ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಯುತ ಖರೀದಿಗೆ ಉತ್ತಮ ಅವಕಾಶ

Last Updated 3 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಷೇರುಪೇಟೆಯಲ್ಲಿ ಅಸ್ಥಿರತೆ ತಾಂಡವವಾಡುತ್ತಿದ್ದು  ಹಿಂದಿನ ವಾರ ಅಗ್ರಮಾನ್ಯ ಕಂಪೆನಿಗಳು ಹೆಚ್ಚು ಚುರುಕಾದ ಏರಿಕೆ ಪ್ರದರ್ಶಿಸಿದವು. ಇದರಲ್ಲಿ ಪ್ರಮುಖವಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪೆನಿಯ ಷೇರಿನ ಬೆಲೆಯೂ ₹1,530 ರ ಸಮೀಪದಿಂದ ₹1,615 ರವರೆಗೂ ಏರಿಕೆ ಕಂಡು ₹1,609 ರಲ್ಲಿ ವಾರಾಂತ್ಯ ಕಂಡಿತು.

ಕಳೆದ ತ್ರೈಮಾಸಿಕದ ಫಲಿತಾಂಶವು ಹಾನಿಕಾರಕವಾಗಿದ್ದ ಕಾರಣ ಹೆಚ್ಚಿನ ಮಾರಾಟಕ್ಕೊಳಗಾಗಿದ್ದ ಬಾಂಬೆ ಡೈಯಿಂಗ್ ಷೇರಿನ ಬೆಲೆಯೂ ₹85 ರ ಸಮೀಪದಿಂದ ವಾರ್ಷಿಕ ಗರಿಷ್ಠ ₹125 ರವರೆಗೂ ಜಿಗಿತ ಕಂಡಿದ್ದು ವಿಸ್ಮಯಕಾರಿಯಾಗಿದೆ.  ಬದಲಾವಣೆಗಳ, ಬೆಳವಣಿಗೆಗಳ  ಪ್ರಭಾವ  ಷೇರಿನ ಬೆಲೆಗಳನ್ನು ಹೆಚ್ಚು ಹೆಚ್ಚು  ಏರಿಳಿತಗಳನ್ನು ಪ್ರದರ್ಶಿಸುವಂತೆ ಮಾಡುತ್ತಿವೆ. ವಿತ್ತೀಯ ವಲಯದ ಕಂಪೆನಿಗಳು ಸಹ ಹೆಚ್ಚು ಚುರುಕಾಗಿದ್ದವು.  ಇಕ್ವಿಟಾಸ್ ಹೋಲ್ಡಿಂಗ್ಸ್, ಉಜ್ಜೀವನ್ ಫೈನಾನ್ಶಿಯಲ್ ಸರ್ವಿಸಸ್, ಜೆ ಎಂ ಫೈನಾನ್ಸ್, ಎಲ್ ಅಂಡ್ ಟಿ ಫೈನಾನ್ಸ್,  ರಿಲಯನ್ಸ್ ಕ್ಯಾಪಿಟಲ್ ಗಳು ಆಕರ್ಷಕ ಏರಿಕೆ ಪಡೆದುಕೊಂಡವು.  ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕಂಪೆನಿಗಳ ಸಾಧನೆಗೂ ಪೇಟೆಯ ದರಕ್ಕೂ ಸಂಬಂಧವಿಲ್ಲ.  ಕೇವಲ ಕಂಪೆನಿಗಳ ಘನತೆ, ಪ್ರತಿಷ್ಠೆಗೆ ಹೆಚ್ಚು ಮಹತ್ವ ನೀಡಲಾಗಿದೆ ಎಂಬುದಕ್ಕೆ ಬಾಂಬೆ ಡೈಯಿಂಗ್, ಉಜ್ಜೀವನ್ ಫೈನಾನ್ಶಿಯಲ್ ಕಂಪೆನಿಗಳು ಪಡೆದುಕೊಂಡ ಬೆಂಬಲವೇ ನಿದರ್ಶನವಾಗಿದೆ.

ಪೇಟೆಯಲ್ಲಿ ಅವಕಾಶಗಳು ಉತ್ತಮ ಕಂಪೆನಿಗಳಲ್ಲಿ ಹೇಗೆ ಸೃಷ್ಟಿಯಾಗು
ತ್ತವೆ ಎಂಬುದಕ್ಕೆ ಉತ್ತಮ ಉದಾಹರಣೆ ಸೋಮವಾರ ಎಸ್‌ಎಂಎಲ್ ಇಸುಜು  ಷೇರಿನ ಬೆಲೆಯಲ್ಲುಂಟಾದ ಏರಿಕೆಯಾಗಿದೆ. ಕಳೆದ ತ್ರೈಮಾಸಿಕದಲ್ಲಿ ಈ ಕಂಪೆನಿಯ ಸಾಧನೆಯು ಸ್ವಲ್ಪ ಕಳಪೆ ಮಟ್ಟದಲ್ಲಿತ್ತೆಂದು ಕಳೆದ ಒಂದು ತಿಂಗಳಲ್ಲಿ  ಷೇರಿನ ಬೆಲೆಯೂ ₹1,145ರ ಸಮೀಪದಿಂದ ಏಕಮುಖವಾಗಿ ಕುಸಿಯುತ್ತಾ ಈ ತಿಂಗಳ ಎರಡನೇವಾರ ₹903 ರ ಸಮೀಪಕ್ಕೆ ತಲುಪಿ ವಾರ್ಷಿಕ ಕನಿಷ್ಠ ದಾಖಲಿಸಿತು.  ಆದರೆ ಕೇವಲ 17 ದಿನಗಳಲ್ಲಿ ಷೇರಿನ ಬೆಲೆ ₹995 ರವರೆಗೂ ಜಿಗಿಯಿತು, ಅದು ಒಂದೇ ದಿನ, ಸೋಮವಾರ ₹921 ರಿಂದ ₹995 ರವೆರೆಗೆ ಜಿಗಿಯಿತು. ಅಂದು ಈ ಷೇರಿನ ವಹಿವಾಟಿನ ಸಂಖ್ಯಾ ಗಾತ್ರ ಸುಮಾರು ನಾಲ್ಕು ಪಟ್ಟು ಹೆಚ್ಚಾಯಿತು. ಇದು ಮೌಲ್ಯಾಧಾರಿತ ಖರೀದಿಯಾಗಿದೆ.

ಷೇರುಪೇಟೆಯ ವಹಿವಾಟು ಎಷ್ಟು ವಿಸ್ಮಯಕಾರಿ ಎಂಬುದಕ್ಕೆ ಸೋಮವಾರ ರಿಲಯನ್ಸ್ ಮ್ಯುಚುಯಲ್ ಫಂಡ್ ಮತ್ತು ಬಿರ್ಲಾ ಸನ್ ಲೈಫ್ ಮ್ಯುಚುಯಲ್ ಫಂಡ್‌ಗಳು ನಡೆಸಿದ ಚಟುವಟಿಕೆ ಉತ್ತಮ ಉದಾಹರಣೆಯಾಗಿದೆ.  ಥೈರೊಕೆಟೆಕ್ನಾಲಜೀಸ್‌ ರ್ಟೆಕ್ನಾಲಜಿಸ್ ಷೇರಿನ ಬೆಲೆಯೂ ₹705 ರ ಗರಿಷ್ಠ ಮಟ್ಟದಿಂದ ₹670ರ ಕನಿಷ್ಠಕ್ಕೆ

ದಿನದ ಚಟುವಟಿಕೆಯ ಅಂತಿಮ ಕ್ಷಣಗಳಲ್ಲಿ ಇಳಿಕೆ ಕಂಡಿದೆ. ಆ ಸಂದರ್ಭದಲ್ಲಿ ಈ ಮ್ಯುಚುಯಲ್ ಫಂಡ್‌ಗಳು ಕ್ರಮವಾಗಿ 11.30 ಲಕ್ಷ ಮತ್ತು 11 ಲಕ್ಷ ಷೇರುಗಳನ್ನು ಖರೀದಿಸಿವೆ. ಇದು ಪೇಟೆಯಲ್ಲಿ ಒದಗಿ ಬಂದ ಅವಕಾಶಗಳನ್ನು ತಕ್ಷಣ ತಮ್ಮದಾಗಿಸಿಕೊಳ್ಳಲು ಭಾರಿ ವಿತ್ತೀಯ ಸಂಸ್ಥೆಗಳು ಕಾತುರತೆಯಿಂದ ಹೊಂಚು ಹಾಕುತ್ತಿರುವ ಅಂಶ ತಿಳಿಸುತ್ತದೆ.

ಒಟ್ಟಾರೆ ಈ ವಾರದಲ್ಲಿ 296 ಅಂಶಗಳ ಏರಿಕೆಯನ್ನು ಸಂವೇದಿ ಸೂಚ್ಯಂಕ ಪಡೆದುಕೊಂಡರೆ, ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ಸೂಚ್ಯಂಕಗಳು ಕ್ರಮವಾಗಿ 424 ಮತ್ತು 483 ಅಂಶಗಳ ಏರಿಕೆಯಿಂದ ಮಿಂಚಿದವು. ವಿದೇಶಿ ವಿತ್ತೀಯ ಸಂಸ್ಥೆಗಳು ₹2,352 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದರೆ ಸ್ವದೇಶಿ ವಿತ್ತೀಯ ಸಂಸ್ಥೆಗಳು ₹3,399ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿವೆ. ಪೇಟೆಯ ಬಂಡವಾಳ ಮೌಲ್ಯವು ₹133.39 ಲಕ್ಷ ಕೋಟಿಗೆ ಏರಿಕೆ ಕಂಡಿತು.

ಹೊಸ ಷೇರು:  ಹೈವೇ, ರಸ್ತೆಗಳ ಅಭಿವೃದ್ಧಿ, ಜಾರಿಗೊಳಿಸುವಿಕೆ, ನಿರ್ವಹಣೆ, ವಲಯದಲ್ಲಿರುವ ಭಾರತ್ ರೋಡ್ ನೆಟ್ ವರ್ಕ್ ಲಿಮಿಟೆಡ್ ಕಂಪೆನಿ 2006 ರಿಂದ ಕಾರ್ಯನಿರ್ವಹಿಸುತ್ತಿದ್ದು,  ಮೂಲ ಸೌಕರ್ಯ ವಲಯದ ಸ್ರೇಯ್ ಇನ್ಫ್ರಾ ಸ್ಟ್ರಕ್ಚರ್ ಫೈನಾನ್ಸ್ ಲಿಮಿಟೆಡ್  ಈ ಕಂಪೆನಿಯ ಪ್ರವರ್ತಕ ಕಂಪೆನಿಯಾಗಿದೆ. ಈ ಕಂಪೆನಿಯ ₹10 ರ ಮುಖಬೆಲೆ ಷೇರುಗಳನ್ನು ಸೆಪ್ಟೆಂಬರ್ 6 ರಿಂದ 8 ರವರೆಗೆ, ಆರಂಭಿಕ ಷೇರು ವಿತರಣೆ ಮೂಲಕ ಸಂಪನ್ಮೂಲ  ಸಂಗ್ರಹಣೆ ಮಾಡಲಿದೆ. ವಿತರಣೆ ಬೆಲೆ ₹195 ರಿಂದ ₹205 ರ ಅಂತರದ  ಮತ್ತು ಅರ್ಜಿ ಸಲ್ಲಿಸಬೇಕಾದ ಷೇರುಗಳ ಸಂಖ್ಯೆ 73 ಮತ್ತು ಅದರ ಗುಣಕಗಳು. ಈ ವಿತರಣೆಯಲ್ಲಿ ಸಣ್ಣ ಹೂಡಿಕೆದಾರರಿಗೆ ಕೇವಲ ಶೇ10 ರಷ್ಟು ಮಾತ್ರ ಮೀಸಲಿಡಲಾಗಿದೆ.

ಗ್ರಾಹಕ ಉತ್ಪನ್ನಗಳಾದ ಎಲ್‌ಈಡಿ ಸೆಟ್,  ವಾಷಿಂಗ್ ಮೆಷಿನ್, ಎಲ್‌ಈಡಿ ಬಲ್ಬ್ ಮತ್ತು ಟ್ಯೂಬ್ ಲೈಟ್‌ಗಳು, ಸಿಎಫ್‌ಎಲ್‌ ಬಲ್ಬ್, ಮೊಬೈಲ್‌ಗಳನ್ನು ತಯಾರಿಸುತ್ತಿರುವ  ಡಿಕ್ಸಾನ್ ಟೆಕ್ನಾಲಜಿಸ್ (ಇಂಡಿಯಾ) ಲಿಮಿಟೆಡ್  ₹10 ರ ಮುಖಬೆಲೆ ಷೇರುಗಳನ್ನು ಸೆಪ್ಟೆಂಬರ್ 6 ರಿಂದ 8 ರವರೆಗೆ, ಆರಂಭಿಕ ಷೇರು ವಿತರಣೆ ಮೂಲಕ ಸಂಪನ್ಮೂಲ ಸಂಗ್ರಹಣೆ ಮಾಡಲಿದೆ. ₹ 1,760  ರಿಂದ ₹1,766ರ ಅಂತರದ  ವಿತರಣೆ ಬೆಲೆ ಮತ್ತು ಅರ್ಜಿ ಸಲ್ಲಿಸಬೇಕಾದ ಷೇರುಗಳ ಸಂಖ್ಯೆ 8 ಮತ್ತು ಅದರ ಗುಣಕಗಳು.  ಈ ವಿತರಣೆಯಲ್ಲಿ ಸಣ್ಣ ಹೂಡಿಕೆದಾರರಿಗೆ  ಶೇ35ರಷ್ಟು  ಮೀಸಲಿಡಲಾಗಿದೆ. ಗ್ರಾಸಿಮ್ ಕಂಪೆನಿ  ಪ್ರತಿ 7 ಗ್ರಾಸಿಮ್ ಷೇರಿಗೆ 5 ಆದಿತ್ಯ ಬಿರ್ಲಾ ಕ್ಯಾಪಿಟಲ್ ಲಿಮಿಟೆಡ್ ಷೇರುಗಳನ್ನು ನೀಡುವ ಮೂಲಕ ವಿತ್ತೀಯ ವಹಿವಾಟನ್ನು ತನ್ನಿಂದ ಬೇರ್ಪಡಿಸಿಕೊಂಡಿದೆ. ಈ ಹೊಸ ಆದಿತ್ಯ ಬಿರ್ಲಾ ಕ್ಯಾಪಿಟಲ್ ಷೇರುಗಳು ಸೆಪ್ಟೆಂಬರ್ 1 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿವೆ.

ವಿಭಾಗ ಬೇರ್ಪಡಿಸುವಿಕೆ:  ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್ ಕಂಪೆನಿಯಿಂದ ರಿಯಲ್ ಎಸ್ಟೇಟ್ ವಿಭಾಗವನ್ನು ಬೇರ್ಪಡಿಸಿ ರಿಲಯನ್ಸ್ ಹೋಂ ಫೈನಾನ್ಸ್ ಲಿಮಿಟೆಡ್ ನಲ್ಲಿ ವಿಲೀನಗೊಳಿಸಲು ಸೆಪ್ಟೆಂಬರ್ 6 ನಿಗದಿತ ದಿನ.

ಮುಖಬೆಲೆ ಸೀಳಿಕೆ: ಬೊರೊಸೀಲ್ ಗ್ಲಾಸ್ ವರ್ಕ್ಸ್ ಲಿಮಿಟೆಡ್ ₹10 ರ ಮುಖಬೆಲೆ ಷೇರುಗಳನ್ನು₹1 ಕ್ಕೆ ಸೀಳಲು ಸೆಪ್ಟೆಂಬರ್ 15 ನಿಗದಿತ ದಿನ.

ಜಮುನಾ ಆಟೋ ಇಂಡಸ್ಟ್ರೀಸ್ ಲಿಮಿಟೆಡ್ ಕಂಪೆನಿ ಷೇರಿನ ಮುಖಬೆಲೆಯನ್ನು ₹5 ರಿಂದ₹1 ಕ್ಕೆ ಸೀಳಲು ಅಕ್ಟೊಬರ್ 6 ನಿಗದಿತ ದಿನ.

ಕಂಪೆನಿ ಹೆಸರಿನ ಬದಲಾವಣೆ: ಸನವಾರಿಯಾ ಆಗ್ರೋ ಅಯಿಲ್ಸ್ ಲಿಮಿಟೆಡ್ ಕಂಪೆನಿ ಹೆಸರನ್ನು ಸನವಾರಿಯಾ ಕನ್ಸೂಮರ್ಸ್ ಲಿಮಿಟೆಡ್ ಎಂದು ಬದಲಿಸಲಾಗಿದೆ.

ವಾರದ ವಿಶೇಷ

ಕಂಪೆನಿಗಳು ಪ್ರಕಟಿಸುವ ಕಾರ್ಪೊರೇಟ್ ಫಲಗಳು ವಿತರಣೆ ಆಗುತ್ತವೆ ಎಂಬ ಭಾವನೆ ಎಲ್ಲರಲ್ಲೂ ಇರುತ್ತದೆ.  ಅದು ಲಾಭಂಶವಾಗಲಿ, ಬೋನಸ್ ಷೇರಾಗಲೀ ಸುಖಾಂತ್ಯ ಕಾಣುತ್ತಿರುವ ಈಗಿನ ಬೆಳವಣಿಗೆಗಳು ಈ ಭಾವನೆ ಮೂಡಲು ಕಾರಣವಾಗಿದೆ.  ಆದರೆ ಇತ್ತೀಚಿನ ದಿನಗಳಲ್ಲಿ ಈ ರೀತಿ ನಿರ್ಧರಿಸುವುದು ತಪ್ಪು ಎಂಬಂತಹ ಘಟನೆಗಳು ನಡೆದಿವೆ.

ಇತ್ತೀಚಿಗೆ ಸಾರ್ವಜನಿಕ ವಲಯದ ಪೆಟ್ರೋನೆಟ್ ಎಲ್‌ಏನ್‌ಜಿ ಕಂಪೆನಿ ಒಟ್ಟಿಗೆ ಪ್ರತಿ ಷೇರಿಗೆ ₹5 ರ ಲಾಭಾಂಶ ಮತ್ತು 1:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿತು. ಮೊದಲು ಬೋನಸ್ ಷೇರು ವಿತರಿಸಿದ ಕಾರಣ,  ಹೆಚ್ಚಾದ ಬಂಡವಾಳಕ್ಕೆ ಅನುಗುಣವಾಗಿ ಪ್ರತಿ ಷೇರಿಗೆ ₹2.50ರಂತೆ  ಲಾಭಾಂಶ ವಿತರಿಸಲು ಸೆಪ್ಟೆಂಬರ್ 7 ನಿಗದಿತ ದಿನವೆಂದು ಪ್ರಕಟಿಸಿದ ಮೇಲೆ ಷೇರಿನ ಮೇಲಿನ ಆಸಕ್ತಿ ಕ್ಷೀಣಿಸಿದಂತಿದೆ. ಇಲ್ಲಿ ಕಂಪೆನಿ ಘೋಷಿಸುವಾಗಲೇ ಬೋನಸ್ ಷೇರು ವಿತರಣೆ ನಂತರ ಪ್ರತಿ ಷೇರಿಗೆ ₹2.50 ಲಾಭಾಂಶ ಎಂದು ತಿಳಿಸಿದ್ದಾರೆ,  ಗೊಂದಲಮಯವಾಗುತ್ತಿರಲಿಲ್ಲ.

ಮತ್ತೊಂದು  ಕಂಪೆನಿ ಕೊಯಮತ್ತೂರಿನಲ್ಲಿರುವ ರಾಜಶ್ರೀ ಶುಗರ್ಸ್ ಅಂಡ್ ಕೆಮಿಕಲ್ಸ್ ಲಿ., ಕಂಪೆನಿ ಪ್ರತಿ ಷೇರಿಗೆ ₹1 ರಂತೆ ಲಾಭಾಂಶವನ್ನು ಪ್ರಕಟಿಸಿ, ಅದಕ್ಕಾಗಿ ಆಗಸ್ಟ್ 16 ನಿಗದಿತ ದಿನವೆಂದು ಪ್ರಕಟಿಸಿ, ನಿಗದಿತ ದಿನವಾದ ಬಳಿಕ ಆಗಸ್ಟ್ 28 ರಂದು ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕಂಪೆನಿಗೆ ಸಾಲ ನೀಡಿರುವ ಸಂಸ್ಥೆಗಳು ಈ ಲಾಭಾಂಶ ವಿತರಣೆಗೆ ಒಪ್ಪಲಿಲ್ಲವೆಂಬ ಕಾರಣಕ್ಕೆ ಲಾಭಾಂಶ ವಿತರಣೆಯನ್ನು ಹಿಂದೆ ಪಡೆದಿದೆ. ಈ ರೀತಿಯ ನಿರ್ಧಾರವು ಅನೇಕ ಸಣ್ಣ ಹೂಡಿಕೆದಾರರ ಮೇಲೆ ಪ್ರಭಾವ ಬೀರುವುದು ಸಹಜವಾಗಿದೆ.

ಪೇಟೆಯ ವಿಸ್ಮಯಕಾರಿ ಗುಣ ಎಷ್ಟರಮಟ್ಟಿಗಿದೆ ಎಂದರೆ ಕೆಳಮಧ್ಯಮ ಶ್ರೇಣಿ ಕಂಪೆನಿ ವಿಶಾಖ ಇಂಡಸ್ಟ್ರೀಸ್ ಲಿಮಿಟೆಡ್ ಕಂಪೆನಿ ಕಳೆದ ಒಂದು ವಾರದಲ್ಲಿ ₹546 ರ ಸಮೀಪದಿಂದ₹699 ರವರೆಗೂ ಏರಿಕೆ ಕಂಡಿದೆ. ಕಳೆದ ಒಂದು ತಿಂಗಳಲ್ಲಿ ಷೇರಿನ ಬೆಲೆಯೂ ₹405ರ ಕನಿಷ್ಠದಿಂದ ₹699 ಕ್ಕೆ ಜಿಗಿತ ಕಂಡಿರುವುದು ಅಚ್ಚರಿ ಮೂಡಿಸುವ ಸಂಗತಿ. ಈ ರೀತಿಯ ಏರಿಕೆಗೆ ಕಾರಣ ಅದರ ಹೊಸ ಉತ್ಪನ್ನ 'ಆಟಂ' ಎಂಬ ಮೇಲ್ಛಾವಣಿ ಹೊದಿಕೆಯು ಗುರುವಾರ ಪೇಟೆಗೆ ಬಿಡುಗಡೆಯಾಗಿರುವುದು. ಕೇವಲ ಕಂಪೆನಿಯ ಉತ್ಪನ್ನ ಬಿಡುಗಡೆಯಾಗುವುದಕ್ಕೆ ಈ ರೀತಿ ಸ್ಪಂಧನ ದೊರೆತಿದೆ.  31 ರಂದು  ₹713 ರವರೆಗೂ ಏರಿಕೆ ಕಂಡು ನಂತರದ ದಿನ ₹662 ರ ಸಮೀಪಕ್ಕೆ ಕುಸಿದಿದ್ದುದು ಸಹಜವಾಗಿದೆ. ಇದು ಕಂಪೆನಿಯ ಫಲಿತಾಂಶಕ್ಕೆ, ಸಾಧನೆಗೆ ಸಂಬಧವಿಲ್ಲದಂತಿದೆ.  ಇಂತಹ ಅಪರೂಪದ ಏರಿಕೆಯು ಲಾಭ ನಗದೀಕರಣಕ್ಕೆ ಉತ್ತಮ ಅವಕಾಶವಾಗಿರುತ್ತದೆ.

(ಮೊ: 9886313380. ಸಂಜೆ 4.30 ರನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT