ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ರೊಚ್ಚು ಮತ್ತು ಮಿದುಳಿನ ಲೀಲೆ

Last Updated 10 ಡಿಸೆಂಬರ್ 2012, 13:58 IST
ಅಕ್ಷರ ಗಾತ್ರ

ಸ್ವರ ತ್ಹ್‌ನಂಜಂ (32) ಎಂಬುವರು ಮಣಿಪುರ ಮೂಲದವರು. ನಾಟಕಕಾರ್ತಿ. ಮೊನ್ನೆ ಬಸವನಗುಡಿಯಲ್ಲಿ ನಡೆದ ಘಟನೆ ಎಲ್ಲ ಪತ್ರಿಕೆಯಲ್ಲೂ ವರದಿಯಾಗಿದೆ. ಈಕೆ ಕಾರಿನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಮೋಟರ್ ಸೈಕಲ್ ಸವಾರನೊಬ್ಬ ಗುದ್ದಿ ಗಲಾಟೆ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಟ್ರಾಫಿಕ್ ಜಾಮ್ ಆಗಿ ಸುಮಾರು ಜನ ಸೇರಿದ್ದಾರೆ. ಕಾರು ಇತರರ ದಾರಿಗೆ ಅಡ್ಡವಾಗಿದ್ದರಿಂದ ಅಲ್ಲಿ ಸೇರಿದ್ದ ಹಲವರು ಸ್ವರ್ ಅವರನ್ನು ಬೈದಿದ್ದಾರೆ.

ಪೊಲೀಸ್ ಕಾನ್‌ಸ್ಟೇಬಲ್ ಹೋಗಿ ಆಕೆಯನ್ನು ಎಳೆದು ಜಗ್ಗಾಡಿ ಗೂಸ ಕೊಟ್ಟಿದ್ದಾರೆ. ಸ್ವರ್ ಹೋಗಿ ಕಾನ್‌ಸ್ಟೇಬಲ್ ಹಾಗೂ ಕೆಟ್ಟದಾಗಿ ನಡೆದುಕೊಂಡ ಸಾರ್ವಜನಿಕರ ವಿರುದ್ಧ ದೂರು ಬರೆದು ಕೊಟ್ಟಿದ್ದಾರೆ.

ಇದು ಕನ್ನಡಿಗರು ಮತ್ತು ಮಣಿಪುರಿಗಳ ನಡುವೆ ನಡೆದ ದೊಡ್ಡ ಜಗಳವೆಂಬಂತೆ ಇಂಗ್ಲಿಷ್ ಮಾಧ್ಯಮದಲ್ಲಿ ಬಿಂಬಿತವಾಗುತ್ತಿದೆ. ಸ್ವರ್ ಅವರಿಗೆ ಕನ್ನಡ ಬಾರದ ಕಾರಣ ಹೀಗಾಯಿತು ಎಂದು ಹಲವು ಪತ್ರಿಕೆಗಳು ಬರೆಯುತ್ತಿವೆ. ಕಾರ್ಪೊರೇಟ್ ಪ್ರಪಂಚದ ದೊಡ್ಡ ಹುದ್ದೆಯಲ್ಲಿರುವ ಒಬ್ಬರು ಈ ಘಟನೆಗೆ ಪ್ರತಿಕ್ರಿಯಿಸುತ್ತ ಹೀಗೆಂದರು:  `ಕನ್ನಡ ಬಾರದಿದ್ದರೆ ಪೊಲೀಸರು ಕಂಪ್ಲೇಂಟ್ ಬರೆದುಕೊಳ್ಳುವುದೇ ಇಲ್ಲ'. ಪೊಲೀಸರಿಗೆ ಇರುವುದಕ್ಕಿಂತ ಹೆಚ್ಚು ಕನ್ನಡಾಭಿಮಾನವನ್ನು ಹಲವರು ಆರೋಪಿಸುತ್ತಿದ್ದಾರೆ! ಕನ್ನಡದಲ್ಲಿ ಮಾತಾಡಿದರೂ ಎಷ್ಟೋ ಸಲ ಪೊಲೀಸರು ಕಂಪ್ಲೇಂಟ್ ಬರೆದುಕೊಳ್ಳುವುದಿಲ್ಲ ಎಂಬ ಸತ್ಯ ಕನ್ನಡೇತರರಿಗೆ ಇಂಥ ಸಂದರ್ಭಗಳಲ್ಲಿ ಕಾಣುವುದಿಲ್ಲ.

ರೋಡ್ ರೇಜ್, ಅಂದರೆ ರಸ್ತೆಯಲ್ಲಿ ರೊಚ್ಚಿಗೇಳುವುದು, ಬೆಂಗಳೂರಿನಲ್ಲಿ ಸಾಮಾನ್ಯವಾಗುತ್ತಿದೆ. ರಸ್ತೆಯಲ್ಲಿ ನಡೆಯುವ ಸಣ್ಣಪುಟ್ಟ ಪ್ರಚೋದನೆಗೆ ಜನ ರೊಚ್ಚಿಗೇಳುವುದು ಏಕೆ? ಇದನ್ನು ವಿಲಯನೂರ್ ಎಸ್. ರಾಮಚಂದ್ರನ್ ಅವರಂಥ ನರ ವಿಜ್ಞಾನಿಗಳು ಸ್ವಾರಸ್ಯವಾಗಿ ವಿವರಿಸುತ್ತಾರೆ. ಯುದ್ಧದಂಥ ಸಂದರ್ಭಗಳಲ್ಲಿ ಕಾಲು ಕಳೆದುಕೊಂಡವರಿಗೆ ಇಲ್ಲದ ಕಾಲಿನಲ್ಲಿ ನವೆಯಾಗುವುದು ಒಂದು ಸಮಸ್ಯೆ. ಇದನ್ನು ಅರ್ಥಮಾಡಿಕೊಳ್ಳಲು ಹೊರಟ ವಿಜ್ಞಾನಿಗಳು ಮಿದುಳಿನಲ್ಲಿ ಏನಾಗುತ್ತದೆ ಎಂದು ಸಂಶೋಧನೆ ಮಾಡಿದ್ದಾರೆ. ಕಾಲೇ ಇಲ್ಲದವರೂ ಕಾಲು ನವೆ ಅನುಭವಿಸುದು ಹೇಗೆ?

ಫ್ಯಾಂಟಮ್ ಲಿಂಬ್ಸ್‌ನ ಒಗಟನ್ನು ಬಿಡಿಸಲು ಹೋದಾಗ ರಾಮಚಂದ್ರನ್ ಈ ರೋಡ್ ರೇಜ್ ವಿಷಯ ಪ್ರಸ್ತಾಪಿಸುತ್ತಾರೆ. ವಾಹನ ಒಂದು ರೀತಿಯ ಫ್ಯಾಂಟಮ್ ಲಿಂಬ್. ಅಂದರೆ ಇಲ್ಲದಿದ್ದರೂ ಇರುವ ಅಂಗ. ಕಾರಿಗೆ ಯಾರೋ ಡಿಕ್ಕಿ ಹೊಡೆದಾಗ, ಆ ಡಿಕ್ಕಿಯಿಂದ ಏನೇ ಹಾನಿಯಾಗದಿದ್ದರೂ ನಮಗೆ ಕೋಪ ಬರುವುದಕ್ಕೆ ಕಾರಣ ನಮ್ಮ ಮಿದುಳಿನಲ್ಲಾಗುವ ವಿಚಿತ್ರ ಪ್ರಕ್ರಿಯೆ. ನಮ್ಮ ದೇಹವನ್ನೇ ಯಾರೋ ಉಲ್ಲಂಘನೆ ಮಾಡ್ತುತ್ತಿದ್ದಾರೆ ಎಂಬ ಆಭಾಸ. ಡ್ರೈವ್ ಮಾಡುವಾಗ ವಾಹನ ನಮ್ಮ ದೇಹದ ಅಂಗವಾಗಿಬಿಟ್ಟಿರುತ್ತದೆ ಎಂದು ಒಂದು ವೈಜ್ಞಾನಿಕ ಊಹೆ ಮಾಡುತ್ತಾರೆ.

ರಾಮಚಂದ್ರನ್ ಅವರನ್ನು ಟೈಮ್ ಪತ್ರಿಕೆ ಪ್ರಪಂಚದ 100 ಅತಿ ಪ್ರಭಾವಿಗಳಲ್ಲಿ ಒಬ್ಬರೆಂದು ಪರಿಗಣಿಸಿದೆ. ಅವರ `ಫ್ಯಾಂಟಮ್ಸ ಆಫ್ ದಿ ಬ್ರೈನ್' ಎಂಬ ಪುಸ್ತಕ ಇಂಥ ಹಲವು ವಿಷಯಗಳ ಬಗ್ಗೆ ಮಾತಾಡುತ್ತದೆ. ರಸ್ತೆಯಲ್ಲಿ ವಿಪರೀತ ಕೋಪ ಬಂದಾಗ ಅದು ನಮ್ಮ ಮಿದುಳಿನ ಲೀಲೆಯೆಂದು ಅರಿತು ಸಮಾಧಾನ ಮಾಡಿಕೊಳ್ಳುವುದು ಒಳ್ಳೆಯದೇನೋ!

ಸ್ವರ್ ವಿಷಯದಲ್ಲಿ ಎರಡು ರೀತಿಯ ಆಘಾತವಾದಂತೆ ತೋರುತ್ತದೆ: ಡಿಕ್ಕಿ ಹೊಡೆದಾಗ ಆದ ವರ್ಚುಯಲ್ ದೇಹದ ಉಲ್ಲಂಘನೆ ಮತ್ತು ಕಾನ್‌ಸ್ಟೇಬಲ್ ಎಳೆದಾಗ ಆದ ನಿಜವಾದ ದೇಹದ ಉಲ್ಲಂಘನೆ. ಅವರಿಗೆ ಅಗತ್ಯವಾದ ನೆರವನ್ನು ಹಿರಿಯ ಪೋಲಿಸ್ ಅಧಿಕಾರಿಗಳು ಕೊಡಬೇಕಾಗಿದೆ.

ಆರೋವಿಲ್ ಸುತ್ತ ಮುತ್ತ
ಬೆಂಗಳೂರಿಂದ ಹಲವರು ಪಾಂಡಿಚೆರಿಗೆ ಡ್ರೈವ್ ಮಾಡಿಕೊಂಡು ಹೋಗುವುದು ಸಾಮಾನ್ಯ. ಸುಮಾರು 310 ಕಿ.ಮೀ. ದೂರದಲ್ಲಿರುವ ಈ ಸಮುದ್ರ ಪ್ರದೇಶ ಚಳಿಗಾಲದಲ್ಲಿ ಚೆನ್ನಾಗಿರುತ್ತದೆ. ಬೇಸಿಗೆಯಲ್ಲಿ ವಿಪರೀತ ಸೆಖೆ. ಹಾಗಾಗಿ ಪ್ರವಾಸಿಗರು ನವೆಂಬರ್, ಡಿಸೆಂಬರ್‌ನಲ್ಲಿ ಹೆಚ್ಚು ಹೋಗುತ್ತಾರೆ. ಆರೋವಿಲ್ ಪ್ರದೇಶ ಪಾಂಡಿಚೆರಿಯಿಂದ ಹದಿನೈದು ನಿಮಿಷಗಳ ಡ್ರೈವ್. ಇದು 21 ಚದುರ ಕಿಲೋ ಮೀಟರ್‌ನ ಒಂದು ವಿಶೇಷ ಟೌನ್‌ಶಿಪ್.

ಇಲ್ಲಿ ಸುಮಾರು 2,000 ಜನ ವಾಸವಾಗಿದ್ದಾರೆ. ಪ್ರಪಂಚದ ಎಲ್ಲ ಮೂಲೆಗಳಿಂದಲೂ ಇಲ್ಲಿ ಬಂದು ಜನ ನೆಲೆಸಿದ್ದಾರೆ. 1968ರಲ್ಲಿ 124 ರಾಷ್ಟ್ರಗಳ ಪ್ರತಿನಿಧಿಗಳು ಬಂದು ಈ ಟೌನ್‌ಶಿಪ್‌ಗೆ ಬುನಾದಿ ಹಾಕಿದರು. ಅರವಿಂದರ ತತ್ವಗಳನ್ನು ಅನುಸರಿಸುವ ಆರೋವಿಲ್‌ನಲ್ಲಿ ಎದ್ದು ಕಾಣುವುದು ಅಲ್ಲಿಯ ಜನರ ಸೌಂದರ್ಯ ಪ್ರಜ್ಞೆ. ಅವರ ಅತಿಥಿ ಗೃಹ, ಬೇಕರಿ ಎಲ್ಲವನ್ನೂ ಚೆನ್ನಾಗಿ ವಿನ್ಯಾಸ ಮಾಡಿದ್ದಾರೆ.

`ಮಾತೃ ಮಂದಿರ' ಎಂದು ಕರೆಯುವ ಅಲ್ಲಿನ ಪ್ರಮುಖ ಆಕರ್ಷಣೆ ಪೂರ್ಣಗೊಳ್ಳಲು 38 ವರ್ಷ ಹಿಡಿಯಿತಂತೆ. ಆರೋವಿಲ್‌ನ ಕರಕುಶಲ ಅಂಗಡಿಯಲ್ಲಿ ಮಾರಾಟವಾಗುವ ವಸ್ತುಗಳು ಚೆಂದವಾಗಿರುತ್ತವೆ. ಕಡಲ ತಡಿಯ ಈ ಪ್ರದೇಶ ಎಲ್ಲ ರೀತಿಯ ಪ್ರವಾಸಿಗರಿಗೆ ಇಷ್ಟ. ಈ ವರ್ಷದ ನೀಲಂ ಮತ್ತು ಹೋದ ವರ್ಷದ ಥಾನೆ ಸೈಕ್ಲೋನ್‌ನಿಂದ ಇಲ್ಲಿನ ಪ್ರವಾಸಿ ಉದ್ಯಮಕ್ಕೆ ಪೆಟ್ಟಾಗಿದೆ. ವಿದೇಶದಿಂದ ಬರುವ ಪ್ರವಾಸಿಗಳು ಅರ್ಧಕ್ಕರ್ಧ ಕಡಿಮೆಯಾಗಿದ್ದರಂತೆ. ಇನ್ನು ನೀವೇನಾದರೂ ಬೆಂಗಳೂರಿಂದ ಅಲ್ಲಿಗೆ ಹೋಗುವ ಪ್ಲಾನ್ ಇದ್ದರೆ ಒಂದು ಕಿವಿಮಾತು: ಆರ್ನಿ-ದಿಂಡಿವನಂ ರಸ್ತೆಯಲ್ಲಿ ಮಾತ್ರ ಹೋಗಬೇಡಿ. ವಿಪರೀತ ಗುಂಡಿ ಬಿದ್ದಿರುವ ಈ ರಸ್ತೆಯಲ್ಲಿ ನೀವು 30 ಕಿ.ಮೀ. ವೇಗದಲ್ಲಿ ಹೋಗುವುದೂ ಕಷ್ಟ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT