ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನರಿಗಾಗಿ ಈ ಫೋನ್

Last Updated 27 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಇಂಟೆಕ್ಸ್ ಒಂದು ಅಪ್ಪಟ ಭಾರತೀಯ ಕಂಪನಿ. 1996ರಲ್ಲಿ ಪ್ರಾರಂಭವಾದ ಈ ಕಂಪನಿ 2004ರಲ್ಲಿ ತನ್ನದೇ ಉತ್ಪಾದನಾ ಘಟಕ ಆರಂಭಿಸಿತು. ಈಗ ಇದು ಜಮ್ಮು, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ. ಹಲವು ನಮೂನೆಯ ಎಲೆಕ್ಟ್ರಾನಿಕ್‌ ಉತ್ಪನ್ನಗಳನ್ನು ತಯಾರಿಸುತ್ತಿದೆ. ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೂ ಇದು ಪ್ರವೇಶಿಸಿದೆ.

ಬಹುತೇಕ ಭಾರತೀಯರು ಕಡಿಮೆ ಬೆಲೆಯ ಉತ್ಪನ್ನಗಳನ್ನೇ ಹೆಚ್ಚಾಗಿ ಖರೀದಿಸುವುದು. ಇಂಟೆಕ್ಸ್ ಇಂಥವರನ್ನೇ ಗಮನದಲ್ಲಿಟ್ಟುಕೊಂಡು ತನ್ನ ಉತ್ಪನ್ನಗಳನ್ನು ತಯಾರಿಸುತ್ತಿದೆ. ಯುವ ಜನಾಂಗವನ್ನು ಉದ್ದೇಶಿಸಿ ತಯಾರಿಸಿದ ಇಂಟೆಕ್ಸ್ ಎಲೈಟ್ ಡ್ಯುವಲ್ (Intex ELYT Dual) ನಮ್ಮ ಈ ವಾರದ ಗ್ಯಾಜೆಟ್.

ಮೊತ್ತಮೊದಲನೆಯದಾಗಿ ಇದರ ಬೆಲೆ ಕಡೆ ಗಮನ ಹರಿಸಬೇಕು. ಇದು ಕಡಿಮೆ ಬೆಲೆಯ ಉತ್ಪನ್ನ. ಅಂತೆಯೇ ನಾವು ಅಧಿಕ ಬೆಲೆಯ ಉತ್ಪನ್ನಗಳ ಗುಣಮಟ್ಟವನ್ನು ಇದರಲ್ಲಿ ನಿರೀಕ್ಷಿಸು ವಂತಿಲ್ಲ. ರಚನೆ ಮತ್ತು ವಿನ್ಯಾಸ ಬೆಲೆಗೆ ತಕ್ಕಂತಿದೆ. ಸಂಪೂರ್ಣ ಪ್ಲಾಸ್ಟಿಕ್ಕಿನ ದೇಹವಿದೆ.

ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿಗಳಿವೆ. ಎದುರುಗಡೆ ಪರದೆಯ ಕೆಳಭಾಗದಲ್ಲಿ ಮೂರು ಸಾಫ್ಟ್‌ಬಟನ್‌ಗಳಿವೆ. ಹಿಂಭಾಗದ ಮಧ್ಯದಲ್ಲಿ ಮೇಲ್ಭಾಗದಲ್ಲಿ ಕ್ಯಾಮೆರಾ ಇದೆ.

ಇದರ ಹಿಂದುಗಡೆಯ ಕವಚ ತೆಗೆಯಬಹುದು. ಹಾಗೆ ತೆಗೆದಾಗ ಬ್ಯಾಟರಿ ಕಾಣಿಸುತ್ತದೆ. ಅದನ್ನೂ ತೆಗೆದು ನೀವೇ ಬದಲಿಸಬಹುದು. ಎರಡು ಮೈಕ್ರೊ ಸಿಮ್ ಮತ್ತು ಮೆಮೊರಿ ಹಾಕುವ ಜಾಗಗಳು ಹಿಂಭಾಗದ ಕವಚ ತೆಗೆದಾಗ ಕಂಡುಬರುತ್ತವೆ. ಇದು ಹಳೆಯ ವಿನ್ಯಾಸ. ಇತ್ತೀಚೆಗೆ ಬ್ಯಾಟರಿ ತೆಗೆಯಬಹುದಾದ ಫೋನ್‌ಗಳು ಕಂಡು ಬರುವುದೇ ಇಲ್ಲ ಎನ್ನುವಂತಾಗಿದೆ. ಅಂಥದ್ದರಲ್ಲಿ ಈ ಫೋನಿನ ಬ್ಯಾಟರಿ ತೆಗೆಯಬಹುದು. ಪ್ಲಾಸ್ಟಿಕ್ಕಿನ ದೇಹವಾದರೂ, 2.5ಡಿ ಗಾಜಿನ ಪರದೆಯಿರುವುದರಿಂದ ಕಳಪೆ ಫೋನ್ ಎಂದು ಅನ್ನಿಸುವುದಿಲ್ಲ.

ಇದು ಅತಿ ಕಡಿಮೆ ವೇಗದ ಫೋನ್. ಇದರ ಅಂಟುಟು ಬೆಂಚ್‌ಮಾರ್ಕ್‌ ಕೇವಲ 29,102 ಇದೆ. ಇದರಲ್ಲಿರುವ ಪ್ರೊಸೆಸರ್ ಕೂಡ ಕಡಿಮೆ ಬೆಲೆಯ ಫೋನ್‌ಗಳಲ್ಲಿ ಬಳಕೆಯಾಗುವಂಥದ್ದು. ದಿನನಿತ್ಯದ ವ್ಯವಹಾರಗಳಲ್ಲಿ ಇದು ಕಡಿಮೆ ವೇಗದ ಫೋನ್ ಎಂದು ಏನೂ ತೊಂದರೆ ಕಂಡುಬರುವುದಿಲ್ಲ. ಸಾಮಾನ್ಯ ಆಟಗಳನ್ನು ತೊಂದರೆಯಿಲ್ಲದೆ ಆಡಬಹುದು. ಅಧಿಕ ಶಕ್ತಿ ಬೇಡುವ ಆಟಗಳನ್ನು ಮಾತ್ರ ಆಡುವುದು ತೃಪ್ತಿದಾಯಕ ಅನುಭವವಾಗಿರುವುದಿಲ್ಲ. ಹಲವು ಕೆಲಸಗಳನ್ನು ಏಕಕಾಲದಲ್ಲಿ ಮಾಡುವುದೂ ತೃಪ್ತಿದಾಯಕ ಅನುಭವವಲ್ಲ.

ಈ ಫೋನಿನಲ್ಲಿ ಇರುವುದು 8 ಮೆಗಾ ಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮೆರಾ. ಇದರ ಗುಣಮಟ್ಟ ಅಷ್ಟಕ್ಕಷ್ಟೆ. ಕಡಿಮೆ ಬೆಳಕಿನಲ್ಲಂತೂ ಫೋಟೊ ತೆಗೆಯಲು ಇದು ಒದ್ದಾಡುತ್ತದೆ. ಇದರ ವಿಶೇಷತೆ ಇರುವುದು ಸ್ವಂತೀ ಕ್ಯಾಮೆರಾದಲ್ಲಿ.

ಅತಿ ಕಡಿಮೆ ಬೆಲೆಯ ಫೋನ್‌ಗಳಲ್ಲಿ ಎರಡು ಸ್ವಂತೀ (selfie) ಕ್ಯಾಮೆರಾ ಇರುವ ಫೋನ್ ಬಹುಶಃ ಇದೊಂದೇ ಇರಬಹುದೇನೋ? ಸ್ವಂತೀ ತೆಗೆಯಲು ಇದರಲ್ಲಿ ಫ್ಲಾಶ್ ಕೂಡ ಇದೆ. ಸ್ವಂತೀ ಕ್ಯಾಮೆರಾದಲ್ಲಿ 8 ಮೆಗಾಪಿಕ್ಸೆಲ್‌ನ ಮತ್ತು 2 ಮೆಗಾಪಿಕ್ಸೆಲ್‌ನ ಎರಡು ಕ್ಯಾಮೆರಾಗಳಿವೆ. ಒಂದು ಕ್ಯಾಮೆರಾ ನಿಮ್ಮ ಮುಖದ ಫೋಟೊ ತೆಗೆಯುವಾಗ ಇನ್ನೊಂದು ಕ್ಯಾಮೆರಾ ಹಿನ್ನೆಲೆಯನ್ನು ಚಿತ್ರೀಕರಿಸುತ್ತದೆ. ಈ ಹಿನ್ನೆಲೆಯನ್ನು ನಂತರ ಬದಲಿಸಬಹುದು. ಇದು ಸಾಮಾನ್ಯವಾಗಿ ಫೋಟೊಶಾಪ್‌ನಲ್ಲಿ ಮಾಡುವ ಕೆಲಸ. ಈಗ ನೀವು ಇದನ್ನು ಫೋನಿನಲ್ಲೇ ಮಾಡಬಹುದು.

ನಿಮ್ಮ ಮನೆಯ ಒಳಗೇ ನಿಮ್ಮ ಸ್ವಂತೀ ತೆಗೆದು ನಂತರ ನೀವು ಮೈಸೂರು ಅರಮನೆಯ ಮುಂದೆ ಇರುವಂತೆ ಬದಲಾಯಿಸಬಹುದು. ಬಹುಶಃ ಯುವ ಜನಾಂಗವನ್ನು ಮೆಚ್ಚಿಸಲು ಈ ಸವಲತ್ತನ್ನು ನೀಡಿದ್ದಾರೆ. ಸ್ವಂತೀ ಕ್ಯಾಮೆರಾದ ಗುಣಮಟ್ಟ, ನೀಡುವ ಬೆಲೆಗೆ ಹೋಲಿಸಿದರೆ ಪರವಾಗಿಲ್ಲ ಎನ್ನಬಹುದು. ಹಾಗೆ ನೋಡಿದರೆ ಈ ಸ್ವಂತೀ ಕ್ಯಾಮೆರಾಗಳೇ ಇದರ ವೈಶಿಷ್ಟ್ಯ.

ಇದರ ಪರದೆ ಪರವಾಗಿಲ್ಲ. ಇದರಲ್ಲಿರುವುದು 5 ಇಂಚಿನ ಪರದೆ. ಪೂರ್ತಿ ಹೈಡೆಫಿನಿಶನ್ ಅಲ್ಲ. ಆದರೂ ಹೈಡೆಫಿನಿಶನ್ ವಿಡಿಯೊ ಪ್ಲೇ ಆಗುತ್ತದೆ. ಸಿನಿಮಾ ನೋಡುವ ಅನುಭವ ಪರವಾಗಿಲ್ಲ. 4k ವಿಡಿಯೊ ಮಾತ್ರ ಪ್ಲೇ ಆಗುವುದಿಲ್ಲ. ಇದರ ಆಡಿಯೊ ಇಂಜಿನ್ ತೃಪ್ತಿದಾಯಕವಾಗಿಲ್ಲ. ಇಯರ್‌ಬಡ್ ನೀಡಿದ್ದಾರೆ. ಆದರೆ ಅಧಿಕ ಕುಶನ್ ನೀಡಿಲ್ಲ. ಇಯರ್‌ಬಡ್‌ನ ಗುಣಮಟ್ಟ ತೃಪ್ತಿದಾಯಕವಾಗಿಲ್ಲ. ಉತ್ತಮ ಗುಣಮಟ್ಟದ ಇಯರ್‌ಫೋನ್ ಜೋಡಿಸಿದರೂ ಉತ್ತಮ ಸಂಗೀತ ಆಲಿಸುವ ಅನುಭವ ದೊರೆಯುವುದಿಲ್ಲ. ಬ್ಲೂಟೂತ್ ಕೂಡ ಅಷ್ಟಕ್ಕಷ್ಟೆ.

ಇದರಲ್ಲಿರುವುದು 2400 mAh ಶಕ್ತಿಯ ಅಂದರೆ ಕಡಿಮೆ ಶಕ್ತಿಯ ಬ್ಯಾಟರಿ. ಒಂದು ದಿನಕ್ಕೆ ಅಲ್ಲಿಂದಲ್ಲಿಗೆ ಸಾಕು. ಚಾರ್ಜ್ ಮಾಡುವಾಗ ಸ್ವಲ್ಪ ಬಿಸಿಯಾಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ತೃಪ್ತಿ ನೀಡುವ ಫೋನ್ ಎನ್ನಬಹುದು.

*


ವಾರದ ಆ್ಯಪ್‌(app): 2018ರ ಕನ್ನಡ ಕ್ಯಾಲೆಂಡರ್ 
ಗೂಗಲ್‌ ಪ್ಲೇ ಸ್ಟೋರಿನಲ್ಲಿ ಕ್ಯಾಲೆಂಡರ್ ಕಿರುತಂತ್ರಾಂಶಗಳು (ಆ್ಯಪ್) ಹಲವಾರಿವೆ. ಕನ್ನಡ ಕ್ಯಾಲೆಂಡರ್ ಎಂದು ಹುಡುಕಿದರೂ ಹಲವಾರು ಕಂಡುಬರುತ್ತವೆ. ಅವುಗಳಲ್ಲಿ ಎಲ್ಲವೂ ಸರಿಯಿಲ್ಲ. ಸ್ವಲ್ಪ ಹುಡುಕಾಡಿ ಒಂದು ಮಟ್ಟಿಗೆ ತೃಪ್ತಿ ನೀಡುತ್ತದೆ ಎನ್ನಬಹುದಾದ ಒಂದು ಕನ್ನಡ ಕ್ಯಾಲೆಂಡರ್ ಕಿರುತಂತ್ರಾಂಶ ಪತ್ತೆಹಚ್ಚಿದೆ. ಅದು ಬೇಕಿದ್ದರೆ ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ Kannada Calendar panchagam 2018 ಎಂದು ಹುಡುಕಬೇಕು ಅಥವಾ http://bit.ly/gadgetloka309 ಜಾಲತಾಣಕ್ಕೆ ಭೇಟಿ ನೀಡಬೇಕು. ಕನ್ನಡದಲ್ಲೇ ಹಬ್ಬಗಳ ಪಟ್ಟಿ, ಜ್ಯೋತಿಷ್ಯ, ದೈನಿಕ ಪಂಚಾಂಗ ಎಲ್ಲ ಇವೆ. ಆದರೆ ಸ್ವಲ್ಪ ಕಿರಿಕಿರಿ ಎನ್ನುವಷ್ಟು ಜಾಹೀರಾತುಗಳಿವೆ. 

*
ಗ್ಯಾಜೆಟ್‌ ಸುದ್ದಿ: ಸೈಕಲ್ ಚಲಾಯಿಸುವವರ ತಲೆಗೆ ಸುರಕ್ಷೆ
ಸೈಕಲ್ ಓಡಿಸುವವರಿಗೆಂದೇ ಹಲವು ನಮೂನೆಯ ಶಿರಸ್ತ್ರಾಣ, ಅಂದರೆ ಹೆಲ್ಮೆಟ್‌ಗಳಿವೆ. ಆದರೆ ಅವುಗಳು ನಿಜಕ್ಕೂ ಸಂಪೂರ್ಣ ಸುರಕ್ಷೆಯನ್ನು ನೀಡುತ್ತವೆಯೇ? ಕಾರುಗಳು ಅಪಘಾತಕ್ಕೀಡಾದಾಗ ಚಾಲಕನನ್ನು ಉಳಿಸಲು ಗಾಳಿ ತುಂಬಿದ ಚೀಲ ಹೊರಬರುವುದು ತಿಳಿದಿರಬಹುದು. ಈಗ ಅದೇ ತತ್ತ್ವವನ್ನು ಸೈಕಲ್ ಓಡಿಸುವವರ ಹೆಲ್ಮೆಟ್‌ಗೆ ಅಳವಡಿಸಲಾಗಿದೆ.

ಅಂದರೆ ಆ ಹೆಲ್ಮೆಟ್ ಧರಿಸಿ ಸೈಕಲ್ ಓಡಿಸುವಾಗ ಅಪಘಾತವಾದರೆ, ಅಥವಾ ಬಿದ್ದರೆ, ಹೆಲ್ಮೆಟ್ ಒಳಗಿಂದ ಕೂಡಲೆ ಗಾಳಿ ತುಂಬಿದ ಚೀಲ ಹೊರಬಂದು ತಲೆಯನ್ನು ಸುತ್ತುವರಿಯುತ್ತದೆ. ಈ ಹೆಲ್ಮೆಟ್ ಖರೀದಿಸಬೇಕಿದ್ದರೆ https://hovding.com/ ಜಾಲತಾಣಕ್ಕೆ ಭೇಟಿ ನೀಡಿ.

*
ಗ್ಯಾಜೆಟ್ ಸಲಹೆ: ನಟರಾಜರ ಪ್ರಶ್ನೆ: ನೀವು ಯಾಕೆ ಮೋಟೊರೋಲ ಫೋನ್‌ಗಳ ಬಗ್ಗೆ ಬರೆಯುವುದಿಲ್ಲ?
ಉ: ನಾನು ನನಗೆ ವಿಮರ್ಶೆಗೆ ಕಳುಹಿಸಿದ ಅಥವಾ ನಾನೇ ಕೊಂಡುಕೊಂಡು ಬಳಸಿದ ಗ್ಯಾಜೆಟ್‌ಗಳ ಬಗ್ಗೆ ಮಾತ್ರ ಬರೆಯುವುದು. ಮೋಟೊರೋಲದವರು ನಾನು ಹಲವು ಸಲ ಕೋರಿಕೆ ಕಳುಹಿಸಿದರೂ ಇದು ತನಕ ಯಾವುದೇ ಫೋನ್ ವಿಮರ್ಶೆಗೆ ನೀಡಿಲ್ಲ.

*
ಗ್ಯಾಜೆಟ್‌ ತರ್ಲೆ: ಕಲಕಿಸುವ ಮಗ್
ಕಾಫಿ ಅಥವಾ ಚಹಾಕ್ಕೆ ಸಕ್ಕರೆ ಹಾಕಿ ಅದಕ್ಕೆ ಚಮಚ ಹಾಕಿ ಕಲಕಿಸುವುದು ನಿಮಗೆ ತ್ರಾಸದಾಯಕವೇ? ಹೌದಾದರೆ ನಿಮಗಾಗಿ ದ್ರಾವಣವನ್ನು ಕಲಕಿಸುವ ಮಗ್ ಬಂದಿದೆ. ಅದರೊಳಗೆ ನೀವು ಕಾಫಿ ಮತ್ತು ಸಕ್ಕರೆ ಹಾಕಿ ಅದರ ಹಿಡಿಯಲ್ಲಿರುವ ಬಟನ್‌ ಒತ್ತಿದರೆ ಅದು ತನ್ನಲ್ಲಿರುವ ದ್ರಾವಣವನ್ನು ಕಲಕಿಸುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT