ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಸ್ಥಳದಲ್ಲಿ ಏಸು ಮತ್ತು ಮತಾಂತರ

Last Updated 22 ಮೇ 2017, 5:17 IST
ಅಕ್ಷರ ಗಾತ್ರ
ಇದೊಂದು ತೀರಾ ಸಣ್ಣ ವಿಷಯ ಎಂದು ಕಡೆಗಣಿಸಿಬಿಡಬಹುದು. ಇದೊಂದು ತೀರಾ ಸ್ಥಳೀಯ ವಿಷಯ ಎಂದು ತಲೆ ಕೆಡಿಸಿಕೊಳ್ಳದೆ ಇದ್ದುಬಿಡಬಹುದು. ಆದರೆ ಸಣ್ಣ ವಿಷಯಗಳ ಬಗ್ಗೆ ಉದಾಸೀನ ತೋರಿ ಅವುಗಳನ್ನು ದೊಡ್ಡ ದೊಡ್ಡ ಸವಾಲುಗಳಾಗಿ ಬೆಳೆಸುವುದು ಮತ್ತು ಸಣ್ಣ ಸಣ್ಣ ಸಮಸ್ಯೆಗಳ ಮೂಲದಲ್ಲಿರುವ ಗಂಭೀರ ಪರಿಸ್ಥಿತಿಯನ್ನು ಅರಿಯದೆ ಅವಾಂತರಗಳನ್ನು ಸೃಷ್ಟಿಸುವುದು ಸಮಕಾಲೀನ ಸಾರ್ವಜನಿಕ ಸಂಸ್ಕೃತಿಯ ಭಾಗವಾಗಿ ಹೋಗಿರುವುದರಿಂದ ತೀರಾ ಸ್ಥಳೀಯವಾಗಿ ಸೃಷ್ಟಿಯಾಗಿರುವ ಸಣ್ಣ ವಿವಾದವೊಂದರ ಬಗ್ಗೆ ಹೇಳಬೇಕಿದೆ.
 
ಈ ವಿವಾದ ಹುಟ್ಟಿಕೊಂಡಿರುವುದು ವಿವಾದಗಳ ರಾಜಧಾನಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ವಿವಾದದ ಮೂಲದಲ್ಲಿ ಇರುವುದು ‘ಮಹಾಚೇತನ– ಏಸುಕ್ರಿಸ್ತ ಮಹಾತ್ಮೆ’ ಎನ್ನುವ ಯಕ್ಷಗಾನ ಪಠ್ಯ (ಪ್ರಸಂಗ).  ಈ ಕೃತಿ ಮುಂದಿನ ವಾರ ಬಿಡುಗಡೆ ಆಗಲಿದೆ.  ಬಿಡುಗಡೆ ಕಾರ್ಯಕ್ರಮದ ಭಾಗವಾಗಿ ಈ ಕೃತಿ ಆಧಾರಿತ ತಾಳಮದ್ದಳೆ ಪ್ರದರ್ಶನವೂ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕಾರ್ಯಕ್ರಮಕ್ಕೆ ವಿರೋಧ ಹುಟ್ಟಿಕೊಂಡಿದೆ.
 
ಏಸುವಿನ ಬಗ್ಗೆ ಯಕ್ಷಗಾನ ಪ್ರಸಂಗ ಬರೆದದ್ದಕ್ಕೆ ಕೆಲವರು ಆಕ್ಷೇಪ ಎತ್ತಿದ್ದರೆ, ಇನ್ನು ಕೆಲವರು ಈ ಕಾರ್ಯಕ್ರಮ ನಡೆಯಬಾರದು ಎಂದು ತಾಕೀತು ಮಾಡಿದ್ದಾರೆ. ಪ್ರದರ್ಶನದಲ್ಲಿ ಪಾಲ್ಗೊಳ್ಳಲಿರುವ ಕಲಾವಿದರನ್ನು ಹಿಗ್ಗಾಮುಗ್ಗ ಟೀಕಿಸುತ್ತಿದ್ದಾರೆ. ಈ ಪ್ರಸಂಗ ಪಠ್ಯದ ಬಿಡುಗಡೆ ಮತ್ತು ಅದರ ಪ್ರದರ್ಶನವು ಮತಾಂತರಕ್ಕೆ ಸಹಕಾರಿಯಾಗಬಹುದು ಎನ್ನುವುದು ಅವರ ವಾದ.
 
ಬೈಬಲ್ ಆಧರಿಸಿ ಏಸುವಿನ ಕತೆಯನ್ನು ಯಕ್ಷಗಾನವನ್ನಾಗಿ ಪ್ರದರ್ಶಿಸುತ್ತಿರುವುದು ಒಂದು ವಿಶಿಷ್ಟ ಪ್ರಯೋಗ. ಎಲ್ಲವನ್ನೂ ಮತೀಯ ದೃಷ್ಟಿಯಿಂದ ನೋಡುವವರನ್ನು ಇದು ಕೆರಳಿಸಿದೆ. ವಾಸ್ತವ ಏನು ಎಂದರೆ ಈ ಪ್ರಸಂಗ ಪಠ್ಯ ಹೊಸದಾಗಿ ಬಿಡುಗಡೆಯಾಗುತ್ತಿರುವುದೇನಲ್ಲ. ಇದನ್ನು 1976ರಲ್ಲೇ ಮುಳಿಯ ಕೇಶವಯ್ಯ ಅವರು ಬರೆದು ಪ್ರಕಟಿಸಿದ್ದರು ಮತ್ತು ಹಲವಾರು ಕಡೆ ಇದರ ಪ್ರದರ್ಶನವೂ ನಡೆದಿದೆ.

ಪ್ರಸಿದ್ಧ ಕಲಾವಿದರಾಗಿದ್ದ ಮಲ್ಪೆ ರಾಮದಾಸ ಸಾಮಗರಂತಹವರು ಏಸುವಿನ ಪಾತ್ರ ವಹಿಸಿದ್ದೂ ಇದೆ. ಆಗ ಕಾಣಿಸಿಕೊಳ್ಳದ ಆತಂಕ-ಅಪನಂಬಿಕೆ, ಆಗ ಕೇಳಿಸದ ಅಪಸ್ವರ ಈಗ ಅದರ ಹೊಸ ಆವೃತ್ತಿಯ ಬಿಡುಗಡೆಯ ಸಂದರ್ಭದಲ್ಲಿ ಆಗುತ್ತಿದೆ ಎಂದರೆ 40 ವರ್ಷಗಳಲ್ಲಿ ಕರಾವಳಿ ಕರ್ನಾಟಕದ  ಮನಸ್ಥಿತಿ ಹೇಗೆ ಬದಲಾಗಿದೆ ಎನ್ನುವುದನ್ನು ಸೂಚಿಸುತ್ತದೆ.
 
ಒಂದು ಕಾಲದಲ್ಲಿ ಬೌದ್ಧಿಕ ಕೊಡುಗೆಗಳ ದೃಷ್ಟಿಯಿಂದ ಕರ್ನಾಟಕದ ಬಂಗಾಳವಾಗಿದ್ದ ದಕ್ಷಿಣ ಕನ್ನಡ, ಉದ್ಯಮಶೀಲತೆಯ ದೃಷ್ಟಿಯಿಂದ ಕರ್ನಾಟಕದ ಮುಂಬೈ ಆಗಿದ್ದ ದಕ್ಷಿಣ ಕನ್ನಡ  ಈಗ ಯಾವ ಹಾದಿಯಲ್ಲಿ ಸಾಗುತ್ತಿದೆ ಎನ್ನುವುದಕ್ಕೆ ಇದು ಮತ್ತೊಂದು ಉದಾಹರಣೆ.  
 
ಏಸುವಿನ ಬಗ್ಗೆ ಒಂದು ಯಕ್ಷಗಾನ ಪ್ರಸಂಗ ನೋಡಿ ಯಾರಾದರೂ ಮತಾಂತರಕ್ಕೆ ಪ್ರೇರಣೆ ಪಡೆಯಬಹುದು ಎನ್ನುವ ವಾದ ತೀರಾ ಬಾಲಿಶವಾಗಿದೆ. ಈ ವಾದ ಮುಂದಿಡುವ ಮಂದಿಗೆ ಅತ್ತ  ಮನುಷ್ಯನಿಗೆ ಧರ್ಮದ ಜತೆ ಇರುವ ಸಂಬಂಧವೂ ಅರ್ಥವಾಗಿಲ್ಲ, ಇತ್ತ ಕರಾವಳಿಯ ಜನಕ್ಕೆ ಯಕ್ಷಗಾನದ ಜತೆ ಇರುವ ಸಂಬಂಧವೂ ಅರ್ಥವಾಗಿಲ್ಲ ಎಂದೇ ಭಾವಿಸಬೇಕಾಗುತ್ತದೆ. 
 
ದಕ್ಷಿಣ ಕನ್ನಡದ ಆಸುಪಾಸಿನ ಪ್ರಸಿದ್ಧ ಕವಿ ದಿವಂಗತ ಮಂಜೇಶ್ವರ ಗೋವಿಂದ ಪೈ ಅವರು ದಶಕಗಳ ಹಿಂದೆ ‘ಗೊಲ್ಗೊಥಾ’ ಎಂಬ ಕೃತಿ ರಚಿಸಿದ್ದರು. ಇದು ಕ್ರಿಸ್ತನ ಕುರಿತಾದ ಅದ್ಭುತ ಕಾವ್ಯ. ಹಲವು ತಲೆಮಾರುಗಳ ವಿದ್ಯಾರ್ಥಿಗಳು ಈ ಕಾವ್ಯವನ್ನು ಒಂದು ಪಠ್ಯವಾಗಿ ಓದಿದ್ದಾರೆ. ಹಾಗೆಂದು ಇದನ್ನು ಓದಿದವರು ಮತಾಂತರ ಹೊಂದಿದರೇ?
 
ಕಲೆ ಹೇಗಿದ್ದರೂ ಕಲೆಯೇ. ಅದನ್ನು ಹೇಗೆ ನೋಡಬೇಕು, ಎಷ್ಟರಮಟ್ಟಿಗೆ ಮತ್ತು ಹೇಗೆ ಸ್ವೀಕರಿಸಬೇಕು ಎನ್ನುವುದರ ಬಗ್ಗೆ ಸಾಮಾನ್ಯ ಜನರಿಗೆ ಅವರದ್ದೇ ಆದ ಒಲವು, ನಿಲುವುಗಳು ಇರುತ್ತವೆ. ಒಂದು ಯಕ್ಷಗಾನ ಪ್ರದರ್ಶನ ನೋಡಿದಾಕ್ಷಣ ಜನ, ಧರ್ಮ ಬದಲಿಸಲು ಪ್ರೇರಣೆ ಪಡೆಯುತ್ತಾರೆ ಎನ್ನುವುದು ಜನರ ಆತ್ಮ ಗೌರವವನ್ನು ಮತ್ತು ಬುದ್ಧಿಶಕ್ತಿಯನ್ನು ಅವಮಾನಿಸಿದ ಹಾಗೆ.
 
ಅದೇ ರೀತಿ, ಇತರ ಧರ್ಮ ಅನುಸರಿಸುವ ಜನ ದೇಶಕ್ಕೆ ದೇಶವನ್ನೇ ಆಳುತ್ತಿದ್ದ ಶತಶತಮಾನಗಳ ಕಾಲ ತನ್ನತನವನ್ನು ಉಳಿಸಿಕೊಂಡು ಬೆಳೆದ ಧರ್ಮವೊಂದು ಒಂದು ಯಕ್ಷಗಾನ ಪ್ರದರ್ಶನದ ಕಾರಣಕ್ಕೆ ಜನರಿಗೆ ಬೇಡವಾಗುತ್ತದೆ ಎನ್ನುವ ವಾದ ಆ ಧರ್ಮದ ಅಂತಸ್ಸತ್ವವನ್ನೇ ಪ್ರಶ್ನಿಸುತ್ತದೆ. ಈ ಧರ್ಮ ಅಷ್ಟು ದುರ್ಬಲವೇ ಎನ್ನುವ  ಪ್ರಶ್ನೆಯನ್ನೂ ಹುಟ್ಟುಹಾಕುತ್ತದೆ.
 
ಯಕ್ಷಗಾನಕ್ಕೆ ಧರ್ಮ, ಧಾರ್ಮಿಕ ನಂಬಿಕೆ, ಪುರಾಣ ಇತ್ಯಾದಿಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುವ ಪರಂಪರೆ ಇದೆ. ಆ ರಂಗಭೂಮಿಗೆ ಅದು ಅನಿವಾರ್ಯ. ಉದಾಹರಣೆಗೆ, ರಾಮಾಯಣದ ರಾಮನ ಕುರಿತಾದ ಟೀಕೆ ಇನ್ಯಾವ ರಂಗಭೂಮಿಯಲ್ಲೂ ಆಗದಷ್ಟು ಯಕ್ಷಗಾನ ಪ್ರದರ್ಶನಗಳಲ್ಲಿ, ತಾಳಮದ್ದಳೆ ಕೂಟಗಳಲ್ಲಿ ಆಗುತ್ತದೆ.
 
ವಾಲಿ ವಧೆ ಪ್ರಸಂಗದಲ್ಲಿ ರಾಮ ಮರೆಯಿಂದ ಎಸೆದ ಬಾಣಾಘಾತಕ್ಕೆ ಸಿಲುಕಿದ ವಾಲಿ, ರಾಮನ ಮೇಲೆ ಸುರಿಸುವ ಟೀಕೆಗಳ ಸರಮಾಲೆ ಯಕ್ಷಗಾನ– ತಾಳಮದ್ದಳೆ ಪ್ರಕಾರಗಳ ಅತ್ಯಂತ ಜನಪ್ರಿಯ ಸನ್ನಿವೇಶ. ಪಾರ್ತಿಸುಬ್ಬನ ವಾಲಿ-ಸುಗ್ರೀವರ ಕಾಳಗ ಪ್ರಸಂಗದಲ್ಲಿ ಈ ಸನ್ನಿವೇಶಕ್ಕಾಗಿ ರಚಿತವಾದ ಒಂದು ಹಾಡು (ಪದ) ಹೀಗಿದೆ:
 
‘ಜಾಣನಹುದಹುದೋ/ ಸಂಗರಕತಿ ತ್ರಾಣನಹುದಹುದೋ/ ಇನವಂಶದರಸುಗಳೊಳಗೆ / ಹಿಂದೆ ಜನಿಸಿದವರಿಲ್ಲ ನಿನ್ನ ಕೆಳಗೆ / ಘನಚೋರತನದ ಈ ಶಿಖಂಡಿ ವಿದ್ಯೆಯ/ ಎಷ್ಟು ದಿನ ಸಾಧಿಸಿದೆಯೋ ನೀನೋ/ ಲಂಡಿಗಳ ದುರ್ಗುಣವ ಕೈಗೊಂಡೆ ಏನೂ/ ನಿನ್ನಂತ ಕುಜನರಿಲ್ಲ ಸಾಕ್ಷಿ ಇನ್ನೂ / ರಾಘವ ಬಲು ಜಾಣನಹುದಹುದೋ...’ 
 
ಇದರ ಅರ್ಥ ವಿವರಿಸುವ ಯಕ್ಷಗಾನ–  ತಾಳಮದ್ದಳೆಯ ಪಾತ್ರಧಾರಿ ತನ್ನ ಜ್ಞಾನದ ಪರಿಧಿಯಲ್ಲಿ ಮರ್ಯಾದಾ ಪುರುಷೋತ್ತಮ ರಾಮಚಂದ್ರನ ವ್ಯಕ್ತಿತ್ವವನ್ನು ವಿವಿಧ ಆಯಾಮಗಳಲ್ಲಿ ವಿಮರ್ಶಿಸಿ, ಕೇಳುಗರ ಮನಸ್ಸಿನಲ್ಲಿ ರಾಮನ ಕುರಿತು ಆ ತನಕ ಇದ್ದ ಅಭಿಪ್ರಾಯವನ್ನು ಅಲುಗಾಡಿಸಿಬಿಡುವುದುಂಟು. ಇಲ್ಲಿ ಬಳಕೆಯಾದ ‘ಘನಚೋರತನ’, ‘ಶಿಖಂಡಿ ವಿದ್ಯೆ’, ‘ಲಂಡಿಗಳ ದರ್ಗುಣ’ದಂಥ ಪದಗಳನ್ನು ಗಮನಿಸಿ.
 
ಶೇಣಿ ಗೋಪಾಲಕೃಷ್ಣ ಭಟ್, ತೆಕ್ಕಟ್ಟೆ ಆನಂದ ಮಾಸ್ಟರ್, ಉಡುವೆಕೋಡಿ ಸುಬ್ಬಪ್ಪಯ್ಯ, ಎಂ. ಪ್ರಭಾಕರ ಜೋಶಿ ಮುಂತಾದ ಉದ್ದಾಮ ಕಲಾವಿದರು ಈ ಪದಗಳ ಎಳೆಎಳೆಯನ್ನು ಹಿಡಿದು ತಮ್ಮ ಆಶು ಮಾತುಗಾರಿಕೆಯಲ್ಲಿ ರಾಮನ ವ್ಯಕ್ತಿತ್ವವನ್ನು ಮೌಲ್ಯಮಾಪನ ಮಾಡುತ್ತಿದ್ದರೆ ರಾಮ, ರಾಮಾಯಣಗಳೆಲ್ಲಾ ಬೇರೆಯೇ ಅರ್ಥ ಪಡೆಯುತ್ತವೆ.
 
ಒಂದೆಡೆ ಶೇಣಿ ಹೇಳುತ್ತಾರೆ: ‘ನಿಂತ ನಿಲುವಿನಲ್ಲಿ ಹತ್ತು ಸಾವಿರ ರಕ್ಕಸರನ್ನು  ಕೊಂದು ಹಣೆಯ ಬೆವರೊರೆಸಿಕೊಂಡ ಶೂರ, ಧೀರ, ಲಾಲಿತ ಗಾತ್ರ ರಾಮಾ, ಏನು ಹೆಂಡತಿಯನ್ನು ಕಳೆದುಕೊಂಡಾಗ ಎಲ್ಲವನ್ನೂ ಕಳೆದುಕೊಂಡೆಯೇನೂ?’ ಉಡುವೆಕೊಡಿ ಸುಬ್ಬಪ್ಪಯ್ಯ ಅವರ ವಾಲಿ ಆಡುವ ಮಾತುಗಳನ್ನು ನೋಡಿ: ‘ರಾಮಾ ಕೇಳಿದ್ದೇವೆ ನಿನ್ನ ಬಗ್ಗೆ, ನಿನ್ನ ಹಿರಿಯರ ಬಗ್ಗೆ. ತರಣಿಕುಲದರಸುಗಳು ಪರಮ ಧಾರ್ಮಿಕರು, ಸತ್ಯ ಚರಿತ್ರರು, ಶುದ್ಧವಿಶುದ್ಧ ಗುಣಯುತರು ಅಂತ… ಏನು ಮಾಡುವುದು ಹೇಳು!
 
ಶ್ರೀಗಂಧ ವೃಕ್ಷ ರಾಶಿಗಳ ಮಧ್ಯದಲ್ಲೊಂದು ಒಣ ಕಾಷ್ಠ ಉದ್ಭವಿಸಿದಂತೆ, ಅಲ್ಲ ಶ್ರೀ ತುಳಸಿಯ ತೋಟದಲ್ಲೊಂದು ತುರುಚೆಯ ಗಿಡವು ಹುಟ್ಟಿಕೊಂಡಂತೆ, ಪವಿತ್ರವಾದ ಸೂರ್ಯವಂಶದಲ್ಲಿ ನೀನೊಬ್ಬ ಹುಟ್ಟಿಕೊಂಡೆಯಾ ಹೇಳು?... ಇದು ನನ್ನ ವಧೆಯಲ್ಲ, ನಿನ್ನ ವಧೆ. ಆರ್ಯ ಕುಲದ ಉನ್ನತೋನ್ನತ ಕೀರ್ತಿಯ ವಧೆ. ರಾಮಾ ಮುಖದ ಮೇಲೆ ಮೀಸೆ ಇದೆಯಲ್ಲಾ? ಆದರೆ ಗಂಡಸೇ ಏನು ನೀನು?’ ಇದನ್ನೆಲ್ಲಾ ಕೇಳಿದ ಜನ ರಾಮನ ಬಗ್ಗೆ ತಿರಸ್ಕಾರ ಭಾವನೆ ರೂಪಿಸಿಕೊಳ್ಳಲಿಲ್ಲ. ಯಾರೂ ವಾಲಿಯ ಕಡೆ ‘ಮತಾಂತರ’ ಹೊಂದಲಿಲ್ಲ. 
 
ಪುರಾಣ ಪಾತ್ರಗಳನ್ನು ಮಾತ್ರವಲ್ಲ, ಧರ್ಮಗಳಲ್ಲಿ ಹಾಸುಹೊಕ್ಕಾಗಿರುವ ನಂಬಿಕೆಗಳನ್ನು ಯಕ್ಷಗಾನ ಪಾತ್ರಗಳು ಸದಾ ಪ್ರಶ್ನಿಸುತ್ತಿರುತ್ತವೆ. ಕೃಷ್ಣ ಸಂಧಾನದ  ಕೃಷ್ಣನಾಗಿ ಶೇಣಿಯವರು ಒಂದೆಡೆ ಹೀಗೆ ಹೇಳುತ್ತಾರೆ: ‘ನಾನು ನಿನ್ನವ ಎಂದರೆ ಭಕ್ತಿ. ನಾನು ನಿನ್ನವನಾದ ಕಾರಣ ನೀನು ನನ್ನವ ಎನ್ನುವುದಾದರೆ ಅದು ವ್ಯಾಪಾರ’.
 
ಬೇಡರ ಕಣ್ಣಪ್ಪ ಪ್ರಸಂಗದ ಕೈಲಾಸ ಶಾಸ್ತ್ರಿಯಾಗಿ ಶೇಣಿ ಹೇಳುತ್ತಾರೆ: ‘ಜಗತ್ತಿಗೆ ತಂದೆಯಾಗಿ ಒಬ್ಬ ದೇವರಿದ್ದಾನೆ. ಇನ್ನು ನಾವು ಕಾಣುವ ಈ ಸಾವಿರಾರು ದೇವರುಗಳೆಲ್ಲಾ ಮನುಷ್ಯನ ಸೃಷ್ಟಿ’. ಯಕ್ಷಗಾನ ಮೂಲಭೂತವಾಗಿ ಒಂದು ಆರಾಧನಾ ಕಲೆ. ಅದರ ಆಸ್ತಿಕ  ಚೌಕಟ್ಟಿನಲ್ಲಿ ಇಂತಹ ವಾದಗಳಿಗೆಲ್ಲಾ ಆಸ್ಪದವಿದೆ ಎನ್ನುವುದನ್ನು ಯಾರೂ ಆಕ್ಷೇಪಿಸಿದ್ದಿಲ್ಲ. ಅದು  ಆಸ್ತಿಕರ ನಂಬಿಕೆಯನ್ನು ಅಲುಗಾಡಿಸೀತು ಎಂದು ಯಾರೂ ಕೂಗಾಡಿದ್ದಿಲ್ಲ.
 
‘ಬಪ್ಪನಾಡು ಕ್ಷೇತ್ರ ಮಾಹಾತ್ಮೆ’ ಎಂಬ ಯಕ್ಷಗಾನ ಪ್ರಸಂಗವಿದೆ. ಬಪ್ಪಬ್ಯಾರಿ ಎಂಬ ಮುಸಲ್ಮಾನ ವರ್ತಕನೊಬ್ಬ ದಕ್ಷಿಣ ಕನ್ನಡದ ಮೂಲ್ಕಿಯಲ್ಲಿರುವ ಪ್ರಸಿದ್ಧ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಧಾನವನ್ನು ಕಟ್ಟಿಸಿದ ಅರೆ-ಪೌರಾಣಿಕ- ಅರೆ ಐತಿಹ್ಯ ಆಧಾರಿತ ಕತೆ ಇದು. ಇದರಲ್ಲಿ ಬಪ್ಪಬ್ಯಾರಿಯ ಪಾತ್ರ ನಿರ್ವಹಿಸುತ್ತಿದ್ದದ್ದು ಶೇಣಿ ಗೋಪಾಲಕೃಷ್ಣ ಭಟ್.
 
ಒಂದು ಕಾಲಕ್ಕೆ ಅತ್ಯಂತ ಜನಪ್ರಿಯವಾಗಿದ್ದ ಈ ಪ್ರಸಂಗದಲ್ಲಿ ಶೇಣಿಯವರು ಇಸ್ಲಾಂ ಧರ್ಮದ ಏಕದೈವ ತತ್ವವನ್ನು ಸರಳ ಹಾಸ್ಯ ಮಿಶ್ರಿತ ಶೈಲಿಯಲ್ಲಿ ವಿವರಿಸುತ್ತಾ ಆ ಪಾತ್ರಕ್ಕೆ ಎಲ್ಲಿಲ್ಲದ ಜನಪ್ರಿಯತೆ ತಂದುಕೊಟ್ಟಿದ್ದರು. ‘ನಾನು ಇಸ್ಲಾಂ ಧರ್ಮವನ್ನು ನನ್ನ ಅನನ್ಯತೆಗಾಗಿ ಅನುಸರಿಸುತ್ತೇನೆ. ಎಲ್ಲಾ ಧರ್ಮದವರು ಅವರವರ ಧರ್ಮಕ್ಕೆ ನಿಜ ಅರ್ಥದಲ್ಲಿ ಬದ್ಧರಾಗಿರಬೇಕು’ ಎಂದು ಪ್ರತಿಪಾದಿಸುವ ಬಪ್ಪ ಬ್ಯಾರಿಗೆ ಯಾವ ಧರ್ಮದವರೂ ಅನ್ಯರಾಗಿ ಕಾಣುವುದಿಲ್ಲ.
 
ದೇವಿ ದುರ್ಗಾಪರಮೇಶ್ವರಿಯೊಂದಿಗೆ ಮುಖಾಮುಖಿಯಾದಾಗ ಬಪ್ಪ ಆಕೆಯನ್ನು ಕೈಮುಗಿದು ಸ್ತುತಿಸುವುದಿಲ್ಲ- ‘ಅಲ್ಲಾಹು ಅಕ್ಬರ್’ ಎಂದು ಪ್ರಾರ್ಥಿಸುತ್ತಾ ದೇವಿಯೆದುರು ನಮಾಜ್ ಮಾಡುತ್ತಾನೆ. ದೇವಿಗೆ ಅದೇ ಪ್ರಿಯವಾಗುತ್ತದೆ. ‘ಅಷ್ಟಭುಜ ಪರಮೇಶ್ವರಿಯು ತಾ / ದೃಷ್ಟಿ ಗೋಚರಳಾಗಿ / ಸೃಷ್ಟಿಗೋರ್ವನೇ ದೈವ ನಂಬಿಕೊ/ ರೂಪ ಬೇರೆ ಬೇರೆ’ ಎನ್ನುತ್ತಾ ‘ನನಗೆ ನೀನೇ ಆಲಯ ಕಟ್ಟಿಸಬೇಕು ಮತ್ತು ಆ ಆಲಯಕ್ಕೆ ನಿನ್ನ ಹೆಸರಿಡಬೇಕು’ ಎಂದು ಬಪ್ಪ ಬ್ಯಾರಿಗೆ ದೇವಿ ತಿಳಿಸುತ್ತಾಳೆ.
 
ಹೀಗೆ ಬಪ್ಪ ಪ್ರತಿಪಾದಿಸಿದ ಏಕದೇವೋಪಾಸನೆಯ ತತ್ವಕ್ಕೆ ದೇವಿ ‘ಏಕಂ ಸತ್’ ಎನ್ನುವ ಸಂದೇಶವನ್ನು ಸೇರಿಸುವುದರೊಂದಿಗೆ ಕತೆ ಮುಕ್ತಾಯವಾಗುತ್ತದೆ. ಇನ್ನೊಂದು ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಮುಸ್ಲಿಂ ವರ್ತಕನ ಪಾತ್ರವೊಂದನ್ನು ಕೆಲವೊಮ್ಮೆ ತೀರಾ ಕೀಳಾಗಿ ಚಿತ್ರಿಸುವ ಉದಾಹರಣೆಯೂ ಇದೆ.
 
ಇಂತಹ ಹಲವಾರು ಸ್ಥಳೀಯ ಐತಿಹ್ಯಗಳು ಯಕ್ಷಗಾನ ಪ್ರದರ್ಶನಗಳಾಗಿ ವರ್ಷದುದ್ದಕ್ಕೂ ಪ್ರದರ್ಶನಗೊಳ್ಳುತ್ತವೆ. ಅಲ್ಲಿ ವಿವಿಧ ಧರ್ಮಗಳ ವಿವಿಧ ದೇವಾನುದೇವತೆಗಳನ್ನು ಸ್ತುತಿಸುವ, ಟೀಕಿಸುವ, ಪ್ರಶ್ನಿಸುವ ಆರೋಗ್ಯಕರ ಪರಂಪರೆಯೊಂದು ಹಾಸುಹೊಕ್ಕಾಗಿದೆ. ಅದರ ಮುಂದುವರಿಕೆಯಾಗಿ ಈ  ಏಸುಕ್ರಿಸ್ತ ಮಹಾತ್ಮೆ ಎಂಬ ಪ್ರಸಂಗವನ್ನೂ ಕಾಣಬಹುದು. ಆದರೆ ಈಗ ದಕ್ಷಿಣ ಕನ್ನಡ ಬದಲಾಗಿದೆ. ಆ ಬದಲಾವಣೆ ಅಲ್ಲಿನ ಯಕ್ಷಗಾನ ಕ್ಷೇತ್ರವನ್ನೂ ಬಾಧಿಸುತ್ತಿದೆ.
 
ಯಕ್ಷಗಾನ ಎನ್ನುವುದು ಒಂದು ಕಲೆ ಮಾತ್ರವಲ್ಲ, ಅದು ಆ ಪ್ರದೇಶದ ಒಂದು ಉಪಸಂಸ್ಕೃತಿ. ಅದರೊಳಗೆ ಧರ್ಮವೂ ಇದೆ, ಧರ್ಮನಿರಪೇಕ್ಷತೆಯೂ ಇದೆ. ಅದರೊಳಗೆ ಜಾತಿಯೂ ಇದೆ, ಜಾತ್ಯತೀತತೆಯೂ ಇದೆ. ಅದರೊಳಗೆ ರಾಜಕೀಯ ಅರ್ಥಶಾಸ್ತ್ರವೂ ಇದೆ, ಅಧ್ಯಾತ್ಮವೂ ಇದೆ. ಅದರೊಳಗೆ ಪಾಳೆಗಾರಿಕೆಯೂ ಇದೆ, ಜನತಂತ್ರವೂ ಇದೆ. ಅದರೊಳಗೆ ಪರಸ್ಪರ ಅರ್ಥೈಸಿಕೊಳ್ಳುವ ಮತ್ತು  ಕೊಡು-ಕೊಳ್ಳುವ ದಟ್ಟ ಸಂಬಂಧಗಳ  ಜಾಲ ಇದೆ.
 
ಒಂದು ಕಲೆಯಾಗಿ ಅದರೊಳಗೆ  ಒಳಿತುಗಳಲ್ಲಿ ಕೆಡುಕನ್ನು, ಕೆಡುಕುಗಳಲ್ಲಿ  ಒಳಿತನ್ನು ಮಥಿಸಿ ತೆಗೆಯುವ ಅನ್ವೇಷಣಾಶೀಲತೆ ಇದೆ.  ಯಕ್ಷಗಾನ ಜಗತ್ತು ಏನು, ಅಲ್ಲಿ ಏನು ನಡೆಯುತ್ತದೆ, ಅದರಿಂದ ಯಾವ ಸಂದೇಶ ರವಾನೆಯಾಗುತ್ತದೆ ಎಂದು ಯಕ್ಷಗಾನದ ಹೆಸರು ಮಾತ್ರ ಕೇಳಿದವರಿಗೆ, ಅಥವಾ ಬೆಂಗಳೂರಿನಂತಹ ನಗರಗಳಲ್ಲಿ ನಡೆಯುವ ಕಾಲಮಿತಿ, ತಂತ್ರಮಿತಿ  ಯಕ್ಷಗಾನ ಪ್ರದರ್ಶನ ಕಂಡವರಿಗೆ ಯಾವತ್ತೂ ಅರ್ಥವಾಗಲು ಸಾಧ್ಯವಿಲ್ಲ.  ಹೀಗೆ ಯಕ್ಷಗಾನ ಅರ್ಥವಾಗದ ಮಂದಿ, ಧರ್ಮವನ್ನು ತಮ್ಮ ಮೂಗಿನ ನೇರಕ್ಕೆ ಅರ್ಥೈಸುವ ಕೆಲ ಮಂದಿ ಯಕ್ಷಗಾನ ಜಗತ್ತಿನಲ್ಲಿ ನಡೆಯುವ ಯಾವುದೋ ಒಂದು ಪ್ರಯೋಗ ಮತಾಂಧತೆಗೋ, ಮತಾಂತರಕ್ಕೋ ಕಾರಣವಾಗುತ್ತದೆ ಎಂದು ಗುಲ್ಲು ಎಬ್ಬಿಸುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT