ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರತ್ನಮಣಿ ಮೊಲಕ್ಕೆ ಚಂದ್ರನೆಲವೇ ಆಡುಂಬೊಲ

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ನಮ್ಮ ‘ಇಸ್ರೊ’ ವಿಜ್ಞಾನಿಗಳು ಮಂಗಳ­ಯಾನ ನೌಕೆಯನ್ನು ಸೌರಪಥದಗುಂಟ ಓಡಿಸುತ್ತಿರುವಾಗಲೇ ಅತ್ತ ಚೀನೀಯರು
ಚಂದ್ರ­ನ ಮೇಲೆ ಗಾಡಿ ಇಳಿಸಿದ್ದಾರೆ. ಚೀನೀಯರ ಗಾಡಿ ಭೂಮಿಯಿಂದ ಮೂರುವರೆ ಲಕ್ಷ ಕಿಲೊ­ಮೀಟರ್ ದೂರದಲ್ಲಿನ ಚಂದ್ರನೆಲದಲ್ಲಿ ಮೆಲ್ಲಗೆ ಚಲಿಸು­ತ್ತಿದ್ದರೆ ನಮ್ಮದು ಮೂರು ಕೋಟಿ ಕಿ.ಮೀ. ದೂರದಲ್ಲಿ ಗಂಟೆಗೆ ಲಕ್ಷ ಕಿ.ಮೀ. ವೇಗ­ದಲ್ಲಿ ಓಡುತ್ತಿದೆ.

ಜೂಜಿನ ಕುದುರೆಗಳಂತೆ ಬಾಹ್ಯಾ­ಕಾಶ­ದಲ್ಲಿ ಹೊಸದೊಂದು ಪೈಪೋಟಿ ನಡೆಯುತ್ತಿದೆ. ಎರಡೂ ರಾಷ್ಟ್ರಗಳ ವೀಕ್ಷಕರು ತಂತಮ್ಮ ಪಂಟರ್‌ಗಳಿಗೆ ‘ಶಾಭಾಸ್’, ‘ಬಕ್‌ಅಪ್’ ಎಂದು ಉಘೇರಿಸುವಂತಾಗಿದೆ. ಅದರ ಅಂಗವಾಗಿಯೊ ಎಂಬಂತೆ ‘ಇಸ್ರೊ’ ಮುಖ್ಯಸ್ಥ ಎಸ್.ಕೆ. ಶಿವಕುಮಾರರಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ ನಾಡಿದ್ದು ‘ನಾಡೋಜ’  ನೀಡಿ ಗೌರವಿಸಲಿದೆ.

ಐವತ್ತು ವರ್ಷಗಳ ಹಿಂದೆ ಅಮೆರಿಕ ಮತ್ತು ಸೋವಿಯತ್ ಸಂಘದ ನಡುವೆ ಇಂಥದ್ದೇ ಪೈಪೋಟಿ ನಡೆದಿತ್ತು. ತಿಂಗಳಿಗೊಂದೊಂದರಂತೆ ಗಗನ­ನೌಕೆಗಳು ಬಾಹ್ಯಾಕಾಶಕ್ಕೆ ಚಿಮ್ಮುತ್ತಿದ್ದವು. ಈಗ ಭಾರತ ಮತ್ತು ಚೀನಾಗಳ ಸರದಿ.

ಮಂಗಳ­ನ ಕಕ್ಷೆಯತ್ತ ತನ್ನ ನೌಕೆಯನ್ನು ಕಳಿಸುವಲ್ಲಿ ಚೀನಾ ವಿಫಲವಾಗಿದೆಯಾದರೂ ಬಾಹ್ಯಾಕಾಶ ಸಾಹಸ­ಗಳಲ್ಲಿ ಅದು ನಮಗಿಂತ ಅದೆಷ್ಟೊ ಮುಂದಿದೆ. ಈಗಾಗಲೇ ಇಬ್ಬರು ಮಹಿಳಾ ಗಗನ­ಯಾನಿಗಳು ಕಕ್ಷೆಯನ್ನು ಸುತ್ತಿ ಬಂದಿದ್ದಾರೆ. ಆರು ತಿಂಗಳ ಹಿಂದೆ ಶೆಂಝೌ ನೌಕೆಯ ಮೇಲೆ ಸವಾರಿ ಮಾಡುತ್ತಿದ್ದ ಮಹಿಳೆ ವಾಂಗ್ ಯಾಪಿಂಗ್ ಅಲ್ಲಿ ಕೂತಂತೆಯೇ ಚೀನಾದ ಶಾಲಾ ಮಕ್ಕಳಿಗೆ ಖಗೋಲವಿಜ್ಞಾನದ ಪಾಠ ಹೇಳಿದ್ದಳು. ಕೈಯಲ್ಲಿ ಒಮ್ಮೆ ಬುಗುರಿ ಯನ್ನು ಹಿಡಿದು, ಮತ್ತೊಮ್ಮೆ ಚೆಂಡು ತಿರುಗಿಸಿ, ಮಗದೊಮ್ಮೆ ನೀರನ್ನು ಮಲ್ಲಿಗೆ ಮಾಲೆಯಂತೆ ಅತ್ತಿತ್ತ ಓಲಾಡಿಸಿ ಗುರುತ್ವದ ಚಮತ್ಕಾರವನ್ನು ಮಕ್ಕಳಿಗೆ ತೋರಿಸಿದ್ದಳು. ಶೂನ್ಯ ಗುರುತ್ವದಲ್ಲಿ ವಿಶೇಷ ತಕ್ಕಡಿ ಬಳಸಿ ತೂಕ ಅಳೆಯುವುದು ಹೇಗೆಂದು ವಿವರಿಸಲೆಂದು ನೌಕೆಯ ಕಮಾಂಡರ­ನನ್ನೇ ತೂಗಿದ್ದಳು. ನೀರಿನ ಮಾಲೆಯನ್ನು ಮುದುರಿಸಿ, ರೊಟ್ಟಿಯಂತೆ ತಟ್ಟಿ ಅದನ್ನು ಕಲಕಿ ಪಾರದರ್ಶಕ ಚೆಂಡನ್ನಾಗಿ ಮಾಡುತ್ತ ಚೀನಾದ ಆರು ಕೋಟಿ ಮಕ್ಕಳಿಂದ ಚಪ್ಪಾಳೆ ಗಿಟ್ಟಿಸಿದ್ದಳು.

ಚೀನಾ ಈಗಾಗಲೇ ಆರು ಬಾರಿ ಯಾತ್ರಿ­ಗಳನ್ನು ಬಾಹ್ಯಾಕಾಶಕ್ಕೆ ಕಳಿಸಿದೆ. ಅಲ್ಲಿ ‘ಟಿಯಾಂಗಾಂಗ್೧’ ಹೆಸರಿನ ಅಟ್ಟಣಿಗೆಯನ್ನೂ ನಿರ್ಮಿಸಿದೆ. ಶೆಂಝೌ ನೌಕೆ ನಾಲ್ಕು ಬಾರಿ ಅಲ್ಲಿಗೆ ಹೋಗಿ ಈ ಮಾಳಕ್ಕೆ ಅಂಟಿಕೊಂಡು ಗಗನಯಾತ್ರಿಗಳ ವಿನಿಮಯ ಮಾಡಿಕೊಂಡಿದೆ. ಅಮೆರಿಕದವರೂ ಮಾಡಿರದ ಸಾಹಸಗಳನ್ನು ಮಾಡಿ ತೋರಿಸಿದೆ.

ಮಕ್ಕಳಿಗೆ ಪಾಠ ಹೇಳಿದ ವಾಂಗ್ ತಾನು ಕೂತಿದ್ದ ಶೆಂಝೌ ನೌಕೆಯಿಂದ ಟಿಯಾಂಗಾಂಗ್ ಮಾಳದ ಒಳಕ್ಕೆ ಹೊಕ್ಕು, ಶೆಂಝೌ ನೌಕೆಯನ್ನು ಕಳಚಿ ಬೇರ್ಪಡಿಸಿದ್ದಾಳೆ. ಆಮೇಲೆ ತಾನೂ ಮಾಳದಿಂದ ಹೊರಬಿದ್ದು ಬಾಹ್ಯಾ­ಕಾಶದಲ್ಲಿ ತೇಲುತ್ತ, ಶೆಂಝೌ ನೌಕೆಯ ಪ್ರದಕ್ಷಿಣೆ ಹಾಕಿ ಅದನ್ನು ತುಸು ತಳ್ಳಿ ಜಗ್ಗಿ ಮತ್ತೆ ಕೈಯಾರೆ ಅದನ್ನು ಅಟ್ಟಣಿಗೆಗೆ ಜೋಡಿಸಿದ್ದಾಳೆ.

ಈಗ ಚಂದ್ರನೆಲದಲ್ಲಿ ಗಾಡಿ ಇಳಿಸಿ ಓಡಾಡಿಸಿ­ದ ಸಾಧನೆಯೂ ಸಾಮಾನ್ಯದ್ದೇನಲ್ಲ. ಅದನ್ನು ತುಸು ನೋಡೋಣ: ನಾವು ಎಎಸ್‌ ಎಲ್‌ವಿ ಅಥವಾ ಪಿಎಸ್‌ಎಲ್‌ವಿ ರಾಕೆಟ್ಟನ್ನು ಬಳಸಿದ ಹಾಗೆ ಅವರು ‘ಲಾಂಗ್‌ಮಾರ್ಚ್’ ಹೆಸರಿನ ಕ್ಷಿಪಣಿಯಲ್ಲಿ ಉಪಗ್ರಹಗಳನ್ನಿಟ್ಟು ಚಿಮ್ಮಿಸು­ತ್ತಾರೆ. ಹಿಂದೆ ಎರಡು ಬಾರಿ ಚಂದ್ರತ್ತ ಮೇಲೆ ‘ಚಾಂಗಿ’ಯನ್ನು ಬೀಳಿಸಿದ್ದರು. ಈ ಬಾರಿ ಕ್ಷಿಪಣಿ­ಯೊಳಗೆ ‘ಚಾಂಗಿ೩’, ಚಾಂಗಿಯೊಳಗೆ ಚಂದ್ರ­ಗಾಡಿ­ಯನ್ನೂ ಜೋಡಿಸಿ ಉಡಾವಣೆ ಮಾಡಿ­ದ್ದರು. ಹನ್ನೆರಡು ದಿನಗಳ ಬಳಿಕ ಚಾಂಗಿ೩ ಅಲ್ಲಿಗೆ ಹೋಗಿ ಚಂದ್ರನ ಸುತ್ತ ಸುತ್ತಿ ಆನಂತರ ಉಲ್ಟಾ ರಾಕೆಟ್ ಉರಿಸುತ್ತ ಮೆಲ್ಲಗೆ ಕೆಳಕ್ಕಿಳಿದು ನಾಲ್ಕು ಕಾಲುಗಳನ್ನು ಊರಿ ನಿಂತಿತು. ಅದು ಈಗ ಚಂದ್ರಗೂಡು (ಲ್ಯಾಂಡರ್) ಎನ್ನಿಸಿ­ಕೊಂಡಿತು.

ಇಳಿದು ಕೆಲ ನಿಮಿಷಗಳ ನಂತರ ತನ್ನ ಬಾಗಿಲನ್ನು ತೆರೆದು ಒಂದು ಪುಟ್ಟ ಜಾರುಬಂಡಿ­ಯನ್ನು ನೆಲಕ್ಕೆ ಚಾಚಿತು. ಗೂಡಿನಿಂದ ಹೊರ­ಬಂದ ೧೨೦ ಕಿಲೊ ತೂಕದ ಚಂದ್ರಗಾಡಿ (ರೋವರ್) ಜಾರುಬಂಡಿಯ ಮೂಲಕ ಕೆಳಕ್ಕಿಳಿದು ತನ್ನ ಆರು ಚಕ್ರಗಳನ್ನು ಉರುಳಿಸುತ್ತ ಚಂದ್ರ­ನೆಲದ ಪುಡಿದೂಳಿನ ಮೇಲೆ ತುಸು ದೂರ ಸಾಗಿತು. ಎರಡೂ ವಾಹನಗಳು ಸೋಲಾರ್ ರೆಕ್ಕೆಗಳನ್ನು ಬಿಚ್ಚಿಕೊಂಡು ಪರಸ್ಪರರ ಫೋಟೊ ತೆಗೆದು ಭೂಮಿಗೆ ರವಾನಿಸಿದವು. ಚಂದ್ರನ ಮೇಲೆ ಹೀಗೆ ಮೆಲ್ಲಗೆ ನೌಕೆಯನ್ನು ಇಳಿಸಿದ್ದೇ ಒಂದು ಸಾಹಸ. ೩೭ ವರ್ಷಗಳ ಹಿಂದೆ ೧೯೭೬ರಲ್ಲಿ ರಷ್ಯನ್ನರು ಇಳಿಸಿದ್ದ ‘ಲೂನಾಖೋಡ್೨’ ಎಂಬುದೇ ಕೊನೆಯದಾ­ಗಿತ್ತು. ನಂತರ ಈಚಿನವರೆಗೂ ಯಾರೂ ಅತ್ತ ನೋಡಿ­ರಲಿಲ್ಲ. ನಾವು ಕಳಿಸಿದ ‘ಚಂದ್ರಯಾನ೧’ ಚಂದ್ರನನ್ನು ಸುತ್ತಿ, ತಾನು ಕೊಂಡೊಯ್ದಿದ್ದ ಶೋಧಡಬ್ಬಿಯನ್ನು ಅಲ್ಲಿ ಬೀಳಿಸಿತ್ತು ಅಷ್ಟೆ.

ಚೀನೀಯರು ತಮ್ಮ ಚಂದ್ರಗಾಡಿಗೆ ‘ಯು ಟು’ ಎಂದು ಹೆಸರಿಟ್ಟಿದ್ದಾರೆ. ಅದರ ಅರ್ಥ ರತ್ನ­ಮಣಿ ಮೊಲ ಅಥವಾ ಜೇಡ್ ರ್‍ಯಾಬಿಟ್. ಅವರ ಪುರಾಣಗಳ ಪ್ರಕಾರ ಬೇಡನೊಬ್ಬನ ಹೆಂಡತಿ ‘ಚಾಂಗಿ’ ಎಂಬವಳು ಅದೆಂಥದೊ ಮಂತ್ರದ ಕಷಾಯ ಕುಡಿದು ನೆಲಬಿಟ್ಟು ಮೇಲೇರಿ ಚಂದ್ರ­ಲೋಕವನ್ನು ಸೇರುತ್ತಾಳೆ. ಹಾಗೆ ಮೇಲೇರು­ವಾಗ ತಾನು ಸಾಕಿಕೊಂಡಿದ್ದ ‘ಯು ಟು’ ಹೆಸರಿನ ಮೊಲವನ್ನೂ ಜೊತೆಗೇ ಒಯ್ಯುತ್ತಾಳೆ. ಚಂದ್ರ­ನೆಲದಲ್ಲಿ ಓಡಾಡಬೇಕಿರುವ ಗಾಡಿಗೆ ಯಾವ ಹೆಸರಿಡೋಣ ಎಂದು ಚೀನಾ ಸರ್ಕಾರ ತನ್ನ ಪ್ರಜೆ­­ಗಳಿಗೆ ಕೇಳಿದಾಗ ೩೪ ಲಕ್ಷ ಜನರು ಈ ಹೆಸರ­ನ್ನೇ ಸೂಚಿಸಿದ್ದರಂತೆ.

ಈ ಮೊಲ ಅಲ್ಲಿ ಓಡಾಡು­ತ್ತ ಚಂದ್ರನೆಲಕ್ಕೆ ಲೇಸರ್ ಕಿರಣಗಳನ್ನು ತೂರಿಸಿ ಅಲ್ಲಿ­ರುವ ಖನಿಜಗಳ ಅಧ್ಯಯನ ಮಾಡುತ್ತದೆ­ಯಂತೆ. ತನ್ನಲ್ಲಿರುವ ಟೆಲಿಸ್ಕೋಪನ್ನು ಬಿಚ್ಚಿ ಇತರ ಗ್ರಹಗಳನ್ನೂ ತಾರೆಗಳನ್ನೂ ನೋಡುತ್ತ­ದಂತೆ. ಅದು ಅಲ್ಲಿ ನೋಡಿದ್ದೆಲ್ಲ ಇಲ್ಲಿಯೂ ಕಾಣುತ್ತದಂತೆ.

ಚೀನೀಯರೆಂದರೆ ಸಾಮಾನ್ಯರಲ್ಲ. ಆರೂವರೆ ಸಾವಿರ ವರ್ಷಗಳ ಹಿಂದೆ, ಇತರೆಲ್ಲ ಜನಾಂಗ­ಗಳೂ ಶಿಲಾಯುಗದಲ್ಲಿದ್ದಾಗಲೇ ಇವರು ಬೇಸಾಯ ಕಲಿತರು. ಬೆಕ್ಕು, ನಾಯಿ, ಹಂದಿ, ಬಾತು­ಕೋಳಿ­ಗಳನ್ನು ಸಾಕತೊಡಗಿದ್ದರು. ಈಜಿಪ್ತ್‌­ನಲ್ಲಿ ನಾಗರಿಕತೆ ಅರಳುವ ಮುನ್ನವೇ ಇಲ್ಲಿ ಬರವಣಿಗೆ, ಕಾಗದ, ಮುದ್ರಣ ತಂತ್ರಜ್ಞಾನ, ದಿಕ್ಸೂಚಿ, ಬಂದೂಕು ಮದ್ದು, ನದಿ-ಕಾಲುವೆಗಳಿಗೆ ಬಾಗಿಲು ಬೀಗ ಎಲ್ಲ ಬಳಕೆಗೆ ಬಂದವು. ಭಾರೀ ಗಾತ್ರದ ಹಡಗುಗಳನ್ನು ನಿರ್ಮಿಸು­­ವಲ್ಲೂ ಅವರು ನಿಷ್ಣಾತರಾಗಿದ್ದರು.

ಆರು­ನೂರು ವರ್ಷಗಳ ಹಿಂದೆಯೇ ಜಗತ್ತಿನ ಮೊದಲ ರಾಕೆಟ್ ಉಡಾಯಿಸಿದ ಚೀನೀಯರ ಇತಿಹಾಸದಲ್ಲಿ ಇದು ಇದೆ. ಆಗಿನ ಮಿಂಗ್ ರಾಜವಂಶದ ವಾನ್ ಹೂ ಎಂಬ ಸಾಹಸಿ ತಾನೇ ರಾಕೆಟ್ ಮೇಲೆ ಹೊರಟಿದ್ದ. ಬಂದೂಕು ಮದ್ದು ತುಂಬಿದ ಬಿದಿರಿನ ೪೭ ಬೊಂಬುಗಳನ್ನು ವೃತ್ತಾಕಾರ ಜೋಡಿಸಿ ಅದರ ತುದಿಗೆ ಕುರ್ಚಿ ಬಿಗಿದು, ಎರಡೂ ಕೈಗಳಲ್ಲಿ ಗಾಳಿ ಪಟಗಳನ್ನು ಹಿಡಿದು ಕೂತಿದ್ದಾಗ ೪೭ ರಾಜಸೇವಕರು ಏಕ­ಕಾಲಕ್ಕೆ ಬೊಂಬಿನ ಸಿಡಿಮದ್ದಿಗೆ ಬೆಂಕಿ ಕೊಟ್ಟರು. ಸರಣಿ ಸ್ಫೋಟದ ನಂತರ ಹೊಗೆಯೆಲ್ಲ ಹೋದಮೇಲೆ ವಾನ್ ಹೂ ಕಾಣೆಯಾದ.

ಮುಂದಿನ ಆರುನೂರು ವರ್ಷಗಳವರೆಗೆ ಚೀನಾದ ರಾಕೆಟ್ ತಂತ್ರಜ್ಞಾನವೂ ಕಾಣೆ­ಯಾಯಿತು. ಆದರೆ ಚಂದ್ರನತ್ತ ಹಾರಿ ಹೋಗುವ ಕನಸು ಮಾತ್ರ ಮರೆಯಾಗಲಿಲ್ಲ. ಮಾವೊ ಯುಗದಲ್ಲಿ ಮತ್ತೆ ಈ ಕನಸಿಗೆ ಚಾಲನೆ ಸಿಕ್ಕಿತು. ೧೯೬೯ರಲ್ಲಿ ಅಮೆರಿಕನ್ನರು ಚಂದ್ರನ ಮೇಲೆ ಕಾಲಿಟ್ಟ ಮರುವರ್ಷವೇ ಚೀನೀಯರೂ ಉಪಗ್ರಹ ಉಡಾಯಿಸಿದರು. ‘ಲಾಂಗ್ ಮಾರ್ಚ್’ ಹೆಸರಿನ ರಾಕೆಟ್ ಮೇಲೆ ‘ಮಾವೊ ನಂ೧’ ಹೆಸರಿನ ಉಪಗ್ರಹವನ್ನು ಕೂರಿಸಿ ಉಡಾ­ವಣೆ ಮಾಡಲಾಗಿತ್ತು. ಅದು ‘ಪೂರ್ವದಲ್ಲಿ ಕೆಂಪು’ ಎಂದು ಕ್ರಾಂತಿಗೀತೆಯನ್ನು ಪ್ರಸಾರ ಮಾಡುತ್ತ ಭೂಮಿಯನ್ನು ಒಂದು ಸುತ್ತ ಹಾಕಿ ಬಂದಿತ್ತು.

ಮಾವೊ ಚಂದ್ರನತ್ತ ಹೋಗಲು ಆಗಲೇ ಯೋಜನೆ ಹೂಡಿಯಾಗಿತ್ತು. ಆದರೆ ನಂತರದ ಎರಡು ದಶಕಗಳ ಕಾಲ ಚೀನಾದ ರಾಜಕೀಯ ಅಸ್ಥಿರತೆಯಿಂದಾಗಿ ಅದರ ಬಾಹ್ಯಾ­ಕಾಶ ಸಾಹಸಗಳು ಹಿಂದೆ ಬಿದ್ದವು. ಮತ್ತೆ ಹತ್ತೇ ವರ್ಷಗಳಲ್ಲಿ ಚೇತರಿಸಿಕೊಂಡ ಚೀನಾ ೨೦೦೩­ರಲ್ಲಿ ಅಂತರಿಕ್ಷಕ್ಕೆ ತನ್ನ ಮೊದಲ ಪ್ರಜೆಯನ್ನು ಕಳಿಸಿತು. ‘ಶೆಂಝೌ೫’ ಹೆಸರಿನ ನೌಕೆಯನ್ನೇರಿ ಯಾಂಗ್ ಲಿವಿ ಎಂಬಾತ ೧೪ ಬಾರಿ ಭೂಮಿ­ಯನ್ನು ಸುತ್ತಿದ. ಶೆಂಝೌ ಎಂದರೆ ದೇವನೌಕೆ. ಮುಂದೆ ಆ ನೌಕೆ ಎರಡು ಭಾಗವಾಗಿ, ಯಾಂಗ್ ಕೂತಿದ್ದ ಒಂದು ಭಾಗ ನಮೀಬಿಯಾ ಮರು­ಭೂಮಿ­ಯಲ್ಲಿ ನೆಲಕ್ಕಿಳಿಯಿತು. ಇನ್ನೊಂದು ಭಾಗ ಕಕ್ಷೆಯಲ್ಲೇ ಅಟ್ಟಣಿಗೆಯಾಗಿ ತೇಲುತ್ತ ಸಾಗಿತು. ಚೀನಾ ಈಗ ಪ್ರತ್ಯೇಕ ಅಟ್ಟಣಿಗೆಯನ್ನು ನಿರ್ಮಿಸಿದೆ. ಅನೇಕ ಗಗನಯಾತ್ರಿಗಳು (ಅವರಿಗೆ ಟೈಕೊನಾಟ್ ಎನ್ನುತ್ತಾರೆ–- ಅಮೆರಿಕದವರು ಆಸ್ಟ್ರೊ­ನಾಟ್, ರಷ್ಯನ್ನರು ಕಾಸ್ಮೊನಾಟ್, ನಾವು ಭಾರತೀಯರು ಗಗನ್ನಾಟ್) ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ.

ಬಾಹ್ಯಾಕಾಶ ಸಾಹಸವೆಂದರೆ ತಾಂತ್ರಿಕ ಬಲ­ಪ್ರದರ್ಶನ ಎಂದೇ ನಾವು ನಂಬಿದ್ದೇವೆ. ಜೊತೆಗೆ ಅದು ದೇಶಾಭಿಮಾನವನ್ನು ಹೆಚ್ಚಿಸುವ ಯತ್ನವೂ ಆಗಿರುತ್ತದೆ. ಚೀನೀಯರ ಕನಸು ಇನ್ನೂ ದೊಡ್ಡದು. ಭೂಮಿಯ ಮೇಲೆ ತೀರ ಕಡಿಮೆ ಪ್ರಮಾಣದಲ್ಲಿ ಸಿಗುವ ಕೆಲವು ಮಹತ್ವದ ಖನಿಜಗಳು ಚಂದ್ರನಲ್ಲಿ ದೊಡ್ಡ ಪ್ರಮಾಣ­ದಲ್ಲಿ ಸಿಗುತ್ತವೆಂಬ ಅನುಮಾನಗಳಿವೆ. ಹೀಲಿಯಂ ಎಂಬ ವಿಲಕ್ಷಣ ಅನಿಲವೂ ಅಲ್ಲಿ ಜಾಸ್ತಿ ಇದೆ ಎನ್ನಲಾಗುತ್ತಿದೆ. ಮೇಲಾಗಿ ಚಂದ್ರನ ಮೇಲಿನ ಬಿಸಿಲನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಿ ಭೂಮಿಗೆ ರವಾನಿಸುವ ಹಂಬಲ ಚೀನಾಕ್ಕಿದೆ. ಅನ್ಯಗ್ರಹಗಳಿಗೆ ರಾಕೆಟ್ ಚಿಮ್ಮಿಸು­ವುದೂ ಸುಲಭ. ಹಾಗಾಗಿ ಅದು ಇನ್ನು ಹತ್ತು ವರ್ಷಗಳೊಳಗೆ ಚಂದ್ರನಲ್ಲಿ ಮೊದಲ ನೆಲೆಯನ್ನು ಸ್ಥಾಪಿಸುತ್ತೇನೆಂದು ಹೇಳಿದೆ.

ಚೀನಾ ಹೇಳದೇ ಇರುವ ಸಂಗತಿ ಇನ್ನೊಂದಿದೆ: ಅದು ಬಾಹ್ಯಾಕಾಶವನ್ನು ತನ್ನ ಶಸ್ತ್ರಾಗಾರವನ್ನಾಗಿ ಮಾಡಿಕೊಳ್ಳುತ್ತಿದೆ. ಬೇರೆ ಯಾವ ದೇಶವೂ ಮಾಡಿರದ ಒಂದು ಪ್ರಯೋಗವನ್ನು ಅದು ೨೦೦೭ರಲ್ಲಿ ಮಾಡಿ ತೋರಿಸಿತ್ತು. ಶೆಂಝೌ ನೌಕೆಯಿಂದ ಒಂದು ಕ್ಷಿಪಣಿಯನ್ನು ಚಿಮ್ಮಿಸಿ, ತನ್ನದೇ ಹಳೇ ಉಪಗ್ರಹವೊಂದನ್ನು ಸಿಡಿಸಿ ಒಂದೂವರೆ ಲಕ್ಷ ಚಿಂದಿತುಂಡುಗಳನ್ನಾಗಿ ಮಾಡಿತ್ತು. ಕಳೆದ ಜುಲೈನಲ್ಲಿ, ಅಂದರೆ ವಾಂಗಮ್ಮ ಮೇಲಕ್ಕೆ ಹೋಗಿ ಶಾಲಾ ಮಕ್ಕಳಿಗೆ ಪಾಠ ಬಿತ್ತರಿಸಿ ಬಂದ ಎರಡೇ ವಾರಗಳಲ್ಲಿ ಚೀನಾ ಒಂದು ವಿಲಕ್ಷಣ ತ್ರಿಶೂಲವನ್ನು ಮೇಲಕ್ಕೆ ಕಳಿಸಿತು. ಮೇಲೇರಿ ಹೋದ ಕ್ಷಿಪಣಿಯಿಂದ ಮೂರು ನೌಕೆಗಳು ಹೊರಬಿದ್ದವು. ಒಂದು ತನ್ನ ಉದರದಿಂದ ಉದ್ದನ್ನ ತೋಳನ್ನು ಹೊರಚಾಚಿತು. ಬಾಹ್ಯಾ­ಕಾಶ­ದಲ್ಲಿ ತೇಲುತ್ತಿರುವ ಲೋಹದ ತುಣುಕು­ಗಳನ್ನು ಹೆಕ್ಕುವ ನಾಟಕ ಆಡಿತು. ಅದೊಂದು ಲೋಕಕಲ್ಯಾಣದ ಕೆಲಸವೇ ಹೌದಾಗಿತ್ತು. ಕಳೆದ ಐವತ್ತು ವರ್ಷಗಳಲ್ಲಿ ಅಸಂಖ್ಯಾತ ಉಪಗ್ರಹ ತುಣುಕುಗಳು, ಸಾಧನ ಸಲಕರಣೆಗಳು ಅಲ್ಲಿ ತೇಲಾಡುತ್ತಿವೆ. ಅಂಥ ಚಿಂದಿತಿಪ್ಪೆಗಳನ್ನೆಲ್ಲ ತಾನು ಗುಡಿಸಿ ಸಂಗ್ರಹಿಸಿ ಕೆಳಕ್ಕೆ ತರುತ್ತೇನೆ ಎಂದಿತು. ಆದರೆ ಹೆಕ್ಕಿದ ಲೋಹದ ತುಣುಕುಗಳನ್ನು ತನ್ನ ಜೊತೆ ಬರುತ್ತಿರುವ ಇತರ ಎರಡು ನೌಕೆಗಳಿಗೆ ತುಂಬಲಿಲ್ಲ. ಬದಲಿಗೆ, ಇನ್ನೂ ಎತ್ತರದ ಕಕ್ಷೆಯಲ್ಲಿ ತೇಲುತ್ತಿರುವ ಚೀನಾದ್ದೇ ಹಳೆಯ ಉಪಗ್ರಹದ ಮೈಸವರಿ ಬಂತು.

ಅದೇಕೆ ಹೀಗೆ ಮಾಡಿತು? ತಾನು ಬೇರೆ ದೇಶ­ಗಳ ಉಪಗ್ರಹಗಳನ್ನು ಚಿಂದಿ ಉಡಾಯಿಸ­ಬಲ್ಲೆ ಅಷ್ಟೇ ಅಲ್ಲ, ಬೇಕಿದ್ದರೆ ಅದನ್ನು ನಿಷ್ಕ್ರಿಯ ಮಾಡ­ಬಲ್ಲೆ, ಕಕ್ಷೆಯಿಂದ ಜಾರಿಸಿ ದಿಕ್ಕು ತಪ್ಪಿಸಬಲ್ಲೆ ಎಂಬು­­ದನ್ನು ಚೀನಾ ತೋರಿಸಿ­ಕೊಟ್ಟಿತು. ಹಾಗೆಂದು ಅದೇನೂ ಡಂಗುರ ಸಾರ­ಲಿಲ್ಲ. ಆದ­ರೂ ಯಾರೋ ಚೀನಾದ ಬಾಹ್ಯಾ­ಕಾಶ ನಡ­ವಳಿ­ಕೆಯ ಮೇಲೆ ಅಷ್ಟು ಸೂಕ್ಷ್ಮವಾಗಿ ಕಣ್ಣಿ­ಟ್ಟಿ­ದ್ದಾರೆ. ಬೇಡನ ಹೆಂಡತಿ­ಯನ್ನು ಚಂದ್ರನ ಮೇಲೆ ಕಳಿಸಿ, ಬೇಡ ಇಲ್ಲೇ ಇದ್ದಾನೆ, ಬೇಟೆಗಾಗಿ ಕಾದಿ­ದ್ದಾನೆ ಎಂಬುದನ್ನು ಮೆಲ್ಲುಲಿಯಲ್ಲಿ ಹೇಳುತ್ತಿ­ದ್ದಾರೆ. ಯಾರಿರಬಹುದು ಹೇಳಿ? ನಾವಂತೂ ಅಲ್ಲ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT