ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ಸಿನ ಅನುಕರಣೆ; ಪ್ರಶ್ನಿಸದ ಪತ್ರಿಕೋದ್ಯಮ

Last Updated 15 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ನೀವೆಷ್ಟರಮಟ್ಟಿಗೆ ಇತರರ ಗಮನ ಸೆಳೆಯಬಲ್ಲಿರಿ ಎನ್ನುವುದರ ಆಧಾರದ ಮೇಲೆ ಈ ಮುಂದಿನ ಮೂರು ಪ್ರಶ್ನೆಗಳಿಗೆ ನೀವು ಸೂಕ್ತ ಉತ್ತರ ಕಂಡುಕೊಳ್ಳಲು ಸಫಲರಾಗುವಿರಿ. ಭಾರತದ ಪತ್ರಿಕೋದ್ಯಮವು ಯಾವಾಗ ಸ್ವಯಂ ಹಾನಿಗೆ ಒಳಗಾಯಿತು?, ಯಾವತ್ತಿನಿಂದ ತನ್ನ ಗೋರಿಯನ್ನು ತೋಡಿಕೊಳ್ಳತೊಡಗಿತು ಅಥವಾ ಪತ್ರಿಕೋದ್ಯಮವು ಸದ್ಯಕ್ಕೆ  ತನ್ನ ಸ್ವಯಂ ನಾಶದ ಹಾದಿಯಲ್ಲಿ ಸಾಗಿದೆಯೇ  ಎನ್ನುವ ಪ್ರಶ್ನೆಗಳನ್ನು ನಮ್ಮಷ್ಟಕ್ಕೆ ನಾವು ಕೇಳಿಕೊಂಡಾಗ ನಾನು ಮೂರನೇ ಪ್ರಶ್ನೆಯನ್ನೇ ಆಯ್ದುಕೊಳ್ಳುವೆ.

ಆತ್ಮಾವಲೋಕನ ಮಾಡಿಕೊಳ್ಳಲು ಮತ್ತು ಮುಕ್ತವಾಗಿ  ಚರ್ಚಿಸಲು ಈ ಪ್ರಶ್ನೆ ಅವಕಾಶ ಒದಗಿಸಿಕೊಟ್ಟಿದೆ. ಈ ಮೇಲಿನ ಪ್ರಶ್ನೆಗಳಿಗೆ ನಾಜೂಕಿನ ಉತ್ತರ ಕಂಡುಕೊಳ್ಳುವ ಹಲವಾರು ಮಾರ್ಗಗಳೂ ಇವೆ.

ಪತ್ರಕರ್ತರಾದ ನಾವು ನಮ್ಮಷ್ಟಕ್ಕೆ ನಾವೇ ಯಾವತ್ತಿನಿಂದ ನಮ್ಮದೇ ಸರ್ಕಾರದ ವಕ್ತಾರರಾಗಲು ಹೊರಟಿದ್ದೇವೆ, ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಬಗ್ಗೆ ನಾವು ಸರ್ಕಾರವನ್ನು ಪ್ರಶ್ನಿಸದಿರಲು ನಿರ್ಧರಿಸಿದ್ದು ಏಕೆ ಎನ್ನುವ ಪ್ರಶ್ನೆಗಳೂ ನನ್ನನ್ನು ಕಾಡುತ್ತವೆ.

ನಮ್ಮ ದೇಶದ ಬಗ್ಗೆ, ಸರ್ಕಾರದ ವಿದೇಶಾಂಗ ಮತ್ತು ಭದ್ರತಾ ನೀತಿಗಳ ಬಗ್ಗೆ ಮಾತನಾಡುವಾಗ ನನ್ನಂತಹ ಹಿರಿಯ ಪತ್ರಕರ್ತರೂ ಸೇರಿದಂತೆ ನಮ್ಮ ಬಹುತೇಕ ಪತ್ರಕರ್ತರು, ‘ನಾವು’, ‘ನಮ್ಮ’ ಮತ್ತು ‘ನಮಗೆ’ ಪದಗಳನ್ನಷ್ಟೇ ಬಳಸುತ್ತೇವೆ ಹೊರತು, ಈ ಬಗ್ಗೆ ಪ್ರಶ್ನೆಗಳನ್ನು ಕೇಳದಿರುವುದು ಅವಲಕ್ಷಣ ಎನಿಸಲಾರದು ಎಂಬ ಭಾವನೆ ನಮಗೆ ಬರುವುದೇ ಇಲ್ಲ.

ಈ ಕಾರಣಕ್ಕೆ ಓದುಗರಲ್ಲಿ ಕೆಲವರು ಏಕಾಏಕಿಯಾಗಿ ನನ್ನ ಮೇಲೆ ಎರಗಿ ಬೀಳಬಹುದು. ನಾನು ನನ್ನ ನಿಲುವನ್ನು  ಸ್ಪಷ್ಟಪಡಿಸಲು ಯತ್ನಿಸುವೆ. ಹೀಗೆ ಪ್ರಶ್ನಿಸುವುದರಲ್ಲಿ ತಪ್ಪೇನಿದೆ ಎಂದೂ ನನಗೆ ಅನಿಸುತ್ತದೆ.

ಸೇನೆ ಮತ್ತು ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ಭಾರತದ ಮಾಧ್ಯಮಗಳು  ಯಾವತ್ತೂ ತಮ್ಮ ಸರ್ಕಾರದ ಪರವಾಗಿಯೇ ನಿಲುವು ತಳೆಯುತ್ತವೆ ಎಂದು ಪಾಕಿಸ್ತಾನದ ಪತ್ರಕರ್ತರು ಮತ್ತು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಪಾಕಿಸ್ತಾನದ ಕೆಲ ಪತ್ರಕರ್ತರು ಅಲ್ಲಿನ ಸರ್ಕಾರದ ಅನೇಕ ನೀತಿಗಳನ್ನು ಮತ್ತು ಹೇಳಿಕೆಗಳನ್ನು ದಿಟ್ಟತನದಿಂದ ನಿರಂತರವಾಗಿ ಪ್ರಶ್ನಿಸುತ್ತಲೇ ಬಂದಿದ್ದಾರೆ. ಕಾಶ್ಮೀರ ಕುರಿತ ನೀತಿಯಲ್ಲಿನ ದೋಷ, ಉಗ್ರಗಾಮಿ ಸಂಘಟನೆಗಳ ಪೋಷಣೆ, ನಾಗರಿಕ ವ್ಯವಸ್ಥೆ ಮತ್ತು ಸೇನೆ ನಡುವಣ ಬಾಂಧವ್ಯವನ್ನು ಅವರು ಪ್ರಶ್ನಿಸುತ್ತಲೇ ಇರುತ್ತಾರೆ.  ಹೀಗೆ ಸರ್ಕಾರವನ್ನು ಎದುರು ಹಾಕಿಕೊಂಡ ರಾಜಾ ರುಮಿ, ಹುಸೇನ್‌ ಹಕ್ಕಾನಿ ಅವರನ್ನು ದೇಶದಿಂದಲೇ ಹೊರ ಹಾಕಲಾಗಿದೆ. ನಜ್ಮಾ ಸೇಠಿ ಅವರಂತಹವರನ್ನು ಜೈಲಿಗೂ ಹಾಕಲಾಗಿದೆ.

ನಾಗರಿಕ ವ್ಯವಸ್ಥೆ ಮತ್ತು ಸೇನೆ ನಡುವಣ ಬಾಂಧವ್ಯ, ಪ್ರಮುಖ ಧೋರಣೆಗಳಲ್ಲಿ ಕಾಣದ ಪಾರದರ್ಶಕತೆ, ಉಗ್ರರ ತಂಡಗಳಿಗೆ ಆಶ್ರಯ ನೀಡುವುದು  ಪಾಕಿಸ್ತಾನದಲ್ಲಿನ ವಿಶೇಷ ಸಮಸ್ಯೆಗಳಾಗಿವೆ. ಅದಕ್ಕಾಗಿ ಅಲ್ಲಿನ ಪತ್ರಕರ್ತರು ಈ ಬಗ್ಗೆ ದನಿ ಎತ್ತುತ್ತಾರೆ, ಅದರಲ್ಲೇನೂ ವಿಶೇಷ ಇಲ್ಲ ಎಂದು ಭಾರತದ ಪತ್ರಕರ್ತರು ಪ್ರತಿವಾದ ಮಂಡಿಸುತ್ತಾರೆ.

ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದಲ್ಲಿನ ಪರಿಸ್ಥಿತಿ ಭಿನ್ನವಾಗಿದೆ. ಇಲ್ಲಿ  ಪ್ರಜಾಪ್ರಭುತ್ವ ವ್ಯವಸ್ಥೆ ಹೆಚ್ಚು ಸಶಕ್ತವಾಗಿದೆ. ಪಾಕಿಸ್ತಾನದಲ್ಲಿನ ಸಮಸ್ಯೆಗಳಿಗೆ ಇಲ್ಲಿನ ವಿದ್ಯಮಾನಗಳನ್ನು ಹೋಲಿಸುವುದು ಪ್ರಸ್ತುತವಾಗಲಾರದು ಎನ್ನುವುದು ಅವರ ದೃಢ ನಿಲುವಾಗಿದೆ. ಹಾಗಿದ್ದರೆ, ನಾವು (ಪತ್ರಕರ್ತರು) ಎಲ್ಲಿ ಪ್ರಶ್ನೆಗಳನ್ನು ಎತ್ತಬೇಕಾಗಿದೆ ಎನ್ನುವ ಸಂದಿಗ್ಧವೂ ಇಲ್ಲಿ ಎದುರಾಗುತ್ತದೆ.

ಶ್ರೀಲಂಕಾದಲ್ಲಿನ ಪ್ರತ್ಯೇಕತಾವಾದಿ ಉಗ್ರ ಸಂಘಟನೆ ಲಿಬರೇಷನ್‌ ಟೈಗರ್ಸ್‌ ಆಫ್‌ ತಮಿಳ್‌ ಈಳಂ (ಎಲ್‌ಟಿಟಿಇ) ಹೋರಾಟಗಾರರಿಗೆ ತರಬೇತಿ ನೀಡಿ ಶಸ್ತ್ರಾಸ್ತ್ರ ಪೂರೈಸಿದ ಸರ್ಕಾರದ ನಿಲುವನ್ನು ಭಾರತದ ಮಾಧ್ಯಮಗಳು ಕಣ್ಣುಮುಚ್ಚಿಕೊಂಡು ಬೆಂಬಲಿಸಿದವು ಎಂದು ಯಾರೊಬ್ಬರೂ ದೂರುವಂತಿಲ್ಲ. 1984ರಲ್ಲಿ ‘ಇಂಡಿಯಾ ಟುಡೆ’ ನಿಯತಕಾಲಿಕೆಯು ಈ ಬಗ್ಗೆ ಮೊದಲ ಬಾರಿಗೆ ಲೇಖನ ಪ್ರಕಟಿಸಿತ್ತು. ಪತ್ರಿಕೆಯ ಈ ನಿಲುವನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ರಾಷ್ಟ್ರ ವಿರೋಧಿ ಕೃತ್ಯ ಎಂದು ಕರೆದಿದ್ದರು.

ಆನಂತರ ಭಾರತ ತನ್ನ ಶಾಂತಿಪಾಲನಾ ಪಡೆ (ಐಆರ್‌ಕೆಎಫ್‌) ಮೂಲಕ ಶ್ರೀಲಂಕಾದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸಿತ್ತು. ಪಂಜಾಬ್‌ನ ಸ್ವರ್ಣ ಮಂದಿರದ ಮೇಲೆ ನಡೆದ ‘ಬ್ಲೂಸ್ಟಾರ್‌’  ಸೇನಾ ಕಾರ್ಯಾಚರಣೆಯಿಂದ ಹಿಡಿದು, ಬಸ್ತರ್‌ನಿಂದ ಕಾಶ್ಮೀರದ ಕಣಿವೆವರೆಗೆ ಇದುವರೆಗೆ ನಡೆದ ಅರೆ ಸೇನಾಪಡೆ ಮತ್ತು ಸೇನಾ ಕಾರ್ಯಾಚರಣೆಗಳ ಬಗ್ಗೆ ಮಾಧ್ಯಮಗಳಲ್ಲಿ ನಡೆದ ಸಾಕಷ್ಟು ಸಂಖ್ಯೆಯ ಚರ್ಚಾ ಗೋಷ್ಠಿಗಳಲ್ಲಿ, ಈ ಎಲ್ಲ  ಘಟನೆಗಳನ್ನು ಸಾಕಷ್ಟು ಹಿಂಜಲಾಗಿದೆ.  ಭಾರತ ಮತ್ತು ಅಮೆರಿಕದ ಮಧ್ಯೆ ಆಗಿರುವ ಪರಮಾಣು ಒಪ್ಪಂದವು ಇಂತಹ ಚರ್ಚೆಗೆ ದೊಡ್ಡ ನಿದರ್ಶನವಾಗಿದೆ.

ದೇಶಿ ಪತ್ರಿಕೋದ್ಯಮದಲ್ಲಿ ಇತ್ತೀಚಿನ ದಿನಗಳಲ್ಲಿ ಧೋರಣೆ ಬದಲಾಗಿದೆ. ಉರಿ ಘಟನೆಗೆ ಸಂಬಂಧಿಸಿದಂತೆ ಟೆಲಿವಿಷನ್‌ ಪತ್ರಕರ್ತರು ಭಂಡ ಧೈರ್ಯದಿಂದ ಹಲವಾರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಉರಿ ಘಟನೆ ನಂತರವಷ್ಟೇ ಇಂತಹ ಪರಿವರ್ತನೆ ಕಂಡು ಬಂದಿಲ್ಲ. ದೇಶಿ ಪತ್ರಿಕೋದ್ಯಮದ ಇಂತಹ ಪ್ರಶ್ನಿಸುವ ಮನೋಭಾವವು ಕಾರ್ಗಿಲ್‌ ಯುದ್ಧದ ಸಂದರ್ಭದಿಂದ ಹೆಚ್ಚಾಗಿ ಪ್ರಕಟಗೊಳ್ಳತೊಡಗಿತು ಎಂದು ನಾನು ಇಲ್ಲಿ ಓದುಗರಲ್ಲಿ ಅರಿಕೆ ಮಾಡಿಕೊಳ್ಳಲು ಇಷ್ಟಪಡುತ್ತೇನೆ.

ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನೇನೂ ಹೊಂದಿರದ ನಾಲ್ವರು ಉಗ್ರರು, ಗಡಿ ನಿಯಂತ್ರಣ ರೇಖೆಯಿಂದ ಕೇವಲ 2 ಕಿ.ಮೀ. ದೂರದಲ್ಲಿರುವ ಸೇನಾ ಬ್ರಿಗೇಡ್‌ ಮುಖ್ಯ ಕಾರ್ಯಾಲಯದ ಸುತ್ತ ಇರುವ ಬಿಗಿ ಭದ್ರತೆಯನ್ನೆಲ್ಲ ಭೇದಿಸಿ ದಾಳಿ ನಡೆಸಲು ಅದ್ಹೇಗೆ ಸಾಧ್ಯವಾಯಿತು ಎಂದು ‘ಇಂಡಿಯಾ ಟುಡೆ’ ಚಾನೆಲ್‌ನ ಕರಣ್‌ ಥಾಪರ್‌ ಹಲವು ಪ್ರಶ್ನೆಗಳನ್ನು ಎತ್ತಿದ್ದರು.

ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಜೆ.ಎಸ್‌.ಧಿಲ್ಲೋನ್‌ ಅವರೊಬ್ಬರೇ ಈ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸಿದ್ದರು. 1987ರ ಅಕ್ಟೋಬರ್‌ ತಿಂಗಳಿನಲ್ಲಿ ಶ್ರೀಲಂಕಾದ  ಜಾಫ್ನಾ ಮೇಲೆ ನಡೆದ ದಾಳಿಯಲ್ಲಿ ಪಾಲ್ಗೊಂಡಿದ್ದ ಐದು ಬ್ರಿಗೇಡ್‌ಗಳ ಪೈಕಿ ಒಂದು   ಬ್ರಿಗೇಡ್‌ನ ನೇತೃತ್ವ ವಹಿಸಿದ್ದ ಧಿಲ್ಲೋನ್‌ ಅವರು, ತಮ್ಮ ಪಡೆಯಲ್ಲಿ ಕಡಿಮೆ ಸಂಖ್ಯೆಯ ಸಾವುನೋವುಗಳೊಂದಿಗೆ ಅತ್ಯಂತ ತ್ವರಿತವಾಗಿ ಜಾಫ್ನಾ ಪ್ರವೇಶಿಸಿದ್ದರು.

ಕಾರ್ಗಿಲ್‌ ಯುದ್ಧ ಅಥವಾ ಕಥನವು ಭಾರತ ಮತ್ತು ಪಾಕಿಸ್ತಾನದ ಕಡೆಯಿಂದ ಸತತ ಮೂರು ವಾರಗಳ ನಿರಾಕರಣೆಯ ಪೀಠಿಕೆಯೊಂದಿಗೆ ಆರಂಭಗೊಳ್ಳುತ್ತದೆ. ಒಂದೆಡೆ ಪಾಕಿಸ್ತಾನವು ಕಾರ್ಗಿಲ್‌ನಲ್ಲಿ ನಮ್ಮ ಸೈನಿಕರು ಬೀಡು ಬಿಟ್ಟಿಲ್ಲ ಎಂದು ಹೇಳಿಕೊಂಡಿತ್ತು. ಪಾಕಿಸ್ತಾನ ಸೇನೆಯು ದೇಶದ ಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿಲ್ಲ ಎಂದು ಇನ್ನೊಂದೆಡೆ ಭಾರತದ ಸೇನೆಯು ಪ್ರತಿಪಾದಿಸಿತ್ತು. ಪಾಕಿಸ್ತಾನ ಪಡೆಗಳ ಒಳನುಸುಳುವಿಕೆಯ ತೀವ್ರತರ ಪರಿಣಾಮಗಳನ್ನು ಪ್ರಧಾನಿ ಕಚೇರಿಯೂ  (ಸೌತ್‌ ಬ್ಲಾಕ್‌) ಗ್ರಹಿಸುವಲ್ಲಿ ವಿಫಲವಾಗಿತ್ತು. ಆದರೆ, ಸೇನಾ ಜನರಲ್‌ಗಳು ಹೋಗುವ ಮೊದಲೇ ಪತ್ರಕರ್ತರು ಕಾರ್ಗಿಲ್‌ ತಲುಪಿದ್ದರು.

ಸೇನಾ ತುಕಡಿಗಳು ವೈರಿ ಪಡೆಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ನೇರವಾಗಿ ತೊಡಗಿರುವುದನ್ನು ಮತ್ತು ಅನೇಕ ಸಾವು ನೋವುಗಳು ಸಂಭವಿಸಿರುವುದನ್ನು ಪತ್ರಕರ್ತರು ದಿಟ್ಟತನದಿಂದಲೇ ವರದಿ ಮಾಡಿದ್ದರು.

ಇದರ ಅಂತಿಮ ಫಲಿತಾಂಶವು ಎಲ್ಲರಿಗೂ ಒಳ್ಳೆಯದನ್ನೇ ಮಾಡಿತ್ತು. ಯಾವುದೇ ಮಾಹಿತಿಗೆ ತಡೆ ಒಡ್ಡದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಪತ್ರಿಕೋದ್ಯಮಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಜಾಗತಿಕ ಸಮುದಾಯದ ದೃಷ್ಟಿಯಲ್ಲಿ ಭಾರತ ಸರ್ಕಾರದ ವಿಶ್ವಾಸಾರ್ಹತೆಯು ಗಮನಾರ್ಹವಾಗಿ ಹೆಚ್ಚಿತ್ತು. ತನ್ನ ಪರಾಕ್ರಮದ ಕತೆಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡು ಇಡೀ ದೇಶದ ಉದ್ದಗಲಕ್ಕೂ ತಲುಪಿದ್ದರಿಂದ ಭಾರತೀಯ ಸೇನೆಯ ಪ್ರತಿಷ್ಠೆಯೂ ಹೆಚ್ಚಿತ್ತು. ಈ ಪ್ರಭಾವಳಿಯಲ್ಲಿ ಪತ್ರಕರ್ತರೂ ಹೆಸರು ಮಾಡಿಕೊಂಡರು.

ಈ ಪ್ರಕ್ರಿಯೆಯಲ್ಲಿ ಒಂದು ಸಂಗತಿ ಮಾತ್ರ ಹೆಚ್ಚಾಗಿ ಬೆಳಕಿಗೆ ಬರದೇ ಹೋಯಿತು.  ಪಾಕಿಸ್ತಾನದವರು ಭಾರತದ ಗಡಿಯೊಳಗೆ ಅಷ್ಟು ದೂರದವರೆಗೆ ಬಂದು ಅಡಗಿಕೊಳ್ಳಲು ನೆರವಾಗುವ ಆಳವಾದ ಕಂದರಗಳನ್ನು ತೋಡಲು ಅದ್ಹೇಗೆ ಸಾಧ್ಯವಾಯಿತು ಮತ್ತು ಇದನ್ನು ಪತ್ತೆ ಹಚ್ಚಲು ದೀರ್ಘ ಸಮಯ ಏಕೆ ಬೇಕಾಯಿತು.

ಈ ಅಕ್ರಮ ಒಳನುಸುಳುವಿಕೆ ಪತ್ತೆ ಹಚ್ಚಿ ಹಿಮ್ಮೆಟ್ಟಿಸಲು ಭಾರತದ ಸೇನೆ ಅರೆ ಮನಸ್ಸಿನಿಂದೇಕೆ ಮುಂದಾಗಿತ್ತು. ಸಂಘಟಿತ ರೀತಿಯಲ್ಲಿ ದಾಳಿ ನಡೆಸಲು ಸಾಕಷ್ಟು ಅವಕಾಶಗಳಿದ್ದರೂ ಬಳಸಿಕೊಳ್ಳಲಿಲ್ಲ ಏಕೆ ಎನ್ನುವ ಪ್ರಮುಖ ಪ್ರಶ್ನೆಗಳಿಗೆ ಸಮರ್ಥನೀಯ ಉತ್ತರವೇ ಸಿಗಲಿಲ್ಲ. ಪಾಕಿಸ್ತಾನದವರು ತಿಂಗಳುಗಳ ಕಾಲ ಒಳನುಸುಳಿ ಬರುವುದನ್ನು ತಡೆಗಟ್ಟುವಲ್ಲಿ ಯಾರು ವಿಫಲರಾದರು, ಅಕ್ರಮವಾಗಿ ಒಳ ನುಗ್ಗಿ ಬಂದ ವೈರಿ ಪಡೆ ಮುನ್ನಡೆಯ ಗಂಭೀರತೆಯನ್ನು ಗ್ರಹಿಸುವಲ್ಲಿ ಯಾರ ವೈಫಲ್ಯ ಇತ್ತು ಎನ್ನುವ ಪ್ರಶ್ನೆಗಳಿಗೆ ಉತ್ತರವೇ ಸಿಗಲಿಲ್ಲ.

ಯಾರ ತಲೆದಂಡವೂ ನಡೆಯಲಿಲ್ಲ. ಸಹಜವಾಗಿಯೇ ಸ್ಥಳೀಯ ಬ್ರಿಗೇಡ್‌ ಕಮಾಂಡರ್‌ ಮಾತ್ರ ಬಲಿಪಶು ಆಗಿದ್ದ.  ಆತ ಕೂಡ ಕಠಿಣ ಶಿಕ್ಷೆಯಿಂದ ಪಾರಾದ. ಸೇನಾ ಪಡೆಗಳ ನ್ಯಾಯಮಂಡಳಿಯು ಆತನ ವಿರುದ್ಧದ ಮರಣದಂಡನೆಗೆ ತಾತ್ಕಾಲಿಕ ತಡೆ ನೀಡಿತ್ತು. ಸೇನೆಯ ವೈಫಲ್ಯಗಳಿಗೆ ಸೇನಾ ತುಕಡಿಯೊಂದರ ಕಮಾಂಡರ್‌ನನ್ನು ಹೊಣೆಗಾರನನ್ನಾಗಿ ಮಾಡಲಾಗಿತ್ತು.

ಸೇನೆಯ ತರುಣ ಅಧಿಕಾರಿಗಳು ಮತ್ತು ಸೈನಿಕರ ಪರಾಕ್ರಮದ ಕತೆಗಳನ್ನು  ಪತ್ರಕರ್ತರು ಸಮರ್ಥವಾಗಿಯೇ ವರದಿ ಮಾಡಿದ್ದರು. ಆದರೆ, ಗಡಿ ಕಾವಲು ಕಾಯುವ ತನ್ನ ಕರ್ತವ್ಯವನ್ನು ದಕ್ಷತೆಯಿಂದ ನಿಭಾಯಿಸುವಲ್ಲಿ ವಿಫಲವಾದ ಸೇನೆ ಮತ್ತು ಪರಿಸ್ಥಿತಿಯನ್ನು ಅಂದಾಜಿಸುವಲ್ಲಿ ಸೋತ ರಾಜಕೀಯ ವ್ಯವಸ್ಥೆಯನ್ನು ಪ್ರಶ್ನಿಸದೆ ಹಾಗೇ ಬಿಟ್ಟ ಪತ್ರಿಕೋದ್ಯಮವೂ ಈ ವಿಷಯದಲ್ಲಿ ತಪ್ಪು ಮಾಡಿತು. ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ ಪರಾಕ್ರಮ ಮೆರೆದ ಅನೇಕ ಸೈನಿಕರಿಗೆ, ಅಧಿಕಾರಿಗಳಿಗೆ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆದರೆ, ಉನ್ನತ ಹುದ್ದೆಯಲ್ಲಿದ್ದು ಕರ್ತವ್ಯಲೋಪ ಎಸಗಿದ ತಪ್ಪಿತಸ್ಥರಿಗೆ ಯಾವುದೇ ಶಿಕ್ಷೆಯಾಗಲಿಲ್ಲ.

ಭಾರತದ ಮಾಧ್ಯಮಗಳು ತಮ್ಮ ಶ್ಲಾಘನೀಯ ಪಾತ್ರಕ್ಕೆ ಪ್ರಶಂಸೆಗೂ ಪಾತ್ರವಾದವು.  ವಿಜಯೋತ್ಸವದ ಸಂಭ್ರಮದಲ್ಲಿ ನಾವು ಕೂಡ (ಪತ್ರಕರ್ತರು) ಮುಳುಗಿ ಎದ್ದೆವು.  ಆದರೂ ತಪ್ಪು ಪಾಠವನ್ನು ಅರಗಿಸಿಕೊಳ್ಳಲೇಬೇಕು. ದೇಶವೊಂದು ತನ್ನ ಗಡಿ ರಕ್ಷಿಸಿಕೊಳ್ಳಲು ಸಮರದಲ್ಲಿ ತೊಡಗಿಕೊಂಡಾಗ ಪತ್ರಕರ್ತರೂ ಆ ಹೋರಾಟದ ಒಂದು ಅವಿಭಾಜ್ಯ ಅಂಗವಾಗಿರುತ್ತಾರೆ. ಪತ್ರಿಕೋದ್ಯಮವು ದೇಶದ ಸೇನೆಯ ಮನಸ್ಥೈರ್ಯ ಹೆಚ್ಚಿಸುವ ಕೆಲಸವನ್ನೂ ಮಾಡುತ್ತದೆ.

ಆದರೆ, ಸತ್ಯ ಸಂಗತಿ ವರದಿ ಮಾಡಲು ಮತ್ತು ಸತ್ಯದ ಪರ ಮಾತನಾಡಲು ಹೊರಟಾಗ ಪತ್ರಕರ್ತರು ಕಿರುಚುವುದನ್ನೇ ಕಾಯಕ ಮಾಡಿಕೊಳ್ಳಬಾರದು.  ಟೆಲಿವಿಷನ್‌ ಸ್ಟುಡಿಯೊಗಳನ್ನು ಚಂದಮಾಮ ಕತೆಗಳ ಮಾದರಿಯಲ್ಲಿ ಸಿದ್ಧಪಡಿಸಿ, ಮರಳಿನ ರೂಪದರ್ಶಿಗಳನ್ನು ರೂಪಿಸಿ, ತೆಳುವಾದ ಜಾಕೆಟ್‌ ಧರಿಸಿ, ಗೋಡೆ ಮೇಲೆ ಎ.ಕೆ ರೈಫಲ್‌ ತೂಗು ಹಾಕಿ ಪಾಕಿಸ್ತಾನದ ನಿವೃತ್ತ ಜನರಲ್‌ ಬಗ್ಗೆ ಚೀರಾಡುವುದರ ಬದಲಿಗೆ, ಸತ್ಯ ಬಯಲಿಗೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿತ್ತು. 

ವೈರಿಗಳ ವಕ್ತಾರ ಎನ್ನುವ ಹಣೆಪಟ್ಟಿ ಹಚ್ಚಿಕೊಳ್ಳುವುದರ ಹೊರತಾಗಿಯೂ, ಕಠೋರ ಸತ್ಯ ಮಾತನಾಡುವ ಸಿರಿಲ್‌ ಅಲ್ಮೆಡಾಸ್‌ ಮತ್ತು ಆಯೆಶಾ ಸಿದ್ದಿಕ್‌ ಅವರಂತಹ ಪತ್ರಕರ್ತರು ಭಾರತದಲ್ಲಿ ಇಲ್ಲದಿರುವುದರಲ್ಲಿ ಅಚ್ಚರಿ ಏನೂ ಇಲ್ಲ. 

ದೇಶಿ ಪತ್ರಿಕೋದ್ಯಮವು ಸ್ವತಃ ವಿನಾಶದ ಹಾದಿಯಲ್ಲಿ ಸಾಗಿರುವುದಕ್ಕೆ ಭಾರತದ ಸುದ್ದಿ ವಾಹಿನಿಗಳ ಕೊಡುಗೆ ಗಮನಾರ್ಹವಾಗಿದೆ. ಟೆಲಿವಿಷನ್ನಿನ ಬಹುತೇಕ ಖ್ಯಾತನಾಮರು ತಮ್ಮಷ್ಟಕ್ಕೆ ತಾವೇ ಪ್ರಚಾರಕರಾಗಿ ತಮ್ಮ ವ್ಯಕ್ತಿತ್ವವನ್ನು ಕುಂದಿಸಿಕೊಳ್ಳುತ್ತಿದ್ದಾರೆ. ಇದರಿಂದ ಟೆಲಿವಿಷನ್‌ ಸಂಸ್ಥೆಗಳಿಗೆ ವಾಣಿಜ್ಯ ದೃಷ್ಟಿಯಿಂದ ಗರಿಷ್ಠ ಪ್ರಮಾಣದಲ್ಲಿ ಲಾಭದಾಯಕವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಯಾವುದೇ ನಡೆಯ ಬಗ್ಗೆ ಸಂದೇಹಪಡುವ, ಪ್ರಶ್ನಿಸುವ ಮನೋಭಾವ ತ್ಯಜಿಸಿ, ಇತರರ ಯಶಸ್ಸನ್ನೇ ಉಳಿದವರೂ ಅನುಕರಣೆ ಮಾಡಲು ಹೊರಟಿದ್ದಾರೆ. ಪ್ರಸಕ್ತ ವಿದ್ಯಮಾನ ಮತ್ತು ಸುದ್ದಿ ಪ್ರಸಾರದ ಕಾರ್ಯಕ್ರಮ ನಿರೂಪಕರ ವರ್ತನೆ ನೋಡಿದರೆ, ಬಾಲಿವುಡ್‌ನ ‘ಶೋಲೆ’ ಚಿತ್ರದ ಖಳನಾಯಕ ಗಬ್ಬರ್‌ ಸಿಂಗ್‌ನ ಜನಪ್ರಿಯ ಅಬ್ಬರದ ಮಾತು ‘ಕಿತನೆ ಆದ್ಮಿ ಥೇ’ ಎನ್ನುವುದು ನೆನಪಾಗುತ್ತದೆ. ದಾಳಿ ಸಂದರ್ಭದಲ್ಲಿ ಪಾಕಿಸ್ತಾನದ ಕಡೆ ಎಷ್ಟು ಮಂದಿ ಹತರಾದರು ಎನ್ನುವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕೇ ಹೊರತು ಎಷ್ಟು ಮಂದಿ ಬದುಕುಳಿದರು ಎನ್ನುವುದನ್ನಲ್ಲ.

ತಾವು ಸೇನೆಯ ನೈತಿಕತೆ ಮತ್ತು ಪ್ರತಿಷ್ಠೆ ಹೆಚ್ಚಿಸಿದವರು ಎಂದು ಪತ್ರಕರ್ತರು ಹೆಮ್ಮೆಪಡುವುದರ ಜತೆಗೆ ಪ್ರಶ್ನಿಸುವ ಮತ್ತು ಸಂದೇಹಪಡುವ ಪ್ರವೃತ್ತಿಯನ್ನೂ ಯಾವುದೇ ಕಾರಣಕ್ಕೂ ಕೈಬಿಡಬಾರದು. ಸ್ಟುಡಿಯೊದಲ್ಲಿ ಆರಾಮವಾಗಿ ಕುಳಿತು ಇನ್ನೊಂದು ದೇಶದಲ್ಲಿ ಇರುವ ನಿವೃತ್ತ ಸೇನಾಧಿಕಾರಿಗಳನ್ನು ಪ್ರಶ್ನಿಸುವ ಮನೋಭಾವವನ್ನೂ ಕೈಬಿಡಬಾರದು.

ಈ ಬಗೆಯ ವಾದಸರಣಿಗಳಿಗೆ ಉರಿ ಮತ್ತು ನಂತರದ ಘಟನೆಗಳೇ ಸ್ಫೂರ್ತಿಯಾಗಿವೆ. ಮೂರು ವಾರಗಳ ಹಿಂದೆ ನಡೆದ ‘ನಿರ್ದಿಷ್ಟ ದಾಳಿ’ ಸಂದರ್ಭದಲ್ಲಿ ನಿಜವಾಗಿಯೂ ಏನು ಘಟಿಸಿತು ಎಂದು ಯಾರೊಬ್ಬರೂ ಸ್ಪಷ್ಟವಾಗಿ ಮತ್ತು ಮುಕ್ತ ರೀತಿಯಲ್ಲಿ ಮಾತನಾಡುತ್ತಿಲ್ಲ. ರಾತ್ರಿ ನಡೆದ  ಸೇನಾ ಕಮಾಂಡೊ ಕಾರ್ಯಾಚರಣೆ ಬಗ್ಗೆ ಪೌರಾಣಿಕ ದೃಶ್ಯಗಳ ಮಾದರಿಯಲ್ಲಿ ಆಧಾರಗಳನ್ನು ಕೊಡಲಾಗುತ್ತಿದೆ. ಸರ್ಕಾರವು ರಹಸ್ಯಗಳನ್ನು ತುಂಬ ಜೋಪಾನವಾಗಿ ಕಾದಿಡುತ್ತಿಲ್ಲ. ಪತ್ರಕರ್ತರಾದ ನಾವು ಕೂಡ ರಹಸ್ಯಗಳನ್ನು ಬಯಲಿಗೆ ಎಳೆಯಲು ಹಿಂದೇಟು ಹಾಕುತ್ತಿದ್ದೇವೆ. 

ಉಳಿದ ಪತ್ರಿಕೆ ಅಥವಾ ಚಾನೆಲ್‌ಗಳಿಗಿಂತ ಮೊದಲೇ ಬಿಸಿಬಿಸಿ ಸುದ್ದಿ ಪ್ರಕಟಿಸುವ ಧಾವಂತವೂ ಕಾಣುತ್ತಿಲ್ಲ. ಸರ್ಕಾರದ ಹೇಳಿಕೆ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಕಂಡುಬರುತ್ತಿಲ್ಲ. ‘ನಿರ್ದಿಷ್ಟ  ದಾಳಿ’ ನಡೆದ ಬಗ್ಗೆ ಸರ್ಕಾರವೇ ಸಾಕ್ಷ್ಯ ನೀಡಬೇಕು ಎಂದು ಪತ್ರಕರ್ತರೆಲ್ಲ ಬಯಸುತ್ತಿದ್ದಾರೆ.
‘ಸರ್ಕಾರವು ಮಾಹಿತಿ ಮುಚ್ಚಿಡಲು ಬಯಸುತ್ತದೆ. ಅದನ್ನು ಬಯಲಿಗೆ ತರುವುದೇ ಪತ್ರಕರ್ತರ ನಿಜವಾದ ಕೆಲಸ’ ಎಂದು ಪತ್ರಿಕೋದ್ಯಮದ ತರಗತಿಗೆ ತೆರಳುವ ಪ್ರತಿಯೊಬ್ಬರಿಗೂ ಕಲಿಸಿಕೊಡಲಾಗುತ್ತಿದೆ.

ಅತ್ಯುತ್ತಮ ಶಿಕ್ಷಣ ಪಡೆದ, ಸ್ವತಂತ್ರ ಆಲೋಚನೆಯ, ಸಾಕಷ್ಟು ಮನ್ನಣೆಗೆ ಪಾತ್ರರಾದ ಜನಪ್ರಿಯ ಪತ್ರಕರ್ತರು ರಹಸ್ಯ ಬಯಲಿಗೆ ಎಳೆಯಲು ಉತ್ಸುಕತೆ ತೋರಿಸುತ್ತಿಲ್ಲ. ಸರ್ಕಾರವೇ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಬೇಕು ಎಂದೇ ಅವರೆಲ್ಲ ಬಯಸುತ್ತಿದ್ದಾರೆ.

‘ಇನ್ನೊಂದು ತುದಿಯಲ್ಲಿ ವೈರಿ ಇರುವುದರಿಂದ ನೀವು ಹೇಳಿದ್ದಕ್ಕಿಂತ ನಾನು ಹೆಚ್ಚು ನಂಬುವೆ. ನನಗೆ ಹೆಚ್ಚುವರಿ ಸಾಕ್ಷ್ಯಾಧಾರಗಳೇ ಬೇಕಾಗಿಲ್ಲ’ ಎಂದು ಕೆಲವರು ಹೇಳಿದರೆ, ಇನ್ನೊಂದು ಕಡೆಗೆ, ‘ನೀನು ಹೇಳುವುದನ್ನು ನಾನು ನಂಬಲಾರೆ. ಸೇನಾ ಕಾರ್ಯಾಚರಣೆ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ನೀಡು, ಇಲ್ಲದಿದ್ದರೆ ನೀನು ಸುಳ್ಳು ಹೇಳುತ್ತಿರುವೆ ಎಂದು ನಾನು ಹೇಳಬೇಕಾಗುತ್ತದೆ ಎಂಬುದು ನನ್ನ ನಿಲುವಾಗಿದೆ’ ಎನ್ನುವುದು ಇತರರ ಧೋರಣೆಯಾಗಿದೆ. ಹೀಗಾಗಿ ‘ಭಾರತದ ಪತ್ರಿಕೋದ್ಯಮವು ಸ್ವಯಂ ನಾಶದ ಹಾದಿಯಲ್ಲಿ ಇದೆ’ ಎಂದು ನಾನು  ಹೇಳಲು ಇಷ್ಟಪಡುವೆ. ಹೀಗೇಕೆ  ಹೇಳುವಿರಿ ಎಂದು ಓದುಗರು ಈಗಲಾದರೂ ನನ್ನನ್ನು ಪ್ರಶ್ನಿಸಬೇಡಿ.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT