ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶದ ನಭಕ್ಕೇರಿ ಪಾತಾಳಕ್ಕಿಳಿದ ಪತ್ರಕರ್ತ

Last Updated 15 ಜೂನ್ 2017, 19:30 IST
ಅಕ್ಷರ ಗಾತ್ರ

ಮೇ 18 ರಂದು ತೀರಿಕೊಂಡ ರೋಜರ್ ಏಲ್ಸ್ ಅಮೆರಿಕದ ಮಾಧ್ಯಮ ಕ್ಷೇತ್ರದ ದಿಗ್ಗಜ. ಕಳೆದ 35 ವರ್ಷಗಳಲ್ಲಿ ಅಮೆರಿಕ ರಾಜಕೀಯದ ಮೇಲೆ ಅತಿಹೆಚ್ಚು ಪ್ರಭಾವ ಬೀರಿದ ಪತ್ರಿಕೋದ್ಯಮಿ. ಅಮೆರಿಕದ ಮೂವರು ಅಧ್ಯಕ್ಷರನ್ನು (ನಿಕ್ಸನ್, ರೇಗನ್, ಬುಷ್ ಸೀನಿಯರ್) ಒಪ್ಪ ಮಾಡಿ ಜನರೆದುರು ನಿಲ್ಲಿಸಿದ ರಾಜಕೀಯ ಸಲಹೆಗಾರ. 

ಏಲ್ಸ್, ಸುದ್ದಿ ಮನೆಯಲ್ಲಷ್ಟೇ ಇರಲಿಲ್ಲ. ತಮ್ಮ ಅಪ್ರತಿಮ ಬುದ್ಧಿಮತ್ತೆ, ತಂತ್ರಗಾರಿಕೆ, ಸಂಕೀರ್ಣ ವ್ಯಕ್ತಿತ್ವದಿಂದ ತಾವೇ ಸುದ್ದಿಯಾಗಿದ್ದರು. ಎಷ್ಟು ಮಂದಿ ಅವರನ್ನು ಹೊಗಳಿದರೋ, ಅಷ್ಟೇ ಮಂದಿ ತೆಗಳುವವರೂ ಇದ್ದರು. ವೃತ್ತಿಯಲ್ಲಿ ದೊಡ್ಡ ಏಣಿ ಏರಿದ್ದೇನೋ ಖರೆ ಆದರೆ ಬದುಕಿನ ಕೊನೆಯಲ್ಲಿ ‘ಲೈಂಗಿಕ ದೌರ್ಜನ್ಯ’ದ ಮಸಿ ತಾಗಿಸಿಕೊಂಡು ಪಾತಾಳಕ್ಕೆ ಕುಸಿದರು.

ಏಲ್ಸ್, ಅಮೆರಿಕದ ರಾಜಕೀಯ ಮತ್ತು ಮಾಧ್ಯಮ ಕ್ಷೇತ್ರವನ್ನು ಏಕಕಾಲಕ್ಕೆ ಬದಲಿಸಲು ನೋಡಿದರು. ಸಿದ್ಧಸೂತ್ರಗಳನ್ನು ಮುರಿದರು. ವರದಿಗಾರಿಕೆಗೆ ನಾವೀನ್ಯ ತಂದರು. ಎಷ್ಟರ ಮಟ್ಟಿಗೆ ಎಂದರೆ, ಅಮೆರಿಕದ ಪತ್ರಿಕೋದ್ಯಮವನ್ನು ರೋಜರ್ ಏಲ್ಸ್ ಪೂರ್ವದ ಮತ್ತು ನಂತರದ ಪತ್ರಿಕೋದ್ಯಮ ಎಂದು ವಿಂಗಡಿಸಬಹುದು. ರೋಜರ್ ಕಣ್ಣಿಗೆ ಬಿದ್ದರೆ ಅವಕಾಶ ಮತ್ತು ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಪತ್ರಕರ್ತರು ಕಾಯುತ್ತಿದ್ದರು. ‘ಫಾಕ್ಸ್’ ಸುದ್ದಿವಾಹಿನಿಯನ್ನು ನಂಬರ್‌ 1 ಪಟ್ಟಕ್ಕೇರಿಸುವುದರ ಜೊತೆಗೆ ತಾವೂ ಬೆಳೆದು, ಇತರ ಪತ್ರಕರ್ತರನ್ನು ಬೆಳೆಸಿದರು. ಅತಿಹೆಚ್ಚು ಸಂಭಾವನೆ ಪಡೆಯುವ ಪತ್ರಿಕೋದ್ಯಮಿ ಎನಿಸಿಕೊಂಡರು.

ಹಾಗೆ ನೋಡಿದರೆ, ರೋಜರ್ ಏಲ್ಸ್ ಬೆಳೆದದ್ದು ಮಧ್ಯಮ ವರ್ಗದ ಕುಟುಂಬದಲ್ಲಿ. ತಂದೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹೀಮೊಫೀಲಿಯದಿಂದ ಬಳಲುತ್ತಿದ್ದ ರೋಜರ್, ಬಾಲ್ಯದಲ್ಲಿ ಮನೆಗಿಂತ ಆಸ್ಪತ್ರೆಯಲ್ಲಿ ಮಲಗಿದ್ದೇ ಹೆಚ್ಚು. ನಾಲ್ಕು ಬಾರಿ ಸಾವಿಗೆ ಮುಖ ಒಡ್ಡುವ ಪ್ರಸಂಗ ಎದುರಾಗಿತ್ತು. ಓಹಿಯೋ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಪದವಿ ಪಡೆದ ಏಲ್ಸ್, ಸಣ್ಣ ಪುಟ್ಟ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಾ, ತಮ್ಮದೇ ಶೈಲಿಯ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಿ ಗುರುತಿಸಿಕೊಂಡವರು.

ನಿಕ್ಸನ್ ಅವರೊಂದಿಗೆ ನಿಗದಿಯಾದ ಸಂದರ್ಶನ ಕಾರ್ಯಕ್ರಮ ರೋಜರ್ ರಾಜಕೀಯ ರಂಗದತ್ತ ಮುಖಮಾಡುವುದಕ್ಕೆ ಕಾರಣವಾಯಿತು. ಆಗಿನ್ನೂ ಅವರ ವಯಸ್ಸು 28. 1960ರ ಅಧ್ಯಕ್ಷೀಯ ಚುನಾವಣೆಯಲ್ಲಿ ನಿಕ್ಸನ್ ಸೋಲಿಗೆ ಪ್ರಮುಖ ಕಾರಣ, ಅವರು ಜಾನ್ ಕೆನಡಿ ಅವರಷ್ಟು ಆಕರ್ಷಕವಾಗಿ ತಮ್ಮನ್ನು ಬಿಂಬಿಸಿಕೊಳ್ಳಲಿಲ್ಲ, ಟ.ವಿ. ಚರ್ಚೆಗಳಲ್ಲಿ ನಿಕ್ಸನ್ ಪೇಲವವಾಗಿ ಕಾಣುತ್ತಿದ್ದರು ಎಂಬ ಅಭಿಪ್ರಾಯವಿತ್ತು. ಆ ಬಗ್ಗೆ ಸಂದರ್ಶನದಲ್ಲಿ ಪ್ರಸ್ತಾಪಿಸಿದಾಗ ನಿಕ್ಸನ್, ‘ಟಿವಿ ಮಾಧ್ಯಮ ಒಂದು ಗಿಮಿಕ್’ ಎಂದಿದ್ದರು. ಅದಕ್ಕೆ ಥಟ್ಟನೆ ಪ್ರತಿಕ್ರಿಯಿಸಿದ್ದ ರೋಜರ್, ‘Television is not a gimmick and if you think it is, you will lose again’ ಎಂದು ತಿರುಗೇಟು ನೀಡಿದ್ದರು. ಈ ಚುರುಕು ಮಾತಿನಿಂದ ಪ್ರಭಾವಿತರಾದ ನಿಕ್ಸನ್ ತಮ್ಮ ಮುಂದಿನ ಚುನಾವಣಾ ಪ್ರಚಾರ ಕಾರ್ಯದಲ್ಲಿ ರೋಜರ್ ಅವರನ್ನು ತೊಡಗಿಸಿಕೊಂಡರು.

ಚಾಣಾಕ್ಷತನ ಮತ್ತು ಯೋಜನೆಗಳ ಬಗ್ಗೆ ಇದ್ದ ನಿಖರತೆ ನಿಕ್ಸನ್ ಜನಪ್ರಿಯತೆಗೆ ಕಾರಣವಾಗಿದ್ದರೂ, ಸಿಟ್ಟುಮುಖದ ನಿಕ್ಸನ್ ಜನರಿಗೆ ಹತ್ತಿರವಾಗಿರಲಿಲ್ಲ. ರೋಜರ್ ಎದುರಿಗಿದ್ದ ಸವಾಲೆಂದರೆ, ನಿಕ್ಸನ್ ಅವರನ್ನು ಜನ ಇಷ್ಟಪಡುವಂತೆ ಮಾಡುವುದು. ಅದನ್ನು ಅವರು ಸಮರ್ಥವಾಗಿ ನಿರ್ವಹಿಸಿದರು. ಆ ಬಗ್ಗೆ ಲೇಖಕ ಜೋ ಮೆಕ್ಗಿನ್ನಿಸ್ ‘The Selling of the President 1968’ ಕೃತಿಯಲ್ಲಿ ವಿವರಿಸಿದ್ದಾರೆ.

ನಿಕ್ಸನ್ ನಡೆ ನುಡಿ, ಭಾವ ಭಂಗಿ ಎಲ್ಲವನ್ನೂ ರೋಜರ್ ಏಲ್ಸ್ ನಿರ್ದೇಶಿಸಿದರು. ನಿಕ್ಸನ್ ಗೆಲುವಿಗೆ ಅದು ಸಹಕಾರಿಯಾಯಿತು. ರೋಜರ್ ಆಲೋಚನಾ ಕ್ರಮ ಹೇಗಿರುತ್ತಿತ್ತು ಎಂಬುದಕ್ಕೆ ಉದಾಹರಣೆ ಎಂದರೆ, 1970ರ ಕ್ರಿಸ್ಮಸ್ ವೇಳೆ ವಾಡಿಕೆಯಂತೆ ಅಧ್ಯಕ್ಷರು ಶ್ವೇತಭವನದಲ್ಲಿ ಕ್ರಿಸ್ಮಸ್ ದೀಪ ಬೆಳಗುವ ಕಾರ್ಯಕ್ರಮ ಆಯೋಜನೆಯಾಗಿತ್ತು. ‘ನಿಕ್ಸನ್ ವೇದಿಕೆಗೆ ಬಂದೊಡನೆ, ಪುಟ್ಟ ಹುಡುಗನೊಬ್ಬ ವೇದಿಕೆಗೆ ಬರುತ್ತಾನೆ, ಇಬ್ಬರೂ ಸೇರಿ ದೀಪ ಬೆಳಗುತ್ತಾರೆ’ ಎಂಬುದು ನಿರ್ಧರಿತ ಕಾರ್ಯಕ್ರಮ. ಆದರೆ ರೋಜರ್ ಅದನ್ನು ಬದಲಿಸಿದರು. ‘ಪುಟ್ಟ ಹುಡುಗ ವೇದಿಕೆಗೆ ಬರುವ ಬದಲು, ನಿಕ್ಸನ್ ವೇದಿಕೆಯಿಂದ ಕೆಳಗಿಳಿದು ಸಭಿಕರ ಬಳಿ ನಡೆದು ಮೊದಲ ಸಾಲಿನಲ್ಲಿ ಕುಳಿತ ಮಗುವೊಂದನ್ನು ಎತ್ತಿಕೊಂಡು ಬಂದು ದೀಪ ಬೆಳಗಿದರೆ ಚೆನ್ನ’ ಎಂಬ ಸಲಹೆ ಇತ್ತರು. ಈ ಸಣ್ಣ ಬದಲಾವಣೆಯಿಂದ ನಿಕ್ಸನ್ ಮತ್ತಷ್ಟು ಆಪ್ತವಾಗಿ ಕಂಡರು.   

ನಿಕ್ಸನ್ ಚುನಾವಣಾ ಪ್ರಚಾರದ ಯಶಸ್ಸು, ಹಲವು ಮಹತ್ವದ ಜವಾಬ್ದಾರಿಗಳು ರೋಜರ್ ಹೆಗಲೇರುವುದಕ್ಕೆ ಕಾರಣವಾಯಿತು. 1984ರ ಚುನಾವಣೆಯಲ್ಲಿ ಪುನರಾಯ್ಕೆ ಬಯಸಿ ರೇಗನ್ ಕಣದಲ್ಲಿದ್ದರು. ಏರಿದ ವಯಸ್ಸು, ಬಲಗೊಳ್ಳದ ಆರ್ಥಿಕತೆ ರೇಗನ್ ಮುಖ ಕಳೆಗುಂದುವಂತೆ ಮಾಡಿತ್ತು. ನೇರ ಚರ್ಚೆಗಳಲ್ಲಿ ಪ್ರಶ್ನೆಗಳನ್ನು ಎದುರಿಸುವಾಗ ರೇಗನ್ ಅಧೀರರಾಗುತ್ತಿದ್ದರು. ಆಗ ರೇಗನ್ ಸಹಾಯಕ್ಕೆ ನಿಂತವರು ರೋಜರ್ ಏಲ್ಸ್. ರೇಗನ್ ನಡೆ ನುಡಿಗಳನ್ನು ತಿದ್ದಿ, ಹುರುಪು ತುಂಬಿ ಪ್ರಚಾರದ ಅಂಗಳಕ್ಕೆ ತಂದರು. ಯಾವುದೇ ಕಾರಣಕ್ಕೂ ವಯಸ್ಸಿನ ಬಗ್ಗೆ ಮಾತನಾಡಬಾರದು ಎಂದು ಕಟ್ಟಪ್ಪಣೆ ಮಾಡಿದರು. ಆಕ್ರಮಣಕಾರಿಯಾಗಿ ವಿಷಯ ಮಂಡಿಸುವ ಬಗ್ಗೆ ತರಬೇತಿ ನೀಡಿದರು. ರೇಗನ್ ಮರು ಆಯ್ಕೆ ಕಷ್ಟವಾಗಲಿಲ್ಲ.

ಇನ್ನು, 1989ರಲ್ಲಿ ಜಾರ್ಜ್ ಬುಷ್ ಸೀನಿಯರ್ ಚುನಾವಣೆಗೆ ನಿಂತಾಗ ಅವರನ್ನು ‘ದುರ್ಬಲ ಅಭ್ಯರ್ಥಿ’ ಎಂದೇ ಮಾಧ್ಯಮಗಳು ಬಿಂಬಿಸಿದ್ದವು. ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದ, ಯುದ್ಧ ವಿಮಾನದಿಂದ ಹಾರಿ ಸಾಹಸ ಮೆರೆದಿದ್ದ ಬುಷ್ ಅವರನ್ನು ದುರ್ಬಲ ಎಂದು ಕರೆಯಲು ಕಾರಣ ಇರಲಿಲ್ಲ. ಆ ಛಾಯೆಯಿಂದ ಅವರನ್ನು ಹೊರತರುವ ಹೊಣೆ ಏಲ್ಸ್ ಹೆಗಲಿಗೆ ಬಿತ್ತು. ಕ್ಯಾಮೆರಾ ಎದುರಿಸುವುದು ಹೇಗೆ, ಮಾಧ್ಯಮ ಚರ್ಚೆಯಲ್ಲಿ ಯಾವ ಭಂಗಿಯಲ್ಲಿ ನಿಂತರೆ ಸೂಕ್ತ ಎಂಬಿತ್ಯಾದಿ ಸಣ್ಣ ಪುಟ್ಟ ಸಂಗತಿಗಳ ಬಗ್ಗೆ ಏಲ್ಸ್ ಮಾರ್ಗದರ್ಶನ ಮಾಡಿದರು. ಬುಷ್ ತಮ್ಮ ಛಾಯೆ ಮೀರಿ ಚುನಾವಣೆಯಲ್ಲಿ ಗೆದ್ದರು. ಅಭ್ಯರ್ಥಿ+ ಹಣ + ಮಾಧ್ಯಮ ಪ್ರಚಾರ = ಮತಗಳು ಎಂಬ ಏಲ್ಸ್ ಸೂತ್ರ ಚುನಾವಣೆಯಲ್ಲಿ ಕೆಲಸ ಮಾಡಿತು.

1991ರ ವರೆಗೂ ರಾಜಕೀಯ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದ ಏಲ್ಸ್, ನಂತರ ದೃಶ್ಯ ಮಾಧ್ಯಮದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. CNBC ಮಾಧ್ಯಮ ಸಂಸ್ಥೆಯ ಅಧ್ಯಕ್ಷರಾದರು. 1996ರಲ್ಲಿ ಅಮೆರಿಕ ಮಾಧ್ಯಮ ದೊರೆ ರುಪರ್ಟ್ ಮರ್ಡೋಕ್, ರೋಜರ್ ಏಲ್ಸ್ ಅವರನ್ನು ಎಳೆದುತಂದು ಫಾಕ್ಸ್ ಸುದ್ದಿವಾಹಿನಿಯ ಸಿಇಒ ಮಾಡಿದರು. ಫಾಕ್ಸ್ ಸುದ್ದಿವಾಹಿನಿ ಆರಂಭವಾದಾಗ, ಅಮೆರಿಕದ ಬಹುತೇಕ ಸುದ್ದಿವಾಹಿನಿಗಳು, ಪತ್ರಿಕೆಗಳು ಉದಾರವಾದ ಮತ್ತು ಕಮ್ಯುನಿಸ್ಟ್‌ ಚಿಂತನೆಯ ಪರ ಇದ್ದವು. ಈ ಬಗ್ಗೆ ಸಂಪ್ರದಾಯವಾದಿ ಅಮೆರಿಕನ್ನರಿಗೆ ಅಸಮಾಧಾನ ಇತ್ತು. ಏಲ್ಸ್ ಈ ವರ್ಗವನ್ನು ಮನಸ್ಸಿನಲ್ಲಿಟ್ಟುಕೊಂಡು ಫಾಕ್ಸ್ ಚಾನೆಲ್ ರೂಪಿಸಿದರು.

‘Fair and Balanced’ ಎಂಬ ಉದ್ಘೋಷದೊಂದಿಗೆ ಬಂದ ಫಾಕ್ಸ್ ಚಾನೆಲ್ ಸಂಪ್ರದಾಯವಾದಿ ಅಮೆರಿಕನ್ನರಿಗೆ ಆಪ್ಯಾಯ ಎನಿಸಿತು. ನಿಕ್ಸನ್ ಮತ್ತು ರಿಪಬ್ಲಿಕನ್ ಪಕ್ಷದ ಕಟ್ಟಾ ಬೆಂಬಲಿಗರಾಗಿದ್ದ ಶ್ವೇತವರ್ಣೀಯರು ಫಾಕ್ಸ್ ವಾಹಿನಿಯ ಕಾಯಂ ವೀಕ್ಷಕರಾದರು. ‘ಬಲ’ದ ಕಡೆ ಒಲವಿಟ್ಟುಕೊಂಡು ಎಡಗೈಯಲ್ಲಿ ಬರೆಯುತ್ತಿದ್ದ ಪತ್ರಕರ್ತರ ಹಿಂಡು ಫಾಕ್ಸ್ ಸಮೂಹಕ್ಕೆ ಜಿಗಿಯಿತು. ಆದರೆ ಅದಾಗಲೇ ಮುಂಚೂಣಿಯಲ್ಲಿದ್ದ CNN ಮತ್ತು MSNBC ಯನ್ನು ಹಿಂದಿಕ್ಕುವುದು ಸುಲಭವೇನೂ ಆಗಿರಲಿಲ್ಲ. ಸುದ್ದಿಯನ್ನು ರೇಖಾಚಿತ್ರ, ನಕ್ಷೆಗಳ ಮೂಲಕ ವಿವರಿಸುವ ವಿಧಾನವನ್ನು ಫಾಕ್ಸ್ ಅಳವಡಿಸಿಕೊಂಡಿತು. ಗಂಟಲು ಗಟ್ಟಿಯಿದ್ದ ಪತ್ರಕರ್ತರು ಹೆಚ್ಚು ಅವಕಾಶ ಗಳಿಸಿದರು. 2002ರಲ್ಲಿ, ಅಂದರೆ ಚಾನೆಲ್ ಆರಂಭವಾಗಿ 5 ವರ್ಷ ಆಗುವ ಹೊತ್ತಿಗೆ ಫಾಕ್ಸ್ ನ್ಯೂಸ್, ಸಿಎನ್ಎನ್ ವಾಹಿನಿಯನ್ನು ಪಕ್ಕಕ್ಕೆ ತಳ್ಳಿ ನಂಬರ್‌ 1 ಸ್ಥಾನಕ್ಕೆ ಏರಿತು. ನಂತರದ 15 ವರ್ಷ ಆ ಸ್ಥಾನವನ್ನು ಫಾಕ್ಸ್ ಬಿಟ್ಟುಕೊಡಲಿಲ್ಲ. ಫಾಕ್ಸ್ ಸಂಸ್ಥೆ ಬೆಳೆದಂತೆ, ಏಲ್ಸ್ ಜನಪ್ರಿಯತೆ ಬೆಳೆಯಿತು.

ತಮ್ಮನ್ನು ಕಟ್ಟಾ ಸಂಪ್ರದಾಯವಾದಿ ಎಂದು ಜರೆದವರಿಗೆ ‘ನಾನೊಬ್ಬ ಸಂಪ್ರದಾಯವಾದಿಯಂತೆ ನಿಮಗೆ ಕಾಣುತ್ತಿದ್ದರೆ, ನೀವು ತೀರಾ ಎಡಕ್ಕೆ ವಾಲಿದ್ದೀರಿ ಎಂದರ್ಥ’ ಎಂದು ರೋಜರ್ ಏಲ್ಸ್ ತಿರುಗೇಟು ನೀಡುತ್ತಿದ್ದರು. CNN ಅಂದರೆ ಕ್ಲಿಂಟನ್ ನ್ಯೂಸ್ ನೆಟ್ವರ್ಕ್, CBS ಎಂದರೆ ಕಮ್ಯುನಿಸ್ಟ್‌ ಬ್ರಾಡ್ಕಾಸ್ಟಿಂಗ್ ಸಿಸ್ಟಮ್ ಎಂದು ಲೇವಡಿ ಮಾಡುತ್ತಿದ್ದರು.

ರೋಜರ್ ಏಲ್ಸ್ ಮುಂದಿಟ್ಟ ‘Orchestra Pit Theory’ ಇಂದು ಮಾಧ್ಯಮಗಳ ಆದ್ಯತೆ ಏನಾಗಿದೆ ಎಂಬುದನ್ನು ಹೇಳುತ್ತದೆ. ‘ಇಬ್ಬರು ವ್ಯಕ್ತಿಗಳು ವೇದಿಕೆಯ ಮೇಲೆ ಇದ್ದಾರೆ ಎಂದುಕೊಳ್ಳಿ, ಒಬ್ಬಾತ ‘ನನ್ನ ಬಳಿ ಮಧ್ಯಪ್ರಾಚ್ಯ ಬಿಕ್ಕಟ್ಟಿಗೆ ಪರಿಹಾರ ಸೂತ್ರ ಇದೆ’ ಎನ್ನುತ್ತಾನೆ. ಮತ್ತೊಬ್ಬ ವೇದಿಕೆಯ ಮುಂಭಾಗ ಮುಗ್ಗರಿಸಿ ಬೀಳುತ್ತಾನೆ. ಆ ಎರಡರಲ್ಲಿ ಮಾಧ್ಯಮಗಳು ಹೆಕ್ಕಿಕೊಳ್ಳುವ ಸುದ್ದಿ ಯಾವುದು?’ ಎಂದು ವ್ಯಂಗ್ಯವಾಗಿ ಏಲ್ಸ್ ಪ್ರಶ್ನಿಸಿದ್ದರು. 

ಮೊನ್ನೆ ರೋಜರ್ ಏಲ್ಸ್ ತೀರಿಕೊಂಡಾಗ, ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಮೊನಿಕಾ ಲೆವಿಸ್ಕಿ ಲೇಖನ ಬರೆದಿದ್ದರು. ಅದಕ್ಕೆ ಆಕೆ ಕೊಟ್ಟ ಶೀರ್ಷಿಕೆ ‘Roger Ailes’s Dream Was My Nightmare’. ತಮ್ಮ ಮತ್ತು ಕ್ಲಿಂಟನ್ ಲೈಂಗಿಕ ಹಗರಣವನ್ನು ಬಳಸಿಕೊಂಡು ಫಾಕ್ಸ್ ಹೇಗೆ ಬೆಳೆಯಿತು ಎಂಬ ಬಗ್ಗೆ ಮೊನಿಕಾ ವಿವರಿಸಿದ್ದರು. ಇಂದು ನಮ್ಮ ಕನ್ನಡ ಸುದ್ದಿವಾಹಿನಿಗಳು ಯಾವುದಾದರೂ ಹಗರಣ ಬೆಳಕಿಗೆ ಬಂದಾಗ ದಿನಪೂರ್ತಿ ಅದನ್ನೇ ಎಳೆದು ಜಗ್ಗಿ ತೋರಿಸುವುದನ್ನು ನೋಡುತ್ತೇವಲ್ಲಾ, ಆ ಕೆಟ್ಟ ಪ್ರವೃತ್ತಿ ಆರಂಭವಾದದ್ದು ಬಹುಶಃ ಕ್ಲಿಂಟನ್ ಲೈಂಗಿಕ ಹಗರಣ ಸ್ಫೋಟಗೊಂಡಾಗ, ಅದಕ್ಕೆ ಮುನ್ನುಡಿ ಬರೆದದ್ದು ಫಾಕ್ಸ್ ಸುದ್ದಿವಾಹಿನಿ. ಆ ಬಗ್ಗೆ ರೋಜರ್ ‘Monica was a news channel’s dream come true’ ಎಂದು ಪ್ರತಿಕ್ರಿಯಿಸಿದ್ದರು.

ಇನ್ನು, ಏಲ್ಸ್ ಬಗ್ಗೆ ಸಾಕಷ್ಟು ಟೀಕೆಗಳಿವೆ. ಫಾಕ್ಸ್ ಸುದ್ದಿವಾಹಿನಿಯನ್ನು ಟ್ಯಾಬ್ಲಾಯ್ಡ್ ಮಟ್ಟಕ್ಕೆ ಇಳಿಸಿದರು. ರೋಚಕತೆ ಮತ್ತು ಪ್ರಚೋದನೆಗೆ ಆದ್ಯತೆ ಕೊಟ್ಟರು. ಸುದ್ದಿಯ ನಿಖರತೆ, ವಸ್ತುನಿಷ್ಠ ವರದಿಗಿಂತ ಸುದ್ದಿ ವಾಚಕರ ಅಂದ ಚೆಂದಕ್ಕೆ ಪ್ರಾಶಸ್ತ್ಯ ನೀಡಿದರು. ಅಂದದ ಲಲನೆಯರನ್ನು ಮುಖ್ಯ ವಾರ್ತೆಯಲ್ಲಿ ಕೂರಿಸಿದರು ಎನ್ನುವವರಿದ್ದಾರೆ. 9/11 ನಂತರ ಇರಾಕ್ ಯುದ್ಧಕ್ಕೆ ಬುಷ್ ಅವರನ್ನು ಪ್ರಚೋದಿಸಿದ್ದೇ ರೋಜರ್ ಏಲ್ಸ್ ಎಂಬ ಆರೋಪ ಇದೆ. ಈ ಟೀಕೆ ಆರೋಪಗಳು ರೋಜರ್ ಏಲ್ಸ್ ಜನಪ್ರಿಯತೆಗೆ ಚ್ಯುತಿ ತರಲಿಲ್ಲ.

ಆದರೆ 2014ರಲ್ಲಿ ಗೇಬ್ರಿಯಲ್ ಶರ್ಮನ್ ತಮ್ಮ ಪುಸ್ತಕದಲ್ಲಿ ರೋಜರ್ ಅವರ ಇನ್ನೊಂದು ಮುಖದ ಅನಾವರಣ ಮಾಡಿದರು. 80ರ ದಶಕದಲ್ಲಿ ಏಲ್ಸ್, ಪದೋನ್ನತಿಯ ಆಸೆ ತೋರಿಸಿ ಸಹೋದ್ಯೋಗಿಯೊಬ್ಬರನ್ನು ಮಂಚಕ್ಕೆ ಕರೆದಿದ್ದರು ಎಂಬ ಸ್ಫೋಟಕ ಮಾಹಿತಿ ಹೊರ ಹಾಕಿದರು. ಅದರ ಹಿಂದೆಯೇ ‘ಲೈಂಗಿಕ ದೌರ್ಜನ್ಯ’ದ ಸರಣಿ ಆರೋಪಗಳು ಬಂದವು. ರೋಜರ್ ಏಲ್ಸ್, ಶರ್ಮನ್ ಆರೋಪವನ್ನು ನಿರಾಕರಿಸಿದರಾದರೂ, ಪತ್ರಿಕೋದ್ಯಮದ ಈ ದಿಗ್ಗಜ ಪ್ರತಿಸ್ಪರ್ಧಿ ಸುದ್ದಿ ವಾಹಿನಿಗಳಿಗೆ ಆಹಾರವಾದರು. ಕೊನೆಗೆ ಫಾಕ್ಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರನಡೆದರು. ತಾನೇ ಕಟ್ಟಿದ ಸಂಸ್ಥೆಯಿಂದ, ಮುಖ ತಗ್ಗಿಸಿ ಹೊರನಡೆಯಬೇಕಾಗಿ ಬಂದದ್ದು ರೋಜರ್ ಏಲ್ಸ್ ಬದುಕಿನ ಮಹಾ ದುರಂತ.

ಒಟ್ಟಿನಲ್ಲಿ, ಅಮೆರಿಕ ಇಂದು ಉದಾರವಾದಿ, ಸಂಪ್ರದಾಯವಾದಿ ಎಂದು ಹೋಳಾಗಿದ್ದರೆ, ಮಾಧ್ಯಮ ರಂಗದಲ್ಲಿ ಎಡ-ಬಲ ಢಾಳಾಗಿ ಕಾಣುತ್ತಿದ್ದರೆ ಅದಕ್ಕೆ ಪ್ರಮುಖ ಕಾರಣ ರೋಜರ್ ಏಲ್ಸ್. ಸಂಪ್ರದಾಯವಾದಿ ರಾಜಕಾರಣವನ್ನು ಮುನ್ನೆಲೆಗೆ ತಂದ, ಕುಸಿದು ಬೀಳುತ್ತಿದ್ದ ರಿಪಬ್ಲಿಕನ್ ಪಕ್ಷಕ್ಕೆ ಮಾಧ್ಯಮದ ಮೂಲಕ ಆಸರೆಯಾದ ಏಲ್ಸ್, ಮೂವರು ರಿಪಬ್ಲಿಕನ್ ಅಭ್ಯರ್ಥಿಗಳು ಅಧ್ಯಕ್ಷರಾಗುವುದಕ್ಕೆ ಕಾರಣರಾದರು. ಕಮ್ಯುನಿಸ್ಟ್‌್ ಹಿಡಿತದಲ್ಲಿದ್ದ ಪತ್ರಿಕೋದ್ಯಮದ ಮಗ್ಗುಲು ಬದಲಿಸಿದರು. ಇದೀಗ ರೋಜರ್ ಏಲ್ಸ್ ನಿರ್ಗಮನದೊಂದಿಗೆ ಅಮೆರಿಕದ ಮಾಧ್ಯಮ ಕ್ಷೇತ್ರ ‘ಬಲ’ ಕಳೆದುಕೊಂಡಂತಾಗಿದೆ. ಅದೇನೇ ಇರಲಿ, ಪತ್ರಿಕೋದ್ಯಮದ ಬಗ್ಗೆ ಆಸಕ್ತಿಯಿರುವವರು, ಪತ್ರಕರ್ತರು ಅಗತ್ಯವಾಗಿ ಅಭ್ಯಾಸ ಮಾಡಬೇಕಾದ ವ್ಯಕ್ತಿತ್ವ ರೋಜರ್ ಏಲ್ಸ್. ಪತ್ರಕರ್ತನಾದವನು ಹೇಗಿರಬೇಕು ಮತ್ತು ಹೇಗಿರಬಾರದು ಎಂಬುದಕ್ಕೆ ರೋಜರ್ ಏಲ್ಸ್ ಪಾಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT