ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಯುತ ರಾಜಕಾರಣ ಮತ್ತು ಗುಜ್ರಾಲ್‌

Last Updated 26 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಬಹಳಷ್ಟು ರಾಜಕಾರಣಿಗಳ ವರ್ತನೆ ಕಂಡು ಜನಸಾಮಾನ್ಯರು ಹೇಸಿಗೆ ಪಡು­ವಂ­ತಾಗಿದೆ. ಹಾದಿ ಬೀದಿಗಳಲ್ಲಿ ಅವರ ದುರ್ವ­ರ್ತನೆ, ಕೀಳು ಅಭಿರುಚಿಯ ಭಾಷಾ ಪ್ರಯೋಗಗ­ಳನ್ನು ಜನ ಕಂಡೂ ಕಾಣದಂತಿರುತ್ತಾರಷ್ಟೇ. ಇಂತಹ ವಾತಾವರಣದಲ್ಲಿ ಮಾಜಿ ಪ್ರಧಾನಿ ಇಂದರ್‌ ಕುಮಾರ್‌ ಗುಜ್ರಾಲ್‌ ಬದುಕಿನ ನೆನಪು ಮನಸ್ಸಿಗೆ ಮುದ ನೀಡುವಂತಹದ್ದಾಗಿದೆ. ಸುಸಂಸ್ಕೃತ ನಡವಳಿಕೆಯ ಅವರು ತಾಳ್ಮೆ ಕಳೆದು ಕೊಂಡಿದ್ದನ್ನು ಯಾರೂ ಕಂಡಿದ್ದಿಲ್ಲ. ಎದುರಾಳಿ ಅದೆಷ್ಟೇ ಅರಚಾಡಿದರೂ ಇವರು ಮಾತ್ರ ಸ್ಥಿತಪ್ರಜ್ಞೆಯನ್ನು ಕಾಪಾಡಿಕೊಂಡಿರುತ್ತಿದ್ದರು. ಇದೇ ನವೆಂಬರ್‌ 30ಕ್ಕೆ ಅವರು ನಮ್ಮನ್ನು ಅಗಲಿ ಸರಿಯಾಗಿ ಒಂದು ವರ್ಷವಾಗುತ್ತದೆ. ಇವತ್ತಿನ ರಾಜಕಾರಣವನ್ನು ಕಂಡಾಗ ಗುಜ್ರಾಲ್‌ ಇನ್ನಿಲ್ಲದಂತೆ ಕಾಡುತ್ತಾರೆ.

ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ತಾವು ನಂಬಿದ್ದ ಮೌಲ್ಯಗಳಿಗೇ ಬದ್ಧರಾಗಿ ಅವರು ಬದುಕಿದ್ದರು. ವಿದೇಶಾಂಗ ಸಚಿವರಾಗಿದ್ದಾಗ ಅಥವಾ ಪ್ರಧಾನಿಯಾಗಿದ್ದಾಗಲೂ ಅವರು ಒಂದೇ ರೀತಿ ಇದ್ದರು. ಅವರು ವಿದೇ­ಶಾಂಗ ಸಚಿವರಾಗಿದ್ದಾಗ ದೊಡ್ಡ ದೇಶವೇ ಆಗಲಿ, ಪುಟ್ಟ ರಾಷ್ಟ್ರವೇ ಇರಲಿ ಅವುಗಳೊಡನೆ ವ್ಯವಹರಿಸು­ವಾಗ ನೈತಿಕ ಮೌಲ್ಯಗಳಿಗೇ ಹೆಚ್ಚು ಒತ್ತು ನೀಡು­ತ್ತಿದ್ದರು. ಇರಾಕ್‌ನ ಅಧ್ಯಕ್ಷರಾಗಿದ್ದ ಸದ್ದಾಂ ಹುಸೇನ್‌ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಎಲ್ಲಾ ಕಡೆಯಿಂದ ಬಂದರೂ ಇವರು ಮಾತ್ರ ಅದನ್ನು ಸಂಪೂರ್ಣವಾಗಿ ವಿರೋಧಿಸಿ­ದ್ದರು. ಸದ್ದಾಂ  ಹತ್ಯೆಯ ನಂತರ ಇರಾಕ್‌ದಾ­ದ್ಯಂತ ತಲಾಷ್‌ ನಡೆಸಿದರೂ ತಾವು ಆರೋಪಿಸು­ತ್ತಿದ್ದ ಯಾವುದೇ ಶಸ್ತ್ರಾಸ್ತ್ರ ಸಿಗದ ಬಗ್ಗೆ ಪಾಶ್ಚಿ­ಮಾತ್ಯ ದೇಶಗಳಿಗೆ ಪಾಪಪ್ರಜ್ಞೆ ಕಾಡಿದ್ದು ನಿಜ.

ಗುಜ್ರಾಲ್‌ ಅವರು ಭಾರತದ ವಿದೇಶಾಂಗ ನೀತಿಯ ಕುರಿತು ಬರೆದ ಕೃತಿಯಲ್ಲಿ ‘ಈ ನೀತಿಯು ದೇಶದ ಸ್ವಾತಂತ್ರ್ಯ ಸಂಗ್ರಾಮದ ಮೂಸೆಯಿಂದಲೇ ಮೂಡಿ ಬಂದಿರುವಂತ­ಹದ್ದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಪಠ್ಯ ಪುಸ್ತಕಗಳಲ್ಲಿ ಓದಿರುವಂತಹದ್ದು ಅಥವಾ ವಿಶ್ವವಿದ್ಯಾಲಯಗಳಲ್ಲಿ ಕೇಳಿದ ಸಂಗತಿ­ಗಳೇ ನಮ್ಮ ವಿದೇಶಾಂಗ ನೀತಿ ಎಂದುಕೊ­ಳ್ಳ­ಬೇಕಿಲ್ಲ. ದಬ್ಬಾಳಿಕೆಯ ವಿರುದ್ಧ ಸಿಡಿದು ನಿಲ್ಲು­ವುದೇ ಸ್ವಾತಂತ್ರ್ಯ. ಇಂತಹದ್ದೊಂದು ತುಮುಲದ ಮೂಸೆಯಿಂದ ಸ್ವತಂತ್ರ ನೀತಿಯೊಂದು ಮೂಡಿ ಬರುವುದು ಸಹಜ ತಾನೆ’ ಎಂದೂ ಅವರು ವಿದೇಶಾಂಗ ನೀತಿಯನ್ನು ವಿಶ್ಲೇಷಿಸಿದ್ದರು.

ಗುಜ್ರಾಲ್‌ ಅವರು ನಮ್ಮ ನೆರೆಯ ದೇಶಗಳ ಬಗ್ಗೆ ಸಕಾರಾತ್ಮಕ ದೃಷ್ಟಿಕೋನದ ಧೋರಣೆ ಹೊಂದಿದ್ದರು. ಈ ದೇಶದ ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ಇಂತಹ ಹಲವು ಸಂಗತಿಗಳ ನಿಲುವು, ವಾದಗಳನ್ನೇ ಗುಜ್ರಾಲ್‌ ಸಿದ್ಧಾಂತ ಎನ್ನಲಾಗುತ್ತದೆ.

ಈ ವಾದದ ಅನ್ವಯ ಪ್ರಸಕ್ತ ಪರಿಸ್ಥಿತಿಯನ್ನು ಗಮನಿಸಿದಾಗ ಗುಜ್ರಾಲ್‌ ಇದ್ದಿದ್ದರೆ ಬಾಂಗ್ಲಾದೇ­ಶದ ಜತೆ ವ್ಯವಹರಿಸುವ ಸಂದರ್ಭದಲ್ಲಿ ತೀಸ್ತಾ ನದಿ ನೀರಿನ ವಿವಾದವನ್ನು ಚುರುಕಾಗಿ ಇತ್ಯರ್ಥ್ಯ­ಗೊಳಿಸುತ್ತಿದ್ದರೇನೋ. ಹಾಗಾಗಿದ್ದಲ್ಲಿ ಮುಂದಿನ ಜನವರಿಯಲ್ಲಿ ಬಾಂಗ್ಲಾದೇಶದಲ್ಲಿ ನಡೆಯುವ ಚುನಾವಣೆಯು ಪ್ರಧಾನಿ ಷೇಕ್‌ ಹಸೀನಾ ಅವರ ಗೆಲುವಿಗೆ ಅನುಕೂಲಕರವಾಗುತ್ತಿತ್ತೇನೋ. ಗುಜ್ರಾಲ್‌ ಕೈನಲ್ಲಿ ಅಧಿಕಾರ ಇದ್ದಿದ್ದರೆ ಪಾಕಿಸ್ತಾ­ನದ ಆಡಳಿತಗಾರರು ಸದಾ ಜೋತು ಬಿದ್ದಿರುವ ‘ಗಡಿ ನಿಯಂತ್ರಣ ರೇಖೆ’ ನಿಲುವನ್ನೂ ಹೊರತು­ಪಡಿಸಿ ಭಾರತವು ಪಾಕ್‌ನೊಡನೆ ಸಕಾರಾತ್ಮಕ ಮಾತುಕತೆಗೆ ವೇದಿಕೆಯೊಂದನ್ನು ಸಿದ್ಧಗೊಳಿಸು­ತ್ತಿತ್ತೇನೋ. ಇವೆಲ್ಲಾ ‘ರೇ...’ ಮಾತುಗಳು ಬಿಡಿ.

ಗುಜ್ರಾಲ್‌ ಅವರನ್ನು ನಾನು ಸುಮಾರು ಅರ್ಧ ಶತಮಾನದ ಹಿಂದಿನಿಂದಲೂ ಗಮನಿಸು­ತ್ತಲೇ ಬಂದಿದ್ದೇನೆ. ಪ್ರಧಾನಿ ಪಟ್ಟಕ್ಕಾಗಿ ಲಾಲ್‌­ಬಹದ್ದೂರ್‌ ಶಾಸ್ತ್ರಿಯವರ ಎದುರು ಇಂದಿರಾ ಗಾಂಧಿಯವರು ಪೈಪೋಟಿಗೆ ಇಳಿದಿದ್ದಾಗ, ಗುಜ್ರಾಲ್‌ ಅವರು ಇಂದಿರಾ ಬೆಂಬಲಕ್ಕೆ ನಿಂತಿದ್ದು ನನಗಿನ್ನೂ ನೆನಪಿದೆ. ನಂತರದ ದಿನ­ಗಳಲ್ಲಿಯೂ ಗುಜ್ರಾಲ್‌ ಅವರು ಇಂದಿರಾ ಅವರ ಆಪ್ತ ವಲಯದಲ್ಲಿದ್ದರು. ಆದರೆ ಇಂದಿರಾ ಅವರು ತುರ್ತು ಪರಿಸ್ಥಿತಿ ಹೇರಿದಾಗ ಗುಜ್ರಾಲ್‌ ಪೇಚಾಡಿದ್ದರು.

ಆ ದಿನಗಳಲ್ಲಿ ಇಂದಿರಾ ಮತ್ತು ಅವರ ಪುತ್ರ ಸಂಜಯ ಗಾಂಧಿ ಅವರ ಸರ್ವಾ­ಧಿಕಾರ ತಾರಕದಲ್ಲಿತ್ತು. ಆಗ ಜಯಪ್ರಕಾಶ ನಾರಾ­ಯಣ್‌ ಅವರು ಭ್ರಷ್ಟಾಚಾರದ ವಿರುದ್ಧ ದೇಶ­ದಾ­ದ್ಯಂತ ಆಂದೋಲನ ನಡೆಸುತ್ತಿದ್ದರು. ಅದೊಂದು ದಿನ ಸಂಜಯ ಗಾಂಧಿ ಅವರು ಆಗ ವಾರ್ತಾ ಸಚಿವರಾಗಿದ್ದ ಗುಜ್ರಾಲ್‌ ಅವರಿಗೆ ಫೋನ್‌ ಮಾಡಿ ‘ಜಯಪ್ರಕಾಶ ನಾರಾಯಣರ ವಿರುದ್ಧ ಪ್ರಚಾರ ಮಾಡಬೇಕು’ ಎಂದು ಸೂಚನೆ ನೀಡಿದ್ದರಂತೆ. ಆಗ ಗುಜ್ರಾಲ್‌ ‘ನಾನು ಇಂದಿರಾ ಗಾಂಧಿ ನೇತೃತ್ವದ ಸಚಿವ ಸಂಪುಟದ ಸದಸ್ಯನಾ­ಗಿದ್ದೇನೆ. ಅವರ ಪುತ್ರನ ಆದೇಶ ಕೇಳುವ ಅಗತ್ಯ ನನಗಿಲ್ಲ’ ಎಂದರಂತೆ.

ಆ ದಿನವೇ ಗುಜ್ರಾಲ್‌ ಅವರನ್ನು ಯೋಜನಾ ಖಾತೆಗೆ ವರ್ಗಾಯಿಸ­ಲಾಯಿತಂತೆ.ಆಗ ಸಿಡಿಮಿಡಿಗೊಂಡಿದ್ದ ಗುಜ್ರಾಲ್‌ ಅವರು ರಾಜೀನಾಮೆ ನೀಡುವವರಿದ್ದರು. ಆದರೆ ಇಂದಿರಾ ಅವರು ತಕ್ಷಣ ಅವರನ್ನು ರಷ್ಯಾ ದೇಶಕ್ಕೆ ಭಾರತದ ರಾಯಭಾರಿಯನ್ನಾಗಿ ನೇಮಿ­ಸಿ­ದರು. ಕಾಲೇಜು ದಿನಗಳಿಂದಲೂ ಎಡಪಂ­ಥೀಯ ಒಲವು ಇರಿಸಿಕೊಂಡಿದ್ದ ಗುಜ್ರಾಲ್‌ ಅವರು ಮಾಸ್ಕೊದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದರು. ಹೀಗಾಗಿ ತುರ್ತು ಪರಿ­ಸ್ಥಿತಿಯ ನಂತರ ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿಯವರೂ ಗುಜ್ರಾಲ್‌ ಅವರನ್ನೇ ಮಾಸ್ಕೊದಲ್ಲಿ ಮುಂದುವರಿಸಿದ್ದರು. ಆ ದಿನಗಳ­ಲ್ಲಿಯೇ ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ರಷ್ಯಾ ಸರ್ಕಾರ, ಭಾರತದ ಪರ ನಿಂತಿತ್ತು ಎನ್ನುವುದನ್ನು ನಾವು ಮರೆಯುವಂತಿಲ್ಲ.

ಗುಜ್ರಾಲ್‌ ಹುಟ್ಟೂರು ಈಗಿನ ಪಾಕಿಸ್ತಾನದ­ಲ್ಲಿದೆ. ಆ ಕಾರಣಕ್ಕೋ ಏನೋ ಗುಜ್ರಾಲ್‌ ಅವರಿಗೆ ಪಾಕ್‌ ಬಗ್ಗೆ ಒಂದಷ್ಟು ಒಲವು ಜಾಸ್ತಿ ಇತ್ತು.  ಪಾಕಿಸ್ತಾನದ ಜತೆಗೆ ಮಧುರ ಸಂಬಂಧ ಇರಿಸಿಕೊಂಡರೆ ಭಾರತಕ್ಕೆ ತುಂಬಾ ಒಳ್ಳೆಯದು ಎಂಬ ಮನೋಭಾವ ಗುಜ್ರಾಲ್‌ ಅವರದಾ­ಗಿತ್ತು. ಈ ಎರಡೂ ದೇಶಗಳಲ್ಲಿ ಉಭಯ ದೇಶಗಳ ಸಂಬಂಧಗಳ ಬಗ್ಗೆ ಮಾಧ್ಯಮಗಳು ವಿಪ­ರೀತವಾಗಿ ನಡೆದುಕೊಳ್ಳುತ್ತಿವೆ. ಇಂತಹ ಧೋರಣೆ ಬಗ್ಗೆ ಗುಜ್ರಾಲ್‌ ಅವರಿಗೆ ತಳಮಳ ಇದ್ದೇ ಇತ್ತು.

ಗುಜ್ರಾಲ್‌ ಅವರಿಗೆ ಪಂಜಾಬ್‌ ಬಗ್ಗೆ ಅಪಾರ ಪ್ರೀತಿ ಇತ್ತು. ಅವರು ಪ್ರಧಾನಿಯಾಗಿದ್ದಾಗ ಜಲಂಧರ್‌ನಲ್ಲಿ ‘ವಿಜ್ಞಾನ ನಗರ’ವನ್ನು ಹುಟ್ಟು ಹಾಕಿದ್ದರು. ದೇಶ ವಿಭಜನೆಯಾದ ನಂತರ ಭಾರತಕ್ಕೆ ಬಂದ ಗುಜ್ರಾಲ್‌ ಕುಟುಂಬ ಜಲಂಧರ್‌­ನಲ್ಲಿಯೇ ನೆಲೆಸಿತ್ತು.
ಗುಜ್ರಾಲ್‌ ಅವರು ಯಾವುದೇ ಅಧಿಕಾರ­ದಲ್ಲಿ ಇಲ್ಲದಾಗ ಅವರು ಪಂಜಾಬ್‌ಗೆ ತೆರಳಿ ಅಲ್ಲಿ ಸಿಖ್‌ ಸಮುದಾಯ ಮತ್ತು ಹಿಂದೂಗಳ ನಡುವಣ ಸಂಬಂಧ ಸುಧಾರಣೆಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅಲ್ಲಿ ಉಗ್ರರ ಚಟುವಟಿಕೆ ತಾರಕಕ್ಕೆ ಏರಿದ್ದ ದಿನಗಳಲ್ಲಿ ಅವರು ಪಂಜಾಬ್‌ ಗ್ರೂಪ್‌ ಎಂಬ ಸಂಘಟನೆ ಹುಟ್ಟು ಹಾಕಿ ಅಕಾಲಿಗಳೊಡನೆ ಮಾತುಕತೆ ನಡೆಸಿದ್ದರು. ಆ ಗುಂಪಿನಲ್ಲಿ ನಾನೂ ಇದ್ದೆ.

ದೇವೇಗೌಡ ನೇತೃತ್ವದ ಸರ್ಕಾರ ಉರುಳಿದ ನಂತರ ಗುಜ್ರಾಲ್‌ ಸ್ವಲ್ಪ ಸಮಯ ಪ್ರಧಾನ ಮಂತ್ರಿಯಾಗಿದ್ದರು.ಗುಜ್ರಾಲ್‌ ನೇತೃತ್ವದ ಭಾರತದ ನಿಯೋಗ­ವೊಂದು 1977ರಲ್ಲಿ ದಕ್ಷಿಣ ಆಫ್ರಿಕ ಮತ್ತು ಈಜಿಪ್ಟ್‌ ಪ್ರವಾಸ ಕೈಗೊಂಡಿತ್ತು. ಆಗ ನಾನೂ ಪತ್ರಕರ್ತನಾಗಿ ಅವರೊಡನೆ ಅಲ್ಲಿಗೆ ತೆರಳಿದ್ದೆ. ಗಾಂಧೀಜಿಯವರು ತಮ್ಮ ಹೋರಾಟದ ಬದುಕಿನ ಆರಂಭದ ದಿನಗಳಲ್ಲಿ ಅಲ್ಲಿದ್ದರು. ಆ ನೆಲವನ್ನು ನೋಡಬೇಕೆಂಬುದು ನನ್ನ ಮಹದಾಸೆ­ಯಾಗಿತ್ತು. ಅಂದು  ಅದು ಈಡೇರಿತು. ನಮ್ಮ ತಂಡ ಪೀಟರ್‌ಮರಿಟ್ಜ್‌ಬರ್ಗ್‌ಗೆ ತೆರಳಿತ್ತು. ಅಲ್ಲಿಯೇ ಬಿಳಿಯರಿಗಾಗಿ ಮೀಸಲಿರಿಸಿದ್ದ ಬೋಗಿಯ ಒಳಗೆ ಗಾಂಧೀಜಿಯವರು ಕುಳಿತಿದ್ದು ಮತ್ತು ಆಗ ಒಳಗಿದ್ದ ಬಿಳಿಯರು ಅವರನ್ನು ಹೊರ ತಳ್ಳಿದ್ದು ಕೂಡಾ. ಆ ಘಟನೆಯ ಬಗ್ಗೆ ಅಂದು ನಾವೆಲ್ಲಾ ಒಗ್ಗೂಡಿ ಮಾತನಾಡಿದ್ದೆವು.

ಹೋರಾಟಗಾರ ನೆಲ್ಸನ್‌ ಮಂಡೇಲ ಅವ­ರನ್ನು ಭೇಟಿ ಮಾಡಬೇಕೆಂಬ ನನ್ನ ಬಹುಕಾಲದ ಕನಸು ಅಂದು ಈಡೇರಿತ್ತು. ಅಲ್ಲಿ ಏರ್ಪಡಿಸಲಾ­ಗಿದ್ದ ಭೋಜನ ಕೂಟದಲ್ಲಿ ಮಂಡೇಲ ಅವರನ್ನು ನಾನು ಸಮೀಪದಿಂದಲೇ ನೋಡಿದ್ದೆ. ಮಂಡೇಲ ಅವರು ನರ್ತಿಸುತ್ತಾ ಗುಜ್ರಾಲ್‌ ಬಳಿ ಬಂದು ಅವರ ಕೈ ಹಿಡಿದು ನರ್ತಿಸಿದ್ದರು.

ವೇತನ ಆಯೋಗದ ಶಿಫಾರಸನ್ನು ಹಿಂದೆ ಚಾಚೂ ತಪ್ಪದೆ ಪಾಲಿಸಿದ್ದ ಗುಜ್ರಾಲ್‌, ಸರ್ಕಾರಿ ನೌಕರರ ವೇತನವನ್ನು ದೊಡ್ಡ ಮಟ್ಟದಲ್ಲಿಯೇ ಏರಿಸಿದ್ದರು. ಆ ದಿನಗಳಲ್ಲಿ ಅದು ಭಾರತದ ಖಜಾನೆಗೆ ದೊಡ್ಡ ಹೊರೆಯಾಗಿತ್ತು. ಆಗ ನೌಕರ­ಶಾಹಿಯ ಗಾತ್ರದಲ್ಲಿ ಶೇಕಡ 30ರಷ್ಟು ಕಡಿತ ಮಾಡಿ, ಕೆಲಸದ ಅವಧಿಯನ್ನು ಹೆಚ್ಚಿಸ­ಬೇಕು ಎಂಬ ಶಿಫಾರಸನ್ನೂ ಮಾಡಲಾಗಿತ್ತು. ಆದರೆ ನೌಕರರ ಸಂಖ್ಯೆಯನ್ನು ಕಡಿತಗೊಳಿಸುವ ಪ್ರಸ್ತಾಪವನ್ನೇ ಕಾರ್ಮಿಕ ಸಂಘಟನೆಗಳು ಮತ್ತು ಎಡಪಂಥೀಯರು ತೀವ್ರವಾಗಿ ವಿರೋಧಿಸಿದ್ದರು. ಆದಕಾರಣ, ಈ ನಿಟ್ಟಿನಲ್ಲಿ ಗುಜ್ರಾಲ್‌ ಹೆಚ್ಚು ಮುಂದುವರಿಯಲೇ ಇಲ್ಲ. ಹೀಗಾಗಿ ಆ ದಿನಗ­ಳಲ್ಲಿ ಕೇಂದ್ರ ಹಣಕಾಸು ಪರಿಸ್ಥಿತಿಯ ನಿರ್ವಹಣೆ ತ್ರಾಸದಾಯಕವಾಗಿತ್ತು. ದೇಶವನ್ನು ಕ್ಲಿಷ್ಟಕರ ಸಮಯ­ದಲ್ಲಿ ದಕ್ಷ ನಿರ್ವಹಣೆಯಿಂದ ಉತ್ತಮ ಸ್ಥಿತಿಯತ್ತ ಕೊಂಡೊಯ್ದವರನ್ನು ನಾವೆ­ಲ್ಲರೂ ಸುಲಭವಾಗಿ ಮರೆತು ಬಿಡುತ್ತೇವಲ್ಲಾ ಎಂಬ ಅಚ್ಚರಿ ಉಂಟಾಗುತ್ತಿದೆ.

ಗುಜ್ರಾಲ್‌ ತಮ್ಮ ಜೀವನದ ಬಹು­ಕಾಲ ಕಾಂಗ್ರೆಸ್ ಜತೆಯಲ್ಲಿಯೇ ಕಳೆದ­ವರು. ಆ  ಪಕ್ಷದ ಮೂಲಧಾತುವೇ ಆಗಿ­ರುವ ಪ್ರಜಾಪ್ರ­ಭುತ್ವ ಮೌಲ್ಯಗಳು, ಸಮಾನ­ತೆಯ ಪರಿಕಲ್ಪನೆ, ಜನಮತಕ್ಕೆ ಮನ್ನಣೆ ಇತ್ಯಾದಿ ಚಿಂತನೆಗಳನ್ನು ಎತ್ತಿ ಹಿಡಿದ ಗುಜ್ರಾಲ್‌ ಅವರನ್ನು ಆ ಪಕ್ಷದ­ವರೇ ವಿರೋಧಿಸಿದ್ದೊಂದು ವಿಪರ್ಯಾಸ. ಒಂದು ವೇಳೆ ಇವತ್ತು ಗುಜ್ರಾಲ್‌ ಅವರು ಬದು­ಕಿದ್ದರೆ ಕಾಂಗ್ರೆಸ್‌ ಅಥವಾ ಇನ್ನಾವುದೇ ಪಕ್ಷಕ್ಕೂ ಸಲ್ಲುವವರಾಗುತ್ತಿರಲಿಲ್ಲ ಎಂದೆನಿಸುತ್ತದೆ.

ನಿಮ್ಮ ಅನಿಸಿಕೆ ತಿಳಿಸಿ:editpagefeedback@prajavani.co

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT