ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಿಗಳ ತರಲೆಗಳು

Last Updated 21 ಮೇ 2011, 19:30 IST
ಅಕ್ಷರ ಗಾತ್ರ

ನಾನು ಪೊಲೀಸ್ ಇಲಾಖೆಯ ಕೆಲಸಕ್ಕೆ ಸೇರಿದ ಕಾಲದಲ್ಲಿ ವರ್ಗಾವಣೆಯು ಈಗಿನಂತೆ ಇರಲಿಲ್ಲ. ಬೆಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಹಾಗೂ ಉಳಿದ ಪ್ರದೇಶಗಳಲ್ಲಿ ಆಯಾ ಜಿಲ್ಲೆಯ ಎಸ್‌ಪಿ ವರ್ಗಾವಣೆ ಪ್ರಕ್ರಿಯೆಯನ್ನು ನಡೆಸುತ್ತಿದ್ದರು.

ಜಾತಿ, ರಾಜಕಾರಣಿಗಳ ಪ್ರಭಾವ, ಅನುಕೂಲಸಿಂಧು ಧೋರಣೆ ಆಗ ಅಲ್ಪ ಪ್ರಮಾಣದಲ್ಲಷ್ಟೇ ಇತ್ತು. ಬರಬರುತ್ತಾ ಪರಿಸ್ಥಿತಿ ಹದಗೆಟ್ಟಿತು. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅವರ ಸುತ್ತಲಿನ ವಿಷವರ್ತುಲ ಪೊಲೀಸ್ ವರ್ಗಾವಣೆಯಲ್ಲಿ ದೊಡ್ಡ ಲಾಬಿ ಮಾಡತೊಡಗಿತು. ಅರಸು ಅವರು ಸುಧಾರಣೆಯನ್ನು ತರುವ ಮನಸ್ಸಿನವರಾಗಿದ್ದರೂ, ಅವರ ಸುತ್ತ ಇದ್ದವರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದರು. ಗುಂಡೂರಾವ್, ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾದಾಗಲೂ ಪೊಲೀಸ್ ವರ್ಗಾವಣೆಯಲ್ಲಿ ರಾಜಕೀಯದ ಲಾಬಿ ಮುಂದುವರಿಯಿತು. ಈಗಂತೂ ಶಾಸಕರ ಅಡುಗೆಮನೆಯಲ್ಲಿ ವರ್ಗಾವಣೆಗೆ ಶಿಫಾರಸು ಮಾಡಿಸಿಕೊಳ್ಳುವ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿದೆ.

ನಾನು ಮಾಗಡಿ ರಸ್ತೆಯಲ್ಲಿ ತರಬೇತಿ ಮುಗಿಸಿದ್ದೆ. ತಕ್ಷಣ ನನಗೆ ಪೋಸ್ಟಿಂಗ್ ಕೊಡಲಿಲ್ಲ. 1979ರ ನವೆಂಬರ್ 5ಕ್ಕೆ ಪೋಸ್ಟಿಂಗ್ ಕೊಡಬೇಕಿದ್ದರೂ ನನಗೆ ಆರ್ಡರ್ ಸಿಕ್ಕಿದ್ದು ಫೆಬ್ರುವರಿಯಲ್ಲಿ. ಡಿಸಿಪಿ (ಕ್ರೈಮ್) ಅಜಯ್‌ಕುಮಾರ್ ಸಿಂಗ್ (ಇತ್ತೀಚೆಗೆ ಅವರು ಡಿಜಿ ಆಗಿ ನಿವೃತ್ತರಾದರು) ಅವರಿಂದ ನನಗೆ ಆರ್ಡರ್ ಸಿಕ್ಕಿದ್ದು. ಬಾಣಸವಾಡಿ ಠಾಣೆಗೆ ಪೋಸ್ಟಿಂಗ್ ಆಗಿತ್ತು. ಮಧ್ಯಾಹ್ನ ಆರ್ಡರ್ ಕೊಟ್ಟು, ಸಂಜೆಯೊಳಗೆ ಚಾರ್ಜ್ ತೆಗೆದುಕೊಳ್ಳುವಂತೆ ಸೂಚಿಸಿದ್ದರಿಂದ ಕುತೂಹಲದಿಂದಲೇ ಹೋದೆ.

ಎರಡನೇ ಹಂತದ ರಾಜಕಾರಣಿ ಹಾಗೂ ಅಲ್ಲಿನ ಸಬ್ ಇನ್ಸ್‌ಪೆಕ್ಟರ್ ನಡುವೆ ಜಟಾಪಟಿ ನಡೆದಿತ್ತು. ಅವರ ಜಾಗಕ್ಕೆ ನನ್ನನ್ನು ಪೋಸ್ಟ್ ಮಾಡಿದ್ದರು. ಗರುಡಾಚಾರ್ ಕಮಿಷನರ್ ಆಗಿದ್ದ ಕಾಲವದು. ಪೊಲೀಸರು ಹೋರಾಡುವ ಸಲುವಾಗಿ ಪೊಲೀಸ್ ಸಂಘ ಕಟ್ಟಿಕೊಂಡಿದ್ದರಿಂದ ಆ ಜಟಾಪಟಿ ಜೋರಾಗಿಯೇ ಇತ್ತು. ಆಮೇಲೆ ಪೊಲೀಸ್ ಸಂಘಟನೆಗಳನ್ನು ಕಟ್ಟಲು ಬಿಡಲಿಲ್ಲವೆಂಬುದು ಬೇರೆ ಮಾತು.

ನಾನು ಹೋದಾಗ ಠಾಣೆಯ ಎದುರು ಒಂದು ಕಡೆ ಸಬ್ ಇನ್ಸ್‌ಪೆಕ್ಟರ್ ಬೇಡ ಎಂಬ ಗುಂಪು. ಇನ್ನೊಂದೆಡೆ ಬೇಕು ಎಂಬ ಗುಂಪು. ಆ ಸಂದಿಗ್ಧ ಪರಿಸ್ಥಿತಿ ನೋಡಿ ಸಹಜವಾಗಿಯೇ ನಾನು ತಲ್ಲಣಗೊಂಡೆ. ಆ ಒತ್ತಡದ ಪರಿಸ್ಥಿತಿಯಲ್ಲೇ ನಾನು ಚಾರ್ಜ್ ತೆಗೆದುಕೊಳ್ಳಬೇಕಾಯಿತು.

ರಾಮಕೃಷ್ಣ ಹೆಗಡೆಯವರ ಸರ್ಕಾರ ಚುನಾಯಿತವಾದದ್ದು ಅಲ್ಪ ಮತಗಳ ಅಂತರದಿಂದ. ಕಾಂಗ್ರೆಸ್ ಸೋತಿದ್ದ ಕಾಲ ಅದು. ಆಗ ಕಾಂಗ್ರೆಸ್ ವಿರುದ್ಧದ ಅಲೆ ಆಯಕಟ್ಟಿನ ಜಾಗಗಳಲ್ಲೂ ಏಳುವಂತೆ ನೋಡಿಕೊಳ್ಳಲಾಯಿತು. ಅದರ ಪರಿಣಾಮವೋ ಎಂಬಂತೆ ಚುನಾಯಿತ ಶಾಸಕರು ತಮ್ಮ ಕ್ಷೇತ್ರಗಳಿಗೆ ಬೇಕಾದವರನ್ನು ವರ್ಗ ಮಾಡಿಸಿಕೊಳ್ಳುವ ಅಘೋಷಿತ ಪದ್ಧತಿ ರೂಢಿಗೆ ಬಂತು. ಶಾಸಕರ ಮಾತಿಲ್ಲದಿದ್ದರೆ ಪೋಸ್ಟಿಂಗ್ ಸಾಧ್ಯವೇ ಇಲ್ಲವೆಂಬ ವಾತಾವರಣ ನಿರ್ಮಾಣವಾಯಿತು.

ಈಗ ಸಕ್ರಿಯ ರಾಜಕಾರಣದಿಂದ ನಿವೃತ್ತರಾಗಿರುವ ಹಿರಿಯ ರಾಜಕಾರಣಿಯೊಬ್ಬರು ಆಗಲೇ ನನಗೆ ಹೇಳುತ್ತಿದ್ದರು- `ಒಬ್ಬ ಶಾಸಕ ಯಶಸ್ವಿಯಾಗಬೇಕಾದರೆ ಅವನ ಕ್ಷೇತ್ರದಲ್ಲಿ ಸಮರ್ಥವಾದ ಸರ್ಕಲ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್, ಪಿಡಬ್ಲ್ಯುಡಿ ಎಂಜಿನಿಯರ್, ತಹಸೀಲ್ದಾರ್ ಇರಬೇಕು~- ಎಂದು. ಶಾಸಕರು ಸಮರ್ಥರನ್ನು ಪೋಸ್ಟಿಂಗ್ ಮಾಡಿಸಿಕೊಳ್ಳಲಿ ಎಂಬ ಉದ್ದೇಶದಿಂದ ಶುರುವಾದ ಅಘೋಷಿತ ಪದ್ಧತಿಯೇ ನಂತರದಲ್ಲಿ ಅನುಕೂಲಸಿಂಧು ಪದ್ಧತಿಯಾಗಿಬಿಟ್ಟಿತು. ತಮ್ಮಿಷ್ಟದ ಜಾಗಕ್ಕೆ ಹಾಕಿಸಿಕೊಳ್ಳಲು ಶಾಸಕರನ್ನು ಹಿಡಿಯುವುದೊಂದೇ ದಾರಿ ಎಂದು ಇಲಾಖೆಯ ಅನೇಕರು ಭಾವಿಸಿದರು. ವರ್ಗಾವಣೆ ಮಾಡಿಸಿಕೊಳ್ಳಲೆಂದೇ ಶಾಸಕರನ್ನು ಹಿಡಿಯಲು ಕೆಲವು ಅಡ್ಡದಾರಿಗಳನ್ನೂ ಬಳಸಿದರು. ಶಾಸಕರ ಪತ್ನಿ ಅಥವಾ ಸಖಿಯರ ಮೂಲಕ ಈ ಕೆಲಸ ಮಾಡಿಸಿಕೊಂಡವರೂ ಇದ್ದರು. ತಮ್ಮ ಸರಹದ್ದಿನ ವ್ಯಕ್ತಿಯ ಪೂರ್ವಾಪರ ತಿಳಿಯುವುದು ಪೊಲೀಸ್ ಅಧಿಕಾರಿಗಳಿಗೆ ಕಷ್ಟವೇನೂ ಅಲ್ಲ. ಹಾಗಾಗಿ ವರ್ಗಾವಣೆಯ ಅಡ್ಡದಾರಿಗಳನ್ನು ಹುಡುಕುವುದೂ ಸುಲಭ. ಈ ಪದ್ಧತಿಯು ಪೊಲೀಸ್ ಇಲಾಖೆಯನ್ನೂ ಮೀರಿ ಎಲ್ಲಾ ಸರ್ಕಾರಿ ನೌಕರರ ವರ್ಗಾವಣೆಯಲ್ಲೂ ರೂಢಿಗೆ ಬಂದುಬಿಟ್ಟಿತು. ಬಹುಶಃ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾದಾಗ ಈ ಹಾವಳಿ ತಪ್ಪಿಸಲು ಯತ್ನಿಸಿದರು.

ಪೊಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರ್ಪಡೆಯಾಗುವಾಗ `ಸೆರಮೋನಿಯಲ್ ಡ್ರೆಸ್~ ಹಾಕಿಕೊಂಡು ಮೇಲಧಿಕಾರಿಗಳಿಗೆ ಗೌರವ ಸೂಚಿಸಿ, ಠಾಣೆಯಲ್ಲಿ ಚಾರ್ಜ್ ಪಡೆದುಕೊಳ್ಳುವುದು ನಿಯಮ. ಯಾವಾಗ ರಾಜಕಾರಣಿಗಳ ಚಮಚಾಗಳು, ಚೇಲಾಗಳು, ಆಪ್ತ ಸಖಿಯರು ವರ್ಗಾವಣೆ ಮಾಡಿಸತೊಡಗಿದರೋ, ಆಗ ಈ ನಿಯಮದ ಬಗ್ಗೆ ಅವರಿಗೂ ಗೊತ್ತಾಯಿತು. `ಸೆರಮೋನಿಯಲ್ ಡ್ರೆಸ್~ ಹಾಕಿಕೊಂಡು ಬಂದೇ ತಮಗೂ ಗೌರವ ಸಲ್ಲಿಸಬೇಕು ಎಂದು ಅವರೆಲ್ಲಾ ಬಯಸತೊಡಗಿದರು.

ವರ್ಗಾವಣೆ ಮಾಡಿಸಿಕೊಂಡವರು ನಿರ್ಲಜ್ಜರಂತೆ ಅವರ ಈ ಬೇಡಿಕೆ ಈಡೇರಿಸಿದರು.
ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವ ಸಂದರ್ಭದಲ್ಲಿ ಧರಿಸುವ `ಸೆರಮೋನಿಯಲ್ ಡ್ರೆಸ್~ಗೆ ಇದ್ದ ಪಾವಿತ್ರ್ಯ ಹಾಳಾದದ್ದು ಹೀಗೆ. `ಸೆರಮೋನಿಯಲ್ ಡ್ರೆಸ್~ನಲ್ಲೇ ಬಂದು ಗೌರವ ಸಲ್ಲಿಸಬೇಕೆಂದು ರಾಜಕಾರಣಿಗಳ ಚೇಲಾಗಳು ಪಟ್ಟು ಹಿಡಿದದ್ದನ್ನು ವಿರೋಧಿಸಿದ ಪೊಲೀಸ್ ಅಧಿಕಾರಿಗಳೂ ಇದ್ದಾರೆಂಬುದೇ ಸಮಾಧಾನ.

ನಾನು ಅಶೋಕನಗರ ಪೊಲೀಸ್ ಠಾಣೆಯಲ್ಲಿದ್ದಾಗ ಕಣ್ಣನ್ ಎಂಬ ಶಾಸಕರಿದ್ದರು. ಈಗ ಅವರಿಲ್ಲ. ಆರೋಪಿಗಳನ್ನು ನಾವು ಹಿಡಿದ ಎಷ್ಟೋ ಸಲ ನಮ್ಮ ಮೇಲೆ ಅವರು ಕೂಗಾಡುತ್ತಿದ್ದರು. ಹಾಗೆ ಅವರು ಕೂಗಾಡುವಾಗ ಪಕ್ಕದಲ್ಲಿ ಅವರ ಚೇಲಾಗಳೋ ಅಥವಾ ನಾವು ದಸ್ತಗಿರಿ ಮಾಡಿದ ಕಡೆಯವರೋ ಇರುತ್ತಿದ್ದರು. ಆ ಜನರೆಲ್ಲಾ ಕರಗಿದ ಮೇಲೆ ಅವರು ಫೋನ್ ಮಾಡಿ, `ದಯವಿಟ್ಟು ನನ್ನನ್ನು ಕ್ಷಮಿಸಿ. ನೀವು ಮಾಡಿರುವುದು ಸರಿಯಾಗಿಯೇ ಇದೆ. ನಾನು ಸುಮ್ಮನೆ ಅವರೆದುರು ಕೂಗಾಡಿದ ನಾಟಕವಾಡಿದೆ.

ನೀವು ಅಂಥವರ ಒತ್ತಡಕ್ಕೆ ಮಣಿಯಬೇಡಿ. ಮುಂದಿನ ಕ್ರಮ ತೆಗೆದುಕೊಳ್ಳಿ~ ಎನ್ನುತ್ತಿದ್ದರು. ಮೊದಲ ಸಲ ಅವರು ಆ ರೀತಿ ಫೋನ್ ಮಾಡಿದಾಗ ನಾನು ದಂಗಾಗಿದ್ದೆ. ಆಮೇಲೆ ಅಭ್ಯಾಸವಾಯಿತು. ಇಂಥ ರಾಜಕಾರಣಿಗಳಿದ್ದರೆ ನಮಗೂ ಕೆಲಸ ಮಾಡಲು ಹುಮ್ಮಸ್ಸು ಬರುತ್ತದೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ನಾನು ಕಾರ್ಯ ನಿರ್ವಹಿಸುತ್ತಿದ್ದಾಗ ಒಬ್ಬ ಜಮೀನ್ದಾರ ಹಾಗೂ ದಲಿತ ಕುಟುಂಬವೊಂದರ ನಡುವೆ ಭೂವಿವಾದ ಶುರುವಾಯಿತು. ಜಮೀನ್ದಾರ ತುಂಬಾ ಪ್ರಬಲನಾಗಿದ್ದ. ಜೊತೆಗೆ ಸ್ಥಳೀಯ ಶಾಸಕರ ಕೋಮಿನವನೇ ಆಗಿದ್ದರಿಂದ ಅವನ ದರ್ಪ ಹೇಳತೀರದು. ದಲಿತ ಕುಟುಂಬದಲ್ಲಿ ಅಕ್ಷರಸ್ಥರೇನೋ ಇದ್ದರು. ಆದರೆ, ಎಲ್ಲರೂ ಅಮಾಯಕರಾಗಿದ್ದರು.

ವಿವಾದ ದೊಡ್ಡದಾಯಿತು. ಆ ಜಮೀನ್ದಾರ ದಲಿತ ಕುಟುಂಬಕ್ಕೆ ರೌಡಿಗಳನ್ನು ನುಗ್ಗಿಸಿ ದಾಂಧಲೆ ಮಾಡಿಸಿದ. ನಮಗೆ ಮಾಹಿತಿ ಬಂತು. ನಾವು ಅಲ್ಲಿಗೆ ಹೋದೆವು. ಆ ವಿಷಯ ಗೊತ್ತಾದದ್ದೇ ಸ್ಥಳೀಯ ಶಾಸಕ ಫೋನ್ ಮಾಡಿ, ಜಮೀನ್ದಾರನ ಪರವಾಗಿಯೇ ನಾವು ಕೆಲಸ ಮಾಡಬೇಕೆಂದು ತಾಕೀತು ಮಾಡಿದರು. ಅದು ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿ, ನಾನು ಫೋನ್ ಕಟ್ ಮಾಡಿದೆ.

ನನ್ನ ಜೊತೆ ಆಗ ಹಿರಿಯ ಕಾನ್‌ಸ್ಟೇಬಲ್ ಒಬ್ಬರಿದ್ದರು. ಅವರು ಕೇಸು ದಾಖಲು ಮಾಡಿಕೊಳ್ಳುವಂತೆ ನನಗೆ ಸೂಚಿಸಿದರು. ಇಲ್ಲದಿದ್ದರೆ ಈ ವಿಷಯದಲ್ಲಿ ನಾನು ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ಕೊಟ್ಟರು. ನನಗೆ ಕೆಲಸ ಆಗಿನ್ನೂ ಹೊಸತು. ಅವರ ಮಾತನ್ನು ಕೇಳೋಣವೆಂದರೆ, ಆ ದಲಿತ ಕುಟುಂಬದವರು ದೂರು ಕೊಡಲು ಹಿಂದೇಟು ಹಾಕಿದರು. ಅವರಿಗೂ ಆ ಕಾನ್‌ಸ್ಟೇಬಲ್ ಬುದ್ಧಿಹೇಳಿದರು. ಅತಿಕ್ರಮ ಪ್ರವೇಶ, ದಾಂಧಲೆ, ಕೊಲೆಬೆದರಿಕೆಯ ಕೇಸು ದಾಖಲಿಸಿಕೊಂಡೆವು. ಆ ಜಮೀನ್ದಾರ ಸೇರಿದಂತೆ ಆರೋಪಿಗಳನ್ನು ದಸ್ತಗಿರಿ ಮಾಡಿದೆವು. ಆರೋಪಪಟ್ಟಿ ಸಲ್ಲಿಸಿದ್ದೂ ಆಯಿತು.

ಮರುದಿನ ವಿಧಾನಮಂಡಲದ ಕಲಾಪದಲ್ಲಿ ಆ ಶಾಸಕ ಪೊಲೀಸರಿಂದ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಿಬಿಟ್ಟರು. `ಅಮಾಯಕರ ಮನೆಗೆ ನುಗ್ಗಿ ಪೊಲೀಸರು ದೌರ್ಜನ್ಯ ಮಾಡುತ್ತಿದ್ದಾರೆ. ಬಾಣಸವಾಡಿ ಸಬ್ ಇನ್ಸ್‌ಪೆಕ್ಟರನ್ನು ಕೂಡಲೇ ಅಮಾನತ್ತುಗೊಳಿಸಬೇಕು~ ಎಂದು ಪಟ್ಟುಹಿಡಿದರು. ಆಗ ಮೇಲಧಿಕಾರಿಗಳು ನನ್ನನ್ನು ಸಂಪರ್ಕಿಸಿದರು. ನಾವು ಪ್ರಕರಣದ ಅಷ್ಟೂ ವಿವರವನ್ನು ಹೇಳಿದೆವು. ಆರೋಪಪಟ್ಟಿ ಸಲ್ಲಿಸಿದ್ದರಿಂದ ಪ್ರಕರಣವು ಆಗಲೇ ನ್ಯಾಯಾಲಯದ ವಿಚಾರಣೆ ಹಂತದಲ್ಲಿತ್ತು.

ಆರೋಪಿಗಳು ಜಾಮೀನು ಪಡೆದಿದ್ದರು. ಇದು ಪೊಲೀಸ್ ದೌರ್ಜನ್ಯವಲ್ಲ ಎಂಬುದನ್ನು ಸ್ಪಷ್ಟಪಡಿಸಲು ಅಷ್ಟು ಸಾಕಿತ್ತು. ಪ್ರಕರಣದ ಆರೋಪಪಟ್ಟಿ ದಾಖಲಾಗಿದ್ದು, ಕಲಾಪದಲ್ಲಿ ಆ ವಿಷಯವನ್ನು ಚರ್ಚಿಸಲು ಸಾಧ್ಯವಿಲ್ಲ ಎಂದಾಯಿತು. ನಮ್ಮ ಕಾನ್‌ಸ್ಟೇಬಲ್ ಅನುಭವದ ಮಾತಿನಿಂದ ವಿನಾ ಕಾರಣ ನಾನು ಸಿಕ್ಕಿಹಾಕಿಕೊಳ್ಳುವುದು ತಪ್ಪಿತು. ರಾಜಕಾರಣಿಗಳು ಅಮಾಯಕರ ಬದುಕಿನ ಮೇಲೆ ದೌರ್ಜನ್ಯ ನಡೆದಾಗಲೂ ಹೇಗೆ ವರ್ತಿಸುತ್ತಾರೆಂಬುದಕ್ಕೆ ಇದು ಉದಾಹರಣೆ.

ಮುಂದೆ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗೆ ವರ್ಗಾವಣೆಯಾದೆ. ಆ ಭಾಗದ ಶಾಸಕರಾಗಿದ್ದವರು ಬಸವಲಿಂಗಪ್ಪ. ಅವರು ಮೇಧಾವಿ. ಮುಂದೆ ಚುನಾವಣೆ ನಡೆದು, ಅವರ ವಿರುದ್ಧ ಅಲ್ಪ ಮತಗಳಿಂದ ಬೇರೊಬ್ಬರು ಗೆದ್ದರು. ಅರ್ಧರಾತ್ರಿಯಲ್ಲಿ ಐಶ್ವರ್ಯ ಸಿಕ್ಕ ಅಲ್ಪನಂತೆ ಅವರು ವರ್ತಿಸತೊಡಗಿದರು. ಪೊಲೀಸ್ ಅಧಿಕಾರಿಗಳನ್ನೆಲ್ಲಾ ಏಕವಚನದಲ್ಲಿ ಸಂಬೋಧಿಸುತ್ತಿದ್ದ ಅವರದ್ದು ಹರಕುಬಾಯಿ. ಮಾತಿನ ಮೇಲೆ ಹಿಡಿತವೇ ಇರಲಿಲ್ಲ.

ಆ ಶಾಸಕರು ಆಡಳಿತದಲ್ಲಿದ್ದಾಗಲೇ ಲೋಕಸಭೆ ಚುನಾವಣೆ ನಡೆಯಿತು. ಜಾರ್ಜ್ ಫರ್ನಾಂಡಿಸ್ ಜನತಾಪಕ್ಷದಿಂದ, ಜಾಫರ್ ಷರೀಫ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಶಿವಾಜಿ ಗಣೇಶನ್ ತರಹದ ಘಟಾನುಘಟಿ ಬಂದು ಪ್ರಚಾರ ಮಾಡಿದ್ದರು. ಒಂದು ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸಲು ನಾನು ಹೋದೆ. ಪೋಲಿಂಗ್ ಸ್ಟೇಷನ್‌ಗೆ 20ಕ್ಕೂ ಹೆಚ್ಚು ಜನ ನುಗ್ಗಿದ್ದಾರೆ ಎಂದು ಗೊತ್ತಾಯಿತು. ಒಳಗೆ ಹೋದರೆ, ಆ ಶಾಸಕರೇ ನಿಂತಿದ್ದರು. ಅವರು ಪೋಲಿಂಗ್ ಸ್ಟೇಷನ್ ಆಫೀಸರ್‌ಗೆ ಅಶ್ಲೀಲ ಪದಗಳಿಂದ ಬೈಯುತ್ತಿದ್ದರು. ಏಜೀಸ್ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದ ಅಮಾಯಕ ಅಧಿಕಾರಿ ಅವರು. ಆ ಮಾತುಗಳನ್ನು ಕೇಳಿ ಘಾಸಿಗೊಂಡಿದ್ದರು. ಮಲ್ಲಿಕಾರ್ಜುನ ರೆಡ್ಡಿ ಎಂಬ ಪೊಲೀಸ್ ಕಾನ್‌ಸ್ಟೇಬಲ್ ಅಲ್ಲಿ ಭದ್ರತೆಗೆ ನಿಂತಿದ್ದರು. ಅವರನ್ನೂ ಶಾಸಕರು ಅವಾಚ್ಯ ಶಬ್ದಗಳಿಂದ ಅದಾಗಲೇ ನಿಂದಿಸಿದ್ದರು. ಆ ಕಾನ್‌ಸ್ಟೇಬಲ್ ಅಂತೂ ಕುದಿಯುತ್ತಿದ್ದರು. `ನೀವು ಪರ್ಮಿಷನ್ ಕೊಟ್ಟರೆ ಅವನನ್ನು ಹೊರಗೆ ದಬ್ಬಿ ಈ ಯೂನಿಫಾರ್ಮ್ ಬಿಚ್ಚಿಟ್ಟು, ಕೆಲಸಕ್ಕೆ ನಮಸ್ಕಾರ ಹೊಡೆಯುತ್ತೇನೆ. ಇದು ಆತ್ಮಗೌರವದ ಪ್ರಶ್ನೆ, ಸರ್~ ಎಂದು ರೋಷದಿಂದ ಮಾತಾಡಿದರು. ಅವರ ಕೋಪ ಸಹಜವಾಗಿಯೇ ಇತ್ತು.

ಅಷ್ಟೊಂದು ಜನ ಪೋಲಿಂಗ್ ಬೂತ್‌ಗೆ ಬರುವ ಹಾಗಿಲ್ಲ. ದಯವಿಟ್ಟು ಹೊರಗೆ ನಡೆಯಿರಿ ಎಂದು ಆ ಶಾಸಕರಲ್ಲಿ ವಿನಂತಿಸಿಕೊಂಡೆ. ಜಗ್ಗಲಿಲ್ಲ. ನನ್ನ ಮೇಲೂ ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿದರು. `ನಾನು ಎಂಎಲ್‌ಎ ಇದೀನಿ. ನನ್ನನ್ನೇ ಆಚೆ ಕಳಿಸುತ್ತೀಯಾ~ ಎಂದು ದಬಾಯಿಸಿದರು. ನಿಯಮದಂತೆ ಅವರು ಬ್ಯಾಡ್ಜ್ ಧರಿಸಿರಲಿಲ್ಲ. ಆ ಬಗ್ಗೆ ಪ್ರಸ್ತಾಪಿಸಿದೆ. `ಅದೇನು ಮಾಡ್ತೀಯೋ ಮಾಡಿಕೋ. ಇಲ್ಲಿಂದ ಅಲ್ಲಾಡಲ್ಲ~ ಎಂದು ಪಟ್ಟುಹಿಡಿದರು. ಮತ್ತೆ ಅವರ ಬೈಗುಳ ಮುಂದುವರಿಯಿತು.

ಎಚ್ಚರಿಕೆ ಕೊಟ್ಟ ನಂತರವೂ ಸುಮ್ಮನಾಗದ ಅವರನ್ನು ಅನಿವಾರ್ಯವಾಗಿ ಕೊರಳುಪಟ್ಟಿ ಹಿಡಿದು ಆಚೆಗೆ ಬಿಟ್ಟೆ. ಅವರ ಚೇಲಾಗಳು ಕೂಗಾಡಿಕೊಂಡು ಹೊರಗೆಬಂದರು. ನೀರು ನೆರಳಿಲ್ಲದ ಜಾಗಕ್ಕೆ ನನ್ನನ್ನು ಎತ್ತಂಗಡಿ ಮಾಡಿಸುವುದಾಗಿ ಪ್ರತಿಜ್ಞೆ ಮಾಡಿ ಆ ಶಾಸಕರು ಅಲ್ಲಿಂದ ಹೊರಟರು.

ಮುಂದಿನ ವಾರ:ಮುಂದೆ ಅದೇ ಶಾಸಕ ಸಂಕಷ್ಟಕ್ಕೆ ಸಿಲುಕಿದ್ದು...
ಶಿವರಾಂ ಅವರ ಮೊಬೈಲ್ ನಂಬರ್ 94483 13066
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT