ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

...ಯಾರು ಹೇಗೆ ಗೆಲ್ಲುತ್ತಾರೆ ಎಂಬುದು ಮುಖ್ಯ

Last Updated 28 ಮೇ 2016, 19:30 IST
ಅಕ್ಷರ ಗಾತ್ರ

ಮತ್ತೆ ರಾಜ್ಯಸಭೆ ಚುನಾವಣೆ ಬಂದಿದೆ. ಅದರ ಜೊತೆಗೆ ಮತ್ತೆ ವಿವಾದವೂ ಹುಟ್ಟಿಕೊಂಡಿದೆ. ಎರಡರಲ್ಲಿಯೂ ಹೊಸದೇನೂ ಇಲ್ಲ. ಎರಡು ವರ್ಷಕ್ಕೆ ಒಮ್ಮೆ ರಾಜ್ಯಸಭೆಯಲ್ಲಿ ಖಾಲಿಯಾಗುವ ಸ್ಥಾನಗಳಿಗೆ ಚುನಾವಣೆ ನಡೆಯುವುದು ಸಂವಿಧಾನಬದ್ಧವಾದ ಸಂಗತಿ.

ಆಯಾ ಪಕ್ಷಗಳು ತಮ್ಮ ಬಲಾಬಲ ನೋಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತವೆ. ಅಭ್ಯರ್ಥಿಗಳು ಆಯಾ ರಾಜ್ಯದವರೇ ಆಗಿರಬೇಕು ಎಂದೇನೂ ಇಲ್ಲ. ಹೈಕಮಾಂಡ್‌ ಸಮ್ಮತಿಸಿದರೆ ಬಿಜೆಪಿಯ ವೆಂಕಯ್ಯ ನಾಯ್ಡು ಅವರು ಕರ್ನಾಟಕದಿಂದ ನಾಲ್ಕನೇ ಬಾರಿ ಕಣಕ್ಕೆ ಇಳಿಯಲಿದ್ದಾರೆ.

ಒಬ್ಬ ಅಭ್ಯರ್ಥಿಯನ್ನು ಸುಲಭವಾಗಿ ಗೆಲ್ಲಿಸಲು ಬೇಕಾಗುವುದಕ್ಕಿಂತ ಹೆಚ್ಚು ಮತಗಳು ಬಿಜೆಪಿ ಬಳಿ ಇವೆ. ಹೊರರಾಜ್ಯದವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗುವುದು ಇದೇ ಮೊದಲೇನೂ ಅಲ್ಲ.

1988ರಲ್ಲಿ ಪ್ರಸಿದ್ಧ ಕ್ರಿಮಿನಲ್‌ ವಕೀಲ ರಾಮ್‌ ಜೇಠ್ಮಲಾನಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರ ಪರವಾಗಿ ಜೇಠ್ಮಲಾನಿ ಎಲ್ಲ ಪ್ರಕರಣಗಳಲ್ಲಿ ವಾದ ಮಾಡುತ್ತಿದ್ದರು.

ಮುಖ್ಯಮಂತ್ರಿಯಾಗಿ ಹೆಗಡೆಯವರ ಒಂದನೇ ಅವಧಿ ಒಳ್ಳೆಯ ಆಡಳಿತಕ್ಕೆ ಎಷ್ಟು ಹೆಸರು ಮಾಡಿತ್ತೋ ಎರಡನೇ ಅವಧಿ ಹಗರಣಗಳಿಂದ ಅಷ್ಟೇ ಕುಖ್ಯಾತವಾಯಿತು. ಹೆಗಡೆಯವರು ತಮ್ಮ ವಿರುದ್ಧ ಏನಾದರೂ ಗುರುತರ ಆರೋಪ ಬಂದರೆ ವಿಚಾರಣೆಗೆ ತಕ್ಷಣ ಒಂದು ನ್ಯಾಯಾಂಗ ಆಯೋಗ ರಚನೆ ಮಾಡುತ್ತಿದ್ದರು. ಜೇಠ್ಮಲಾನಿಯವರು ಹೆಗಡೆ ಪರವಾಗಿ ವಾದ ಮಂಡಿಸುತ್ತಿದ್ದರು.

ಎ.ಕೆ.ಸುಬ್ಬಯ್ಯ ಮತ್ತು ರವಿವರ್ಮಕುಮಾರ್‌ ಅವರು ಜೇಠ್ಮಲಾನಿ ಅವರ ಎದುರು ನಿಂತು ವಾದ ಮಂಡಿಸುತ್ತಿದ್ದರು. ಹೆಗಡೆಯವರು ಜೇಠ್ಮಲಾನಿ ಅವರಿಗೆ ಶುಲ್ಕದ ಬದಲು ರಾಜ್ಯಸಭೆ ಸೀಟನ್ನು ಕೊಟ್ಟರೋ ಹೇಗೋ ಎಂಬುದು ತಿಳಿಯದು. ಆದರೆ, ಇತಿಹಾಸ ಮತ್ತೆ ಮರುಕಳಿಸಿದೆ.

ಈಗ ನಡೆಯುತ್ತಿರುವ ರಾಜ್ಯಸಭೆ ಚುನಾವಣೆಯಲ್ಲಿ ಜೇಠ್ಮಲಾನಿಯವರು ಬಿಹಾರದಿಂದ ಆರ್‌.ಜೆ.ಡಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಮೇವು ಹಗರಣದಲ್ಲಿ ಅವರು ಆರ್‌.ಜೆ.ಡಿ ಮುಖ್ಯಸ್ಥ ಲಾಲುಪ್ರಸಾದ್‌ ಪರವಾಗಿ ವಾದ ಮಂಡಿಸಿದ್ದರು!

ಹೆಗಡೆಯವರು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರಿಗೂ ಮತ್ತು ಅವರ ಸಂಪುಟದಲ್ಲಿ ನೀರಾವರಿ ಸಚಿವರಾಗಿದ್ದ ಎಚ್‌.ಡಿ.ದೇವೇಗೌಡರಿಗೂ ಅಷ್ಟಕಷ್ಟೇ. ದೇವೇಗೌಡರ ಆಪ್ತ ವೈ.ಎಸ್.ವಿ.ದತ್ತ, ಹೆಗಡೆಯವರ ವಿರುದ್ಧ ಒಂದಾದ ನಂತರ ಒಂದು ಹಗರಣಗಳನ್ನು ಬಯಲು ಮಾಡುತ್ತಿದ್ದರು.

ಕರ್ನಾಟಕದಿಂದ ಜೇಠ್ಮಲಾನಿಯವರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದಾಗ ದೇವೇಗೌಡರು  ಪ್ರಬಲವಾಗಿ ವಿರೋಧಿಸಿದ್ದರು. ಇತಿಹಾಸ ಮತ್ತೆ ಮರುಕಳಿಸಿತು: ತಮಿಳುನಾಡಿನ ಕುದುರೆ ಮಾಲೀಕ ಎಂ.ಎ.ಎಂ.ರಾಮಸ್ವಾಮಿಯವರನ್ನು 2006ರಲ್ಲಿ ದೇವೇಗೌಡರು ಕರ್ನಾಟಕದಿಂದಲೇ ರಾಜ್ಯಸಭೆಗೆ ಕಳುಹಿಸಿಕೊಟ್ಟರು. ರಾಮಸ್ವಾಮಿಯವರು ಜೆ.ಡಿ (ಎಸ್‌)ನ  ಚುನಾವಣಾ ಖರ್ಚಿಗೆ ಹಣ ಕೊಟ್ಟಿದ್ದರು ಎಂದು ಅಸೂಯಾಪರರು ಮಾತನಾಡಿಕೊಂಡರು.

1988ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿ ಹೋದ ಜೇಠ್ಮಲಾನಿಯವರೇನು ಕೃಷ್ಣಾ, ಕಾವೇರಿ ವಿವಾದ ಬಂದಾಗಲೆಲ್ಲ ಕರ್ನಾಟಕದ ಪರವಾಗಿ ಮಾತನಾಡಲಿಲ್ಲ. ರಾಮಸ್ವಾಮಿಯವರೂ ಅಷ್ಟೇ.  ಅವರೂ ತಮ್ಮ ಕುದುರೆ ವ್ಯವಹಾರ ನೋಡಿಕೊಂಡು ಸುಮ್ಮನೇ ಇದ್ದರು.

ರಾಂ ಜೇಠ್ಮಲಾನಿಯವರನ್ನು ಅವರು ಕರ್ನಾಟಕದವರು ಅಲ್ಲ ಎಂಬ ಕಾರಣಕ್ಕೆ ವಿರೋಧಿಸಿದ್ದ ದೇವೇಗೌಡರು ಕರ್ನಾಟಕ ವಿಕಾಸ ವೇದಿಕೆ ಎಂಬ ಸಂಘಟನೆಯನ್ನೂ ಹುಟ್ಟು ಹಾಕಿದ್ದರು. ಅದಕ್ಕೆ ಕವಿ, ನಿವೃತ್ತ ಐ.ಎ.ಎಸ್‌ ಅಧಿಕಾರಿ ಸಿದ್ದಯ್ಯ ಪುರಾಣಿಕರು ಅಧ್ಯಕ್ಷರೂ ಆಗಿದ್ದರು. ಆದರೂ ಎಂ.ಎ.ಎಂ ರಾಮಸ್ವಾಮಿಯವರಿಗೆ ಗೌಡರು ಮಣೆ ಹಾಕಿದರು.

ಕಾಲ ಗತಿಸಿದ ಹಾಗೆ ನಾವು ಆಡಿದ ಮಾತುಗಳು ನಮಗೇ ಮರೆತು ಹೋಗುತ್ತವೆ. ಮತ್ತು ನಾವು ಆಡಿದ ಮಾತುಗಳಿಗೆ ನಾವು ವಿರುದ್ಧವಾಗಿ ನಡೆದುಕೊಳ್ಳುತ್ತೇವೆ. ಇದು ವ್ಯಕ್ತಿಗಳ ವಿಚಾರದಲ್ಲಿಯೂ ಆಗುತ್ತದೆ. ಸಂಸ್ಥೆಗಳ ವಿಚಾರದಲ್ಲಿಯೂ ಆಗುತ್ತದೆ.

ರಾಜ್ಯಸಭೆ ಹುಟ್ಟಿದ ಉದ್ದೇಶವೇ ಈಗ ಮರೆತು ಹೋಗಿದೆ. ‘ಲೋಕಸಭೆಯು ಒಕ್ಕೂಟ ವ್ಯವಸ್ಥೆಯ ಆಧಾರ ಸ್ತಂಭ ಎನಿಸಿದ ರಾಜ್ಯಗಳ ಹಿತವನ್ನು ಕಾಪಾಡಲಿಕ್ಕಿಲ್ಲ’ ಎಂಬ ಕಾರಣಕ್ಕಾಗಿಯೇ ಸಂವಿಧಾನ ನಿರ್ಮಾತೃಗಳು ರಾಜ್ಯಸಭೆಯನ್ನು ಅಸ್ತಿತ್ವಕ್ಕೆ ತಂದರು.

ಅದಕ್ಕೆ ‘ಕೌನ್ಸಿಲ್‌ ಆಫ್ ಸ್ಟೇಟ್ಸ್’ ಎಂದು ಹೆಸರೂ ಇಟ್ಟರು. ಆಯಾ ರಾಜ್ಯಗಳ ಜನಸಂಖ್ಯೆ ಆಧರಿಸಿ ಇಂತಿಷ್ಟು ಸದಸ್ಯರು ಆಯಾ ರಾಜ್ಯಗಳ ವಿಧಾನಸಭೆಯಿಂದ ಆಯ್ಕೆಯಾಗಬೇಕು ಎಂಬ ಮಾನದಂಡವನ್ನೂ ನಿಗದಿ ಮಾಡಿದರು. ಅಂದರೆ ಲೋಕಸಭೆಯಲ್ಲಿ ಆಗದ ಕೆಲಸವನ್ನು ರಾಜ್ಯಸಭೆ ಮಾಡಲಿ ಎಂದು ಅವರು ಆಶಿಸಿದರು.

2003ರಲ್ಲಿ ಆಗಿನ ಎನ್‌ಡಿಎ ಸರ್ಕಾರ ಜನತಾ ಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವವರೆಗೆ ಆಯಾ ರಾಜ್ಯಗಳ ಮೂಲ ನಿವಾಸಿಗಳೇ ರಾಜ್ಯಸಭೆಗೆ ಆಯ್ಕೆಯಾಗುತ್ತಿದ್ದರು. ಹಾಗೆಂದು ಬೇರೆ ರಾಜ್ಯದವರು ಇನ್ನೊಂದು ರಾಜ್ಯಕ್ಕೆ ಬಂದು ಚುನಾವಣೆಗೆ ನಿಲ್ಲುತ್ತಿರಲಿಲ್ಲ ಎಂದು ಅಲ್ಲ.

ಜೇಠ್ಮಲಾನಿಯವರು 1988ರಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧಿಸಿದ್ದಾಗ ಬೆಂಗಳೂರಿನ ಇಂಗ್ಲಿಷ್‌ ವೃತ್ತಪತ್ರಿಕೆಯೊಂದರ ಅತಿಥಿಗೃಹದ  ವಿಳಾಸವನ್ನು ತಮ್ಮ ಮನೆ ವಿಳಾಸ ಎಂದು ಕೊಟ್ಟಿದ್ದರು! ಮನಮೋಹನಸಿಂಗ್‌ ಅವರು ಅಸ್ಸಾಂನಿಂದಲೂ, ಪ್ರಣವ್‌ ಮುಖರ್ಜಿಯವರು ಗುಜರಾತಿನಿಂದಲೂ ರಾಜ್ಯಸಭೆಗೆ ಆಯ್ಕೆಯಾದುದು ನಮಗೆ ಗೊತ್ತು.

ನಮ್ಮವರೇ ಆದ ಎಸ್‌.ಆರ್‌.ಬೊಮ್ಮಾಯಿಯವರು ಒಡಿಶಾ (ಆಗಿನ ಒರಿಸ್ಸಾ) ರಾಜ್ಯದಿಂದ  ರಾಜ್ಯಸಭೆಗೆ ಆಯ್ಕೆಯಾಗಿ ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರ ಸಂಪುಟದಲ್ಲಿ ಮಾನವ ಸಂಪನ್ಮೂಲ ಸಚಿವರಾಗಿದ್ದರು. ಹಾಗೆ ನೋಡಿದರೆ ಕರ್ನಾಟಕದವರೊಬ್ಬರು ಹೊರ ರಾಜ್ಯಕ್ಕೆ ಹೋಗಿ ರಾಜ್ಯಸಭೆಗೆ ಆಯ್ಕೆಯಾದುದು ಅದೇ ಮೊದಲು. ಮತ್ತು ಕೊನೆ.

ಬೊಮ್ಮಾಯಿಯವರು ಮತ್ತು ದೇವೇಗೌಡರು ಆಗಿನ ಒರಿಸ್ಸಾ ಮುಖ್ಯಮಂತ್ರಿ ಬಿಜು ಪಟ್ನಾಯಕ್‌ ಅವರ ಆಪ್ತ ಗೆಳೆಯರು ಎಂಬ ಕಾರಣಕ್ಕಾಗಿ ಇದು ಸಾಧ್ಯವಾಗಿರಬಹುದು. ಮುಂದೆ ಯಾರೂ ಕರ್ನಾಟಕದ ನಾಯಕರುಗಳಿಗೆ ಹೀಗೆ ಮಣೆ ಹಾಕಲಿಲ್ಲ.

ನಮ್ಮ ರಾಜ್ಯದ ನಾಯಕರು ಅಷ್ಟು ಪ್ರಭಾವಿಗಳಾಗಿ ಬೆಳೆಯಲಿಲ್ಲ ಎಂದೇ ಅದರ ಅರ್ಥ. ಆದರೆ, ನಮ್ಮ ರಾಜ್ಯದ ಮೂವರು ನಾಯಕರು ಹೊರ ರಾಜ್ಯಗಳಿಗೆ ಹೋಗಿ ಅಲ್ಲಿನ ಲೋಕಸಭಾ ಕ್ಷೇತ್ರದಲ್ಲಿ ನಿಂತು ಗೆದ್ದಿದ್ದರು. ಎಲ್ಲರಿಗೂ ನೆನಪು ಇರುವ ಹಾಗೆ ಒಬ್ಬರು ಜಾರ್ಜ್‌ ಫರ್ನಾಂಡಿಸ್‌. ಇನ್ನೊಬ್ಬರು ಜಗನ್ನಾಥರಾವ್‌ ಜೋಶಿ.

ಜನಸಂಘದ ಹಿರಿಯ ಮುಖಂಡರಾಗಿದ್ದ ಜೋಶಿಯವರು 1977ರಲ್ಲಿ ಧಾರವಾಡ (ಉತ್ತರ) ಕ್ಷೇತ್ರದಲ್ಲಿ ನಿಂತು ಸರೋಜಿನಿ ಮಹಿಷಿ ಅವರ ವಿರುದ್ಧ ಸೋತಿದ್ದರು. ನಂತರ ಅವರು ಮಧ್ಯಪ್ರದೇಶದಿಂದ ಲೋಕಸಭೆಗೆ ಆಯ್ಕೆಯಾದರು. ಪ್ರಸಿದ್ಧ ಸಂಸದೀಯ ಪಟು ಎಚ್‌.ವಿ.ಕಾಮತ್‌ ಅವರೂ ಮಧ್ಯಪ್ರದೇಶದಿಂದಲೇ ಲೋಕಸಭೆಗೆ ಆಯ್ಕೆಯಾಗಿದ್ದರು.

ಜಾರ್ಜ್‌ ಅವರು ಮಹಾರಾಷ್ಟ್ರ ಮತ್ತು ಬಿಹಾರ ರಾಜ್ಯಗಳಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 1962ರಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಉತ್ತರ ಪ್ರದೇಶದ ಸಹರಾನ್‌ಪುರದ ಅಜಿತ ಪ್ರಸಾದ್‌ ಜೈನ್‌ ಅವರು ಲೋಕಸಭೆಗೆ ಆಯ್ಕೆಯಾಗಿದ್ದರು.

ಅವರು ನೆಹರೂ ಅವರ ಅತ್ಯಂತ ನಿಕಟವರ್ತಿಯಾಗಿದ್ದರು. 1978ರಲ್ಲಿ ಇಂದಿರಾ ಗಾಂಧಿಯವರು ಚಿಕ್ಕಮಗಳೂರಿನಿಂದ ಗೆದ್ದು ರಾಜಕೀಯ ಮರುಜೀವ ಪಡೆದುದು ಒಂದು ಐತಿಹಾಸಿಕ ಘಟನೆ. 1980ರಲ್ಲಿ ಕೇರಳದ ಸಿ.ಎಂ.ಸ್ಟೀಫನ್‌ ಅವರು ಆಗಿನ ಗುಲಬರ್ಗ ಲೋಕಸಭಾ ಕ್ಷೇತ್ರದಿಂದ ಬಹಳ ಸುಲಭವಾಗಿ ಗೆದ್ದಿದ್ದರು.

ದೆಹಲಿಯಲ್ಲಿ ಅಟಲ್‌ ಬಿಹಾರಿ ವಾಜಪೇಯಿಯವರ ವಿರುದ್ಧ ಸೋತಿದ್ದ ಸ್ಟೀಫನ್‌ ಅವರಿಗಾಗಿ ಕ್ಷೇತ್ರ ತೆರವು ಮಾಡಬೇಕು ಎಂದು ಇಂದಿರಾ ಗಾಂಧಿಯವರು ಧರ್ಮಸಿಂಗ್‌ ಅವರಿಗೆ ಸೂಚಿಸಿದ್ದರು. ಜಗನ್ನಾಥರಾವ್‌ ಜೋಶಿಯವರು ಹಿಂದಿಯಲ್ಲಿ ಅದ್ಭುತವಾಗಿ ಮಾತನಾಡಬಲ್ಲ ವಾಗ್ಮಿಯಾಗಿದ್ದರು. ಜಾರ್ಜ್‌ಗೆ ಕೇವಲ ಹಿಂದಿ ಭಾಷೆಯ ಬಲ ಮಾತ್ರವಲ್ಲ ಹೋರಾಟದ ಬಲವೂ ಇತ್ತು. ಅವರು ಇನ್ನೊಂದು ರಾಜ್ಯದಲ್ಲಿ ಹೋಗಿ ನಿಂತು ಗೆಲ್ಲಬಹುದಾಗಿತ್ತು.

ಅಜಿತ್‌ ಪ್ರಸಾದ್ ಜೈನರಿಗೆ, ಸ್ಟೀಫನ್‌ ಅವರಿಗೆ ಕನ್ನಡದ ಗಂಧ ಗಾಳಿಯೂ ಇರಲಿಲ್ಲ. ಆಗಿನ ಕಾಂಗ್ರೆಸ್‌ ಗಾಳಿಯಲ್ಲಿ ಯಾರು ನಿಂತರೂ ಗೆಲ್ಲುತ್ತಿದ್ದರು. ಜೈನ್‌ ಅವರು ನೆಹರೂ ಹೆಸರಿನಿಂದ ಗೆದ್ದರೆ ಸ್ಟೀಫನ್‌ ಅವರು ಇಂದಿರಾ ಗಾಳಿಯಲ್ಲಿ ಗೆದ್ದಿದ್ದರು. ಅಂದರೆ, ಅದು ಲೋಕಸಭೆ ಚುನಾವಣೆಯೇ ಇರಲಿ, ರಾಜ್ಯಸಭೆ ಚುನಾವಣೆಯೇ ಇರಲಿ ಕೊಡುಕೊಳ್ಳುವಿಕೆ ಇತ್ತು ಎಂದೇ ಅರ್ಥ.

ಲೋಕಸಭೆಗೆ ಆಯ್ಕೆಯಾಗಿ ಹೋಗುವುದಕ್ಕೂ ರಾಜ್ಯಸಭೆಗೆ ಆಯ್ಕೆಯಾಗಿ ಹೋಗುವುದಕ್ಕೂ ಅಜಗಜಾಂತರ. ಲೋಕಸಭಾ ಕ್ಷೇತ್ರದಲ್ಲಿ ಹತ್ತಾರು ಲಕ್ಷ ಮತದಾರರಿಗೆ ಮನವಿ ಮಾಡಿಕೊಳ್ಳಬೇಕು. ಅವರು ಮತ ಹಾಕುವಂತೆ  ಮಾಡಬೇಕು. ಪ್ರಚಾರಕ್ಕೆ, ಆಮಿಷಕ್ಕೆ ಕೋಟಿಗಟ್ಟಲೆ ಹಣ ಖರ್ಚು ಮಾಡಬೇಕು. ರಾಜ್ಯಸಭೆಗೆ ಹಾಗೆ ಅಲ್ಲ. ಒಬ್ಬ ಅಭ್ಯರ್ಥಿ ಗೆಲ್ಲಲು ನಿರ್ದಿಷ್ಟ ಸಂಖ್ಯೆಯ ಮತಗಳು ಬೇಕು.

ನೀವು ಆ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆಯಾದರೆ ಸಾಕು. ನಿಮ್ಮ ಗೆಲುವು ಖಚಿತ. ಏನೋ ಖುಷಿಗೆ ಒಂದು ಔತಣ ಕೂಟ ಏರ್ಪಡಿಸಿದರೆ ಆಯಿತು. ನೀವು ಆಸ್ಕರ್‌ ಫರ್ನಾಂಡಿಸ್‌ ಹಾಗೆ ಹೈಕಮಾಂಡಿಗೆ ಬಹಳ ಬೇಕಾದ ವ್ಯಕ್ತಿಯಾಗಿದ್ದರೆ ಅದನ್ನೂ ಮಾಡಬೇಕಿಲ್ಲ. ರಾಜ್ಯದ ಪರವಾಗಿ ಜೇಠ್ಮಲಾನಿ, ರಾಮಸ್ವಾಮಿ ಹಾಗೂ ವೆಂಕಯ್ಯ ನಾಯ್ಡು ದನಿ ಎತ್ತಿಲ್ಲ ಎಂದು ಹೇಳುವುದು ಸುಲಭ.

ರಾಜ್ಯದವರೇ ಆಗಿದ್ದುಕೊಂಡು ಇಲ್ಲಿಂದ ಆಯ್ಕೆಯಾಗಿ ಹೋದ ಎಷ್ಟು ಮಂದಿ ಪ್ರತಿನಿಧಿಗಳು ರಾಜ್ಯಸಭೆಯಲ್ಲಿ ಬಾಯಿ ಬಿಟ್ಟಿದ್ದಾರೆ? ರಾಜ್ಯದ ಹಿತಾಸಕ್ತಿ ಪರವಾಗಿ ಅವರು ಮಾತನಾಡಿದ್ದಾರೆ? ಅವರ ಮೌನಕ್ಕೆ ಬೇಕಾದಷ್ಟು ದಾಖಲೆಗಳು ಸಿಗುತ್ತವೆ.

ರಾಜ್ಯಸಭೆಯ ಸ್ಥಾನ ದೆಹಲಿಯಲ್ಲಿ ವಿರಾಮವಾಗಿ ಕಾಲ ಕಳೆಯಲು ಒಂದು ಒಳ್ಳೆಯ ಅವಕಾಶವನ್ನು ಮಾತ್ರ ಕಲ್ಪಿಸುತ್ತದೆ. ವಿರಾಮದ ಜೊತೆಗೆ ಇನ್ನೂ ಏನೇನೋ ಅನುಕೂಲಗಳೂ, ಸವಲತ್ತುಗಳೂ ಇರಬಹುದು. ಇಲ್ಲದೇ ಇದ್ದರೆ ಉದ್ಯಮಿಗಳು ರಾಜ್ಯಸಭೆ ಟಿಕೆಟ್ಟಿಗೆ ಸಾಲುಗಟ್ಟಿ ನಿಲ್ಲುತ್ತಿರಲಿಲ್ಲ.

ಕೋಟಿಗಟ್ಟಲೆ ಹಣ ವ್ಯಯ ಮಾಡುತ್ತಿರಲಿಲ್ಲ. ಈಗ ದೇಶಾಂತರ ಹೋಗಿರುವ ವಿಜಯ್‌ ಮಲ್ಯ ಅವರು 2002ರಲ್ಲಿ ಮೂರನೇ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಸ್ಪರ್ಧಿಸಿ ಬಿಜೆಪಿಯಲ್ಲಿ ಅಡ್ಡ ಮತದಾನಕ್ಕೆ ಕಾರಣವಾದರು ಮಾತ್ರವಲ್ಲದೇ ಕೇವಲ ನಾಲ್ಕು ಮತಗಳು ಕೊರತೆಯಿದ್ದ ಅಧಿಕೃತ ಅಭ್ಯರ್ಥಿಯ ಸೋಲಿಗೂ ಕಾರಣರಾದರು. ಅದುವರೆಗೆ ರಾಜ್ಯಸಭೆ ಚುನಾವಣೆಯಲ್ಲಿ ರಹಸ್ಯವಾಗಿದ್ದ ಹಣದ ಪಾತ್ರ ಆಗ ಬಹಿರಂಗವಾಗಿ ಬಯಲಿಗೆ ಬಂತು.

ಬಿಜೆಪಿಯು ತನ್ನ ಆರು ಶಾಸಕರನ್ನು ‘ಹಣದ ಆಮಿಷಕ್ಕಾಗಿ ಅಡ್ಡ ಮತದಾನ ಮಾಡಿದ’ ಆರೋಪದ ಮೇಲೆ ಉಚ್ಚಾಟನೆ ಮಾಡಿತು. ಮಲ್ಯ ಅವರು ನಂತರ ಸಂದರ್ಶನವೊಂದರಲ್ಲಿ, ಅನೇಕ ಶಾಸಕರು ‘ಪ್ರತಿಫಲ’ವೆಂದು ತಮಗೆ ಮತ ಹಾಕಿದರು ಎಂದು ಹೇಳಿದರು!

ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತ ಎನ್ನಬೇಕೇ ಅಥವಾ ವ್ಯಂಗ್ಯ ಎನ್ನಬೇಕೇ ಗೊತ್ತಿಲ್ಲ: ವಿವಿಧ ಪಕ್ಷಗಳು ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸುವಷ್ಟು ಕನಿಷ್ಠ ಮತಗಳು ತಮ್ಮ ಬಳಿ ಇಲ್ಲ ಎಂದಾಗಲೂ ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತವೆ. ಮುಂದಿನ ತಿಂಗಳು ನಡೆಯುವ ಈ ಸಾರಿಯ ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲಲು ಒಬ್ಬ ಅಭ್ಯರ್ಥಿಗೆ ಕನಿಷ್ಠ 45 ಮತಗಳು ಬೇಕು. ಕಾಂಗ್ರೆಸ್‌ ಪಕ್ಷ ಇಬ್ಬರನ್ನು ಅನಾಯಾಸವಾಗಿ ಗೆಲ್ಲಿಸಿಕೊಳ್ಳಬಹುದು.

ಮೂರನೇ ಅಭ್ಯರ್ಥಿ ಗೆಲ್ಲಲು 13 ಮತಗಳ ಕೊರತೆ ಬೀಳುತ್ತದೆ. ಆ ಮತಗಳು ಅನ್ಯ ಪಕ್ಷದ ಶಾಸಕರ ಅಡ್ಡ ಮತದಾನದಿಂದಲೇ ಬರಬೇಕು. ಅಥವಾ ಪಕ್ಷೇತರರು ಮತ ಹಾಕಬೇಕು. ಅವರು ಕೇವಲ ಕಾಂಗ್ರೆಸ್ಸಿನ ಸಿದ್ಧಾಂತ, ತತ್ವಾದರ್ಶಗಳನ್ನು ನೋಡಿ ಹೆಚ್ಚುವರಿ ಅಭ್ಯರ್ಥಿಗೆ ಮತ ಹಾಕುತ್ತಾರೆ ಎಂದು ಭಾವಿಸುವುದು ತೀರಾ ಅಮಾಯಕವಾಗುತ್ತದೆ.

ಏಕೆಂದರೆ ಹೆಚ್ಚುವರಿ ಅಭ್ಯರ್ಥಿ ಶ್ರೀಮಂತ ಕುಳವೇ ಆಗಿರುತ್ತಾರೆ. ಈಗ ಕಾಂಗ್ರೆಸ್‌ ವತಿಯಿಂದ ಕೇಳಿ ಬರುತ್ತಿರುವ ಮೂರನೇ ಹೆಸರು ಕೂಡ ಅಂಥದೇ ಆಗಿರುವುದು ತೀರಾ ಆಕಸ್ಮಿಕವಾಗಿರಲಾರದು. ಎಂ.ಎಸ್‌.ರಾಮಯ್ಯ ಶಿಕ್ಷಣ ಸಂಸ್ಥೆಗಳ ಒಡೆಯ ಎಂ.ಆರ್.ಸೀತಾರಾಂ ಅವರು ವಿಧಾನ ಪರಿಷತ್ತಿಗೆ ಸ್ಪರ್ಧಿಸಿದ್ದಾಗ ಕಾಂಗ್ರೆಸ್‌ ಪಕ್ಷದ ಅಧಿಕೃತ ಅಭ್ಯರ್ಥಿ ಇಕ್ಬಾಲ್‌ ಅಹ್ಮದ್‌ ಸರಡಗಿ ಸೋತು ಹೋದುದು ಕೂಡ ಈಚಿನ ಇತಿಹಾಸ.

ಸೀತಾರಾಂ ಅವರು ಸರಡಗಿ ಅವರಿಗಿಂತ ಶ್ರೀಮಂತರಾಗಿರುವುದು  ಕೂಡ ಕೇವಲ ಆಕಸ್ಮಿಕವಾಗಿರಲಾರದು. ಹಾಗೂ ಅವರು ಶ್ರೀಮಂತರಾಗಿರುವುದು ಚುನಾವಣೆ ಮೇಲೆ ಯಾವ ಪ್ರಭಾವವೂ ಬೀರಲಿಲ್ಲ ಎಂದು ಭಾವಿಸುವುದು ಕೂಡ ಮತ್ತೂ ಅಮಾಯಕ ಎನಿಸುತ್ತದೆ. ಬಹುಶಃ ಅದೇ ಕಾರಣಕ್ಕಾಗಿ ರಾಜ್ಯಸಭೆ ಚುನಾವಣೆ ಅವಿರೋಧವಾಗಿ ನಡೆದರೆ ತಮಗೆ ನಷ್ಟ ಎಂದು ಶಾಸಕರು ಭಾವಿಸುವಂಥ ಕಾಲ ಈಗಿನದು.

ರಾಜಕೀಯವಾಗಿ ತಮ್ಮ ಎದುರಾಳಿಗಳಿಗೆ ಪಾಠ ಕಲಿಸಲು ಇದು ಒಂದು ಅವಕಾಶವಾಗಿಯೂ ಈ ಸಾರಿ ಪರಿವರ್ತನೆಯಾಗುವಂತೆ ಕಾಣುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು, ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಜೆ.ಡಿ (ಎಸ್‌) ನೂರು ಸಾರಿ ಯೋಚನೆ ಮಾಡುವಂಥ ಸನ್ನಿವೇಶವನ್ನು ಸೃಷ್ಟಿ ಮಾಡುತ್ತಿದ್ದಾರೆ.

ಅತ್ಯಂತ ಚಾಣಾಕ್ಷ ರಾಜಕಾರಣಿಯಾದ, ಮುಂದೆ ಎಂದೋ ಬರುವುದನ್ನು ಈಗಲೇ ಊಹಿಸಿ ರಾಜಕೀಯದ ಚದುರಂಗ ಆಟವಾಡುವ ದೇವೇಗೌಡರು, ಸುಧಾ ಮೂರ್ತಿಯವರ ಹೆಸರನ್ನು ಬಹಳ ಹಿಂದೆಯೇ ತೇಲಿ ಬಿಟ್ಟುದು ಈ ಕಾರಣಕ್ಕಾಗಿ.

ಅವರನ್ನು ತಮ್ಮ ಪಕ್ಷದ ಅಭ್ಯರ್ಥಿಯಾಗಿ ಬಿಂಬಿಸಿದರೆ ಸಿದ್ದರಾಮಯ್ಯನವರು ಮೂರನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾರರು ಎಂದು ಅವರು ಅಂದುಕೊಂಡಿದ್ದರೋ ಏನೋ? ಜೊತೆಗೆ ತಾವು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮತ್ತು ನಗರ ವಿರೋಧಿ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳುವುದೂ ಅವರ ಉದ್ದೇಶವಾಗಿದ್ದಿರಬಹುದು.

ಆದರೆ, ಅವರ ಆಸೆ ಕೈಗೂಡಲಿಲ್ಲ. ಸುಧಾ ಮೂರ್ತಿ ಕಣಕ್ಕೆ ಇಳಿಯಲು ನಿರಾಕರಿಸಿದರು. ಈಗ ದೇವೇಗೌಡರ ಪಕ್ಷದ ಐವರು ಶಾಸಕರು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕುವ ಮಾತು ಆಡುತ್ತಿದ್ದಾರೆ. ಜೆ.ಡಿ (ಎಸ್‌) ಕೂಡ ಹಣವಂತರೊಬ್ಬರನ್ನು ತಮ್ಮ ಅಭ್ಯರ್ಥಿಯಾಗಿಸಲು ಚಿಂತಿಸುತ್ತಿರುವುದು ಕೂಡ ರಾಜ್ಯಸಭೆ ಚುನಾವಣೆಯಲ್ಲಿ ಹಣದ ಪಾತ್ರದ ಕಡೆಗೇ ಬೆರಳು ತೋರಿಸುತ್ತಿರಬಹುದು.

ಪ್ರಜಾಪ್ರಭುತ್ವದ ಸದಾಶಯಗಳಲ್ಲಿ ಮತ್ತು ಮೌಲ್ಯಗಳಲ್ಲಿ ನಂಬಿಕೆ ಇರುವವರು ಆತಂಕ ಪಡಬೇಕಾದುದು ಇಂಥ ಕಾರಣಗಳಿಗಾಗಿ. ಯಾವ ರಾಜ್ಯದವರು ಎಲ್ಲಿ ನಿಂತು ಗೆಲ್ಲುತ್ತಿದ್ದಾರೆ ಎಂಬ ಭಾವನಾತ್ಮಕ ಕಾರಣಕ್ಕಾಗಿ ಅಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT