ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಢ್ಯಕ್ಕೆ ಮದ್ದು– ನಿಜಗುಣಾನಂದ ಸ್ವಾಮೀಜಿ ‘ಸತ್ಯ ದರ್ಶನ’

Last Updated 16 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಸಮಾಜದಲ್ಲಿ ಎಲ್ಲೆಲ್ಲೂ ಮೌಢ್ಯ, ಅಂಧ­ಶ್ರದ್ಧೆಯೇ ತುಂಬಿಕೊಂಡಿದ್ದು ಭಯದ ವಾತಾವ­ರಣದಲ್ಲಿ ಜನ ಕಾಲ ನೂಕುವಂತಾಗಿದೆ. ಮೌಢ್ಯ ವಿರೋಧಿ ಕಾಯ್ದೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಅನೇಕ ಮಠಾ­ಧೀಶರು ಒತ್ತಡ ಹೇರಿದ್ದಾರೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಆ ಮಠಾಧೀಶರು ಪ್ರತಿಭಟನೆ ನಡೆಸಲೂ ಸಜ್ಜಾಗಿದ್ದಾರೆ.

ಬೆಳಿಗ್ಗೆ ಎದ್ದರೆ ದೃಶ್ಯ ಮಾಧ್ಯಮಗಳಲ್ಲಿ ಕಾಣಿಸಿ­ಕೊಳ್ಳುವ ಜ್ಯೋತಿಷಿಗಳು ಜನರಿಗೆ ‘ಆ ದೋಷ, ಈ ದೋಷ’ ಎಂದು ಅವುಗಳನ್ನು ನಿವಾರಿಸಿಕೊಳ್ಳಲು ನಾನಾ ಬಗೆಯ ಪೂಜೆಗಳನ್ನು ಮಾಡಿಸುವಂತೆ ಸಲಹೆ  ನೀಡುತ್ತಾರೆ. ಜನರ ಮನಸ್ಸಿನಲ್ಲಿ ಭಯ ಎಷ್ಟು ಆವರಿಸಿ­ಕೊಂಡಿದೆ ಎಂದರೆ ಆ ಜ್ಯೋತಿಷಿಗಳ ಮಾತಿಗೆ ಹೆದರಿ, ಶಾಂತಿ–ನೆಮ್ಮದಿಗಾಗಿ ಅವರು ಹೇಳುವ ಹವನ–ಹೋಮ, ಅಭಿಷೇಕಕ್ಕಾಗಿ ಸಹಸ್ರಾರು ರೂಪಾಯಿ ವ್ಯಯಿಸುತ್ತಿದ್ದಾರೆ.

ಆದರೆ ಇಂತಹ ಈ ಕಂದಾಚಾರಗಳನ್ನು ವಿರೋಧಿ­ಸುವ ಸ್ವಾಮೀಜಿಯೊಬ್ಬರು ಬೆಳಗಾವಿ ಜಿಲ್ಲೆಯಲ್ಲಿ ಇದ್ದಾರೆ. ‘ಇಂತಹ ಹವನ–ಹೋಮ, ಪೂಜೆ–ಪುನಸ್ಕಾರಗಳಿಂದ ಯಾವುದೇ ಪ್ರಯೋಜನವಿಲ್ಲ. ಅರ್ಚನೆ, ಅಭಿಷೇಕ–ಪಾದಪೂಜೆ ಯಾವುದನ್ನೂ ಮಾಡಬೇಡಿ. ಕಷ್ಟಪಟ್ಟು ದುಡಿದು ಗಳಿಸಿದ ಹಣವನ್ನು ಅನ್ನ, ಅರಿವೆ, ಆಶ್ರಯ, ಅರಿವು, ಆಸೆಗಳನ್ನು ಪೂರೈಸಿ­ಕೊಳ್ಳಲು ಸದ್ವಿನಿಯೋಗ ಮಾಡಿಕೊಳ್ಳಿ. ಕಂದಾಚಾರ­ಗಳನ್ನು ಬಿಡಿ. ಮೌಢ್ಯದಿಂದ ದೂರವಿರಿ’ ಎಂದು ಖಡಾಖಂಡಿತವಾಗಿ ಹೇಳುವ ಮೂಲಕ, ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ಸಮೀಪ­ವಿರುವ ಬೈಲೂರು ಗ್ರಾಮದಲ್ಲಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಈ ಭಾಗದಲ್ಲಿ ‘ಬುಲೆಟ್‌ ಸ್ವಾಮೀಜಿ’ ಎಂದೇ ಮನೆ ಮಾತಾಗಿದ್ದಾರೆ.

ಅವರ ಪ್ರವಚನಗಳನ್ನು ಆಲಿಸಲು ಬರೀ ಲಿಂಗಾ­ಯತರು ಮಾತ್ರವಲ್ಲ, ಹಿಂದುಳಿದ ವರ್ಗದವರು, ದಲಿತರು, ಮುಸ್ಲಿಮರೂ ಬರುತ್ತಾರೆ. ಇದೀಗ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಸ್ವಾಮೀಜಿಯವರ ಪ್ರವಚನ ನಡೆಯುತ್ತಿದೆ. ದಿನಾಲೂ ಸಂಜೆ, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ನೆರೆದು ಪ್ರಖರ ವಿಚಾರ­ವಾದಿಯ ಪ್ರವಚನವನ್ನು ಶ್ರದ್ಧೆಯಿಂದ ಆಲಿಸುತ್ತಾರೆ. ಜನರಲ್ಲಿರುವ ಹೆದರಿಕೆಯನ್ನು ಬಂಡವಾಳ­ವನ್ನಾಗಿಸಿ­­ಕೊಂಡಿರುವ ಕೆಲ ಸಂಪ್ರದಾಯವಾದಿಗಳು ಜನರಲ್ಲಿ ಇನ್ನಷ್ಟು ಭೀತಿ ತುಂಬಿ, ಧರ್ಮವನ್ನು ಅವರ ಮೇಲೆ ಹೇರುತ್ತಿದ್ದಾರೆ.

ಇದರಿಂದ ಹೊರಬರಲು ಕೇವಲ ಬಸವ ತತ್ವದಿಂದ ಮಾತ್ರ ಸಾಧ್ಯ ಎಂಬುದನ್ನು ಎಸ್ಸೆಸ್ಸೆಲ್ಸಿ ಓದುತ್ತಿದ್ದಾಗ ಗ್ರಹಿಸಿದ ಅವರು ಆಗಲೇ ಮನೆಯನ್ನು ತೊರೆದರು. ಆನಂತರ ಲಿಂಗಾನಂದ ಸ್ವಾಮೀಜಿಯ ಶಿಷ್ಯರಾಗುವ ಮೂಲಕ ನಿಜಗುಣಾ­ನಂದ ಸ್ವಾಮೀಜಿ, ‘ಸತ್ಯ ದರ್ಶನ’ ಹೆಸರಿನಲ್ಲಿ ಜನರನ್ನು ವೈಚಾರಿಕವಾಗಿ ಬಡಿದೆಬ್ಬಿಸುವ ಕಾಯಕದಲ್ಲಿ ತೊಡಗಿ­ದ್ದಾರೆ. ಅನೇಕ ಧಾರ್ಮಿಕ ಮುಖಂಡರು ಧರ್ಮ ಪ್ರಸಾರಕ್ಕೆ ಸಾಂಪ್ರದಾಯಿಕ ಮಾರ್ಗ ಅನುಸರಿಸು­ತ್ತಾರೆ. ನಿತ್ಯವೂ ಪೂಜೆ–ಪುನಸ್ಕಾರ, ಹೋಮ–ಹವನ ನಡೆಸುವುದನ್ನು ರೂಢಿಸಿಕೊಂಡಿದ್ದಾರೆ. ಭಕ್ತರಿಂದ ಪಾದಪೂಜೆ ಮಾಡಿಸಿಕೊಳ್ಳುತ್ತಾರೆ.

ನಿಜಗುಣಾನಂದ ಸ್ವಾಮೀಜಿ ಇದಕ್ಕೆಲ್ಲಾ ವಿರುದ್ಧ. ಪಾದಪೂಜೆ ಎಂದರೆ ಅವರು ಅತ್ತ ತಿರುಗಿಯೂ ನೋಡುವುದಿಲ್ಲ. ಪಾದ­ಪೂಜೆ ಸಲ್ಲದು ಎಂಬುದು ಅವರ ವಾದ. ಪಾದ ತೊಳೆದ ನೀರನ್ನು ಕುಡಿ­ಯಬಾರದು ಎಂದೂ ಅವರು ತಿಳಿವಳಿಕೆ ಹೇಳುತ್ತಾರೆ. ಅಸ್ಪೃಶ್ಯತೆ ನಿವಾರಣೆ, ಸಮಾನತೆ, ಶೌಚಾಲಯ ನಿರ್ಮಾಣ, ನೈರ್ಮಲ್ಯ ಕಾಯ್ದುಕೊಳ್ಳುವುದು, ಇಳಿವಯಸ್ಸಿನ ತಂದೆ–ತಾಯಂದಿರನ್ನು ಪೋಷಿಸು-­ವುದು ಮಕ್ಕಳ ಜವಾಬ್ದಾರಿ. ಮಕ್ಕಳಿರುವ ವೃದ್ಧ ಪೋಷಕರು ವೃದ್ಧಾಶ್ರಮ ಸೇರುವಂತಹ ವ್ಯವಸ್ಥೆ ಸಲ್ಲದು. ಅನಾಥರಿಗೆ ಮಾತ್ರ ವೃದ್ಧಾಶ್ರಮಗಳಿರಬೇಕು ಎಂದು ಬೋಧಿಸುತ್ತಾರೆ. ಅವರ ಈ ರೀತಿಯ ಬೋಧನೆ ಯುವ ಜನಾಂಗವನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಹಾಗಾಗಿಯೇ, ಅವರ ಪ್ರವಚನಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ.

ನಿಜಗುಣಾನಂದ ಸ್ವಾಮೀಜಿ ಅವರು ಕೇವಲ ಧರ್ಮ ಪ್ರಸಾರ ಮಾಡುತ್ತಿಲ್ಲ. ಜತೆಗೆ ತಾವು ಅದನ್ನೇ ಜೀವನದಲ್ಲಿ ಅಳವಡಿಸಿಕೊಂಡು ಬಾಳುತ್ತಿದ್ದಾರೆ. ಎಷ್ಟೋ ಮಂದಿ ಧಾರ್ಮಿಕ ಮುಖಂಡರು ಹೇಳು­ವುದು ಒಂದು, ಮಾಡುವುದು ಇನ್ನೊಂದು ಎಂಬಂತೆ ಬದುಕುತ್ತಿದ್ದಾರೆ. ಇವರಿಗಿಂತ ಭಿನ್ನವಾಗಿ ಯೋಚಿಸುವ ನಿಜಗುಣಾನಂದ ಸ್ವಾಮೀಜಿ ತಾವು ನೆಲೆ ನಿಂತಿರುವ ಬೈಲೂರು ಗ್ರಾಮದಲ್ಲಿ ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಿದ್ದಾರೆ. ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆಗೆ ಅವಕಾಶ ಕೊಟ್ಟಿಲ್ಲ. ಗ್ರಾಮಸ್ಥರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಸತತವಾಗಿ ನಡೆಯುತ್ತಿದೆ. ಪ್ರಸಾದಕ್ಕೆ ಕರೆಯುವವರ ಮನೆಗೆ ಹೋಗುವುದಕ್ಕೆ ಮುನ್ನ ‘ನಿಮ್ಮ ಮನೆಯಲ್ಲಿ ಶೌಚಾಲಯ ಕಟ್ಟಿಸಿ­ಕೊಂಡಿ­ದ್ದೀರೇನು’ ಎಂದು ಕೇಳುತ್ತಾರೆ.

ಉತ್ತರ ‘ಇಲ್ಲ’ ಎಂದಾದರೆ ಅವರ ಮನೆಗೆ ಹೋಗುವುದೇ ಇಲ್ಲ. ಇದೊಂದು ರೀತಿ ಶೌಚಾಲಯ ನಿರ್ಮಿಸಿಕೊಂಡಿರದ ಜನರ ವಿರುದ್ಧ ಅವರದು ತಾತ್ವಿಕ ಸಿಟ್ಟು. ಸ್ವಾಮೀಜಿ ತಮ್ಮ ಮನೆಗೆ ಬರುವುದಿಲ್ಲವಲ್ಲ ಎಂದಾದರೂ ಶೌಚಾಲಯ ನಿರ್ಮಿಸಿಕೊಂಡು ಬಳಸುವಂತಾಗಲಿ ಎಂಬುದು ಅವರ ಇಚ್ಛೆ. ಪ್ರವಚನ ಆಲಿಸಲು ಬರುವವರ ಮುಂದೆ ತಟ್ಟೆ ಹಿಡಿದು ಸಂಗ್ರಹಿಸುವ ಕಾಣಿಕೆ ಬಿಟ್ಟರೆ ಉಳಿದಂತೆ ಹಣ ಸಂಗ್ರಹದಿಂದ ಸ್ವಾಮೀಜಿ ಬಹಳ ದೂರ. ಹಾಗಾಗಿ ‘ನಿಷ್ಕಲ ಮಂಟಪ’ ಆರ್ಥಿಕವಾಗಿ ಬಡವಾಗಿದ್ದರೂ ವೈಚಾರಿಕ­ವಾಗಿ ಶ್ರೀಮಂತವಾಗಿದೆ. ಅದೇ ಸ್ವಾಮೀಜಿ­ಯವರ ಬಲವೂ ಆಗಿದೆ.  ಬರುವ ಅಲ್ಪ ಹಣದಲ್ಲೂ ಅದನ್ನು ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು ಬಳಸುತ್ತಾರೆ. ಇದುವರೆಗೂ ಸುಮಾರು 250 ವಿದ್ಯಾರ್ಥಿಗಳು ಈ ರೀತಿ ನೆರವು ಪಡೆದು­ಕೊಂಡು ಜೀವನ ಹಸನು ಮಾಡಿಕೊಂಡಿದ್ದಾರೆ.

ದ. ಕನ್ನಡ ಮೂಲ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ವೈದಿಕ ಕುಟುಂಬದಲ್ಲಿ ಜನಿಸಿದ ಇವರ (ಪೂರ್ವಾ­ಶ್ರಮದ ಹೆಸರು ಹರೀಶ್‌ ) ತಂದೆ ಆಗಿನ ವಿದ್ಯುತ್‌ ಮಂಡಳಿ ಉದ್ಯೋಗಿ. ಅವರಿಗೆ ವರ್ಗವಾದ ಕಡೆ­ಗಳಿಗೆಲ್ಲಾ ಹೋಗಬೇಕಾದ ಅನಿರ್ವಾಯತೆ. ಮಂಗಳೂರು, ಮಡಿಕೇರಿ ಮತ್ತು ಮೈಸೂರುಗಳಲ್ಲಿ ವ್ಯಾಸಂಗ ಮಾಡಿದ್ದಾರೆ. ಚಿಕ್ಕಂದಿನಲ್ಲಿ ಊರಿನಲ್ಲಿ ಕೂಲಿಯವರೊಂದಿಗೆ ಮೇಲ್ವರ್ಗದವರು ನಡೆದುಕೊಳ್ಳುತ್ತಿದ್ದ ರೀತಿ ಹಿಡಿಸುತ್ತಿ­ರಲಿಲ್ಲ. ಮೈಸೂರಿಗೆ ಬಂದಾಗ ಅಲ್ಲಿನ ಸಾಂಸ್ಕೃತಿಕ ವಾತಾವರಣ ಹಿಡಿಸಿತು.

ಕ್ರಮೇಣ ಪರಿವರ್ತನೆಗೆ ಅದು ಕಾರಣವಾಯಿತು. ಭಿನ್ನವಾಗಿ ಯೋಚಿಸುವ ಹಾಗೂ ಸೃಜನಾತ್ಮಕ ಅಭಿರುಚಿ ಮೂಡಿ, ವೈಚಾರಿಕತೆ ಆವರಿಸಿ­ಕೊಂಡಿತು. 1985ರಲ್ಲಿ ಮೈಸೂರಿನಲ್ಲಿ ಎಸ್ಸೆಸ್ಸೆಲ್ಸಿ ಓದು­ವಾಗ ಅಲ್ಲಿ ನಡೆಯುತ್ತಿದ್ದ ಲಿಂಗಾನಂದ ಸ್ವಾಮೀಜಿ ಅವರ ಬಸವ ತತ್ವ ಪ್ರವಚನ ಇವರ ಆಲೋ ಚನೆಯ ಹಾದಿಯನ್ನು ಬದಲಿಸಿತು. ಲಿಂಗಾ­ನಂದ ಸ್ವಾಮೀ­ಜಿ­ಯವರ ಪ್ರವಚನದಿಂದ ಇವರು ಎಷ್ಟು ಪ್ರಭಾವಿತರಾದರೆಂದರೆ ಮನೆಯನ್ನು ತೊರೆದು ಅವರ ಹಿಂದೆಯೇ ಬಸವ ತತ್ವ ಅನುಯಾಯಿಯಾಗಿ ಹೊರಟರು.

ನಿಜಗುಣಾನಂದ ಸ್ವಾಮೀಜಿ ಈಗ ಒಬ್ಬ ವಿಶಿಷ್ಟ ಧಾರ್ಮಿಕ ಮುಖಂಡರು. ಬಸವ ತತ್ವ ಪ್ರಚಾರವೇ ಇವರ ಪ್ರಮುಖ ಕಾಯಕ. ಕನ್ನಡ, ತಮಿಳು, ಮಲಯಾಳಂ, ಇಂಗ್ಲಿಷ್‌ ಭಾಷೆಗಳಲ್ಲಿ ಸುಲಲಿತವಾಗಿ ಪ್ರವಚನ ನೀಡುತ್ತಾರೆ. ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ 1991 ರಿಂದ ಇಲ್ಲಿಯವರೆಗೂ ಸಹಸ್ರಾರು ಪ್ರವಚನ ನೀಡಿದ್ದಾರೆ. ‘ಜನರ ಮೇಲೆ ಯಾವುದೇ ಕಾರಣಕ್ಕೂ ಧರ್ಮವನ್ನು ಹೇರಬಾರದು. ಹೀಗೇ ಬದುಕು ಎಂಬುದು ಧರ್ಮ. ಆದರೆ ಹೀಗೂ ಬದುಕಬಹುದು ಎಂಬುದು ಅಧ್ಯಾತ್ಮ’ ಎಂದು ಪ್ರತಿಪಾದಿಸುತ್ತಾರೆ. ಇದೇ ಜನರಿಗೆ ಹಿಡಿಸಿದ್ದು! 

ಪ್ರವಚನ ಆಲಿಸಿದ ಜನತೆ ವೈಚಾರಿಕವಾಗಿ ಆಲೋಚಿಸಲಾರಂಭಿಸಿರುವುದು, ಇದನ್ನು ಪತ್ರದ ಮುಖೇನ ಸ್ವಾಮೀಜಿ ಅವರೊಂದಿಗೆ ಹಂಚಿಕೊಳ್ಳು­ವುದು, ಸಂಶಯಗಳನ್ನು ನಿವಾರಿಸುವಂತೆ ಮನವಿ ಮಾಡುವುದು ಒಳ್ಳೆಯ ಬೆಳವಣಿಗೆಯಾಗಿದೆ. ‘ವಿಚಾರವಾದಿಗಳು ಪ್ರಾಮಾಣಿಕವಾಗಿ ವಿಚಾರಗಳನ್ನು ಜನರಿಗೆ ತಿಳಿಸಿಕೊಟ್ಟರೆ, ಜನರು ಬದಲಾಗುತ್ತಾರೆ. ಇದರಿಂದ ಅನಿಷ್ಟ ಪದ್ಧತಿಗಳನ್ನು ಕಿತ್ತೊಗೆಯಬಹುದು’ ಎಂಬ ಅವರ ಅಭಿಲಾಷೆಯಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ.

ಸಮಾಜದಲ್ಲಿ ಅಜ್ಞಾನ ಅನಾದಿ ಕಾಲದಿಂದಲೂ ತುಂಬಿ­ತುಳುಕುತ್ತಿದೆ. ಇದನ್ನು ತೊಡೆದುಹಾಕಲು ಬಸವ ತತ್ವ ನಮ್ಮ ಮುಂದಿದೆ. ಶಾಂತಿ–ನೆಮ್ಮದಿಯನ್ನು ಎಲ್ಲೋ ಹುಡುಕಲು ಹೋಗುವುದರ ಬದಲಿಗೆ, ಕಣ್ಣೆದುರಿನ ಮನುಷ್ಯರನ್ನು ಪ್ರೀತಿಯಿಂದ ಕಾಣುವು­ದನ್ನು ರೂಢಿಸಿಕೊಳ್ಳಬೇಕು. ಇದು ಕಾಣದ ದೇವರನ್ನು ಪೂಜಿಸುವುದಕ್ಕಿಂತ ಮಿಗಿಲು. ಇದನ್ನೇ ನಿಜಗುಣಾ­ನಂದ ಸ್ವಾಮೀಜಿಯವರು ಬಯಸುವುದು. ಮಾನವೀಯ ಮೌಲ್ಯವನ್ನು ತಿಳಿಸಿಕೊಡುವ ವೈಚಾರಿ­ಕತೆ­ಯನ್ನು ಸಮಾಜ ಅರ್ಥ ಮಾಡಿಕೊಳ್ಳುತ್ತದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT