ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಿಗಳು ಉದ್ಯಮಿಗಳಿಗೆ ನಿಕಟರಾದಾಗ...

Last Updated 16 ಜೂನ್ 2018, 9:16 IST
ಅಕ್ಷರ ಗಾತ್ರ

ಜುಲೈ 21ನೇ ಮಂಗಳವಾರ ‘ದ ಹಿಂದೂ’ ಪತ್ರಿಕೆಯ ಬೆಂಗಳೂರು ಆವೃತ್ತಿಯನ್ನು ಮುಂದಿರಿಸಿಕೊಂಡು ನಾನು ಈ ಅಂಕಣ ಬರೆಯುತ್ತಿದ್ದೇನೆ. ಪತ್ರಿಕೆಯ ಮುಖಪುಟದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ, ಈಗ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ದೊಡ್ಡ ಚಿತ್ರ ಇದೆ. ಆಸಕ್ತಿಕರ ವಿಷಯವೆಂದರೆ ಈ ಚಿತ್ರದ ಜೊತೆಗೆ ಖರ್ಗೆ ಅವರು ಕರ್ನಾಟಕ ಅಥವಾ ದೆಹಲಿಯಲ್ಲಿ ನೀಡಿರುವ ಯಾವುದೇ ಹೇಳಿಕೆ ಇಲ್ಲ.

ಬದಲಿಗೆ ಇದು ಪ್ರುಡೆನ್ಶಿಯಲ್‌ ಪ್ರಾಪರ್ಟೀಸ್‌ ಎಂಬ ಸಂಸ್ಥೆ ನೀಡಿದ ಜಾಹೀರಾತಿನ ಭಾಗ. ಚಿತ್ರದ ಜೊತೆಗೆ ಇರುವ ಬರಹ ಹೀಗೆ ಆರಂಭವಾಗುತ್ತದೆ: ‘ಅತ್ಯುತ್ತಮವಾದ ಅನುಗ್ರಹಗಳು ಡಾ. ಖರ್ಗೆ ಅವರ ಮೇಲೆ ಸುರಿಯಲಿ. ಶ್ರೀ ಖರ್ಗೆ ಅವರು ತಮ್ಮೆಲ್ಲ ಕಾರ್ಯಚಟುವಟಿಕೆಗಳಲ್ಲಿ ಯಶಸ್ಸು ಸಾಧಿಸುವ ಶಕ್ತಿಯನ್ನು ಪಡೆದುಕೊಳ್ಳಲಿ ಎಂದು ಅವರ 74ನೇ ಹುಟ್ಟುಹಬ್ಬದ ದಿನವಾದ ಜುಲೈ 21ರಂದು ಸರ್ವಶಕ್ತನಲ್ಲಿ ಪ್ರಾರ್ಥಿಸುತ್ತೇವೆ’.

ಎರಡು ಕಾರಣಕ್ಕೆ ಈ ಜಾಹೀರಾತು ನನಗೆ ಕುತೂಹಲಕರವಾಗಿ ಕಂಡಿತು. ಒಂದು ಕಾರಣ ಸ್ವಲ್ಪ ಹುಡುಗಾಟಿಕೆಯದ್ದು- ಡಾ. ಎಂದು ಆರಂಭವಾದ ಸಂಬೋಧನೆ ಒಮ್ಮಿಂದೊಮ್ಮೆಲೆ ಮತ್ತು ಯಾವುದೇ ಕಾರಣವಿಲ್ಲದೆ ‘ಶ್ರೀ’ ಯಾಕಾಯಿತು (ರಾಜಕಾರಣಿ ವರ್ಗದ ಇತರ ಹಲವರಂತೆ ಖರ್ಗೆ  ಡಾಕ್ಟರೇಟ್‌ ಪದವಿ ಪಡೆಯುವುದಕ್ಕೆ ಪಾಂಡಿತ್ಯ ಪೂರ್ಣ ಮಹಾಪ್ರಬಂಧ ಬರೆಯಬೇಕಿಲ್ಲ- ಇದನ್ನು ಅರಿತುಕೊಂಡ ಜಾಹೀರಾತು ಬರಹಗಾರ ‘ಡಾಕ್ಟರ್‌’ ಪದಕ್ಕೆ ಕೊಕ್ಕೆ ಹಾಕಿರಬಹುದು). ಖಾಸಗಿ ಕಂಪೆನಿಯೊಂದು ಹಿರಿಯ ರಾಜಕಾರಣಿಯೊಬ್ಬರನ್ನು ಬಹಿರಂಗವಾಗಿ ಈ ರೀತಿಯಲ್ಲಿ ಹೊಗಳಿರುವುದು ಗಂಭೀರವಾದ ಎರಡನೇ ಕಾರಣ.

ಪ್ರುಡೆನ್ಶಿಯಲ್ ಪ್ರಾಪರ್ಟೀಸ್ ಯಾರಿಗೆ ಸೇರಿದ್ದು? ಗೂಗಲ್‌ನಲ್ಲಿ ಹುಡುಕಾಡಿದೆ. ಅದೊಂದು ಷೇರುಪೇಟೆಯಲ್ಲಿ ಪಟ್ಟಿಯಾಗಿರುವ ಕಂಪೆನಿಯಂತೆ ತೋರಲಿಲ್ಲ. ಈ ಸಂಸ್ಥೆ ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟೊಂದನ್ನು ನಿರ್ಮಿಸಿರುವುದಾಗಿ ನಿರ್ಮಾಣ ವಲಯದ ಅಂತರ್ಜಾಲ ತಾಣವೊಂದು ಹೇಳುತ್ತದೆ. ಹಾಗಾಗಿ ಬಹುಶಃ ಅದು ಖರ್ಗೆ ಅವರ ತವರು ರಾಜ್ಯದಲ್ಲಿರುವ ನಿರ್ಮಾಣ ಸಂಸ್ಥೆ (ಇದು ನನ್ನ ರಾಜ್ಯ ಸಹ).

ಖರ್ಗೆ ಅವರನ್ನು ಗೌರವಿಸುವುದಕ್ಕಾಗಿ ಪ್ರುಡೆನ್ಶಿಯಲ್ ಪ್ರಾಪರ್ಟೀಸ್ ಯಾಕೆ ಹಣ ವೆಚ್ಚ ಮಾಡಬೇಕು? ಈ ಪ್ರಶ್ನೆಗೆ ಈ ಕಂಪೆನಿ ಮಾತ್ರ ಉತ್ತರಿಸುವುದಕ್ಕೆ ಸಾಧ್ಯ. ಅದರೆ ಇದು ಸ್ವಲ್ಪ ವಿಚಿತ್ರವಾಗಿ ಕಾಣಿಸುತ್ತದೆ. ಕಂಪೆನಿಯ ಮಾಲೀಕರು ಗೆಳೆಯರಾಗಿದ್ದರೆ ಫೋನ್ ಮೂಲಕ ಖರ್ಗೆ ಅವರಿಗೆ ಶುಭಾಶಯ ಹೇಳಬಹುದಿತ್ತು. ಆತ್ಮೀಯ ಗೆಳೆಯರಾಗಿದ್ದರೆ ಡಾ. ಖರ್ಗೆ ಅವರಿಗೆ ಖಾಸಗಿಯಾಗಿ ಔತಣ ಏರ್ಪಡಿಸಬಹುದಿತ್ತು. ಆದರೆ ಪ್ರಮುಖ ಇಂಗ್ಲಿಷ್ ದಿನಪತ್ರಿಕೆಯಲ್ಲಿ ಈ ಜಾಹೀರಾತು ಯಾಕೆ? ಪ್ರುಡೆನ್ಶಿಯಲ್ ಪ್ರಾಪರ್ಟೀಸ್ ಶ್ರೀ/ಡಾ ಖರ್ಗೆ ಅವರ ಬಗೆಗಿನ ಪ್ರೀತಿಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದು ಯಾಕೆ?

ಈ ಜಾಹೀರಾತು ಕಾಂಗ್ರೆಸ್‌ನ  ಇನ್ನೊಂದು ಕಾಲದ ರಾಜಕಾರಣಿಯೊಬ್ಬರನ್ನು ನೆನಪಿಸುವಂತೆ ಮಾಡಿತು. 1949ರಲ್ಲಿ ಜವಾಹರಲಾಲ್ ನೆಹರೂ ಅವರು ಮೊದಲ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿದರು. ನ್ಯೂಯಾರ್ಕ್‌ನ ಮೇಯರ್, ನೆಹರೂ ಅವರಿಗೆ ಔತಣ ಏರ್ಪಡಿಸಿದರು. ಮೇಯರ್ ತಮ್ಮ ಸ್ವಾಗತ ಭಾಷಣವನ್ನು ಹೀಗೆ ಆರಂಭಿಸಿದರು: ‘ಶ್ರೀ ನೆರೂ, ಈ ಟೇಬಲ್‌ನ ಸುತ್ತ ಲಕ್ಷಾಂತರ ಡಾಲರ್‌ಗಳಿವೆ...’

ಗೌರವಾನ್ವಿತ ಅತಿಥಿಯನ್ನು ಸಂತೋಷಪಡಿಸುವುದಕ್ಕಾಗಿ ಆಡಿದ ಮಾತುಗಳು ಅವರ ಮನನೋಯಿಸಿದವು. ನೆಹರೂ ಅವರಿಗೆ ವ್ಯಾಪಾರ ಮತ್ತು ವ್ಯಾಪಾರಿಗಳ ಬಗ್ಗೆ ಇಷ್ಟ ಇಲ್ಲ ಎನ್ನುವುದು ರಹಸ್ಯವೇನೂ ಆಗಿರಲಿಲ್ಲ. ನೆಹರೂ ಅವರು ಪ್ರಧಾನಿಯಾಗಿದ್ದಷ್ಟೂ ದಿನ ಕಾಂಗ್ರೆಸ್ ಪಕ್ಷವು ಬಂಡವಾಳಶಾಹಿ ವರ್ಗವನ್ನು ಸಾಕಷ್ಟು ದೂರದಲ್ಲಿಯೇ ಇರಿಸಿತ್ತು. ಸ್ವಾತಂತ್ರ್ಯದ ಆರಂಭದ ದಶಕದಲ್ಲಿ ಅರ್ಥ ವ್ಯವಸ್ಥೆಯಲ್ಲಿ ಸರ್ಕಾರದ ಶಕ್ತಿಯುತ ಭಾಗವಹಿಸುವಿಕೆ ಅಗತ್ಯ.

ಭಾರತದ ಪ್ರಮುಖ ಉದ್ಯಮಪತಿಗಳು ತಮ್ಮ ‘ಬಾಂಬೆ ಪ್ಲಾನ್’ನಲ್ಲಿ ಇದನ್ನು ವ್ಯಕ್ತಪಡಿಸಿಯೂ ಇದ್ದರು. ಇನ್ನೊಂದೆಡೆ, 1950ರ ದಶಕದ ಕೊನೆಯಲ್ಲಿ ಅರ್ಥ ವ್ಯವಸ್ಥೆಯನ್ನು ಉದಾರೀಕರಣಗೊಳಿಸುವ ಸಮಯವೂ ಬಂದಿತ್ತು. ಇದನ್ನು ನೆಹರೂ ಅವರ ಮಾಜಿ ಸಹೋದ್ಯೋಗಿ ಸಿ. ರಾಜಗೋಪಾಲಾಚಾರಿ ಗುರುತಿಸಿದ್ದರು. 1959ರಲ್ಲಿ ಸ್ಥಾಪನೆಗೊಂಡ ಅವರ ಸ್ವತಂತ್ರ ಪಕ್ಷ ‘ಲೈಸೆನ್ಸ್-ಪರ್ಮಿಟ್-ಕೋಟಾ’ ವ್ಯವಸ್ಥೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿತ್ತು.

ನೆಹರೂ ಅವರ ಮಗಳು ಮುಕ್ತ ವ್ಯಾಪಾರದ ಪ್ರಯೋಜನಗಳ ಬಗ್ಗೆ ಇನ್ನಷ್ಟು ಅನುಮಾನಗಳನ್ನು ಹೊಂದಿದ್ದರು. 1960ರ ದಶಕದ ಕೊನೆಯ ಹೊತ್ತಿಗೆ ಸಾರ್ವಜನಿಕ ವಲಯದ ಉದ್ಯಮಗಳು ಅದಕ್ಷ ಮತ್ತು ಅನುತ್ಪಾದಕ ಎಂಬುದು ಸ್ಪಷ್ಟವಾಗತೊಡಗಿತ್ತು. ದುರಂತವೆಂದರೆ, ಪ್ರಧಾನಿ ಇಂದಿರಾ ಗಾಂಧಿ  ಮತ್ತಷ್ಟು ರಾಷ್ಟ್ರೀಕರಣಗಳ ಮೂಲಕ ಭಾರತದ ಆರ್ಥಿಕ ಪ್ರಗತಿಗೆ ಶ್ರಮಿಸಿದರು. ಬಹುಶಃ ನೆಹರೂ ಮತ್ತು ಇಂದಿರಾ ಗಾಂಧಿ ಅವರು ವ್ಯಾಪಾರಿಗಳ ಬಗ್ಗೆ ಅನಗತ್ಯ ಅನುಮಾನಗಳನ್ನು ಹೊಂದಿದ್ದರು.

ಈಗ ರಾಜಕಾರಣಿಗಳು ವ್ಯಾಪಾರಿಗಳಿಗೆ ಅತ್ಯಂತ ನಿಕಟವಾಗಿದ್ದಾರೆ. ಶ್ರೀ ಖರ್ಗೆ ಅವರಿಗೆ ಶುಭ ಕೋರಿದ ಜಾಹೀರಾತು, ರಾಜ್ಯಗಳು ಮತ್ತು ರಾಜಕೀಯ ಪಕ್ಷಗಳೆಲ್ಲವನ್ನೂ ವ್ಯಾಪಿಸಿರುವ ಈ ಪ್ರವೃತ್ತಿಯ ಸಂಕೇತವಾಗಿದೆ. ಹಾಗಾಗಿಯೇ ‘2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿದ ಬಳಿಕ ಅದಾನಿ ಸಮೂಹ ಅದರಲ್ಲೂ ವಿಶೇಷವಾಗಿ ಅದಾನಿ ಎಂಟರ್‌ಪ್ರೈಸಸ್ ಷೇರುಗಳ ಬೆಲೆ ಏರತೊಡಗಿದೆ’ ಎಂದು 2014ರ ಮೇನಲ್ಲಿ ‘ಎಕನಾಮಿಕ್ ಟೈಮ್ಸ್’ ಪತ್ರಿಕೆ ವರದಿ ಮಾಡಿತು.

ನರೇಂದ್ರ ಮೋದಿ ಮತ್ತು ಗೌತಮ್ ಅದಾನಿ ಆತ್ಮೀಯರು ಎಂದು 2015ರ ಏಪ್ರಿಲ್‌ನಲ್ಲಿ ಮತ್ತೊಂದು ಪತ್ರಿಕೆ ಬರೆಯಿತು. ‘ಮೋದಿ ಅವರು ಅಮೆರಿಕ, ಆಸ್ಟ್ರೇಲಿಯಾ, ಬ್ರೆಜಿಲ್ ಮತ್ತು ಜಪಾನ್‌ಗೆ ಭೇಟಿ ನೀಡಿದಾಗ ಅದಾನಿ ಜೊತೆಗೇ ಇದ್ದರು. ಈ ಸಂಬಂಧ ಈಗ ಸಾರ್ವಜನಿಕವಾಗಿ ಗೋಚರಿಸುತ್ತಿದೆ. ಆದರೆ ಅದು ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ಇದೆ’ ಎಂದು ‘ಹಿಂದುಸ್ತಾನ್‌ ಟೈಮ್ಸ್’ ಪತ್ರಿಕೆ ಬರೆದಿದೆ.

2014ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದು ಉದ್ಯಮ ಸಮೂಹದ ಷೇರುಗಳ ಬೆಲೆ ಏರಿದರೆ ಮತ್ತೊಂದು ಉದ್ಯಮ ಸಮೂಹದ ಷೇರುಗಳ ಬೆಲೆ ಇಳಿದಿದೆ. ಹಾಗಾಗಿಯೇ 2015ರಲ್ಲಿ ಜಿಂದಾಲ್ ಸಮೂಹದ ಷೇರುಗಳ ಬೆಲೆ ಕಳೆದ ಒಂದು ವರ್ಷದ ಅವಧಿಯಲ್ಲಿ ತೀವ್ರವಾಗಿ ಇಳಿದಿದೆ. 2009ರಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಜಿಂದಾಲ್ ಸಮೂಹಕ್ಕೆ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಕಲ್ಲಿದ್ದಲು ಗಣಿಗಳನ್ನು ನೀಡಲಾಗಿದೆ. 

ಆದರೆ ಅದೇ ಹೊತ್ತಿಗೆ ಸರ್ಕಾರಿ ಸ್ವಾಮ್ಯದ ನವರತ್ನ ಸಂಸ್ಥೆ ಕೋಲ್ ಇಂಡಿಯಾಕ್ಕೆ ಮೊಜಾಂಬಿಕ್‌ಗೆ ಹೋಗಿ ಕಲ್ಲಿದ್ದಲು ನಿಕ್ಷೇಪ ಹುಡುಕುವಂತೆ ಹೇಳಲಾಗಿತ್ತು ಎಂದು ‘ಡಿಎನ್‍ಎ’ ಪತ್ರಿಕೆ ಬರೆದಿದೆ. ರಾಜಕಾರಣಿಯೊಬ್ಬರು ಉದ್ಯಮಿಯ ಸ್ನೇಹ ಬೆಳೆಸುವುದಕ್ಕೆ ಅಥವಾ ಉದ್ಯಮಿ ರಾಜಕಾರಣಿಯ ಗೆಳೆಯನಾಗುವುದಕ್ಕೆ ನೈತಿಕವಾಗಿ ಅಥವಾ ಕಾನೂನು ಪ್ರಕಾರ ಯಾವುದೇ ನಿಷೇಧ ಇಲ್ಲ. ಬಹುಶಃ ಮೋದಿ ಮತ್ತು  ಅದಾನಿ ಗೆಳೆಯರು ಮಾತ್ರ ಆಗಿರಬಹುದು.

ಆದರೆ ಹೂಡಿಕೆದಾರರು ಈ ಗೆಳೆತನಕ್ಕೆ ಹೆಚ್ಚು ಗಾಢವಾದ ಅರ್ಥ ಇದೆ ಎಂದು ಭಾವಿಸುತ್ತಾರೆ. ಈ ಗ್ರಹಿಕೆ ವಾಸ್ತವವಾಗಿದ್ದರೂ ಅಥವಾ ಊಹೆ ಆಗಿದ್ದರೂ ಅದು ಷೇರು ಮಾರುಕಟ್ಟೆಯ ಮೇಲೆ ಪ್ರತಿಫಲನ ಉಂಟು ಮಾಡುತ್ತದೆ. ಇದೇ ರೀತಿಯಲ್ಲಿ ಖರ್ಗೆ ಪ್ರಕರಣದಲ್ಲಿಯೂ, ಅವರು ಮತ್ತು ಪ್ರುಡೆನ್ಶಿಯಲ್ ಪ್ರಾಪರ್ಟೀಸ್ ಮಾಲೀಕರು ಗೆಳೆಯರು ಮಾತ್ರ ಆಗಿರಬಹುದು. ಆದರೆ ಈ ಗೆಳೆತನವನ್ನು ಪತ್ರಿಕೆಯೊಂದರ ಮುಖಪುಟದಲ್ಲಿ ಜಾಹೀರಾತು ನೀಡಿ ಪ್ರದರ್ಶಿಸುವುದು ಸ್ವಲ್ಪ ವಿಚಿತ್ರ ಅನಿಸುತ್ತದೆ.

ದೇಶ ಸ್ವತಂತ್ರಗೊಂಡ ಆರಂಭಿಕ ದಶಕದಲ್ಲಿ ರಾಜಕಾರಣ ಮತ್ತು ವ್ಯಾಪಾರದ ನಡುವೆ ಕಲ್ಲಿನ ಗೋಡೆ ಕಟ್ಟಿಕೊಂಡದ್ದು ಒಳ್ಳೆಯ ಕೆಲಸ ಎಂದು ಭಾವಿಸಬೇಕಾಗಿಲ್ಲ. ಪ್ರಮುಖ ರಾಜಕಾರಣಿಗಳು ಉದ್ಯಮಿಗಳ ಬಗ್ಗೆ ಹೊಂದಿದ್ದ ಅನುಮಾನ ನಾಗರಿಕ ಸೇವೆಯ ಪ್ರಮುಖ ಅಧಿಕಾರಿಗಳಲ್ಲಿಯೂ ಇತ್ತು. ಅವರು ತಲೆ ಚಿಟ್ಟು ಹಿಡಿಸುವ ನಿಯಮಗಳು ಮತ್ತು ನಿರ್ಬಂಧಗಳ ಮೂಲಕ ಉದ್ಯಮಶೀಲತೆಗೆ ತಣ್ಣೀರೆರಚುವ ಕೆಲಸ ಮಾಡಿದರು. ಅದೇ ರೀತಿ ರಾಜಕಾರಣ, ಉದ್ಯಮದ ನಡುವಣ ಎಲ್ಲ ಬೇಲಿಗಳನ್ನೂ ಕಿತ್ತೆಸೆಯುವುದು ಕೂಡ ಉತ್ತಮ ಬೆಳವಣಿಗೆ ಅಲ್ಲ. ಇದು ಅಧಿಕಾರದಲ್ಲಿರುವವರಿಗೆ ಹತ್ತಿರವಾಗುವುದರಲ್ಲಿ ನಿಪುಣರಾದ ಉದ್ಯಮಿಗಳಿಗೆ ನ್ಯಾಯಸಮ್ಮತವಲ್ಲದ ಅನುಕೂಲಗಳನ್ನು ಒದಗಿಸುತ್ತದೆ.

ಬಂಡವಾಳಶಾಹಿಗಳು ಒಂದು ವರ್ಗವಾಗಿ ಭಾರತದ ಪ್ರಗತಿಗೆ ಬಹಳ ಮುಖ್ಯ ಎಂದು ಜವಾಹರಲಾಲ್ ನೆಹರೂ ಭಾವಿಸಿರಲಿಲ್ಲ. ಆದರೆ ರಾಜಗೋಪಾಲಾಚಾರಿ ಇದಕ್ಕೆ ವ್ಯತಿರಿಕ್ತ ನಿಲುವು ಹೊಂದಿದ್ದರು. ಬಂಡವಾಳಶಾಹಿಗಳು ಒಂದು ವರ್ಗವಾಗಿ ಭಾರತೀಯರಿಗೆ ಅತ್ಯಗತ್ಯವಾಗಿದ್ದ ಉದ್ಯೋಗ ಮತ್ತು ಆದಾಯ ಸೃಷ್ಟಿಸಬಲ್ಲರು ಎಂದು ಅವರು ಭಾವಿಸಿದ್ದರು. ಈ ಎರಡೂ ಚಿಂತನೆಗಳಲ್ಲಿಯೂ ವೈಯಕ್ತಿಕವಾದದ್ದು ಏನೂ ಇರಲಿಲ್ಲ.

ಆದರೆ ಇಂದು ರಾಜಕಾರಣಿಗಳಿಗೆ ವ್ಯಾಪಾರದ ಬಗೆಗಿರುವ ಧೋರಣೆ ಸೈದ್ಧಾಂತಿಕ ಅಂಶಗಳ ಮೇಲೆ ಆಧರಿತವಾಗಿಲ್ಲ. ಬದಲಿಗೆ, ಅವರು ‘ಆಯ್ದ’ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುತ್ತಾರೆ ಅಥವಾ ಕೆಲವರಿಗೆ ಅನನುಕೂಲ ಉಂಟು ಮಾಡುತ್ತಾರೆ. ಭಾರತದಲ್ಲಿ ರಿಯಲ್ ಎಸ್ಟೇಟ್ ಮತ್ತು ಗಣಿಗಾರಿಕೆ ಅತಿ ಹೆಚ್ಚು ಲಾಭದಾಯಕ ವಲಯಗಳಾಗಿರುವುದು ಖಂಡಿತವಾಗಿಯೂ ಆಕಸ್ಮಿಕವಲ್ಲ. ಈ ವಲಯಗಳು ಅತ್ಯಂತ ಮುಖ್ಯವಾಗಿ ಸರ್ಕಾರದ ಸ್ವಾಧೀನದಲ್ಲಿರುವ ಸಂಪನ್ಮೂಲಗಳ ಲಭ್ಯತೆ ಮೇಲೆ ಅವಲಂಬಿತವಾಗಿವೆ. ಈ ಸಂಪನ್ಮೂಲಗಳನ್ನು ತನಗೆ ಇಷ್ಟ ಇರುವ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ಹಂಚುವ ವಿವೇಚನಾಧಿಕಾರ ಸರ್ಕಾರಕ್ಕೆ ಇದೆ.

ರಾಜಕಾರಣ ಮತ್ತು ವ್ಯಾಪಾರದ ನಡುವಣ ಗಡಿಗಳು ಶಿಥಿಲವಾಗುತ್ತಿರುವುದು ಗುತ್ತಿಗೆಗಳನ್ನು ಆದ್ಯತೆ ಮೇಲೆ ನೀಡುವುದರಲ್ಲಿ ಮಾತ್ರವಲ್ಲದೆ ಇತರ ಹಲವು ರೀತಿಗಳಲ್ಲಿಯೂ ವ್ಯಕ್ತವಾಗುತ್ತಿದೆ. ಕರ್ನಾಟಕದಲ್ಲಿ ಹಲವು ರಿಯಲ್ ಎಸ್ಟೇಟ್ ಮತ್ತು ಗಣಿ ಉದ್ಯಮಿಗಳು ಶಾಸಕರು ಮತ್ತು ಸಚಿವರಾಗಿ ಸಾರ್ವಜನಿಕ ನೀತಿಯ ಮೇಲೆ ತಮ್ಮ ಪರವಾಗಿ ನೇರ ಪ್ರಭಾವ ಬೀರಿದ್ದಾರೆ. ಇದೇ ಪ್ರವೃತ್ತಿ ಇತರ ರಾಜ್ಯಗಳಲ್ಲಿಯೂ ಕಂಡು ಬಂದಿದೆ. ಈ ಮಧ್ಯೆ, ಕೆಲವು ವ್ಯಾಪಾರಿಗಳು ರಾಜ್ಯಸಭೆ ಸ್ಥಾನವನ್ನು ಖರೀದಿಸಿದ್ದಾರೆ. ಹಿರಿಯ ಐ.ಎ.ಎಸ್ ಅಧಿಕಾರಿಗಳು ನಿವೃತ್ತಿ ನಂತರ ಯಾವುದೇ ಎಲ್ಲೆಗಳನ್ನು ಇರಿಸಿಕೊಳ್ಳದೆ ಖಾಸಗಿ ವಲಯಕ್ಕೆ ಸೇರಿಕೊಳ್ಳುತ್ತಾರೆ.

ಶಕ್ತಿಶಾಲಿ ವ್ಯಾಪಾರ ಹಿತಾಸಕ್ತಿಗಳು ಮಾಧ್ಯಮದಲ್ಲಿಯೂ ಪ್ರಭಾವಶಾಲಿಯಾಗುವುದು ಹೆಚ್ಚುತ್ತಿದೆ. ಕೆಲವು ಕಂಪೆನಿಗಳು ಸುದ್ದಿಗಳಿಗೆ ಹಣ ನೀಡುತ್ತವೆ; ಇನ್ನೂ ಕೆಲವರು ಇನ್ನಷ್ಟು ಮುಂದೆ ಹೋಗಿ ತಾವೇ ದಿನಪತ್ರಿಕೆಗಳು ಮತ್ತು ಟಿ.ವಿ. ವಾಹಿನಿಗಳ ಮಾಲೀಕತ್ವ ಹೊಂದಿದ್ದಾರೆ. ಇನ್ನೂ ದುಗುಡದ ಸಂಗತಿಯೆಂದರೆ ನಿಷ್ಪಕ್ಷಪಾತ ವರದಿಗಾರರನ್ನು ಬೆದರಿಸಲು ಮತ್ತು ಕೆಲವೊಮ್ಮೆ ಹತ್ಯೆ ಮಾಡುವುದಕ್ಕಾಗಿ ಭೂಗತ ಪಾತಕಿಗಳನ್ನು ಬಳಸಿಕೊಳ್ಳುತ್ತಾರೆ.

ರಾಜಕಾರಣಿಗಳ ಸಂಪರ್ಕ ಹೊಂದಿರುವ ಮತ್ತು ಹೊಂದಿಲ್ಲದ ಉದ್ಯಮಿಗಳಿಗೆ ಒಂದೇ ರೀತಿಯ ಅವಕಾಶನೀಡುವ ಸಮಾನತೆಯ ನ್ಯಾಯಯುತ ಮತ್ತು ಹೆಚ್ಚು ದಕ್ಷ ವ್ಯವಸ್ಥೆಯತ್ತ ನಾವು ಸಾಗುವುದು ಹೇಗೆ? ಚುನಾವಣೆಗೆ ದೇಣಿಗೆ ನೀಡುವುದಕ್ಕೆ ಸಂಬಂಧಿಸಿ ಪಾರದರ್ಶಕ ವ್ಯವಸ್ಥೆ ಇಲ್ಲದಿರುವುದೇ ನಮ್ಮ ರಾಜಕೀಯ ಭ್ರಷ್ಟಾಚಾರಕ್ಕೆ ಮುಖ್ಯ ಕಾರಣ ಎಂದು ದಕ್ಷ ಹಾಗೂ ಸ್ವತಂತ್ರ ನಿಗಾ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ ದಾಖಲಿಸಿದೆ.

ಚುನಾವಣಾ ಪ್ರಚಾರ ಸಂದರ್ಭದಲ್ಲಿ ವ್ಯಾಪಾರಿಗಳು ರಾಜಕಾರಣಿಗಳಿಗೆ ಹಣ ನೀಡುತ್ತಾರೆ; ಗೆದ್ದ ನಂತರ ರಾಜಕಾರಣಿಗಳು ಗುತ್ತಿಗೆಗಳನ್ನು ನೀಡುವ ಮೂಲಕ ಉದ್ಯಮಿಗಳಿಗೆ ಪ್ರತ್ಯುಪಕಾರ ಸಲ್ಲಿಸುತ್ತಾರೆ. ಚುನಾವಣೆಗೆ ದೇಣಿಗೆ ನೀಡುವ ಪ್ರಕ್ರಿಯೆಯಲ್ಲಿ ಸುಧಾರಣೆ ತರುವುದು ಅತ್ಯಂತ ಅಗತ್ಯ. ಪ್ರಮುಖ ರಾಜಕೀಯ ಪಕ್ಷಗಳು ಸುಪ್ರೀಂಕೋರ್ಟ್‌ ಸಲಹೆಯನ್ನು ಅನುಸರಿಸಬೇಕು ಮತ್ತು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಒಳಪಡಬೇಕು. ಅದೇ ರೀತಿ, ಚುನಾವಣೆ ವೆಚ್ಚವನ್ನು ಸರ್ಕಾರವೇ ಭರಿಸುವ ವ್ಯವಸ್ಥೆ ಜಾರಿಗೆ ನಾವು ಶಕ್ತಿಯುತವಾಗಿ ಒತ್ತಡ ಹೇರಬೇಕು.

ಭಾರತೀಯ ಚರಿತ್ರೆ ಮತ್ತು ಸಮಾಜದ ವಿದ್ಯಾರ್ಥಿಯಾಗಿ ನಾನು ಹೀಗೆ ಹೇಳಬಹುದು: 1950– 60ರ ದಶಕದಲ್ಲಿನ ರಾಜಕಾರಣಿಗಳು  ಮತ್ತು ವ್ಯಾಪಾರಿಗಳ ನಡುವೆ ಇದ್ದ ಆಳ ಕಂದಕ ಕೆಟ್ಟದ್ದು; ಹಾಗೆಯೇ ರಾಜಕಾರಣಿಗಳು ಮತ್ತು ಉದ್ಯಮಿಗಳ ನಡುವೆ ಹಿಂದೆ ಎಂದೂ ಇಲ್ಲದ ರೀತಿಯಲ್ಲಿ ಈಗ ಇರುವ ಸಂಪರ್ಕ ಇನ್ನೂ ಕೆಟ್ಟದ್ದು.

editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT