ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್‌: ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಲ

Last Updated 6 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಭಾರತದ ನೆರೆ ರಾಷ್ಟ್ರ ಮ್ಯಾನ್ಮಾರ್‌ ಪ್ರಜಾಸತ್ತಾತ್ಮಕ ಪರಿವರ್ತನೆಯ ಮಾರ್ಗದಲ್ಲಿ ಸಾಗುತ್ತಿರುವುದು ಆಸಕ್ತಿ ಮೂಡಿಸುವ ಬೆಳವಣಿಗೆಯಾಗಿದೆ. ಮ್ಯಾನ್ಮಾರ್‌ ನಾಯಕಿ ಮತ್ತು ನೊಬೆಲ್‌ ಪ್ರಶಸ್ತಿ ಪುರಸ್ಕೃತೆ ಅಂಗ್‌ ಸಾನ್‌ ಸೂಕಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆ, ಬೆಂಬಲ ಮತ್ತು ಉತ್ತೇಜನದಿಂದ  ಆಗಸ್ಟ್‌ 31ರಂದು ನಡೆದ ಒಕ್ಕೂಟದ ಶಾಂತಿ ಸಮ್ಮೇಳನವನ್ನು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್‌ ಅವರು ಉದ್ಘಾಟಿಸಿದ್ದರು.

ದೇಶವು ಸಂಪೂರ್ಣ ಪ್ರಜಾಪ್ರಭುತ್ವ ವ್ಯವಸ್ಥೆ ಅಳವಡಿಸಿಕೊಳ್ಳುವ ಹಾದಿಯಲ್ಲಿ ಶಾಂತಿಯುತವಾಗಿ ಮುನ್ನಡೆಯಲು ಸ್ಥಳೀಯ ವಿಭಿನ್ನ ರಾಜಕೀಯ ಮತ್ತು ಜನಾಂಗೀಯ ಗುಂಪುಗಳು ಪರಸ್ಪರ ಸಂಧಾನ ಮಾತುಕತೆ ನಡೆಸಲು ಈ ಸಮ್ಮೇಳನವು ವೇದಿಕೆ  ಒದಗಿಸಿಕೊಟ್ಟಿತ್ತು.

ಈ ಸಮ್ಮೇಳನಕ್ಕೆ ‘21ನೇ ಶತಮಾನದ  ಪ್ಯಾಂಗ್ಲೊಂಗ್ ಸಮ್ಮೇಳನ’ ಎಂದು ಹೆಸರಿಟ್ಟಿದ್ದು ಕೂಡ ಗಮನ ಸೆಳೆಯುವ ಸಂಗತಿಯಾಗಿತ್ತು. 1947ರಲ್ಲಿ ನಡೆದಿದ್ದ ಪ್ಯಾಂಗ್ಲೊಂಗ್‌ ಸಮ್ಮೇಳನದ ರಾಷ್ಟ್ರೀಯ ಏಕತೆಯ ಚೈತನ್ಯವನ್ನು ಮತ್ತೆ ಬಡಿದೆಬ್ಬಿಸುವುದು ಈ ಸಮ್ಮೇಳನದ ಮುಖ್ಯ ಆಶಯವಾಗಿತ್ತು. 1947ರ ಫೆಬ್ರುವರಿಯಲ್ಲಿ ನಡೆದಿದ್ದ ಸಮ್ಮೇಳನದಲ್ಲಿ ಬರ್ಮಾ ಒಕ್ಕೂಟ ನಿರ್ಮಾಣ ಮಾಡಲು ಜನಾಂಗೀಯ ಗುಂಪುಗಳ ಎಲ್ಲ ಪ್ರಮುಖ  ಮುಖಂಡರು ವಚನ ಬದ್ಧತೆ ಪ್ರಕಟಿಸಿದ್ದರು.

ಏಳು ದಶಕಗಳಲ್ಲಿ ರಾಜಕೀಯ ಸೇತುವೆಯಡಿ ಸಾಕಷ್ಟು ನೀರು ಹರಿದು ಹೋಗಿದೆ. ಮೊನ್ನೆ ನಡೆದ ‘21ನೇ ಶತಮಾನದ ಪ್ಯಾಂಗ್ಲೊಂಗ್‌ ಸಮ್ಮೇಳನ’ವು  ರಾಜಕೀಯ ಪಕ್ಷಗಳು, ಚುನಾಯಿತ ಜನಪ್ರತಿನಿಧಿಗಳು, ಸರ್ಕಾರ, ಸೇನೆ, ಜನಾಂಗೀಯ ಗುಂಪುಗಳು, ನಾಗರಿಕ ಸಮಾಜದ ಸಂಘಟನೆಗಳನ್ನೆಲ್ಲ ಒಂದುಗೂಡಿಸಿತ್ತು.  ರಾಷ್ಟ್ರೀಯ ಸಾಮರಸ್ಯ ಮೂಡಿಸಲು ಮತ್ತು ಶಾಂತಿ ನಿರ್ಮಾಣ ಉದ್ದೇಶದ ಸಂಧಾನ ಮಾತುಕತೆಗೆ ಸಮ್ಮೇಳನವು ಅವಕಾಶ ಒದಗಿಸಿಕೊಟ್ಟಿತ್ತು.

ನಾನು ಇತ್ತೀಚೆಗೆ ಮ್ಯಾನ್ಮಾರ್‌ಕ್ಕೆ ಭೇಟಿ ನೀಡಿ 10 ದಿನಗಳ ಕಾಲ ಅಲ್ಲಿದ್ದೆ. ಪ್ರಜಾಪ್ರಭುತ್ವದ ಪರಿವರ್ತನೆಗೆ ಸಂಬಂಧಿಸಿದ ಯೋಜನೆಯೊಂದರ ಅಂತರರಾಷ್ಟ್ರೀಯ ಮುಖ್ಯ ಸಲಹೆಗಾರನಾಗಿ ನಾನು ಅಲ್ಲಿ ಕರ್ತವ್ಯ ನಿರ್ವಹಿಸಿದ್ದೆ. ಅಲ್ಲಿನ ಜನಪ್ರತಿನಿಧಿಗಳಿಗಾಗಿ ಎರಡು ಕಾರ್ಯಾಗಾರಗಳನ್ನು ಸಂಘಟಿಸಿದ್ದೆ.

ರಾಜಧಾನಿ ನೆ ಪಿ ತಾವ್‌ನಲ್ಲಿ ರಾಷ್ಟ್ರೀಯ ಸಂಸತ್ತಿನ ಸದಸ್ಯರಿಗೆ ಮತ್ತು ಮೋನ್‌ ಜನಾಂಗೀಯ ರಾಜ್ಯದ ರಾಜಧಾನಿ ಮಾವ್‌ಲ್ಯಾಮಿಯಂಗ್‌ನಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗಾಗಿ– ಹೀಗೆ ಎರಡು ಕಾರ್ಯಾಗಾರಗಳನ್ನು ಏರ್ಪಡಿಸಲಾಗಿತ್ತು. ಈ ಸಮ್ಮೇಳನಕ್ಕೆ ಪೂರ್ವ ಸಿದ್ಧತೆ ರೂಪದಲ್ಲಿ ಮೂರು ವರ್ಷಗಳಿಂದಲೂ ಸಂಧಾನ ಪ್ರಕ್ರಿಯೆಗಳು ನಡೆದಿದ್ದವು. ಇವು ಮ್ಯಾನ್ಮಾರ್‌ನಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ಸಾಕಷ್ಟು ಒಳನೋಟ ನೀಡುತ್ತವೆ.

ದಶಕಗಳ ಕಾಲ ಸೇನಾ ಆಡಳಿತದಲ್ಲಿ ನಲುಗಿದ್ದ ಮ್ಯಾನ್ಮಾರ್‌, ಒಂದು ವರ್ಷದ ಹಿಂದೆ ಪ್ರಜಾಪ್ರಭುತ್ವದತ್ತ ಪರಿವರ್ತನೆಗೊಳ್ಳಲು ಪ್ರಯಾಸದಿಂದಲೇ ಪ್ರಯತ್ನಗಳನ್ನು ಆರಂಭಿಸಿತ್ತು. ದೇಶದಲ್ಲಿನ  ಜನಾಂಗೀಯ ಭಿನ್ನತೆಯ ಕಾರಣಕ್ಕೆ ವಿಭಿನ್ನ ಗುಂಪುಗಳು ಅನುಭವಿಸುತ್ತಿದ್ದ ಅನ್ಯಾಯ  ಗ್ರಹಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವುದೂ ಈ ಪರಿವರ್ತನೆ ಪ್ರಕ್ರಿಯೆಯ ಮುಖ್ಯ ಉದ್ದೇಶವಾಗಿತ್ತು.

ಸೇನೆಯ ಸಲಹೆ ಮತ್ತು ನಿರ್ದೇಶನಕ್ಕೆ ಅನುಗುಣವಾಗಿ ಹೊಸ ಸಂವಿಧಾನದ ಕರಡು ರೂಪಿಸಲಾಗಿತ್ತು. ಅದರ ಪ್ರಕಾರ, ದೇಶವನ್ನು 14 ಉಪ ವಿಭಾಗಗಳಾಗಿ ವಿಂಗಡಿಸಲಾಗಿತ್ತು. ವಿಭಿನ್ನ ಜನಾಂಗೀಯ ಗುಂಪುಗಳಿಗಾಗಿ 7 ರಾಜ್ಯಗಳನ್ನು ಮತ್ತು ಬಹುಸಂಖ್ಯಾತ ಬರ್ಮಾ ಜನಾಂಗ ಪ್ರತಿನಿಧಿಸಲು 7 ಪ್ರಾದೇಶಿಕ ಮಂಡಳಿಗಳನ್ನು ರಚಿಸಲಾಗಿತ್ತು.

ಹೊಸ ಸಂವಿಧಾನದಡಿಯೇ ನಡೆದ ಚುನಾವಣೆಯಲ್ಲಿ  ಸೇನೆ ಬೆಂಬಲಿತ ಯುಎಸ್‌ಡಿಪಿ ಅಧಿಕಾರಕ್ಕೆ ಬಂದಿತ್ತು. ಅಂಗ್‌ ಸಾನ್‌ ಸೂಕಿ ನೇತೃತ್ವದ ಎನ್‌ಎಲ್‌ಡಿಯು ಚುನಾವಣೆಯನ್ನೇ ಬಹಿಷ್ಕರಿಸಿತ್ತು. ಸುದೀರ್ಘ ಸಂಧಾನದ ಫಲವಾಗಿ ನಂತರ ನಡೆದ ಸರಣಿ ಉಪ ಚುನಾವಣೆಗಳಲ್ಲಿ ಎನ್‌ಎಲ್‌ಡಿ ಮುಖಂಡರು ಸಂಸತ್ತಿನ ಕೆಳಮನೆಗೆ ಗಮನಾರ್ಹ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದರು.

ಶಾಸಕಾಂಗದ ಎಲ್ಲ ಪ್ರಾತಿನಿಧಿಕ ಸಂಸ್ಥೆಗಳಲ್ಲಿ ಸೇನೆಗೆ ಶೇ 25ರಷ್ಟು ಸ್ಥಾನಗಳನ್ನು ಸಂವಿಧಾನದಲ್ಲಿಯೇ ಮೀಸಲು ಇರಿಸಲಾಗಿದೆ. ರಾಷ್ಟ್ರೀಯ, ರಾಜ್ಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ರಕ್ಷಣೆ, ಗಡಿ ವ್ಯವಹಾರ ಮತ್ತು ಆಂತರಿಕ  ವ್ಯವಹಾರಗಳ ಸಚಿವರನ್ನು ಸಶಸ್ತ್ರ ಪಡೆಗಳ ಮುಖ್ಯಸ್ಥರೇ ನಾಮಕರಣ ಮಾಡುತ್ತಾರೆ. ರಾಷ್ಟ್ರೀಯ ಸಂಸತ್ತು  ಅಧ್ಯಕ್ಷರನ್ನು ಅಯ್ಕೆ ಮಾಡುತ್ತದೆ. ಅಧ್ಯಕ್ಷರು, ರಾಜ್ಯ ಮತ್ತು ಪ್ರಾದೇಶಿಕ ಮಂಡಳಿಗಳ ಮುಖ್ಯಮಂತ್ರಿಗಳನ್ನು ನೇಮಕ ಮಾಡುತ್ತಾರೆ.

ಈ ವ್ಯವಸ್ಥೆಯು ಗಂಭೀರ ಸ್ವರೂಪದ ಪ್ರಜಾಸತ್ತಾತ್ಮಕ ದೋಷಗಳನ್ನು ಒಳಗೊಂಡಿದ್ದರೂ, ಅದೊಂದು ಪರಿವರ್ತನೆಯ ಹಂತದಲ್ಲಿನ ತಾತ್ಕಾಲಿಕ  ವ್ಯವಸ್ಥೆಯಾಗಿದೆ ಎಂದೂ ಅನೇಕರು ಪ್ರತಿಪಾದಿಸುತ್ತಾರೆ.

ದೇಶದ ಬೇರೆ, ಬೇರೆ ಪ್ರದೇಶಗಳಲ್ಲಿ  ಜನಾಂಗೀಯ ಶಸ್ತ್ರಾಸ್ತ್ರ ಹೋರಾಟ ನಡೆಯುತ್ತಿರುವುದು ಈ ಪ್ರಕ್ರಿಯೆ ಜತೆಗೆ ತಳಕು ಹಾಕಿಕೊಂಡಿದೆ. ರಖಿನ್‌ ರಾಜ್ಯದಲ್ಲಿ ನಡೆಯುತ್ತಿರುವ ರೋಹಿಂಗ್ಯಾ ವಿವಾದದ ಬಗ್ಗೆ ಅಂತರರಾಷ್ಟ್ರೀಯ ಸಮುದಾಯವು ಗಮನ ಹರಿಸಿದೆ. ಬಾಂಗ್ಲಾದೇಶದಿಂದ ವಲಸೆ ಬಂದಿರುವ  ಮುಸ್ಲಿಮರು  ಗಂಭೀರ ಸ್ವರೂಪದ ಕಿರುಕುಳಕ್ಕೆ ಗುರಿಯಾಗಿದ್ದಾರೆ ಎನ್ನುವ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.

ಅಷ್ಟೇನೂ ಪರಿಣಾಮಕಾರಿಯಲ್ಲದ  ಮತ್ತು ಅಸ್ಥಿರ ಸ್ವರೂಪದ ಪರಿವರ್ತನೆಯ ಪ್ರಕ್ರಿಯೆ ಮುಂದುವರೆದಿರುವ ಮಧ್ಯೆಯೇ 2015ರಲ್ಲಿ ನಡೆದ ಚುನಾವಣೆಯು ದೇಶದ ರಾಜಕೀಯ ಚಿತ್ರಣವನ್ನೇ ಬದಲಾಯಿಸಿತು. ಚುನಾವಣೆಯಲ್ಲಿ ಐತಿಹಾಸಿಕ ಫಲಿತಾಂಶ ಹೊರಹೊಮ್ಮಿತು.  ಅಂಗ್‌ ಸಾನ್‌ ಸೂಕಿ ನೇತೃತ್ವದ ಎನ್‌ಎಲ್‌ಡಿಯು, ರಾಷ್ಟ್ರೀಯ ಸಂಸತ್ತಿನ  ಎರಡೂ ಮನೆಗಳಲ್ಲಿ  ಮತ್ತು 14 ರಾಜ್ಯಗಳು / ಪ್ರಾದೇಶಿಕ ಮಂಡಳಿಗಳ ಪೈಕಿ ಎರಡನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಬಹುಮತ ಗಳಿಸಿತ್ತು.

ಸೇನೆಗೆ ಶೇ 25ರಷ್ಟು ಸ್ಥಾನಗಳನ್ನು ಮೀಸಲು ಇರಿಸಿದ್ದರೂ, ಶಾಸಕಾಂಗದ ಎಲ್ಲ ಪ್ರಾತಿನಿಧಿಕ ಸಂಸ್ಥೆಗಳಲ್ಲಿ ಎನ್‌ಎಲ್‌ಡಿ  ಬಹುಮತ ಗಳಿಸುವಲ್ಲಿ ಸಫಲವಾಗಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜನರು ಅಭೂತಪೂರ್ವ ರೀತಿಯಲ್ಲಿ ಬೆಂಬಲಿಸಿದ್ದನ್ನು  ಸೇನಾ ಪಡೆಗಳೂ ಸೇರಿದಂತೆ ಪ್ರತಿಯೊಬ್ಬರೂ ಸ್ವಾಗತಿಸಿದ್ದರು. ಜನಾಭಿಪ್ರಾಯ ಗೌರವಿಸುವುದಾಗಿ ಹೇಳಿಕೊಂಡ ಸೇನಾಪಡೆಗಳು ತಮ್ಮ ಸೋಲು ಒಪ್ಪಿಕೊಂಡಿದ್ದವು.

ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವವರ ಪತಿ ಅಥವಾ ಪತ್ನಿ ಇಲ್ಲವೆ ಮಕ್ಕಳು ವಿದೇಶಿ ಪ್ರಜೆಗಳು ಆಗಿರಬಾರದು ಎನ್ನುವ ನಿರ್ಬಂಧವನ್ನು ಸಂವಿಧಾನದಲ್ಲಿ ಸೇರ್ಪಡೆ ಮಾಡಲಾಗಿದೆ. ಈ ಕಾರಣಕ್ಕೆ ಅಂಗ್‌ ಸಾನ್‌ ಸೂಕಿ ಅವರು ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವ ಅರ್ಹತೆ ಹೊಂದಿರಲಿಲ್ಲ.

ಎನ್ಎಲ್‌ಡಿಯು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದರೂ ಪಕ್ಷದ ಅಧ್ಯಕ್ಷೆ ಸೂಕಿ ಅವರು ಅವಸರದ ತೀರ್ಮಾನ ತೆಗೆದುಕೊಳ್ಳದೆ ಜಾಗರೂಕತೆಯಿಂದ ಮುನ್ನಡೆಯುವ ನಿರ್ಧಾರಕ್ಕೆ  ಬಂದಿದ್ದರು. ಇದೇ ಕಾರಣಕ್ಕೆ ತಮಗೆ  ನಿಷ್ಠರಾದವರನ್ನೇ ಅಧ್ಯಕ್ಷರನ್ನಾಗಿ ನೇಮಿಸಿದ್ದರು.

ತಮಗಾಗಿ ಸರ್ಕಾರದ ಸಲಹೆಗಾರ್ತಿ ಎನ್ನುವ ಹೊಸ ಹುದ್ದೆ ಸೃಷ್ಟಿಸಿ ಅದಕ್ಕೆ ಸಂಸತ್ತಿನ ಅನುಮೋದನೆಯನ್ನೂ ಪಡೆದಿದ್ದರು. ಈ ಹುದ್ದೆಯು ಶಾಸನಬದ್ಧ ಅಧಿಕಾರ  ಇಲ್ಲದ ಪ್ರಧಾನಿ ಹುದ್ದೆಯಂತಿದೆ. ಇದರ ಜತೆಗೆ ದೇಶದ ವಿದೇಶ ಸಚಿವರಾಗಿಯೂ ಅವರು ನೇಮಕಗೊಂಡರು. ಸಚಿವ ಸಂಪುಟ ಮತ್ತು ಎಲ್ಲ ರಾಜ್ಯ ಮತ್ತು ಪ್ರಾದೇಶಿಕ ಮಂಡಳಿಗಳ ಮುಖ್ಯಮಂತ್ರಿಗಳ ಆಯ್ಕೆಯಲ್ಲಿಯೂ ಅಧಿಕಾರ ತಮ್ಮ ಕೈತಪ್ಪಿ ಹೋಗದಂತೆಯೂ ಎಚ್ಚರಿಕೆ ವಹಿಸಿದ್ದರು.

ಸರ್ಕಾರದ ಈ  ಎಲ್ಲ ಪ್ರಮುಖ ಹುದ್ದೆಗಳ ನೇಮಕಾತಿಯಲ್ಲಿ ಪಕ್ಷದ ನಿಷ್ಠೆ, ಶುದ್ಧ ಚಾರಿತ್ರ್ಯವೇ ಪ್ರಮುಖ ಮಾನದಂಡವನ್ನಾಗಿ ಪರಿಗಣಿಸಲಾಗಿತ್ತು.
ಈಗಾಗಲೇ ಐದು ತಿಂಗಳ ಅಧಿಕಾರಾವಧಿ ಪೂರ್ಣಗೊಳಿಸಿರುವ ಎನ್‌ಎಲ್‌ಡಿ, ಪರಿವರ್ತನೆ ಪ್ರಕ್ರಿಯೆಯ ವೇಗ ಹೆಚ್ಚಿಸಲು ಉದ್ದೇಶಿಸಿದೆ.

ರಾಜಕೀಯ ವ್ಯವಸ್ಥೆಯಲ್ಲಿನ ಅಧಿಕಾರದ ಸಮೀಕರಣವು ಸೇನೆಯ ಅತೃಪ್ತಿಗೆ ಕಾರಣವಾಗದ ರೀತಿಯಲ್ಲಿ ಜಾರಿಗೊಳಿಸುವುದು ಎನ್‌ಎಲ್‌ಡಿಯ ಆಶಯವಾಗಿದೆ. ಶಸ್ತ್ರಾಸ್ತ್ರ  ಕೈಗೆತ್ತಿಕೊಂಡು ಸರ್ಕಾರದ ಜತೆ ಸಂಘರ್ಷದ ಹಾದಿ ತುಳಿಯಲು ಹೊರಟಿರುವ ಜನಾಂಗೀಯ ಗುಂಪುಗಳ ಜತೆಗೆ ಶಾಂತಿ ಪ್ರಕ್ರಿಯೆ  ಮುಂದುವರೆಸಲು ಸೂಕಿ ನಿರ್ಧರಿಸಿದ್ದಾರೆ.  ಈ ಉದ್ದೇಶಕ್ಕೆ ತಮ್ಮ ಆಪ್ತ ಬಳಗದಲ್ಲಿ ಒಬ್ಬರಾಗಿರುವ ತಮ್ಮ ಖಾಸಗಿ ವೈದ್ಯರನ್ನು ಸಂಧಾನ ಪ್ರಕ್ರಿಯೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದಾರೆ.

ರೋಹಿಂಗ್ಯಾ ಸಮಸ್ಯೆ ಬಗೆಹರಿಸಲು ಸೂಕಿ ಅವರು ಇತ್ತೀಚೆಗೆ ವಿಶ್ವಸಂಸ್ಥೆಯ ಮಾಜಿ  ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್‌ ಅವರ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಸಮಿತಿಯೊಂದನ್ನು ರಚಿಸಿದ್ದಾರೆ.  ಸ್ಥಳೀಯರ ಆತಂಕ, ರಾಷ್ಟ್ರೀಯ ಭಾವನೆ ಮತ್ತು ಜಾಗತಿಕ ನಿರೀಕ್ಷೆಗಳನ್ನು ಪರಿಗಣಿಸಿ ತುಂಬ ಜಾಣತನದಿಂದ ಈ ಸಮಿತಿ ರಚಿಸಲಾಗಿದೆ.

ಅಂತರರಾಷ್ಟ್ರೀಯ ಒತ್ತಡದ ಕಾರಣಕ್ಕೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಮ್ಯಾನ್ಮಾರ್‌ ಸರ್ಕಾರಕ್ಕೆ ಮುಖ್ಯವಾಗಿತ್ತು. ಸ್ಥಳೀಯರ ಭಾವನೆಗಳಿಗೆ ಸ್ಪಂದಿಸುವುದು ಅದರಲ್ಲೂ ವಿಶೇಷವಾಗಿ ರಖಿನ್‌ ರಾಜ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸುತ್ತಿರುವ ಬಗ್ಗೆ ಭರವಸೆ ಮೂಡಿಸುವುದು ಸರ್ಕಾರಕ್ಕೆ ಆದ್ಯತೆಯ ವಿಷಯವಾಗಿತ್ತು.

ವೈವಿಧ್ಯಮಯ ಗುಂಪುಗಳು, ಸಂಘರ್ಷ ಸ್ವರೂಪದ ಹಿತಾಸಕ್ತಿಗಳು ಮತ್ತು ವಿಭಿನ್ನ ನಿರೀಕ್ಷೆಗಳ ಜನಾಂಗಗಳ ಮಧ್ಯೆ ಸೇತುವೆ ನಿರ್ಮಿಸುವ ಕಾರಣಕ್ಕೆ ‘21ನೇ ಶತಮಾನದ ಪ್ಯಾಂಗ್ಲೊಂಗ್‌ ಸಮ್ಮೇಳನ’ವು ಮಹತ್ವದ ಹೆಜ್ಜೆಯಾಗಿದೆ. ಮ್ಯಾನ್ಮಾರ್‌ದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಮಹತ್ವದ ನಿರ್ಧಾರವೂ ಇದಾಗಿದೆ.

ಜನಾಂಗೀಯ ಗುಂಪುಗಳಿಗೆ ನ್ಯಾಯ ಒದಗಿಸುವ ಭರವಸೆಯ ಸಂಧಾನ ಪ್ರಕ್ರಿಯೆಯಲ್ಲಿ ಎಲ್ಲರೂ ಒಳಗೊಳ್ಳುವಂತಹ ವಿಧಾನ ಇದಾಗಿದೆ  ಎಂದೂ ಆಶಿಸಲಾಗಿದೆ.  ಈ ಪ್ರಕ್ರಿಯೆ ಮುಂದುವರೆಸಿಕೊಂಡು ಹೋಗುವಲ್ಲಿ ದೇಶದ ಸಲಹೆಗಾರ್ತಿ ಹುದ್ದೆ ನಿಭಾಯಿಸುತ್ತಿರುವ ಸೂಕಿ ಅವರ ರಾಜಕೀಯ ಮುತ್ಸದ್ದಿತನವು ಪರೀಕ್ಷೆಗೆ ಒಳಪಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT