ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜನಿಯ ಹಿಂದಿ ಚಿತ್ರ

Last Updated 1 ಡಿಸೆಂಬರ್ 2012, 20:44 IST
ಅಕ್ಷರ ಗಾತ್ರ

`ಅಡತ್ತವಾರಿಸ್', `ನೀ ಬರೆದ ಕಾದಂಬರಿ' ಚಿತ್ರಗಳ ಮಧ್ಯೆ ಎರಡು ವರ್ಷಗಳು ಹೇಗೋ ಕಳೆದುಹೋದವು. ಕೌಟುಂಬಿಕ ನೆಮ್ಮದಿ ಮನೆಮಾಡಿತ್ತು. ಶನಿವಾರ ಬಂದರೆ ಸಂಸಾರಸಮೇತ ಮದ್ರಾಸ್‌ನ ಸವೇರಾ ಹೋಟೆಲ್‌ಗೆ ಹೋಗುತ್ತಿದ್ದೆ. ಅಲ್ಲಿ ಎಲ್ಲರೂ ತೃಪ್ತಿಯಾಗುವಷ್ಟು ಈಜಾಡುತ್ತಿದ್ದೆವು. ಉಳಿದ ದಿನಗಳಲ್ಲಿ ರಾಜ್ ಕೋರಮಂಡಲ್ ಹೋಟೆಲ್‌ನಲ್ಲಿ ಉದ್ಯಮದವರ ಸಹವಾಸ ಇದ್ದೇ ಇತ್ತು.

ಹೀಗೆಯೇ ಒಮ್ಮೆ ಸವೇರಾ ಹೋಟೆಲ್‌ಗೆ ನನ್ನ ಅಮ್ಮನನ್ನು ಕೂಡ ಕರೆದುಕೊಂಡು ಹೋಗಿದ್ದೆ. ಊಟದ ನಡುವೆಯೇ ನಾನು ಒಂದು ಬಾಟಲ್ ಬಿಯರ್ ಕುಡಿದೆ. ಅದನ್ನು ಕಂಡ ಅಮ್ಮ, `ಇವನೇನೇ... ಮಕ್ಕಳ ಎದುರಲ್ಲೇ ಕುಡಿಯುತ್ತಾನೆ' ಎಂದು ನನ್ನ ಹೆಂಡತಿಗೆ ದೂರು ಹೇಳಿದರು. ಊಟ ಮುಗಿಯುವಷ್ಟರಲ್ಲಿ ರಾತ್ರಿ 12 ಗಂಟೆಯಾಯಿತು.
ಇಂಪೋರ್ಟೆಡ್ ಹೋಂಡಾ ಕಾರಿನ ಡ್ರೈವರ್ ಸೀಟಿನಲ್ಲಿ ನಾನೇ ಕುಳಿತೆ. ಅಮ್ಮನಿಗೆ ಕುಡಿದು ನಾನು ಗಾಡಿ ಓಡಿಸುತ್ತಿದ್ದೇನೆಂಬ ಭೀತಿ. ಜೆಮಿನಿ ಸರ್ಕಲ್ ಮೂಲಕ ನಮ್ಮ ಮನೆಗೆ ಹೋಗಬೇಕಿತ್ತು. ಅಮ್ಮನನ್ನು ರೇಗಿಸೋಣ ಎಂದುಕೊಂಡು ಬೇಕಂತಲೇ ಕಾರನ್ನು ಆ ಸರ್ಕಲ್‌ನಲ್ಲಿ ಪದೇಪದೇ ಸುತ್ತುಹಾಕಿದೆ. ಕುಡಿದ ಮತ್ತಿನಲ್ಲಿ ಗಾಡಿ ಓಡಿಸುತ್ತಿರುವುದರಿಂದಲೇ ಹೀಗೆ ಆಗುತ್ತಿದೆ ಎಂದು ಅಮ್ಮ ಇನ್ನಷ್ಟು ಗಾಬರಿಗೆ ಒಳಗಾದಳು. ಆಮೇಲೆ ನಾನು, `ಅಮ್ಮ ನಾನು ಕುಡಿದಿರುವುದು ಒಂದು ಬಾಟಲ್ ಬಿಯರ್ ಅಷ್ಟೆ. ನಿಮ್ಮನ್ನೆಲ್ಲಾ ಸುರಕ್ಷಿತವಾಗಿ ಮನೆ ತಲುಪಿಸುತ್ತೇನೆ. ಸುಮ್ಮನೆ ತಮಾಷೆಗೆ ಹೀಗೆ ಮಾಡಿದೆ' ಎಂದೆ. ಆ ಘಟನೆಯನ್ನು ಈಗಲೂ ಮನೆಯವರು ನೆನಪಿಸಿಕೊಂಡು ನಗುತ್ತಿರುತ್ತಾರೆ.

ಅದೇ ಸವೇರಾ ಹೋಟೆಲ್‌ನಲ್ಲಿ ಒಂದು ಶನಿವಾರ ನಾವೆಲ್ಲಾ ಪೂಲ್‌ನಲ್ಲಿ ಈಜುತ್ತಿದ್ದೆವು. ಅಲ್ಲಿಗೆ ರಜನೀಕಾಂತ್ ಬಂದ. ಅವನಿಗೆ ನಾವಲ್ಲಿ ಇರುವ ವಿಷಯವನ್ನು ಯಾರೋ ಹೇಳಿದ್ದರೆಂದು ಕಾಣುತ್ತದೆ; ನಾವಿದ್ದಲ್ಲಿಗೇ ಬಂದ. ಒಂದಿಷ್ಟು ಮಾತುಗಳು ವಿನಿಮಯವಾದ ನಂತರ ಒಂದು ಹಿಂದಿ ಸಿನಿಮಾ ತೆಗೆಯೋಣ ಎಂದ. `ಮಲೈಯೂರು ಮಮ್ಮಟಿಯನ್' ಎಂಬ ತಮಿಳು ಚಿತ್ರವನ್ನು ಹಿಂದಿಯಲ್ಲಿ ಮಾಡಬಹುದು ಎಂದು ಅವನೇ ಸಲಹೆ ಕೊಟ್ಟ. ತ್ಯಾಗರಾಜನ್ ನಟಿಸಿದ್ದ ಆ ಚಿತ್ರ ಸೂಪರ್‌ಹಿಟ್ ಆಗಿತ್ತು.

ಅದನ್ನು ಮಾಡುವುದರ ಕುರಿತು ನನಗೇನೂ ತಕರಾರಿರಲಿಲ್ಲ. ಆದರೆ ಹಿಂದಿಯಲ್ಲಿ ರಜನೀಕಾಂತ್ ಮಾರುಕಟ್ಟೆ ಹೇಗಿದೆ ಎಂಬ ಪ್ರಶ್ನೆ ಮಾತ್ರ ಇತ್ತು. ಯಾಕೆಂದರೆ, ಆಗ ರಜನೀಕಾಂತ್ ಹಿಂದಿಯಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಷ್ಟೆ ನಟಿಸಿದ್ದದ್ದು. ರಜನಿ ಮೇಲಿದ್ದ ಸ್ನೇಹದಿಂದ, ವಿಶ್ವಾಸದಿಂದ ಆ ಸಿನಿಮಾ ಮಾಡಲು ಒಪ್ಪಿದೆ. ಮೂಲ ಚಿತ್ರದ ನಿರ್ಮಾಪಕರನ್ನು ಸಂಜೆಯೇ ಸಂಪರ್ಕಿಸಿ ರೀಮೇಕ್ ಹಕ್ಕು ಪಡೆದುಕೊಂಡೆ. ಅದೇ ಸಂಜೆ 7.30ರ ವಿಮಾನದಲ್ಲೇ ಬಾಂಬೆಗೆ ಹೋದೆ. ಶಬನಾ ಅಜ್ಮಿ, ಸುರೇಶ್ ಒಬೆರಾಯ್, ಖಾದರ್ ಖಾನ್, ಸಾರಿಕಾ, ಅಮರೀಷ್ ಪುರಿಯಂಥ ಘಟಾನುಘಟಿಗಳಿದ್ದ ತಾರಾಗಣವನ್ನು ಪಕ್ಕಾ ಮಾಡಿಕೊಂಡೆ. ಬಪ್ಪಿ ಲಹರಿ ಕೈಲಿ ಸಂಗೀತ ಸಂಯೋಜನೆ ಮಾಡಿಸುವುದೆಂದು ತೀರ್ಮಾನವಾಯಿತು. ಸೀ ರಾಕ್ ಹೋಟೆಲ್‌ನಲ್ಲಿ ಆ ಚಿತ್ರದ ಚರ್ಚೆ ನಡೆಸುತ್ತಿದ್ದೆವು. ಅಲ್ಲಿ ಸಿಗುತ್ತಿದ್ದ ಸಸ್ಯಾಹಾರಗಳ ಪರಿಚಯ ನನಗೆ ಅಷ್ಟಾಗಿ ಇರಲಿಲ್ಲ. ಶಿವರಾಂ ಅವರ ಅಣ್ಣ ರಾಮನಾಥ್ `ಖಡಿ' ಎಂಬ ಖಾದ್ಯ ರುಚಿಯಾಗಿರುತ್ತದೆ; ಅದನ್ನೇ ತಿನ್ನಿ ಎಂದು ಸಲಹೆ ಕೊಟ್ಟರು. ಅಲ್ಲಿಗೆ ನಾನು ಹೋದಾಗಲೆಲ್ಲಾ ಅದನ್ನೇ ತಿನ್ನಲಾರಂಭಿಸಿದೆ. ರಜನಿ ಕೂಡ ಬಾಂಬೆಗೆ ಬಂದ. ಚರ್ಚೆಯಲ್ಲಿ ತೊಡಗಿದ.

ಮಣಿರತ್ನಂ ಅವರ ಅಣ್ಣ ಜೀವಿ ಫೋನ್ ಮಾಡಿ, `ರಜನೀಕಾಂತ್ ಹಾಕಿಕೊಂಡು ಹಿಂದಿ ಸಿನಿಮಾ ಮಾಡುತ್ತಿದ್ದೀರಂತೆ; ನನ್ನ ಸ್ನೇಹಿತರೊಬ್ಬರು ಫೈನಾನ್ಸ್ ಮಾಡುತ್ತಾರಂತೆ. ಅವರೇ ಮಾತನಾಡುತ್ತಾರೆ' ಎಂದು ಅವರ ಕೈಗೆ ಫೋನ್ ಕೊಟ್ಟರು. ಆಯಿತು ಎಂದು ನಾನು ಹೇಳಿದೆನಷ್ಟೆ.

ಇದ್ದಕ್ಕಿದ್ದಂತೆ ಒಂದು ದಿನ ಆ ಫೈನಾನ್ಷಿಯರ್ ತಿಂಡಿಗೆ ನನ್ನನ್ನು ಕರೆದರು. ಅವರಲ್ಲಿಗೆ ಹೋಗಿ, ತಿಂಡಿ ತಿಂದು, ಮಾತುಕತೆ ನಡೆಸಿ, ಹೊರಟೆ. `ಏನು ಹಾಗೆಯೇ ಹೋಗುತ್ತಿದ್ದೀರಿ. ಸ್ವಲ್ಪ ಇರಿ' ಎಂದವರೇ ದುಡ್ಡು ತುಂಬಿಸಿದ ಮೂರು ಸೂಟ್‌ಕೇಸ್‌ಗಳನ್ನು ತಂದರು. ಖುದ್ದು ಅವರೇ ಅವನ್ನು ನನ್ನ ಕಾರಿನ ಡಿಕ್ಕಿಯಲ್ಲಿಟ್ಟರು.

ಆ ಕಾಲದಲ್ಲಿ ಶೂಟಿಂಗ್ ಹಂತಕ್ಕೆ ತಕ್ಕಂತೆ ಕಂತಿನಲ್ಲಿ ಫೈನಾನ್ಷಿಯರ್‌ಗಳು ಹಣಕಾಸಿನ ನೆರವು ನೀಡುತ್ತಿದ್ದರು. ಅವರು ಮಾತ್ರ ಒಂದೇ ಸಲ ಅಷ್ಟೂ ಹಣವನ್ನು ಕೊಟ್ಟರು.
`ಗಂಗ್ವಾ' ಎಂದು ಚಿತ್ರಕ್ಕೆ ಹೆಸರಿಟ್ಟೆವು. ವಾಹಿನಿ ಸ್ಟುಡಿಯೋದಲ್ಲಿ ಸೆಟ್ ಹಾಕಿಸಿದೆ.

ಮುಹೂರ್ತದ ದಿನವೇ ಬಾಂಬೆಯ ಪ್ರಮುಖ ವಿತರಕ ಸಂಸ್ಥೆಯಾದ `ವಿಐಪಿ ಡಿಸ್ಟ್ರಿಬ್ಯೂಟರ್ಸ್‌'ನವರೂ ಸೇರಿದಂತೆ ಅನೇಕರು ಬಂದರು. ವಿವಿಧ ಪ್ರದೇಶಗಳಿಗೆ ಚಿತ್ರದ ವಿತರಣೆಯ ಹಕ್ಕಿನ ಪ್ರಸ್ತಾಪವೂ ನಡೆಯಿತು. ಜಿತೇಂದ್ರ, ರಿಶಿ ಕಪೂರ್ ಮೊದಲಾದ ದೊಡ್ಡ ನಟರು ಕೂಡ ಮುಹೂರ್ತಕ್ಕೆ ಸಾಕ್ಷಿಯಾದರು.

ಆಮೇಲೆ ನಮ್ಮ ಚಿತ್ರೀಕರಣ ಮೆಟ್ಟುಪಾಳ್ಯಂನಲ್ಲಿ ನಿಗದಿಯಾಯಿತು. ಅಲ್ಲಿ ಸುಸಜ್ಜಿತ ಹೋಟೆಲ್ ಇರಲಿಲ್ಲ. ಹಾಗಾಗಿ ಕೊಯಮತ್ತೂರಿನ ಪಂಚತಾರಾ ಹೋಟೆಲ್‌ನಲ್ಲೇ ಇಳಿದುಕೊಂಡೆವು. ದಿನ ಬೆಳಿಗ್ಗೆ 4ಕ್ಕೇ ಎದ್ದು ಚಿತ್ರೀಕರಣಕ್ಕೆ ಹೊರಡಬೇಕಿತ್ತು. ರಜನಿಗೆ ಅದು ಕಷ್ಟವೆನ್ನಿಸತೊಡಗಿತು. ಮೆಟ್ಟುಪಾಳ್ಯಂನಲ್ಲೇ ಒಂದು ರೂಮ್ ಮಾಡಿಕೊಡಿ ಎಂದು ಕೇಳಿಕೊಂಡ. ಅಲ್ಲಿ `ಟ್ಯಾನ್ ಇಂಡಿಯಾ' ಎಂಬ ಕಂಪೆನಿಯ ಗೆಸ್ಟ್ ಹೌಸ್ ಇತ್ತು. ಅಲ್ಲಿ ತಂಗಬಹುದೇ ಎಂದು ಕೇಳಿದೆ. ಅದಕ್ಕೆ ರಜನಿ ಒಪ್ಪಲಿಲ್ಲ. ಅವರು ಕಾಲ್‌ಷೀಟ್‌ಗೆ ದುಂಬಾಲು ಬೀಳುತ್ತಾರೆಂದು ಹೇಳಿ, ಬೇರೆ ಹೋಟೆಲ್ ಮಾಡಿ ಎಂದ. ರೈಲ್ವೆ ನಿಲ್ದಾಣದ ಪಕ್ಕ ಸಣ್ಣ ಹೋಟೆಲ್ ಇತ್ತು. ಮಲಗಿದರೆ ಕಾಲು ಬಚ್ಚಲುಮನೆಗೆ ಹೋಗುವಷ್ಟು ಸಣ್ಣ ಕೋಣೆಗಳಿದ್ದ ಹೋಟೆಲ್ ಅದು. ವಿಧಿಯಿಲ್ಲದೆ ಅಲ್ಲಿಯೇ ರೂಮ್ ಮಾಡಿದೆ. ನಾನೂ ತನ್ನ ಜೊತೆ ಇರಬೇಕು ಎಂದು ರಜನಿ ಪಟ್ಟುಹಿಡಿದ. 20 ದಿನ ಅಲ್ಲಿಯೇ ನಮ್ಮ ವಾಸ.

ಅದು ಹಿಂದಿ ಸಿನಿಮಾ ಆದ್ದರಿಂದ ರಜನಿ ನಿತ್ಯ ರಾತ್ರಿ ಮರುದಿನದ ದೃಶ್ಯಗಳ ಸಂಭಾಷಣೆಯನ್ನು ಹೇಳಿಕೊಂಡು ಅಭ್ಯಾಸ ಮಾಡುತ್ತಿದ್ದ. ಅದಕ್ಕೇ ಹೆಚ್ಚು ಕಾಲಾವಕಾಶ ಬೇಕೆಂಬ ಕಾರಣಕ್ಕೇ ಅವನು ಅಲ್ಲಿ ರೂಮ್ ಮಾಡುವಂತೆ ಪಟ್ಟುಹಿಡಿದದ್ದು. ಶಾಲನ್ನು ಹೊದ್ದುಕೊಂಡು ಅಭಿನಯಿಸುವ ದೃಶ್ಯಗಳು ಆ ಚಿತ್ರದಲ್ಲಿದ್ದವು. ಆ ದೃಶ್ಯಗಳ ಸಂಭಾಷಣೆ ಅಭ್ಯಾಸ ಮಾಡುವಾಗ, ರಜನಿ ಶಾಲನ್ನು ತನ್ನದೇ ವಿಧವಿಧವಾದ ಸ್ಟೈಲ್‌ನಲ್ಲಿ ಹಾಕಿಕೊಂಡು ರಾತ್ರಿ ರಿಯಾಜು ನಡೆಸುತ್ತಿದ್ದ. ಸಿನಿಮಾ ಕುರಿತು ಅವನಿಗೆ ಅಷ್ಟರ ಮಟ್ಟಿಗೆ ಶ್ರದ್ಧೆ ಇತ್ತು. ಶಬನಾ ಅಜ್ಮಿ, `ನಿಜಕ್ಕೂ ಇವರು ಕಂಡಕ್ಟರ್ ಆಗಿದ್ದರಾ' ಎಂದು ಮುಖದಲ್ಲಿ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿಕೊಂಡು ಕೇಳಿದ್ದರು. ಬೆಂಗಳೂರಿನಲ್ಲಿ ರಜನಿ ಕಂಡಕ್ಟರ್ ಆಗಿದ್ದದ್ದು ಸತ್ಯ ಎಂಬುದನ್ನು ಅವರಿಗೆ ಹೇಳಿದೆ.

ಕೂನೂರಿನ ಬೆಟ್ಟತಪ್ಪಲಿನ ಕೆಳಭಾಗದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಒಂದು ದಿನ ಎಲ್ಲರೂ ಬೆಳಿಗ್ಗೆ ಸಿದ್ಧರಾದರೂ ಮಳೆ ನಿಲ್ಲಲಿಲ್ಲ. 12ರ ಹೊತ್ತಿಗೆ ಬಿಸಿಲು ಬಂದದ್ದು. ಲೈಟಿಂಗ್ ಮಾಡಿ, ಕ್ಯಾಮೆರಾಗಳನ್ನು ಸಿದ್ಧಪಡಿಸಿಕೊಂಡು ಶಾಟ್ ತೆಗೆಯೋಣ ಎಂದು ಸುರೇಶ್ ಒಬೆರಾಯ್ ಅವರನ್ನು ಕರೆದರೆ, ಅವರು ಊಟ ಮಾಡುತ್ತಿದ್ದರು. ಒಂದಿಷ್ಟು ಗಂಟೆ ಚಿತ್ರೀಕರಣ ನಡೆಯಲಿಲ್ಲವಲ್ಲ ಎಂದು ಮೊದಲೇ ಯೋಚನೆಯಲ್ಲಿದ್ದ ನನಗೆ ಸಿಟ್ಟು ನೆತ್ತಿಗೇರಿತು. ಕೂಗಾಡಿದೆ. `ನಿರ್ದೇಶಕರು ಬ್ರೇಕ್ ಹೇಳುವ ಮೊದಲೇ ಯಾರ‌್ರೀ ನಿಮಗೆ ಊಟ ಮಾಡಲು ಹೇಳಿದ್ದು' ಎಂದುಬಿಟ್ಟೆ. ಊಟದ ಮಧ್ಯೆ ನಾನು ಹಾಗೆ ಮಾತನಾಡಬಾರದಿತ್ತು. ಆ ಮಾತು ಕೇಳಿದ್ದೇ ಸುರೇಶ್ ತಿನ್ನುತ್ತಿದ್ದ ತಟ್ಟೆಯನ್ನು ಜೋರಾಗಿ ಎಸೆದರು. ಬೆಟ್ಟದ ಮೇಲಿದ್ದ ಜನರೇಟರ್ ವ್ಯಾನ್ ಹತ್ತಿ ಮಲಗಿಬಿಟ್ಟರು.

ಅಲ್ಲಿದ್ದವರಲ್ಲಿ ನೀರವಮೌನ. ರಜನಿ ಕೂಡ ಚಕಿತನಾದ. ನಾನು ಆ ವ್ಯಾನ್ ಹತ್ತಿ ಅರ್ಧ ಗಂಟೆ ಸುರೇಶ್‌ಗೆ ಪೂಸಿ ಹೊಡೆದೆ. ಮೊದಲೇ ಒತ್ತಡದಲ್ಲಿದ್ದೆ. ಹಾಗಾಗಿ ಆ ರೀತಿ ಮಾತನಾಡಿದೆ ಎಂದು ಸಮಾಧಾನ ಮಾಡಿದೆ. ಆಮೇಲೆ ಸುರೇಶ್ ಕೋಪ ಬಿಟ್ಟು ಚಿತ್ರೀಕರಣಕ್ಕೆ ಬಂದರು. ಆ ನಂತರ ಸುರೇಶ್ ನನ್ನ ಸ್ನೇಹಿತರಾದರು.

ಮೂರು ತಿಂಗಳಲ್ಲಿ `ಗಂಗ್ವಾ' ಸಿದ್ಧವಾಯಿತು. 160 ಪ್ರಿಂಟ್‌ಗಳನ್ನು ಹಾಕಿಸಿ, ಬಿಡುಗಡೆ ಮಾಡಿದೆ. ಸುಮಾರು ಒಂದು ಒಂದೂವರೆ ಕೋಟಿ ರೂಪಾಯಿ ನಷ್ಟವಾಯಿತು. ರಜನಿ ಸ್ನೇಹಕ್ಕೆ ಬೆಲೆ ಕೊಟ್ಟು ಮಾಡಿದ ಆ ಚಿತ್ರ ಕಟ್ಟಿಕೊಟ್ಟ ಕ್ಷಣಗಳನ್ನು ಮಾತ್ರ ಮರೆಯಲು ಸಾಧ್ಯವೇ ಇಲ್ಲ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT