ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಢ್ಯವೆಂಬ ಕತ್ತಲು.., ಅರಿವೆಂಬ ಬೆಳಕು...

Last Updated 22 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ನೀವು ಮನೆಯಲ್ಲಿ ಕುಳಿತಿರುತ್ತೀರಿ. ಹಲ್ಲಿ ಕೀಟವನ್ನು ಹಿಡಿಯುವ ಭರದಲ್ಲಿ ಆಯತಪ್ಪಿ ನಿಮ್ಮ ಮೇಲೆ ಬೀಳುತ್ತದೆ. ಅಥವಾ ನೀವು ಮರದ ಕೆಳಗೆ ನಿಂತಿರುತ್ತೀರಿ. ಕಾಗೆ ನಿಮ್ಮ ತಲೆ ಮೇಲೆ ಹಿಕ್ಕೆ ಹಾಕುತ್ತದೆ. ಇದೆಲ್ಲ ನಾವು ವಾಸ ಮಾಡುವ ಪರಿಸರದಲ್ಲಿ ನಿತ್ಯ ನಡೆಯುವ ಮಾಮೂಲಿ ಘಟನೆಗಳು ಎಂದು ತಿಳಿದುಕೊಂಡರೆ ಯಾವುದೇ ಸಮಸ್ಯೆ ಇರುವುದಿಲ್ಲ. ಒಂದು ವೇಳೆ ‘ದೋಷ’ ಎನ್ನುವ ಹುಳು ತಲೆ ಹೊಕ್ಕರೆ ಮುಗಿಯಿತು. ನೀವು ಪಂಚಾಂಗ ನೋಡುವ ಇಲ್ಲವೇ ಜೋತಿಷಿ ಬಳಿಗೆ ಹೋದರೆ ‘ಪರಿಹಾರ’ದ ನೆಪದಲ್ಲಿ ಒಂದಿಷ್ಟು ಹಣ ಕೈಜಾರುವುದು ಖಚಿತ.

ನಮ್ಮಲ್ಲಿ ಬೆವರು ಸುರಿಸದೆ ‘ಮೌಢ್ಯ’ವನ್ನು ಬಿತ್ತಿ ಫಸಲು ತೆಗೆಯುವ ‘ಚಾಲಾಕಿ’ ಜನರು ಇದ್ದಾರೆ. ಇವರು ಕಣಿ ಹೇಳುವ, ಗಿಳಿಶಾಸ್ತ್ರ, ಅಂಜನ ಹಾಕುವ, ಬಾನಾಮತಿ, ಮಾಟ, ಮಂತ್ರ, ವಾಮಾಚಾರ ಮಾಡುವ ಇಲ್ಲವೇ ಸುದ್ದಿವಾಹಿನಿಗಳ ಸ್ಟುಡಿಯೊಗಳಲ್ಲಿ ಕುಳಿತು ಭವಿಷ್ಯ ನುಡಿಯುವ ಜೋತಿಷಿಗಳ ವೇಷದಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಕೆಲವರು ದೇವಮಾನವರ ರೂಪದಲ್ಲಿ ಅವತರಿಸಿಕೊಳ್ಳುತ್ತಾರೆ.

ಈ ಸಂಗತಿಯನ್ನೇ ನೋಡಿ: ತಾಂಡಾವೊಂದರ ಯುವಕ ದಿನ ಬೆಳಗಾಗುವುದರಲ್ಲಿ ಕಾವಿ ಧರಿಸುತ್ತಾನೆ. ರಸ್ತೆ ಪಕ್ಕದಲ್ಲಿ ಆಶ್ರಮವೂ ತಲೆ ಎತ್ತುತ್ತದೆ. ಈತ ತನ್ನನ್ನು ತಾನೇ ‘ಮಹಾರಾಜ್‌’ ಎಂದು ಕರೆದುಕೊಳ್ಳುತ್ತಾನೆ. ಭಕ್ತರನ್ನು ಆಕರ್ಷಿಸಲು ಜೀವಂತ ನಾಗರಹಾವನ್ನು ಕೊರಳಿಗೆ ಸುತ್ತಿಕೊಳ್ಳುತ್ತಾನೆ. ಮುುಖದತ್ತ ಹೆಡೆ ಬೀಸುವ ಸರ್ಪವನ್ನು ಭಯವಿಲ್ಲದೆ ಬದಿಗೆ ಸರಿಸಿ, ಭಕ್ತಾದಿಗಳ ಅಹವಾಲು ಕೇಳುತ್ತಾನೆ. ಭಕ್ತರು ಮಹಾರಾಜನ ಶಕ್ತಿಗೆ ಬೆರಗಾಗುತ್ತಾರೆ. ಜೈಕಾರ ಹಾಕುತ್ತಾರೆ.

ಇದೇ ಕಥೆ ಮುಂದುವರಿಯುತ್ತದೆ.
ಕೆಲ ದಿನಗಳಲ್ಲಿ ಹಾವು ಕಡಿತದಲ್ಲಿ ಮಹಾರಾಜ್‌ ಸಾವನ್ನಪ್ಪುತ್ತಾನೆ. ಮಹಾರಾಜ್‌ ದಿವಂಗತನಾದರೂ ಆತನ ಸಮಾಧಿ ಉಸಿರಾಡಲು ಆರಂಭಿಸುತ್ತದೆ. ಭಕ್ತರ ಜಾತ್ರೆ ಹೆಚ್ಚಾಗುತ್ತಲೇ ಹೋಗುತ್ತದೆ. ಮಹಾರಾಜನ ಸಾವಿಗೆ ಕಾರಣವಾದ ಘಟನೆಯೂ ಸ್ವಾರಸ್ಯಕರ. ಹಲ್ಲು ಮುರಿದು ಇರಿಸಿಕೊಂಡಿದ್ದ ಮಹಾರಾಜನ ಹಾವು ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಕಣ್ಮರೆಯಾಗಿರುತ್ತದೆ. ಕಾಕತಾಳೀಯ ಎನ್ನುವಂತೆ ಬೇರೊಂದು ನಾಗರಹಾವು ಅಲ್ಲಿಗೆ ಪ್ರವೇಶ ಪಡೆದಿರುತ್ತದೆ. ಇದರ ಅರಿವಿಲ್ಲದೇ ಹೊಸದಾಗಿ ಬಂದ ಹಾವನ್ನು ಹಿಡಿದಾಗ ನಾಲ್ಕಾರು ಬಾರಿ ಕಡಿದು ಮಹಾರಾಜನ ಸಾವಿಗೆ ಕಾರಣವಾಗುತ್ತದೆ.

ಈಗ ಮಹಾರಾಜನ ಸಹೋದರನೇ ಉತ್ತರಾಧಿಕಾರಿ. ಈತನಿಗೆ ಕನಸಲ್ಲಿ ನಾಗರಹಾವು ಕಂಡರೂ ಜೀವ ಹೋದಂತೆ ಬೆಚ್ಚಿಬೀಳುತ್ತಾನೆ. ಕೊಪ್ಪಳ ಸಮೀಪದ ಹೊಸಳ್ಳಿಯಲ್ಲಿ ಬಾಲಕಿಯ ಶವ ಸಿಕ್ಕಿತು. ಬಾಲಕಿಯ ಬೆರಳುಗಳನ್ನು ಕತ್ತರಿಸಲಾಗಿತ್ತು. ಇದನ್ನು ನೋಡಿದವರು ‘ವಾಮಾಚಾರ’ ಎಂಬ ತೀರ್ಮಾನಕ್ಕೆ ಬಂದರು. ಪೊಲೀಸರು ಅದರ ಜಾಡು ಹಿಡಿದು ಹೊರಟರು. ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಮೂವರಿಗೆ ಮಂತ್ರವಾದಿ ಪರಿಚಿತ. ಆತ ಅಂಜನಹಾಕಿ ನೋಡಿದವನು ‘ತೋಟದಲ್ಲಿ 18 ಕೋಟಿ ರೂಪಾಯಿಗಳ ನಿಧಿ ಇದೆ. ನಿಧಿಯ ಅಕ್ಕಪಕ್ಕ ಶವಗಳನ್ನು ಹೂಳಲಾಗಿದೆ. ಅವುಗಳಿಗೆ ಶಾಂತಿ ಮಾಡಲು ಬಾಲಕಿಯನ್ನು ಬಲಿ ಕೊಡಬೇಕು’ ಎಂದು ಹೇಳಿದ.

ಹದಿನಾಲ್ಕು ಮಂದಿ ಜೊತೆಯಾದರು. ಕೇರಳದಿಂದ ವಾಮಾಚಾರ ಮಾಡುವವನನ್ನು ಕರೆಸಿದರು. ಬಾಲಕಿಯನ್ನು ಅಪಹರಿಸಿ ತೋಟದ ಮನೆಯಲ್ಲಿ ಇಟ್ಟರು. ಪೂಜೆ ಮಾಡುವಾಗ ಬಾಲಕಿಯ ಒಂದೊಂದೇ ಬೆರಳನ್ನು ಕತ್ತರಿಸಿ ರಕ್ತ ಕೊಡುತ್ತಿದ್ದರು. ನಿತ್ರಾಣಗೊಂಡ ಬಾಲಕಿ ನಾಲ್ಕೈದು ದಿನಗಳಲ್ಲಿ ಮೃತಪಟ್ಟಳು. ನಾವು ಮೊದಲು ಯಾವುದು ನಂಬಿಕೆ, ಯಾವುದು ಮೂಢನಂಬಿಕೆ ಎನ್ನುವುದನ್ನು ಅರಿಯಬೇಕಾಗುತ್ತದೆ. ‘ಕಲ್ಪಿತ ಸಮಸ್ಯೆ’ಗಳಿಂದ ಹೊರ ನಿಂತು ತಾಳ್ಮೆಯಿಂದ ವಿಚಾರ ಮಾಡಿರೂ ವಿಷಯ ತಿಳಿಯಾಗುತ್ತದೆ. ಆದರೆ, ಈ ವ್ಯವಸ್ಥೆ  ಜನರು ಸ್ವಂತವಾಗಿ ಆಲೋಚಿಸುವ ಶಕ್ತಿಯನ್ನೇ ಕಡಿಮೆ  ಮಾಡಿಬಿಟ್ಟಿದೆ.

ಮನೋವೈದ್ಯರ ಪ್ರಕಾರ, ಮೌಢ್ಯ ಎನ್ನುವುದು ಮನಸ್ಸಿಗೆ ಸಂಬಂಧಿಸಿದ್ದು. ದುರ್ಬಲ ಮನಸ್ಸಿನವರು, ಮುಗ್ಧರು, ಅನಕ್ಷರಸ್ಥರು ಮೌಢ್ಯಕ್ಕೆ ಸುಲಭವಾಗಿ ಒಳಗಾಗುತ್ತಾರೆ. ಅವರ ಸಮಸ್ಯೆ ವೈದ್ಯಕೀಯ ಚಿಕಿತ್ಸೆಯಿಂದ ಖಂಡಿತ ವಾಸಿಯಾಗುತ್ತದೆ. ಆದರೆ, ಇದನೆಲ್ಲ ಬಿಟ್ಟು ಬಾನಾಮತಿ, ಮಾಟ, ಮಂತ್ರ, ಯಂತ್ರ, ತಂತ್ರ, ದೋಷ ನಿವಾರಣೆ ಎಂದು ಕಂಡಕಂಡವರ ಬಳಿಗೆ ತಿರುಗಿ ಹೈರಾಣಾಗುತ್ತಾರೆ. ಜನರು ಕತ್ತಲೆಯಲ್ಲೇ ಬದುಕಬೇಕು ಎಂದೇನೂ ಬಯಸುವುದಿಲ್ಲ. ಅವರಿಗೂ ಬೆಳಕು ನೋಡುವ ತುಡಿತವಿರುತ್ತದೆ. ಆದರೆ ‘ಯಥಾಸ್ಥಿತಿವಾದಿ’ಗಳು ಅಂಥವರಲ್ಲಿ ಭಯ ಹುಟ್ಟಿಸುತ್ತಾರೆ. ಏಕೆಂದರೆ ಇವರ ‘ಅಜ್ಞಾನ’ವೇ ಅವರ ‘ಅನ್ನ’ವಾಗಿರುತ್ತದೆ.

ಈ ಕಥೆ ಕೇಳಿ: ವ್ಯಕ್ತಿಯನ್ನು ಮರಕ್ಕೆ ಕಟ್ಟಿ ಗುಂಪು ಹಲ್ಲೆ ಮಾಡುತ್ತದೆ. ಆತನ ಚೀರಾಟ ಜೋರಾಗುತ್ತದೆ. ಮಹಿಳೆಯೊಬ್ಬಳು ‘ಹಲ್ಲು ತೆಗೆಯಿರಿ’ ಎಂದು ಆದೇಶ ಮಾಡುತ್ತಾಳೆ. ಇಷ್ಟರಲ್ಲಿ ಆತನನ್ನು ಬೆತ್ತಲೆ ಮಾಡಲಾಗುತ್ತದೆ. ಆತನನ್ನು ನೆಲಕ್ಕೆ ಕೆಡವಿ ಕಟಿಂಗ್ ಪ್ಲೇಯರ್‌ನಿಂದ ಹಲ್ಲುಗಳನ್ನು ಕೀಳಲು ಮುಂದಾಗುತ್ತಾರೆ. ಆತನ ಆಕ್ರಂದನ ಗದ್ದಲವನ್ನು ಮೀರಿ ಕೇಳಿಸುತ್ತದೆ. ಆದರೆ ಅಲ್ಲಿದ್ದ ಯಾರೊಬ್ಬರ ಮನಸ್ಸು ಕರಗುವುದೇ ಇಲ್ಲ! ಇದೆಲ್ಲವನ್ನೂ ನೋಡುತ್ತಾ ನಿಂತಿದ್ದ ಪೊಲೀಸರು ಎಚ್ಚರಗೊಂಡವರಂತೆ ಗುಂಪನ್ನು ಚದುರಿಸಿ, ಆತನನ್ನು ಠಾಣೆಗೆ ಕರೆದೊಯ್ಯುತ್ತಾರೆ.

ಇಷ್ಟೊಂದು ಅಮಾನವೀಯವಾಗಿ ವ್ಯಕ್ತಿಯೊಬ್ಬನ ಹಲ್ಲುಗಳನ್ನು ಕೀಳಲು ಮುಂದಾಗಿದ್ದು ಮೌಢ್ಯದಿಂದ. ಹಲ್ಲೆಗೆ ಒಳಗಾದ ವ್ಯಕ್ತಿ ‘ಬಾನಾಮತಿ’ ಮಾಡುವಾತ ಎನ್ನುವುದು ಹಲ್ಲೆ ಮಾಡಿದವರ ಬಲವಾದ ನಂಬಿಕೆ. ಹೀಗೆ ಬಾನಾಮತಿ ವಿದ್ಯೆ ಗೊತ್ತಿರುವವರ ‘ಪವರ್‌ ’ ಕಡಿಮೆ ಮಾಡಬೇಕು ಎಂದರೆ ಅವರ ಮುಂದಿನ ಎರಡು ಹಲ್ಲುಗಳನ್ನೇ ತೆಗೆಯಬೇಕಂತೆ. ಇಲ್ಲದೇ ಹೋದರೆ ಆತನ ‘ಪವರ್‌’ ಹಾಗೆಯೇ ಉಳಿಯುತ್ತದೆಯಂತೆ.

ಹಲ್ಲೆ ಮಾಡಿದವರು, ಹಲ್ಲೆಗೆ ಒಳಗಾದವನು ಒಂದೇ ಕೇರಿಯವರು. ಹಲ್ಲೆ ಮಾಡಿದವರ ಕುಟುಂಬ ಆರ್ಥಿಕವಾಗಿ ಸಬಲವಾಗಿದೆ. ಅವರ ಮನೆಯಲ್ಲಿ ಪ್ರಾಯಕ್ಕೆ ಬಂದ ಸುಂದರ ಹೆಣ್ಣು ಮಗಳು ಇದ್ದಾಳೆ. ಆಕೆ ತಿಂಗಳಿಂದ ವಿಚಿತ್ರವಾಗಿ ವರ್ತಿಸುತ್ತಿದ್ದಾಳೆ. ಯಾರೋ ಹೇಳುತ್ತಾರೆ ‘ಇದು ಭಾನುಮತಿ ಕಾಟ’ ಎಂದು. ಬಾನಾಮತಿ ತೆಗೆಯುವವರನ್ನು ಕರೆತರುತ್ತಾರೆ. ಅವರು ಮೂಲವನ್ನು ಹುಡುಕಿಕೊಂಡು ಹೋದಾಗ ಅದು ಹಲ್ಲೆಗೆ ಒಳಗಾದ ವ್ಯಕ್ತಿಯ ಬಳಿ ನಿಲ್ಲುತ್ತದೆಯಂತೆ!

ಹಲವು ವರ್ಷಗಳ ಹಿಂದೆ ಬಾಗಲಕೋಟೆಯಲ್ಲಿ ಬ್ಲೇಡ್‌ ಬಾಬಾ ಅಲಿಯಾಸ್‌ ಅಸ್ಲಂ ಬಾಬಾ ಮಾಡಿದ ಅವಾಂತರ ಒಂದೆರಡಲ್ಲ. ಬ್ಲೇಡ್‌ನಿಂದ ಶಸ್ತ್ರಚಿಕಿತ್ಸೆ ಮಾಡುತ್ತೇನೆ ಎಂದು ರೋಗಿಗಳನ್ನು ವಂಚಿಸುತ್ತಿರುತ್ತಾನೆ. ಆದರೂ ಈತನನ್ನು ಹುಡುಕಿಕೊಂಡು ಪ್ರಖ್ಯಾತ ಸಿನಿಮಾ ನಟಿ, ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಬಂದು ಹೋಗುತ್ತಾರೆ. ಈತನ ಪ್ರಖ್ಯಾತಿ ಇನ್ನಷ್ಟು ಹೆಚ್ಚಾಗುತ್ತದೆ. ಹತ್ತು ವರ್ಷಗಳ ಹಿಂದೆ ಅಮೆರಿಕದ ಪಾದ್ರಿ ‘ಬೆನ್ನಿಹಿನ್‌’ ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ದೈವಿಕ ಚಿಕಿತ್ಸೆ’ ಬೃಹತ್‌ ಕಾರ್ಯಕ್ರಮ ಬಹುತೇಕರಿಗೆ ನೆನಪಿರಬಹುದು.

ಈತನ ಪವಾಡದಿಂದ ಮೂಕ ಮಾತನಾಡುತ್ತಾನೆ, ಹೆಳವ ನಡೆಯುತ್ತಾನೆ, ಮಾನಸಿಕ ಅಸ್ವಸ್ಥ ಗುಣಮುಖನಾಗುತ್ತಾನೆ ಎಂದೆಲ್ಲ ಬಿಂಬಿಸಲಾಗಿತ್ತು. ‘ಕೈಚಳಕದಿಂದ ಇಂಥ ಪವಾಡ ಸಾಧ್ಯವಿಲ್ಲ’ ಎಂದು ಭಾರತೀಯ ವೈದ್ಯ ಪರಿಷತ್ ಅಂದೇ ಹೇಳಿತ್ತು. ಆದರೆ, ಇಡೀ ಸರ್ಕಾರವೇ ಮುಂದಿನ ಸಾಲಲ್ಲಿ ಕುಳಿತು ನಿಬ್ಬೆರಗಾಗಿ ಅದನ್ನೆಲ್ಲ ನೋಡಿತು. ‘ವಾಸ್ತು’ ಹೆಸರಿನಲ್ಲಿ ವಿಧಾನಸೌಧದ ಕೊಠಡಿಗಳ ಗೋಡೆಗಳನ್ನು ಬದಲಿಸಿದವರೆಲ್ಲ ಅಕ್ಷರಸ್ಥರೆ. ‘ವಾಸ್ತು’ ಎಂಬ ಪದವನ್ನು ಸರಳವಾಗಿ ಅರ್ಥೈಸಿಕೊಳ್ಳಲು ಇವರಿಗೂ ಸಾಧ್ಯವಾಗಿಲ್ಲ. ಏಕೆ ಎಂದು ನನಗೆ ಅರ್ಥವಾಗುತ್ತಿಲ್ಲ. ಆಳುವ ಬಹಳಷ್ಟು ಮಂದಿಗೆ ತಿಳಿವಳಿಕೆ ಇಲ್ಲದೇ ಇದ್ದಾಗ ಸಮಾಜ ಏನನ್ನು ನಿರೀಕ್ಷಿಸಲು ಸಾಧ್ಯ.

ಕಾಲಾಂತರದಲ್ಲಿ ಜರುಗಿದ ವೈಜ್ಞಾನಿಕ ಆವಿಷ್ಕಾರಗಳನ್ನು ಈ ನಾಗರಿಕ ಸಮಾಜ ನಾನಾ ರೀತಿ ಅಳವಡಿಸಿಕೊಳ್ಳುತ್ತಾ ಬಂದಿದೆ. ಜನರು ಬದುಕುವ ಮನೆಗೆ ಗಾಳಿ ಎಷ್ಟು ಬೇಕು, ಬೆಳಕು ಎಷ್ಟು ಬೇಕು, ಅದಕ್ಕಾಗಿ ಸೂರ್ಯ ಹುಟ್ಟುವ, ಮುಳುಗುವ ದಿಕ್ಕು, ಬೀಸುವ ಗಾಳಿಯ ದಿಕ್ಕನ್ನೆಲ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಇದಿಷ್ಟೇ ವಾಸ್ತು. ಇದನೆಲ್ಲ ಅರಿಯದ ಮಂತ್ರಿಗಳು ತಾವೇ ರೂಪಿಸಿದ ಪಾರಂಪರಿಕ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದರು. ಇಲ್ಲಿ ಯಾರೂ ಚಕಾರವೆತ್ತಲಿಲ್ಲ. ಈ ಕಾರಣಕ್ಕೆ ‘ಮೌಢ್ಯ ಪ್ರತಿಬಂಧಕ ಮಸೂದೆ’ ಎಷ್ಟು ಮುಖ್ಯ ಎನ್ನುವುದನ್ನು ಯೋಚಿಸಿ.

ಮುಗ್ಧ ಜನರು, ಅಮಾಯಕರನ್ನು ಶೋಷಿಸಲು ಸಮಾಜದಲ್ಲಿ ನೂರಾರು ನಂಬಿಕೆಗಳು, ಆಚರಣೆಗಳು ಅಸ್ತಿತ್ವದಲ್ಲಿವೆ. ಧರ್ಮ ಮತ್ತು ಸಂಸ್ಕೃತಿಯ ಲೇಪನದಲ್ಲಿ ಇವನ್ನೆಲ್ಲ ಪೋಷಿಸುತ್ತಾ, ಸಮರ್ಥಿಸಿಕೊಳ್ಳುತ್ತಾ ಸಾಗಿರುವ ಮೇಲ್ಜಾತಿಯವರ ಗುಂಪೇ ಇದೆ. ಉದ್ದೇಶ ಪೂರ್ವಕವಾಗಿಯೇ ಉಳಿಸಿಕೊಂಡು ಬರುತ್ತಿವೆ. ಅದು ಒಂದು ರೀತಿಯ ವ್ಯಾಪಾರ. ಇಡೀ ಇತಿಹಾಸವೇ ಶೋಷಣೆಯ ಸಮುಚ್ಚಯ. ಅದನ್ನೆಲ್ಲ ಸರಿ ಎಂದು ಪ್ರತಿಪಾದಿಸುವುದೂ ಇದೆ.

ಬಹುಶಃ ಇತಿಹಾಸವೇ ಹೀಗೆ. ಒಂದು ವರ್ಗವನ್ನು ಶೋಷಿಸುತ್ತ, ಮತ್ತೊಂದು ವರ್ಗ ಮುಂದುವರಿಯುವುದೇ ನಿಜವಾದ ಇತಿಹಾಸ. ಕೇವಲ ‘ಮೌಢ್ಯ ಪ್ರತಿಬಂಧಕ ಮಸೂದೆ’ಯನ್ನು ಜಾರಿಗೆ ತರುವುದರಿಂದ ಮೌಢ್ಯವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಸ್ವಲ್ಪ ಮಟ್ಟಿಗೆ ನಿಯಂತ್ರಣ ಹಾಕಬಹುದು. ಇದನ್ನೆಲ್ಲ ಬದಲಾಯಿಸಲು ಮಕ್ಕಳಿಗೆ ಹೊಸ ಚಿಂತನೆಗಳನ್ನು ಧಾರೆ ಎರೆಯಬಲ್ಲ ‘ಸತ್ಯ ಶೋಧಕ ಬೋಧಕ’ ವರ್ಗ ಇಲ್ಲಿ ತೀರಾ ಅವಶ್ಯ. ಇದು ದೀರ್ಘಕಾಲದಲ್ಲಿ ಖಂಡಿತವಾಗಿಯೂ ಮೌಢ್ಯಾಚರಣೆಗೆ ಉತ್ತರ ನೀಡಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT