ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಸ್ಕ: ಶಬ್ದ ಹೂವು, ಅರ್ಥ, ಹಣ್ಣು

Last Updated 28 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

`ಮಡಕೆ ಬೇಕಾಗಿರುವವನು ಕುಂಬಾರನ ಮನೆಗೆ ಹೋಗಿ- ನನಗೆ ಮನೆಯ ಉಪಯೋಗಕ್ಕೆ ಮಡಕೆ ಬೇಕು, ಮಾಡಿಕೊಡು ಅನ್ನುತ್ತಾನೆ. ಆದರೆ ಮಾತಾಡಬೇಕು ಎಂಬ ಆಸೆಯಿರುವ ಮನುಷ್ಯ ವ್ಯಾಕರಣ ಬಲ್ಲವನ ಮನೆಗೆ ಹೋಗಿ- ನಾನು ಮಾತಾಡಬೇಕು, ಪದಗಳನ್ನು ಕಟ್ಟಿಕೊಡು ಎಂದು ಕೇಳುವುದಿಲ್ಲ~ .

ಇದು ಮಹಾಭಾಷ್ಯದಲ್ಲಿ ಬರುವ ಮಾತು. ಸಿದ್ಧಾಂತದ ಪುಸ್ತಕವೊಂದರಲ್ಲಿ ಬರುವ ಈ ಮಾತು ಬಹಳ ಮುಖ್ಯವಾದ ತಿಳಿವಳಿಕೆಯನ್ನು ಕೊಡುತ್ತಿದೆ. ಬದುಕು ಮೊದಲು, ಸಿದ್ಧಾಂತ ಆಮೇಲೆ; ಭಾಷೆ, ಮಾತು ಮೊದಲು, ವ್ಯಾಕರಣ ಆಮೇಲೆ. ತತ್ವ, ಸಿದ್ಧಾಂತ, ವ್ಯಾಕರಣ ಇವೆಲ್ಲ ನಮ್ಮ ಬದುಕನ್ನು, ನಮ್ಮ ನುಡಿಯನ್ನು ಕುರಿತು ನಾವೇ ಕಟ್ಟಿಕೊಳ್ಳುವ ಸದಾ ಅಪೂರ್ಣವಾಗಿಯೇ ಇರುವ ಮಾತಿನ ಚಿತ್ರಗಳು.

ಸಿದ್ಧಾಂತಗಳು ಸ್ಥಿರವಾದವು, ಅವೇ ಸತ್ಯ ಅಂದುಕೊಂಡು ನಮ್ಮ ಬದುಕನ್ನೂ ಭಾಷೆಯನ್ನೂ ನೋಡಲು ತೊಡಗಿದರೆ ಎಲ್ಲರೂ ತಮಗೆ ಮಾತ್ರ ಮೊಲ ಸಿಕ್ಕಿದೆಯೆಂದೂ, ಅದಕ್ಕೆ ಮೂರೇ ಕೊಂಬುಗಳಿವೆಯೆಂದೂ ಜಗಳದಲ್ಲಿ ತೊಡಗುವುದು ತಪ್ಪುವುದಿಲ್ಲ. ರಾಜಕೀಯ ಕುರಿತು, ಶಿಕ್ಷಣ ಕುರಿತು, ಭಾಷೆ ಕುರಿತು ಇಂಥ ವ್ಯರ್ಥ ಜಗಳದ ಉದಾಹರಣೆ ಕೊಡುವ ಅಗತ್ಯವೇ ಇಲ್ಲ, ನಿಮಗೇ ಗೊತ್ತಿದೆ.

ಆದರೂ ಸಿದ್ಧಾಂತಗಳು ಬೇಕು, ಇಲ್ಲದಿದ್ದರೆ ಏನೂ ಅರ್ಥವೇ ಆಗುವುದಿಲ್ಲ. ಸಿದ್ಧಾಂತಗಳು ಅಚಲ, ಪರಿಪೂರ್ಣವಲ್ಲ ಅನ್ನುವ ತಿಳಿವಳಿಕೆಯೂ ಬೇಕು, ಇಲ್ಲದಿದ್ದರೆ ಜೀವಂತಿಕೆ ಇರುವುದಿಲ್ಲ. ಅರಿತಿರುವುದಕ್ಕಿಂತ ಅರಿಯಬೇಕಾದದ್ದು, ನೋಡಿದ್ದಕ್ಕಿಂತ ನೋಡಬೇಕಾದದ್ದು ಯಾವಾಗಲೂ ಹೆಚ್ಚಾಗಿಯೇ ಇರುತ್ತದೆ ಅನ್ನುವ ವಿನಯ ಬೇಕು. ಯಾವುದೇ ವಿಷಯದ ಬಗ್ಗೆ ನಿಜವಾಗಿ ತಿಳಿಯಲು ಹೊರಟಾಗ ಇಂಥ ವಿನಯ ಹುಟ್ಟಿದರೆ ಅದೇ ದೊಡ್ಡ ಸಾಧನೆ!

ಭಾರತದ ಹಳಬರು ಅರ್ಥದ ಬಗ್ಗೆ ಅಗಾಧವಾಗಿ ವಿಚಾರ ನಡೆಸಿದ್ದಾರೆ, ಸಿದ್ಧಾಂತಗಳನ್ನು ರೂಪಿಸಿದ್ದಾರೆ. ತರ್ಕವನ್ನು ಬಲ್ಲವರು, ತತ್ವವನ್ನು ಹುಡುಕಲು ತೊಡಗಿದವರು ಇಬ್ಬರೂ ಅರ್ಥವೆಂದರೇನು? ಹೇಗೆ ಅರ್ಥವಾಗುತ್ತದೆ? ಇಂಥ ವಿಷಯಗಳ ಬಗ್ಗೆ ನಡೆಸಿರುವ ಚರ್ಚೆಯನ್ನು ಸುಮ್ಮನೆ ಓದಿ ತಕ್ಕ ಮಟ್ಟಿಗೆ ಅರ್ಥಮಾಡಿಕೊಳ್ಳುವುದಕ್ಕೂ ಉಳಿದಿರುವ ನನ್ನ ಬದುಕಿನ ಅವಧಿ ಸಾಕಾಗಲಾರದು! ಈ ವಿಚಾರದ ಬಗ್ಗೆ ಓದುಗರಲ್ಲಿ ಕುತೂಹಲ ಕೆರಳಿ ಅರ್ಥದ ಚಿಂತನೆ ಮಾಡುವವರಿಗೆ ಪ್ರಚೋದನೆ ಒದಗಲೆಂದು ಭಾರತದ ಹಳಬರ ಬಗ್ಗೆ ಓದಿ ನನಗೆ ತಿಳಿದಷ್ಟನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ವ್ಯಾಕರಣದ ವಿದ್ವಾಂಸರು ನಡೆಸಿದ್ದ ಹುಡುಕಾಟ, ರೂಪಿಸಿದ್ದ ಸಿದ್ಧಾಂತಗಳನ್ನು ತರ್ಕದವರೂ ತತ್ವದವರೂ ತಳಹದಿಯಾಗಿ ಮಾಡಿಕೊಂಡರು. ಅರ್ಥ ಅನ್ನುವ ಪದಕ್ಕೆ ಇರುವ ಅರ್ಥಗಳೂ ಹಲವಾರು. ಮುಖ್ಯವಾಗಿ ಶಬ್ದ, ಪದ, ನುಡಿಗಟ್ಟುಗಳ ಮೂಲಕ ವ್ಯಕ್ತವಾಗುವ ಭಾಷೆಯಲ್ಲಿ ಮೈ ತಳೆಯುವ ಅರ್ಥ ಮತ್ತು ಬದುಕಿನ ಅರ್ಥ ಇವು ಹಳಬರಿಗೆ ಮುಖ್ಯವಾಗಿ ಕಂಡಿವೆ.

ಬದುಕಿನ ಅರ್ಥ ಅನ್ನುವಾಗ ವ್ಯಕ್ತಿಯ ಬದುಕಿನ ಗುರಿ ಅನ್ನುವುದು ಅವರ ಮನಸ್ಸಿನಲ್ಲಿ ಇತ್ತು. ಧರ್ಮ, ದುಡ್ಡು, ಆಸೆ, ಬಿಡುಗಡೆ ಇವು ನಾಲ್ಕು ಬದುಕಿನ ಅರ್ಥಗಳೆಂದು ಗುರುತಿಸಿಕೊಂಡರು. ಅದು ನುಡಿಯ ಅರ್ಥವನ್ನು ಕುರಿತ ನಮ್ಮ ಸದ್ಯದ ಪರಿಶೀಲನೆಯ ವ್ಯಾಪ್ತಿಗೆ ಹೊರಗಿನದು. ಆದರೆ ಎರಡೂ ಅರ್ಥಗಳಿಗೆ ಸೂಕ್ಷ್ಮ ಸಂಬಂಧವಿದೆ ಅನ್ನುವುದಷ್ಟು ನಮ್ಮ ಮನಸ್ಸಿನಲ್ಲಿದ್ದರೆ ಸಾಕು. 

ಭಾರತದಲ್ಲೂ ಅಷ್ಟೆ, ಪಶ್ಚಿಮದ ದೇಶಗಳಲ್ಲೂ ಅಷ್ಟೆ, ಅರ್ಥವನ್ನು ಕುರಿತ ಸಿದ್ಧಾಂತಗಳು ಹಲವು ಶತಮಾನಗಳ ವ್ಯಾಖ್ಯಾನ ಪ್ರಯತ್ನದ ಫಲ. ಕ್ರಿಸ್ತಪೂರ್ವದ ಮೊದಲ ಸಾವಿರ ವರ್ಷಗಳ ಅವಧಿಯಲ್ಲಿ ಕೆಲವು ಗದ್ಯ ಕೃತಿಗಳು ನಿರ್ಮಾಣವಾದವು. ಅವನ್ನು ಬ್ರಾಹ್ಮಣಗಳು ಎಂದು ಕರೆಯುತ್ತಾರೆ. ವೇದದ ತಿಳಿವಳಿಕೆಯ ಒಂದೊಂದು ಪಂಥವೂ ಇಂಥ ಬ್ರಾಹ್ಮಣಗಳನ್ನು ರಚಿಸಿಕೊಂಡಿದೆ.
 
ಇವುಗಳ ಉದ್ದೇಶ ಯಾವ ವಿಧಿಯನ್ನು ಯಾಕೆ ಆಚರಿಸಬೇಕು, ಯಾವ ಆಚರಣೆಯ ಸಂದರ್ಭದಲ್ಲಿ ಯಾವ ವೇದದ ಮಂತ್ರವನ್ನು ಯಾಕೆ ಹೇಳಬೇಕು ಅನ್ನುವ ವಿವರಣೆಗಳು ಈ ಬ್ರಾಹ್ಮಣಗಳಲ್ಲಿವೆ. ಮಂತ್ರಗಳ ಸಾರಾಂಶವನ್ನು ಕೊಟ್ಟು, ಮಂತ್ರಕ್ಕೂ ಆ ಮಂತ್ರಕ್ಕೆ ಸಂಬಂಧಪಟ್ಟ ದೇವತೆಗೂ ಇರುವ ಸಂಬಂಧವನ್ನು ವಿವರಿಸುವುದೂ ಇದೆ.
 
ಬ್ರಾಹ್ಮಣಗಳಲ್ಲಿ ಕಂಡು ಬರುವುದು ಅರ್ಥದ ವಿವರಣೆ, ಅರ್ಥದ ವ್ಯಾಖ್ಯಾನ; ಅದು ಬಹಳಷ್ಟು ಸಾರಿ ಕಂಡ ಅರ್ಥ, ಕಲ್ಪಿತ ಅರ್ಥ, ವ್ಯಾಖ್ಯಾನಕಾರರಿಗೆ ಇಷ್ಟವಾದ ಅರ್ಥ ಎಂದು ಆಧುನಿಕ ವಿದ್ವಾಂಸರು ಬ್ರಾಹ್ಮಣಗಳ ಅರ್ಥ ಚಿಂತನೆಯ ಮಿತಿಯನ್ನು ಗುರುತಿಸುತ್ತಾರೆ. 

ಋಗ್ವೇದದ ಒಂದು ಭಾಗವನ್ನು ಆಧಾರವಾಗಿಟ್ಟುಕೊಂಡು ಅಲ್ಲಿನ ಶಬ್ದಕೋಶವನ್ನು ವ್ಯವಸ್ಥಿತವಾಗಿ ವಿಶ್ಲೇಷಣೆ ಮಾಡಿದವನು ಯಾಸ್ಕ. ಕ್ರಿಪೂ ಐದನೆಯ ಶತಮಾನದವನು. `ನಿರುಕ್ತ~ ಅನ್ನುವುದು ಅವನ ಕೃತಿಯ ಹೆಸರು.

`ಪದವೆಂಬುದು ಹೂವು, ಅರ್ಥವು ಅದರಿಂದ ಮೂಡಿದ ಹಣ್ಣು~ ಅನ್ನುತ್ತಾನೆ ಯಾಸ್ಕ. ಪದ ಮೊದಲು, ಅರ್ಥ ಆಮೇಲೆ; ಪದದಿಂದ ಅರ್ಥ ಹೇಗೆ ರೂಪುತಳೆಯಿತು, ಪದಕ್ಕೂ ಅರ್ಥಕ್ಕೂ ಸಂಬಂಧವೇನು ಅನ್ನುವ ಅನ್ವೇಷಣೆ ಅವನ ಆಸಕ್ತಿ. ಅರ್ಥ ಹೇಗೆ ರೂಪುಗೊಂಡಿತು ಅನ್ನುವ ವಿವರಣೆಯನ್ನು ನಿಷ್ಪತ್ತಿ ಅನ್ನುತ್ತಾರೆ.

ಅವನ ಕೃತಿಯ ಮೊದಲ ಭಾಗವೆಲ್ಲ ಪದಗಳ ಹುಟ್ಟನ್ನ ಕುರಿತದ್ದು. ಉದಾಹರಣೆಗೆ, ರಾತ್ರಿ ಅನ್ನುವ ಅರ್ಥದ ಇಪ್ಪತ್ತ ಮೂರು ಪದಗಳನ್ನು ಪಟ್ಟಿಮಾಡಿದ್ದಾನೆ. ಒಂದಕ್ಕಿಂತ ಹೆಚ್ಚು ಅರ್ಥವಿರುವ ಪದಗಳನ್ನು ಪಟ್ಟಿಮಾಡಿದ್ದಾನೆ. ಅಂಥ ಸಂದರ್ಭಗಳಲ್ಲಿ ಒಂದೊಂದು ಅರ್ಥವೂ ಹೇಗೆ ಹುಟ್ಟಿರಬಹುದೆಂಬ ವ್ಯಾಖ್ಯಾನವೂ ಇದೆ.

ಯಾಸ್ಕನು ಪದಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸುತ್ತಾನೆ. ಹೆಸರುಪದಗಳು ಅಥವ `ನಾಮ~; ಕೆಲಸಪದಗಳು ಅಥವ ಕ್ರಿಯಾಪದಗಳು ಮೊದಲನೆಯ ಗುಂಪಿನವು; ಇವನ್ನು ಯಾಸ್ಕ ಆಖ್ಯಾತ ಎಂದು ಕರೆದಿದ್ದಾನೆ; ಕ್ರಿಯಾಪದದ ಮೊದಲಲ್ಲಿ ಸೇರುವ ಶಬ್ದಗಳನ್ನು ಉಪಸರ್ಗ ಎಂದು ಕರೆದಿದ್ದಾನೆ; ಸ್ವರೂಪದಲ್ಲಿ ಬದಲಾವಣೆ ಕಾಣದ, ಸ್ವತಃ ಅರ್ಥವಿರದ ಆದರೆ ಅರ್ಥನಿರ್ಮಾಣಕ್ಕೆ ಅಗತ್ಯವಾದ ಶಬ್ದ ತುಣುಕುಗಳನ್ನು ನಿಪಾತ ಅಂದಿದ್ದಾನೆ ಯಾಸ್ಕ. ಇವು ವ್ಯಾಕರಣದ ಯಾವ ವರ್ಗೀಕರಣಕ್ಕೂ ಸೇರುವುದಿಲ್ಲ, ಹೇಗೆ ಹುಟ್ಟಿಕೊಂಡವು ಅನ್ನುವುದನ್ನೂ ವಿವರಿಸಲು ಆಗುವುದಿಲ್ಲ. ಸಂಸ್ಕೃತದ `ಚ~ ಇಂಗ್ಲಿಷಿನ ಎ, ಆನ್, ದಿ ಇಂಥ ಆರ್ಟಿಕಲ್‌ಗಳು ಇದಕ್ಕೆ ಉದಾಹರಣೆಗಳು.

ಭಾಷೆಯ ಪದಗಳಲ್ಲಿ ಯಾಸ್ಕ ಎರಡು ಬಗೆಗಳನ್ನು ಗುರುತಿಸಿದ. ಅವು ಭಾವಪದಗಳು ಮತ್ತು ಸತ್ವಪದಗಳು. ಭಾವ ಅಂದರೆ ಆಗುವುದು, ಸ್ಥಿತಿ, ಕ್ರಿಯೆ. ಓದುತ್ತಿದ್ದೇನೆ ಅನ್ನುವುದು ಒಂದು ಸ್ಥಿತಿ, ಆದ್ದರಿಂದಲೇ ಕ್ರಿಯೆ. ಅದನ್ನೇ ಯಾಸ್ಕ ಭಾವ ಅನ್ನುತ್ತಾನೆ. ಭಾವ ಮುಖ್ಯವಾಗಿರುವಾಗ ಪದ ಕ್ರಿಯಾಪದವಾಗಿರುತ್ತದೆ.

ಸತ್ವ ಅಂದರೆ ಇರುವುದು, ಅದು ಪ್ರಮುಖವಾಗಿದ್ದಾಗ ಪದ ಹೆಸರುಪದ ಅನ್ನಿಸಿಕೊಳ್ಳುತ್ತದೆ. ಆಧುನಿಕ ಚಿಂತನೆಯಲ್ಲಿ ಇವು ಶಬ್ದದ ವ್ಯಾಕರಣದ ಆಯಾಮದ ಸೂಚನೆಗಳು. ಸತ್ವ ಅನ್ನುವುದು ಹೆಚ್ಚು ಪೂರ್ಣವಾದ ಸ್ಥಿತಿ, ಭಾವ ಹೆಚ್ಚು ಅಪೂರ್ಣವಾದ ಸ್ಥಿತಿ. ಬೆಟ್ಟ ಪೂರ್ಣ, ಆದ್ದರಿಂದಲೇ ಹೆಸರು ಪದ, `ಹತ್ತುವುದು~ ಅಪೂರ್ಣ ಆದ್ದರಿಂದಲೇ ಕ್ರಿಯಾಪದ. ಹೆಸರುಪದಗಳು ಕಣ್ಣಿಗೆ ಕಾಣುವಂಥವೂ ಕಾಣದ ಅಮೂರ್ತಗಳೂ ಆಗಿರಬಹುದು ಅನ್ನುತ್ತಾನೆ ಯಾಸ್ಕ.

ಪದಗಳೇ ಅರ್ಥದ ಮುಖ್ಯ ವಾಹಕಗಳು ಅನ್ನುವುದು ಯಾಸ್ಕನ ನಿಲುವು. ಪದಗಳೆಲ್ಲ ಕಣಗಳ ಹಾಗೆ, ಅರ್ಥವೂ ಹಾಗೆ ಕಣಕಣವಾಗಿ, ಬಿಡಿ ಬಿಡಿಯಾಗಿ ಇರುತ್ತದೆ, ಹಾಗಾಗಿ ಪದ ಹೇಗೆ ಹುಟ್ಟಿತು, ಪದದ ಈ ರೂಪಕ್ಕೆ ಕಾರಣವೇನು ಇತ್ಯಾದಿ ತಿಳಿವಳಿಕೆ ಮುಖ್ಯ ಅನ್ನುವುದು ಯಾಸ್ಕನ ನಿಲುವು.

ಹಾಗೆ ಅರ್ಥವನ್ನು ಬಿಡಿಬಿಡಿಯಾಗಿ ನೋಡುವುದು ಸರಿಯಲ್ಲ, ಇಡಿಯಾಗಿ ಕಾಣಬೇಕು ಅನ್ನುವುದು ಪಾಣಿನಿ ಮತ್ತು ಇತರ ವ್ಯಾಕರಣ ತಜ್ಞರ ಧೋರಣೆ. ಭಾರತದ ನ್ಯಾಯ, ಮೀಮಾಂಸೆ, ಬೌದ್ಧ ಚಿಂತಕರಲ್ಲಿ, ಪಾಶ್ಚಾತ್ಯರಲ್ಲಿ ಅರಿಸ್ಟಾಟಲ್‌ನಿಂದ ಪ್ರಾರಂಭವಾಗಿ ಇಪ್ಪತ್ತನೆಯ ಶತಮಾನದವರೆಗೆ ಅರ್ಥವನ್ನು ಕುರಿತ ಈ ವಾಗ್ವಾದ ನಡೆದೇ ಇದೆ.

ಈಗಿನ ದಿನಗಳಲ್ಲಿ ಸಂಪ್ರದಾಯಶೀಲ ಅರ್ಥಶಾಸ್ತ್ರಿಗಳು ಮತ್ತು ಕಾಗ್ನಿಟಿವ್ ಲಿಂಗ್ವಿಸ್ಟಿಕ್ಸ್‌ನ ಪಂಥದವರ ನಡುವೆ ಈ ಚರ್ಚೆ ಮುಂದುವರೆದಿದೆ. ಯಾಸ್ಕನ ಪ್ರಕಾರ ಪದವೇ ಪ್ರಕೃತಿ, ಅಂದರೆ ಅರ್ಥದ ಮೂಲ, ಅವುಗಳಿಂದಾಗಿ ವಾಕ್ಯ. ವ್ಯಾಕರಣದವರು ಹೇಳುವುದು ವಾಕ್ಯವೇ ಅರ್ಥದ ಮೂಲ ಘಟಕ.

ಮಾತಿನ ಸಂದರ್ಭ ಮುಖ್ಯ. ಅದಕ್ಕೆ ಅನುಗುಣವಾಗಿ ಪದಗಳ ಆಯ್ಕೆ, ಯಾವುದು ಸೂಕ್ತ, ಯಾವುದು ಪರವಾಗಿಲ್ಲ ಅನ್ನುವ ವಿಶ್ಲೇಷಣೆ, ಆಯ್ಕೆ ನಡೆಯುತ್ತದೆ ಅನ್ನುತ್ತಾರೆ. ಕಾಗ್ನಿಟಿವ್ ಲಿಂಗ್ವಿಸ್ಟ್‌ಗಳು ಶಬ್ದದ ಅರ್ಥ ನಿರ್ಧಾರಕವಲ್ಲ, ಪದವೊಂದರ ನಿಜವಾದ ಅರ್ಥವನ್ನು ಅರಿಯಬೇಕಾದರೆ ಅನೇಕ ಇತರ ಸಂಗತಿಗಳ ಅರಿವು ಮುಖ್ಯ ಅನ್ನುತ್ತಾರೆ.

ಪದಗಳ ನಿಷ್ಪತ್ತಿಯನ್ನು ಕುರಿತಂತೆ ಬಹುತೇಕ ಹೆಸರುಪದಗಳು ಕೆಲಸಪದಗಳಿಂದ ಮೂಡಿದವು, ಹುಟ್ಟಿದವು ಅನ್ನುವುದು ಯಾಸ್ಕನ ಸಿದ್ಧಾಂತ. ತೋರಿಕೆ ಅನ್ನುವುದು ಹೆಸರು, ಕ್ರಿಯೆ ಅದಕ್ಕೆ ಮೂಲ, ತೋರಿಕೆಗಿಂತ ವರ್ತನೆ ಮುಖ್ಯ ಅನ್ನುವ ನಿಲುವು ಕೂಡ ತೀವ್ರ ವಾಗ್ವಾದಗಳಿಗೆ ದಾರಿಮಾಡಿಕೊಟ್ಟಿದೆ.

ಒಂದು ಉದಾಹರಣೆ ನೋಡಿ. ಕಾಂಬೋಜ ಅನ್ನುವುದರ ನಿಷ್ಪತ್ತಿಯನ್ನು ಯಾಸ್ಕ ಹೀಗೆ ವಿವರಿಸಿದ್ದಾನೆ. ಕಾಂಬೋಜ- ಕಂಬಳಿ+ಭೋಜ, ಕಂಬಳಿಯನ್ನು ಹೊದ್ದುಕೊಳ್ಳುವವರು, ಕಮನೀಯ+ಭೋಜ, ಕಮನೀಯವಾದ ವಸ್ತುಗಳನ್ನು ಆನಂದಿಸುವವರು ಅನ್ನುತ್ತಾನೆ ಯಾಸ್ಕ. ಇಂಥ ವಿವರಣೆಗಳಿಗೆ ಭಾಷಾಶಾಸ್ತ್ರೀಯವಾದ ನೆಲೆಗಟ್ಟಿಲ್ಲ, ಯಾಸ್ಕ ಎಷ್ಟೋಬಾರಿ ಕಲ್ಪಿತ ಅರ್ಥವಿವರಣೆ ನೀಡುತ್ತಾನೆ ಅನ್ನುತ್ತಾರೆ ಕೆಲವು ವಿದ್ವಾಂಸರು.

ಯಾಸ್ಕನ ಪ್ರಕಾರ ನಿಘಂಟು ಅನ್ನುವುದರಲ್ಲಿ ಐದು ಅಧ್ಯಾಯಗಳು, ಮೊದಲ ಕಾಂಡದಲ್ಲಿ ಮೂರು, ಉಳಿದ ಎರಡು ಕಾಂಡಗಳಲ್ಲಿ ಒಂದೊಂದು ಅಧ್ಯಾಯಗಳು ಇರುತ್ತವೆ. ಉಪಮಾನ, ಸಮಾನಾರ್ಥ ಪದಗಳು, ಮಿಟೋನಿಮ್ ಮತ್ತು ಇತರ ವಿವರಣೆಗಳ ಮೊದಲ ಅಧ್ಯಾಯ ಮುಖ್ಯವಾಗಿ ನಿಸರ್ಗದಲ್ಲಿ ಕಾಣುವ ವಸ್ತುಗಳನ್ನು ಕುರಿತದ್ದು.

ಎರಡನೆಯ ಅಧ್ಯಾಯ ಮನುಷ್ಯನ ಶರೀರ, ಬದುಕು, ಸಂಪತ್ತು, ಭಾವಸ್ಥಿತಿಗಳ ವರ್ಣನೆಯ ಪದಗಳದ್ದು. ಮೂರನೆಯ ಅಧ್ಯಾಯ ಅಮೂರ್ತವಾದ ಗುಣಗಳು ಮತ್ತು ಪರಿಕಲ್ಪನೆಯ ಪದಗಳದ್ದು. ಎರಡನೆಯ ಕಾಂಡ ಒಂದೇ ಥರ ಕಾಣುವ ಭಿನ್ನ ಅರ್ಥಗಳನ್ನು ಹೊಂದಿರುವ ಏಕರೂಪೀ ಪದಗಳನ್ನು, ಕಷ್ಟದ, ಅಸ್ಪಷ್ಟ ಪದಗಳನ್ನು ಕುರಿತದ್ದು. ಮೂರನೆಯ ಕಾಂಡದಲ್ಲಿ ಒಂದು ಅಧ್ಯಾಯ, ದೈವಿಕ ಜೀವಿಗಳ ವರ್ಣನೆಯ ನುಡಿಕಟ್ಟುಗಳ ಸಂಗ್ರಹ.

ಯಾಸ್ಕನ `ನಿರುಕ್ತ~ವು ಸಂಕ್ಷಿಪ್ತ ರೂಪದ ನಿಘಂಟು. ಮೊದಲ ಕಾಂಡದ 278 ಪದಗಳನ್ನು ದೈವತ್ವಕ್ಕೆ ಸಂಬಂಧಿಸಿದ 151 ಹೆಸರುಗಳನ್ನು ವಿವರವಾಗಿ ಪರಿಶೀಲಿಸಿದೆ. ಯಾಸ್ಕನ ನಿಘಂಟು ಮತ್ತು ನಿರುಕ್ತಗಳ ಆಧುನಿಕ ಸಂಪಾದಿತ ಆವೃತ್ತಿ 1920ರಲ್ಲಿ ಪ್ರಕಟಗೊಂಡಿತು. ಲಕ್ಷ್ಮಣ ಸರೂಪ್ ಸಂಪಾದಕರು. ಇದನ್ನು ಈ ತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು

http://www.archive.org/details/nighantuniruktao00yaskuoft
ಯಾಸ್ಕ ಮಾಡಿದ ಕೆಲಸವನ್ನು ವೇದಗಳಿಗೆ ಸಂಬಂಧಿಸಿದ ಒಂದು ಉಪವಿಭಾಗ, ಅಥವ ವೇದಾಂಗ ಎಂದೇ ಗುರುತಿಸುತ್ತಾರೆ. ಪ್ರಾಚೀನ ಭಾರತದ ಶಿಕ್ಷಣ ಕ್ರಮದಲ್ಲಿ ಯಾಸ್ಕನ ಕೃತಿಯ ಅಭ್ಯಾಸ ಕಡ್ಡಾಯವಾಗಿತ್ತು.
 
ಮುಂದೆ ಪಾಣಿನಿ ದಿನ ನಿತ್ಯದ ಸಾಮಾನ್ಯ ನುಡಿ, ಸಾಮಾನ್ಯ ಮಾತು ಮುಖ್ಯ ಅನ್ನುವ ಧೋರಣೆಯನ್ನು ತಾಳಿ ವ್ಯಾಕರಣದ ನಿರ್ಮಾಣಕ್ಕೆ ದಿನ ನಿತ್ಯದ ನುಡಿ ಬಳಕೆಯೇ ಆಧಾರ ಎಂದು ನಂಬಿ ಸಂಸ್ಕೃತವನ್ನು ವಿವರಿಸತೊಡಗಿದಾಗ ಭಾಷಾಶಾಸ್ತ್ರವು ಸ್ವತಂತ್ರವಾದ ಶಾಸ್ತ್ರವಾಗಿ ಬೆಳೆಯಲು ತೊಡಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT