ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವೀಂದ್ರನಾಥ ಟ್ಯಾಗೋರ್‌ರ ವಿಶ್ವಾತ್ಮಕತೆ

Last Updated 16 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಈ ತಿಂಗಳ ಹಿಂದೆ ದೆಹಲಿಯ ಐ.ಸಿ.ಸಿ.ಆರ್ ಮತ್ತು ಜರ್ಮನಿಯ ಹಾಲೆ-ಉಟೆನ್‌ಬರ್ಗ್‌ನ ಮಾರ್ಟಿನ್ ಲೂಥರ್ ವಿಶ್ವವಿದ್ಯಾಲಯದ ಜಂಟಿ ಆಯೋಜನೆಯಲ್ಲಿ ಜರ್ಮನಿಯ ಭಾರತೀಯ ರಾಜದೂತಾವಾಸದ ನೆರವಿನಿಂದ ರವೀಂದ್ರನಾಥ ಟ್ಯಾಗೋರ್‌ರ ಕುರಿತ ಒಂದು ಅಂತರರಾಷ್ಟ್ರೀಯ ವಿಚಾರಗೋಷ್ಠಿಯನ್ನೇರ್ಪಡಿಸಲಾಗಿತ್ತು.

ಭಾರತದ ಆರು ಜನ ವಿದ್ವಾಂಸರು, ಜರ್ಮನಿ ಮತ್ತು ಯೂರೋಪಿನ ಇತರ ರಾಷ್ಟ್ರಗಳ ಒಟ್ಟು ಹನ್ನೆರಡು ಜನ ವಿದ್ವಾಂಸರು ಅಂದು ಟ್ಯಾಗೋರ್‌ರ ಪ್ರಸ್ತುತತೆಯನ್ನು ಕುರಿತು ವಿಸ್ತಾರವಾಗಿ ಚರ್ಚಿಸಿದರು. ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಲ್ಲಿ ಭಾರತ ಸರ್ಕಾರ ಆಚರಿಸುತ್ತಾ ಬಂದ ಟ್ಯಾಗೋರ್‌ರ 150ನೇ ವರ್ಷದ ಆಚರಣೆಯ ಅಂತಿಮ ಕಾರ್ಯಕ್ರಮವನ್ನಾಗಿ ಏರ್ಪಡಿಸಿದ ಈ ವಿಚಾರಗೋಷ್ಠಿಯ ವಿಶೇಷವೆಂದರೆ ಆ ಆಚರಣೆಗಳ ತೆರೆಯೆಳೆಯುವ ಬದಲಿಗೆ  ಟ್ಯಾಗೋರ್‌ರ ಕುರಿತ ಚಿಂತನೆಯ ಹೊಸ ದಿಶೆಯ ಆರಂಭವಾಗಿ ಮಾರ್ಪಟ್ಟಿತು.

ಯಾಕೆಂದರೆ ಟ್ಯಾಗೋರ್‌ರ ಬದುಕು ಮತ್ತು ಕೃತಿಗಳ ಪ್ರಸ್ತುತತೆ ಮತ್ತು ಅರ್ಥವಂತಿಕೆ ಎಷ್ಟು ಶ್ರಿಮಂತವಾದವೆಂದರೆ  `ಅಗೆವ ಬುದ್ಧಿಗಿಲ್ಲುಂಟು ಅನಂತ ಅವಕಾಶ.~

ಟ್ಯಾಗೋರ್‌ರ ಸಾಹಿತ್ಯ ಸೃಷ್ಟಿ ವಿಪುಲ. ಸುಮಾರು ಹದಿನೆಂಟು ಸಾವಿರ ಪುಟಗಳಲ್ಲಿ ಹಲವಂದದ ಸಾಹಿತ್ಯ ಪ್ರಕಾರಗಳನ್ನು ಅವರು ಸಮೃದ್ಧಗೊಳಿಸಿದ್ದಾರೆ. ಆದರೆ ಅವರ ಬರವಣಿಗೆ ಕೇವಲ ಸೃಜನಶೀಲ ಸಾಹಿತ್ಯಕ್ಕೆ ಮೀಸಲಾಗಿರಲಿಲ್ಲ. ದರ್ಶನದ ಬಗ್ಗೆ, ಸಂಸ್ಕೃತಿ, ಇತಿಹಾಸಗಳ ಬಗ್ಗೆ, ಶಿಕ್ಷಣದ ಬಗ್ಗೆ-ಅವರು ಮುಟ್ಟಿ ಹೊಸದಾಗಿಸದ ವಿಷಯವೇ ಇಲ್ಲ.

ಅಲ್ಲದೆ ಅವರು ತಮ್ಮದೇ ಆದ ರಂಗಮಂಚವನ್ನು ನಿರ್ಮಿಸಿದರು. ಹೊಸರೀತಿಯ ಸಂಗೀತವನ್ನು ಸೃಜಿಸಿದರು. ಎಪ್ಪತ್ತರ ಮುಪ್ಪಿನ ನಂತರ ಚಿತ್ರಕಲಾವಿದರಾಗಿ ಮರುಜನ್ಮ ಪಡೆದರು.

ಅಕ್ಷಯಪಾತ್ರೆಯ ಹಾಗೆ ಕೊನೆತನಕ ಅವರ ಪ್ರತಿಭೆ ನವನವೋನ್ಮೇಶಶಾಲಿಯಾಗಿ ಮುಂದುವರಿಯುತ್ತಿತ್ತು. ಜರಾಸಂಕೋ ಎಂಬ ಊರಿನಲ್ಲಿ ವಿದ್ವತ್ತು ಮತ್ತು ಪ್ರತಿಭೆಗಳಿಗೆ ಆಗರವಾಗಿದ್ದ ಅವರ ಮನೆಯ ವಾತಾವರಣವೊಂದೇ ಅದ್ಭುತ ಸೃಜನಪ್ರತಿಭೆಗೆ ಸಾಕಾಗಿರುತ್ತಿತ್ತು. ಆದರೆ ಟ್ಯಾಗೋರ್‌ರು ಇತ್ತುಗಳ ಧ್ವಜವನ್ನು ಹಿಡಿದೆತ್ತುವ ಕೆಲಸವನ್ನೊಂದೇ ಮಾಡಲಿಲ್ಲ.
 
ಹುಟ್ಟಾ ಅನ್ವೇಷಕ ಪ್ರತಿಭೆ ಅವರದಾದ್ದರಿಂದ ಜಗತ್ತಿನಾದ್ಯಂತ ಸಂಚರಿಸಿ ಪೂರ್ವಪಶ್ಚಿಮವೆನ್ನದೆ ತಮ್ಮ ಯುಗದ ಮಹಾನ್ ಚೇತನಗಳಾದ ಐನ್‌ಸ್ಟೈನ್‌ರಂಥ ಅನೇಕರ ಜೊತೆ ವಿಚಾರವಿನಿಮಯ ಮಾಡಿಕೊಂಡು ತಮ್ಮ ವಿಚಾರ ಮತ್ತು ಕಲೆಗಳನ್ನು ಸಂಕುಚಿತ ರಾಷ್ಟ್ರೀಯತೆಯಿಂದ ಬಿಡುಗಡೆಗೊಳಿಸಿ ಅದಕ್ಕೊಂದು ವಿಶ್ವಾತ್ಮಕತೆಯನ್ನು ನೀಡಿದರು.

ಭಾರತದ ಮಹಾಮಾನವಸಾಗರದಪಾರ ತೀರದಲ್ಲಿ ನಿಂತು ಇಡೀ ಏಷಿಯಾದ, ಇಡೀ ವಿಶ್ವದ ಐಕ್ಯತೆಯ ಕನಸು ಕಂಡು ಅದರ ಸಾರೋದ್ಧಾರವನ್ನು ತಮ್ಮ ರಸವತ್ತಾದ ವಿವಿಧ ಸೃಜನನಿರ್ಮಿತಿಗಳ ಮೂಲಕ ಹೊರಪಡಿಸಿದರು.

ಹೀಗೆ ಬಹುಮುಖಿಯಾದ ಟ್ಯಾಗೋರ್‌ರ ಪ್ರತಿಭೆಯನ್ನು ಲಿಯನಾರ್ಡೋ ಡಾ ವಿಂಚಿಗೆ, ಷೇಕ್ಸ್‌ಪಿಯರನಿಗೆ, ಡಾಂಟೆಗೆ, ಗಯಟೆಗೆ ಅಥವಾ ನಮ್ಮವನೇ ಆದ ಕಾಳಿದಾಸನಿಗೆ ಹೋಲಿಸುವುದು ವಾಡಿಕೆಯಾದರೂ ಅವರಲ್ಲಿ ಯಾರೊಬ್ಬರೂ ಟ್ಯಾಗೋರ್‌ರ ಪ್ರಭಾವೀ ಬಹುಮಖಿ ವ್ಯಕ್ತಿತ್ವಕ್ಕೆ ಸರಿಸಮಾನವಾದವರಲ್ಲ.

ಅಲ್ಲದೆ ಟ್ಯಾಗೋರ್‌ರು ತಮ್ಮ ಕಾಲದ ಪ್ರಭಾವೀ ಚಿಂತಕರಾದ ಸ್ವಾಮಿ ವಿವೇಕಾನಂದ, ಅರವಿಂದ, ಗಾಂಧಿ, ನೆಹರೂ ಮುಂತಾದವರಿಗಿಂತ ಭಿನ್ನವಾಗಿ ತಮ್ಮ ನಾಡನ್ನು ಪರಿಭಾವಿಸಿದರು. ಅವರು ಕೇವಲ ಪೂರ್ವ-ಪಶ್ಚಿಮಗಳ ಸಂಘರ್ಷ-ಅನುಸಂಧಾನಗಳ ಪಾತಳಿಗಳಲ್ಲಿ ತಮ್ಮ ನುಡಿಗಟ್ಟುಗಳನ್ನು ಕಟ್ಟಲಿಲ್ಲ.
 
ಭಾರತ ಮತ್ತು ಯೂರೋಪುಗಳಾಚೆಗಿನ ದಕ್ಷಿಣ ಅಮೆರಿಕ, ಆಫ್ರಿಕಾ ಮತ್ತು ಏಷಿಯಾದ ಇತರ ಸಂಸ್ಕೃತಿಗಳ ವಿಶಾಲ ದೃಷ್ಟಿಯಲ್ಲಿ ಪರಿಭಾವಿಸಿದರು. ಅವರೇ ತಮ್ಮಂದು ಕವಿತೆಯಲ್ಲಿ ಹೇಳುವಂತೆ  `ರೂಪ್ ಶಾಗೊರೆ ಢೂಬಿಯ ಜಾಚ್ಛಿ ಅರೂಪ್ ರೊತೊನ್ ಆಶಾ ಕೊರಿ~  (ಅರೂಪ ರತ್ನದ ಹುಡುಕಾಟದಲ್ಲಿ ರೂಪಸಾಗರದಲ್ಲಿ ಮುಳುಗಿಹೋದೆ).
 
ಮೂರು ರಾಷ್ಟ್ರಗಳಾದ ಭಾರತ, ಬಾಂಗ್ಲಾದೇಶ ಮತ್ತು ಶ್ರಿಲಂಕಾಗಳಿಗೆ ಅವರು ರಾಷ್ಟ್ರಗೀತೆಗಳನ್ನು ನೀಡಿದ್ದಾರೆ. ಮೊದಲೆರಡು ರಾಷ್ಟ್ರಗೀತೆಗಳು ಅವರ ರಚನೆಗಳಾದರೆ, ಶ್ರಿಲಂಕಾದ ರಾಷ್ಟ್ರಗೀತೆಯ ಸಂಗೀತ ಟ್ಯಾಗೋರ್‌ರಿಂದ ಪ್ರೇರಿತವಾಗಿದೆ.

ಟ್ಯಾಗೋರ್‌ರ ಬಹು ದೊಡ್ಡ ಸಾಧನೆಯೆಂದರೆ ಭಾರತೀಯ ಸಾಮೂಹಿಕ ಸೃಜನಶೀಲತೆ ಮತ್ತು ಚಿಂತನೆಗಳಿಗೆ ತಮ್ಮ ಮಾನಸಿಕ ಮತ್ತು ಭೌತಿಕ ವಿಶ್ವಪರ್ಯಟನದ ಮೂಲಕ ವಿಶ್ವಾತ್ಮಕತೆಯ ದೀಕ್ಷೆಯನ್ನು ನೀಡಿದ್ದು.

ಕಾಳಿದಾಸ  `ಮೇಘದೂತ~ದಲ್ಲಿ ಮೊದಲ ಬಾರಿ ದಕ್ಷಿಣದ ರಾಮಗಿರಿ ಆಶ್ರಮದಿಂದ ಉತ್ತರದ ಅಲಕಾವತಿಯ ವರೆಗಿನ ವಿಶಾಲ ಸೀಮೆಯನ್ನು ತನ್ನ ಕಾವ್ಯದಲ್ಲಿ ಸಜೀವಗೊಳಿಸಿದ. ಆದರೆ ಟ್ಯಾಗೋರ್‌ರು ಅಟ್ಲಾಂಟಿಕ್‌ನಿಂದ ಪೆಸಿಫಿಕ್ ಸಾಗರ ಪರ್ಯಂತ ಉತ್ತರ ಮತ್ತು ದಕ್ಷಿಣ ಧ್ರುವಗಳ ಭೂಮಂಡಲವನ್ನೇ ತಮ್ಮ ಕಲ್ಪನೆ-ಚಿಂತನೆಗಳ ಪರಿಪೇಕ್ಷದೊಳಗೆ ತಂದುಕೊಂಡರು.
 
ಇಷ್ಟಾದರೂ ಅವರ ಚಿಂತನೆಗಳು ಪ್ರಾದೇಶಿಕತೆಯನ್ನೂ ಬಿಟ್ಟುಕೊಡಲಿಲ್ಲ. ಬಂಗಾಳದ ಶಬ್ದ-ದೃಶ್ಯ-ಗಂಧಗಳು, ವೈಷ್ಣವ ಮತ್ತು ಬೌಲ್ ಸಂತರು, ತಮ್ಮ ಯುಗದ ಸಮಾಜಪರಿವರ್ತನಕಾರರು ಎಲ್ಲರೂ ಅವರ ಕರ್ತಾರಶಕ್ತಿಗೆ ಇಂಬು ನೀಡಿದರು.

ಅವರ ವಿಶ್ವಪ್ರೇಮಕ್ಕೆ ಇಡೀ ವಿಶ್ವ ಅವರ ಜೀವಿತಕಾಲದಲ್ಲೇ ಸ್ಪಂದಿಸಿತು. ಯೂರೋಪ್, ದಕ್ಷಿಣ ಅಮೆರಿಕ, ಚೀನಾ, ಜಪಾನ್ ಎಲ್ಲ ಕಡೆ ವಿವಿಧ ಕ್ಷೇತ್ರಗಳಲ್ಲಿ ಅವರ ಗಾಢ ಪ್ರಭಾವವಾಯಿತು.

ಮೇಲ್ಕಂಡ ವಿಚಾರಗೋಷ್ಠಿಯ ಒತ್ತು ಟ್ಯಾಗೋರ್ ಮತ್ತು ಯೂರೋಪಿನ ಸಂಬಂಧದ ಬಗ್ಗೆ ಇತ್ತು. ಯೂರೋಪಿನ ವಿವಿಧ ಸಂಸ್ಕೃತಿಗಳು ಟ್ಯಾಗೋರ್‌ರನ್ನು ಸ್ವೀಕರಿಸಿದ ಬಗೆಗಳಲ್ಲಿದ್ದ ವ್ಯತ್ಯಾಸಗಳು ಚರ್ಚೆಯಲ್ಲಿ ಸ್ಪಷ್ಟವಾದವು. ಸ್ಪೇನನ್ನು ಬಿಟ್ಟರೆ ಇತರೆಡೆಗಳಲ್ಲಿ ಟ್ಯಾಗೋರ್‌ರ ಪ್ರಭಾವ ಸಾಹಿತ್ಯಿಕವಾಗಿರಲಿಲ್ಲ. ಜರ್ಮನಿಗೆ ಟ್ಯಾಗೋರ್‌ರು ವಿಶೇಷ ಮಹತ್ವ ನೀಡಿದ್ದರು.

ಮೂರು ಬಾರಿ ಬಂದುಹೋದರು. ಇಪ್ಪತ್ತರ ದಶಕದಲ್ಲೆ ಅವರ ಚಿತ್ರಗಳ ಪ್ರದರ್ಶನ ಜರ್ಮನಿಯಲ್ಲಿ ನಡೆದು, ಆಗ ಟ್ಯಾಗೋರ್‌ರು ತಮ್ಮ ಕೆಲವು ಚಿತ್ರಗಳನ್ನು ಬರ್ಲಿನ್ನಿನ ಮ್ಯೂಸಿಯಮ್ಮಿಗೆ ಕೊಡುಗೆಗಳಾಗಿ ನೀಡಿದ್ದರು. ಆದರೆ ಹಿಟ್ಲರನ ಅಮವಾಸ್ಯೆಯಲ್ಲಿ  ಅವರ ಕಲೆಯನ್ನು ಶಿಥಿಲವೆಂದು ಪರಿಗಣಿಸಲಾಗಿ ಅವನ್ನು ತೆಗೆದುಹಾಕಲಾಯಿತು. ಕಳೆದ ವರ್ಷ ಬರ್ಲಿನ್ನಿನಲ್ಲಿ ನಡೆದ ಟ್ಯಾಗೋರ್‌ರ ಚಿತ್ರಪ್ರದರ್ಶನದಲ್ಲಿ ಅವನ್ನು ಮತ್ತೆ ಪ್ರದರ್ಶನಕ್ಕಿಡಲಾಯಿತು.

ಜರ್ಮನಿಯ ಎಕ್ಸ್‌ಪ್ರೆಶನಿಸ್ಟ್ ಕಲೆ ಟ್ಯಾಗೋರ್‌ರನ್ನು ಆಳವಾಗಿ ಪ್ರಭಾವಿಸಿತು. ಟ್ಯಾಗೋರ್‌ರು ಆ ಸುಮಾರಿನಲ್ಲಿ ಕಲ್ಕತ್ತೆಯಲ್ಲಿ ಎಕ್ಸ್‌ಪ್ರೆಶನಿಸ್ಟ್ ಕಲಾಪ್ರದರ್ಶನ ಏರ್ಪಡಿಸಿದ್ದರು. ಆದರೆ ಟ್ಯಾಗೋರ್‌ರು ಮೂರುಬಾರಿ ಜರ್ಮನಿಗೆ ಬಂದಾಗಲೂ ಅವರಿಗೆ ಅಭೂತಪೂರ್ವ ಸ್ವಾಗತ ಸಿಕ್ಕಿದ್ದು ಸಾಹಿತ್ಯೇತರ ವಲಯಗಳಲ್ಲಿ.

ಅವರು ವಿಜ್ಞಾನಿ-ತತ್ವಜ್ಞಾನಿಗಳನ್ನು ಭೇಟಿಯಾದರೇ ಹೊರತು ಆ ಕಾಲದ ಹೆಸರಾಂತ ಬರಹಗಾರರಾದ ರಿಲ್ಕೆ, ಹೆಮ್ನ ಹೆಸ್, ಥಾಮಸ್‌ಮನ್ ಇವರ‌್ಯಾರನ್ನೂ ಅವರು ಸಂಧಿಸಲಿಲ್ಲ. ಸಾಮಾನ್ಯ ಜನತೆ ಅವರನ್ನು ಸನಾತನ ಭಾರತದ ಆಧ್ಯಾತ್ಮಿಕ ಪರಂಪರೆಗಳ ಪ್ರತಿನಿಧಿಯಾಗಿ ಕಂಡರು. ಅವರ ತೇಜಸ್ವಿ ಕಣ್ಣುಗಳಲ್ಲಿ, ಆಳವಾದ ದನಿಯಲ್ಲಿ, ನೀಳವಾದ ಗಡ್ಡದಲ್ಲಿ ಹೊಸಯುಗದ ಪ್ರವಾದಿಯನ್ನು ಕಂಡರು. ಇದೇ ರೀತಿಯ ಪ್ರಭಾವ ಸ್ವೀಡನ್ನಿನಲ್ಲಾಯಿತು.
 
ಉಪನಿಷತ್ತುಗಳ ದರ್ಶನದಲ್ಲಿ ನುರಿತ, ಬೆಳಗ್ಗೆ ಮೂರುಗಂಟೆಗೆ ಎದ್ದು ಧ್ಯಾನ ಮಾಡುವ ಬ್ರಾಹ್ಮಣನೆಂದು ಸ್ವೀಡಿಷ್ ಪತ್ರಿಕೆಯೊಂದು ಅವರನ್ನು ಬಣ್ಣಿಸಿದಾಗ ಇನ್ನೊಂದು ಪತ್ರಿಕೆಯಲ್ಲಿ ಒಬ್ಬ ಕಾರ್ಮಿಕ ಓದುಗ `ಇದರಲ್ಲಿ ಕೊಚ್ಚಿಕೊಳ್ಳುವುದೇನಿದೆ, ಹುಟ್ಟಾ ಕಾರ್ಮಿಕನಾದ ನನ್ನ ಅಪ್ಪನೂ ಚಿಕ್ಕಂದಿನಿಂದ ಬೆಳಗ್ಗೆ ಮೂರಕ್ಕೆ ಎದ್ದು ಕೆಲಸದಲ್ಲಿ ತೊಡಗುತ್ತಾನೆ~ ಎಂದು ಗೇಲಿ ಮಾಡಿದ. ಪೋಲೆಂಡಿನಲ್ಲಿ ಟ್ಯಾಗೋರ್‌ರ `ಗೀತಾಂಜಲಿ~ ಅನುವಾದವಾಗಿತ್ತು.
 
ಓದುಗರು ಮರುಳಾದದ್ದು ಅದರ ದಾರ್ಶನಿಕತೆಗೆ, ಕಾವ್ಯಕ್ಕಲ್ಲ. ಆದರೆ ಒಬ್ಬ ಯಹೂದಿ ಸಾಮಾಜಿಕ ಕಾರ್ಯಕರ್ತ ನಾಜಿ ಯುಗದಲ್ಲಿ ಯಹೂದಿ ಮಕ್ಕಳು ಒಂದಲ್ಲಾ ಒಂದು ದಿನ ಗ್ಯಾಸ್ ಚೇಂಬರ್‌ಗೆ ಹೋಗುವ ಅನಿವಾರ್ಯತೆಯಿದ್ದ ಕಾಲದಲ್ಲಿ ಆ ಮಕ್ಕಳಿಂದ ಟ್ಯಾಗೋರ್‌ರ  `ಪೋಸ್ಟ್ ಆಫೀಸ್~  ನಾಟಕವನ್ನಾಡಿಸಿ ಅವರಿಗೆ ಸಾವನ್ನೆದುರಿಸುವ ಧೈರ್ಯ ನೀಡುತ್ತಿದ್ದ. ಇದನ್ನು ಹೊರತು ಮಾಡಿದರೆ ಪೋಲೆಂಡಿನಲ್ಲೂ ಟ್ಯಾಗೋರ್‌ರ ಸಾಹಿತ್ಯಿಕ ಪ್ರಭಾವ ಆಗಲಿಲ್ಲ. ಆದರೆ ಕೆಲವು ಪ್ರಮುಖ ಸಂಗೀತಗಾರರು ಟ್ಯಾಗೋರ್‌ರ ಕವಿತೆಗಳನ್ನು ಆಧರಿಸಿ ಸಂಗೀತ ರಚನೆಗಳನ್ನು ಮಾಡಿದರು.

ಸ್ಪೇನಿನ ಕತೆಯೇ ಬೇರೆ. ಅಲ್ಲಿನ ಪ್ರಸಿದ್ಧ ಆಧುನಿಕ ಕವಿ ಯಿಮೆನೆಜ್ ಟ್ಯಾಗೋರ್‌ರನ್ನು ಸಮರ್ಥವಾಗಿ ಅನುವಾದಿಸಿದ. ಐವತ್ತರ ದಶಕದಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದ ಈತ ಇಪ್ಪತ್ತರ ದಶಕದಲ್ಲೇ ಸ್ಪೇನಿನ ಅತ್ಯಂತ ಪ್ರಭಾವಿ ಕವಿಯಾಗಿದ್ದ. ಮುಂದೆ ವಿಶ್ವವಿಖ್ಯಾತ ಕವಿಯಾದ ಲೋರ್ಕಾ ಈತನ ಶಿಷ್ಯ. ಟ್ಯಾಗೋರ್‌ರ ಗೀತಾಂಜಲಿಯ ಸ್ಪ್ಯಾನಿಷ್ ಅನುವಾದದ ಬಿಡುಗಡೆಗೆ ಟ್ಯಾಗೋರ್‌ರನ್ನು ಆಮಂತ್ರಿಸಲಾಗಿತ್ತು.
 
ಟ್ಯಾಗೋರ್‌ರೂ ಉಪಸ್ಥಿತರಿರಲು ಒಪ್ಪಿದ್ದರು. ಆದರೆ ಕೊನೆಯ ನಿಮಿಷದಲ್ಲಿ ಟ್ಯಾಗೋರ್‌ರು ತಮ್ಮ ಸ್ಪೇನಿನ ಪ್ರಯಾಣವನ್ನು ರದ್ದುಗೊಳಿಸಿ ಇನ್ನೆಲ್ಲಿಗೋ ಹೊರಟುಹೋದರು. ಯಿಮೆನಜ್ ಮತ್ತವನ ಅನುಯಾಯಿಗಳಿಗೆ ಬಹಳ ನಿರಾಸೆಯಾಯಿತು. ಮುಂದೆ ಅವನು ಟ್ಯಾಗೋರ್‌ರನ್ನು ಅನುವಾದಿಸಲಿಲ್ಲ.
 
ಆದರೆ ಅವನ ಗೀತಾಂಜಲಿಯ ಅನುವಾದ ಲೋರ್ಕಾನಂಥ ಮಹಾನ್ ಕವಿಯನ್ನು ಪ್ರಭಾವಿಸಿತು. ಮುಂದೆ ಸ್ಪ್ಯಾನಿಷ್ ಭಾಷಿಕ ದಕ್ಷಿಣ ಅಮೆರಿಕದ ದೇಶಗಳಲ್ಲಿ ಟ್ಯಾಗೋರ್‌ರ ಕಾವ್ಯಪ್ರಭಾವ ಮುಂದುವರೆಯಿತು. ಚಿಲಿಯ ಮಹಾಕವಿ ಪಾಬ್ಲೋ ನೆರೂದಾನ ಪ್ರೇಮಕಾವ್ಯದಲ್ಲಿ ವಿಮರ್ಶಕನೊಬ್ಬ ಟ್ಯಾಗೋರ್‌ರಿಂದ ಕದ್ದ ಸಾಲುಗಳನ್ನು ಗುರುತಿಸಿದನಂತೆ.

ಇದರಿಂದ ಇರಿಸುಮುರುಸಾಗಿ ಮುಂದೆಂದಿಗೂ ನೆರೂದಾ ಟ್ಯಾಗೋರ್‌ರ ಹೆಸರೆತ್ತಲಿಲ್ಲ. ಆದರೆ ಅದೇ ಖಂಡದ ಇನ್ನೊಬ್ಬ ನೊಬೆಲ್ ಪ್ರಶಸ್ತಿವಿಜೇತ ಕವಿ ಅಕ್ತೇವಿಯೋ ಪಾಜ್ ಟ್ಯಾಗೋರ್‌ರ ಬಗ್ಗೆ ಮನದುಂಬಿ ಮಾತನಾಡಿದ್ದಾನೆ.

ಇಂಗ್ಲೆಂಡಿನ ಜೊತೆಗಿನ ಟ್ಯಾಗೋರ್‌ರ ಸಂಬಂಧ ಅವರಿಗೆ ನೊಬೆಲ್ ಪ್ರಶಸ್ತಿ ದೊರಕುವಲ್ಲಿ ನೆರವಾಯಿತು. ಇದರಲ್ಲಿ ಐರಿಷ್ ಕವಿ ಯೇಟ್ಸ್‌ನ ಪಾತ್ರ ಮಿಗಿಲಾಗಿತ್ತು. ಟ್ಯಾಗೋರ್‌ರ ಇಂಗ್ಲಿಷ್ ಅನುವಾದದಲ್ಲಿ ಯೇಟ್ಸ್ ಮಹತ್ವಪೂರ್ಣ ತಿದ್ದುಪಡಿ ಮಾಡಿದ. ನೊಬೆಲ್ ಸಮಿತಿ `ಗೀತಾಂಜಲಿ~ಯನ್ನು ಇಂಗ್ಲಿಷ್ ಕಾವ್ಯಕೃತಿಯೆಂದು ಪರಿಗಣಿಸಿತ್ತು.
 
ಬಹುತೇಕ ಮಂದಿ `ಗೀತಾಂಜಲಿ~ಯ ಇಂಗ್ಲಿಷ್ ಅನುವಾದವನ್ನೋದಿ ಟ್ಯಾಗೋರ್‌ರನ್ನು ಒಬ್ಬ ಕನಸುಗಾರ ರೊಮಾಂಟಿಕ್ ಕವಿಯೆಂದು ಬಗೆದಿದ್ದಾರೆ. ಅಂಥವರಿಗೆ ಟ್ಯಾಗೋರ್‌ರ ಬಹುಮುಖಿ ದೈತ್ಯ ಪ್ರತಿಭೆ ಅರ್ಥವಾಗುವುದೇ ಇಲ್ಲ.


ಮುಂದೆ ಯೇಟ್ಸ್‌ನಿಗೆ ಟ್ಯಾಗೋರ್‌ರ ಕಾವ್ಯದ ಬಗ್ಗೆ ಭ್ರಮನಿರಸನವಾಯಿತು. ಟ್ಯಾಗೋರ್‌ರನ್ನೂ ಒಳಗೊಂಡು ಇಡೀ ಭಾರತೀಯ ಸಂಸ್ಕೃತಿಯಲ್ಲಿ ಕಾವ್ಯ ದುರಂತದ ಅಭಾವದಿಂದ ದುರ್ಬಲವಾಗಿದೆಯೆಂದು ಅವನಿಗನಿಸಿತು. ಈ ಅಭಿಪ್ರಾಯಕ್ಕೆ ಕಾರಣ ಯೇಟ್ಸ್‌ಗೆ ಟ್ಯಾಗೋರ್ ಮತ್ತು ಭಾರತೀಯ ಕಾವ್ಯದ ಬಗೆಗಿದ್ದ ಅಲ್ಪಜ್ಞಾನ.
 
ಜೊತೆಗೆ ಟ್ಯಾಗೋರ್ ಅವರೇ ಮಾಡಿದ ಅಸಮರ್ಪಕ ಇಂಗ್ಲಿಷ್ ಅನುವಾದಗಳೂ ಮುವ್ವತ್ತರ ನಂತರದ ದಶಕಗಳಲ್ಲಿ  ಅವರ ಕೃತಿಗಳ ಬಗೆಗೆ ಉದಾಸೀನವುಂಟಾಗುವುದಕ್ಕೆ ಕಾರಣ ಎಂದು ಅವರನ್ನು ಜರ್ಮನ್ ಭಾಷೆಗೆ ಸಮರ್ಪಕವಾಗಿ ಅನುವಾದಿಸಿರುವ ಬಂಗಾಳಿ ಕವಿ ಆಲೋಕರಂಜನ ದಾಸಗುಪ್ತ ಅವರ ಅಂಬೋಣ. ಈಗೇನೋ ಇಂಗ್ಲಿಷಿನಲ್ಲಿ ವಿಲಿಯಂ ರ‌್ಯಾಡಿಚೆ ಮುಂತಾದವರ ಸಮರ್ಥ ಅನುವಾದಗಳು ಉಪಲಬ್ಧವಿವೆ.

1913 `ಗೀತಾಂಜಲಿ~ಗೆ ನೊಬೆಲ್ ಪ್ರಶಸ್ತಿ ದೊರಕಿದ್ದರ ಶತಮಾನೋತ್ಸವ. ಟ್ಯಾಗೋರ್‌ರ ಸಾಹಿತ್ಯಿಕ-ಸಾಹಿತ್ಯೇತರ ಪ್ರಭಾವಗಳು ಇಂದು ವಿಶ್ವವ್ಯಾಪಿಯಾಗಿದ್ದರೂ ಭಾರತವನ್ನೂ ಒಳಗೊಂಡು ವಿಶ್ವದ ಹಲವು ಭಾಷೆಗಳಲ್ಲಿ `ಗೀತಾಂಜಲಿ~ ಅನುವಾದ ಇಂಗ್ಲಿಷಿನ ಮೂಲಕ ಆಗಿರುವುದರಿಂದ ಆ ಕೃತಿಯ ಶ್ರಿಮಂತಿಕೆಯ ಕಲ್ಪನೆ ಜನರಿಗೆ ಭಾಗಶಃ ಮಾತ್ರ ದೊರಕಿದೆ.
 
ನಾರಾಯಣ ಸಂಗಮರ ಜೊತೆಗೆ ಬೇಂದ್ರೆಯವರು ಅನುವಾದಿಸಿರುವ `ಟ್ಯಾಗೋರ್ ಕವಿತೆಗಳು~ ಕನ್ನಡದ ಪುಣ್ಯ. ಆದರೆ ಇವತ್ತಿನ ಸಂದರ್ಭದಲ್ಲಿ ಟ್ಯಾಗೋರ್‌ರ ಪ್ರಾತಿನಿಧಿಕ ಕೃತಿ `ಗೀತಾಂಜಲಿ~ಯನ್ನು ಮೂಲದಿಂದ ಜಗತ್ತಿನ ಪ್ರಮುಖ ಭಾಷೆಗಳಿಗೆ ಹೊಸ ರೀತಿಗಳಲ್ಲಿ ಅನುವಾದಿಸುವ ಜರೂರಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT