ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧೋನ್ಮಾದ ವಾಚಾಳಿತನ ಎಂಬ ಶತ್ರು

Last Updated 9 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಈ ಲೇಖನ ಎರಡನೆಯ ‘ನಿರ್ದಿಷ್ಟ ದಾಳಿ’ಯ (surgical strike) ಬಗ್ಗೆ. ಏನದು ಎರಡನೆಯ ‘ನಿರ್ದಿಷ್ಟ ದಾಳಿ’?

ಮೊದಲನೆಯ ‘ನಿರ್ದಿಷ್ಟ ದಾಳಿ’ಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅದನ್ನು ಪಾಕಿಸ್ತಾನದ ನೆಲದಲ್ಲಿದ್ದ ಭಯೋತ್ಪಾದಕರ ನೆಲೆಗಳ ಮೇಲೆ ನಡೆಸಿದ್ದಾಗಿ ಭಾರತೀಯ ಸೇನೆ ಘೋಷಿಸಿದೆ. ಇಡೀ ದೇಶ ಈ ದಾಳಿ ಸೃಷ್ಟಿಸಿದ ಗುಂಗಿನಿಂದ ಇನ್ನೂ ಹೊರಬಂದಿಲ್ಲ. ಎರಡನೆಯ ನಿರ್ದಿಷ್ಟ ದಾಳಿ ನಡೆಸಿದ್ದು ಸೇನೆಯಲ್ಲ.

ಅದು ಪಾಕಿಸ್ತಾನದಲ್ಲಿದ್ದ ಯಾರ ವಿರುದ್ಧವೂ ಅಲ್ಲ. ಸೇನೆಯ ಪರವಾಗಿ  ದೇಶದ ಪ್ರಧಾನಮಂತ್ರಿ  ನಡೆಸಿದ ಈ ದಾಳಿಯ ಗುರಿ ಕೆಲ ಭಾರತೀಯರೇ ಆಗಿದ್ದರು. ಈ ದಾಳಿ ಎಷ್ಟು ನಿರ್ದಿಷ್ಟವಾಗಿತ್ತು ಎಂದರೆ ಅದಕ್ಕೆ ಬಳಕೆಯಾದದ್ದು ಕೇವಲ ಐದೇ ಐದು ಪದಗಳು: ‘ನಿರ್ದಿಷ್ಟ ದಾಳಿಯ ಬಗ್ಗೆ ಬಡಾಯಿ ಬೇಡ’.

ಈ ದೇಶದ ಹಿತದೃಷ್ಟಿಯಿಂದ ಇದು ಮೊದಲನೆಯ ‘ನಿರ್ದಿಷ್ಟ ದಾಳಿ’ಗಿಂತಲೂ ಹೆಚ್ಚು ಅವಶ್ಯವಿದ್ದ ದಾಳಿಯಾಗಿತ್ತು.  ಯಾಕೆಂದರೆ ಪಾಕಿಸ್ತಾನಿ ಪ್ರೇರಿತ  ಭಯೋತ್ಪಾದನೆಯಷ್ಟೇ ಅಪಾಯಕಾರಿ ಈ ಭಾರತೀಯ ಸಂಜಾತ ಬಡಾಯಿಯ ಪೀಡೆ ಕೂಡಾ.

ಅಂತರರಾಷ್ಟ್ರೀಯ ಸಂಬಂಧ, ರಕ್ಷಣಾ ವ್ಯವಹಾರ, ಮಿಲಿಟರಿ ಕಾರ್ಯತಂತ್ರ ಇತ್ಯಾದಿಗಳ ಬಗ್ಗೆ ಜನಸಾಮಾನ್ಯರು ಮತ್ತು ಮಾಧ್ಯಮಗಳಿಗೆ ಬಿಡಿ, ಸಂಬಂಧಪಟ್ಟ ಇಲಾಖೆಗಳಲ್ಲಿ ಇರುವ ಎಲ್ಲರಿಗೂ ಎಲ್ಲವೂ ಗೊತ್ತಿರುವುದಿಲ್ಲ. ಆಧುನಿಕ ಆಡಳಿತ ರಂಗದಲ್ಲಿ ಈ ವ್ಯವಹಾರಗಳು ನಡೆಯುವುದೇ ಹಾಗೆ. ಅ೦ತಹ ಒಂದು ಗೋಪ್ಯತೆ ಮತ್ತು ಮಾಹಿತಿಯನ್ನು ಅಳೆದು ಸುರಿದು ನೀಡುವ ಕ್ರಮ ಅನಿವಾರ್ಯವೂ ಹೌದು.

ಆದುದರಿಂದ ಈ ರೀತಿಯ ವಿಚಾರಗಳ ಬಗ್ಗೆ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ಅನುಸರಿಸುವ ಕಾರ್ಯತಂತ್ರದ ಬಗ್ಗೆ ದೇಶದ ಜನ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದು ಅವರು ಎಷ್ಟು  ಪ್ರಬುದ್ಧರು, ಎಷ್ಟು ಸುಸಂಸ್ಕೃತರು ಮತ್ತು ಎಷ್ಟು ನಾಗರಿಕರು ಎನ್ನುವುದನ್ನು ತೋರಿಸುತ್ತದೆ.

ಪಾಕಿಸ್ತಾನ ಎಂಬ ನೆರೆ ರಾಷ್ಟ್ರದ ವಿಚಾರದಲ್ಲಿ ಈಗಿನ ಕೇಂದ್ರ ಸರ್ಕಾರ ಈ ಕಾಲಕ್ಕೆ ಅಗತ್ಯ ಎಂದು ಅದಕ್ಕೆ ಕಂಡ ಒಂದು ವ್ಯೂಹವನ್ನು ರಚಿಸಿ ಅದನ್ನು ಕಾರ್ಯಗತಗೊಳಿಸಿತು. ಅದನ್ನು ಅದು ಬಹಳ ನಾಜೂಕಿನಿಂದಲೂ, ಪ್ರಬುದ್ಧತೆಯಿಂದಲೂ ಮಾಡಿತು ಎಂದೇ ತೋರುತ್ತದೆ. ಏಕೆಂದರೆ ಆರಂಭದಲ್ಲಿ ರಾಜಕೀಯ ನಾಯಕರು ಏನನ್ನೂ ಹೇಳಲಿಲ್ಲ.

ದಾಳಿ ಮಾಡಿದ್ದಾಗಿ ಹೇಳಿದ್ದು ಸೇನೆ. ಅಷ್ಟೇ ಮುಖ್ಯವಾಗಿ ಸೇನೆ ಕೂಡಾ ಪಾಕಿಸ್ತಾನದ ವಿರುದ್ಧ ದಾಳಿ ನಡೆಸಿದ್ದೇವೆ ಎನ್ನಲಿಲ್ಲ. ಪಾಕಿಸ್ತಾನದ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದೆವು ಎಂದೂ ಹೇಳಲಿಲ್ಲ.  ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ನಿರ್ದಿಷ್ಟ ದಾಳಿ ನಡೆಸಿದೆವು ಎಂದಷ್ಟೇ ಬಹಳ ಜಾಣ್ಮೆಯಿಂದ ಹೇಳಿತು.

ಇದು ಯುದ್ಧವಲ್ಲ, ಯುದ್ಧಕ್ಕಾಗಿ ಪಾಕಿಸ್ತಾನವನ್ನು ಕೆಣಕಿಲ್ಲ, ಇದು ಕೇವಲ ಆತ್ಮರಕ್ಷಣೆಗಾಗಿ ಮಾಡಿಕೊಂಡ ಅನಿವಾರ್ಯ ದಾಳಿ ಎಂಬ ಅಭಿಪ್ರಾಯ ರೂಪಿಸುತ್ತಾ ಸಾಗಿದ ಸರ್ಕಾರದ ಮಾತು ಮತ್ತು ಮೌನಗಳ ಮಿಶ್ರಣ ಆರಂಭದಲ್ಲಿ ಎಲ್ಲೂ ಹದ ತಪ್ಪಲಿಲ್ಲ.

ಅಂತರರಾಷ್ಟ್ರೀಯವಾಗಿಯೂ ವಿವಿಧ ದೇಶಗಳ ನಿಲುವು ಭಾರತದ ಪರವಾಗಿಯೇ ರೂಪುಗೊಂಡಿತು. ಪಾಕಿಸ್ತಾನದ ಬೆಂಬಲಕ್ಕೆ ಯಾವತ್ತೂ ಬಹಿರಂಗವಾಗಿಯೇ ನಿಲ್ಲುವ ಚೀನಾ ಕೂಡ ಈ ಮಹತ್ತರ ವಿಷಯದಲ್ಲಿ ಮೌನ ಮುರಿಯಲಿಲ್ಲ. ಹೀಗೆ ಎಲ್ಲವೂ ಸುಸೂತ್ರವಾಗಿದೆ ಎಂದುಕೊಳ್ಳುವಾಗಲೇ ಎಲ್ಲವನ್ನೂ ಮಸಿ ನುಂಗಿತು ಎಂಬಂತೆ ಕಾಣಿಸಿಕೊಂಡದ್ದು ಭಾರತದಲ್ಲಿ ಹೊಸದಾಗಿ ಹುಟ್ಟಿಕೊಂಡಿರುವ ವಾಚಾಳಿ ಸಂಸ್ಕೃತಿ.

ಸುದ್ದಿ ಬಯಲಾದಾಗಿನಿಂದಲೇ ಅಖಾಡಕ್ಕಿಳಿದ ಸಾಮಾಜಿಕ ಜಾಲ ತಾಣಗಳು ಮತ್ತು ಕೆಲ ಟಿವಿ ಚಾನೆಲ್‌ಗಳು ಎಲ್ಲಾ ರೀತಿಯ  ಎಲ್ಲೆಗಳನ್ನೂ ಮೀರಿ ಭಾರತವನ್ನು ಯದ್ವಾತದ್ವಾ ಹೊಗಳುವುದಕ್ಕೆ ಮತ್ತು ಪಾಕಿಸ್ತಾನವನ್ನು ಮನಬಂದಂತೆ ಹಳಿಯುವುದಕ್ಕೆ ಮೊದಲು ಮಾಡಿದವು. ಸಾಮಾಜಿಕ ಜಾಲ ತಾಣಗಳಲ್ಲಿ ಹೀಗೆಲ್ಲಾ ನಡೆಯುವುದು ಸಹಜ.

ಹೇಳಿಕೇಳಿ ಪಾಕಿಸ್ತಾನದ ಬಗ್ಗೆ ಭಾರತದ ಜನಮನದಲ್ಲಿ ಅಪಾರವಾದ ಕ್ರೋಧವಿತ್ತು, ಭಾರತ ಸರ್ಕಾರ ನಿರ್ಣಾಯಕವಾಗಿ ಏನಾದರೂ ಮಾಡುತ್ತಿಲ್ಲ ಎನ್ನುವ ಅಸಹನೆ ಇತ್ತು. ಕೊನೆಗೂ ಸರ್ಕಾರ ಒಂದು ಸ್ಪಷ್ಟ ಕ್ರಮದ ಮೂಲಕ ಪಾಕಿಸ್ತಾನಕ್ಕೊಂದು ಸಂದೇಶ ಕಳಿಸಿದೆ ಎನ್ನುವ ಕಾರಣಕ್ಕಾಗಿ ಸಾಮಾನ್ಯ ಜನ ಉನ್ಮಾದದಿಂದ ವರ್ತಿಸಿದರು ಎನ್ನುವುದರಲ್ಲಿ ದೊಡ್ಡ ವಿಶೇಷವೇನಿಲ್ಲ. ಆ ಅನಾಮಿಕ ತಾಣಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ.

ಆದರೆ ದೇಶದಲ್ಲಿ ಕಾಣಿಸಿಕೊಂಡ ಉನ್ಮಾದದ ಪ್ರತಿಕ್ರಿಯೆ ಇಷ್ಟಕ್ಕೆ ಸೀಮಿತವಾಗಲಿಲ್ಲ. ಯಾರು ಇಂತಹ ಸಂದರ್ಭಗಳಲ್ಲಿ ಸಮಚಿತ್ತದಿಂದಲೂ ಸಮತೋಲನದಿಂದಲೂ ವರ್ತಿಸಬೇಕಿತ್ತೋ ಅವರೆಲ್ಲರೂ ತಾಳತಪ್ಪಿದರು. ಆಳುವ ಪಕ್ಷದವರ ಮಾತು ಹಳಿತಪ್ಪಿತು, ವಿರೋಧ ಪಕ್ಷದವರ ಪ್ರತಿಕ್ರಿಯೆ ಬಾಲಿಶವಾಗತೊಡಗಿತು, ರಾಜಕೀಯೇತರ ನೆಲೆಗಳಲ್ಲಿ ಚರ್ಚೆ ನಡೆಸಿದವರು ತಾ ಮುಂದು ಎಂಬಂತೆ ಸ್ಪರ್ಧಾತ್ಮಕ ರಾಷ್ಟ್ರಪ್ರೇಮದ ವಕ್ತಾರರಾಗತೊಡಗಿದರು.

ಯುದ್ಧದಂತಹ ಗಂಭೀರ ವಿಷಯಗಳಲ್ಲಿ ಭಾರತದ ಪ್ರಬುದ್ಧತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲಿಗೀಡಾಗುವ ಸನ್ನಿವೇಶ ನಿರ್ಮಾಣವಾಗಿಬಿಟ್ಟಿತು. ಆಡುವ ನುಡಿ ಹೇಗಿರಬೇಕು ಎನ್ನುವುದನ್ನು ಪ್ರಪಂಚದ ಎಲ್ಲಾ ನಾಗರಿಕತೆಗಳಿಗಿಂತಲೂ ಹೆಚ್ಚು ತಾತ್ವಿಕವಾಗಿ ಯೋಚಿಸಿದ ಭಾರತದಲ್ಲಿ ಹುಟ್ಟಿಕೊಂಡಿರುವ ಹೊಸ ವಾಚಾಳಿ ಸಂಸ್ಕೃತಿ  ಒಂದು ಮಿಲಿಟರಿ ಕಾರ್ಯಾಚರಣೆಯ ಸುತ್ತ  ಹೇಸಿಗೆ ಹುಟ್ಟಿಸುವ ಮಟ್ಟದಲ್ಲಿ ವ್ಯಕ್ತವಾಗತೊಡಗಿತು.

ವಾಚಾಳಿ ಪ್ರತಿಕ್ರಿಯೆಗಳ ಸರಣಿಗೆ ನಾಂದಿ ಹಾಡಿದ್ದು ಸ್ವತಃ ರಕ್ಷಣಾ ಮಂತ್ರಿಗಳು. ಮೊದಲನೇ ದಿನ ಸೇನೆ ನೀಡಿದ ಸಾರ್ವಜನಿಕ ಹೇಳಿಕೆಯಲ್ಲಿ ಪಾಕಿಸ್ತಾನವನ್ನು ಕೆಣಕುವ, ಪರಿಹಾಸ್ಯ ಮಾಡುವ ಒಂದೇ ಒಂದು ಪದವಿರಲಿಲ್ಲ. ಆ ಮೂಲಕ ತನ್ನ ಘನತೆಯನ್ನು ಉಳಿಸಿಕೊಂಡೇ ಭಾರತೀಯ ಸೇನೆ ಪಾಕಿಸ್ತಾನವನ್ನು ಪ್ರಪಂಚದ ಮುಂದೆ ಸಂಪೂರ್ಣವಾಗಿ ಬೆತ್ತಲಾಗಿಸಿತ್ತು. ಆದರೆ ಮರುದಿನ ರಕ್ಷಣಾ ಮಂತ್ರಿಗಳು ತೂಕ ತಪ್ಪಿ ಆಡಿದರು.

ಪಾಕಿಸ್ತಾನ  ಕೋಮಾದಲ್ಲಿದೆ, ಪಾಕಿಸ್ತಾನ ಅರಿವಳಿಕೆಯ ಗುಂಗಿನಿಂದ ಹೊರಬಂದಿಲ್ಲ ಇತ್ಯಾದಿ ಮಾತುಗಳ ಮೂಲಕ ಪಾಕಿಸ್ತಾನವನ್ನು ಕೆಣಕುವುದಕ್ಕೂ, ಪರಿಹಾಸ್ಯ ಮಾಡುವುದಕ್ಕೂ ತೊಡಗಿದರು. ವಾರ್ತಾ  ಸಚಿವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪಾಕಿಸ್ತಾನ ಚೇಳು ಕುಟುಕಿದ ಕಳ್ಳನಂತೆ ಎಂದರು.

ಪಾಕಿಸ್ತಾನ ಇಂತಹ ಮಾತುಗಳಿಗೆ ಅರ್ಹ ಆಗಿರಬಹುದು. ಅದು ಬೇರೆಯೇ ವಿಚಾರ. ಇಂತಹ ಸಂದರ್ಭಗಳಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಆಡುವ  ಹಗುರ ಮಾತುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಕುಗ್ಗಿಸುತ್ತವೆ ಎನ್ನುವ ಅರಿವು ಹಿರಿಯ ಸಚಿವರಿಗೂ ಇಲ್ಲದೆ ಹೋಯಿತು ಎನ್ನುವುದು ಮುಖ್ಯ. ಸಚಿವ ಪದವಿಯಲ್ಲಿರುವವರೇ ಹೀಗೆಲ್ಲ ಆಡತೊಡಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಉನ್ಮಾದವನ್ನು ಇನ್ನೂ ಹೆಚ್ಚಿಸಿತು.

ಮಾತ್ರವಲ್ಲ, ಆಳುವ ಪಕ್ಷದ ಪುಡಿ ಪುಢಾರಿಗಳೂ ಬಾಯಿಗೆ ಬಂದಂತೆ ಆಡ ತೊಡಗಿದರು. ಅದೃಷ್ಟವಶಾತ್ ಪ್ರಧಾನಿಮಂತ್ರಿ ಮಧ್ಯೆಪ್ರವೇಶಿಸಿ ಜಂಬ ಬೇಡ, ಅಹಂಕಾರ ಬೇಡ, ಹಾದಿ ಬೀದಿಗಳಲ್ಲಿ ನಿಂತು ಬಾಯಿಗೆ ಬಂದಂತೆ ಆಡುವುದು ಬೇಡ ಎಂದರು.

ಆಗಲೇ ತಡವಾಗಿತ್ತು. ಆಗಬಾರದ್ದೆಲ್ಲ ಆಗಿಹೋಗಿತ್ತು. ಈ ಹಂತದಲ್ಲಾದರೂ ಅವರ ಮಧ್ಯಪ್ರವೇಶ ಆಗದೆ ಹೋಗಿದ್ದ ಪಕ್ಷದಲ್ಲಿ ಅಂತರರಾಷ್ಟ್ರೀಯ ಅಭಿಪ್ರಾಯ ಪಾಕಿಸ್ತಾನಪ್ರೇರಿತ ಭಯೋತ್ಪಾದನೆಗಿಂತ ಹೆಚ್ಚಾಗಿ ವಾಚಾಳಿ ಭಾರತದಲ್ಲಿ ಹುಟ್ಟಿಕೊಂಡ ಯುದ್ಧೋನ್ಮಾದತೆಯ ವಿರುದ್ಧ ರೂಪುಗೊಳ್ಳುವ ಅಪಾಯವಿತ್ತು.

ವಿರೋಧ ಪಕ್ಷಗಳು ಸಾಗಿದ್ದೂ  ಇದೇ  ಹಾದಿಯಲ್ಲಿ. ಆರಂಭದಲ್ಲಿ ರಾಜಕೀಯವನ್ನು ಬದಿಗಿಟ್ಟು ಸರ್ಕಾರದ ಬೆನ್ನಿಗೆ ನಿಂತ ಪ್ರತಿಪಕ್ಷಗಳಿಗೆ ತಮ್ಮ ವಾಚಾಳಿ ಪ್ರವೃತ್ತಿಯನ್ನು ಹೆಚ್ಚು ಕಾಲ ಹತ್ತಿಕ್ಕಲು ಸಾಧ್ಯವಾಗಲಿಲ್ಲ.  ಗಡಿಯಲ್ಲಿ ನಡೆದ ವಿದ್ಯಮಾನಗಳು  ಬಿಜೆಪಿಗೆ ರಾಜಕೀಯವಾಗಿ ನೆರವಾಗುತ್ತಿವೆ ಎಂಬುದರ ಅರಿವಾಗುತ್ತಲೇ ವಿರೋಧ ಪಕ್ಷಗಳು ವರಸೆ ಬದಲಿಸಿದವು.

ಅಂತರರಾಷ್ಟ್ರೀಯ ರಾಜಕೀಯ ವಿಚಾರಗಳಲ್ಲಿ ರಾಷ್ಟ್ರೀಯ ರಾಜಕೀಯದಲ್ಲಿ ವರ್ತಿಸುವ ಹಾಗೆ ವರ್ತಿಸುವಂತಿಲ್ಲ ಎ೦ಬ ಮೂಲ ಪಾಠವೇ ವಿರೋಧ  ಪಕ್ಷಗಳಿಗೆ ಮರೆತುಹೋಯಿತು. ಕೆಲ ವಿರೋಧ  ಪಕ್ಷಗಳ ನಾಯಕರು ದಾಳಿಗೆ ಪುರಾವೆ ಒದಗಿಸಿ ಎಂಬ ಬೇಡಿಕೆ ಮುಂದಿಡಲಾರಂಭಿಸಿದರು.

ಪಾಕಿಸ್ತಾನ, ದಾಳಿಯೇ ನಡೆದಿಲ್ಲ ಎನ್ನುತ್ತಿದೆ ಎನ್ನುವ ಕಾರಣಕ್ಕೆ ಸರ್ಕಾರ ಪುರಾವೆ ಒದಗಿಸಬೇಕು ಎಂದರು. ಪಾಕಿಸ್ತಾನಕ್ಕೆ ದಾಳಿಯನ್ನು ನಿರಾಕರಿಸದೆ ಬೇರೆ ಮಾರ್ಗವೇ ಇಲ್ಲ. ದಾಳಿಯನ್ನು ಒಪ್ಪಿಕೊಂಡರೆ ಅದು ತನ್ನ ನೆಲದಲ್ಲಿ ಭಯೋತ್ಪಾದನಾ ನೆಲೆಗಳಿವೆ ಎನ್ನುವುದನ್ನು ಒಪ್ಪಿಕೊಂಡ ಹಾಗೆ. ಆದ ಕಾರಣ ಪಾಕಿಸ್ತಾನ ದಾಳಿಗೆ ಪುರಾವೆ ಕೇಳುತ್ತಿದೆ.

ಇದನ್ನೇ ನೆಪವಾಗಿಸಿಕೊಂಡು ಸರ್ಕಾರ ಪುರಾವೆ ನೀಡಬೇಕು ಎಂದು ಭಾರತದ ವಿರೋಧ ಪಕ್ಷಗಳು ಕೇಳುತ್ತಿರುವುದು ಅವುಗಳಿಗೆ ಅಂತರರಾಷ್ಟ್ರೀಯ ರಾಜಕೀಯ ಮತ್ತು ರಾಜತಂತ್ರದ (diplomacy)  ಪ್ರಾಥಮಿಕ ಪಾಠವೇ ತಿಳಿದಿಲ್ಲ ಎನ್ನುವುದನ್ನು ಪ್ರಪಂಚಕ್ಕೆ ತೋರಿಸಿಕೊಡುತ್ತಿದೆ.

ಪಾಕಿಸ್ತಾನದ ವಿಚಾರದಲ್ಲಿ ಭಾರತ  ಸರ್ಕಾರ ಒಂದು ವ್ಯೂಹ ಹೆಣೆದು ಅದನ್ನು ಪ್ರಯೋಗಿಸಿತು. ವ್ಯೂಹ ಅಂದಮೇಲೆ ಅದೊಂದು ವ್ಯೂಹ. ಇಂತಹ ವ್ಯೂಹ ತಂತ್ರಗಳಲ್ಲಿ ಹೇಳಿದ್ದನ್ನೆಲ್ಲಾ ಮಾಡಿರಬೇಕಿಲ್ಲ, ಮಾಡಿದ್ದನ್ನೆಲ್ಲಾ ಹೇಳಬೇಕಿಲ್ಲ. ಬೇಕಾದಷ್ಟು ಮಾಡುವುದು, ಮಾಡಿದ್ದನ್ನು ಬೇಕಾದ ಹಾಗೆ ಬಣ್ಣಿಸುವುದು  ಇತ್ಯಾದಿಗಳೆಲ್ಲಾ ವ್ಯೂಹದ ಭಾಗವೇ ಆಗಿರುತ್ತವೆ.

ಇವುಗಳನ್ನು ಹೇಗೆ  ಪ್ರಶ್ನಿಸಬೇಕು, ಎಲ್ಲಿ    ಪ್ರಶ್ನಿಸಬೇಕು ಎಂಬ ವಿವೇಚನೆ ಇಲ್ಲದ ವಿರೋಧ ಪಕ್ಷಗಳು ಎತ್ತಬಾರದ ಪ್ರಶ್ನೆಗಳನ್ನು ಎತ್ತಿ ಅಥವಾ ಎತ್ತಬಹುದಾದ ಪ್ರಶ್ನೆಗಳನ್ನು ಎತ್ತಬಾರದ ಸಂದರ್ಭಗಳಲ್ಲಿ ಎತ್ತಿ ಭಾರತದ ಹೊಸ ವಾಚಾಳಿ   ಸಂಸ್ಕೃತಿಗೆ ತಮ್ಮ ಪಾಲಿನ ದೇಣಿಗೆ ನೀಡುತ್ತಿವೆ.

ಒಂದು ವೇಳೆ ಸರ್ಕಾರ ಮಾಡಿದ್ದರಲ್ಲಿ ರಾಷ್ಟ್ರೀಯ ಹಿತಾಸಕ್ತಿಗೆ ಮಾರಕವಾಗುವ ವಿಚಾರಗಳೇನಾದರೂ ಇದ್ದರೆ ಅದನ್ನು ಸಂಸತ್ತಿನಲ್ಲಿ, ಸಂಬಂಧಪಟ್ಟ ಸಂಸತ್ ಸಮಿತಿಗಳಲ್ಲಿ ಎತ್ತುವುದರ ಮೂಲಕ ಜನರಿಗೆ ತಿಳಿಸುವುದು ಪ್ರಬುದ್ಧ ವಿರೋಧ ಪಕ್ಷಗಳು ಮಾಡುವ ಕೆಲಸ.

ಅದು ಬಿಟ್ಟು ಕಾರ್ಯಾಚರಣೆಯಲ್ಲಿ ಭಾಗಿಯಾದ ಸೈನಿಕರು ಹಣೆಯ ಬೆವರೊರೆಸುವುದಕ್ಕೆ ಮುನ್ನವೇ ಸಂಯಮ ತಪ್ಪಿ ಮಾತನಾಡುವುದು ಅಗ್ಗದ ರಾಜಕೀಯ. ವಿರೋಧ ಪಕ್ಷಗಳು ಏನೇ ಹೇಳಿದರೂ ಅದನ್ನು ‘ಇದು ಸೇನೆಗೆ ಮಾಡುವ ಅವಮಾನ’ ಎಂದು ಬಣ್ಣಿಸುವುದರ ಮೂಲಕ ಆಳುವ ಪಕ್ಷವೂ ರಾಜಕೀಯ ಮಾಡುತ್ತಿದೆ. ಭಾರತದ ಮಾನ ಈ   ಮೂಲಕವೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತಿದೆ.

ಇನ್ನು ರಾಜಕೀಯದ ಹೊರಗೆ ನಡೆಯುವ ಚರ್ಚೆಗಳು ‘ನಿರ್ದಿಷ್ಟ ದಾಳಿ’ಯನ್ನು ಇಂದಿನ ಪರಿಸ್ಥಿತಿಯಲ್ಲಿ ತಾಂತ್ರಿಕವಾಗಿ ವಿಶ್ಲೇಷಿಸಿ ಅದರ ಅಲ್ಪಕಾಲೀನ ಮತ್ತು ದೀರ್ಘಕಾಲೀನ  ಪರಿಣಾಮಗಳನ್ನು ಜನರ ಮುಂದೆ ತೆರೆದಿಡಬೇಕು. ಆದರೆ ಇದೂ ಆಗುತ್ತಿಲ್ಲ.

ಬಹುತೇಕ ಚರ್ಚೆಗಳು ಭಾರತವನ್ನು ಸಿಕ್ಕಾಪಟ್ಟೆ ಹೊಗಳುವ ಮತ್ತು ಪಾಕಿಸ್ತಾನದ ಹುಳುಕುಗಳನ್ನು ಮತ್ತೆ ಮತ್ತೆ ಎತ್ತಿತೋರಿಸುವ ಕೆಲಸವನ್ನಷ್ಟೇ ಮಾಡುತ್ತಿವೆ.  ‘ಬಡಾಯಿ ಬೇಡ’ ಎಂದು ಹೇಳಿದ್ದಕ್ಕೆ ಪ್ರಧಾನಿಯವರನ್ನು ಶ್ಲಾಘಿಸಿ ಮೊನ್ನೆ ‘ಎಕನಾಮಿಕ್ಸ್ ಟೈಮ್ಸ್’ ಪತ್ರಿಕೆ ಒಂದು ಸಂಪಾದಕೀಯ ಬರೆಯಿತು.

ಅದರಲ್ಲಿ ಎಲ್ಲರೂ ಯುದ್ಧೋನ್ಮಾದತೆಯ ವಾಚಾಳಿತನಕ್ಕಿಳಿದರೆ ಸರ್ಕಾರ ರಾಷ್ಟ್ರದ ಹಿತಕ್ಕಿಂತ ಹೆಚ್ಚಾಗಿ ಜನಾಭಿಪ್ರಾಯಕ್ಕೆ ಓಗೊಟ್ಟು ಪಾಕಿಸ್ತಾನದ ವಿಚಾರದಲ್ಲಿ ನಿರ್ಣಯಗಳನ್ನು ಕೈಗೊಳ್ಳಬೇಕಾದೀತು ಮತ್ತು ಅದು ಅಪಾಯಕಾರಿ ಎಂದು ಎಚ್ಚರಿಸಿತು.

ಆದರೆ ದುರಂತ ನೋಡಿ. ಇಡೀ ಯುದ್ಧೋನ್ಮಾದತೆ ಮತ್ತು ವಾಚಾಳಿ ಪ್ರವೃತ್ತಿ  ಸೃಷ್ಟಿಯ ಮುಂಚೂಣಿಯಲ್ಲಿರುವುದು   ಇದೇ   ಪತ್ರಿಕೆಯನ್ನು ನಡೆಸುತ್ತಿರುವ ಮಾಧ್ಯಮೋದ್ಯಮ ಸಮೂಹದ ಒಡೆತನದಲ್ಲಿರುವ ‘ಟೈಮ್ಸ್ ನೌ’ ಚಾನೆಲ್!

ಮುಗಿಸುವ ಮುನ್ನ ಇನ್ನೊಂದು ಮಾತು. ಮೊದಲನೆಯ ನಿರ್ದಿಷ್ಟ ದಾಳಿಯ ಬಗ್ಗೆ ಅಹಂಕಾರ ಮತ್ತು ಜಂಬದ ಮಾತುಗಳು ಬೇಡ ಎನ್ನುವ ವಿವೇಕದ ನುಡಿಗಳನ್ನು ಪ್ರಧಾನಿಯವರ ಹೊರತಾಗಿ ಬೇರೆ ಯಾರಾದರೂ ಅಕಸ್ಮಾತಾಗಿ ಹೇಳಿದ್ದರೆ ಏನಾಗುತ್ತಿತ್ತು?

ಹಾಗೆ ಹೇಳಿದವರನ್ನು ದೇಶದ್ರೋಹಿ, ಸೇನಾ ವಿರೋಧಿ,  ಪಾಕಿಸ್ತಾನಿ ಬೆಂಬಲಿಗ, ಭಯೋತ್ಪಾದಕರ ಹಿಂಬಾಲಕ ಮುಂತಾಗಿ ಇನ್ನೂ ಏನೇನೋ ಇಲ್ಲಿ ಬರೆಯಲಾಗದ ಪದಗಳನ್ನೆಲ್ಲಾ ಬಳಸಿ ಛೇಡಿಸುವ ಕೆಲಸ ದೇಶವ್ಯಾಪಿ ನಡೆಯುತ್ತಿತ್ತು. ಇದಕ್ಕೆಲ್ಲಾ ಆಳುವ ಪಕ್ಷದವರ ಬೆಂಬಲವೂ ಇರುತ್ತಿತ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT