ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದೊತ್ತಡ ಮಾಪಕ ಕೊಳ್ಳುವುದು ಹೇಗೆ?

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಆಧುನಿಕ ಜೀವನ ಶೈಲಿ ಮತ್ತು ಒತ್ತಡಗಳಿಂದಾಗಿ ಅಧಿಕ ರಕ್ತದೊತ್ತಡದಿಂದ ಬಳಲುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ನಗರದಲ್ಲಿ ವಾಸಿಸುತ್ತಿರುವವರಲ್ಲಂತೂ ಇದು ತುಂಬ ಸಾಮಾನ್ಯವಾಗಿಬಿಟ್ಟಿದೆ. ಮನೆಯಲ್ಲೇ ರಕ್ತದೊತ್ತಡ ಅಳೆಯಲು ಹಲವು ಮಾಪಕಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಅಂತಹ ಮಾಪಕ ಕೊಳ್ಳುವ ಮುನ್ನ ಏನೇನನ್ನೆಲ್ಲಾ ಗಮನಿಸಬೇಕು ಎಂಬುದನ್ನು ಈ ಕಿರುಲೇಖನದಲ್ಲಿ ನೋಡೋಣ.

ಹಲವು ನಮೂನೆಯ ರಕ್ತದೊತ್ತಡ ಮಾಪಕಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಪಾದರಸ ಬಳಕೆಯ ಹಳೆಯ ನಮೂನೆಯ ಮಾಪಕಗಳ ಬಳಕೆ ಈಗೀಗ ಇಲ್ಲವಾಗಿಬಿಟ್ಟಿದೆ. ಮನೆಯಲ್ಲಿ ಬಳಸಲು ಆಧುನಿಕ ಡಿಜಿಟಲ್ ಮಾಪಕವೇ ಹೆಚ್ಚು ಸೂಕ್ತ. ಮಣಿಕಟ್ಟು ಅಥವಾ ಬೆರಳಿನ ತುದಿಯಲ್ಲಿ ಅಳತೆ ಮಾಡುವವು ಅಷ್ಟು ನಿಖರವಾಗಿರುವುದಿಲ್ಲ. ತೋಳಿನ ಮೇಲ್ಭಾಗದಲ್ಲಿ ಅಳತೆ ಮಾಡುವವು ಉತ್ತಮ. 

ತೋಳಿನ ಮೇಲ್ಭಾಗದಲ್ಲಿ ಪಟ್ಟಿಯೊಂದನ್ನು (cuff) ಸುತ್ತಿ ರಕ್ತದೊತ್ತಡ ಅಳತೆ ಮಾಡಲಾಗುತ್ತದೆ. ಈ ಪಟ್ಟಿ ಸಾಮಾನ್ಯವಾಗಿ ಮೂರು ಗಾತ್ರಗಳಲ್ಲಿ ದೊರೆಯುತ್ತದೆ. ಅವುಗಳೆಂದರೆ ಚಿಕ್ಕದು (18-22 ಸೆ.ಮೀ.), ಮಧ್ಯಮ (22-32 ಸೆ.ಮೀ.) ಮತ್ತು ದೊಡ್ಡದು (32-45 ಸೆ.ಮೀ.). ಬಹುತೇಕ ಮಾಪಕಗಳ ಜೊತೆ ಮಧ್ಯಮ ಗಾತ್ರದ ಪಟ್ಟಿಯನ್ನು ನೀಡುತ್ತಾರೆ. ಇತರೆ ಗಾತ್ರದ ಪಟ್ಟಿ ಬೇಕಿದ್ದಲ್ಲಿ ಪ್ರತ್ಯೇಕವಾಗಿ ಕೊಳ್ಳಬೇಕು.
    
ಈ ಮಾಪಕಗಳು ರಕ್ತದೊತ್ತಡದ ಜೊತೆ ಹೃದಯ ಬಡಿತವನ್ನೂ ಅಳತೆ ಮಾಡುತ್ತವೆ. ಸಿಸ್ಟಾಲಿಕ್ ಮತ್ತು ಡಯಾಸ್ಟಾಲಿಕ್ ಒತ್ತಡದ ಜೊತೆ ಒಂದು ನಿಮಿಷದಲ್ಲಿ ನಿಮ್ಮ ಹೃದಯ ಎಷ್ಟು ಸಲ ಬಡಿದುಕೊಳ್ಳುತ್ತಿದೆ ಎಂಬ ಮಾಹಿತಿ– ಈ ಮೂರನ್ನು ಅದು ತೋರಿಸುತ್ತದೆ. ಒಂದು ಪುಸ್ತಕ ಇಟ್ಟುಕೊಂಡು ಈ ಮಾಹಿತಿ ಜೊತೆ ಅದನ್ನು ಅಳೆದ ದಿನ ಮತ್ತು ಕಾಲ ಬರೆದಿಟ್ಟುಕೊಂಡರೆ ಸಾಕು. ಇಷ್ಟಕ್ಕೆ ಅತಿ ಸರಳ ಮಾಪಕ ಸಾಕು.

ಮಾರುಕಟ್ಟೆಯಲ್ಲಿ ಹಲವು ಮಾದರಿ ಮತ್ತು ಬೆಲೆಯ ಮಾಪಕಗಳು ದೊರೆಯುತ್ತವೆ. ಮೂರು ಮುಖ್ಯ ಮಾಹಿತಿಯನ್ನೇ ಎಲ್ಲವೂ ನೀಡುವುದು. ಹೆಚ್ಚು ಬೆಲೆಯ ಮಾಪಕಗಳು ಹೆಚ್ಚು ನಿಖರವಾಗಿರುತ್ತವೆ. ಇನ್ನು ಕೆಲವು ಅಧಿಕ ಬೆಲೆಯ ಮಾಪಕಗಳಲ್ಲಿ ಈ ಅಧಿಕ ಬೆಲೆ ಅದರಲ್ಲಿರುವ ಹೆಚ್ಚಿನ ಸೌಲಭ್ಯಗಳಿಗೆ ನೀಡುವ ಬೆಲೆಯಾಗಿರುತ್ತದೆ. ಅಳತೆಗಳನ್ನು ಮೆಮೊರಿಯಲ್ಲಿ ಇಟ್ಟುಕೊಳ್ಳುವುದು ಮತ್ತು ಎಷ್ಟು ಅಳತೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬಹುದು ಎಂಬುದರ ಮೇಲೆ ಮಾಪಕದ ಬೆಲೆ ನಿರ್ಧರಿತವಾಗಿರುತ್ತದೆ.

ಮಾಪಕವನ್ನು ಸರಿಯಾದ ವಿಧಾನದಲ್ಲಿ ಬಳಸಬೇಕು. ಕುರ್ಚಿಯಲ್ಲಿ ಕುಳಿತುಕೊಂಡು ಅಳತೆ ಮಾಡಿದರೆ ಒಳ್ಳೆಯದು. ಯಾವಾಗಲೂ ಒಂದೇ ಕೈಯನ್ನು ಬಳಸಬೇಕು. ತೋಳಿಗೆ ಸುತ್ತಿದ ಪಟ್ಟಿಯಲ್ಲಿ ಇರುವ ತ್ರಿಕೋನ ಚಿಹ್ನೆ ಮುಂದುಗಡೆ ಇದ್ದು, ಅದು ಕೈಮಡಚುವಲ್ಲಿಂದ ಸುಮಾರು ಎರಡು ಸೆ.ಮೀ. ಮೇಲಕ್ಕೆ ಇರಬೇಕು. ಕೈಯನ್ನು ಮೇಜಿನ ಮೇಲೆ ಇಡತಕ್ಕದ್ದು. ಅಳತೆ ಮಾಡುವ ತೋಳು ಮತ್ತು ಹೃದಯ ಒಂದೇ ಮಟ್ಟದಲ್ಲಿರಬೇಕು.

ಅಳತೆ ಮಾಡುವಾಗ ನಿಶ್ಚಲವಾಗಿ ಕುಳಿತು ಸರಿಯಾಗಿ ಉಸಿರಾಡುತ್ತಿರಬೇಕು. ಎರಡು ಮೂರು ಸಲ ಅಳೆಯುವುದಿದ್ದಲ್ಲಿ ಒಂದು ಅಳತೆ ಮಾಡಿದ ನಂತರ ಕನಿಷ್ಠ ಎರಡು ನಿಮಿಷದ ನಂತರ ಇನ್ನೊಂದು ಅಳತೆ ಮಾಡಬೇಕು. ತುಂಬ ಕೆಲಸ ಮಾಡಿದ ತಕ್ಷಣ, ಓಡಿ ಬಂದ ಕೂಡಲೆ, ವ್ಯಾಯಾಮ ಮಾಡಿದ ಕೂಡಲೆ ಅಳತೆ ಮಾಡಬಾರದು. ಅಳತೆ ಮಾಡುವ ಮೊದಲು ಐದು ನಿಮಿಷ ಆರಾಮ ಮಾಡಿರತಕ್ಕದ್ದು.

ಮೊದಲೇ ರಕ್ತದೊತ್ತಡ ಇದ್ದು ಅದೆಷ್ಟಿದೆಯೆಂದು ನೋಡಿದೊಡನೆ ನಿಮ್ಮ ರಕ್ತದೊತ್ತಡ ಮತ್ತಷ್ಟು ಹೆಚ್ಚುವ ಮಂದಿ ನೀವಾದಲ್ಲಿ ನೀವು ಇಂತಹ ಮಾಪಕ ಕೊಳ್ಳುವುದು ಒಳ್ಳೆಯದಲ್ಲ.

ವಾರದ ಆಪ್ (app)

ಬ್ಲಡ್ ಪ್ರೆಶರ್  
ಈ Blood Pressure (My Heart) ಆಂಡ್ರಾಯ್ಡ್‌ ಕಿರುತಂತ್ರಾಂಶ (ಆಪ್) ರಕ್ತದೊತ್ತಡವನ್ನು ದಾಖಲಿಸಲು ಸಹಾಯ ಮಾಡುತ್ತದೆ. ಇದು ಬಳಸಲು ತುಂಬ ಸರಳವಾಗಿದೆ. ಡಯಾಸ್ಟಾಲಿಕ್ ಮತ್ತು ಸಿಸ್ಟಾಲಿಕ್ ಒತ್ತಡದ ಜೊತೆಗೆ ಹೃದಯಬಡಿತವನ್ನು ಸಮಯದ ಜೊತೆ ದಾಖಲಿಸುತ್ತದೆ. ಹಲವು ದಿನ ಹಲವು ಸಮಯಗಳಲ್ಲಿ ಮಾಹಿತಿಯನ್ನು ದಾಖಲಿಸಿದರೆ, ಹಲವು ನಮೂನೆಯಲ್ಲಿ ವಿಶ್ಲೇಷಣೆ, ಗ್ರಾಫ್‌ಗಳನ್ನು ನೀಡುತ್ತದೆ.

ವರದಿಯನ್ನು ಪಿಡಿಎಫ್ ರೂಪದಲ್ಲೂ ನೀಡುತ್ತದೆ, ಇಮೇಲ್ ಮೂಲಕವೂ ಕಳುಹಿಸುತ್ತದೆ. ನಿಜಕ್ಕೂ ಒಂದು ಅತ್ಯುತ್ತಮ ಕಿರುತಂತ್ರಾಂಶ. ನೀವು ಅತಿಯಾದ ಅಥವಾ ಕಡಿಮೆ ರಕ್ತದೊತ್ತಡದಿಂದ ಬಳಲುವವರಾದರೆ ನಿಮ್ಮ ಮನೆಯಲ್ಲಿಯೇ ರಕ್ತದೊತ್ತಡ ಅಳೆಯುವ ಸಾಧನವಿದ್ದಲ್ಲಿ ಈ ಕಿರುತಂತ್ರಾಂಶ ನಿಮಗೆ ಅಗತ್ಯ.

ಗ್ಯಾಜೆಟ್‌ ಸುದ್ದಿ

ಕ್ಯಾಸೆಟ್ಟಿನ ಪುನರಾಗಮನ
ಕ್ಯಾಸೆಟ್ ಬಳಸಿದ ನೆನಪಿದೆಯಾ? ಸೋನಿ ವಾಕ್‌ಮ್ಯಾನ್ ಮತ್ತು ಕ್ಯಾಸೆಟ್ ಒಂದು ಕಾಲದಲ್ಲಿ ತುಂಬ ಜನಪ್ರಿಯವಾಗಿತ್ತು. ಕ್ಯಾಸೆಟ್‌ಗಳನ್ನು ಸಂಗೀತ ಮತ್ತು ವಿಡಿಯೊಗಳಿಗೆ ಮಾತ್ರವಲ್ಲ ಗಣಕಗಳಲ್ಲಿ ಮಾಹಿತಿ ಸಂಗ್ರಹಿಸಿಡಲೂ (ಬ್ಯಾಕ್‌ಅಪ್‌ಗೆ) ಬಳಸಲಾಗುತ್ತಿತ್ತು. ಆದರೆ ಅದೆಲ್ಲ ಹಳೆಯ ಕತೆ. ಆಡಿಯೊ ಮತ್ತು ವಿಡಿಯೊ ಕ್ಯಾಸೆಟ್‌ಗಳ ಕಾಲ ಮುಗಿದಿದೆ. ಗಣಕಗಳಲ್ಲಿ ಬ್ಯಾಕ್‌ಅಪ್‌ಗೂ ಅದು ಬಳಕೆಯಾಗುತ್ತಿಲ್ಲ. ಹಾಗೆಂದು ಬರೆಯುತ್ತಿದ್ದಂತೆ ಹೊಸ ಸುದ್ದಿ ಬಂದಿದೆ.

ಸೋನಿ ಕಂಪೆನಿ ಕ್ಯಾಸೆಟ್ ಒಂದರಲ್ಲಿ ಬರೋಬ್ಬರಿ 135 ಟೆರ್ರಾಬೈಟ್ ಮೆಮೊರಿ ಸಂಗ್ರಹ ಮಾಡುವ ತಂತ್ರಜ್ಞಾನವನ್ನು ಆವಿಷ್ಕರಿಸಿದೆ. 3 ನಿಮಿಷದ ಒಂದು ಹಾಡು ಸುಮಾರು 5 ಮೆಗಾಬೈಟ್‌ನಷ್ಟಿರುತ್ತದೆ. 1024 ಮೆಗಾಬೈಟ್ ಒಂದು ಗಿಗಾಬೈಟ್ ಆಗುತ್ತದೆ. 1024 ಗಿಗಾಬೈಟ್ ಒಂದು ಟೆರ್ರಾಬೈಟ್ ಆಗುತ್ತದೆ. ಅಂದರೆ ಈ ಸೋನಿ ಕ್ಯಾಸೆಟ್‌ನ ಸಂಗ್ರಹ ಶಕ್ತಿ ಎಷ್ಟು ಎಂದು ಅಂದಾಜು ಮಾಡಿಕೊಳ್ಳಿ.

ಗ್ಯಾಜೆಟ್ ತರ್ಲೆ
ಯುವತಿಯೊಬ್ಬಳ ಮನೆಯ ಮುಂದೆ ಪ್ರತಿದಿನ ಒಬ್ಬ ಯುವಕ ನಿಂತುಕೊಂಡು ತನ್ನ ಮೊಬೈಲ್ ಫೋನಿನಲ್ಲಿ ಏನೋ ಮಾಡುತ್ತಿದ್ದ. ಅವನು ದಿನವೂ ತನ್ನ ಮನೆ ಮುಂದೆ ನಿಂತುಕೊಳ್ಳುವುದನ್ನು ಯುವತಿ ಗಮನಿಸಿದಳು. ಆತನಿಗೆ ತನ್ನ ಮೇಲೆ ಇಷ್ಟವಾಗಿದೆ ಎಂದು ಆಕೆ ಅಂದುಕೊಂಡಳು. ಆಕೆಗೂ ಆತ ಇಷ್ಟವಾದ. ತನ್ನ  ತಂದೆ ತಾಯಿಗಳಿಗೆ ಆತನನ್ನು ತೋರಿಸಿದಳು. ಅವರಿಗೂ ಆತ ಇಷ್ಟವಾದ.

ಕೊನೆಗೊಂದು ದಿನ ಆತ ಅವಳ ಮನೆ ಮುಂದೆ ನಿಂತಿದ್ದಾಗ ಈ ಬಗ್ಗೆ ಅವನೊಡನೆ ಮಾತನಾಡಿದಳು. ಆಗ ಆತನಿಗೆ ಆಘಾತವಾಗಿ ಆತ ಹೇಳಿದ –‘ನಿಮ್ಮ ಮನೆಯ ವೈಫೈಗೆ ಪಾಸ್‌ವರ್ಡ್ ಇಲ್ಲ. ನನ್ನ ಫೋನಿನಲ್ಲಿ ಅಂತರಜಾಲ ಸಂಪರ್ಕ ತೆಗೆದುಕೊಂಡಿಲ್ಲ. ಅದಕ್ಕೆ ನಿಮ್ಮ ಮನೆಯ ಮುಂದೆ ನಿಂತುಕೊಂಡು ನಿಮ್ಮ ಮನೆಯ ವೈಫೈಯನ್ನು ಪುಕ್ಕಟೆ ಬಳಕೆ ಮಾಡುತ್ತಿದ್ದೆ. ಮತ್ತೆ ಬೇರೆ ಯಾವ ಉದ್ದೇಶವೂ ನನಗೆ ಇರಲಿಲ್ಲ’.

ಗ್ಯಾಜೆಟ್ ಸಲಹೆ
ಹರ್ಷ ಅವರ ಪ್ರಶ್ನೆ: ಆಡಿಯೊ ಕ್ಯಾಸೆಟ್‌ಗಳನ್ನು ಎಂಪಿ3ಗೆ ಪರಿವರ್ತಿಸಬೇಕು. ಹೇಗೆ?
ಉ:ಈ ಬಗ್ಗೆ ಒಂದು ಪೂರ್ತಿ ಲೇಖನವನ್ನು ಇದೇ ಅಂಕಣದಲ್ಲಿ ನೀಡಲಾಗಿತ್ತು. ಯುಎಸ್‌ಬಿ ಔಟ್‌ಪುಟ್ ಇರುವ ಕ್ಯಾಸೆಟ್ ಪ್ಲೇಯರ್ ಒಂದನ್ನು ಕೊಂಡುಕೊಳ್ಳಿ. ನಾನು ಐಯಾನ್ ಆಡಿಯೊವನ್ನು ಅಮೆರಿಕದಿಂದ ತರಿಸಿದ್ದೆ. ಈಗ ಅಂತಹ ಹಲವು ಮಾದರಿಗಳು ebay.in ನಲ್ಲಿ ದೊರೆಯುತ್ತಿವೆ.

ಅವುಗಳ ಗುಣಮಟ್ಟದ ಬಗ್ಗೆ ಗೊತ್ತಿಲ್ಲ. ಅದರಲ್ಲಿ ಕ್ಯಾಸೆಟ್ ಪ್ಲೇ ಮಾಡಿ ಅದರ ಔಟ್‌ಪುಟ್ ಅನ್ನು ಗಣಕಕ್ಕೆ ಜೋಡಿಸಿ ಗಣಕದಲ್ಲಿ ಯಾವುದಾದರೂ ಉತ್ತಮ ಆಡಿಯೊ ರೆಕಾರ್ಡಿಂಗ್ ತಂತ್ರಾಂಶದ ಮೂಲಕ ರೆಕಾರ್ಡ್ ಮಾಡಿಕೊಂಡು ನಂತರ ಎಂಪಿ3ಗೆ ಪರಿವರ್ತಿಸಿಕೊಳ್ಳಬೇಕು. Aduacity ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT