ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌನ

Last Updated 26 ಜನವರಿ 2013, 19:59 IST
ಅಕ್ಷರ ಗಾತ್ರ

ಮಾತು-ಮೌನ ಬೇರೆ ಬೇರೆಯಲ್ಲ. ಮಾತಿಗೆ ಆಕಾರವಿದೆ, ಮೌನಕ್ಕೆ ನಿರಾಕಾರವಿದೆ. ಅಲ್ಲಮನ ಮಾತಿನಲ್ಲಿ ಹೇಳುವುದಾದರೆ ಆಕಾರ, ನಿರಾಕಾರ ಎರಡೂ ಸ್ವರೂಪಗಳೇ. ನುಡಿಯು ಆಕಾರ ಪಡೆಯಬೇಕಾದರೆ ನುಡಿಗೆ ಮುನ್ನ, ನುಡಿಯ ಒಂದೊಂದೂ ಧ್ವನಿಗಳ ನಡುವೆ, ಮತ್ತು ನುಡಿಯ ನಂತರ ಮೌನ ಇದ್ದೇ ಇರಬೇಕು. ಮೌನವಿರದೆ ನುಡಿ, ನುಡಿ ಅಥವ ಇನ್ನು ಯಾವುದೇ ಸದ್ದು ಇಲ್ಲದೆ ಮೌನ ಇರಲು ಸಾಧ್ಯವಿಲ್ಲ.

ಬಳಸುವ ಸಂದರ್ಭ, ನುಡಿಯ ಒತ್ತು, ಏರಿಳಿತಗಳಿಂದ ಒಂದೊಂದು ನುಡಿಗೂ ಹಲವು ಅರ್ಥಗಳು ಸಾಧ್ಯವಿರುವಂತೆ ಮೌನಕ್ಕೂ ಹಲವು ಅರ್ಥಗಳು ಇರುತ್ತವೆ. ಮಾತನ್ನು ಅರ್ಥಮಾಡಿಕೊಳ್ಳಲು ಎಂಥ ಕೌಶಲ ಬೇಕೋ ಮೌನವನ್ನು ಅರ್ಥಮಾಡಿಕೊಳ್ಳಲೂ ಅಂಥದೇ ಕೌಶಲ ಬೇಕು. ಮಗು ಬೆಳೆಯುತ್ತ ನುಡಿಯ ಕೌಶಲವನ್ನು ಸಹಜವಾಗಿ ಸಂಪಾದಿಸಿಕೊಂಡಂತೆಯೇ ಮೌನದ ಅರ್ಥವಂತಿಕೆಯನ್ನೂ ಅರಿಯುತ್ತದೆ.

ನನ್ನ ಮೌನ ಸಿಟ್ಟೋ ಬೇಸರವೋ ಉತ್ತರಿಸುವ ಮುನ್ನ ಇರುವ ಆಲೋಚನೆಯೋ ಅನ್ನುವುದು ನಮ್ಮ ಸಮರ್ಥನಿಗೆ ತಿಳಿದುಬಿಡುತ್ತದೆ. ಬರವಣಿಗೆಗೆ ಬಂದಾಗ ಲೇಖನ ಚಿಹ್ನೆಗಳು ಓದುಗ ಅನುಭವಿಸಬೇಕಾದ, ಅನುಸರಿಸಬೇಕಾದ ಮೌನದ ತೋರು ಗುರುತುಗಳಾಗುತ್ತವೆ. ಕವಿತೆಯಲ್ಲಾದರೆ ಛಂದಸ್ಸು, ಸಾಲುಗಳ ಮುರಿವು ಇವು ಮೌನದ ಸೂಚನೆಗಳಾಗುತ್ತವೆ. ಅರ್ಥವೆನ್ನುವುದು ಆಗುವುದೇ ಸಾಲುಗಳ ನಡುವೆ ಇರುವ ಖಾಲಿ ಜಾಗದಲ್ಲಿ, ಮಾತುಗಳ ನಡುವೆ ಇರುವ ಮೌನದಲ್ಲಿ ಅನ್ನುವ ತಾತ್ವಿಕರೂ ಇದ್ದಾರೆ.

ಭಾವದ ತೀವ್ರತೆ ಹೆಚ್ಚಿದಾಗ ಅದನ್ನು ವ್ಯಕ್ತಪಡಿಸಲು ಒದಗಿ ಬರುವುದು ಮೌನವೇ ಹೊರತು ಮಾತಲ್ಲ. ಬಲವಾದ ಆಘಾತವಾದಾಗ ಮಾತು ನಿಂತು, ಇಲ್ಲವಾಗಿ ಆಘಾತವು ಎಷ್ಟು ತೀವ್ರ ಅನ್ನುವುದನ್ನು ಸೂಚಿಸುವುದು ಮೌನವೇ; ಸಡಗರವಿದ್ದಾಗ ಬಡಬಡಿಕೆ ಇರುತ್ತದೆ, ವಿಸ್ಮಯದಿಂದ ಚಕಿತರಾದಾಗ ಮೌನವಿರುತ್ತದೆ; ಯಾವುದಾದರೂ ಸಂಗತಿ ಪೂರಾ ಅರ್ಥವಾದಾಗ, ಆಗದಿದ್ದಾಗ, ಇರುವುದು ಮೌನವೇ. ಸಂದರ್ಭ ಹಿತವಲ್ಲದಿರುವಾಗ, ನಡೆಯುತ್ತಿರುವ ಸಂಗತಿ ಇಷ್ಟವಿಲ್ಲದಿರುವಾಗ, ವಿರೋಧ ಸೂಚಿಸುವಾಗ ಕೂಡ ಮೌನವೇ ನಮ್ಮ ಪ್ರತಿಕ್ರಿಯೆಯಾದೀತು. ಸಾವು, ದುಃಖ ಇಂಥ ಭಾವಗಳು ನಮ್ಮನ್ನು ತಟ್ಟುವುದು ಕೂಡ ಮೌನದ ಮೂಲಕವೇ.

ಮಾಮೂಲು ಸನ್ನಿವೇಶದಲ್ಲಿ ನಮ್ಮ ಮನಸಿನಲ್ಲಿರುವುದನ್ನು ಮಾತು ಇತರರಿಗೆ ತಿಳಿಸಿದರೆ ತೀವ್ರವಾದ ಭಾವ ಬೆಳಗುವಾಗ ಮಾತಿಲ್ಲದೆ ನಮ್ಮ ಇಡೀ ದೇಹವೇ ಮೌನದ ಮೂಲಕ ಅದನ್ನು ವ್ಯಕ್ತಪಡಿಸುತ್ತದೆ. ಹಾಗೆ ವ್ಯಕ್ತವಾಗುವುದನ್ನು ಇತರರು ಭಾಷೆಗೆ, ಭಾವ ಸೂಚಕ ಪದಗಳಿಗೆ ಭಾಷಾಂತರ ಮಾಡಿಕೊಳ್ಳುತ್ತಾರೆ.

ಹಾಗಾಗಿ ಆಕಾರಗೊಳ್ಳುವ ಮಾತಿನಂತೆಯೇ ನಿರಾಕಾರವಾದ ಮೌನವೂ ಅಪಾರ್ಥಕ್ಕೆ ಎಡೆಗೊಡುತ್ತದೆ. ಪ್ರೀತಿ, ದ್ವೇಷ, ಕೋಪ ಇಂಥ ಮನುಷ್ಯ ಸಹಜ ಭಾವಗಳನ್ನು ಮಾತಿನಲ್ಲಿ ವ್ಯಕ್ತಪಡಿಸಲಾರದ ದುರ್ಬಲ ನುಡಿಯ ವ್ಯಕ್ತಿತ್ವಗಳು ಬದುಕಿನುದ್ದಕ್ಕೂ ಅಪಾರ್ಥದ ವ್ಯಾಖ್ಯಾನಕ್ಕೆ ತುತ್ತಾಗುತ್ತಲೇ ಇರುತ್ತವೆ.

ನುಡಿ ಹೇಗೆ ಸಾಮಾಜಿಕ ಒಪ್ಪಂದದ ಮೂಲಕ ರಚನೆಗೊಳ್ಳುತ್ತದೋ ಮೌನವೂ ಹಾಗೆಯೇ. ಯಾವ ಸಂಗತಿಯನ್ನು ಹೇಳಬಹುದು, ಯಾವುದನ್ನು ಹೇಳಬಾರದು ಅನ್ನುವುದು ಕೂಡ ಸಾಮಾಜಿಕ ಒಪ್ಪಂದವೇ. ಪ್ರತಿಯೊಂದು ಮನೆಯಲ್ಲೂ ಸಮಾಜಕ್ಕೆ ಒಪ್ಪಿತವಾಗದು ಎಂದು ಭಾವಿಸಿದ ಹಲವು ಸಂಗತಿಗಳು- ಅಕ್ರಮ ಸಂಬಂಧ, ಅಕ್ರಮ ಸಂತಾನ, ಕಾಯಿಲೆ, ಹುಚ್ಚು ಇಂಥವು- ಇರಬಹುದು; ಅದು ಮನೆಯವರಿಗೆಲ್ಲರಿಗೂ ಗೊತ್ತಿರಬಹುದು;

ಆದರೆ ಅಂಥ ವಿಷಯಗಳನ್ನು ಕುರಿತು ಯಾರೂ ಮಾತಾಡುವುದಿಲ್ಲ. ತಟ್ಟೆಯಲ್ಲಿರುವ ಹೆಗ್ಗಣ ಇಲ್ಲವೇ ಇಲ್ಲ ಅನ್ನುವ ಹಾಗೆ ಬದುಕಿನ ಊಟ ದಿನ ನಿತ್ಯವೂ ನಡೆದಿರುತ್ತದೆ. ಇಂಗ್ಲಿಷಿನಲ್ಲಿ ಅದನ್ನು ಕೋಣೆಯೊಳಗಿರುವ ಆನೆ ಅನ್ನುವ ರೂಪಕದಲ್ಲಿ ಹೇಳುತ್ತಾರೆ. ಕನ್ನಡದ ಹೆಗ್ಗಣವೇ ಇರಲಿ, ಇಂಗ್ಲಿಷಿನ ಆನೆಯೇ ಆಗಲಿ ಇರುವುದನ್ನು ಇಲ್ಲವೇ ಇಲ್ಲ ಎಂಬಂತೆ ಮೌನಗೊಳಿಸಿ ಬದುಕು ಸಾಗಿಸುತ್ತೇವೆ.

ವ್ಯಕ್ತಿಯನ್ನು ದಾಟಿ ಸಮುದಾಯ, ಸಮಾಜದ ಪಾತಳಿಗೆ ಚಲಿಸಿದರೆ ಯಾವ ಸಂಗತಿಗಳ ಬಗ್ಗೆ ಮೌನವಹಿಸಬೇಕು ಅನ್ನುವ ಸಹಮತವೂ ರೂಪುಗೊಂಡಿರುವುದು ಗಮನಕ್ಕೆ ಬರುತ್ತದೆ. ಮೌನದ ಮಹತ್ವ ಕೂಡ ಸಾಮಾಜಿಕ ಸ್ವರೂಪದ್ದು, ಸಮುದಾಯದ ನೆಲೆಯಲ್ಲಿ ರೂಪುಗೊಂಡದ್ದು. ಉತ್ಕಂಠಿತರಾಗಿ ಹಾಡುವ ಭಜನೆ, ಪಿಸುಗುಡುವ ದನಿಯ ಜಪ, ವಾದ್ಯಗಳ ಸದ್ದು, ಮೌನದ ಧ್ಯಾನ ಯಾವುದು ಮೌಲಿಕ ಅನ್ನುವುದು ಸಮುದಾಯದಿಂದ ಸಮುದಾಯಕ್ಕೆ, ಕಾಲದಿಂದ ಕಾಲಕ್ಕೆ ಭಿನ್ನವಾಗುತ್ತದೆಯಲ್ಲವೇ.

ಮೌನವು ಸ್ವಂತದ ಆಯ್ಕೆಯೂ ಆಗಬಹುದು, ಅಧಿಕಾರದ ಕೇಂದ್ರಗಳು ಬಲವಂತವಾಗಿ ಹೇರಿದ್ದೂ ಆಗಬಹುದು. ತಾನಿನ್ನು ಬರೆಯುವುದು ಏನೂ ಇಲ್ಲ, ಇನ್ನು ಮುಂದೆ ನಟಿಸಲಾರೆ ಎಂದು ಲೇಖಕ, ಕಲಾವಿದ ಸ್ವಂತ ಇಚ್ಛೆಯಿಂದ ಮೌನ ತಾಳಬಹುದು.

ಈ ಮೌನ ದಣಿವಿನಿಂದ ಮೂಡಿದ್ದಿರಬಹುದು, ತಮ್ಮ ಸಾಮರ್ಥ್ಯದ ಮಿತಿ ತಿಳಿದು ಮೂಡಿದ್ದಿರಬಹುದು, ತಮ್ಮ ಓದುಗ, ಪ್ರೇಕ್ಷಕರ ಬಗ್ಗೆ ಅಸಮಾಧಾನ ಮೂಡಿದ್ದರಿಂದ ಇರಬಹುದು, ವ್ಯಕ್ತಪಡಿಸಬೇಕಾದ್ದನ್ನು ವ್ಯಕ್ತಪಡಿಸಲು ಆಗುವುದೇ ಇಲ್ಲ ಎಂಬ ತಳಮಳದಿಂದ ಹುಟ್ಟಿದ್ದಿರಬಹುದು, ತೃಪ್ತಿಯಿಂದ ಹುಟ್ಟಿದ್ದೂ ಇರಬಹುದು. ಇಂಥ ಮೌನ ಸ್ವಂತದ ಆಯ್ಕೆಯೇ ಆಗಿದ್ದರೂ ಅದಕ್ಕೆ ಕಾರಣ ಮಾತ್ರ ಕೇವಲ ವೈಯಕ್ತಿಕವಾಗಿರುವುದಿಲ್ಲ.

ಬದುಕಿನ ಹಲವು ಸಂಗತಿಗಳ ಬಗ್ಗೆ ಮೌನವನ್ನು ಹೇರುವುದು ಅಧಿಕಾರದ ಲಕ್ಷಣ. ಮನೆಯಲ್ಲಿ, ಶಾಲೆಯಲ್ಲಿ ಮಕ್ಕಳು ಮಾತಾಡದೆ ಸುಮ್ಮನೆ ಕೂತಿರಬೇಕು, ಯಾವ ಥರದ ಪ್ರಶ್ನೆ ಕೇಳಬಹುದು, ಯಾವ ಥರದ ಪ್ರಶ್ನೆ ಕೇಳಲೇಬಾರದು ಅನ್ನುವಂಥ- `ಸಾಮಾನ್ಯ'ವೆಂದು ನಿರ್ಲಕ್ಷಿಸುವ- ಮೌನದ ಕಟ್ಟಳೆಗಳನ್ನು ಹಿರಿಯರ, ಶಿಕ್ಷಕರ ಅಧಿಕಾರ ಹೇರುತ್ತದೆ.

ದೇಶದ ಹಿತದ ರಕ್ಷಣೆ ಅನ್ನುವ ಕಾರಣವನ್ನು ಮುಂದೊಡ್ಡಿ ಅನೇಕ ಸಂಗತಿಗಳನ್ನು ಮೌನದ ಗುಹೆಯೊಳಗೆ ಬಚ್ಚಿಡುವುದಕ್ಕೆ ಸರ್ಕಾರ ಬಯಸುತ್ತದೆ. ಹಾಗೆ ಜನದ ಕಣ್ಣಿಗೆ ಕಾಣದಂತೆ, ಕಿವಿಗೆ ಬೀಳದಂತೆ ಬಚ್ಚಿಟ್ಟ ಸಂಗತಿಗಳನ್ನೂ ಬಲ್ಲವರು ಮಾತ್ರ ಅಧಿಕಾರದ ಶ್ರೇಣಿಯಲ್ಲಿ ಬಹಳ ಮೇಲೆ ಇರುವವರೇ ಆಗಿರುತ್ತಾರೆ. ಸೆನ್ಸಾರ್‌ಶಿಪ್, ಕೃತಿಗಳ ಬಹಿಷ್ಕಾರ ಇಂಥ ಕ್ರಿಯೆಗಳ ಮೂಲಕ ಅಧಿಕಾರ ಕೇಂದ್ರಗಳು ಸದ್ದನ್ನು ಅಡಗಿಸುವ, ಮೌನವನ್ನು ಹೇರುವ ಕೆಲಸ ಮಾಡುತ್ತಲೇ ಇರುತ್ತವೆ.

ನಾಚಿಕೆ, ಭಯ, ಅಧಿಕಾರ ಹಾನಿಯ ಆತಂಕ ಇವು ವ್ಯಕ್ತಿಯ ಪಾತಳಿಯಿಂದ ಹಿಡಿದು ಸಮುದಾಯ, ಸಮಾಜದಲ್ಲೂ ಮೌನವನ್ನು ಅಪ್ಪಿಕೊಳ್ಳುವಂತೆ ಮಾಡುವ ಕಾರಣಗಳಿರಬಹುದು. ತಾನು ಮಾಡಿದ ಅಥವ ಮಾಡಬಾರದಿದ್ದ ಕೆಲಸದ ಬಗ್ಗೆ, ತನ್ನೊಳಗೆ ಇರುವ ಅಥವ ಸಲ್ಲದ ಆಸೆಗಳ ಬಗ್ಗೆ ಹುಟ್ಟುವ ನಾಚಿಕೆ, ತಾನು ಕಷ್ಟಪಟ್ಟು ರೂಪಿಸಿಕೊಂಡ ವ್ಯಕ್ತಿತ್ವದ ಬಿಂಬಕ್ಕೆ ಹಾನಿಯಾಗುವುದೆಂಬ ಭಯ ಇವೂ ಮೌನಕ್ಕೆ ಕಾರಣವಾಗುತ್ತವೆ; ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಭ್ರಷ್ಟತೆಗೆ ಮೌನದ ಮುಸುಕು ಹೊದಿಸುವ, ಅಥವ ತರ್ಕಬದ್ಧ ಮಾತುಗಳಲ್ಲಿ ಸಮರ್ಥಿಸುವ ಕೆಲಸ ನಡೆಯುತ್ತದೆ.

ಆಲೋಚಿಸುವ, ಧ್ಯಾನಿಸುವ, ಅರಿಯುವ, ಪ್ರಶ್ನಿಸುವ ಜೀವಂತಿಕೆಗೆ ಮೌನ ಬೇಕು. ಅಂಥ ಮೌನವನ್ನು ಇಲ್ಲವಾಗಿಸುವುದು ವಾಣಿಜ್ಯದ ಹಿತಾಸಕ್ತಿಗಳ ರಾಜಕಾರಣದ ಬಹು ಮುಖ್ಯ ಭಾಗ. ಕ್ಷಣಕ್ಷಣವೂ ಎಂಬಂತೆ ಹೆಚ್ಚುತ್ತಿರುವ ವಾಹನಗಳ ಸದ್ದು, ಅಭಿವೃದ್ಧಿ ಚಟುವಟಿಕೆಗಳ ಸ್ಫೋಟಕ ಸದ್ದು, ಕಿವಿಗಳೊಳಗೇ ತೂರಿ ಕುಳಿತ ಇಯರ್‌ಫೋನುಗಳಲ್ಲಿ ಮಾತಿನ, ಜಾಹಿರಾತಿನ ಸದ್ದು, ಕಣ್ಣು ಕೋರೈಸುವ ಬೆಳಕಿನ ಸೃಷ್ಟಿ, ಸಾವಿರಾರು ಜನ ಸೇರುವ ಮನರಂಜನೆಯ ತಾಣಗಳ ಸದ್ದು, ರಾಜಕಾರಣಿಗಳ ಭಾಷಣದ ಸದ್ದು ಇಂಥ `ಸದ್ದಿನ ರಾಜಕೀಯ' ವ್ಯಕ್ತಿಗಳ ಮೌನದ ಜೀವಂತಿಕೆಯನ್ನು ಇಲ್ಲವಾಗಿಸಿ ಕೇವಲ ಗ್ರಾಹಕರಾಗಿಸುವ ದುರಾಸೆಯ ರಾಜಕೀಯ.

ಹೆಂಗಸರು, ದಿಕ್ಕಿಲ್ಲದ ಮಕ್ಕಳು, ಅಧಿಕಾರವಿಲ್ಲದವರ ನೋವು, ಅಸಹನೆ, ಕಾರ್ಪಣ್ಯ, ಅನುಭವಿಸುವ ಹಿಂಸೆ ಇವೆಲ್ಲ ಮೌನದ ನಿರಾಕಾರವಾಗಿದ್ದರೆ ಮಾತ್ರ ಸಾಮಾಜಿಕ ಶಾಂತಿ ಎಂದು ಭ್ರಮಿಸಿದ್ದೇವೆ. ಯಾವುದು ಕೇಳುವುದಿಲ್ಲವೋ, ಕಾಣುವುದೋ ಅದಿಲ್ಲ ಎಂದು ತೀರ್ಮಾನಿಸುವುದು ಸುಲಭವಲ್ಲವೇ. ಚರಿತ್ರೆಯೆಂಬ ಚರಿತ್ರೆಯೂ ಅಷ್ಟೇ.

ಸದ್ದಿನ ಸಾಮ್ರಾಜ್ಯ. ಯಾವುದು ಕಾಣಬಾರದು, ಕೇಳಬಾರದು ಎಂದು ಭಾವಿಸಿದ್ದೇವೋ ಅದು ಮೌನದ ಸೀಮೆಯನ್ನು ಉಲ್ಲಂಘಿಸಿ ನಮ್ಮ ಕಿವಿ, ಕಣ್ಣುಗಳನ್ನು ಸೆಳೆಯುವುದಿದೆಯಲ್ಲ ಅದು ವಿಚಲಿತಗೊಳಿಸುವ, ಚಲನೆಗೆ ಕಾರಣವಾಗುವ ಪ್ರಚೋದನೆಯಾಗುತ್ತದೆ. ಆದರೆ ನಾವೆಲ್ಲರೂ ನೋಡಬೇಕಾದ್ದನ್ನು ನೋಡದ, ಕೇಳದ, ನುಡಿಯಬೇಕಾದ್ದನ್ನು ನುಡಿಯದ ಸುಮ್ಮನಿರುವ ಮಂಗಗಳಾಗಿರಬೇಕೆಂಬ ಕೆಟ್ಟ ಉದ್ದೇಶವೇ ಲಾಭಕೋರ ವಾಣಿಜ್ಯ ಮತ್ತು ಭ್ರಷ್ಟ ರಾಜಕಾರಣದ ಅಪೇಕ್ಷೆಯಾಗಿರುತ್ತದೆ.

ಮನುಷ್ಯ ಭಾಷೆಯನ್ನು ಕಂಡುಕೊಳ್ಳುವ ಮೊದಲು ಇದ್ದದ್ದು ಮೌನವೇ. ಆದರೆ ಸಂಪೂರ್ಣ ಮೌನ ಅನ್ನುವುದು ನಿಸರ್ಗದಲ್ಲಿಲ್ಲವೇನೋ. ಬೀಸುವ ಗಾಳಿ, ಹರಿಯುವ ನದಿ, ಜೀವರಾಶಿಗಳ ಮರ್ಮರ ಎಲ್ಲವೂ ಸದ್ದುಗಳೇ ತಾನೇ. ಮಾತಾಡದೆ ಸುಮ್ಮನಿದ್ದಾಗಲೂ ಎದೆ ಬಡಿತ, ಉಸಿರಾಟ, ರಕ್ತ ಪರಿಚಲನೆ ನಮ್ಮಳಗೇ ಸದ್ದು ಹುಟ್ಟಿಸುತ್ತಿರುತ್ತವೆ. ಜೊತೆಗೆ ದೇಹ ಸುಮ್ಮನಿದ್ದರೂ ಮನಸಿನೊಳಗೇ ಭಾಷೆ ಮೌನ ವಾಕ್ಯಗಳಾಗಿ ನುಡಿಯುತ್ತಿರುತ್ತದೆ. ಸಂಪೂರ್ಣ ಮೌನವೆಂದರೆ ಸಾವು ಮಾತ್ರವೇ ಇದ್ದೀತು. ಬದುಕು ಚಲಿಸುವುದು ಏನಿದ್ದರೂ ನುಡಿಯೊಳಗಾಗಿಯೇ.

ಪುತಿನ ಅವರ ಕವಿತೆ ನೆನಪಾಗುತ್ತಿದೆ. ಅದರ ಹೆಸರು ಯದುಗಿರಿಯ ಮೌನ ವಿಕಾಸ. ಮನುಷ್ಯರ ಬದುಕೆಲ್ಲವೂ ಮೌನದ ವಿಕಾಸವೇ ಇದ್ದೀತು. ಮೌನದ ವಿಕಾಸವೆಂದರೆ ಆಕಾರವಿಲ್ಲದ ಮೌನ ಸಹಜವಾಗಿ, ನಿರ್ಭಯವಾಗಿ ಮಾತಿನ ಆಕಾರ ಪಡೆಯುವುದೇ ಇದ್ದೀತು. ದ್ರೌಪದಿಯು ಸಭೆಯಲ್ಲಿ ಅವಮಾನಕ್ಕೆ ಒಳಗಾಗಿ ಕೇಳುವ ಪ್ರಶ್ನೆಗೆ ಹಿರಿಯರೆಲ್ಲ ಮೌನವಾಗಿದ್ದರು. ಆ ಮೌನದ ಹಿಂದೆ ಅಸಹಾಯಕತೆ ಇತ್ತೋ, ಸಂಪ್ರದಾಯದ ನೀತಿ ಇತ್ತೋ, ಭಯವಿತ್ತೋ, ಕಾರಣ ಏನೂ ಇದ್ದಿರಬಹುದು.

ಕಾರಣವೆನ್ನುವುದೆಲ್ಲ ಘಟನೆಯೊಂದು ನಡೆದ ಮೇಲೆ ನಮ್ಮ ಸಮಾಧಾನಕ್ಕೆ, ವ್ಯಾಖ್ಯಾನಕ್ಕೆ ಹುಡುಕಿಕೊಳ್ಳುವ ಸಂಗತಿಗಳು. ಆ ಹೊತ್ತಿನ ಹಿರಿಯರ ಮೌನವೂ ದುರಂತಕ್ಕೆ ಕಾರಣವಾಯಿತೆನ್ನುವುದು ನಿಜ. ಕುಂತಿ ಇನ್ನೂ ಕನ್ಯೆಯಾಗಿರುವಾಗಲೇ ಮಗುವನ್ನು ಪಡೆದ ಸಂಗತಿಯನ್ನು ಮೌನದಲ್ಲಿ ಅದ್ದಿದ್ದೂ ದುರಂತಕ್ಕೆ ಕಾರಣ. ಮೌನವನ್ನು ಮೀರುವುದಕ್ಕೂ ಧೈರ್ಯ ಬೇಕು.

ಗಂಟೆಗೆ ಇಪ್ಪತ್ತು ಜನ ಹೆಂಗಸರು ಅತ್ಯಾಚಾರಕ್ಕೆ ಗುರಿಯಾಗುತ್ತಿರುವಾಗ, ಕೋಟಿಗಟ್ಟಲೆ ಜನ ಹಸಿದಿರುವಾಗ, ಓದು ಬರಹದ ಅವಕಾಶ ಪಡೆಯಲಾಗದಿರುವಾಗ, ಅಸಮಾನತೆಯ ಕೆಡುಕು ಆರ್ಭಟಿಸುತ್ತಿರುವಾಗ ಹೀಗೆ ಸುಮ್ಮನೆ ಬೌದ್ಧಿಕ ಕುತೂಹಲದಿಂದ ಪ್ರೇರಿತವಾಗಿ ಭಾಷೆಯ ಬಗ್ಗೆಯೋ ಮತ್ತೊಂದರ ಬಗ್ಗೆಯೋ ತಿಳಿಯಲು ಬಯಸುವುದು ಅರ್ಥಹೀನ ಎಂಬ ಅಸಹಾಯಕತೆಯ ಮೌನವನ್ನು ಮೀರುವುದೂ ಅಗತ್ಯವಲ್ಲವೇ?

ಮೌನವಾಗಿರುವುದಕ್ಕೂ ಧೈರ್ಯ ಬೇಕು. ನುಡಿಯ ರೂಪ ತಾಳದಿದ್ದರೆ ನಮ್ಮ ವ್ಯಕ್ತಿತ್ವ ಇಲ್ಲವಾದೀತು ಅನ್ನುವ ಭಯವಿದ್ದರೆ ಮೌನವಾಗಿರಲು ಸಾಧ್ಯವಾಗದು. ಮೌನವಿರದಿದ್ದರೆ ಕೇಳಿಸಿಕೊಳ್ಳಲಾಗದು, ನೋಡಲಾಗದು. ಇರುವುದನ್ನು ಕಾಣುವುದಕ್ಕೆ, ಕೇಳುವುದಕ್ಕೆ ಅಹಂಕಾರ ಹೋಗಬೇಕು-ಇವೆಲ್ಲ ಆಧ್ಯಾತ್ಮದ ಮಾತು.

ನೋಡಬೇಕಾದುದನ್ನು ನೋಡದಂತೆ, ಹೇಳಬೇಕಾದುದನ್ನು ಹೇಳದಂತೆ ತಡೆಯುವುದು ಅಧಿಕಾರದ, ರಾಜಕಾರಣದ ಮಾತು. ಮಾತು ಆಡದೆಯೂ ನಮ್ಮ ಮನಸಿನೊಳಗಿರುವುದನ್ನು ಇನ್ನೊಬ್ಬರಿಗೆ ತಿಳಿಯುವಂತೆ ಆಗಬೇಕು ಎಂದು ಬಯಸುವುದು ನಡೆಸುವ ಸಾಮಾನ್ಯವಾಗಿ ವಿಫಲವೇ ಆಗುವ ಆದರ್ಶದ ಹುಟುಕಾಟ.

ಯಾವ ಸಂಗತಿಯನ್ನು ಮೌನದ ಮೂಲಕ ತಿಳಿಸಬೇಕು, ಯಾವುದನ್ನು ಮಾತಿನ ಮೂಲಕ ವ್ಯಕ್ತಪಡಿಸಬೇಕು ಅನ್ನುವುದು ಒಬ್ಬೊಬ್ಬರೂ ಕಲಿಯಬೇಕಾದ ವಿವೇಕ. ನುಡಿಯೊಳಗಾಗಿ ನಡೆಯುತ್ತ ನುಡಿಯು ನಡೆಗೆ, ನಡೆಯು ನುಡಿಗೆ ಪರಸ್ಪರ ಸೀಮೆಗಳಾಗಿರುವುದನ್ನು ಕಂಡುಕೊಳ್ಳುವುದು ಸಾಧನೆಯ ಸವಾಲು. ಅಭ್ಯಾಸವಾಗಿರುವ ರೂಢಿಯನ್ನು ಮುರಿಯದೆ `ಸತ್ಯ' ಅರಿವಾಗುವುದಿಲ್ಲ ಅನ್ನುತ್ತಾನೆ ನನ್ನ ಗೆಳೆಯ ರಾಮು.

ಮೌನದ ರೂಢಿ ಮುರಿದು ನುಡಿಯು ಆಕಾರತಾಳುವುದು, ನುಡಿಯ ರೂಢಿಯನ್ನು ಮುರಿದು ಮೌನವನ್ನು ಅನುಭವಿಸುವುದು ಇದು ನುಡಿಯೊಳಗಾಗಿ ನಡೆವ ಕ್ರಮ ಇದ್ದೀತು. ಇದರಲ್ಲಿ ಗೆಲುವು, ಸೋಲಿನ ಪ್ರಶ್ನೆಯಿಲ್ಲ, ಪ್ರಯತ್ನದ ಜೀವಂತಿಕೆ ಮಾತ್ರ ಇರುತ್ತದೆ, ಬದುಕಿನಲ್ಲಿ ಯಾವುದೂ ಮುಖ್ಯವಲ್ಲ, ಅಮುಖ್ಯವೂ ಅಲ್ಲ ಎಂಬ ಅರಿವಿನ ಹದದ ಹುಡುಕಾಟವಿರುತ್ತದೆ, ಅರಿವಿನ ಸ್ಫೋಟವಿರುತ್ತದೆ.

ನಮಸ್ಕಾರ.
......

ಐವತ್ತೈದು ವಾರಗಳ ಕಾಲ ಪ್ರಕಟಗೊಂಡ `ನುಡಿಯೊಳಗಾಗಿ' ಅಂಕಣ  
ಈ ಬರಹದೊಂದಿಗೆ  ಕೊನೆಗೊಳ್ಳುತ್ತಿದೆ.
-ಸಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT