ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲಿಕ ಬದುಕಿಗೆ ಬೇಕು ಆಂತರ್ಯದ ಹೋರಾಟ

Last Updated 30 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

ಸಾರ್ವಜನಿಕ ಅಧಿಕಾರವನ್ನು ವೈಯಕ್ತಿಕ ಲಾಭಕ್ಕಾಗಿ ದುರುಪಯೋಗ ಮಾಡಿಕೊಳ್ಳುವುದೇ ಭ್ರಷ್ಟಾಚಾರ. ಇದು ಬಹಳ ಹಿಂದಿನಿಂದಲೂ ನಮ್ಮಲ್ಲಿ ಬೇರುಬಿಟ್ಟಿದೆ.

ಸರ್ಕಾರಿ ಅಧಿಕಾರಿಗಳು ನಡೆಸುವ ಹಣದ ಅವ್ಯವಹಾರ, ಸ್ವಜನ ಪಕ್ಷಪಾತದ ಜೊತೆಗೆ, ಸಾರ್ವಜನಿಕ ಮತ್ತು ಖಾಸಗಿ ವಲಯದ ಲಂಚ, ಸುಲಿಗೆ, ಪ್ರಭಾವ ಬೀರುವಿಕೆ, ವಂಚನೆ ಅಂತಹವುಗಳನ್ನೂ ಇದು ಒಳಗೊಳ್ಳುತ್ತದೆ. ಭ್ರಷ್ಟಾಚಾರವು ಬಡವರಲ್ಲಿ ಅಸಮಾನತೆ ಹೆಚ್ಚಲು ಕಾರಣವಾಗುತ್ತದೆ. ಹೊಸ ಸಹಸ್ರಮಾನದ ಅಭಿವೃದ್ಧಿ ಗುರಿ (ಎಂಡಿಜಿ) ಸಾಧನೆಗೆ ಅಡ್ಡಿ ಉಂಟು ಮಾಡುತ್ತದೆ.

ಸಾಮಾಜಿಕ ಸೇವೆಗೆ ಇರುವ ಅವಕಾಶಗಳನ್ನು ಕ್ಷೀಣಗೊಳಿಸುತ್ತದೆ. ಈ ಮೂಲಕ ಮೂಲ ಸೌಲಭ್ಯ, ಸಂಸ್ಥೆಗಳು ಮತ್ತು ಸಮಾಜ ಸೇವೆಗೆ ಹೂಡಬೇಕಾದ ಬಂಡವಾಳ ಬೇರೆಡೆ ಹರಿಯುವಂತೆ ಮಾಡಿ, ಮಾನವ ಅಭಿವೃದ್ಧಿಗೆ ತಡೆ ಒಡ್ಡುತ್ತದೆ.

ರಾಜಕೀಯ ಕ್ಷೇತ್ರದಲ್ಲಿನ ಭ್ರಷ್ಟಾಚಾರವು ಅಧಿಕೃತ ಪ್ರಕ್ರಿಯೆಗಳನ್ನು ಬುಡಮೇಲು ಮಾಡಿ, ಪ್ರಜಾಪ್ರಭುತ್ವ ಹಾಗೂ ಉತ್ತಮ ಆಡಳಿತ ವ್ಯವಸ್ಥೆಯನ್ನೇ ಶಿಥಿಲಗೊಳಿಸುತ್ತದೆ.
 
ಚುನಾವಣೆಗಳು ಮತ್ತು ಶಾಸನ ಸಂಸ್ಥೆಗಳಲ್ಲಿನ ಭ್ರಷ್ಟಾಚಾರವು ನೀತಿ ನಿರೂಪಣೆಯಲ್ಲಿನ ಪ್ರಾತಿನಿಧಿಕ ಹೊಣೆಗಾರಿಕೆಯನ್ನು ಕಡಿಮೆ ಮಾಡುತ್ತದೆ. ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಕಾನೂನು ನಿಯಮಾವಳಿಗಳನ್ನು ದಿಕ್ಕು ತಪ್ಪಿಸುತ್ತದೆ.

ಸಾರ್ವಜನಿಕ ಆಡಳಿತದಲ್ಲಿನ ಭ್ರಷ್ಟಾಚಾರ, ಸೇವಾ ಕಾರ್ಯಗಳ ಅಸಮಾನತೆಗೆ ಕಾರಣವಾಗುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಈ ಪಿಡುಗು ಸರ್ಕಾರದ ಸಾಂಸ್ಥಿಕ ಸಾಮರ್ಥ್ಯವನ್ನು ನಾಶ ಮಾಡುತ್ತದೆ.

ಈ ಮೂಲಕ, ಕಾರ್ಯವಿಧಾನ ಅಲಕ್ಷ್ಯಕ್ಕೆ ಒಳಗಾಗುತ್ತದೆ, ಸಂಪನ್ಮೂಲಗಳನ್ನು ಲಪಟಾಯಿಸಲಾಗುತ್ತದೆ ಮತ್ತು ಕಾರ್ಯದಕ್ಷತೆಯನ್ನು ಪರಿಗಣಿಸದೆಯೇ ಅಧಿಕಾರಿಗಳಿಗೆ ಬಡ್ತಿ ನೀಡಲಾಗುತ್ತದೆ.

ಲೇಖಕರಾದ ಪ್ರೊ.ವಿವೇಕ್ ದೇಬ್‌ರಾಯ್ ಮತ್ತು ಲವೀಶ್ ಭಂಡಾರಿ ಅವರು ತಮ್ಮ `ಕರಪ್ಷನ್ ಇನ್ ಇಂಡಿಯಾ: ದಿ ಡಿಎನ್‌ಎ ಅಂಡ್ ಆರ್‌ಎನ್‌ಎ~ ಎಂಬ ಪುಸ್ತಕದಲ್ಲಿ, ದೇಶದಲ್ಲಿನ ಸರ್ಕಾರಿ ಅಧಿಕಾರಿಗಳು 2011ರಲ್ಲಿ ಭ್ರಷ್ಟಾಚಾರದ ಮೂಲಕ ಗಳಿಸಿರುವ ಹಣದ ಮೊತ್ತ 92,122 ಕೋಟಿ ರೂಪಾಯಿ (18.42 ಶತಕೋಟಿ ಡಾಲರ್) ಇರಬಹುದು ಎಂದು ಅಂದಾಜಿಸಿದ್ದಾರೆ.

ಇದು ರಾಷ್ಟ್ರದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಶೇ 1.26ರಷ್ಟಾಗುತ್ತದೆ. ಪ್ರತಿ ದಿನದ  ಪತ್ರಿಕೆಗಳು ಟಿ.ವಿ.ಗಳಲ್ಲಿ ಒಂದಲ್ಲ ಒಂದು ಭ್ರಷ್ಟಾಚಾರದ ಹಗರಣಗಳೇ ರಾರಾಜಿಸುತ್ತವೆ.
 
ಪ್ರತಿ ಹಗರಣವೂ ಒಂದಕ್ಕಿಂತ ಒಂದು ದೊಡ್ಡದಾಗಿಯೇ ಇರುತ್ತದೆ. 2ಜಿ ತರಂಗಾಂತರ ಹಗರಣ ಅತ್ಯಂತ ದೊಡ್ಡದು ಎಂದು ಭಾವಿಸಿದ್ದ ನಮಗೆ ಕಲ್ಲಿದ್ದಲು ಹಗರಣದ ಮುಂದೆ ಅದು ಏನೇನೂ ಅಲ್ಲ ಅನ್ನಿಸಿತು.

ಇದನ್ನೆಲ್ಲಾ ಕಂಡು ಆರಂಭದ ದಿನಗಳಲ್ಲಿ ಜನರಲ್ಲಿ ಮೂಡಿದ ಸಿಟ್ಟು ಕಾಲಕ್ರಮೇಣ ಈ ವ್ಯವಸ್ಥೆಯು ನಮ್ಮನ್ನೆಲ್ಲಾ ಅಧೋಗತಿಗೆ ತಳ್ಳುತ್ತಿದೆಯೇನೋ ಎಂಬಂತಹ ಹತಾಶೆಯನ್ನು ಉಂಟು ಮಾಡಿತು. ನಂತರ ಅಣ್ಣಾ ಹಜಾರೆ ಆರಂಭಿಸಿದ ಆಂದೋಲನದಿಂದ ಜನರಲ್ಲಿ ಭರವಸೆ ಮೂಡಲು ಆರಂಭವಾಯಿತು.
 
ಆದರೆ ಈಗ ಈ ಆಂದೋಲನವೂ ದುರ್ಬಲವಾಗಿದೆ. ಜನರಲ್ಲಿ ದುಃಖ, ಅಸಹಾಯಕತೆ ಮನೆ ಮಾಡಿ ಅವರು ಅಧೀರರಾಗುವಂತೆ ಮಾಡಿದೆ. ವ್ಯವಸ್ಥೆ ಇಷ್ಟೊಂದು ಕೊಳೆತಿರುವ ಈ ಸಂದರ್ಭದಲ್ಲಿ ನಿಜಕ್ಕೂ ನಾವು ಏನನ್ನಾದರೂ ಮಾಡಲು ಸಾಧ್ಯವೇ?

ಕಳೆದ ಎರಡು ತಿಂಗಳುಗಳಲ್ಲಿ ನನ್ನನ್ನು ಭೇಟಿ ಮಾಡಿದ ವಿವಿಧ ಕ್ಷೇತ್ರಗಳ ಜನರು ಸರ್ಕಾರಿ ವ್ಯವಸ್ಥೆಯಲ್ಲಿ ತಮಗಾದ ಕಿರುಕುಳ ಮತ್ತು ಹಲವು  ಕೆಟ್ಟ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಅತ್ಯಂತ ಜಾಗೃತರಾದ  ಕಾರ್ಯಕರ್ತರೊಬ್ಬರು ತಾವು ಎಷ್ಟೇ ಎಚ್ಚರಿಕೆ ವಹಿಸಿದರೂ ನೋಂದಣಿ ಕಚೇರಿಯಲ್ಲಿ ಲಂಚ ನೀಡಬೇಕಾಗಿ ಬಂತು ಎಂದು ಹೇಳಿದರು.
 
ತಮ್ಮ ಕಾರ್ಯಕ್ಕೆ ಸಂಬಂಧಿಸಿದ ರಸೀದಿಗಳನ್ನು ಕೇಳಿ ಪಡೆದಾಗಷ್ಟೇ ಅಲ್ಲಿ ತಾವು ನೀಡಿ ಹಣದಲ್ಲಿ 200 ರೂಗಳಿಗೆ ಲೆಕ್ಕ ಸಿಕ್ಕಿಲ್ಲ ಎಂಬುದು ಅವರ ಅರಿವಿಗೆ ಬಂತು. ಮತ್ತೊಂದು ಪ್ರಕರಣದಲ್ಲಿ ತಾವು ಕಷ್ಟಪಟ್ಟು ಸಂಪಾದಿಸುವ ಹಣ ಹೇಗೆ ಅನ್ಯರ ಪಾಲಾಗುತ್ತದೆ ಎಂಬುದನ್ನು ಬೀದಿ ವ್ಯಾಪಾರಿಗಳು ನನಗೆ ತಿಳಿಸಿದರು.

ತಮ್ಮ ವ್ಯಾಪಾರ ಮುಂದುವರಿಸಬೇಕಾದರೆ ಸ್ಥಳೀಯ ಪುಢಾರಿಗಳು, ಗಸ್ತು ಪೊಲೀಸರು ಮತ್ತು ನಗರಪಾಲಿಕೆಯ ಆಹಾರ ನಿರೀಕ್ಷಕರಿಗೆ ನಿತ್ಯವೂ ಹಣ ನೀಡಬೇಕಾದ ಅನಿವಾರ್ಯತೆ ಬಗ್ಗೆ ಅಲವತ್ತುಕೊಂಡರು.

ರಿಯಲ್ ಎಸ್ಟೇಟಿಗರು, ಪೊಲೀಸರು ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಂದ ಎದುರಿಸುತ್ತಿರುವ ನಾನಾ ಬಗೆಯ ಸಂಕಷ್ಟಗಳನ್ನು ವಸತಿ ಪ್ರದೇಶವೊಂದರ ನಿವಾಸಿಗಳು ನನ್ನ ಬಳಿ ತೋಡಿಕೊಂಡರು.

ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಆಯಾ ವಿಭಾಗಗಳ ಮುಖ್ಯಸ್ಥರೇ ಅದರಲ್ಲಿ ಮುಳುಗಿಹೋಗಿರುವುದರಿಂದ ಜನರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಕೆಲವರು ತೆರೆದಿಟ್ಟರು.
 
ತಮ್ಮ ಕಚೇರಿಯ ಭಾಗವೇ ಆಗಿರುವ  ಆದರೆ ಭ್ರಷ್ಟಾಚಾರದಲ್ಲಿ ಕೈಜೋಡಿಸದ ತಮಗೆ ಹಿರಿಯ ಸಹೋದ್ಯೋಗಿಗಳು ನೀಡುವ ಕಿರುಕುಳವನ್ನು ವಿಮಾ ಕಂಪೆನಿಯೊಂದರ ಮಹಿಳಾ ಉದ್ಯೋಗಿ ವಿವರಿಸಿದರು.

ವರ್ತುಲ ರಸ್ತೆಯಲ್ಲಿ ಬೃಹತ್ ಲಾರಿಗಳನ್ನು ನಿಲ್ಲಿಸುತ್ತಿರುವುದರಿಂದ ಉಂಟಾಗುತ್ತಿದ್ದ ಸಂಚಾರ ದಟ್ಟಣೆಯ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ನಾನು ದೂರು ನೀಡಿದ್ದೆ. ಆದರೂ ಯಾವುದೇ ಪ್ರಯೋಜನವಾಗಲಿಲ್ಲ.

ಈ ಬಗ್ಗೆ ನಾನು ಲಾರಿ ಚಾಲಕರನ್ನು ವಿಚಾರಣೆ ಮಾಡಿದಾಗ ನಾನು ದೂರು ನೀಡಿದ್ದರಿಂದ, ತಮ್ಮಿಂದ ಅನಧಿಕೃತವಾಗಿ ವಸೂಲು ಮಾಡುತ್ತಿದ್ದ ನಿಲುಗಡೆ ಶುಲ್ಕವನ್ನು ಇನ್ನಷ್ಟು ಹೆಚ್ಚಿಸಲಾಯಿತೇ ಹೊರತು ಬೇರೇನೂ ಆಗಲಿಲ್ಲ ಎಂದು ಅವರು ನನಗೆ ತಿಳಿಸಿದರು. ಮತ್ತೊಂದು ಪ್ರಕರಣದಲ್ಲಿ, ಹೊಸ ರೆಸ್ಟೋರೆಂಟ್‌ನ ಮಾಲೀಕರೊಬ್ಬರು ತಾವು ಎಲ್ಲ ನೀತಿ ನಿಯಮಗಳನ್ನು ಪಾಲಿಸಿದರೂ ಎದುರಿಸಬೇಕಾಗಿ ಬಂದ ಕಷ್ಟಗಳನ್ನು ನನಗೆ ವಿವರಿಸಿದರು.

ಎಲ್ಲ ನಿಯಮಗಳನ್ನೂ ಪಾಲಿಸಿದರೆ ಲಂಚಕ್ಕಾಗಿ ತಮ್ಮನ್ನು ಯಾರೂ ಪೀಡಿಸುವುದಿಲ್ಲ ಎಂದು ಅವರು ಭಾವಿಸಿದ್ದರು. ನಮ್ಮ ಜನ ಲಂಚಕ್ಕಾಗಿ ಹೊಸ ಹೊಸ ಮಾರ್ಗಗಳನ್ನು ಹುಡುಕುವುದರಲ್ಲಿ ನಿಸ್ಸೀಮರು ಎಂಬುದು ಅವರಿಗೆ ತಿಳಿದಿರಲಿಲ್ಲ.
 
ಆದರೆ ಒಂದಷ್ಟು ಲಂಚ ಕೊಟ್ಟು ಕೈತೊಳೆದುಕೊಂಡು ತಮ್ಮ ವ್ಯಾಪಾರದ ಕಡೆ ಗಮನ ಕೇಂದ್ರೀಕರಿಸುವುದೇ ಲೇಸು ಎಂಬ ವಿಷಯ ಕ್ರಮೇಣ ಅವರ ಅರಿವಿಗೆ ಬಂತು.

ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳ ನಿವೃತ್ತ ನ್ಯಾಯಮೂರ್ತಿಗಳು ಮತ್ತು ಸೇವಾನಿರತ ನ್ಯಾಯಮೂರ್ತಿಯೊಬ್ಬರೊಂದಿಗೆ ನಡೆಸಿದ ಸಂವಾದಗಳಿಂದ ನ್ಯಾಯಾಂಗ ಎದುರಿಸುತ್ತಿರುವ ಸವಾಲುಗಳು ಮತ್ತು ಉನ್ನತ ಮಾನದಂಡಗಳ ಬಗ್ಗೆ ಜನರಿಗಿದ್ದ ಗ್ರಹಿಕೆ ಹೇಗೆ ಅಲುಗಾಡುತ್ತಿದೆ ಎಂಬುದು ನನಗೆ ತಿಳಿದುಬಂತು.
 
ಎಚ್.ಡಿ ಕೋಟೆ ತಾಲ್ಲೂಕಿನ ಕೆಲ ಯುವಕರು ತಮ್ಮ ಊರುಗಳಲ್ಲಿ ನಡೆಯುವ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಆಗುತ್ತಿರುವ ಭ್ರಷ್ಟಾಚಾರವನ್ನು ಗಮನಿಸಿದ್ದರು.

ಈ ವಿಷಯವನ್ನು ಅವರು ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಮತ್ತು ರಾಜಕಾರಣಿಗಳ ಗಮನಕ್ಕೆ ತಂದಿದ್ದರೂ ಫಲಿತಾಂಶ ಶೂನ್ಯವಾಗಿತ್ತು. ನ್ಯಾಯ ಪಡೆಯಲು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಲು ತಾವು ಏನು ಮಾಡಬೇಕು ಎಂಬುದನ್ನು ಅವರು ತಿಳಿಯಬಯಸಿದ್ದರು. ಏನೇ ಆದರೂ, ಇದೊಂದು ಉತ್ತರಿಸಲು ಕಷ್ಟವಾದ ಪ್ರಶ್ನೆ.
 
ಇದಕ್ಕಿಂತಲೂ ಅರಗಿಸಿಕೊಳ್ಳಲಾಗದ ಸಂಗತಿಯೆಂದರೆ, ತಮಗೆ ಬಂದ ಬೆದರಿಕೆ ಮತ್ತು ತಮ್ಮ ಊರಿನ ಜನರೇ ತಮ್ಮನ್ನು `ಸಮಸ್ಯೆಯ ಸೃಷ್ಟಿಕರ್ತರು~ ಎಂಬಂತೆ ಬಿಂಬಿಸಲು ಹೊರಟಿದ್ದು! ಕೆಲ ಹಿರಿಯ ಪತ್ರಕರ್ತರು `ಕಾಸಿಗಾಗಿ ಸುದ್ದಿ~ಯ ವ್ಯವಸ್ಥೆ ಸಹ ಭ್ರಷ್ಟಾಚಾರದ ಮತ್ತೊಂದು ರೂಪ ಎಂದು ನನ್ನ ಬಳಿ ಹೇಳಿದ್ದರು.  ಪ್ರಜಾಪ್ರಭುತ್ವದ ಕಾವಲುಗಾರನಾಗಬೇಕಿದ್ದ ಮಾಧ್ಯಮ ರಂಗವೂ ಮೊದಲಿನಂತಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ನಾವು ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾದರೂ ಹೇಗೆ? ಈ ಭ್ರಷ್ಟ ವ್ಯವಸ್ಥೆಯು ತಾನೇ ತಾನಾಗಿ ಶುದ್ಧವಾಗುತ್ತದೆ ಎಂದು ನಂಬಲು ಸಾಧ್ಯವೇ? ಉತ್ತಮ ಆಡಳಿತ ಎಂಬುದು ಕೇವಲ ಜನಸಾಮಾನ್ಯರ ಕನಸಾಗಷ್ಟೇ ಉಳಿದುಹೋಗುವುದೇ? ಇದನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಭ್ರಷ್ಟಾಚಾರ ಎಂಬುದು ಸಂಕೀರ್ಣವಾದ ಪೆಡಂಭೂತ ಎಂಬುದನ್ನೂ ಗ್ರಹಿಸಬೇಕಾಗುತ್ತದೆ. ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಸರಳ ಪರಿಹಾರಗಳಿಲ್ಲ ಎಂಬುದು ಸ್ಪಷ್ಟ.
 
ಇದನ್ನು ನಾವು ವಿಶಾಲವಾದ ಹಿನ್ನೆಲೆಯಲ್ಲೇ ನೋಡಬೇಕಾಗುತ್ತದೆ. ಆಗಷ್ಟೇ ನಾವು ಅದನ್ನು  ಸರಿಯಾಗಿ ತಿಳಿದುಕೊಂಡು, ನಮ್ಮ ವಾತಾವರಣ ಭ್ರಷ್ಟಾಚಾರಕ್ಕೆ ಪೂರಕವಾಗಿದೆ ಅಥವಾ ಅದಕ್ಕೆ ಪ್ರತಿರೋಧ ಒಡ್ಡುತ್ತಿದೆಯೇ ಎಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬಹುದು.

ಭ್ರಷ್ಟಾಚಾರವನ್ನು ಸಂಘಟಿತ ಒಳಸಂಚು ಮತ್ತು ಒತ್ತಾಯಪೂರ್ವಕ ಎಂದು ಎರಡು ವಿಭಾಗಗಳನ್ನಾಗಿ ವಿಂಗಡಿಸಬಹುದು. ಇಲ್ಲಿ ಲಂಚ ನೀಡುವವನು ಮತ್ತು ಪಡೆಯುವವನು ಇಬ್ಬರೂ ಸೇರಿ ವ್ಯವಸ್ಥೆಯನ್ನು ಛಿದ್ರಗೊಳಿಸುತ್ತಾರೆ. ಇದಕ್ಕೆ 2ಜಿ ಹಗರಣವನ್ನು ಉದಾಹರಿಸಬಹುದು.

ಟೆಲಿಕಾಂ ಕಂಪೆನಿಗಳು ತಮ್ಮ ಗುರಿ ಸಾಧನೆಗಾಗಿ ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳ ಜೊತೆ ಕೈಜೋಡಿಸಿ ನಡೆಸಿದ ಭ್ರಷ್ಟಾಚಾರ ಇದಕ್ಕೊಂದು ಉದಾಹರಣೆ. ಹೆಲ್ಮೆಟ್ ಧರಿಸದ ಕಾರಣಕ್ಕಾಗಿ ತನ್ನನ್ನು ಹಿಡಿದ ಸಂಚಾರ ಪೊಲೀಸ್ ಪೇದೆಗೆ ಯುವಕನೊಬ್ಬ ಲಂಚ ನೀಡುವುದು ಸಹ ಇಂಥದೇ ಭ್ರಷ್ಟಾಚಾರ ಆಗುತ್ತದೆ.

ಒತ್ತಾಯಪೂರ್ವಕ ಭ್ರಷ್ಟಾಚಾರದಲ್ಲಿ ಒಬ್ಬ ವ್ಯಕ್ತಿ ಬಲಿಪಶು ಆಗುತ್ತಾನೆ. ತಾನು ಮಾಡಿಸಿಕೊಳ್ಳಬೇಕಾದ ಕೆಲಸಕ್ಕಾಗಿ ಲಂಚ ನೀಡುವಂತೆ  ಇಲ್ಲಿ ವ್ಯಕ್ತಿಯನ್ನು ಒತ್ತಾಯಿಸಲಾಗುತ್ತದೆ. ಇದಕ್ಕೆ ಸಣ್ಣ ಉದಾಹರಣೆ ಎಂದರೆ, ರೈತನೊಬ್ಬ ತನ್ನ ಭೂ ದಾಖಲೆಗಳಿಗಾಗಿ ಗ್ರಾಮ ಲೆಕ್ಕಾಧಿಕಾರಿಗೆ ಲಂಚ ನೀಡುವುದು.
 
ಇಲ್ಲಿ ಭ್ರಷ್ಟ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಲು ಅವರಿಗೆ ಇಷ್ಟ ಇಲ್ಲದಿದ್ದರೂ ಅನ್ಯ ಮಾರ್ಗ ಇರುವುದಿಲ್ಲ. ಯಾವಾಗ ಒಬ್ಬ ವ್ಯಕ್ತಿಗೆ ತಾನು ಭ್ರಷ್ಟಾಚಾರಕ್ಕೆ ಬಲಿಪಶು ಆದೆ ಎಂಬ ಭಾವನೆ ಮೂಡಿ ದೂರು ನೀಡಲು ಮುಂದಾಗುತ್ತಾನೋ ಆಗ ಮಾತ್ರ ಲೋಕಾಯುಕ್ತ ಮತ್ತು ಲೋಕಪಾಲ್‌ನಂತಹ ಸಂಸ್ಥೆಗಳು ನೆರವಿಗೆ ಬರಲು ಸಾಧ್ಯ.

ಭಾರತದಲ್ಲಿ ಕೇವಲ ಶೇ 30ರಷ್ಟು ಭ್ರಷ್ಟಾಚಾರ ಮಾತ್ರ ಒತ್ತಾಯಪೂರ್ವಕ ಎಂದು ಅಂದಾಜಿಸಲಾಗಿದೆ. ಇನ್ನುಳಿದ ಶೇ 70ರಷ್ಟು ಭ್ರಷ್ಟಾಚಾರ ಸಂಘಟಿತ ಒಳಸಂಚಿನಿಂದ ನಡೆಯುವಂತದ್ದು. ಪ್ರಾಮಾಣಿಕತೆ ಮತ್ತು ಮೌಲ್ಯಗಳು ಕಿಲುಬುಗಟ್ಟಿರುವುದನ್ನು ಇದು ಸೂಚಿಸುತ್ತದೆ. ಈ ಸಂಗತಿ ಕೇಳಿ ಅನೇಕರಿಗೆ ನಿರಾಶೆ ಆಗಬಹುದು.
 
ಆದರೆ ನಾನು ಮಾತ್ರ, ಭ್ರಷ್ಟಾಚಾರ ವಿರುದ್ಧದ ಜನಾಂದೋಲನಕ್ಕೆ ಇನ್ನೂ ಅವಕಾಶ ಇದೆ ಎಂಬ ಆಶಾಭಾವನೆಯನ್ನೇ ಹೊಂದಿದ್ದೇನೆ. ಸಂಘಟಿತ ಒಳಸಂಚಿನ ಭ್ರಷ್ಟಾಚಾರದ ವಿರುದ್ಧ ಹೋರಾಡಲು ನಾವು ಮಾಡಬೇಕಾದುದು ಇಷ್ಟೇ; ಅದೆಂದರೆ ಮೊದಲು ನಾವು ಪ್ರಾಮಾಣಿಕರಾಗಿ ಇರಲು ಅಂತರಂಗದಲ್ಲಿ ತೀರ್ಮಾನಿಸಿದರೆ ಸಾಕು.
 
`ಯಾವ ಬದಲಾವಣೆಯನ್ನು ಬಯಸುವಿರೋ ಅದನ್ನು ಮೊದಲು ನಿಮ್ಮಲ್ಲೇ ಮಾಡಿಕೊಳ್ಳಿ~ ಎಂಬ ಗಾಂಧೀಜಿ ಅವರ ಸರಳ ಉಕ್ತಿಯೇ ಇದಕ್ಕೆ ಪರಿಣಾಮಕಾರಿ ಮಾರ್ಗೋಪಾಯ. ಇಷ್ಟೆಲ್ಲ ವಿಚಾರಗಳ ನಡುವೆಯೂ ಕೊನೆಯದಾಗಿ ಉಳಿದಿರುವುದು ನಮ್ಮ ಆಂತರ್ಯದ ಹೋರಾಟ ಮಾತ್ರ.

ಜನಸಾಮಾನ್ಯರಾದ ನಾವು ಎದೆಸೆಟೆಸಿ ನಿಂತು,  ಪ್ರಾಮಾಣಿಕರಾಗಿ ಇರಬೇಕೆಂದು ನಿರ್ಧರಿಸಲು ಸಾಧ್ಯವೇ? ಅದೇ ರೀತಿ ಈ ನೆಲದ ಕಾನೂನುಗಳಿಗೆ ಬದ್ಧರಾಗಿ ಇರುತ್ತೇವೆ ಎಂಬ ಸಂಕಲ್ಪವನ್ನು ಮಾಡಬಹುದೇ? ಹೀಗೆ ಮಾಡಿದಾಗ ಮಾತ್ರ ಭ್ರಷ್ಟಾಚಾರ ವಿರುದ್ಧದ ಸಮರದಲ್ಲಿ ನಾವು ನಿಜವಾದ ಗೆಲುವನ್ನು ಕಾಣಲು ಸಾಧ್ಯ.

ನಾವು ಹೀಗೆ ಪ್ರಾಮಾಣಿಕರಾಗಿ ಇದ್ದಾಗಲಷ್ಟೇ ಕಾನೂನು ಮತ್ತು ಲಂಚ ವಿರೋಧಿ ಸಂಸ್ಥೆಗಳು ಭ್ರಷ್ಟಾಚಾರ ವಿರೋಧಿ ವಾತಾವರಣವನ್ನು ನಿರ್ಮಿಸಬಹುದು.
 
ಅಲೆಗೆ ಎದುರಾಗಿ ಧೈರ್ಯದಿಂದ ನಿಂತು ಯಾವುದೇ ಸಂದರ್ಭ ಎದುರಾದಾಗಲೂ ಮೌಲ್ಯಾಧಾರಿತ ಜೀವನ ನಡೆಸುವ ಸಂಕಲ್ಪ ಮಾಡಿದಾಗ ಮಾತ್ರ ವ್ಯವಸ್ಥೆಯಲ್ಲಿ ಬದಲಾವಣೆಯ ನಿರೀಕ್ಷೆ ಸಾಧ್ಯ.

 (ನಿಮ್ಮ ಅನಿಸಿಕೆ ತಿಳಿಸಿ; editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT