ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಪ್ಪ ಮೇಷ್ಟ್ರ ಕುದುರೆ ಕಥೆ

Last Updated 30 ಜುಲೈ 2014, 19:30 IST
ಅಕ್ಷರ ಗಾತ್ರ

ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದ ನಾವು ಅವರನ್ನು ಕುಂಕುಮ ಮೇಷ್ಟ್ರು ಎಂದು ಕರೆಯುತ್ತಿದ್ದವು. ಹಣೆ ಹರಡಿರುವಷ್ಟು ಅಗಲಕ್ಕೂ, ಸೂರ್ಯನಷ್ಟು ಎತ್ತರದ ದುಂಡನೆಯ ಕುಂಕುಮವನ್ನು ಅವರು ಇಟ್ಟುಕೊಳ್ಳುತ್ತಿದ್ದರು. ಅವರ ಹಣೆ ತಲೆಯವರೆಗೂ ವಿಸ್ತರಿಸಿ ಅದು ದುಂಡನೆಯ ಭೂಗೋಳದಂತೆ ಕಾಣುತ್ತಿತ್ತು. ಮೂಡುವನು ರವಿ ಮೂಡುವನು; ಕತ್ತಲೊಡನೆ ಜಗಳಾಡುವನು ಎಂಬ ಪದ್ಯವನ್ನು ಅವರು ರಾಗವಾಗಿ ಹಾಡುತ್ತಿದ್ದರು. ತಿರುಗುವ ಭೂಮಿಯಾಗಿ ಅವರ ನಿಗಿನಿಗಿ ಪಾಣಿ ಬುರುಡೆ ತಲೆಯೂ, ಸಾಕ್ಷಾತ್ ಸೂರ್ಯನಂತೆ ಅವರ ಹಣೆಯ ಕುಂಕುಮವೂ ಕಾಣತೊಡಗಿ ಪದ್ಯ ನಮ್ಮ ವ್ಯಾಪ್ತಿಗೆ ಮೀರಿ ಅರ್ಥವಾಗುತ್ತಿತ್ತು. ಅವರೊಬ್ಬ ಸಜ್ಜನ ಅಧ್ಯಾಪಕರಾಗಿದ್ದರು. ಹುಡುಗರಿಗೆ ಹೆದರಿಸುವುದು, ಹೊಡೆಯುವುದು, ಗದರಿಸುವುದು ಯಾವತ್ತೂ ಮಾಡುತ್ತಿರಲಿಲ್ಲ. ಮೆತ್ತಗೆ ಹತ್ತಿಯಷ್ಟು ಮೃದುವಾಗಿ ಮಾತಾಡುತ್ತಿದ್ದರು. ಒಳ್ಳೊಳ್ಳೆ ಕಥೆ ಹೇಳುತ್ತಿದ್ದರು. ಹಾಡು ಕಲಿಸುತ್ತಿದ್ದರು. ಅಕ್ಷರ ತಿದ್ದಿಸುತ್ತಿದ್ದರು. ಅವರ ನಡೆ ನುಡಿ ನೋಡಿ ನಾವು ಗಾಂಧೀಜಿ ಮತ್ತೆ ಹುಟ್ಟಿದ್ದಾರೆ ಎಂದು ಮಾತಾಡಿಕೊಳ್ಳುತ್ತಿದ್ದೆವು.

ಕೆಲವರು ಅವರನ್ನು ಆರ್.ಆರ್. ಎಂದೂ ಕರೆಯುತ್ತಿದ್ದರು. ಆರ್.ಆರ್.ಎಂದರೆ ಏನೆಂದೂ ನಮಗೆ ಮೊದಲಿಗೆ ಗೊತ್ತಿರಲಿಲ್ಲ. ಕೊನೆಗೆ ಅವರ ಹೆಸರಿನ ಪೂರ್ಣ ರೂಪ ರಾಮಯ್ಯನ ಮಗ ರಂಗಪ್ಪ ಎಂಬುದು ನಮಗೆ ನಿಧಾನಕ್ಕೆ ಮನದಟ್ಟಾಯಿತು. ಅಷ್ಟರಲ್ಲಾಗಲೇ ಅವರಿಗೆ ಕುದ್ರೆಮೇಷ್ಟ್ರು ಎಂಬ ಮತ್ತೊಂದು ಹೆಸರೂ ಆಕಸ್ಮಿಕವಾಗಿ ಅಂಟಿಕೊಂಡಿತು. ಒಬ್ಬರೇ ಮೇಷ್ಟ್ರಿಗೆ ಹೀಗೆ ಮೂರ್‍ನಾಲ್ಕು ಹೆಸರುಗಳು ತಗುಲಿ ಹಾಕಿಕೊಂಡ ಮೇಲೆ ನಮಗೆ ಪೀಕಲಾಟ ಶುರುವಾಯಿತು. ಏಕೆಂದರೆ ನಮ್ಮ ಶಾಲೆಯಲ್ಲಿ ಆರೇಳು ಜನ ಮೇಷ್ಟ್ರುಗಳಿದ್ದರು. ಅಷ್ಟೂ ಜನರಿಗೆ ಹೀಗೆ ಕನಿಷ್ಠ ಮೂರು ಹೆಸರುಗಳೆಂದರೂ ಒಟ್ಟಿಗೆ ಎಷ್ಟೊಂದಾಗುತ್ತದಲ್ಲ!. ಅಷ್ಟೊಂದು ಹೆಸರುಗಳನ್ನು ನೆನಪಿಟ್ಟುಕೊಳ್ಳುವುದು ಪಾಠ ಕಲಿಯುವುದಕ್ಕಿಂತ ಕಷ್ಟ. ಇದನ್ನೆಲ್ಲಾ ಹೇಗೆ ನಿರ್ವಹಿಸುವುದು ಎಂಬುದೇ ನಮಗೊಂದು ಚಿಂತೆಯಾಗಿತ್ತು. 

ಈಗಲೂ ವಿದ್ಯಾರ್ಥಿಗಳು ತಮ್ಮ ಅಧ್ಯಾಪಕರಿಗೆ ಇಂಗ್ಲೀಷ್ ಇನ್ಶಿಯಲ್‌ಗಳ ಹೆಸರುಗಳನ್ನಿಟ್ಟು ಕರೆಯುವುದು ವಾಡಿಕೆ. ಹೆಚ್.ಜಿ.ಕೆ, ಎಸ್.ಆರ್.ಎಂ, ಕೆ.ಎಲ್, ಎನ್.ಆರ್, ಎಸ್.ಪಿ.ಹೆಚ್, ಹೆಚ್.ಆರ್ ಎಂಬ ಇಂಗ್ಲೀಷ್ ಸಂಕೇತಾಕ್ಷರ ಹೆಸರುಗಳಿಂದ ಅವರನ್ನು ಸಂಬೋಧಿಸುವುದರಿಂದ ಅವರ ನಿಜವಾದ ಹೆಸರುಗಳೇ ಕೊನೇ ತನಕ ತಿಳಿಯುವುದೇ ಇಲ್ಲ. ಇದರ ಜೊತೆ ಜೊತೆಗೆ ಮೇಷ್ಟ್ರುಗಳಿಗೆ ಅಡ್ಡ ಹೆಸರುಗಳನ್ನಿಟ್ಟು ಕರೆಯುವ ಸಂಪ್ರದಾಯ ಬೇರೆ. ಹೀಗೆ ಗುರು ನಾಮಕರಣ ದುಪ್ಪಟ್ಟಾಗಿ ಬಿಡುವುದುಂಟು.

ಇನ್ನು ನಮ್ಮ ರಂಗಪ್ಪ ಮೇಷ್ಟ್ರು ದಿನಾ ಏಳು ಮೈಲಿಗಳಷ್ಟು ದೂರದಿಂದ ಶಾಲೆಗೆ ನಡೆದೇ ಬರುತ್ತಿದ್ದರು. ಅವರ ಹಳ್ಳಿಗೆ ಯಾವ ವಾಹನ ಸೌಕರ್ಯಗಳೂ ಆಗ ಇರಲಿಲ್ಲ. ಒಂದಿಷ್ಟು ದಿನ ಸೈಕಲ್ ತುಳಿದುಕೊಂಡು ಬಂದರಾದರೂ ವಯಸ್ಸಾದಂತೆ ಅದೂ ದುಸ್ಸಾಹಸ ಎನಿಸತೊಡಗಿತ್ತು. ಸೈಕಲ್ ಪಂಚರ್ ಆದಾಗ ತಳ್ಳಿಕೊಂಡು ಬರುವುದು. ದಾರಿ ಕೆಸರಾದಾಗ ಸೈಕಲ್‌ನಿಂದ ಜಾರಿ ಬಿದ್ದು ಮುಖ ಕೈ-ಕಾಲೆಲ್ಲಾ ಜಜ್ಜಿಸಿಕೊಳ್ಳುವ ಜಂಜಾಟಗಳಿಂದ ಸುಸ್ತಾದ ರಂಗಪ್ಪ ಮೇಷ್ಟ್ರು ಕೊನೆಗೊಂದು ದಿನ ದೊಡ್ಡಮನಸ್ಸು ಮಾಡಿ ಒಂದು ಹೆಣ್ಣು ಕುದುರೆಯನ್ನು ಕೊಂಡುಕೊಂಡರು. ಕುರಿ ಕಾಯುವ ಜನ ಬೀಡು ಬಿಟ್ಟಾಗ ಅವರ ಬಳಿ ವ್ಯಾಪಾರ ನಡೆಸಿದರು. ತಮ್ಮ ಕಷ್ಟ ಹೇಳಿಕೊಂಡರು.  ಅವರಿಗೂ ಹೊರೆಯಾಗಿದ್ದ, ಅಷ್ಟೇನು ಪೊಗದಸ್ತಿಲ್ಲದ ಒಂದು ಕುದುರೆಯನ್ನು ಇವರಿಗೆ ದಾಟಿಸಿದರು.

ಯಾವಾಗ ಹೆಣ್ಣು ಕುದುರೆ ಹತ್ತಿ ರಂಗಪ್ಪ ಮೇಷ್ಟ್ರು ಶಾಲೆಗೆ ಬರತೊಡಗಿದರೋ ಅವತ್ತಿನಿಂದ ಅವರ ಹೆಸರು ಮತ್ತೆ ಬದಲಾವಣೆಯಾಗಿ ಕುದ್ರೆಮೇಷ್ಟ್ರು ಎಂದಾಗಿ ಬಿಟ್ಟಿತು. ಈ ಕುದುರೆ ಮೇಲೆ ಅವರು ಬರುವುದನ್ನು ನೋಡುವುದೇ ನಮಗೊಂದು ಸಡಗರ. ಕುದುರೆ ಸವಾರಿಯ ಖುಷಿಯನ್ನು ಅವರು ಸೊಗಸಾಗಿ ವಿವರಿಸುತ್ತಿದ್ದರು. ನಕ್ಕು ಹೊಟ್ಟೆ ಹುಣ್ಣಾಗುವ ಕಥೆಗಳನ್ನು ಹೇಳುತ್ತಿದ್ದರು. ತಮ್ಮನ್ನು ತಾವೇ ಗೇಲಿ ಮಾಡಿಕೊಂಡು ನಮ್ಮನ್ನು ನಗಿಸುತ್ತಿದ್ದರು. ನಮ್ಮ ಜೊತೆ ಎಷ್ಟು ಸಲಿಗೆ, ಪ್ರೀತಿಯಿಂದ ಇರುತ್ತಿದ್ದರೋ ಅಷ್ಟೇ ತದ್ವಿರುದ್ಧವಾಗಿ ತಮ್ಮ ಸಹೋದ್ಯೋಗಿಗಳ ಜೊತೆಗೆ ಇರುತ್ತಿದ್ದರು. ಅವರ ಈ ಮುಖ ನಮಗೆ ಅರ್ಥವಾಗುತ್ತಿರಲಿಲ್ಲ. ಏನೋ ಮೇಷ್ಟ್ರು ಮೇಷ್ಟ್ರುಗಳ ನಡುವೆ ಜಟಾಪಟಿ ನಡೆದಿರಬಹುದೆಂದು ನಾವು ಗುಮಾನಿ ಪಡುತ್ತಿದ್ದೆವು.

ನಮ್ಮ ಶಾಲೆ ಹಳ್ಳಿಯಿಂದ ಹೊರಗೆ ಒಂದು ಹೊಲದಲ್ಲಿ ನೆಲೆಗೊಂಡಿತ್ತು. ಆ ಹೊಲದೊಡೆಯ ನಮ್ಮ ಶಾಲೆಯ ಸುತ್ತಲೂ ರಾಗಿ ಬೆಳೆಯುತ್ತಿದ್ದ. ಪುಕ್ಕಟ್ಟೆ ಶಾಲೆಗೆ ಕೊಟ್ಟ ಜಾಗ ಅದಾದ ಕಾರಣ ನಾವು ಹೊಲದವನ ಎದುರು ಯಾವ ಬಾಲವೂ ಬಿಚ್ಚುವಂತಿರಲಿಲ್ಲ. ಆಟವಾಡಲು ರಾಗಿಯ ಕಟಾವು ಆಗುವ ತನಕ ಕಾಯಬೇಕಿತ್ತು. ಅರಳಿದ ಹಸಿ ರಾಗಿಯ ತೆನೆಗಳನ್ನು ಮುಟ್ಟುವಂತಿರಲಿಲ್ಲ. ಶಾಲೆಯ ಕಟ್ಟೆ ಕೆಳಗೆ ಹೆಜ್ಜೆ ಇಟ್ಟರೆ ಅವನ ರಾಗಿಯ ಬೆಳೆ. ಹೀಗಾಗಿ ಶಾಲೆಯ ಕಟ್ಟೆಯ ಮೇಲೆ ಮಾತ್ರ ಆಟವಾಡಬೇಕಿತ್ತು. ಊರಿನ ಜನ ರಾಗಿ ಬೆಳೆ ನಮ್ಮ ಎದೆ ಮಟ್ಟಕ್ಕೆ ಬೆಳೆದಾಗ ಬಹಿರ್ದೆಸೆಗೆ ಬಂದು ಉಚಿತವಾಗಿ ಕೂರುತ್ತಿದ್ದರು.

ಊರಿಗೆ ಸಮೀಪ ಇರುವ ಕಾರಣ ಅವರಿಗದು ಪ್ರಶಸ್ತ ಜಾಗವೆನಿಸಿತ್ತು. ಹೊಲದೊಡೆಯ ಅವರಿಗೆ ಮಾತ್ರ ಯಾವ ತಕರಾರನ್ನೂ ವಿಧಿಸಿರಲಿಲ್ಲ. ಅವರನ್ನು ತನ್ನ ಹೊಲದ ಮಹಾಪೋಷಕರೆಂದು ಭಾವಿಸಿದ್ದ. ನಮ್ಮನ್ನು ಕಂಡರೆ ಮಾತ್ರ ಕೆಂಡ ಕಾರುತ್ತಿದ್ದ. ಹೊಲದ ಕಡೆ ಬಂದಾಗೆಲ್ಲಾ ಸುಖಾಸುಮ್ಮನೆ ಬಯ್ಯುತ್ತಿದ್ದ. ಶಾಲೆಯ ಮೇಷ್ಟ್ರುಗಳಿಗೆ ಎಚ್ಚರಿಕೆ ನೀಡುತ್ತಿದ್ದ. ಇಷ್ಟಿದ್ದರೂ ನಾವು ಮಾತ್ರ ಮನೆಗೆ ಹೋಗುವಾಗ ಒಂದಿಷ್ಟು ರಾಗಿ ತೆನೆ ಕದ್ದೊಯ್ಯುವುದನ್ನು ಬಿಟ್ಟಿರಲಿಲ್ಲ. ರಂಗಪ್ಪ ಮೇಷ್ಟ್ರು ಕುದುರೆ ತಂದಾಗ ಮೊದಲು ತಕರಾರು ತೆಗೆದವನು ಈ ಹೊಲದೊಡೆಯ. ಯಾವ ಕಾರಣಕ್ಕೂ ಕುದುರೆಯನ್ನು ಶಾಲೆಯ ಹತ್ತಿರ ತರುವಂತಿಲ್ಲ. ತನ್ನ ಹೊಲದ ಬೆಳೆ ಕುದುರೆಯ ಪಾಲಾಗುವ ಸಾಧ್ಯತೆ ಇರುವುದರಿಂದ ಅದನ್ನು ದೂರದ ಹುಣಸೆ ಮರಕ್ಕೆ ಕಟ್ಟಬೇಕೆಂದು ಅಪ್ಪಣೆ ಮಾಡಿದನು. ರಂಗಪ್ಪ ಮೇಷ್ಟ್ರು ತಮ್ಮ ಹೆಣ್ಣು ಕುದುರೆಯ ಪರವಾಗಿ ಅವನಲ್ಲಿ ಎಷ್ಟು ಬೇಡಿದರೂ ಅವನ ಮನಸ್ಸು ಕಿಂಚಿತ್ತೂ ಕರಗಲಿಲ್ಲ.

ಅಲ್ಲಿಂದ ರಂಗಪ್ಪ ಮೇಷ್ಟ್ರು ತಮ್ಮ ಹೆಣ್ಣುಕುದುರೆ ಕಾಯುವ ಕಾಯಕವನ್ನು ನನಗೂ ನನ್ನ ಗೆಳೆಯ ಗುರುಮೂರ್ತಿಗೂ ವಹಿಸಿದರು. ಅದು ನಮ್ಮ ಜೀವನದ ಅತಿ ಸಂಭ್ರಮದ ಗಳಿಗೆ ಎನಿಸಿತ್ತು. ಕುದುರೆಗೆ ಹಸಿಹುಲ್ಲು ತಂದು ಹಾಕುವ, ನೀರು ಕುಡಿಸುವ, ಅದರ ಮೇಲೆ ನೊಣ ಕೂತರೂ ಅದನ್ನು ಓಡಿಸಿ ಗುರುಗಳಿಗೆ ನಮ್ಮ ಕಾರ್ಯವರದಿ ಒಪ್ಪಿಸುವ ಕೆಲಸವನ್ನು ಬಲು ಶ್ರದ್ಧೆಯಿಂದ ನಿರ್ವಹಿಸತೊಡಗಿದೆವು. ನಮ್ಮ ಜೀವಮಾನದಲ್ಲಿ ನಾವೆಲ್ಲಾ ಕುದುರೆಯನ್ನು ನೋಡಿದ್ದು ಅದೇ ಮೊದಲು. ಆ ಹಳ್ಳಿಯ ಕತ್ತೆಗಳನ್ನೇ ಕುದುರೆಗಳೆಂದು ಒಪ್ಪಿಕೊಂಡಿದ್ದ  ನಮಗೆ ಈ ಹೆಣ್ಣುಕುದುರೆ  ಬಂದ ಮೇಲೆಯೇ ಅವುಗಳ ನಡುವಿನ ವ್ಯತ್ಯಾಸ ಅರ್ಥವಾಗಿದ್ದು.

ರಂಗಪ್ಪ ಮೇಷ್ಟ್ರ ಕುದುರೆಯ ಜವಾಬ್ದಾರಿ ನಮಗೆ ಸಿಕ್ಕಮೇಲಂತೂ ಸ್ವರ್ಗವೇ ಸಿಕ್ಕಿದಂತಾಗಿತ್ತು. ಶಾಲೆಯ ಆ ದರಿದ್ರ ಪಾಠಕ್ಕಿಂತ ಈ ಕುದುರೆ ಸಾಕುವ ಕೆಲಸವೇ ಸಾವಿರ ಪಾಲು ಉತ್ತಮ ಎನಿಸಹತ್ತಿತು. ಜೀವನದಲ್ಲಿ ಮುಂದೆ ಇದೇ ಉದ್ಯೋಗವನ್ನು ಮುಂದುವರೆಸೋಣ ಎಂದು ನಾನು ಮತ್ತು ಗುರುಮೂರ್ತಿ ಶಪಥ ಮಾಡಿಕೊಂಡೆವು.

ಅಷ್ಟರಲ್ಲಿ ಒಂದು ಅನಾಹುತ ನಡೆದು ಹೋಯಿತು. ಮಕ್ಕಳಿಗೆ ಪಾಠ ಮಾಡುವುದು ಬಿಟ್ಟು ಕುದುರೆ ಕಾಯಲು ರಂಗಪ್ಪ ಮೇಷ್ಟ್ರು ಹಚ್ಚಿದ್ದಾರೆ ಎಂದು ನಮ್ಮ ಶಾಲೆಯ ಒಂದಿಷ್ಟು ಮೇಷ್ಟ್ರುಗಳು ಊರಿನಲ್ಲಿ ಚಾಡಿ ಹಚ್ಚಿದರು. ಅವರಿಗೆಲ್ಲಾ ರಂಗಪ್ಪ ಮೇಷ್ಟ್ರು ಕುದುರೆ ಮೇಲೆ ರಾಜನಂತೆ ಬಂದು ಹೋಗುವುದು ಇಷ್ಟವಿರಲಿಲ್ಲ. ಅದರಲ್ಲೂ, ಒಂದು ದಿನ ಕಣ್ಣಿ ಬಿಚ್ಚಿಕೊಂಡ ಕುದುರೆ ರಾಗಿ ಹೊಲಕ್ಕೆ ಬಂದು ಮೇಯ್ದಿದ್ದೂ ಒಂದು ಅಪರಾಧ ಬಾಕಿಯಿತ್ತು. ಅದೂ ಹೊಲದ ಕಿವಿಯವನಿಗೆ ತಲುಪಿ ಅವನು ಬಂದು ಭೂಮಿ ಆಕಾಶ ಒಂದು ಮಾಡಿ ಹೋಗಿದ್ದ. ಕುದುರೆಯ ಹಗ್ಗ ಸಡಿಲವಾಗಿ ಕಟ್ಟಿದ್ದ ನಮ್ಮ ಮೇಲೆ ರಂಗಪ್ಪ ಮೇಷ್ಟ್ರು ಕಿಡಿಕಾರಬಹುದಾ? ಎಂದು ಕಾದೆವು. ಅವರು ಗಾಂಧೀಜಿಯಂತಹ ಮನುಷ್ಯರು. ಏನೂ ಮಾತಾಡಲಿಲ್ಲ. ನಮ್ಮ ತಪ್ಪಿಗೆ ಹೊಲದವನ ಬಳಿ ಅವರೇ ಕ್ಷಮೆ ಕೇಳಿದರು.

ಮಾರನೆಯ ದಿನ ಗುರುಮೂರ್ತಿಯ ಅಪ್ಪ ಸಿಡಿಲು ಗುಡುಗಾಗಿ ಬಂದರು. ಹೊಲೇರ ಮನೆಯ ಕುದುರೆ ಕತ್ತೆ ಕಾಯೋಕ್ಕೇನೋ ಬದ್ಮಾಶ್ ನಿನ್ನ ಸ್ಕೂಲಿಗೆ ಕಳೀಸೋದು ಎಂದು ಗುರುಮೂರ್ತಿಯನ್ನು ಹಿಡಿದು ಜಬ್ಬಿದರು. ರಂಗಪ್ಪ ಮೇಷ್ಟ್ರು ಕರೆಸಿ ಏನೇನೋ ವಾಚಾಮಗೋಚರ ಬೈದರು. ಉಳಿದ ನಮ್ಮ ಅಧ್ಯಾಪಕರೂ ಆ ಜಗಳಕ್ಕೆ ಉಪ್ಪು ಖಾರ ಹುಳಿ ಸುರಿಯುತ್ತಿದ್ದರು. ಜಗಳ ಮಾತಿಗೆ ಮಾತು ಬೈಗುಳಗಳು ತಾರಕಕ್ಕೇರಿದವು. ರಂಗಪ್ಪ ಮೇಷ್ಟ್ರು ತಲೆ ತಗ್ಗಿಸಿ ನಿಂತವರು ಏನೂ ಮಾತಾಡದೆ ಸುಮ್ಮನೆ ನಿಂತಿದ್ದರು. ಅವರ ಕನ್ನಡಕದ ತುದಿಯಿಂದ ನೀರು ತೊಟ್ಟಿಕ್ಕಿದಾಗ ಮನಸ್ಸು ತಡೆಯದ ನಾವು ದುಃಖದಿಂದ ಅವರ ಹತ್ತಿರ ಹೋಗಿ ನಿಂತಾಗ ನಮ್ಮ ತಲೆ ಸವರಿದರು. ಕೊನೆಯ ಬೆಲ್ಲು ಬಡಿಯುವ ಮೊದಲೇ ಕುದುರೆ ಏರದೆ ಅದರ ಜೊತೆ ನಡೆದುಕೊಂಡೇ ಪಶ್ಚಿಮ ದಿಕ್ಕಿಗೆ ಹೋದವರು ಮತ್ತೆ ಶಾಲೆಗೆ ಕಡೆಗೆ ಯಾಕೋ ಬರಲೇ ಇಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT