ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾತನೆಯ ಹಾದಿಯಲ್ಲಿ ಕಮರಿದ ಕಲಾವಿದ

Last Updated 7 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಪಾಪ, ಕಮಲಹಾಸನ್ ಅವರಿಗೆ ಹೀಗಾಗಬಾರದಿತ್ತು. ಏಳು ದೃಶ್ಯಗಳಿಗೆ ಕತ್ತರಿ ಹಾಕಲು ಕಮಲಹಾಸನ್ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಗೆ ಕೊಡುವ ಮೂಲಕ `ವಿಶ್ವರೂಪಂ' ವಿವಾದಕ್ಕೆ ತೆರೆ ಬಿದ್ದಿದೆ. ಸಾಂಸ್ಕೃತಿಕ ರಂಗದಲ್ಲಿ ಮೂಲಭೂತವಾದಿಗಳು ನಡೆಸುತ್ತಿರುವ ಅಟ್ಟಹಾಸವನ್ನು ಆರಂಭದಲ್ಲಿ ಎದುರಿಸಲು ಸಜ್ಜಾಗಿದ್ದ ಕಮಲಹಾಸನ್, ತಮ್ಮ ಚಿತ್ರವನ್ನು ನಿಷೇಧಿಸುವ ಕ್ರಮವನ್ನೇ `ಸಾಂಸ್ಕೃತಿಕ ಭಯೋತ್ಪಾದನೆ' ಎಂದು ಕರೆದರು.

ಸರ್ಕಾರ, ಪ್ರದರ್ಶಕರು ಹಾಗೂ ಚಿತ್ರರಂಗದೊಳಗೇ ಇರುವ ಶತ್ರುಗಳು ಒಂದಾಗಿ ಮುಗಿಬಿದ್ದಾಗ, ದೇಶವನ್ನೇ ತೊರೆಯುವ ಹತಾಶೆ ವ್ಯಕ್ತಪಡಿಸಿದರು. ನಿರಂತರ 54 ವರ್ಷಗಳ ಕಾಲ ಚಿತ್ರರಂಗದಲ್ಲಿ ನಾಯಕ ನಟನಾಗಿ, ವೈವಿಧ್ಯಮಯ ಪಾತ್ರಗಳ ಮೂಲಕ ಇಂದಿಗೂ ಅಭಿನಯ ಕೌತುಕವಾಗಿಯೇ ಇರುವ ಕಲಾವಿದನೊಬ್ಬ ದೇಶ ತೊರೆಯುವ ಮಾತನಾಡಬೇಕಾದರೆ, ಅದು ಅಸಹಾಯಕತೆಯ ಪರಮಾವಧಿ ಎನ್ನಬೇಕಾಗುತ್ತದೆ.

ಎಂ.ಎಫ್.ಹುಸೇನ್ ಅವರೂ ಕೂಡ ಇದೇ ಪರಿಸ್ಥಿತಿಯನ್ನು ಎದುರಿಸಿ ದೇಶವನ್ನೇ ತ್ಯಜಿಸಿದರು. ಕಲಾವಿದರು ದೇಶಾಂತರ ಮಾಡುವ ಪರಂಪರೆ ವಿಶ್ವವ್ಯಾಪಿ ಕಾಣಸಿಗುತ್ತದೆ. ಆದರೆ ಕಮಲಹಾಸನ್ ಈ ವಯಸ್ಸಿನಲ್ಲಿ ಬೇರೆ ದೇಶಕ್ಕೆ ಹೋಗಿ ವಾಸ್ತವ್ಯ ಹೂಡುವ ಮೂಲಕ ಏನು ಮಾಡಬಲ್ಲರು? ತಮ್ಮ ಜೀವಮಾನವನ್ನೇ ಅವರು ಭಾರತೀಯ ಚಿತ್ರರಂಗದಲ್ಲಿ ಅಡವಿಟ್ಟಿದ್ದಾರೆ. ಬಾಲನಟನಾಗಿ `ಕಳತ್ತೂರು ಕಣ್ಣಮ್ಮ' (1959) ಚಿತ್ರದಲ್ಲಿ ಕಾಣಿಸಿಕೊಂಡಾಗ ಅವರಿಗೆ ಐದೇ ವರ್ಷ ವಯಸ್ಸು. ಇಂದು 59ನೇ ವಯಸ್ಸಿನಲ್ಲೂ ಅವರು ಮೂರು ಭಾಷೆಯಲ್ಲಿ `ವಿಶ್ವರೂಪಂ' ಚಿತ್ರವನ್ನು 95 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಿಸುತ್ತಾರೆ.

450 ಕೋಟಿ ರೂಪಾಯಿ ವ್ಯವಹಾರ ಮಾಡುವ ನಿರೀಕ್ಷೆಯಿಟ್ಟುಕೊಂಡು ಸಮಕಾಲೀನರಾದ ಖಾನ್‌ಗಳಿಗೆ ಸವಾಲು ಹಾಕುವ ಹಂತದಲ್ಲಿ ಇದ್ದಾರೆ. ಅಭಿನಯಿಸುವುದು, ನಿರ್ದೇಶಿಸುವುದು, ಚಿತ್ರ ತಯಾರಿಸುವುದು ಹೊರತು ಪಡಿಸಿ ಅವರಿಗೆ ಬೇರೆ ಏನೂ ಗೊತ್ತಿಲ್ಲ.

ಸರ್ವರೂ ನೋಡಬಹುದಾದ ಚಿತ್ರ ಎಂದು ಸೆನ್ಸಾರ್ ಮಂಡಳಿ ಅನುಮತಿ ನೀಡಿದ ನಂತರವೂ, ಚಲನಚಿತ್ರವೊಂದನ್ನು ಸರ್ಕಾರ ನಿಷೇಧಿಸಬಹುದೇ? ಈ ತರಹದ ಚರ್ಚೆಯೊಂದು ಈಗ ಆರಂಭವಾಗಿದೆ. ಸಮಾಜದಲ್ಲಿ ಶಾಂತಿಗೆ ಭಂಗ ತರುತ್ತವೆ ಎನ್ನಲಾದ `ವಿಶ್ವರೂಪಂ'ನ ಏಳು ದೃಶ್ಯಗಳು ಸೆನ್ಸಾರ್ ಮಂಡಳಿಯ ಕಣ್ಣಿಗೆ ಕಾಣಲಿಲ್ಲವೇ? ಹೀಗಾಗಿ ಸಿನಿಮಾಟೋಗ್ರಾಫಿಕ್ ನಿಯಮಗಳನ್ನೇ ಮತ್ತೊಮ್ಮೆ ಪರಿಶೀಲನೆಗೆ ಒಡ್ಡಬೇಕಾದ ಸಂದರ್ಭವನ್ನು ಈ ವಿವಾದ ಒದಗಿಸಿಕೊಟ್ಟಿದೆ.

ಕಳೆದ ದೀಪಾವಳಿಯಂದು ಬಿಡುಗಡೆಯಾದ `ತುಪಾಕಿ' ಎಂಬ ತಮಿಳು ಚಿತ್ರದ ಬಗ್ಗೆಯೂ ಕೆಲವು ಮುಸ್ಲಿಂ ಸಂಘಟನೆಗಳು ತಕರಾರು ತೆಗೆದವು. ಪ್ರತಿಭಟನೆಯ ನಂತರ ಆ ಚಿತ್ರದ ಕೆಲವು ಸನ್ನಿವೇಶಗಳನ್ನು ಕತ್ತರಿಸಿ ಚಿತ್ರ ಪ್ರದರ್ಶನ ನಡೆಸಲಾಯಿತು. ಕಮಲಹಾಸನ್ ಅವರ `ವಿಶ್ವರೂಪಂ' ನೋಡಿದ ನಂತರ ವಿವಾದಕ್ಕೆ ಅರ್ಥವೇ ಇಲ್ಲ ಎನ್ನುವಂತಾಗಿದೆ. ಕಮಲಹಾಸನ್ ಮೂಲತಃ ಒಬ್ಬ ನಟ. ಎಂತಹ ಪಾತ್ರವನ್ನು ನೀಡಿದರೂ ಲೀಲಾಜಾಲವಾಗಿ ಅಭಿನಯಿಸುವ ಸಾಮರ್ಥ್ಯ ಇರುವ ಮಾದರಿ ನಟ. ಕೆಲವು ಸಿದ್ಧಾಂತಗಳಿಗೆ ಬದ್ಧನಾಗಿರುವ ನಟ ಇಲ್ಲವೇ ನಿರ್ದೇಶಕನೊಬ್ಬ `ವಿಶ್ವರೂಪಂ'ನಂತಹ ಕತೆ ರಚಿಸಿದ್ದಾನೆ ಎಂದರೆ ಅದಕ್ಕೆ ಅರ್ಥವಿದೆ.

ಭಿನ್ನಾಭಿಪ್ರಾಯ ಸಾಧ್ಯತೆಯಿದೆ. ಆದರೆ ಯಾವುದೇ ಸಿದ್ಧಾಂತ ಇಲ್ಲದೆ ಅಭಿನಯದ ಮೂಲಕವೇ ಪ್ರೇಕ್ಷಕರಿಗೆ ಥ್ರಿಲ್ ತರಬೇಕೆಂಬ ಏಕೈಕ ಉದ್ದೇಶದಿಂದಿರುವ ಕಮಲಹಾಸನ್ ಅವರಿಗೆ ಈ ರೀತಿಯ ಆರೋಪಗಳನ್ನು ಅನ್ವಯಿಸುವುದೇ ಅರ್ಥಹೀನವೆನಿಸುತ್ತದೆ. ತಮಿಳು ಚಿತ್ರಗಳಲ್ಲಿ ರಾಜಕೀಯ ಪಕ್ಷಗಳ ಪರವಾದ ಧೋರಣೆ ಬಿಂಬಿತವಾಗಿರುವುದನ್ನು ತಮಿಳುನಾಡು ರಾಜಕೀಯ ಬಲ್ಲವರೆಲ್ಲ ಬಲ್ಲರು.

ರಾಜಕೀಯ ಮತ್ತು ಸಿನಿಮಾ ಅಲ್ಲಿ ಮಿಳಿತ. ಆದರೆ ಕಮಲಹಾಸನ್ ಇಂತಹ ರಾಜಕೀಯದಿಂದ ದೂರ. ಆರಂಭದಿಂದಲೂ ಅವರು ಅಭಿನಯಕ್ಕೆ ಆದ್ಯತೆ ಕೊಟ್ಟವರು. ಶಿವಾಜಿ ಗಣೇಶನ್ ಕಟ್ಟಿಕೊಟ್ಟ ಅಭಿನಯ ಪರಂಪರೆಗೆ ಮತ್ತಷ್ಟು ಭದ್ರ ಬುನಾದಿ ಹಾಕಬೇಕೆಂದು, ವಾಸ್ತವಿಕ ಅಭಿನಯಕ್ಕೇ ಅಂಟಿಕೊಂಡವರು. ಅಂತಹ ವರ್ಣರಂಜಿತ ನಟನನ್ನು ಅನುಮಾನಿಸಿದ ಘಟನೆಯೇ ಸಾಂಸ್ಕೃತಿಕ ದುರಂತ.
ನಡೆವವನು ಎಡವುತ್ತಾನೆ. ಕುಳಿತವನು ಎಡವುವುದಿಲ್ಲ.

ಕಮಲಹಾಸನ್ ಸದಾ ಏನಾದರೂ ಮಾಡುತ್ತಲೇ ಇರುವುದರಿಂದ ಸದಾ ಸುದ್ದಿಯಲ್ಲಿರುತ್ತಾರೆ. ಹಾಗೆ ನೋಡಿದರೆ ಅವರ `ಹೇರಾಮ್' ಚಿತ್ರವೂ ವಿವಾದವಾಗಬೇಕಿತ್ತು. ದೇಶವಿಭಜನೆ ಹಾಗೂ ಮಹಾತ್ಮ ಗಾಂಧಿ ಅವರ ಹತ್ಯೆ ಕುರಿತಂತೆ ಇರುವ ಕಾಲ್ಪನಿಕ ಕತೆ ಉಳ್ಳ `ಹೇರಾಮ್' ಚಿತ್ರವನ್ನು ನಿಷೇಧಿಸಬೇಕೆಂದು ಕಾಂಗ್ರೆಸ್‌ನವರೇ ಒತ್ತಡ ತಂದಿದ್ದರು. ಆದರೆ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ವಿಯಾಗದ ಕಾರಣ ವಿವಾದ ಭುಗಿಲೇಳಲಿಲ್ಲ. ಈ ಚಿತ್ರ ವಿದೇಶದಲ್ಲಿ ಹಣಗಳಿಸಿತು. `ದಶಾವತಾರಂ' ಕೂಡ ಕಮಲಹಾಸನ್ ಸಿನಿಮಾ ಶೈಲಿಗೆ ಉತ್ತಮ ಉದಾಹರಣೆ.

ವಿಶ್ವದಾದ್ಯಂತ ಚಿತ್ರ 250 ಕೋಟಿ ರೂಪಾಯಿ ವಹಿವಾಟು ನಡೆಸಿತು. ವಿವಾದಕ್ಕೆ ತುತ್ತಾಗದಿದ್ದರೆ `ವಿಶ್ವರೂಪಂ' ಡಿಟಿಎಚ್ ಮೂಲಕ ತೆರೆಕಂಡ ಮೊದಲ ಚಿತ್ರವಾಗಿಯೂ ದಾಖಲೆ ಸೃಷ್ಟಿಸುತ್ತಿತ್ತು. ಕಮಲ್, `ಮರುದು ನಾಯಗಂ' ಎಂಬ ಸ್ವಾತಂತ್ರ್ಯ ಹೋರಾಟಗಾರನ ಕತೆಯನ್ನು ಚಿತ್ರೀಕರಿಸಲು ದೊಡ್ಡ ಯೋಜನೆಯನ್ನು ರೂಪಿಸಿದ್ದರು, 1997ರಲ್ಲಿ ರಾಣಿ ಎಲಿಜಬೆತ್-2 ಚೆನ್ನೈಗೆ ಈ ಚಿತ್ರದ ಮುಹೂರ್ತಕ್ಕೆಂದೇ ಬಂದದ್ದು ದೊಡ್ಡ ಸುದ್ದಿಯಾಯಿತು.

ಸ್ವಾತಂತ್ರ್ಯ ಹೋರಾಟದ ಯುಗ ಚರಿತ್ರೆಯನ್ನು ಹಿಡಿದಿಡುವುದೆನ್ನಲಾದ ಈ ಚಿತ್ರದ ಕತೆ, ಮುಹೂರ್ತದ ನಂತರ ವಿವಾದಕ್ಕೆ ತುತ್ತಾಗಿ ಆ ಹಂತದಲ್ಲೇ ಮುರುಟಿ ಹೋಯಿತು. ಚಿತ್ರದ ಕತೆಯಲ್ಲಿ ಬರುವ ನಾಯಕ ಮಹಮದ್ ಯೂಸುಫ್ ಖಾನ್‌ನ ದೇಶ ಪ್ರೇಮದ ಬಗ್ಗೆ ವಿವಾದವಾಗಿ ಈ ಚಿತ್ರವನ್ನು ಕಮಲಹಾಸನ್ ಕೈ ಬಿಡುವಂತಾಯಿತು. ಕಮಲಹಾಸನ್ ಅವರಿಗೆ ವಿವಾದ ಹೊಸದೇನಲ್ಲ.

ಬೆಲ್‌ಬಾಟಂನಿಂದ ಜೀನ್ಸ್‌ವರೆಗೆ ಸುದೀರ್ಘ ಅವಧಿಯ ನಾಯಕ ನಟನಾಗಿರುವುದರಿಂದ ಕಮಲಹಾಸನ್, ಏಕತಾನತೆಯನ್ನು ಎದುರಿಸುತ್ತಿರಬಹುದು, ಕಮಲಹಾಸನ್, ರಜನೀಕಾಂತ್ ಇಬ್ಬರಿಗೂ ಇದೇ ದೊಡ್ಡ ಸಮಸ್ಯೆ. ಯಾವುದೇ ಕತೆಯನ್ನು ಆಯ್ಕೆ ಮಾಡಿಕೊಂಡರೂ ಅಂತಹದ್ದೇ ಪಾತ್ರವನ್ನು ಈಗಾಗಲೇ ನಿರ್ವಹಿಸಿದ್ದೇನಲ್ಲಾ ಎಂಬ ತೊಳಲಾಟವನ್ನು ಇಬ್ಬರೂ ಅನುಭವಿಸುತ್ತಾರೆ. ಮಾಮೂಲಿ ಕಳ್ಳ - ಪೊಲೀಸ್ ಕತೆ, ತೆಳು ಪ್ರೇಮದ ಕತೆಗಳೆಲ್ಲಾ ಅವರಿಗೆ ಲೀಲಾಜಾಲ. ಹೀಗಾಗಿ ಕಮಲಹಾಸನ್ ಆಯ್ಕೆ ಮಾಡಿಕೊಂಡದ್ದು, ಇದುವರೆಗೆ ಯಾರೂ ಮಾಡದ ವೈವಿಧ್ಯಮಯ ಪಾತ್ರಗಳ ಹುಡುಕಾಟ.

ಗಾಡ್‌ಫಾದರ್ ಶೈಲಿಯ `ನಾಯಗನ್' ಅದಕ್ಕೊಂದು ಉದಾಹರಣೆ. ಭಾರತೀಯ ಚಿತ್ರರಂಗದಲ್ಲಿ ಎಲ್ಲ ಕಾಲಕ್ಕೂ ಸಲ್ಲುವ ಚಿತ್ರ ಎಂಬ ಪ್ರಶಂಸೆಯನ್ನು `ಟೈಮ್' ಪತ್ರಿಕೆಯೇ ನೀಡಿತು. ಹೀರೋ ಅಂದ ಮೇಲೆ ಬೇರೆ ಯಾವುದೇ ರೀತಿಯ ವಿರೂಪವನ್ನು ಒಪ್ಪದ ನಾಯಕತ್ವದ ಅಹಂಗಳನ್ನು ಒಡೆದು ಹಾಕಿ, ಅದಕ್ಕೆ ತದ್ವಿರುದ್ದ ಪಾತ್ರಗಳನ್ನು ಕಮಲಹಾಸನ್ ರೂಪಿಸುತ್ತಾ ಹೋದರು. `ಕಲ್ಯಾಣ ರಾಮನ್' ಚಿತ್ರದ ಉಬ್ಬುಹಲ್ಲಿನ ನಾಯಕ ಜನಪ್ರಿಯನಾದ.

`ಪುನ್ನಗೈ ಮನ್ನನ್' ಚಿತ್ರದ ಚಾರ್ಲಿ ಚಾಪ್ಲಿನ್ ಪಾತ್ರ ಮರೆಯುವಂತೆಯೇ ಇಲ್ಲ. ವಾಕಿ ಕಾಲದಲ್ಲಿ ತಯಾರಾದ ಮೂಕಿ ಚಿತ್ರ `ಪುಷ್ಪಕ ವಿಮಾನ' ಇಂದಿಗೂ ಒಂದು ದಾಖಲೆ. `ಅಪೂರ್ವ ಸಹೋದರರ್‌ಗಳ್' ಚಿತ್ರದಲ್ಲಿನ ಕುಳ್ಳನ ಪಾತ್ರ ಒಂದು ನಿಗೂಢ. `ಅವ್ವೈ ಷಣ್ಮುಗಿ' (ಚಾಚಿ - 420) ಚಿತ್ರದಲ್ಲಿ ಸಾಹಸ ಮೆರೆಯುವ ಮುದುಕಿಯ ಪಾತ್ರ, ಕಮಲಹಾಸನ್ ಹೊರತುಪಡಿಸಿ ಬೇರೆ ಯಾವ ನಟರೂ ಮಾಡಲು ಅಸಾಧ್ಯವಾದ ಪಾತ್ರ. ಸುದೀರ್ಘಕಾಲ ಚಿತ್ರರಂಗದಲ್ಲೇ ಅಂಟಿಕೊಂಡು ಕುಳಿತಿದ್ದ ಕಾರಣ ಕಮಲಹಾಸನ್ ಇಂತಹ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುವುದು ಅನಿವಾರ್ಯವಾಗಿತ್ತು.

ಕಮಲಹಾಸನ್, ರಜನೀಕಾಂತ್ ಮೂರು ದಶಕಗಳ ಹಿಂದೆ ಅಭಿನಯಿಸುತ್ತಿದ್ದಂತಹ ಚಿತ್ರಗಳ ಶೈಲಿಯನ್ನು ವಿಜಯ್, ಸೂರ್ಯ, ಕಾರ್ತಿಕ್, ವಿಕ್ರಂ, ಅಜಿತ್ ಮೊದಲಾದ ಯುವನಾಯಕರು ಅನುಕರಿಸಲಾರಂಭಿಸ್ದ್ದಿದರಿಂದ; ಕಮಲ್‌ಗೂ ರಜನಿಗೂ ಅದನ್ನು ಮೀರಿಸುವ, ಆ ಶೈಲಿಗೆ ಹೊರತಾದ ಚಿತ್ರಗಳನ್ನು ನೀಡಲೇಬೇಕಾದ ಸವಾಲಿದೆ. ಕಮಲ್, ರಜನಿ ಚಿತ್ರರಂಗದಲ್ಲಿ ಬೆಳೆಯುತ್ತಿದ್ದಾಗ ಶಿವಾಜಿಗಣೇಶನ್ ಅವರೂ ಪಕ್ಕಕ್ಕೆ ಸರಿಯಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಇದರಿಂದಾಗಿ ರಜನೀಕಾಂತ್ ದೊಡ್ಡ ಬಜೆಟ್ಟಿನ, ತಾಂತ್ರಿಕ ವೈಭವದ ಚಿತ್ರಗಳನ್ನೇ (ಯಂದಿರನ್, ಶಿವಾಜಿ) ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ರಾಜ್‌ಕುಮಾರ್, ವಿಷ್ಣುವರ್ಧನ್ ಅವರುಗಳೂ ಕೂಡ ವಿಭಿನ್ನ ಕತೆಗಾಗಿ ಹಂಬಲಿಸುತ್ತಿದ್ದುದು ಕೂಡ ಇದೇ ಕಾರಣದಿಂದ. ಕಮಲಹಾಸನ್ ಅಂತಹ ಯಾವುದೇ ಕತೆಗೂ ಹೊಂದಾಣಿಕೆ ಆಗುತ್ತಿದ್ದುದರಿಂದಲೇ `ಮೂನ್ರಾಂ ಪಿರೈ' (ಸದ್ಮಾ), ತೇವರ್‌ಮಗನ್, ಸ್ವಾತಿಮುತ್ಯಂ, ರಾಜಪಾರ್ವೈ, ಅನ್ಬೇಶಿವ ಮೊದಲಾದ ಚಿತ್ರಗಳು ಬರಲು ಸಾಧ್ಯವಾಯಿತು. `ತೆನಾಲಿ' ಚಿತ್ರದಲ್ಲಿ ಶ್ರೀಲಂಕಾ ತಮಿಳನಾಗಿ, ಬುದ್ಧಿಮಾಂದ್ಯ ಪಾತ್ರಧಾರಿಯಾಗಿ ಹಾಸ್ಯದ ಹೊನಲನ್ನೇ ಹರಿಸಿದ್ದರು.

ಅಭಿನಯದ ವಿಷಯದಲ್ಲಿ ಕಮಲಹಾಸನ್ ಅವರನ್ನು ಮೀರಿಸುವ ಮತ್ತೊಬ್ಬ ನಟನನ್ನು ಕಾಣುವುದು ಕಷ್ಟ. ಆದರೆ ನಮ್ಮ ದೇಶದ ದೌರ್ಭಾಗ್ಯ ಎಂದರೆ, ಅಭಿನಯವೇ ಬಾರದ, ಕೇವಲ ಉಬ್ಬಿದ ದೇಹವನ್ನೇ ಪ್ರದರ್ಶಿಸುತ್ತಾ ಅದನ್ನೇ ಅಭಿನಯ ಎಂದು ಪ್ರತಿಪಾದಿಸುತ್ತಿರುವ ಸಲ್ಮಾನ್‌ಖಾನ್ ಅಂತಹವರು ಸೂಪರ್ ಸ್ಟಾರ್ ಪಟ್ಟವನ್ನು ಸುಲಭವಾಗಿ ಗಿಟ್ಟಿಸಿಕೊಳ್ಳುತ್ತಾರೆ. ಅಭಿನಯವೇ ಜೀವಾಳವಾಗಿರುವ ಕಮಲಹಾಸನ್ ಅಂತಹ ನಟರು ಒಂದೇ ರಾಜ್ಯಕ್ಕೆ ಸೀಮಿತವಾಗಿ ಬಿಡುತ್ತಾರೆ. ಎಂಬತ್ತರ ದಶಕದಲ್ಲಿ ಕಮಲಹಾಸನ್ ಅವರು ಹಿಂದೀ ಚಿತ್ರರಂಗ ಪ್ರವೇಶಿಸುವುದಕ್ಕೆ ಸಮಯ ಪ್ರಶಸ್ತವಾಗಿತ್ತು.

`ಮರೋ ಚರಿತ್ರ' ತೆಲುಗು ಚಿತ್ರದ ಹಿಂದೀ ಅವತರಣಿಕೆ `ಏಕ್ ದುಜೆ ಕೆ ಲಿಯೆ' ಮೂಲಕ ಕಮಲಹಾಸನ್ ಭರ್ಜರಿಯಾಗಿಯೇ ಹಿಂದೀ ಚಿತ್ರರಂಗವನ್ನು ಪ್ರವೇಶಿಸಿದ್ದರು. ಆ ಸಮಯದಲ್ಲಿ ಅಭಿನಯವನ್ನು, ನೃತ್ಯವನ್ನು ಲೀಲಾಜಾಲವಾಗಿ ಪ್ರಯೋಗಿಸುವಂತಹ ಹೀರೋಗಳಿಗೆ ಅಭಾವವಿತ್ತು. `ಏಕ್ ದುಜೆ ಕೆ ಲಿಯೆ' ಯಶಸ್ವಿಯಾದರೂ ಕಮಲಹಾಸನ್ ಅವರನ್ನು ಉತ್ತರ ಭಾರತದಲ್ಲಿ ಬೆಳೆಯಲು ಬಿಡಲಿಲ್ಲ. ಸದ್ಮಾ, ಯೇ ತೋ ಕಮಾಲ್ ಹೋಗಯಾ' ಜರಾ ಸೆ ಜಿಂದಗಿ, ರಾಜ್‌ತಿಲಕ್, ಗಿರಫ್‌ದಾರ್ ಮೊದಲಾದ ಚಿತ್ರಗಳಲ್ಲಿ ಕಮಲಹಾಸನ್ ನಾಯಕ ನಟನಾಗಿ ಕಾಣಿಸಿಕೊಂಡರು.

ಬಾಲಿವುಡ್‌ನ ಖಾನ್‌ಗಳ ದರ್ಬಾರಿನಲ್ಲಿ ಕಮಲಹಾಸನ್ ಅಭಿನಯ ಪ್ರತಿಭೆಯನ್ನು ಅದುಮಲಾಯಿತು. ರಜನೀಕಾಂತ್‌ಗೂ ಇದೇ ಅನುಭವವಾಯಿತು. `ಸಾಗರ್' (1985) ಚಿತ್ರದಲ್ಲಿ ರಿಷಿಕಪೂರ್, ಕಮಲಹಾಸನ್ ಇಬ್ಬರೂ ನಾಯಕರು. ಕಮಲಹಾಸನ್ ಅವರ ಅಭಿನಯಕ್ಕೆ ಚಿತ್ರಮಂದಿರದೊಳಗೆ ಹೆಚ್ಚು ಚಪ್ಪಾಳೆ ಬೀಳುತ್ತಿದ್ದಂತೆಯೇ, ಕಮಲ್‌ಗೆ ಬಾಲಿವುಡ್‌ನ ಬಾಗಿಲು ಮುಚ್ಚುವ ತೀರ್ಮಾನವಾಯಿತು.

ಬಾಲಿವುಡ್‌ನವರಿಗೆ ತಮಿಳಿನ ನಾಯಕಿಯರು ಬೇಕು, ನಾಯಕರು ಬೇಡ. ನೃತ್ಯ ನಿರ್ದೇಶನಕ್ಕೆ ಪ್ರಭುದೇವ ಬೇಕು, ನಾಯಕ ಬೇಡ. ರೀಮೇಕ್‌ಗೆ ತಮಿಳಿನಲ್ಲಿ ಯಶಸ್ವಿಯಾದ ಚಿತ್ರಗಳು ಬೇಕು. ಆದರೆ ಅದರ ನಿರ್ದೇಶಕನಾಗಲಿ, ನಟನಾಗಲಿ ಬೇಡ. ಆದರೆ ನಮಗೆ ರಾಜೇಶ್ ಖನ್ನನೂ ಬೇಕು, ಅಮಿತಾಬ್, ಅಮೀರ್‌ಖಾನ್, ಅಕ್ಷಯ್, ರಣಬೀರ್ ಕೂಡ ಬೇಕು. ನಾವು ಕಲೆಯನ್ನು ಗೌರವಿಸುತ್ತೇವೆ.

ಭಾರತೀಯ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ ನಟ ಕಮಲಹಾಸನ್ 54 ವರ್ಷಗಳ ಚಿತ್ರರಂಗದ ಜೀವನದುದ್ದಕ್ಕೂ ಏರಿಳಿತಗಳನ್ನು ಕಾಣುತ್ತಲೇ ಬಂದಿದ್ದಾರೆ. ಎಲ್ಲ ರೀತಿಯ ರಾಜಕೀಯ ಶೋಷಣೆಗೂ ಹಲವಾರು ಬಾರಿ ತಮ್ಮನ್ನು ಒಡ್ಡಿಕೊಂಡಿದ್ದಾರೆ.`ವಿಶ್ವರೂಪಂ'ನ ಗೋಜಲು ದೇಶವನ್ನೇ ಬಿಟ್ಟು ಹೋಗಿ ಬಿಡಬೇಕೆಂಬ ಮನಸ್ಥಿತಿಗೆ ಕಾರಣವಾಯಿತೆಂದರೆ ಅದಕ್ಕೆ ಅವರು ಇದುವರೆಗೆ ಅನುಭವಿಸಿದ ಯಾತನೆಯ ಸರಮಾಲೆಯೂ ಕಾರಣವಾಗಿದೆ ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT