ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವುದು ಹಿತ ಈ ಮೂರರೊಳಗೆ?

Last Updated 10 ಜುಲೈ 2013, 19:59 IST
ಅಕ್ಷರ ಗಾತ್ರ

ಗುಟೆನ್‌ಬರ್ಗ್ ಅವರ ಅಚ್ಚಿನ ಮೊಳೆಗಳ ಮುದ್ರಕದಿಂದ ಹಿಡಿದು ಇಂದಿನ ಅತ್ಯಾಧುನಿಕ ಲೇಸರ್ ಮುದ್ರಕಗಳ ತನಕ ಮುದ್ರಣ ತಂತ್ರಜ್ಞಾನ ಹಲವು ಮಜಲುಗಳನ್ನು ದಾಟಿ ಬೆಳೆದು ಬಂದಿದೆ. ಅವುಗಳ ಇತಿಹಾಸ ನಮಗಿಲ್ಲಿ ಬೇಕಿಲ್ಲ. ಈಗ ಬಳಕೆಯಲ್ಲಿರುವ ಮೂರು ಪ್ರಮುಖ ನಮೂನೆಯ ಮುದ್ರಕಗಳ (ಪ್ರಿಂಟರ್) ಕಡೆಗೊಂದು ವಿಮರ್ಶಾತ್ಮಕ ನೋಟ ಬೀರೋಣ.

ಡಾಟ್‌ಮ್ಯಾಟ್ರಿಕ್ಸ್ ಮುದ್ರಕ
ಇವು ಇಂಪಾಕ್ಟ್ ಪ್ರಿಂಟಿಂಗ್ ವಿಧಾನದಲ್ಲಿ ಬರುತ್ತವೆ. ಮುದ್ರಿಸಬೇಕಾದ ಕಾಗದದ ಮೇಲೆ ಶಾಯಿಯಲ್ಲಿ ನೆನೆದ ಬಟ್ಟೆಯ ಪಟ್ಟಿ (ರಿಬ್ಬನ್) ಇರುತ್ತದೆ. ಅದರ ಹಿಂದೆ ಪ್ರಿಂಟ್‌ಹೆಡ್ ಎಂದು ಕರೆಯಲ್ಪಡುವ ಸಾಧನ ಇರುತ್ತದೆ. ಈ ಪ್ರಿಂಟ್‌ಹೆಡ್‌ನಕ್ಕು ನೀಟ ಸಾಲುಗಳಲ್ಲಿ ಕೆಲವು ಪಿನ್‌ಗಳಿರುತ್ತವೆ. ಈ ಪಿನ್ ರಿಬ್ಬನ್ ಮೇಲೆ ಒತ್ತುತ್ತದೆ. ಆಗ ರಿಬ್ಬನ್ ಕಾಗದದ ಮೇಲೆ ರಿಬ್ಬನ್‌ನಲ್ಲಿರುವ ಶಾಯಿಯನ್ನು ಮೂಡಿಸುತ್ತದೆ.

ಇದು ಒಂದು ಚಿಕ್ಕ ಬಿಂದು ಆಯಿತು. ಪ್ರಿಂಟ್‌ಹೆಡ್‌ನಲ್ಲಿರುವ ಪಿನ್‌ಗಳಲ್ಲಿ ಕಾಗದದಲ್ಲಿ ಮೂಡಬೇಕಾದ ಅಕ್ಷರ ಅಥವಾ ಚಿತ್ರದ ಒಂದು ಚಿಕ್ಕ ಭಾಗ ಮೂಡಬೇಕಾದರೆ ಅದಕ್ಕೆ ಅಗತ್ಯ ಪಿನ್‌ಗಳು ಹೀಗೆ ಒತ್ತಿ ಚುಕ್ಕಿಗಳ ಸಾಲನ್ನು ಮೂಡಿಸುತ್ತದೆ. ನಂತರ ಪ್ರಿಂಟ್‌ಹೆಡ್ ಒಂದು ಪಿನ್‌ನಷ್ಟು ಬಲಕ್ಕೆ ಸಾಗುತ್ತದೆ. ಅಲ್ಲಿ ಅಗತ್ಯ ಚುಕ್ಕಿಗಳನ್ನು ಮೂಡಿಸುತ್ತದೆ. ಒಂದು ಸಾಲು ಪೂರ್ತಿಯಾದಾಗ ಕಾಗದ ಸ್ವಲ್ಪ ಮುಂದಕ್ಕೆ ಸಾಗುತ್ತದೆ ಮತ್ತು ಮುಂದಿನ ಸಾಲಿನಲ್ಲಿ ಇದೇ ಪ್ರಕ್ರಿಯೆ ನಡೆಯುತ್ತದೆ. ಹೀಗೆ ಕಾಗದದಲ್ಲಿ ಪಠ್ಯ ಅಥವಾ ಚಿತ್ರ ಮೂಡುತ್ತದೆ.

ಮುದ್ರಣದ ಗುಣಮಟ್ಟವನ್ನು ನಿರ್ಧರಿಸುವುದು ಒಂದು ಚದರ ಇಂಚಿನಲ್ಲಿ ಎಷ್ಟು ಚುಕ್ಕಿಗಳು (DPI = dots per inch) ಮುದ್ರಿತವಾಗುತ್ತಿವೆ ಅರ್ಥಾತ್ ಚುಕ್ಕಿ ಎಷ್ಟು ಚಿಕ್ಕದಾಗಿದೆ ಎಂಬುದನ್ನು ಅವಲಂಬಿಸಿದೆ. ಚುಕ್ಕಿ ಚಿಕ್ಕದಾದಷ್ಟೂ ಅಂದರೆ ಡಿಪಿಐ ಜಾಸ್ತಿ ಆದಷ್ಟೂ ಮುದ್ರಣದ ಗುಣಮಟ್ಟ ಹೆಚ್ಚಾಗುತ್ತದೆ.

ಎಪ್ಪತ್ತರ ದಶಕದಲ್ಲಿ ಖಾಸಾಗಣಕಗಳು ಮಾರುಕಟ್ಟೆಯನ್ನು ಪ್ರವೇಶಿಸಿದಾಗ ಈ ನಮೂನೆಯ ಮುದ್ರಕಗಳ ಆವಿಷ್ಕಾರವೂ ಆಯಿತು. ಭಾರತದಲ್ಲೂ ಸುಮೂರು 80, 90 ರ ದಶಕದ ಕಾಲದಲ್ಲಿ ಈ ನಮೂನೆಯ ಮುದ್ರಕಗಳೇ ಹೆಚ್ಚು ಬಳಕೆಯಲ್ಲಿದ್ದುದು. ಈಗಲೂ ಬಿಲ್, ರಶೀದಿ, ಮತ್ತು ಹೆಚ್ಚು ಗುಣಮಟ್ಟದ ಮುದ್ರಣ ಅಗತ್ಯ ಇಲ್ಲದ ಸಂದರ್ಭಗಳಲ್ಲಿ ಇವುಗಳ ಬಳಕೆ ಆಗುತ್ತಿದೆ. 

ಡಾಟ್‌ಮ್ಯಾಟ್ರಿಕ್ಸ್ ಮುದ್ರಕಗಳ ಮುದ್ರಣದ ಗುಣಮಟ್ಟ ಅತಿ ಕಡಿಮೆ. ಅವುಗಳ ಬಳಕೆಯ ಖರ್ಚೂ ಅತಿ ಕಡಿಮೆ. ಅತಿಯಾಗಿ ಶಬ್ದ ಮಾಡುತ್ತವೆ ಎಂಬುದು ಅವುಗಳ ಇನ್ನೊಂದು ಬಾಧಕ. ಡಾಟ್‌ಮ್ಯಾಟ್ರಿಕ್ಸ್ ಮುದ್ರಕಗಳು ಸಾಮಾನ್ಯವಾಗಿ ಒಂದೇ ಬಣ್ಣ, ಅರ್ಥಾತ್ ಕಪ್ಪು ಬಣ್ಣದಲ್ಲಿ ಮುದ್ರಿಸುತ್ತವೆ. ಇವುಗಳ ಮುದ್ರಣದ ವೇಗ ಅತಿ ಕಡಿಮೆ.

ಇಂಕ್‌ಜೆಟ್ ಮುದ್ರಕ
ಇಂಕ್‌ಜೆಟ್ ಮುದ್ರಕಗಳು ಶಾಯಿಯ ಅತಿ ಚಿಕ್ಕ ಬಿಂದುಗಳನ್ನು ಕಾಗದದ ಮೇಲೆ ಸಿಂಪಡಿಸಿ ಅಕ್ಷರ ಮತ್ತು ಚಿತ್ರಗಳನ್ನು ಮೂಡಿಸುತ್ತವೆ.  ಇವುಗಳಲ್ಲಿ ಪ್ರಮುಖವಾಗಿ ಎರಡು ಬಗೆ. ಕೇವಲ ಕಪ್ಪು ಬಣ್ಣದಲ್ಲಿ ಮುದ್ರಿಸುವಂತವು ಮತ್ತು ಬಣ್ಣದಲ್ಲಿ ಮುದ್ರಿಸುವಂತವು. ಕಪ್ಪು ಬಣ್ಣದಲ್ಲಿ ಮುದ್ರಿಸುವ ಮುದ್ರಕದಲ್ಲಿ ಕಪ್ಪು ಬಣ್ಣದ ಶಾಯಿಯ ಆಕರ ಇರುತ್ತದೆ. ಪ್ರಿಂಟ್‌ಹೆಡ್ ಎಡದಿಂದ ಬಲಕ್ಕೆ ಸಾಗುತ್ತದೆ. ಈ ಪ್ರಿಂಟ್‌ಹೆಡ್‌ನಲ್ಲಿ ನಿಜವಾಗಿ ಇರುವುದು ಒಂದು ಉತ್ತಮ ಗುಣಮಟ್ಟದ ಮತ್ತು ಅತಿ ಸೂಕ್ಷ್ಮ ತೂತು ಇರುವ ನಾಝ್‌ಲ್ (nozzle). ಶಾಯಿಯ ಕುಡಿಕೆಯಿಂದ ಚಿಕ್ಕ ಪೈಪ್ ಮೂಲಕ ಶಾಯಿ ಹರಿದು ಬಂದು ಈ ನಾಝ್‌ಲ್ ಮೂಲಕ ಕಾಗದದ ಮೇಲೆ ಸಿಂಪಡನೆಯಾಗುತ್ತದೆ.

ನಾಝ್‌ಲ್ ಚಿಕ್ಕದಾದಷ್ಟು ಮೂಡುವ ಚುಕ್ಕಿ ಚಿಕ್ಕದಾಗುತ್ತದೆ ಮತ್ತು ಅದರಿಂದ ಮುದ್ರಣದ ಗುಣಮಟ್ಟ ಹೆಚ್ಚಾಗುತ್ತದೆ. ಪ್ರಿಂಟ್‌ಹೆಡ್ ಎಡದಿಂದ ಬಲಕ್ಕೆ ಸಾಗುತ್ತ ಕಾಗದದ ಮೇಲೆ ಶಾಯಿ ಸಿಂಪಡಿಸುತ್ತ ಪಠ್ಯ ಮತ್ತು ಚಿತ್ರಗಳನ್ನು ಮೂಡಿಸುತ್ತದೆ. ಬಣ್ಣದ ಮುದ್ರಕದಲ್ಲಿ ಕಪ್ಪು, ಕೆಂಪು, ನೀಲಿ, ಹಸಿರು ಬಣ್ಣದ ಶಾಯಿಯ ಕುಡಿಕೆಗಳಿರುತ್ತವೆ. ಈ ಬಣ್ಣಗಳನ್ನು ಬೇಕಾದ ಅನುಪಾತದಲ್ಲಿ ಸೇರಿಸಿದರೆ ಯಾವ ಬಣ್ಣದ ಚಿತ್ರವನ್ನೂ ಪಡೆಯಬಹುದು. ಬಣ್ಣದ ಇಂಕ್‌ಜೆಟ್ ಮುದ್ರಕಗಳನ್ನು ಫೋಟೊಗಳ ಮುದ್ರಣದಲ್ಲಿ ಜಾಸ್ತಿ ಬಳಸುತ್ತಾರೆ. ಫೋಟೊ ಮುದ್ರಕಗಳೆಂದೇ ಪ್ರತ್ಯೇಕವಾಗಿ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಆದರೆ ಅವುಗಳನ್ನು ನಡೆಸುವ ಖರ್ಚು ತುಂಬ ಜಾಸ್ತಿ. 

ಇಂಕ್‌ಜೆಟ್ ಮುದ್ರಕಗಳು ಡಾಟ್‌ಮ್ಯಾಟ್ರಿಕ್ಸ್ ಮುದ್ರಕಗಳಿಗಿಂತ ಎಷ್ಟೋ ಪಾಲು ಉತ್ತಮ ಮುದ್ರಣ ಮಾಡುತ್ತವೆ. ಇವುಗಳನ್ನು ನಡೆಸುವ ಖರ್ಚೂ ಕಡಿಮೆ. ಒಂದು ಪ್ರತಿಗೆ ಅತಿ ಕಡಿಮೆ ಎಂದರೆ (ಕಾಗದದ ಬೆಲೆಯನ್ನು ಹೊರತುಪಡಿಸಿ) ಕೇವಲ 20 ಪೈಸೆಯಲ್ಲೂ ಮುದ್ರಣ ಸಾಧ್ಯವಿದೆ. ಇವು ಮುದ್ರಿಸುವಾಗ ಶಬ್ದ ಮಾಡುವುದಿಲ್ಲ. ಮುದ್ರಣದ ವೇಗ ಡಾಟ್‌ಮ್ಯಾಟ್ರಿಕ್ಸ್ ಮುದ್ರಕಕ್ಕಿಂತ ಜಾಸ್ತಿ. ಆದುದರಿಂದ ಸಾಮಾನ್ಯವಾಗಿ ಮನೆಗಳಲ್ಲಿ ಇವುಗಳ ಬಳಕೆ ಜಾಸ್ತಿ.

ಇವು ದ್ರವರೂಪದ ಶಾಯಿಯನ್ನು ಬಳಸುವುದರಿಂದ ಮುದ್ರಿಸಿ ಕಾಗದ ಹೊರ ಬರುತ್ತಿರುವಾಗ ಕಾಗದ ಮುಟ್ಟುವಾಗ ಎಚ್ಚರಿಕೆ ಬೇಕು. ಈಗಷ್ಟೆ ಮುದ್ರಿತವಾದ ಪಠ್ಯ ಅಥವಾ ಚಿತ್ರದ ಮೇಲೆ ಬೆರಳು ಇಟ್ಟರೆ ಅದು ಕೆಡುವ ಸಂಭವವಿದೆ. ಒಂದು ಎರಡು ನಿಮಿಷದ ನಂತರ ಮಾತ್ರ ಮುಟ್ಟಬಹುದು. ಕೆಲವು ಶಾಯಿಗಳು ನೀರು ತಾಗಿದರೆ ಹರಡುತ್ತವೆ. ಇಂಕ್‌ಜೆಟ್‌ನಲ್ಲಿ ಬಳಸುವ ಕಾಗದದ ಗುಣಮಟ್ಟ ತುಂಬ ಉತ್ತಮವಾಗಿರಬೇಕು. ಅದು ಶಾಯಿ ಹೀರಿಕೊಂಡು ಹರಡುವಂತಹ ಕಡಿಮೆ ಗುಣಮಟ್ಟದ ಕಾಗದ ಆಗಿರಬಾರದು. ಇಂಕ್‌ಜೆಟ್ ಮುದ್ರಣದ ಗುಣಮಟ್ಟ ಲೇಸರ್ ಮುದ್ರಕದ  ಗುಣಮಟ್ಟಕ್ಕಿಂತ ಕಡಿಮೆ.

ಲೇಸರ್ ಮುದ್ರಕ
ಅತ್ಯುತ್ತಮ ಗುಣಮಟ್ಟದ ಮುದ್ರಣವನ್ನು ಲೇಸರ್ ಮುದ್ರಕಗಳಿಂದ ಪಡೆಯಬಹುದು. ಇವುಗಳ ಕೇಂದ್ರಭಾಗದಲ್ಲಿ ಒಂದು ದ್ಯುತಿ ಸಂವೇದಕ (photosensitive) ಡ್ರಮ್ ಇರುತ್ತದೆ. ಈ ಡ್ರಮ್ಮಿನ ಮೇಲೆ ಒಂದು ಲೇಸರ್ ಕಿರಣ ಅತ್ತಿತ್ತ ಹಾದು ಕಾಗದದಲ್ಲಿ ಮೂಡಬೇಕಾದ ಚಿತ್ರ ಅಥವಾ ಅಕ್ಷರಗಳ ಋಣಾತ್ಮಕ ಚಿತ್ರವನ್ನು (negative image) ಮೂಡಿಸುತ್ತದೆ. ಇದರ ಮೇಲೆ ಅತಿ ನಯವಾದ ಹುಡಿ ರೂಪದ ಶಾಯಿಯನ್ನು ಬಿಸಿ ಮಾಡಿ ಆವಿ ಮಾಡಿ ಹಾಯಿಸಲಾಗುತ್ತದೆ. ಎಲ್ಲೆಲ್ಲ ಚಿತ್ರ ಮೂಡಿರುತ್ತದೋ ಅಲ್ಲೆಲ್ಲ ಈ ಶಾಯಿಯ ಕಣಗಳು ಕುಳಿತುಕೊಳ್ಳುತ್ತವೆ.

ನಂತರ ಕಾಗದದ ಮೇಲೆ ಈ ಡ್ರಮ್ಮನ್ನು ತಿರುಗಿಸಲಾಗುತ್ತದೆ. ಆಗ ಡ್ರಮ್ಮಿನಲ್ಲಿದ್ದ ಋಣಾತ್ಮಕ ಚಿತ್ರವು ಕಾಗದದಲ್ಲಿ ಧನಾತ್ಮಕ ಚಿತ್ರವಾಗಿ ಮೂಡುತ್ತದೆ. ನಂತರ ಕಾಗದವನ್ನು ಬಿಸಿಯಾದ ಸರಳೊಂದರ ಮೇಲೆ ಹಾಯಿಸಿ ಈ ಶಾಯಿಯ ಕಣಗಳು ಕಾಗದದಲ್ಲಿ ಶಾಶ್ವತವಾಗಿ ಅಂಟಿಕೊಳ್ಳುವಂತೆ ಮಾಡಲಾಗುತ್ತದೆ. ಇದಿಷ್ಟು ಲೇಸರ್ ಮುದ್ರಕದ ಕಾರ್ಯವಿಧಾನದ ಸರಳ ನಿರೂಪಣೆ. ನಿಜವಾದ ವಿವರಣೆ ತುಂಬ ಜಾಸ್ತಿ ಇದೆ ಮತ್ತು ಕ್ಲಿಷ್ಟವಾಗಿದೆ.

ಸಾಮಾನ್ಯವಾಗಿ ಎಲ್ಲರೂ ಬಳಸುವುದು ಕಪ್ಪು ಬಿಳುಪು ಮುದ್ರಣದ ಲೇಸರ್ ಮುದ್ರಕಗಳನ್ನು. ಬಣ್ಣದಲ್ಲಿ ಮುದ್ರಿಸುವ ಲೇಸರ್ ಮುದ್ರಕಗಳೂ ಲಭ್ಯವಿವೆ. ಅವುಗಳು ತುಂಬ ದುಬಾರಿ ಮಾತ್ರವಲ್ಲ ಅವುಗಳನ್ನು ನಡೆಸುವ ಖರ್ಚೂ ಅಧಿಕ. ಆದುದರಿಂದ ಅವುಗಳ ಬಳಕೆ ಕಡಿಮೆ.

ಲೇಸರ್ ಮುದ್ರಕಗಳ ಗುಣಮಟ್ಟ ಅತ್ಯುತ್ತಮ. ಇವು ಮೂಡಿಸುವ ಚುಕ್ಕಿಗಳ ಗಾತ್ರ ಅತಿ ಚಿಕ್ಕದು. ಕಾಗದದಲ್ಲಿ ಇಂಕ್‌ಜೆಟ್ ಮುದ್ರಣದಂತೆ ಹರಡುವುದಿಲ್ಲ. ನೀರು ತಾಗಿದರೆ ಹಾಳಾಗುವುದಿಲ್ಲ. ಅತಿ ವೇಗದಲ್ಲಿ ಮುದ್ರಿಸಬಹುದು. ಪಠ್ಯ ಮಾತ್ರವಲ್ಲ, ಫೋಟೊಗಳನ್ನೂ ಮುದ್ರಿಸಬಹುದು. ದೀರ್ಘಕಾಲ ಬಾಳಿಕೆ ಬರಬೇಕಾದ ಪ್ರಮುಖ ದಾಖಲೆಗಳನ್ನು ಸಾಮಾನ್ಯವಾಗಿ ಲೇಸರ್ ಮುದ್ರಕದಲ್ಲೇ ಮುದ್ರಿಸುವುದು ವಾಡಿಕೆ. ಲೇಸರ್ ಮುದ್ರಕಗಳ ಏಕೈಕ ಬಾಧಕವೆಂದರೆ ಅವುಗಳನ್ನು ನಡೆಸುವ ಖರ್ಚು ಇಂಕ್‌ಜೆಟ್ ಮುದ್ರಕಗಳಿಂದ ಜಾಸ್ತಿ. ಒಂದು ಪ್ರತಿಗೆ ಸುಮಾರು 70 ಪೈಸೆಯಿಂದ ಎರಡು ರೂ. ತನಕವೂ ಖರ್ಚು ಆಗುತ್ತದೆ. 

ಗ್ಯಾಜೆಟ್ ಸಲಹೆ
ದಿನೇಶ್ ಕುಮಾರ್ ಅವರ ಪ್ರಶ್ನೆ
: ನಾನು ಶಿಕ್ಷಕ. ಪಾಠ ಮಾಡುವಾಗ ಬಳಸಲು ಅನುಕೂವಾಗುವಂತಹ ಪ್ರೊಜೆಕ್ಟರ್ ಫೋನ್ ಯಾವುದು?

: ಸದ್ಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಪ್ರೊಜೆಕ್ಟರ್ ಫೋನ್‌ಗಳು ಒಂದು ತರಗತಿಯಲ್ಲಿ ಎಲ್ಲರಿಗೂ ಕಾಣುವಂತೆ ಚಿತ್ರ ಮೂಡಿಸುವಷ್ಟು ಶಕ್ತಿಶಾಲಿಯಾಗಿರುವುದಿಲ್ಲ. ಅವು ಮೂಡಿಸುವ ಚಿತ್ರಗಳು ಚಿಕ್ಕದಾಗಿದ್ದು, ಕಡಿಮೆ ಪ್ರಕಾಶಮಾನವಾಗಿದ್ದು, ಕತ್ತಲ ಕೋಣೆಯಲ್ಲಿ ಒಂದಿಬ್ಬರಿಗೆ ತೋರಿಸಲು ಮಾತ್ರ ಬಳಸಬಹುದಷ್ಟೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT