಳಿಗಿಂತ, ಲಂಡನ್‌ನ ಪಾರ್ಕುಗಳು, ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಿನ ಸಮ್ಮಿಶ್ರ ಸಮುದಾಯಗಳವರು ಕಂಡು ಬರುತ್ತಾರೆ.

ಲಂಡನ್ ವಾಸಿಯಾಗಿ ಒಂದು ವರ್ಷ ಖುಷಿ ಅನುಭವಿಸಿರುತ್ತಿದ್ದುದಂತೂ ನಿಜ. ಆದರೆ ನಾನಿದ್ದ ಸ್ಥಳದ ಕಾರಣವಾಗಿ ಆ ಖುಷಿ ಮತ್ತಷ್ಟು ಇಮ್ಮಡಿಯಾಯಿತು. ಮೈದಾ ವೇಲ್‌ನಲ್ಲಿ ನಾನೊಂದು ಅಪಾರ್ಟ್‌ಮೆಂಟ್ ಬಾಡಿಗೆಗೆ ಹಿಡಿದಿದ್ದೆ. ಗಿಡಮರಗಳಿಂದ ಆವೃತವಾದ ಈ ಪ್ರದೇಶಕ್ಕೆ ಸುಂದರ ಕ್ರಿಕೆಟ್ ಮೈದಾನ ಲಾರ್ಡ್ಸ್‌ನಿಂದ ಒಂದಷ್ಟು ದೂರ ನಡೆಯಬೇಕು.
 
ಆದರೆ ರೀಜೆಂಟ್ ಪಾರ್ಕ್‌ನಿಂದ ಇನ್ನೊಂದಿಷ್ಟು ಹೆಚ್ಚು ದೂರ ನಡೆಯಬೇಕು. ನನ್ನೂರು ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗಗಳನ್ನೆಲ್ಲಾ ಕಾರುಗಳು ಆಕ್ರಮಿಸಿಕೊಂಡಿವೆ. ರಸ್ತೆಗಳಲ್ಲಿ ನಡೆಯುವುದು ಸಾಧ್ಯವಾಗದೆ `ಟ್ರೆಡ್‌ಮಿಲ್~ನಲ್ಲಿ ಕಸರತ್ತು ಮಾಡುವುದು ನನಗೆ ಅನಿವಾರ್ಯವಾಗಿದೆ.

ಇದಕ್ಕೆ ತದ್ವಿರುದ್ಧವಾಗಿ, ಕಳೆದ ವರ್ಷ ಪ್ರತಿದಿನ ಆಕಾಶ ಶುಭ್ರವಾಗಿದ್ದಾಗ ಲಾರ್ಡ್ಸ್‌ನಿಂದ ರೀಜೆಂಟ್ ಪಾರ್ಕ್‌ವರೆಗೆ, ನಂತರ ಕೆರೆಯ ಸುತ್ತ ಮೂರು ನಾಲ್ಕು ಸುತ್ತು ನಡೆದು ಮತ್ತೊಂದು ಅಷ್ಟೇ ಆಕರ್ಷಕವಾದ ಮಾರ್ಗದಿಂದ ಮನೆ ತಲುಪುತ್ತಿದ್ದೆ.
 
ಈ ವ್ಯಾಯಾಮಕ್ಕೆ ಒಂದು ಗಂಟೆ ಹಿಡಿಯುತ್ತಿತ್ತು. ಜೊತೆಗೆ ನನ್ನ ಐಪಾಡ್‌ನಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕೇಳುತ್ತಿದ್ದುದರಿಂದ ಈ ಸಂತಸ ಮತ್ತಷ್ಟು ಹೆಚ್ಚುತ್ತಿತ್ತು.

ನಾನಿದ್ದ ಪರಿಸರ ಹಾಗೂ ಕೆಲಸ ಮಾಡುತ್ತಿದ್ದ ಪರಿಸರದ ವಿಚಾರದಲ್ಲಿ ನಾನು ಅದೃಷ್ಟವಂತನಾಗಿದ್ದದ್ದು ಹೌದು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (ಎಲ್‌ಎಸ್‌ಇ)ನಲ್ಲಿ ನನ್ನದು ಉಪನ್ಯಾಸಕ ವೃತ್ತಿ.

ಪ್ರಾಚೀನತೆ ಹಾಗೂ ಶೈಕ್ಷಣಿಕ ಪ್ರತಿಷ್ಠೆಯ ವಿಚಾರದಲ್ಲಿ, ಎಲ್‌ಎಸ್‌ಇ ಯನ್ನು ಆಕ್ಸ್‌ಫರ್ಡ್, ಕೇಂಬ್ರಿಡ್ಜ್  ಮತ್ತು ಹಾರ್ವರ್ಡ್, ಯೇಲ್, ಪ್ರಿನ್ಸ್‌ಟನ್, ಕೊಲಂಬಿಯಾ, ಸ್ಟಾನ್‌ಫರ್ಡ್, ಎಂಐಟಿ ಯಂತಹ ದೊಡ್ಡ ಅಮೆರಿಕನ್ ವಿಶ್ವವಿದ್ಯಾಲಯಗಳಿಗಿಂತ ಒಂದಿಷ್ಟು ಕಡಿಮೆ ಭಾವದಲ್ಲಿ ನೋಡಲಾಗುತ್ತದೆ.

ಆದರೆ ಈ ಎಲ್‌ಎಸ್‌ಇ ಗೆ ಇತರ ಕಲಿಕೆಯ ಕೇಂದ್ರಗಳಿಗಿರುವುದಕ್ಕಿಂತ ಹೆಚ್ಚಿನ ಒಂದು ಅಳೆಯಲಾಗದ ಅನುಕೂಲವಿದೆ. ಇದಿರುವುದು  ವಿಶ್ವದ ಕೇಂದ್ರಭಾಗದಲ್ಲಿರುವ ನಗರದಲ್ಲಿ.

ಹೀಗಾಗಿ, ಏಷ್ಯಾ, ಆಫ್ರಿಕಾ, ಉತ್ತರ - ದಕ್ಷಿಣ ಅಮೆರಿಕ ಮತ್ತು ಯೂರೋಪ್ ಖಂಡದ ವಿವಿಧ ರಾಷ್ಟ್ರಗಳ ವಿದ್ವಾಂಸರು ನಿಯಮಿತವಾಗಿ ಇಲ್ಲಿಗೆ ಭೇಟಿ ನೀಡುತ್ತಾರೆ. ಇದಿರುವ ಸ್ಥಳದ ಆಕರ್ಷಣೆ ಎಂತಹದ್ದೆಂದರೆ ಬ್ರೆಜಿಲ್‌ಗೆ ಹೋಗ ಬಯಸುವ ಮೊಜಾಂಬಿಕ್‌ನ ಇತಿಹಾಸಕಾರ ಲಂಡನ್ ಮೂಲಕ ತನ್ನ ಪ್ರಯಾಣ ಮಾರ್ಗವನ್ನು ಯೋಜಿಸಿಕೊಳ್ಳುವುದು ಸಾಮಾನ್ಯ ಸಂಗತಿ.
 
ಅದೇ ರೀತಿ, ಸ್ಯಾನ್‌ಫ್ರಾನ್ಸಿಸ್ಕೊಗೆ ಹೋಗುತ್ತಿರುವ ಭಾರತೀಯ ಸಮಾಜವಿಜ್ಞಾನಿ ಅಥವಾ ಕಾಂಗೊ ಅಧ್ಯಯನ ಮಾಡುತ್ತಿರುವ ಅಮೆರಿಕನ್ ರಾಜಕೀಯ ವಿಜ್ಞಾನಿಗೂ ಇದು ಆಕರ್ಷಣೆಯ ಕೇಂದ್ರ.

 ಈ ಆಯಕಟ್ಟಿನ ಸ್ಥಳವನ್ನು ಚೆನ್ನಾಗಿ ಬಳಸಿಕೊಳ್ಳುವ ಎಲ್‌ಎಸ್‌ಇ, ವಿಶ್ವದಲ್ಲಿರುವ ಇನ್ಯಾವುದೇ ಸಂಸ್ಥೆಗಿಂತ ಹೆಚ್ಚಾಗಿ ಅತಿ ಪರಿಣಾಮಕಾರಿಯಾದ ಸಾರ್ವಜನಿಕ  ಉಪನ್ಯಾಸ ಮಾಲಿಕೆಗಳನ್ನು ಪ್ರಸ್ತುತಪಡಿಸುತ್ತದೆ.

ವಿಭಾಗಾವಾರು  ವಿಚಾರಗೋಷ್ಠಿಗಳು ಅಥವಾ ಕೆಲವೊಮ್ಮೆ ಇನ್ನೂ ವಿಸ್ತೃತ ಶ್ರೋತೃಗಳಿಗಾಗಿ ಇತರ ವಿಶ್ವವಿದ್ಯಾಲಯಗಳಿಂದ ಬರುವ ಪರಿಣತರಿಂದ ನಡೆಸಲಾಗುವ ಉಪನ್ಯಾಸ ಕಾರ್ಯಕ್ರಮಗಳು ಹಾರ್ವರ್ಡ್ ಅಥವಾ ಕೊಲಂಬಿಯಾಗಳಲ್ಲಿ ಕಾಣಸಿಗಬಹುದು.
 
ಆದರೆ ಎಲ್‌ಎಸ್‌ಇ ಯಲ್ಲಿ, ಪ್ರತಿದಿನ ನಾಲ್ಕು ವಿವಿಧ ಸಾರ್ವಜನಿಕ ಉಪನ್ಯಾಸ ಕಾರ್ಯಕ್ರಮಗಳಿರುತ್ತವೆ. ಇದರಿಂದ ವಿದ್ಯಾರ್ಥಿ, ಪ್ರೊಫೆಸರ್ ಅಥವಾ ಯಾವುದೇ ಆಸಕ್ತ ಖಾಸಗಿ ವ್ಯಕ್ತಿಗಳಿಗೆ ಯಾವ ಕಾರ್ಯಕ್ರಮ ಆಯ್ಕೆ ಮಾಡಿಕೊಳ್ಳಬೇಕೆಂದು ಗೊಂದಲವೇ ಉಂಟಾಗುತ್ತದೆ.
 
ಒಂದೇ ದಿನ ಒಂದೇ ಸಮಯದಲ್ಲಿ ಪಾಲ್ ಕ್ರಗ್‌ಮನ್ ಉಪನ್ಯಾಸ ಷೇಕ್ ಜಾಯೇದ್ ಥಿಯೇಟರ್‌ನಲ್ಲಿ, ನೆಲ್ಸನ್ ಮಂಡೇಲಾರ ಒಡನಾಡಿ ವಕೀಲರ ಉಪನ್ಯಾಸ ಓಲ್ಡ್ ಥಿಯೇಟರ್‌ನಲ್ಲಿ ಅಥವಾ ಈಜಿಪ್ಟ್ ಕುರಿತ ವಿಷಯತಜ್ಞರ ಉಪನ್ಯಾಸ ಹಾಂಕಾಂಗ್ ಥಿಯೇಟರ್‌ನಲ್ಲಿ ಇರುವ ಅವಕಾಶಗಳಿರುತ್ತವೆ.

ಬೌದ್ಧಿಕ ಬದುಕಿನ ಚೈತನ್ಯಕ್ಕಿಂತ ಹೆಚ್ಚಾಗಿ ಪ್ರಶಾಂತವಾದ, ಏಳುಬೀಳುಗಳಿಲ್ಲದ ಬೆಂಗಳೂರಿನಲ್ಲಿ ಬದುಕುವ ನನಗೆ ಸಿಕ್ಕ ಈ ತಾತ್ಕಾಲಿಕವಾದ ಒಳ್ಳೆಯ ಅದೃಷ್ಟವನ್ನು ಚೆನ್ನಾಗಿಯೇ ಬಳಸಿಕೊಂಡೆ. ಒಂದು ದಶಕ ಅಷ್ಟೇಕೆ ಅನೇಕ ದಶಕಗಳ್ಲ್ಲಲಿ ನನ್ನೂರಿನಲ್ಲಿ ಕೇಳಲು ಸಾಧ್ಯವಿರದಿದ್ದ  ಬಹಳಷ್ಟು ಒಳ್ಳೆಯ ಉಪನ್ಯಾಸಗಳನ್ನು ಕೇಳಿದೆ. `ಅರಬ್ ವಸಂತ~ ಕುರಿತಂತೆ ಅನೇಕ ಉತ್ಕೃಷ್ಟ ಉಪನ್ಯಾಸಗಳನ್ನು ಕೇಳಿಸಿಕೊಂಡು ಜ್ಞಾನ ಸಂಪಾದನೆ ಮಾಡಿದೆ.
 
ಲ್ಯಾಟಿನ್ ಅಮೆರಿಕನ್ ರಾಜಕಾರಣ ಕುರಿತಂತೆ ಪರಿಣತ ತಂಡದ ಉಪನ್ಯಾಸಗಳಿಗೆ ಹಾಜರಾಗುವ ಅವಕಾಶ ಸಿಕ್ಕಿತ್ತು.  ಫ್ರೆಡ್ರಿಚ್ ಹಾಯೆಕ್ ಹಾಗೂ ಜಾಣ್ ಮಯನಾರ್ಡ್ ಕೆಯ್ನಸ್ ಅವರ ಆರ್ಥಿಕ ಸಿದ್ಧಾಂತಗಳ ಕುರಿತಂತೆ ಪಾಂಡಿತ್ಯಪೂರ್ಣ (ಚಮತ್ಕಾರೋಕ್ತಿಗಳ) ಪರಾಮರ್ಶೆಗಳ ಉಪನ್ಯಾಸಗಳನ್ನು ಕೇಳಿಸಿಕೊಳ್ಳುವ ಅವಕಾಶ ನನ್ನದಾಗಿತ್ತು.

ಲಂಡನ್ ಅಂತರರಾಷ್ಟ್ರೀಯ ನಗರ. ಹಾಗೆಯೇ ಅದು ಬಹಳಕಾಲದಿಂದ ಭಾರತೀಯ ನಗರವೂ ಹೌದು. 17 ಹಾಗೂ 18ನೇ ಶತಮಾನಗಳಲ್ಲಿ ಲಂಡನ್‌ನಲ್ಲಿ ಬದುಕಿದ ಮೊದಲ `ದೇಸಿ~ಗಳು ನಾವಿಕರು, ಸಿಪಾಯಿಗಳು ಹಾಗೂ ಮನೆಗೆಲಸದವರು.

ನಂತರದವರು ಮಹಾರಾಜರು, ನವಾಬರು. 19ನೇ ಶತಮಾನದ ನಂತರ ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ಲಂಡನ್‌ಅನ್ನು ತಮ್ಮ ನಗರವಾಗಿಸಿಕೊಂಡಿದ್ದಾರೆ.
ಲಂಡನ್ ಎಂದರೆ  ಆಧುನಿಕ ಭಾರತದ ಇತಿಹಾಸಕಾರನಿಗೆ ವಿಶೇಷ ಮಹತ್ವ.
 
ಏಕೆಂದರೆ  ಅದರ ಬೀದಿಗಳು, ಮನೆಗಳಲ್ಲಿ ಹಾದುಹೋದ ಅಸಾಧಾರಣ ಭಾರತೀಯರು ಅಲ್ಲಿ ಉಳಿಸಿದ ಹೆಜ್ಜೆಗುರುತುಗಳು ಇವೆ. ರಾಮಮೋಹನ ರಾಯ್ ಹಾಗೂ ರವೀಂದ್ರನಾಥ ಟ್ಯಾಗೋರ್‌ರು ಈ ನಗರದಲ್ಲಿ ಬಹಳ ಸಮಯ ಕಳೆದಿದ್ದಾರೆ.

ಭಾರತೀಯ ರಾಷ್ಟ್ರೀಯವಾದದ ಅತ್ಯಂತ ಹಿರಿಯ ವ್ಯಕ್ತಿ ದಾದಾಭಾಯಿ ನವರೋಜಿ ಇಲ್ಲಿ ಅನೇಕ ದಶಕಗಳು ಬದುಕಿದ್ದರು. ಆ ಸಂದರ್ಭದಲ್ಲಿ ಲಂಡನ್‌ನ ಫಿನ್ಸ್‌ಬರಿಯಿಂದ ಸಂಸತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ನಾನು ಅಧ್ಯಾಪನ ಮಾಡುತ್ತಿದ್ದ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ  ನಮ್ಮ ಅನೇಕ ಮಹಾನುಭಾವರುಗಳು ವಿದ್ಯಾರ್ಥಿಗಳಾಗ್ದ್ದಿದ್ದವರು.
 
ವಿ.ಕೆ. ಕೃಷ್ಣ ಮೆನನ್, ಕೆ.ಆರ್.ನಾರಾಯಣನ್ ಹಾಗೂ ಬಿ.ಆರ್. ಅಂಬೇಡ್ಕರ್ - ಒಂದಿಷ್ಟು ಉದಾಹರಣೆಗಳು.  ಎಲ್‌ಎಸ್‌ಇಗೆ ಉತ್ತರ ಭಾಗದಲ್ಲಿ ಒಂದಾನೊಂದು ಕಾಲದಲ್ಲಿ ಸಸ್ಯಾಹಾರಿ ರೆಸ್ಟೊರೆಂಟ್ ಇತ್ತು. ಅಲ್ಲಿಗೆ ಯುವ ಎಂ.ಕೆ. ಗಾಂಧಿ ನಿಯಮಿತವಾಗಿ ಭೇಟಿ ನೀಡುತ್ತಿದ್ದರು. 

ಬ್ಯಾರಿಸ್ಟರ್ ಆಗಿ ಗಾಂಧೀಜಿ ತರಬೇತಿ ಪಡೆದಂತಹ  `ಇನ್ನರ್  ಟೆಂಪಲ್~ ಎಲ್‌ಎಸ್‌ಇ ಯ ಆಗ್ನೇಯ ಭಾಗದಲ್ಲಿದೆ. ನಂತರ ವಿದ್ಯಾರ್ಥಿಯಾಗಿ ಪರಿಚಿತವಾಗಿದ್ದ ಈ ನಗರಕ್ಕೆ 1906, 1909 ಹಾಗೂ 1914ರಲ್ಲಿ ದಕ್ಷಿಣ ಆಫ್ರಿಕಾದಿಂದ  ಗಾಂಧಿ ಬಂದುಹೋಗಿದ್ದರು. ಭಾರತದ ಸ್ವಾತಂತ್ರ್ಯದ ಪರ ವಾದಿಸುವುದಕ್ಕಾಗಿ ಕಡೆಯ ಬಾರಿಗೆ ಅವರು ಲಂಡನ್‌ಗೆ ಭೇಟಿ ನೀಡಿದ್ದು 1931ರಲ್ಲಿ.

ಈ ಎಲ್ಲಾ ಭೇಟಿಗಳ ಸಂದರ್ಭಗಳಲ್ಲಿ ಗಾಂಧಿಯವರು ಲಂಡನ್‌ನಲ್ಲಿ ಅನೇಕ ತಿಂಗಳುಗಳು ಕಳೆದರು. ಬಹಳಷ್ಟು ನಡೆದಾಡಿದರು. ಬಹಳಷ್ಟು ಭಾಷಣಗಳನ್ನೂ ಮಾಡಿದರು. ಈ ನಗರಕ್ಕೆ ಅವರು ಆಳವಾಗಿ ಅಂಟಿಕೊಂಡಿದ್ದರು. ಅನೇಕ ಸ್ನೇಹಿತರನ್ನೂ ಹೊಂದಿದ್ದರು.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಅಂತಿಮವಾಗಿ `ಭಾರತ ಬಿಟ್ಟು ತೊಲಗಿ~ (ಕ್ವಿಟ್ ಇಂಡಿಯಾ) ಚಳವಳಿ ನಡೆಸಲು ಸಿದ್ಧತೆ  ನಡೆಸುತ್ತಿರುವಂತೆಯೇ, ಹಿಟ್ಲರನ ಲುಫ್ತ್‌ವಾಫ(ಜರ್ಮನ್ ಸಶಸ್ತ್ರ ಪಡೆಯ ವೈಮಾನಿಕ ಪಡೆ)ದಿಂದ ವೆಸ್ಟ್ ಮಿನ್‌ಸ್ಟರ್ ಅಬ್ಬಿ  ಹಾಗೂ ಹೌಸ್ ಆಫ್ ಪಾರ್ಲಿಮೆಂಟ್  ಹಾನಿಗೀಡಾಗಬಹುದು ಅಥವಾ ನಾಶವಾಗಬಹುದು ಎಂಬ ಭೀತಿಯಿಂದ  ಅವರು ಅತ್ತಿದ್ದರು.

ಎಲ್‌ಎಸ್‌ಇ ಯಲ್ಲಿ ನನ್ನ ಕಚೇರಿ ಕೊಲಂಬಿಯಾ ಹೌಸ್‌ನಲ್ಲಿತ್ತು. `ಆಲ್ಡ್‌ವಿಚ್~ ಎಂದು ಕರೆಯಲಾಗುವ ಕರ್ವಿಂಗ್ ರೋಡ್‌ನ ಉತ್ತರ ಭಾಗಕ್ಕೆ ಇದು ಇದೆ.  ರಸ್ತೆಯ ಮತ್ತೊಂದು ಬದಿಯಲ್ಲಿ `ಇಂಡಿಯಾ ಹೌಸ್~ ಇದೆ. ಇದು ಬ್ರಿಟನ್‌ನಲ್ಲಿರುವ ನಮ್ಮ ಹೈಕಮಿಷನ್ ಕಚೇರಿ. 

ಕಳೆದ ಗಣರಾಜ್ಯೋತ್ಸವ ದಿನ ಜನವರಿ 26ರಂದು ಕೃಷ್ಣ ಮೆನನ್ ಹುಟ್ಟುಹಾಕಿದರೆಂದು ಹೇಳಲಾಗುವ `ಇಂಡಿಯಾ ಕ್ಲಬ್~ನಲ್ಲಿ ನಾನು ನನ್ನ ಸ್ನೇಹಿತರೊಬ್ಬರನ್ನು  ಮಧ್ಯಾಹ್ನದ ಊಟದ ವೇಳೆ ಭೇಟಿಯಾಗಬೇಕಿತ್ತು. 1930 ಹಾಗೂ 1940ರ ದಶಕಗಳಲ್ಲಿ ಮೆನನ್ ಅವರು ಇಲ್ಲಿ ಸಾಕಷ್ಟು ಸಮಯ ಕಳೆದಿದ್ದೂ ನಿಜವೆ.  ಈ ಕ್ಲಬ್‌ಗೆ ಹೋಗಲು ನಾನು `ಇಂಡಿಯಾ ಹೌಸ್~ಅನ್ನು ಹಾದುಹೋಗಬೇಕಿತ್ತು.
 
ಅಲ್ಲಿ ಹಿರಿಯ, ಗಡ್ಡಧಾರಿ ಪ್ರದರ್ಶಕರ ಚಿಕ್ಕ ಗುಂಪೊಂದು ಘೋಷಣೆಗಳನ್ನು ಕೂಗುತ್ತಿತ್ತು. `ಯಾರು ಅತಿ ದೊಡ್ಡ ಭಯೋತ್ಪಾದಕ? ಭಾರತ!~, `ಭಾರತೀಯ ಆಕ್ರಮಣಾ ಪಡೆಗಳೇ - ಕಾಶ್ಮೀರ ಬಿಟ್ಟು ತೊಲಗಿ~ ಎಂಬಂತಹ ಘೋಷಣೆಗಳು ಅಲ್ಲಿ ಕೇಳಿ ಬರುತ್ತಿದ್ದವು.

ಈ ವಲಸಿಗ ರಾಷ್ಟ್ರೀಯವಾದಿಗಳನ್ನು ಹಾದುಹೋಗುತ್ತಿದ್ದಂತೆಯೇ, ಛಾಯಾಚಿತ್ರಗಳನ್ನು ತೆಗೆಯುತ್ತಿದ್ದ ಯುವಕನೊಬ್ಬನನ್ನು ನೋಡಿದೆ. ಅಂತರ್ಜಾಲಕ್ಕೆ ಅಪ್‌ಲೋಡ್ ಆಗುವುದು ಅಥವಾ ಮಾಧ್ಯಮಗಳಿಗೆ ಈ ಚಿತ್ರಗಳು ತಲುಪುವುದು ಖಚಿತ ಎಂಬುದರಲ್ಲಿ ಎರಡು ಮಾತಿರಲಿಲ್ಲ. ನಾನು ತಕ್ಷಣವೇ ಪ್ರತಿಭಟನಾಕಾರರಿಂದ ದೂರ ಸರಿದು  ಇಕ್ಕಟ್ಟಾದ ಓಣಿಯ ಕಡೆಗೆ ತಿರುಗಿ ನಾನು ಹೋಗಬೇಕಾದ ಸ್ಥಳದತ್ತ ಹೆಜ್ಜೆ ಇಡತೊಡಗಿದೆ.

ಅಲ್ಲಿ ಜವಾಹರಲಾಲ್ ನೆಹರೂ ಅವರ ಎದೆ ಮಟ್ಟದ ಪುತ್ಥಳಿಯನ್ನು ಇತ್ತೀಚೆಗಷ್ಟೇ ಮರು ಪ್ರತಿಷ್ಠಾಪಿಸಲಾಗಿತ್ತು. ಶ್ರೀಲಂಕಾದಲ್ಲಿ ಭಾರತದ ಪಾತ್ರವನ್ನು ಪ್ರತಿಭಟಿಸಿ ಶ್ರೀಲಂಕಾದ ತಮಿಳರ ಗುಂಪೊಂದು ಈ ಹಿಂದೆ ಈ ಪುತ್ಥಳಿಗೆ ಹಾನಿ ಮಾಡಿತ್ತು. ಒಟ್ಟಾರೆ ಇದೊಂದು ಪರಿಪೂರ್ಣ `ಲಂಡನ್ ಅನುಭವ~.

  ಅಲ್ಲಿ ತಾತ್ಕಾಲಿಕವಾಗಿ ಮುತ್ತಿಗೆಗೊಳಗಾಗಿದ್ದ  ಭಾರತದ ಹೈಕಮಿಷನ್ ಕಚೇರಿಯ ಮತ್ತೊಂದು ಬದಿಯಲ್ಲಿ  ಎದ್ದು ಕಾಣುತ್ತಿದ್ದದ್ದು  `ನೆಹರೂ~ ಪ್ರತಿಮೆ. ಕುತೂಹಲದ ಸಂಗತಿ ಎಂದರೆ (ಹೃದಯಸ್ಪರ್ಶಿಯೂ ಹೌದು)ನೆಹರೂ ಅವರೂ ಕಾಶ್ಮೀರಿ ಮೂಲದವರೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT