ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಿಗೆ ಯಾರು ಬೋಧಿಸಬೇಕು ನೀತಿ ಪಾಠ?

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕರ್ನಾಟಕದ ವಿಧಾನಸಭೆಯಲ್ಲಿ ಮತ್ತೊಮ್ಮೆ ಪ್ರಜಾಸತ್ತೆಯ ತತ್ವಾದರ್ಶಗಳು ಗರಿ ಮುದುರಿ ಬಿದ್ದಿವೆ. ಸುಮಾರು ಒಂದೂವರೆ ವರ್ಷದ ಹಿಂದೆ ನಮ್ಮ ಜನನಾಯಕರ ಸ್ವಾರ್ಥ ಹಾಗೂ ಅಧಿಕಾರ ವ್ಯಾಮೋಹ ಪರಾಕಾಷ್ಠೆಯನ್ನು ತಲುಪಿ ಇದೇ ವಿಧಾನಸಭೆ ಅವಾಚ್ಯ ಶಬ್ದಗಳ ಬಳಕೆ ಹಾಗೂ ಅನಾಗರಿಕ ವರ್ತನೆಗಳಿಗೆ ಸಾಕ್ಷಿಯಾದ ಘಟನೆ ತಂದ ಆಘಾತದಿಂದ ನಾವು ಇನ್ನೂ ಚೇತರಿಸಿಕೊಂಡಿಲ್ಲ.

ಆಗಲೇ ನಮ್ಮ ರಾಜ್ಯದ ಮೂವರು ಮಂತ್ರಿಗಳು ಸಭಾ ಕಲಾಪ ನಡೆಯುತ್ತಿರುವಾಗಲೇ `ಬ್ಲೂಫಿಲಂ~ ವೀಕ್ಷಣೆಯಲ್ಲಿ ತೊಡಗಿದ್ದರು ಎಂಬ ಸುದ್ದಿ ಮರ್ಯಾದಾ ರಾಜಕಾರಣದ ಬುಡವನ್ನು ಮತ್ತೊಮ್ಮೆ ಅಲುಗಾಡಿಸಿದೆ.

ಈ ಪ್ರಕರಣ ಎಬ್ಬಿಸಿದ ಬಿರುಗಾಳಿಯ ರಭಸ ತಾಳಲಾರದೆ ಅಧಿಕಾರಾರೂಢ ಸರ್ಕಾರದ ಈ ಮೂವರು ಸಚಿವರು ತಮ್ಮ ಹುದ್ದೆಗಳಿಗೆ ರಾಜಿನಾಮೆಯನ್ನೇನೋ ಇತ್ತಿದ್ದಾರೆ. ಆದರೆ, ಸಚಿವರ ಈ ಕ್ರಮಕ್ಕೆ ಒಂದು ಸಾರ್ವಜನಿಕ ಸ್ಥಾನದ ಗೌರವಕ್ಕೆ ಚ್ಯುತಿ ತರುವ ಹಾಗೆ ನಡೆದುಕೊಂಡಿದ್ದಕ್ಕೆ ಪಶ್ಚಾತ್ತಾಪವಾಗಲಿ, ಅವರು ಅನುಭವಿಸಿದ ಪಾಪ ಪ್ರಜ್ಞೆಯಾಗಲಿ ಕಾರಣವಲ್ಲ.

ತಮ್ಮ ಪಕ್ಷದ ಹಿತಾಸಕ್ತಿಯನ್ನು ಕಾಪಾಡಲು ತಾವು ರಾಜೀನಾಮೆಯನ್ನು ಸಲ್ಲಿಸಿದ್ದಾಗಿ ಸಚಿವತ್ರಯರು ಘೋಷಿಸಿದರೆ, `ಈ ಮಂತ್ರಿಗಳು ಯಾವ ತಪ್ಪನ್ನೂ ಮಾಡಿಲ್ಲ, ಆದರೂ ತಮ್ಮ ಮೇಲಿನ ಆಪಾದನೆ ಪಕ್ಷಕ್ಕೆ ಮುಜುಗರವನ್ನುಂಟು ಮಾಡಬಾರದೆಂದು ರಾಜೀನಾಮೆ ನೀಡಿದ್ದಾರೆ~ ಎಂದು ಅವರ ಬೆಂಬಲಕ್ಕೆ ಪಕ್ಷದ ನಾಯಕರು ಹಾಗೂ ಬಹುತೇಕ ಸಹೋದ್ಯೋಗಿಗಳು ನಿಂತಿದ್ದಾರೆ!

ಈ ಘಟನೆಯ ವಿವರಗಳು ಬಹಿರಂಗವಾಗುತ್ತಿದ್ದಂತೆ ಆಡಳಿತಾರೂಢ ಪಕ್ಷದ ಸಚಿವರ ಅಶ್ಲೀಲ ಚಿತ್ರ ವೀಕ್ಷಣೆಯಿಂದ ಪ್ರಜಾಸತ್ತೆಗೆ ಹಾಗೂ ಸಾರ್ವಜನಿಕ ಸ್ಥಾನದ ಗೌರವಕ್ಕೆ ತಟ್ಟಿರುವ ಕಳಂಕದ ಬಗ್ಗೆ ವಿರೋಧಿ ರಾಜಕೀಯ ಬಣಗಳ ಪ್ರಲಾಪ ಆರಂಭವಾಗಿದೆ.

`ನೈತಿಕ-ಅನೈತಿಕ~, `ಪವಿತ್ರ-ಅಪವಿತ್ರ~, `ಶುದ್ಧ-ಅಶುದ್ಧ~ ಇವೇ ಮುಂತಾದ ಪದಗಳನ್ನು ದಾಳಗಳಾಗಿ ಬಳಸಿಕೊಂಡು ಆಡಳಿತ ಪಕ್ಷದ ಮೇಲೆ ಗದಾಪ್ರಹಾರ ಮಾಡತೊಡಗಿರುವ ಇತರ ರಾಜಕೀಯ ಪಕ್ಷಗಳು ತಾವು ಕುಳಿತಿರುವುದು ಗಾಜಿನ ಮನೆಯಲ್ಲಿ ಎಂಬ ಸತ್ಯವನ್ನು ಸಂಪೂರ್ಣವಾಗಿ ಮರೆತ ಹಾಗಿದೆ.

ಭಾರತೀಯ ಸಂಸ್ಕೃತಿ ರಕ್ಷಣೆಯ ಏಕೈಕ ಜವಾಬ್ದಾರಿಯನ್ನು ಹೊತ್ತಿರುವವರಂತೆ ನಡೆದುಕೊಳ್ಳುವ ಆಡಳಿತಾರೂಢ ಪಕ್ಷ, ಇವರ ಕೃಪಾಪೋಷಿತ ಸಂಘ-ಸಂಸ್ಥೆಗಳು ಹಾಗೂ ಈ ಪಕ್ಷದ ಮಹಿಳಾ ಸದಸ್ಯರು ಹೆಚ್ಚು ಕಡಿಮೆ ಮೌನ ತಾಳಿರುವುದು, ಸಮಕಾಲೀನ ರಾಜಕಾರಣ ಹಾಗೂ ಸಾಮಾಜಿಕ ಲಜ್ಜೆ-ಇವುಗಳೆರಡೂ ಎಂಥ ಪ್ರಪಾತಕ್ಕೆ ಇಳಿಯುತ್ತಿವೆ ಎಂಬುದಕ್ಕೆ  ನಿದರ್ಶನವಷ್ಟೆ. 

ಜಗತ್ತಿನ ಬಹುತೇಕ ಸಮಾಜಗಳಲ್ಲಿ ವೈಯಕ್ತಿಕ ಮತ್ತು ಸಾರ್ವಜನಿಕ ನಡವಳಿಕೆಗಳ ನಡುವೆ ಒಂದು ಗೆರೆ ಇದ್ದೇ ಇದೆ. ಇಂಥ ಎಲ್ಲ ಸಮಾಜಗಳಲ್ಲಿ ವಿಶೇಷವಾಗಿ ಲೈಂಗಿಕತೆ ಹಾಗೂ ಅದಕ್ಕೆ ಸಂಬಂಧಿಸಿದ ವಿಚಾರಗಳನ್ನು ಕುರಿತಂತೆ `ಅಪೇಕ್ಷಿತ~ ಹಾಗೂ `ಅನುಚಿತ~ ವರ್ತನೆಯ ಎಲ್ಲೆಗಳನ್ನು ನಿಗದಿಪಡಿಸಲಾಗಿರುತ್ತದೆ.

ಸಾರ್ವಜನಿಕ ಸ್ಥಳಗಳ ಗೌರವಕ್ಕೆ ಚ್ಯುತಿಬಾರದಂತೆ ನಡೆದುಕೊಳ್ಳಬೇಕೆಂಬ ಪ್ರಜ್ಞೆ ಕೇವಲ ನಾಯಕತ್ವದ ಸ್ಥಾನಗಳಲ್ಲಿರುವವರಿಗಷ್ಟೇ ಸೀಮಿತವಾಗಿರದೆ ಸ್ವಸ್ಥ ಸಾಮಾಜಿಕ ವ್ಯವಸ್ಥೆಯ ಎಲ್ಲ ಪ್ರಜೆಗಳಲ್ಲೂ ಜಾಗೃತವಾಗಿರಬೇಕೆಂಬುದು ಒಂದು ಸಾಮಾಜಿಕ ನಿಯಮ.
 
ಆದರೆ, ಸಾರ್ವಜನಿಕ ಹಿತವನ್ನು ರಕ್ಷಿಸಬೇಕಾದವರೇ ಈ ನಿಯಮೋಲ್ಲಂಘನೆಯನ್ನು ವಿಧಾನಸಭೆಯಂಥ ಸಾರ್ವಜನಿಕ ಸ್ಥಾನದಲ್ಲೇ ಮಾಡುವ ಮಟ್ಟಕ್ಕೆ ಇಳಿದಾಗ ಜನರಿಗೆ-ಜಗತ್ತಿಗೆ ಮುಟ್ಟುವ ಸಂದೇಶವಾದರೂ ಎಂತಹುದು?

ಬ್ಲೂಫಿಲಂ ವೀಕ್ಷಣೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸಚಿವರಲ್ಲಿ ಒಬ್ಬರು ಇದುವರೆಗೂ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಖ್ಯಸ್ಥರಾಗಿದ್ದವರು.
 
ಮೊನ್ನೆ ಮೊನ್ನೆಯಷ್ಟೇ ಇದೇ ಸಚಿವರು ಹೆಣ್ಣು ಮಕ್ಕಳು ಅನುಸರಿಸಬೇಕಾದ ವಸ್ತ್ರ-ಸಂಹಿತೆಯನ್ನು ಕುರಿತು ನೀತಿ ಬೋಧನೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು! ಹೆಣ್ಣಿನ ವಿಚಾರಕ್ಕೆ ಬಂದಾಗ ಅತಿಯಾದ ಮಡಿವಂತಿಕೆಯನ್ನು ಪ್ರದರ್ಶಿಸಿ ಮರ್ಯಾದಾ ಪಾಠಗಳನ್ನು ಕಲಿಸಲು ಮುಂದಾಗುವ ಈ ನಾಯಕರು `ವೈಯಕ್ತಿಕ ನೀತಿ ಸಂಹಿತೆ~ಯೊಂದನ್ನು ಅಳವಡಿಸಿಕೊಳ್ಳುವುದಿಲ್ಲವೇಕೆ?

ಹೆಣ್ಣಿನ ಮರ್ಯಾದೆಯ ಬಗ್ಗೆ ಇವರಿಗೆ ಅಷ್ಟೊಂದು ಕಾಳಜಿಗಳಿರುವುದಾದರೆ ಭೋಗ ಸಂಸ್ಕೃತಿಯ ಪ್ರತೀಕ ಎಂದು ಪರಿಗಣಿತವಾಗಿರುವ ರೆಸಾರ್ಟುಗಳಲ್ಲಿ ಹಾಗೂ ಬೀಚು ತಾಣಗಳಲ್ಲಿ ನಡೆಯುವ ವಿಲಾಸಿ ಕೂಟಗಳಿಗೆ ಪ್ರತ್ಯಕ್ಷ ಅಥವಾ ಪರೋಕ್ಷ ಬೆಂಬಲವನ್ನು ನೀಡುವುದೇಕೆ? ಸರ್ಕಾರಿ-ಖಾಸಗಿ ಕಚೇರಿಗಳಲ್ಲಿ, ಆರಕ್ಷಕ ಠಾಣೆಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಹಾಗೂ ಇತರ ಸಾರ್ವಜನಿಕ ಸಂಸ್ಥೆಗಳಲ್ಲಿ ಹೆಣ್ಣಿನ ಗೌರವಕ್ಕೆ ಧಕ್ಕೆ ತರುವಂಥ ಘಟನೆಗಳು ನಡೆಯುತ್ತಲೇ ಇದ್ದರೂ ಇವುಗಳಿಗೆ ಕಾರಣರಾದವರ ಮೇಲೆ ಕಠಿನ ಕ್ರಮ ಜರುಗಿಸುವುದರಲ್ಲಿ ಈ ಜನ ನಾಯಕರು ವಿಫಲರಾಗಿರುವುದೇತಕ್ಕೆ?

ಇಂಥ ಪ್ರಶ್ನೆಗಳು ನೂರಾರು ಬಾರಿ ಪ್ರಜ್ಞಾವಂತ ವಲಯಗಳಲ್ಲಿ ಮೂಡಿ ಬರುತ್ತಿದ್ದರೂ ಅಲಕ್ಷ್ಯ ಭಾವನೆಯನ್ನು ತಾಳಿರುವ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಸಾರ್ವಜನಿಕ ಜವಾಬ್ದಾರಿ ಸತ್ತು ಹೋಗಿದೆ ಎಂದುಕೊಳ್ಳಬೇಕೋ ಅಥವಾ ಸಾರ್ವಜನಿಕ ಲಜ್ಜೆಯ ಎಲ್ಲೆಯನ್ನು ಅದು ಮೀರಿ ಹಿಂದಕ್ಕೆ ಬರಲಾರದ ಸ್ಥಿತಿಯನ್ನು ತಲುಪಿದೆ ಎಂದು ಜನ ಸಾಮಾನ್ಯರು ಕೈಚೆಲ್ಲಿ ಕೂರಬೇಕೋ ತಿಳಿಯದು. ಈ ಪ್ರಶ್ನೆಗೆ ಉತ್ತರವನ್ನು ನೀಡುವವರು ಯಾರು?

ಸಮಕಾಲೀನ ರಾಜಕಾರಣ ದ್ವಂದ್ವ ನಿಲುವು ಹಾಗೂ ನೀತಿಗಳ ಗೂಡು. ಇದಕ್ಕೆ ಯಾವ ಪಕ್ಷವೂ ಹೊರತಾಗಿಲ್ಲ. ಬ್ಲೂಫಿಲಂ ವೀಕ್ಷಣೆ ಪ್ರಕರಣದಲ್ಲಿ ಆಡಳಿತ ಪಕ್ಷವನ್ನು ಜರೆಯುತ್ತಾ ಸಾರ್ವಜನಿಕ ಜೀವನದ ಶುದ್ಧೀಕರಣಕ್ಕೆ ಮುಂದಾಗಿರುವ ವಿರೋಧ ಪಕ್ಷ, ಚುನಾವಣಾ ಸಮಯದಲ್ಲಿ ಮತದಾರರನ್ನು ಓಲೈಸಲು ಕ್ಯಾಬರೆ ನೃತ್ಯವನ್ನು ಏರ್ಪಡಿಸಿ ಬಾಡೂಟವನ್ನು ಹಂಚಿದ್ದನ್ನು ಮರೆತಂತಿದೆ.

ಇದೇ ಪಕ್ಷ ಬೆಂಬಲಿತ ರಾಜ್ಯಪಾಲರೊಬ್ಬರು ತಮ್ಮ ದುರ್ನಡತೆಯಿಂದ ರಾಜಭವನದಂಥ ಗೌರವಯುತವಾದ ಸಂಸ್ಥೆಯನ್ನೇ ಕಲುಷಿತಗೊಳಿಸಿದ್ದ ಪ್ರಕರಣವನ್ನು ಸಾರ್ವಜನಿಕ ಮನಃಪಟಲದಿಂದ ಅಳಿಸಿಹಾಕಲು ಸಾಧ್ಯವೇ?

ಇದೇ ಪಕ್ಷದ ಕೆಲ ನಾಯಕರು ಬ್ಲೂಫಿಲಂ ತಯಾರಿಕೆಯ ಘಟಕಗಳನ್ನೇ ನಡೆಸುತ್ತಿದ್ದು ಲಕ್ಷಾಂತರ ರೂಪಾಯಿಗಳ ಅಕ್ರಮ ಗಳಿಕೆ ಮಾಡಿದ್ದ ಘಟನೆ ನಮ್ಮ ರಾಜ್ಯದಲ್ಲೇ ನಡೆದಿದ್ದರೂ ವಿರೋಧಪಕ್ಷದ ಕೆಲ ನಾಯಕರು ಮರ್ಯಾದಾ ರಾಜಕಾರಣದ ರಕ್ಷಕರಂತೆ ಬಿಂಬಿಸಿಕೊಳ್ಳುತ್ತಿರುವುದು ಹಾಸ್ಯಾಸ್ಪದ.

ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಪಕ್ಷದ ಮಹಿಳಾಪರ ಕಾಳಜಿ ಎಲ್ಲರಿಗೂ ತಿಳಿದಿದ್ದೇ. ವಿವಾಹ ವಿಚ್ಛೇದನ ಪಡೆದು ಎರಡನೆಯ ಮದುವೆಯಾಗಲು ಹೊರಟಿದ್ದಾರೆ ಎನ್ನುವ ಕಾರಣವನ್ನೇ ಮುಂದಿಟ್ಟು ಚಲನಚಿತ್ರ ಕಲಾವಿದೆ ಶ್ರುತಿಯ ವೈಯಕ್ತಿಕ ಬದುಕನ್ನು ಸಾರ್ವಜನಿಕ ವಲಯಕ್ಕೆ ಎಳೆದು ಆಕೆಗೆ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ತಪ್ಪಿಸಿದ ಈ ವ್ಯವಸ್ಥೆಯ ಪ್ರತಿನಿಧಿಗಳು, ಹೆಣ್ಣನ್ನು ಕಾಮದೃಷ್ಟಿಯಿಂದ ಬಿಂಬಿಸುವ ಅಶ್ಲೀಲ ಚಿತ್ರವನ್ನು ವಿಧಾನಸಭೆಯಲ್ಲಿ ನೋಡಿದ್ದಾದರೂ ಹೇಗೆ?
 
ಇವರಿಂದ ಬೆಂಬಲಿತವಾದ ಸಂಘಟನೆಯೊಂದು ಹೆಣ್ಣು ಮಕ್ಕಳನ್ನು ಬಾರೊಂದರಿಂದ ಹೊರಗೆಳೆದು ಸಾರ್ವಜನಿಕ ಅವಮಾನಕ್ಕೆ ಗುರಿ ಮಾಡಿದಾಗ ಆ ಘಟನೆಗೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಜರುಗಿಸಲು ಆಡಳಿತಾರೂಢ ವ್ಯವಸ್ಥೆ ಹಿಂಜರಿದಿದ್ದನ್ನು ಮರೆಯಲು ಸಾಧ್ಯವೇ?

ತಮ್ಮನ್ನು ಭಾರತೀಯ ಸಂಸ್ಕೃತಿ ರಕ್ಷಕರೆಂದು ಘೋಷಿಸಿಕೊಂಡು ಪಠ್ಯಪುಸ್ತಕಗಳು, ಚಲನಚಿತ್ರಗಳು, ಕೊನೆಗೆ ಗ್ರೀಟಿಂಗ್ ಕಾರ್ಡ್ ಅಂಗಡಿಗಳನ್ನೂ ಬಿಡದೆ ಆಕ್ರಮಣ ಮಾಡುವವರು ಬ್ಲೂಫಿಲಂ ವೀಕ್ಷಣೆಗೆ ಏನೂ ಪ್ರತಿಕ್ರಿಯೆ ತೋರದಿರುವುದು ಆಶ್ಚರ್ಯ.

ಮಹಿಳೆಯರ ವಿಚಾರ ಬಂದಾಕ್ಷಣ ಕಡ್ಡಾಯವಾಗಿ ಪ್ರತಿಕ್ರಿಯಿಸಲೇಬೇಕೆಂಬ ಸಂಕಲ್ಪ ಮಾಡಿಕೊಂಡಂತಿರುವ ರಾಜ್ಯ ಮಹಿಳಾ ಆಯೋಗ ಇಂಥ ಗಂಭೀರವಾದ ವಿಚಾರದಲ್ಲಿ ಮೌನ ಸಾಂಗತ್ಯ ಮಾಡಿಕೊಂಡಿರುವುದು ಈ ಹೊತ್ತು ನಮ್ಮನ್ನು ಆವರಿಸಿಕೊಂಡಿರುವ `ಹೊಂದಾಣಿಕೆಯ ರಾಜಕಾರಣ~ಕ್ಕೆ ಜ್ವಲಂತ ನಿದರ್ಶನ.

ಭಾರತೀಯ ರಾಜಕೀಯ ಕ್ಷೇತ್ರದಲ್ಲಿ ಇಂಥ ಅನೇಕ ಪ್ರಕರಣಗಳು ನಡೆದು ಹೋಗಿವೆ, ನಡೆಯುತ್ತಲೇ ಇವೆ. ಸುಮಾರು ಒಂದು ದಶಕದ ಹಿಂದೆ ಕೇರಳ ರಾಜ್ಯದ ಕಲ್ಲಿಕೋಟೆಯಲ್ಲಿ ಐಸ್‌ಕ್ರೀಂ ಮಾರಾಟ ಕೇಂದ್ರವೊಂದನ್ನು ರಾಜ್ಯದ ಮಂತ್ರಿಯೂ ಸೇರಿದಂತೆ ಅನೇಕ ಪ್ರತಿಷ್ಠಿತ ವ್ಯಕ್ತಿಗಳು ಅನೈತಿಕ ಲೈಂಗಿಕ ಚಟವಟಿಕೆಗಳಿಗಾಗಿ ಬಳಸಿಕೊಳ್ಳುತ್ತಿದ್ದ ವಿಷಯ ಬಹಿರಂಗವಾದಾಗ ಉಂಟಾದ ಸ್ಫೋಟಕ ಸನ್ನಿವೇಶ ಆ ಮಂತ್ರಿಯ ತಲೆದಂಡವನ್ನೇನೋ ಪಡೆಯಿತು. ಈ ಪ್ರಕರಣದಲ್ಲಿ ಆತ ಭಾಗಿಯಾಗಿರುವುದು ಸಾಬೀತಾದರೂ ಇದುವರೆಗೂ ಆತನಿಗೆ ಯಾವ ಶಿಕ್ಷೆಯೂ ಆಗಿಲ್ಲವೆನ್ನುವುದು ಬೇರೆ ವಿಚಾರ.

ತೀರಾ ಇತ್ತೀಚೆಗಷ್ಟೇ ನಡೆದ ಭಂವರಿದೇವಿ ಹತ್ಯೆ ಪ್ರಕರಣ ರಾಜಸ್ತಾನದ ಸರ್ಕಾರವನ್ನೇ ಅಲುಗಾಡಿಸುವ ಮಟ್ಟಕ್ಕೆ ಹೋಗಿ ಈಗ ಮರೆತಂತೆಯೇ ಆಗಿರುವುದು ಹಾಗೂ ಉತ್ತರ ಪ್ರದೇಶದಲ್ಲಿ ಆಗಿಂದಾಗ್ಗೆ ನಡೆಯುತ್ತಲಿರುವ ರಾಜಕಾರಣಿಗಳ ಲೈಂಗಿಕ ದುರಾಚಾರದ ಘಟನೆಗಳು ಯಾವಾಗಲೋ ಒಮ್ಮೆ ಭುಗಿಲೆದ್ದು ಮತ್ತೆ ತಣ್ಣಗಾಗುವುದನ್ನು ನೋಡಿದರೆ ಈ ದೇಶದಲ್ಲಿ ಸಾರ್ವಜನಿಕ ಜ್ಞಾಪಕಶಕ್ತಿ ತೀರಾ ಕೆಳಮಟ್ಟದಲ್ಲಿರುವುದು ವೇದ್ಯವಾಗುತ್ತದೆ.

ಪ್ರಜಾಪ್ರತಿನಿಧಿಗಳು ತಮ್ಮ ಸ್ಥಾನದ ಜವಾಬ್ದಾರಿಗಳನ್ನು ಮರೆತು ಪಾರ್ಲಿಮೆಂಟ್ ಅಥವಾ ಶಾಸನ ಸಭೆಗಳಲ್ಲಿ ಅಕ್ರಮಗಳಲ್ಲಿ ತೊಡಗುವುದು ಭಾರತಕಷ್ಟೇ ಸೀಮಿತವಾಗಿಲ್ಲ.
 
ತೀರಾ ಇತ್ತೀಚೆಗೆ ಇಂಡೊನೇಷಿಯಾದ ಪಾರ್ಲಿಮೆಂಟಿನಲ್ಲಿ ಹಿರಿಯ ರಾಜಕಾರಣಿಯೊಬ್ಬರು ಬ್ಲೂಫಿಲಂ ವೀಕ್ಷಣೆಯಲ್ಲಿ ತೊಡಗಿದ್ದ ವಿಷಯ ಪುರಾವೆಗಳ ಸಹಿತ ಬಹಿರಂಗವಾದಾಗ ದೇಶದಾದ್ಯಂತ ಕಟುವಾದ ವಿರೋಧ ವ್ಯಕ್ತವಾಯಿತು.

ಪತ್ರಿಕಾಗೋಷ್ಠಿಯೊಂದನ್ನು ಕರೆದು ತನ್ನ ತಪ್ಪನ್ನು ಬಹಿರಂಗವಾಗಿ ಒಪ್ಪಿಕೊಂಡು ಅಲ್ಲೇ ತನ್ನ ರಾಜೀನಾಮೆಯನ್ನು ಘೋಷಿಸಿದ ಆತನಿಗೆ ಪಕ್ಷ ತಕ್ಷಣಕ್ಕೆ ಕಾರಾಗೃಹವಾಸದ ಶಿಕ್ಷೆಯನ್ನು ವಿಧಿಸದಿದ್ದರೂ, ಆತನ ಪರ ವಕಾಲತ್ತನ್ನಂತೂ ವಹಿಸಲಿಲ್ಲ.

ಈ ಇಡೀ ಪ್ರಕರಣದ ದುರಂತವೆಂದರೆ ಈತ ಅಶ್ಲೀಲ ಚಿತ್ರಗಳನ್ನು ಕಂಪ್ಯೂಟರ್, ಟ್ಯಾಬ್ಲೆಟ್ ಅಥವಾ ಮೊಬೈಲ್ ದೂರವಾಣಿಗಳಲ್ಲಿ ಡೌನ್‌ಲೋಡ್ ಮಾಡುವುದನ್ನು ನಿಷೇಧಿಸಲು ಇಂಡೋನೇಷಿಯಾ ಸರ್ಕಾರ ಮೂರು ವರ್ಷಗಳ ಹಿಂದೆಯೇ ಅಸ್ತಿತ್ವಕ್ಕೆ ತರಲಿದ್ದ ವಿಧೇಯಕವೊಂದರ ಪ್ರಮುಖ ವಕ್ತಾರನಾಗಿದ್ದು!

ವಿಶ್ವದಾದ್ಯಂತ ವಿವಿಧ ಕಾಲಘಟ್ಟಗಳಲ್ಲಿ ರಾಜ-ಮಹಾರಾಜರು, ಪ್ರಧಾನಿಗಳು, ಅಧ್ಯಕ್ಷರುಗಳಿಂದ ಹಿಡಿದು ಮಂತ್ರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳವರೆಗೆ ಅನೇಕರು ತಮ್ಮ ಸ್ಥಾನದ ದುರುಪಯೋಗ ಮಾಡಿಕೊಂಡು ಅಶ್ಲೀಲ, ಅನೈತಿಕ, ಅನುಚಿತ ಎಂದೆಲ್ಲ ಗುರುತಿಸಲ್ಪಡುವ ವರ್ತನೆಗಳಲ್ಲಿ ತೊಡಗಿರುವ ಘಟನೆಗಳು ನಮ್ಮ ಮುಂದೆ ಸಾಕಷ್ಟಿವೆ.

ಆದರೆ ಇದುವರೆಗೂ ಇಂಥ ಪ್ರಸಂಗಗಳಲ್ಲಿ ಭಾಗಿಯಾದವರಿಗೆ ಕಠಿನ ಶಿಕ್ಷೆಗಳಾಗಿರುವ ನಿದರ್ಶನಗಳು ಬಹು ಕಡಿಮೆ. ಸಾರ್ವಜನಿಕ ಆಕ್ರೋಶ ಭುಗಿಲೆದ್ದಾಗ ಅಲ್ಲೊಮ್ಮೆ-ಇಲ್ಲೊಮ್ಮೆ ಇಂಥ ವ್ಯಕ್ತಿಗಳ ತಲೆದಂಡವಾಗಬಹುದೇ ಹೊರತು ಇದನ್ನು ಅಕ್ಷಮ್ಯ ಅಪರಾಧ ಎಂದಂತೂ ಬಹು ಮಂದಿ ಪರಿಗಣಿಸಿದಂತೆ ಕಾಣುವುದಿಲ್ಲ.

ಕಾಲ ಕಳೆಯುತ್ತಾ ಹೋದ ಹಾಗೆಲ್ಲಾ ಇಂಥ ಘಟನೆಗಳು ಮರೆತೇ ಹೋಗಿ ಈ ವ್ಯಕ್ತಿಗಳು ಮತ್ತೆ ನಾಯಕತ್ವದ ಸ್ಥಾನಗಳನ್ನು ಆಕ್ರಮಿಸಿರುವ ಉದಾಹರಣೆಗಳೂ ನಮ್ಮ ಮುಂದಿವೆ.

ಇದಕ್ಕೆ ಮೂಲ ಕಾರಣವೆಂದರೆ ಯಾವುದೇ ರಾಜಕೀಯ ಗುಂಪು ಕೂಡ ಇಂಥ ನಿಯಮಬಾಹಿರವಾದ ಚಟುವಟಿಕೆಗಳಲ್ಲಿ ತೊಡಗಿರುವ ಜನರಿಂದ ಸಂಪೂರ್ಣವಾಗಿ ಮುಕ್ತವಾಗಿಲ್ಲ ಎನ್ನುವುದು.

ರಾಜಕೀಯ ಚದುರಂಗದಾಟದಲ್ಲಿ `ನೈತಿಕತೆ~ಯನ್ನೂ ಒಂದು ದಾಳವನ್ನಾಗಿ ಉಪಯೋಗಿಸಿಕೊಂಡು ಮತ್ತೊಂದು ಪಕ್ಷಕ್ಕೆ ನೀತಿ ಬೋಧನೆ ಮಾಡುವ ಹಕ್ಕು ಯಾವ ರಾಜಕೀಯ ಪಕ್ಷಕ್ಕೂ ಇಲ್ಲ. ಈ ಹಕ್ಕನ್ನು ಚಲಾಯಿಸಬೇಕಾದವರು ಜನರು. ಆದರೆ ಎಲ್ಲಿಯವರೆಗೂ ಜನದನಿ ದುರ್ಬಲವಾಗಿರುತ್ತದೆಯೋ ಅಲ್ಲಿಯವರೆಗೂ ಇಂಥ ದುಷ್ಟಶಕ್ತಿಗಳು ನಮ್ಮನ್ನೂ, ನಮ್ಮ ಸ್ವಾಭಿಮಾನವನ್ನೂ ತಮ್ಮ ಅಧಿಕಾರ ಲಾಲಸೆಗೆ ಒತ್ತೆಯಿಡುತ್ತಲೇ ಇರುತ್ತವೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT