ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌನದ ಕತ್ತಲೊಳಗೆ ಬೆಳ್ಳಿರೇಖೆ

Last Updated 2 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹಿಳೆಯರ ಸುರಕ್ಷತೆಗಾಗಿ ಎರಡು ಹೊಸ ಕಾನೂನುಗಳು ಅಸ್ತಿತ್ವಕ್ಕೆ ಬಂದ ವರ್ಷ ಇದು.  ಅಪರಾಧ ಕಾನೂನು ತಿದ್ದುಪಡಿ ಕಾಯಿದೆ ಹಾಗೂ ದುಡಿಯುವ  ಸ್ಥಳದಲ್ಲಿ ಲೈಂಗಿಕ ಕಿರುಕುಳ (ತಡೆ, ನಿಷೇಧ ಹಾಗೂ ಪರಿಹಾರ) ಕಾಯಿದೆ 2013,  ಮಹಿಳೆ ವಿರುದ್ಧದ ಅಪರಾಧಗಳಿಗೆ ಹೆಚ್ಚಿನ ರಕ್ಷಣೆ ಒದಗಿಸುವ ಆಶಯದೊಂದಿಗೆ ಸಂಸತ್ತಿನ ಅನುಮೋದನೆ ಪಡೆದುಕೊಂಡವು. ನಿಜ. ಕಾನೂನುಗಳ ಬಲ ಸಿಕ್ಕಿತು.

ಆದರೆ ಇವು ಮಹಿಳೆ ವಿರುದ್ಧದ ಅಪರಾಧಗಳನ್ನು ತಗ್ಗಿಸಲು ಸಾಧ್ಯವಾಗುತ್ತಿಲ್ಲ. ಸಾಂಕ್ರಾಮಿಕವೆನಿಸುವಂತೆ ಒಂದಾದ ಮೇಲೆ ಒಂದು ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಪ್ರಕರಣಗಳು ವರದಿ ಯಾಗುತ್ತಿರುವುದೇ ದೊಡ್ಡ ವಿಪರ್ಯಾಸ.  ಈ ಪ್ರಕರಣಗಳಲ್ಲಿ ಸಮಾಜದ ಗಣ್ಯ ವ್ಯಕ್ತಿಗಳೆನಿಸಿ ಕೊಂಡವರು, ಮಹಿಳಾ ಹಕ್ಕುಗಳ ಪರವಾಗಿರು ವವರು, ಪ್ರಭಾವಿಗಳು ಹಾಗೂ ಶಕ್ತರಾಗಿರುವ ವರು ಆರೋಪಿಗಳಾಗುತ್ತಿರುವುದು ಮತ್ತಷ್ಟು ಆಘಾತಕಾರಿ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯ ಮೂರ್ತಿ ಎ.ಕೆ. ಗಂಗೂಲಿ ಅವರು ಕಾನೂನು ಸಂಶೋಧಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದರೆ, ‘ತೆಹೆಲ್ಕಾ’ ಸಂಸ್ಥಾ ಪಕ ಸಂಪಾದಕ ತರುಣ್ ತೇಜ್‌ಪಾಲ್ ತಮ್ಮ ಕಿರಿಯ ಮಹಿಳಾ ಸಹೋದ್ಯೋಗಿ ಮೇಲೆ ಅತ್ಯಾ ಚಾರ ಎಸಗಿದ ಆರೋಪದಲ್ಲಿ ಬಂಧನಕ್ಕೊಳ ಗಾಗಿದ್ದು ಕಾನೂನು ಪ್ರಕ್ರಿಯೆಗೆ ಒಳಪಟ್ಟಿದ್ದಾರೆ.

ಹಾಗೆಯೇ, ಗೋವಾದಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಂದರ್ಭಕ್ಕೆ ಸ್ವಯಂ ಸೇವಕಿಯಾಗಿ ಆಗಮಿಸಿದ್ದ  ದೆಹಲಿಯ ಜವಾ ಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಗೆ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ನಿರ್ದೇಶನಾಲಯದ  ಅಧಿಕಾರಿಯೊಬ್ಬರು  ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೊಳಗಾಗಿದ್ದಾರೆ.

ನೋಮ್ ಚೋಮ್ಸ್‌ಕಿ  ಬೇರೊಂದು ಸಂದರ್ಭದಲ್ಲಿ ಹೇಳಿದ ಮಾತುಗಳನ್ನು ಇಲ್ಲಿ ಉಲ್ಲೇಖಿಸಬಹುದೆನಿಸುತ್ತದೆ. ‘ಪ್ರಬಲರಿಗೆ, ಅಪರಾಧಗಳೆಂಬುದು ಇತರರು ಮಾಡುವಂತಹದ್ದು’. ಇಂತಹದೊಂದು ಮನಸ್ಥಿತಿ ಅಥವಾ ಧೋರಣೆ ಅಂತರಂಗದ ಶೋಧನೆ ಗಾಗಲಿ, ಆತ್ಮಾವಲೋಕನಕ್ಕಾಗಲಿ ಅವಕಾಶ ಕಲ್ಪಿಸುವುದಿಲ್ಲ.

ತೇಜ್‌ಪಾಲ್ ಅವರು ಕುಟುಕು ಕಾರ್ಯಾ ಚರಣೆಗಳ ತನಿಖಾ ಪತ್ರಿಕೋದ್ಯಮಕ್ಕೆ ಹೆಸರಾ ದವರು. 2001ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ ರಕ್ಷಣಾ ಒಪ್ಪಂದಗಳ ಹಗರಣಗಳನ್ನು ಬಯಲಿಗೆಳೆದ ತೆಹೆಲ್ಕಾ ಕಾರ್ಯಾಚರಣೆಯಿಂದಾಗಿ (‘ಆಪರೇಷನ್ ವೆಸ್ಟ್ ಎಂಡ್’) ಅಂದಿನ ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಹಾಗೂ ಬಿಜೆಪಿ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಅವರು ರಾಜೀನಾಮೆ ನೀಡುವಂತಾಗಿತ್ತು.

ಈ ಕುಟುಕು ಕಾರ್ಯಾ ಚರಣೆ ಸಂದರ್ಭದಲ್ಲಿ ರಕ್ಷಣಾ ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಳ್ಳಲು ಕಾಲ್‌ ಗರ್ಲ್‌ಗಳನ್ನು ಬಳಸಿ ಕೊಳ್ಳಲಾಗಿತ್ತು. ಭ್ರಷ್ಟರನ್ನು ಬಯಲಿ ಗೆಳೆಯುವ ಗುರಿ ಸಾಧನೆಗಾಗಿ ಎಂತಹ  ಹೀನ ಮಾರ್ಗವನ್ನಾದರೂ ಬಳಸಬಹುದೆ ಎಂಬ ಪ್ರಶ್ನೆಯನ್ನು ಇದು ಎತ್ತಿತ್ತು. ಮಾರ್ಗ ಯಾವು ದಾದರೂ ಇರಲಿ  ಭ್ರಷ್ಟಾಚಾರದ ಹಗರಣ ಬಯಲಿಗೆ ಬಂತಲ್ಲ ಎಂದು ಅನೇಕ ಮಂದಿ ಈ ವಿಧಾನವನ್ನು  ಆಗ ಬೆಂಬಲಿಸಿದ್ದರು.

  ಆದರೆ ಅದೇನೇ ಇರಲಿ  ಈ ವಿಧಾನ ಮಾಧ್ಯಮದ ನೀತಿ ಸಂಹಿತೆಗಳಿಗೆ ವಿರೋಧವಾದುದಲ್ಲದೆ  ಮಹಿಳೆ ಯನ್ನು ಸರಕಾಗಿ ನೋಡುವ ದೃಷ್ಟಿಕೋನವನ್ನು ಹೊಂದಿರುವಂತಹದ್ದು ಎಂದು ಮತ್ತೆ ಕೆಲವರು ಟೀಕಿಸಿದ್ದರು. ಮಹಿಳೆಯನ್ನು ಸರಕಾಗಿ ನೋಡುವ ಈ ದೃಷ್ಟಿಕೋನವನ್ನು ತೇಜ್‌ಪಾಲ್ ವಿರುದ್ಧ  ಅತ್ಯಾಚಾರ ಆರೋಪ ಹೊರಿಸಿರುವ ಯುವ ಪತ್ರಕರ್ತೆ ತಮ್ಮ ಹೇಳಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ.

‘ತೇಜ್‌ಪಾಲ್‌ ಅವರು ನನ್ನ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ ಅತ್ಯಾಚಾರ ವ್ಯಾಪ್ತಿಗೆ ಒಳಪಡುತ್ತದೆ... ನಾನು ನನ್ನ ಘನತೆ ಉಳಿಸಿಕೊಳ್ಳಲು ಹೋರಾಡುತ್ತಿದ್ದೇನೆ. ನನ್ನ ದೇಹ ನನ್ನದೇ . ನನ್ನ ಉದ್ಯೋಗದಾತರ ಆಟದ ವಸ್ತುವಲ್ಲ’. ಹೌದು.  ಹೆಣ್ಣಿನ ಕುರಿತಾದ  ಈ ಮನಸ್ಥಿತಿ ಬದಲಾಗುವುದು ಎಂದಿಗೆ?  ಹೆಣ್ಣನ್ನು ದೇವತೆ  ಅಥವಾ ದಾಸಿ ಎಂಬಂತಹ ಎರಡು ಅತಿರೇಕ ಗಳಲ್ಲಿ ಪರಿಭಾವಿಸುವ  ಸಂಸ್ಕೃತಿ ಅಂತರ್ಗತ ವಾಗಿರುವುದು ಇದಕ್ಕೆ ಕಾರಣವೆ?  ತಾಯಿ, ಪತ್ನಿ, ಸೋದರಿ ಸಂಬಂಧಗಳಲ್ಲಿ ಹೆಣ್ಣನ್ನು ವೈಭವೀಕರಿಸುವ ನಮ್ಮ ಸಂಸ್ಕೃತಿ ಆಕೆಯನ್ನು ಸಹಜೀವಿಯಾಗಿ, ಸಹಜವಾಗಿ ಏಕೆ ಪರಿಗಣಿಸುವುದಿಲ್ಲ? 

ಸಮಾನತೆಯ ತಳಹದಿಯ ಪ್ರಗತಿಪರ ಸಮಾಜ ಕುರಿತು ತೀಕ್ಷ್ಣವಾಗಿ ಚಿಂತಿಸುವವರೂ  ಹೆಣ್ಣಿನ ವಿಚಾರದಲ್ಲಿ ಮಾತ್ರ ಯಥಾಸ್ಥಿತಿಯ ಸಂಪ್ರದಾಯವಾದಿಗಳೇ ಆಗಿರುವ ದ್ವಂದ್ವಗಳು  ಕಣ್ಣಿಗೆ ರಾಚುತ್ತಿರುತ್ತವೆ. ಹೋಟೆಲ್‌ನ  ಲಿಫ್ಟ್‌ನಲ್ಲಿ ಜರುಗಿದ್ದು  ‘ಕುಡಿತದ ಅಮಲಿನ ಚೇಷ್ಟೆ’ ಎಂದು ಸರಳವಾಗಿ ವ್ಯಾಖ್ಯಾನಿಸುವುದೂ  ಈ ಮನಸ್ಥಿತಿಯ ದ್ಯೋತಕವೆ.

ಆದರೆ  ‘ಅತ್ಯಾಚಾರ ಎಂಬುದು ಕಾಮ ಅಥವಾ ಸೆಕ್ಸ್‌ಗಷ್ಟೇ ಸಂಬಂಧಿಸಿದ್ದಲ್ಲ. ಅಧಿ ಕಾರ, ಪ್ರತಿಷ್ಠೆ  ಹಾಗೂ ಹೆಣ್ಣನ್ನು ಹೊಂದುವ ದರ್ಪವನ್ನೂ ಅದು ಪ್ರತಿನಿಧಿಸುತ್ತದೆ.   ಹೀಗಾಗಿ ಅತ್ಯಾಚಾರ ವಿರುದ್ಧದ ಹೊಸ ಕಾನೂನು  ಮುಖಹೀನ ಅಪರಿಚಿತರಿಗಷ್ಟೇ ಅಲ್ಲ ಶ್ರೀಮಂತರು ಹಾಗೂ  ಪ್ರಭಾವಿಗಳಿಗೂ  ಅನ್ವಯವಾಗಬೇಕು’ ಎಂದು ಯುವ ಪತ್ರಕರ್ತೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ತೇಜ್‌ಪಾಲ್ ವಿರುದ್ಧದ ದೂರು ಚುನಾ ವಣಾಪೂರ್ವ ರಾಜಕೀಯ ಸಂಚು’  ಎನ್ನುತ್ತಾ ಈ ವಿಷಯವನ್ನು ರಾಜಕೀಯಗೊಳಿಸುವ ಪ್ರಯತ್ನಗಳು ಈ ಮಧ್ಯೆ ನಡೆದಿವೆ.  ಆದರೆ ಇದು ದುಡಿಯುವ ಸ್ಥಳದಲ್ಲಿ ಲೈಂಗಿಕ ಕಿರುಕುಳ ದಂತಹ ಮುಖ್ಯ ವಿಷಯದ ಚರ್ಚೆಯನ್ನು ಮುಳುಗಿಸಿಬಿಡಬಾರದು. ಈ ಬಗ್ಗೆ ಯುವ ಪತ್ರಕರ್ತೆ ಹೇಳಿರುವ ಮಾತುಗಳು ಪ್ರಸ್ತುತ ವಾದದ್ದು.  ‘ತಮ್ಮ ಬದುಕು ಹಾಗೂ ದೇಹದ ಮೇಲೆ ನಿಯಂತ್ರಣ  ಹೊಂದಲು ಮಹಿಳೆಯರು ನಡೆಸುವ ಹೋರಾಟ ನಿಜಕ್ಕೂ ರಾಜಕೀಯವಾದದ್ದು.

ಆದರೆ ಸ್ತ್ರೀವಾದಿ ರಾಜಕಾರಣ ಹಾಗೂ ಅದರ ಕಾಳಜಿಗಳು  ನಮ್ಮ ರಾಜಕೀಯ ಪಕ್ಷಗಳ ಸೀಮಿತ ಪ್ರಪಂಚಕ್ಕಿಂತ ವ್ಯಾಪಕ ವಾದದ್ದು. ಹೀಗಾಗಿ ಲಿಂಗತ್ವ (ಜೆಂಡರ್), ಅಧಿ ಕಾರ  ಹಾಗೂ ಹಿಂಸೆಯ ಕುರಿತಾದ ಬಹು ಮುಖ್ಯ ಚರ್ಚೆಯನ್ನು ತಮ್ಮನ್ನು ಕುರಿತಾದ ಸಂಭಾಷಣೆಗಳಾಗಿ ಪರಿವರ್ತಿಸುವ ಆಮಿಷ ವನ್ನು ಕೈಬಿಡಬೇಕೆಂದು ನಮ್ಮ ರಾಜಕೀಯ ಪಕ್ಷಗಳಲ್ಲಿ ಕೋರುತ್ತೇನೆ. ನಾನು ಯಾರದೋ ಅಣತಿಯಂತೆ ವರ್ತಿಸುತ್ತಿದ್ದೇನೆ ಎಂಬಂತಹ ಮಾತುಗಳೂ ಇವೆ.  ಆದರೆ ತಮ್ಮ ಬಗೆಗಿನ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳಲು ಮಹಿಳೆಯರು ಸಮರ್ಥರಾಗಿದ್ದಾರೆ ಎಂಬು ದನ್ನು ಒಪ್ಪಿಕೊಳ್ಳಲೂ  ಇಷ್ಟಪಡದಂತಹ ವಾತಾವರಣ ಇದು’.

ಲೈಂಗಿಕ ಕಿರುಕುಳ ಎಂಬುದು  ‘ಸಂವಿಧಾನ ದಲ್ಲಿ ದತ್ತವಾಗಿರುವ  ಸಮಾನತೆ ಹಾಗೂ ಬದುಕುವ ಮೂಲಭೂತ ಹಕ್ಕುಗಳ ಉಲ್ಲಂಘನೆ’ ಎಂಬುದನ್ನು  ಲೈಂಗಿಕ ಕಿರುಕುಳ ವಿರುದ್ಧದ ಕಾಯಿದೆ   ಗುರುತಿಸಿದೆ.  ‘ಮಹಿಳೆ ವಿರುದ್ಧದ ಎಲ್ಲಾ ರೀತಿಯ ತಾರತಮ್ಯ  ನಿವಾರಣೆ ನಿರ್ಣಯವನ್ನು (‘ಸೀಡಾ’)  ಅಂತರ ರಾಷ್ಟ್ರೀಯ ಮಟ್ಟದಲ್ಲಿ ಭಾರತ ಸರ್ಕಾರ 1993ರಲ್ಲಿ ಅನುಮೋದಿಸಿದೆ.  ಈ ಪ್ರಕಾರ, ಲೈಂಗಿಕ ಕಿರುಕುಳಗಳಿಂದ ಮುಕ್ತವಾಗಿ ಘನತೆ ಯಿಂದ ಬದುಕುವ ಹಕ್ಕಿಗೆ ಅವಕಾಶಗಳನ್ನು ಕಲ್ಪಿಸಬೇಕಾದುದು ಸರ್ಕಾರದ ಕರ್ತವ್ಯ.

ಇದಕ್ಕಾಗಿ ಕಾನೂನು ಸಿದ್ಧವಾಗಿದೆ.  ಆದರೆ  ಎಷ್ಟರಮಟ್ಟಿಗೆ ಕಾನೂನು ಅನುಷ್ಠಾನ ಗೊಳ್ಳುತ್ತದೆ? ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಯವರ ಲೈಂಗಿಕ ಕಿರುಕುಳಗಳ ಬಗ್ಗೆ  ಯುವ ಕಾನೂನು ಸಂಶೋಧಕಿ ಬ್ಲಾಗ್‌ ನಲ್ಲಿ ಆರೋಪ ಮಾಡಿದಾಗ ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯವೇ ಮುಜುಗರದ ಸ್ಥಿತಿ ಎದುರಿಸುವಂತಾಯಿತು.  ಸುಪ್ರೀಂ ಕೋರ್ಟ್‌ನಲ್ಲಿ ಲೈಂಗಿಕ ಕಿರುಕುಳ ದೂರು ಸಮಿತಿಯೇ ಇರಲಿಲ್ಲ.

ಎಲ್ಲಾ ದುಡಿಯುವ ಸ್ಥಳಗಳಲ್ಲಿ ಕಡ್ಡಾಯವಾಗಿ ದೂರು ಸಮಿತಿ ಗಳಿರಬೇಕು ಎಂದು 1997ರಷ್ಟು ಹಿಂದೆಯೇ ವಿಶಾಖಾ ತೀರ್ಪು ನೀಡುವಾಗ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಈಗ ಕಳೆದ ವಾರ ವಷ್ಟೇ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ  ಅವರ ನೇತೃತ್ವದ 10 ಸದಸ್ಯರ ಸಮಿತಿಯನ್ನು ಸುಪ್ರೀಂಕೋರ್ಟ್   ರಚಿಸಿದೆ. ಎಂದರೆ ಹೊರಗಿನ ಸಮಾಜದಲ್ಲಿರುವಂತೆ ಕಾನೂನಿನ ವ್ಯವಸ್ಥೆಯೊಳಗೂ ಮಹಿಳೆ ಕುರಿತಾದ ತರತಮ ಭಾವಗಳಿಂದಾಗಿ  ಸಂವೇ ದನಾಶೂನ್ಯತೆ ಹಾಸುಹೊಕ್ಕಾಗಿದೆ. ಹೀಗಾಗಿ ಕಾನೂನಿನ ಬಲವನ್ನು ಉಪಯೋಗಿಸಿಕೊಳ್ಳಲು ಮಹಿಳೆಗೆ ಅನೇಕ ಅಡೆತಡೆಗಳಿದ್ದೇ ಇವೆ.

ಆದರೆ ಮತ್ತೊಂದು ವಿಶೇಷ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ. ದೆಹಲಿ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ನಂತರ ಆಕೆಯ ಸಾವು ಮಾಧ್ಯಮ ಗಳಲ್ಲಿ ಭಾರಿ ಪ್ರಚಾರ ಗಳಿಸಿಕೊಂಡಿತು.  ಹೀಗಾಗಿ  ಈ ಪ್ರಕರಣದ ವಿಚಾರಣೆಗೆ ಕೇಂದ್ರ ಸರ್ಕಾರವೂ ವಿಶೇಷ ಆಸಕ್ತಿ ವಹಿಸಿದ್ದು ತ್ವರಿತ ನ್ಯಾಯದಾನಕ್ಕೆ ಅವಕಾಶವಾಯಿತು.

ಹಾಗೆಯೇ ಯುವ ಕಾನೂನು ಸಂಶೋಧಕಿಯ ದೂರು ಅಂತರ್ಜಾಲದಲ್ಲಿ ಭಾರಿ ಪ್ರಚಾರ ಪಡೆದಾಗ  ಆ ದೂರು ಪರಿಶೀಲನೆಗೆ ತಕ್ಷಣವೇ ಸುಪ್ರೀಂ ಕೋರ್ಟ್ ಸಮಿತಿಯನ್ನು ರಚಿಸಿತು.  ಆದರೆ  ಇಂತಹ ಪ್ರತಿಸ್ಪಂದನಗಳು  ಬೇರೆಯದೇ ವರ್ಗ ವ್ಯವಸ್ಥೆಯೊಂದನ್ನು ಹುಟ್ಟು ಹಾಕುವ ಅಪಾಯವಿದೆ ಎಂಬ ಬಗ್ಗೆ ಕಾಳಜಿ ವಹಿಸ ಬೇಕಲ್ಲವೆ? ಸಾಮೂಹಿಕ ಅತ್ಯಾಚಾರಕ್ಕೊಳ ಗಾದ ದೆಹಲಿ ವಿದ್ಯಾರ್ಥಿನಿಯನ್ನು ಸರ್ಕಾರ ಸಿಂಗಪುರಕ್ಕೆ ವಿಮಾನದಲ್ಲಿ ಕಳಿಸಿ ಚಿಕಿತ್ಸೆ ಕೊಡಿಸುವುದಾದರೆ  ತನ್ನ ವೈದ್ಯಕೀಯ ವೆಚ್ಚ ವನ್ನೂ ಸರ್ಕಾರವೇಕೆ ಭರಿಸಬಾರದು ಎಂದು  ಈಗಾಗಲೇ ಒಬ್ಬರು ಆಸಿಡ್ ದಾಳಿ ಸಂತ್ರಸ್ತೆ  ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಎಂಟು ವರ್ಷಗಳ ಹಿಂದೆ ನಡೆದ ಈ ದಾಳಿ ಯಿಂದಾಗಿ ಮುಖ ಛಿದ್ರಗೊಂಡಿದ್ದು ಕಣ್ಣೊಂದು ಕುರುಡಾಗಿದೆ  ಎಂದು ಆಕೆ ಹೇಳಿ ಕೊಂಡಿದ್ದಾರೆ.  ಇದಕ್ಕಾಗಿ ಈ ವರ್ಷದ ಆರಂಭ ದಲ್ಲಿ ಸ್ಥಾಪಿಸಲಾದ ₨ 1,000 ಕೋಟಿಯ ‘ನಿರ್ಭಯ ನಿಧಿ’ಯನ್ನು ಏಕೆ ಬಳಸಿಕೊಳ್ಳ ಬಾರದು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಕೇಳಿದೆ. ಈ ನಿಧಿ ಈವರೆಗೆ ಯಾವುದಕ್ಕೂ ಬಳಕೆಯಾಗಿಲ್ಲ ಎಂಬುದೂ ನಮ್ಮ ಕಾರ್ಯವೈಖರಿಗೆ ಸಾಕ್ಷಿ.

  ಶಕ್ತ ರಾಜಕಾರಣಿಗಳು ಹಾಗೂ ಪ್ರಭಾವಿ ವ್ಯಕ್ತಿಗಳು ಮಹಿಳೆ ವಿರುದ್ಧ ನಡೆಸಿರುವ ಅಪ ರಾಧ ಪ್ರಕರಣಗಳ ವಿರುದ್ಧ  ಕರ್ನಾಟಕದಲ್ಲೂ  ದನಿ ಎತ್ತಲಾಗಿದೆ. ಹಾಲಿ ಶಾಸಕ ಜೀವರಾಜ್ ವಿರುದ್ಧ ಅತ್ಯಾಚಾರ, ಕಿರುಕುಳದ ದೂರು ದಾಖಲಾಗಿದೆ.  ಹಾಗೆಯೇ ಉಡುಪಿ ಜಿಲ್ಲೆಯ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ  ದೋಷಪೂರ್ಣ ತನಿಖೆಯ ವಿರುದ್ಧ ರಾಜ್ಯದಾದ್ಯಂತ ನಡೆದ ಪ್ರತಿಭಟನೆಗಳಿಂದಾಗಿ ತನಿಖೆಯನ್ನು  ಸಿಬಿಐಗೆ  ರಾಜ್ಯ ಸರ್ಕಾರ ವಹಿಸಬೇಕಾದಂತಹ ವಿದ್ಯಮಾನವೂ ಜರುಗಿದೆ.

ಲೈಂಗಿಕ ಅಪರಾಧಗಳ ವಿರುದ್ಧ ದೂರು ನೀಡುವುದು ಮಹಿಳೆಗೆ ಅಷ್ಟು ಸುಲಭ ವಾದದ್ದಲ್ಲ. ದೂರು ನೀಡಿದ ತಕ್ಷಣವೇ ಆಕೆಯ ವೇಷಭೂಷಣ, ವರ್ತನೆ,  ಸ್ನೇಹ ಸಂಬಂಧ ಗಳೆಲ್ಲಾ  ತೀವ್ರ ಪರಿಶೀಲನೆಗಳಿಗೆ  ಒಳಪಡು ತ್ತವೆ. ಕಚೇರಿಗಳ ಗಾಸಿಪ್‌ಗಳಿಗೆ  ಆಕೆ ಆಹಾರ ವಾಗುತ್ತಾಳೆ. ಸಾಮಾಜಿಕ ಮಟ್ಟದಲ್ಲೂ ನಕಾರಾತ್ಮಕ ಪ್ರತಿಕ್ರಿಯೆಗಳು ಹೊರಹೊಮ್ಮು ತ್ತವೆ.  ತೆಹೆಲ್ಕಾ ಹಗರಣದ ನಂತರ ಮಹಿಳೆ ಯರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಉದ್ಯೋಗ ದಾತರು ಹಿಂಜರಿಯುತ್ತಾರೆ  ಎಂಬಂತಹ ಮಾತುಗಳನ್ನು ಸಮಾಜವಾದಿ ಪಕ್ಷದ ಮುಖಂಡ ನರೇಶ್ ಅಗರ್‌ವಾಲ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

  ಹಾಗೆಯೇ, ತರಬೇತಿ ಅಭ್ಯರ್ಥಿಗಳನ್ನಾಗಿ (ಇಂಟರ್ನ್) ಮಹಿಳೆ ಯರನ್ನು ನೇಮಕ ಮಾಡಿಕೊಳ್ಳಲು ಕೆಲವು ನ್ಯಾಯಾಧೀಶರು ಹಾಗೂ ಹಿರಿಯ ವಕೀಲರು ಹಿಂಜರಿಯುತ್ತಿದ್ದಾರೆ ಎಂಬಂತಹ ಮಾತುಗಳೂ ಕೇಳಿ ಬಂದವು. ಲೈಂಗಿಕ ಕಿರುಕುಳ ಕುರಿತಂತೆ ಸ್ಪಷ್ಟತೆ ಇಲ್ಲದ ಇಂತಹ ಪ್ರತಿಕ್ರಿಯೆಗಳು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೂರಕವಾಗುವುದಿಲ್ಲ.

ಕೆಲಸದ ಸಂಸ್ಕೃತಿಯಲ್ಲಿ ಲಿಂಗತ್ವ ಸಂವೇದನಾ ಶೀಲತೆಯನ್ನು ಮೂಡಿಸುವ ಸಾಂಸ್ಥಿಕ ಪ್ರಯತ್ನ ಗಳ ಅಗತ್ಯವಂತೂ ಈಗ ತುರ್ತಿನದಾಗಿದೆ. ಮಹಿಳೆ, ಪುರುಷರ ನಡುವೆ ಸಮಾನ ನೆಲೆಯ, ಸಹಜವಾದ, ಆರೋಗ್ಯಕರ ಬಾಂಧವ್ಯ ಏರ್ಪಡ ಬೇಕು.  ತನ್ನ ಹಕ್ಕುಗಳಿಗೆ ಚ್ಯುತಿ ಬಂದಲ್ಲಿ ಹೋರಾಡುವ ಚೈತನ್ಯ ಹಾಗೂ ಆತ್ಮವಿಶ್ವಾಸ ವನ್ನು ಪ್ರದರ್ಶಿಸುವಂತಹ ಹೊಸ ಭಾರತೀಯ ದುಡಿಯುವ ಮಹಿಳೆಯ ಉದಯವಾಗಿರುವ ದನ್ನಂತೂ ಇತ್ತೀಚಿನ ಬೆಳವಣಿಗೆಗಳು ತೋರಿಸಿವೆ.

ಇದು ಲೈಂಗಿಕ ಕಿರುಕುಳಗಳ ವಲಯದಲ್ಲಿ ಆವರಿಸಿರುವ ಮೌನದ ಕತ್ತಲಲ್ಲಿ ಮೂಡಿರುವ ಚಿಕ್ಕದೊಂದು ಬೆಳ್ಳಿರೇಖೆ. ಮೌನವನ್ನು ಒಡೆಯುವ ದನಿಗಳು ಇವು. ತೆಹೆಲ್ಕಾದ ಯುವ ಪತ್ರಕರ್ತೆ ಮಾತುಗಳನ್ನಿಲ್ಲಿ ಉಲ್ಲೇಖಿಸ ಬಹುದು:  ‘ಈ ಬಿಕ್ಕಟ್ಟಿನಲ್ಲಿ ತೆಹೆಲ್ಕಾ ಸಂಸ್ಥೆ ಸಂಕಷ್ಟಕ್ಕೆ ಸಿಲುಕಿತು ಎಂದು ಕೆಲವರು ನೋವು ತೋಡಿಕೊಂಡಿದ್ದಾರೆ.  ಆದರೆ ಈ ಬಿಕ್ಕಟ್ಟು ಪತ್ರಿಕೆಯ ಮುಖ್ಯ ಸಂಪಾದಕರ ದೌರ್ಜನ್ಯದ ಹಿಂಸೆಯಿಂದ ಸೃಷ್ಟಿಯಾಗಿದೆಯೆ ಹೊರತು  ಆ ಕುರಿತು ಮಾತನಾಡಲು ಬಯಸಿದ ಉದ್ಯೋಗಿಯಿಂದಲ್ಲ ಎಂಬುದನ್ನು ನೆನಪಿಸಲು ಬಯಸುತ್ತೇನೆ’.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT