ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಗಳ ಪಲ್ಲಟದ ಕಾಲ

Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಎರಡು ವರ್ಷಗಳ ಹಿಂದಿನ ಮಾತು. ಬಹರೀನ್‌ನಲ್ಲಿ ಒಂದು ಸಮಾರಂಭ. ಅಲ್ಲಿನ ಕನ್ನಡಿಗರಿಗೆ ಕನ್ನಡ ಹಬ್ಬ ಮಾಡುವುದೊಂದು ವಾರ್ಷಿಕ ಸಂಭ್ರಮ. ಅಂದಿನ ಸಮಾರಂಭದ ಸಂಜೆಯ ಅತಿಥಿಯಾಗಿ ನಟ ಪುನೀತ್‌ ರಾಜ್‌ಕುಮಾರ್‌ ಕುಟುಂಬ ಸಮೇತ ಆಗಮಿಸಿದ್ದರು. ಸಂಜೆಯ ರಸಮಂಜರಿ ಕಾರ್ಯಕ್ರಮ, ಸ್ಥಳೀಯ ಕನ್ನಡಿಗರ ಪ್ರತಿಭಾ ಪ್ರದರ್ಶನ ಮೇರೆ ಮೀರಿತ್ತು.

ಅಲ್ಲಿನ ಯುವಕರಿಗೆ ಪುನೀತ್‌ ಸಿನಿಮಾದ ಹಾಡುಗಳಿಗೆ ಹೆಜ್ಜೆ ಹಾಕುವ, ಅದನ್ನು ಪುನೀತ್‌ ಮುಂದೆಯೇ ಪ್ರದರ್ಶಿಸುವ ಅತ್ಯುತ್ಸಾಹವೂ ಇತ್ತು. ಕೊನೆಯ ಹಂತದಲ್ಲಿ ವೇದಿಕೆಯ ಮೇಲಿದ್ದ ಪುನೀತ್‌ ಅವರಿಂದ ಪುಟ್ಟ ಭಾಷಣ. ಭಾಷಣದ ನಂತರ ಸಭಾಂಗಣದ ಒಂದು ತುದಿಯಿಂದ ‘ಹಾಡು... ಹಾಡು...’ ಎಂಬ ಬೇಡಿಕೆ ಬಂತು. ಚಿತ್ರನಟರನ್ನು ಕಂಡಾಗಲೆಲ್ಲ ಅವರಿಂದ ಒಂದು ಹಾಡು ಹೇಳಿಸುವ, ಅದನ್ನು ಕೇಳಿ ಆನಂದಿಸುವ ಒಂದು ಪರಂಪರೆ ನಮ್ಮ ಜನಪದದಲ್ಲಿ ವರದಾಚಾರ್ಯರ ಕಾಲದಿಂದಲೂ ನಡೆದುಬಂದಿದೆ.

ನಾಟಕಗಳಲ್ಲಿ ‘ಒನ್ಸ್ ಮೊರ್’ ಎಂಬ ಕೂಗು ಬಂತೆಂದರೆ, ಆ ಹಾಡು ಜನಪ್ರಿಯವಾಯಿತು ಎಂತಲೋ, ಆ ನಟ ಖ್ಯಾತನಾದನೆಂತಲೋ ಅರ್ಥ, ಪುನೀತ್‌ ಬಾಲ್ಯದಲ್ಲೇ ‘ಕಾಣದಂತೆ ಮಾಯವಾದನೋ...’ ಮೂಲಕ ಹಾಡುಗಾರನೂ ಹೌದು ಎನ್ನುವುದನ್ನು ಸಾರಿದ್ದರಿಂದಲೋ ಏನೋ ಕೆಲವರು ಪುನೀತರಿಂದ ಹಾಡು ಕೇಳಬಯಸಿದ್ದರು.

ಸಂಕೋಚಪಟ್ಟ ಪುನೀತ್‌, ನಾನು ಹಾಡು ಹೇಳಲು ರೆಡಿಯಾಗಿ ಬಂದಿಲ್ಲ... ಎಂದು ಹಿಂಜರಿದರು. ನಂತರ... ‘ಆದರೂ, ಪರಮಾತ್ಮ ಚಿತ್ರದ ಒಂದು ತುಣುಕನ್ನು ಮಾತ್ರ ಹೇಳ್ತೀನಿ, ಯೋಗರಾಜಭಟ್ಟರು ಬರೆದ ಹಾಡು ಇದು’, ಎಂದು ಹೇಳಿ ಚಿತ್ರದ ಹಾಡಿನ ಐದು ಸಾಲನ್ನು ಸಭಾಭವನದಲ್ಲಿ ಹರಿಯಬಿಟ್ಟರು.

ಅತ್ಲಾಗೆ ಆ ಹುಡುಗಿ
ಇತ್ಲಾಗೆ ಈ ಹುಡುಗಿ
ಯಾವತ್ತು ಇರಬಾರದೂರೀ
ಒಬ್ಳನ್ನೇ ಲವ್‌ ಮಾಡಿ ಚೆನ್ನಾಗಿರೀ...
ಇನ್ನೊಬ್ಳ ಫೋನ್‌ ನಂಬರ್‌ ಇಟ್ಕೊಂಡಿರೀ...

ಪುನೀತ್‌ ಹಾಡಿನ ಐದು ಸಾಲುಗಳನ್ನು ಮುಗಿಸಿ ನಿಂತಾಗ, ಇಡೀ ಸಭಾಭವನ ನಿಶ್ಶಬ್ದವಾಗಿತ್ತು. ಯಾವುದೇ ಪ್ರತಿಕ್ರಿಯೆಯೂ ಬರಲಿಲ್ಲ. ಬಹುಶಃ ಈ ಹಾಡನ್ನು ಬಹರೀನ್‌ ಪ್ರೇಕ್ಷಕರು ನಿರೀಕ್ಷಿಸಿರಲಿಲ್ಲ ಎನಿಸುತ್ತದೆ. ‘ಪರಮಾತ್ಮ’ನ ಈ ಹಾಡಿನ ಬಗ್ಗೆ ಪುನೀತ್‌ ಅವರೇ ಬಹಳ ಉದ್ವೇಗಗೊಂಡಂತಿತ್ತು. ‘ಇನ್ನೊಬ್ಳ ಫೋನ್‌ ನಂಬರ್‌ ಇಟ್ಕೊಂಡಿರೀ’ ಎನ್ನುವ ಸಾಲಿನಲ್ಲಿ ಯೋಗರಾಜಭಟ್ಟರು ಇಟ್ಟಿದ್ದ ವಿಡಂಬನೆ, ಕುಯುಕ್ತಿ, ಹಾಸ್ಯ ಯಾವುದೂ ಅಲ್ಲಿ ಆ ಸಮಯದಲ್ಲಿ ಕೆಲಸ ಮಾಡಲಿಲ್ಲ.

ಚಿತ್ರರಂಗದಲ್ಲಿ ಬದಲಾಗುತ್ತಿರುವ ಮೌಲ್ಯಗಳ ಬಗ್ಗೆ ಈ ಘಟನೆ ಸರಿಯಾದ ಚಿತ್ರಣ ನೀಡುತ್ತದೆ. ಬಹರೀನ್‌ ಪ್ರೇಕ್ಷಕರು ಚಿತ್ರರಂಗದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ತಕ್ಷಣಕ್ಕೆ ಒಡ್ಡಿಕೊಳ್ಳಲು ಆಗದೇ ಇರುವುದರಿಂದ ಕನ್ನಡ ಸಿನಿಮಾಗಳಲ್ಲಿ ಪದ್ಯಗಳೆಲ್ಲಾ ಈಗ ‘ಗಪದ್ಯ’ವಾಗಿ ಬದಲಾಗಿ, ಅರ್ಥಗಳನ್ನೆಲ್ಲಾ ಕಳೆದುಕೊಂಡು ಶಬ್ದಾಡಂಬರಗಳಲ್ಲಿ ಮುಳುಗಿ ಹೋಗಿರುವುದು ಗೊತ್ತಾಗದೇ ಇರಬಹುದು.

ಚಲನಚಿತ್ರ ನಟರನ್ನು ಕಂಡ ಕೂಡಲೇ ‘ಹಾಡಲೇಬೇಕೆಂಬ’ ಅಭಿಮಾನಿಗಳ ಒತ್ತಡಕ್ಕೆ ಸೂಕ್ತ ಗೌರವ ತುಂಬಿದವರು ರಾಜ್‌ಕುಮಾರ್‌. ಕೇಳಿದ ಅಭಿಮಾನಿಗಳಿಗೂ ಗೌರವ ನೀಡುವಂತೆ, ಹಾಡಿದವರಿಗೂ ಗೌರವ ಬರುವಂತೆ ಅಲ್ಲಿ ಒಂದು ನಾದಲೀಲೆಯೇ ಹೊರಹೊಮ್ಮುತ್ತಿತ್ತು. ರಾಜ್‌ಕುಮಾರ್‌ ಅವರು, ‘ದೀನ ನಾನು ಬಂದಿಹೆನು.... ಬಾಗಿಲಲಿ ನಿಂತಿಹೆನು’ ಎಂದು ಹಾಡುತ್ತಿದ್ದರು.

‘ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು ರಾಘವೇಂದ್ರ’ ಎಂದು ಹಾಡುತ್ತಿದ್ದರು. ‘ಕನ್ನಡದ ಕುಲದೇವಿ... ಬಾ ತಾಯಿ’ ಎಂಬ ಹಾಡು ಹೇಳುತ್ತಿದ್ದರು. ಎಮ್ಮೆ ಹಾಡು ಎಷ್ಟೇ ಜನಪ್ರಿಯವಾಗಿದ್ದರೂ ಅದನ್ನು ಸಭೆ, ಸಮಾರಂಭಗಳಲ್ಲಿ ಹಾಡುತ್ತಿರಲಿಲ್ಲ. ಸಾರ್ವಜನಿಕ ಸಮಾರಂಭಗಳಲ್ಲಿ ಸಭ್ಯ ಸಂಸ್ಕಾರವೊಂದನ್ನು ಸ್ವಯಂ ಆಗಿ ಅವರು ರೂಢಿಸಿಕೊಂಡಿದ್ದರು. ಅಂತಹ ಮೌಲ್ಯಗಳು ಕಾಲಕ್ರಮೇಣ ನಶಿಸಿವೆ.

ನೂರು ವರ್ಷಗಳ ಚಲನಚಿತ್ರ ನಡೆಯಲ್ಲಿ ಹಲವಾರು ಬದಲಾವಣೆಗಳಾಗಿವೆ. ಕಳೆದ ಹತ್ತು ವರ್ಷಗಳಲ್ಲಿ ಅತಿ ಶೀಘ್ರಗತಿಯ ಬೆಳವಣಿಗೆಯನ್ನು ಕಾಣುತ್ತಿದ್ದೇವೆ. ಕಳೆದ ತಿಂಗಳಷ್ಟೇ ರಾಜ್ಯೋತ್ಸವ ಮಾಸವನ್ನು ಆಚರಿಸಲಾಗಿದೆ. 1960ರ ದಶಕದಲ್ಲಿ ಅನಕೃ, ರಾಮಮೂರ್ತಿ, ವಾಟಾಳ್‌ ನಾಗರಾಜ್‌ ಮೊದಲಾದವರ ನೇತೃತ್ವದಲ್ಲಿ ನಡೆದುಕೊಂಡು ಬಂದ ರಾಜ್ಯೋತ್ಸವಗಳನ್ನು ಸ್ವಲ್ಪ ನೆನಪಿಸಿಕೊಳ್ಳಿ.

ನಾಡುನುಡಿಯ ಅಭಿಮಾನ ಅಲ್ಲಿ ತುಂಬಿ ತುಳುಕುತ್ತಿತ್ತು. ಕಲೆ, ಸಾಹಿತ್ಯ, ಕಲಾವಿದರುಗಳ ಸಂಗಮವೇ ಅಲ್ಲಿರುತ್ತಿತ್ತು. ನಟ ನಟಿಯರು ಸ್ವಯಂ ಪ್ರೇರಣೆಯಿಂದ ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಆಗಮಿಸಿ ಕನ್ನಡ ಪ್ರೇಮವನ್ನು ಮೆರೆಯುತ್ತಿದ್ದರು. ಆದರೆ ಇಂದು ಅಂತಹ ಪ್ರೇಮಮಯಿ ವಾತಾವರಣ ಕಾಣೆಯಾಗಿದೆ. ಚಿತ್ರನಟರು ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಂದು ಭಾಗವಹಿಸಲು ಸಂಭಾವನೆ ಕೇಳುತ್ತಾರೆ.

ಒಂದೊಂದು ಏರಿಯಾದಲ್ಲಿ ಜನ ಸೇರಿಸಿ, ಶಕ್ತಿಪ್ರದರ್ಶನ ಮಾಡಬಯಸುವ ರಾಜಕೀಯ ಆಕಾಂಕ್ಷಿಗಳು ಜನಪ್ರಿಯ ನಟ ಬಂದರೆ ಜನ ಬರುತ್ತಾರೆ ಎಂಬ ಕಾರಣಕ್ಕೆ ಚಿತ್ರನಟರ ಹಿಂದೆ ಬೀಳುತ್ತಾರೆ. ರಾಜ್ಯೋತ್ಸವ ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳಲೆಂದೇ ಬಹಳಷ್ಟು ಕಲಾವಿದರು ನವೆಂಬರ್‌ ತಿಂಗಳಲ್ಲಿ ವಿದೇಶ ಪ್ರವಾಸ ಮಾಡುತ್ತಾರೆ. ಇಲ್ಲವೇ ವಿದೇಶದಲ್ಲಿ ಡುಯೆಟ್‌ ಹಾಡುವ ಕಾರ್ಯಕ್ರಮ ಹಾಕಿಕೊಳ್ಳುತ್ತಾರೆ.

ಸಮಾರಂಭಗಳಿಗೆ ಆಗಮಿಸುವ ಕಲಾವಿದರನ್ನು ‘ಹಾಡು ಹೇಳಿ’ ಎಂದು ಒತ್ತಾಯಿಸುವ ಅಭಿಮಾನಿಗಳು ಕೂಡ ಈಗ ಕಾಣೆಯಾಗಿದ್ದಾರೆ. ಯಾವ ಕಲಾವಿದನೂ ಸ್ವಂತ ಕಂಠದಲ್ಲಿ ಹಾಡುವುದಿಲ್ಲ ಎನ್ನುವ ಸತ್ಯಸಂಗತಿ ಚಾನಲ್‌ಗಳ ಮೂಲಕ ಬಹಿರಂಗವಾದದ್ದು ಒಂದು ಕಾರಣವಾದರೆ, ಚಿತ್ರಗೀತೆಗಳಲ್ಲಿ ಸಾಹಿತ್ಯದ ಲವಲೇಶವೂ ಕಾಣಿಸದಿರುವುದು ಮತ್ತೊಂದು ಕಾರಣವಿರಬಹುದು. ಚಿತ್ರಗೀತೆಗಳಲ್ಲಿ ಗೇಯತೆ ಕಾಣೆಯಾಗಿ ಗದ್ಯವೇ ಪದ್ಯವಾಗಿರುವುದೂ ಒಂದು ಕಾರಣವಾಗಿರಬಹುದು.

ಹೊಯ್‌ ಹೊಯ್ಯ ಭಟ್ಟ
ಅಬಡಾ ತಬಡಾ
ತಲೆಕೆಟ್ಟ ಭಟ್ಟ ಎಬಡಾ ತಬಡಾ
ಎಂಬ ಹಾಡನ್ನು ಎಷ್ಟೇ ಆಕರ್ಷಕವಾಗಿ ಚಿತ್ರೀಕರಿಸಿದರೂ ಕೊನೆಗೆ ಉಳಿಯುವುದು ಬರೀ ಸೌಂಡು, ‘ತುಂಬಾ ನೋಡ್ಬೇಡಿ ಲವ್ವು ಆಗ್ತದೆ, ಲವ್ವು ಮಾಡ್ಬೇಡಿ ಮದುವೆ ಆಗ್ತದೆ’ ಎನ್ನುವ ಹಾಡಿನಲ್ಲೂ ಉಳಿಯುವುದು ಬರೀ ಶಬ್ದಾಡಂಬರ, ಪ್ರಾಸ ಮಾತ್ರ. ಇಂದಿನ ನಾಯಕ ನಟರನ್ನು ‘ಹಾಡು’ ಎಂದು ಒತ್ತಾಯಿಸಿದರೆ ಈ ರೀತಿಯ ಎಬಡಾ ತಬಡಾ ಹಾಡುಗಳು ಮಾತ್ರ ಬರುತ್ತವೆಯೇ ವಿನಾ ಮಧುರ ಗೀತೆಗಳನ್ನು ಹೊರಡಿಸಲು ಸಾಧ್ಯವಿಲ್ಲ.

ಸೂತ್ರಬದ್ಧ ಸಿನಿಮಾ ಜಾಡನ್ನು ಸಂಪೂರ್ಣವಾಗಿ ಸಿದ್ಧಹಳಿಯಿಂದ ಮತ್ತೊಂದು ಮನಃಸ್ಥಿತಿಯ ಹಳಿಯತ್ತ ಸರಿಸುವ ಪ್ರಯತ್ನ ಈಗ ನಡೆಯುತ್ತಿದೆ. ಬಹರೀನ್‌ನಲ್ಲಿ ಸಲ್ಲದ ‘ಕತ್ಲಲ್ಲಿ ಕರಡೀಗೆ ಜಾಮೂನು ತಿನ್ನಿಸೋಕೆ ಹೋಗ್ಬಾರ್‍ದುರೀ.....’ ಹಾಡು ನಮ್ಮ ಮಕ್ಕಳ ಬಾಯಲ್ಲಿ ಕೆಲದಿನ ನಲಿಯುತ್ತಿತ್ತು. ಎರಡೇ ವರ್ಷಕ್ಕೆ ಇನ್ನೊಂದು ಗದ್ಯ ಅದನ್ನು ಹಿಂದಿಕ್ಕಿದೆ. ಪ್ಯಾರ್‍ಗೆ ಆಗ್ಬುಟೈತೆ, ನಮ್ದುಕೆ..... ಕೊಲವೆರಿ ಮೊದಲಾದ ಹೊಸ ಹೈಕಳ ಹಾಡುಗಳು ಎಷ್ಟು ವೇಗವಾಗಿ ಬಂದವೋ ಅಷ್ಟೇ ವೇಗವಾಗಿ ತೆರೆಮರೆಗೆ ಸರಿದಿವೆ ಎನ್ನುವುದೂ ಗಮನಾರ್ಹ.

ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ನಟ ಕಮಲಹಾಸನ್‌, ಹೊಸ ಪ್ರೇಕ್ಷಕರ ಬಗ್ಗೆ ಮಾತನಾಡಿದರು. ಐವತ್ತು ವರ್ಷಗಳಿಂದ ನಾಯಕ ನಟನಾಗಿದ್ದವನೊಬ್ಬ ಇಂದಿನ ಪ್ರೇಕ್ಷಕನನ್ನು ಒಲಿಸಿಕೊಳ್ಳುವುದೇ ದೊಡ್ಡ ಸವಾಲು ಎಂದು ಹೇಳುತ್ತಿರುವುದೇ ಚಿತ್ರರಂಗದ ಪರಿಸ್ಥಿತಿಯನ್ನು ವಿವರಿಸುತ್ತದೆ. ಬದಲಾದ ಮೌಲ್ಯಗಳು ಚಿತ್ರರಂಗವನ್ನು ಹೊಸಬರಿಗೆ ಹಸ್ತಾಂತರಿಸುತ್ತಿರುವುದರಿಂದ ಕನ್ನಡ ಚಿತ್ರಗಳು ಪ್ರೇಕ್ಷಕರನ್ನು ಕಳೆದುಕೊಳ್ಳುತ್ತಿವೆ.

ಇತ್ತೀಚಿನ ದಿನಗಳಲ್ಲಿ ರಾಜಧಾನಿಯಲ್ಲಿ ಹಿಂದಿ, ತೆಲುಗು ಚಿತ್ರಗಳು ಬಾಕ್ಸ್ ಆಫೀಸ್‌ ಕೊಳ್ಳೆ ಹೊಡೆಯುತ್ತಿರುವುದು ಇದೇ ಕಾರಣದಿಂದ. ನಮ್ಮ ಪ್ರೇಕ್ಷಕ ಏನನ್ನೋ ಹುಡುಕಿಕೊಂಡು ಅಲೆಯುತ್ತಿದ್ದಾನೆ. ಅವನಿಗೆ ಬೇಕಾದ್ದನ್ನು ಒದಗಿಸಲು ಚಿತ್ರರಂಗಕ್ಕೆ ಶಕ್ಯವಾಗಿಲ್ಲ. ಮೌಲ್ಯಗಳ ಬದಲಾವಣೆಯ ಪರ್ವವಿದು. ಇದು ಕನ್ನಡದಲ್ಲಿ ಮಾತ್ರವಲ್ಲ ಭಾರತೀಯ ಚಿತ್ರರಂಗವೇ ಈಗ ಬದಲಾವಣೆಯ ತುಡಿತದಲ್ಲಿದೆ.

ಜಾಗತಿಕವಾಗಿಯೂ ಸಮಸ್ಯೆ ಸರಳೀಕೃತವಾಗಿಲ್ಲ. ಇತ್ತೀಚೆಗೆ ಪಾಕಿಸ್ತಾನದ ನಿರ್ದೇಶಕರೊಬ್ಬರು, ಪಾಕಿಸ್ತಾನದಲ್ಲಿ ಜನ ಚಿತ್ರಮಂದಿರಕ್ಕೆ ಹೋಗುವುದನ್ನು ನಿಲ್ಲಿಸಿದ್ದಾರೆ ಎನ್ನುವ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ, ಚಿತ್ರಮಂದಿರಗಳೆಲ್ಲಾ ಮಾಲ್‌ಗಳಾಗಿದೆ. ಪ್ರೇಕ್ಷಕರು ಬದಲಾಗಿದ್ದಾರೆ. ಎಂತಹ ಚಿತ್ರಗಳನ್ನು ಜನರಿಗೆ ಕೊಡಬೇಕು ಎನ್ನುವುದೇ ಗೊತ್ತಾಗುವುದಿಲ್ಲ ಎನ್ನುವುದು ಸಾರ್ವತ್ರಿಕ ಅಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT