ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಿಗಾಗಿ ಬೆಳಗಾವಿಯ ಅಧಿವೇಶನ?

Last Updated 17 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಹೈ ಕೋರ್ಟ್ ಮತ್ತು ಸರ್ಕಾರ ತಮ್ಮ ಬಳಿಗೆ ಬರಬೇಕು ಎಂಬುದು ಉತ್ತರ ಕರ್ನಾಟಕ ಜನತೆಯ ಕನಸು. ಆ ಕನಸು ಅರ್ಧಂಬರ್ಧ ನನಸಾಗಿದೆ. ಧಾರವಾಡ ಮತ್ತು ಗುಲ್ಬರ್ಗಗಳಿಗೆ ಹೈಕೋರ್ಟ್ ಪೀಠಗಳು ಬಂದಾಯಿತು; ಬೆಳಗಾವಿ ಜಿಲ್ಲೆಯಲ್ಲಿ ವಿಧಾನಮಂಡಲದ ಅಧಿವೇಶನ ಹಾಗೂ ಗುಲ್ಬರ್ಗದಲ್ಲಿ ಸಚಿವ ಸಂಪುಟ ಸಭೆ ನಡೆಸುವ ಮೂಲಕ ಸರ್ಕಾರವೂ ಉತ್ತರ ಕರ್ನಾಟಕಕ್ಕೆ ಅಡಿ ಇಟ್ಟಿದೆ.

ಸರ್ಕಾರ ಉತ್ತರ ಕರ್ನಾಟಕ ಜನರ ಬಳಿಗೆ ಬಂದಿದ್ದು ಭೌತಿಕವಾಗಿ ಮಾತ್ರ. ಬೆಳಗಾವಿಯಲ್ಲಿ ವಿಧಾನಸೌಧವನ್ನೇ ಹೋಲುವ ಸುಸಜ್ಜಿತ ಸುವರ್ಣ ವಿಧಾನಸೌಧ ತಲೆ ಎತ್ತಿದೆ. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾ­ಡುವ ಪ್ರತಿಯೊಬ್ಬರೂ ಒಮ್ಮೆ ಈ ಕಟ್ಟಡದತ್ತ ದೃಷ್ಟಿ ಹರಿಸುವಂತಿದೆ. ರಾತ್ರಿ ಹೊತ್ತಿನಲ್ಲಿ ದೀಪಾ­ಲಂಕಾರವಿದ್ದರಂತೂ ಈ ಕಟ್ಟಡ ಸೂಜಿಗಲ್ಲಿನಂತೆ ನೋಡುಗರನ್ನು ಸೆಳೆಯುತ್ತದೆ. ಈ ಕಟ್ಟಡವಷ್ಟೇ ಇಲ್ಲಿನ ಜನರ ಕಷ್ಟಕ್ಕೆ ಸ್ಪಂದಿಸೀತೇ?

ಕಳೆದ ವರ್ಷ ಸುವರ್ಣ ವಿಧಾನಸೌಧದಲ್ಲಿ ನಡೆದ ಅಧಿವೇಶನವೂ ಸೇರಿ ಒಟ್ಟು ಮೂರು ಬಾರಿ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿ­ವೇಶನ­ಗಳು ನಡೆದಿವೆ. ಈಗ ಮತ್ತೊಮ್ಮೆ ಇದೇ 25 ರಿಂದ ಅಧಿವೇಶನ ನಡೆಯಲಿದೆ. ಇಲ್ಲಿ ನಡೆ­ಯುವ ಅಧಿವೇಶನಗಳು ಲೆಕ್ಕಕ್ಕೆ ಮಾತ್ರ ಸೇರು-­ತ್ತಿವೆ. ಅಂದರೆ ಸಂಖ್ಯೆ ಮಾತ್ರ ಏರುತ್ತಿದೆ. ಆದರೆ ಈ ಭಾಗದ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತಹ ಗಂಭೀರವಾದ ಚರ್ಚೆಗಳು ವಿಶೇಷವಾಗಿ ಇಲ್ಲಿ ನಡೆದೇ ಇಲ್ಲ.

ದಶಕಗಳು ಕಳೆದರೂ ಪೂರ್ಣಗೊಳ್ಳದ ಕೃಷ್ಣಾ ನದಿ ಯೋಜನೆ; ಕಳಸಾ–ಬಂಡೂರಿ ನಾಲಾ ಯೋಜನೆ; ನಂಜುಂಡಪ್ಪ ಸಮಿತಿ ವರದಿ ಅನು­ಷ್ಠಾನ; ರಸ್ತೆ –ಕುಡಿಯುವ ನೀರಿನ ಯೋಜನೆ; ಶೈಕ್ಷಣಿಕ ವ್ಯವಸ್ಥೆ ಸುಧಾರಣೆ ಇವೆಲ್ಲ ಆಗದ ಕೆಲಸಗಳ ಪಟ್ಟಿಯಲ್ಲಿಯೇ ಉಳಿದಿವೆ. ಈ ವಿಚಾರಗಳ ಮೇಲೆ  ವಿಶೇಷವಾದ ಚರ್ಚೆ ನಡೆಸುವಂತೆ ಈ ಭಾಗದ ಜನಪ್ರತಿನಿಧಿಗಳು ಪಟ್ಟು ಹಿಡಿಯಬೇಕಿತ್ತು. ದುರದೃಷ್ಟವಶಾತ್ ಅವರಿಂದ ಈ ಕೆಲಸ ಆಗಿಯೇ ಇಲ್ಲ.

ಜನರ ಕಷ್ಟಗಳಿಗೆ ಸ್ಪಂದಿಸಲು ಈ ಭಾಗದ ಜನ­ಪ್ರತಿನಿಧಿಗಳಿಗೆ ಬೆಳಗಾವಿ ಅಧಿವೇಶನದಲ್ಲಿ ಹೆಚ್ಚು ಅವಕಾಶವಿದೆ; ಅದನ್ನು  ಸುವರ್ಣ ಅವಕಾಶ ಎಂದೇ ಭಾವಿಸಿ, ಹೆಚ್ಚು ಪ್ರಶ್ನೆಗಳನ್ನು ಕೇಳುವ ಅಥವಾ ಗಮನಸೆಳೆಯುವ ಸೂಚನೆ, ನಿಲುವಳಿ ಸೂಚನೆ ಮಂಡಿಸುವ ಮೂಲಕ ಗಂಭೀರ ಚರ್ಚೆಗೆ ಅವಕಾಶ ಮಾಡಿಕೊಳ್ಳಬೇಕು. ಹೈದರಾಬಾದ್‌– ಕರ್ನಾಟಕ ಮತ್ತು ಮುಂಬೈ–ಕರ್ನಾಟಕ ಭಾಗದ 13 ಜಿಲ್ಲೆಗಳಲ್ಲಿ 96 ಮಂದಿ ವಿಧಾನಸಭಾ ಸದಸ್ಯರಿದ್ದಾರೆ.

ಪ್ರಮುಖ ವಿಷಯಗಳನ್ನು ಪಟ್ಟಿ ಮಾಡಿಕೊಂಡು ಆದ್ಯತೆ ಮೇರೆಗೆ ಚರ್ಚೆಗೆ ತೆಗೆದುಕೊಳ್ಳಲು ಅವರು ಮುಂದಾದರೆ ಸರ್ಕಾರ ಬೇಡ ಎನ್ನಲು ಆದೀತೇ ಅಥವಾ ಸ್ಪೀಕರ್ ಚರ್ಚೆಗೆ ಅವಕಾಶ ಇಲ್ಲ ಎನ್ನುತ್ತಾರೆಯೇ? ಅಧಿವೇಶನದ ಸಂದರ್ಭದಲ್ಲಿ ನಡೆಯುವ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿ, ಅವರನ್ನು ಒಪ್ಪಿಸಲು ಸದನದ ನಾಯಕರಿಗೆ ಮನದಟ್ಟು ಮಾಡಿಕೊಡುವ ಕೆಲಸವನ್ನು ಶಾಸಕರೇ ಮಾಡಬೇಕು.

ಇದಕ್ಕೆ ಅವರು ಒಂದಿಷ್ಟು ಪೂರ್ವ ತಯಾರಿ ಮಾಡಿಕೊಳ್ಳಬೇಕು. ಅದಕ್ಕೆ ಅವರಲ್ಲಿ ಬದ್ಧತೆಯೂ ಇರಬೇಕು.  ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಅರಿವು ಇರುವವರೇ ಗಮನ-­ಕೊಡದಿದ್ದರೆ ಅವು ಬಗೆಹರಿಯುವುದಾದರೂ ಹೇಗೆ? ಈ ಭಾಗದ ವಿಷಯಗಳ ಬಗ್ಗೆ ಚರ್ಚೆ­ಯಾಗ­ಬೇಕು ಎಂದು ಸದನದಲ್ಲೂ ಪಟ್ಟು ಹಿಡಿದು,  ಒಮ್ಮತ ಮೂಡಿಸಲು ಯತ್ನಿಸಬೇಕು. ಆಗ ಎಲ್ಲವೂ ಸಾಧ್ಯವಾಗುತ್ತದೆ. ಆಯಾ ಪಕ್ಷಗಳ ಶಾಸಕಾಂಗ ಸಭೆಯಲ್ಲಾದರೂ ಶಾಸಕರು ಈ ವಿಷಯಗಳನ್ನು ಮುಖಂಡರ ಗಮನಕ್ಕೆ ತಂದಿದ್ದರೆ ಇಷ್ಟೊತ್ತಿಗೆ ಒಂದಿಷ್ಟು ಕಾರ್ಯಗಳಾದರೂ ಆಗಿರು­ತ್ತಿದ್ದವು. ಆ ಕೆಲಸವೂ ಆಗಿಲ್ಲ. ಇದು ಬೇಸರದ ಸಂಗತಿ.

ಅಂದಮಾತ್ರಕ್ಕೆ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ಬದಿಗೊತ್ತಲಾಗಿದೆ ಎಂದೇನೂ ಭಾವಿಸ­ಬೇಕಿಲ್ಲ. ಆಗೊಮ್ಮೆ, ಈಗೊಮ್ಮೆ ಈ ಭಾಗಕ್ಕೆ ಸಂಬಂಧಿಸಿದ ಸಂಗತಿಗಳು ಪ್ರಸ್ತಾಪ­ವಾಗಿವೆ. ಈ ರೀತಿಯ ಚರ್ಚೆಗಳು ಬೆಂಗಳೂರಿನಲ್ಲೂ ನಡೆದಿವೆ. ಅಂತಹದ್ದೇ ಚರ್ಚೆಗಳು ಮತ್ತೆ ಇಲ್ಲಿಯೂ ನಡೆ­ಯುವುದಾದರೆ ಬೆಳಗಾವಿಯ ಅಧಿವೇಶನಕ್ಕೆ ಏನು ಮಹತ್ವ? ಇಲ್ಲಿಯ ಬದಲಿಗೆ  ಬೆಂಗಳೂರಿನಲ್ಲೇ ನಡೆಸಬಹುದಲ್ಲ? ಹೆಚ್ಚು ಕಡಿಮೆ ಶಾಸಕಾಂಗದ ಇಡೀ ಸಚಿವಾಲಯವೇ ಬೆಳಗಾವಿಗೆ ಬರುತ್ತದೆ. ಹಣವೂ ಹೆಚ್ಚು ಖರ್ಚಾ­ಗುತ್ತದೆ. ಇಷ್ಟಾದ ಮೇಲೆ ಅದರಿಂದ ಸ್ವಲ್ಪ­ವಾದರೂ ಉತ್ತರ ಕರ್ನಾಟಕದ ಜನತೆಗೆ ಉಪಯೋಗವಾಗಬೇಕಲ್ಲ?

ಆದ್ದರಿಂದ ಇಲ್ಲಿ ನಡೆಯುವ ಅಧಿವೇಶನ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ವಿಶೇಷ ಅಧಿ­ವೇಶನ ಆಗಬೇಕು. ಹತ್ತು ದಿನ ಅಧಿವೇಶನ ನಡೆದರೆ ಕನಿಷ್ಠ ಐದು ದಿನಗಳಾದರೂ ಇಲ್ಲಿನ ವಿಷಯ­ಗಳ ಕುರಿತೇ ಚರ್ಚೆಗಳಾಗಬೇಕು. ಸಂಪುಟದ ಎಲ್ಲ ಸದಸ್ಯರೂ ಇಲ್ಲಿಯೇ ಇರುವುದ­ರಿಂದ 2–3 ಬಾರಿ ಸಂಪುಟ ಸಭೆ ನಡೆಸಿ ಈ ಭಾಗದ ಜನರ ಆಶೋತ್ತರಗಳನ್ನು ಈಡೇರಿಸು­ವಂತಹ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಳ್ಳ­ಬೇಕು.

ಇಂತಹ ನಿರೀಕ್ಷೆ, ಆಶಾಭಾವನೆಗಳಿಂದಲೇ ಈ ಭಾಗದ ಜನರು ಅಧಿವೇಶನ ನಡೆಯುವ ಸಂದರ್ಭದಲ್ಲಿ ಜಾತ್ರೆಗೆ ಸೇರುವಂತೆ ಬೆಳಗಾವಿ­ಯಲ್ಲಿ ಜಮಾಯಿಸುತ್ತಾರೆ. ತಮ್ಮ ಸಮಸ್ಯೆಗಳ ಬಗ್ಗೆ ಅರ್ಥಪೂರ್ಣ ಚರ್ಚೆಗಳು ನಡೆದು, ಅವು­ಗಳು  ಬಗೆಹರಿದಾವು ಎಂಬ ಆಸೆಯಿಂದ ಕಲಾಪ ನಡೆಯುವ ಕಟ್ಟಡದ ಹೊರಗೆ ಚಾತಕಪಕ್ಷಿಗಳಂತೆ ಕಾದಿರುತ್ತಾರೆ. ಅದು ಈಡೇರಿದಾಗಷ್ಟೇ ಜನರಿಗೆ ಸರ್ಕಾರ ತಮ್ಮ ಬಳಿಗೇ ಬಂದು ಕೆಲಸ ಮಾಡಿ­ಕೊಟ್ಟಿತು ಎಂದೂ ಅನಿಸುತ್ತದೆ. ಆದರೆ ಸರ್ಕಾರಕ್ಕೆ ಮಾತ್ರ ಜನರ ನಿರೀಕ್ಷೆ– ಆಶಾಭಾವನೆ ಕಾಣಿಸಿಲ್ಲ. ಹಾಗಾಗಿಯೇ ಅಂಥ ಕೆಲಸಕ್ಕೆ ಅದು ಮುಂದಾಗಿಲ್ಲ.

ಇನ್ನು, ಅಧಿವೇಶನ ಹಳಿ ತಪ್ಪುವಲ್ಲಿ ಮಾಧ್ಯಮದ ಪಾತ್ರವನ್ನು ತಳ್ಳಿಹಾಕುವಂತಿಲ್ಲ. ನಕರಾತ್ಮಾಕ ಅಂಶಗಳಿಗೆ ಹೆಚ್ಚು ಪ್ರಚಾರ ಸಿಗುವುದರಿಂದ ಶಾಸಕರೂ ಅಂತಹ ವಿಷಯ­ಗಳಿಗೇ ಗಮನ ಕೊಡುತ್ತಿದ್ದಾರೆ. ಇದರ ಬದಲಿಗೆ ಶಾಸಕರು, ಗಂಭೀರವಾದ ವಿಷಯಗಳನ್ನು ಚರ್ಚೆಗೆ ಎತ್ತಿಕೊಂಡು, ಸ್ವಾರಸ್ಯ ಸೇರಿಸಿ ಸದನ­ವನ್ನು ಮೂಕವಿಸ್ಮಿತಗೊಳಿಸುವಂತಹ ಮಾತು­ಗಳಿಂದ ಕಟ್ಟಿಹಾಕುವ ಕೆಲಸ ಮಾಡಬೇಕು. ಅದಕ್ಕೇ ವಿಧಾನಮಂಡಲವನ್ನು ‘ಮಾತಿನ ಮನೆ’ ಎನ್ನುವುದು. ಈಗಂತೂ ಮಾತಿನಮನೆಯಲ್ಲಿ ಬರೀ ಕೋಲಾಹಲವೇ ಹೆಚ್ಚು. ಮಾಧ್ಯಮ­ಗಳಲ್ಲೂ ಅದೇ ಪ್ರಮುಖವಾಗಿ ಪ್ರಕಟ­ವಾಗುವುದರಿಂದ ಶಾಸಕರಿಗೂ ಅದೇ ರುಚಿಸುತ್ತಿದೆ.

ನಿಜಕ್ಕೂ ಉತ್ತರ ಕರ್ನಾಟಕ ಭಾಗದ ಜನ-­ಪ್ರತಿನಿಧಿ­ಗಳಿಗೆ ತಮ್ಮ ಊರುಗಳ ಅಭಿವೃದ್ಧಿಯ ಚಿಂತನೆ ಇದ್ದಿದ್ದರೆ ಒಮ್ಮೆಯಾದರೂ ನಂಜುಂಡಪ್ಪ ವರದಿ ಅನುಷ್ಠಾನ ಯಾವ ರೀತಿ ಆಗಿದೆ; ಎಷ್ಟು ಹಣ ಬಿಡುಗಡೆಯಾಗಿದೆ; ಎಷ್ಟು ಖರ್ಚಾಗಿದೆ? ಎಂಬ ಬಗ್ಗೆಯೇ ವಿಶೇಷ ಅಧಿವೇಶನಕ್ಕೆ ಪಟ್ಟು ಹಿಡಿಯಬೇಕಿತ್ತು. ಹೋಗಲಿ, ಬೆಳಗಾವಿ ಅಧಿವೇಶನದ ಸಂದರ್ಭದಲ್ಲಾದರೂ ಒಂದು ದಿನದ ಚರ್ಚೆಗೆ ಒತ್ತಾಯಿಸಿ, ಅವಕಾಶ ಮಾಡಿಕೊಳ್ಳಬೇಕಿತ್ತು. ಆ ಕೆಲಸವೂ ಇದುವರೆಗೂ ಆಗಿಲ್ಲ. ಇನ್ನು ಅಭಿವೃದ್ಧಿ ಹೇಗೆ ಸಾಧ್ಯ?

ಇದನ್ನೆಲ್ಲಾ ನೋಡಿದಾಗ ಇಷ್ಟಕ್ಕೋಸ್ಕರ ಇಲ್ಲಿ ರೂ 400 ಕೋಟಿ ವೆಚ್ಚದ ಬೃಹತ್ ಸುವರ್ಣ ವಿಧಾನಸೌಧ ಬೇಕಿತ್ತೇ ಎನಿಸುತ್ತದೆ. ಅದೂ ವರ್ಷಕ್ಕೊಮ್ಮೆ ನಡೆಯುವ ಅಧಿವೇಶನಕ್ಕಾಗಿ! ಈ ಕಟ್ಟಡ ಉದ್ಘಾಟನೆಯಾಗಿ ಒಂದು ವರ್ಷ ಕಳೆ­ದರೂ ಸರ್ಕಾರದ ಒಂದು ಇಲಾಖೆಯೂ ಇಲ್ಲಿಗೆ ಸ್ಥಳಾಂತರವಾಗಲಿಲ್ಲ. ಚಟುವಟಿಕೆಯೇ ಇಲ್ಲದ ಸುವರ್ಣ ವಿಧಾನಸೌಧ ಕಳೆಗುಂದಿದೆ. ಬರೀ ಹೊರಗಿನಿಂದ ಸುಂದರವಾಗಿದ್ದರೆ ಸಾಲದು.

ಅದರಲ್ಲಿ ಜೀವವೂ ಇರಬೇಕು. ಅಂದರೆ ಈ ಕಟ್ಟಡ­ದಲ್ಲಿ ಕೆಲ ಕಚೇರಿಗಳಾದರೂ ಕಾರ್ಯ­ನಿರ್ವ­ಹಿಸುವಂತೆ ಮಾಡುವ  ಮೂಲಕವಾದರೂ ಕಟ್ಟಡ ಜನರ ಉಪಯೋಗಕ್ಕೆ ಬರಬೇಕು. ವರ್ಷಕ್ಕೆ ಒಮ್ಮೆ ಮಾತ್ರ ಇಲ್ಲಿ ಅಧಿವೇಶನ ನಡೆಸ­ಬೇಕು ಎಂಬುದು ನಿಯಮವೇನೂ ಅಲ್ಲ. ವರ್ಷ­ದಲ್ಲಿ 2–3 ಬಾರಿ ಬೇಕಿದ್ದರೂ ನಡೆಸಬಹುದು. ಸರ್ಕಾರ ಮನಸ್ಸು ಮಾಡಬೇಕು ಅಷ್ಟೆ. ಸುವರ್ಣ ವಿಧಾನಸೌಧವು ವಿಧಾನಸೌಧದಂತೆಯೇ ಅಧಿ-­ಕಾರದ ಸಂಕೇತ; ರಾಜಧಾನಿಯಿಂದ ಬಹುದೂರ­ದಲ್ಲಿರುವ ಜನರಿಗೆ ಆಶಾಕಿರಣ. ಜನರು ಬಂದು ಹೋಗಿ ಮಾಡುವ ಕಚೇರಿಗಳೂ ಇಲ್ಲಿ ಇಲ್ಲ ಎಂದರೆ ಅದು ಸಾರ್ವಜನಿಕರ ಹಣದ ಪೋಲೇ ಸರಿ.

ಹೀಗಿರುವಾಗ ಇದು ಯಾರಿಗಾಗಿ ಅಧಿ­ವೇಶನ? ಯಾರಿಗಾಗಿ ಸುವರ್ಣ ವಿಧಾನಸೌಧ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಬರೀ ಭಾವನಾತ್ಮಕ ಸಂಗತಿಗಳನ್ನೇ ಮುಂದಿಟ್ಟುಕೊಂಡು ರಾಜಕೀಯ ಮಾಡುವ ರಾಜಕಾರಣಿಗಳು ನಿಜವಾಗಲೂ ಅಭಿವೃದ್ಧಿ ಪರ ನಿಂತು ಈ ಭಾಗದ ಏಳಿಗೆಗೆ ಶ್ರಮಿಸಬೇಕು.ಆಗಷ್ಟೇ ಜನರಿಗೆ ನೆಮ್ಮದಿ ಸಿಗಲುಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT