ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಲಾಭ: ಮುಂದಿದೆ ಸುವರ್ಣಾವಕಾಶ

Last Updated 27 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಲಿಂಗಾಯತ, ವೀರಶೈವ ಲಿಂಗಾಯತರಿಗೆ (ಬಸವತತ್ವ ಒಪ್ಪುವವರು) ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ನಡೆ ಈಗ ರಾಜಕೀಯ ರಂಗದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದರಿಂದ, ಕರ್ನಾಟಕದ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ಈ ಸ್ಪರ್ಧಾತ್ಮಕ ಸಂಕಥನ ಹೆಚ್ಚು  ಪ್ರಾಮುಖ್ಯ ಪಡೆಯಲಿದೆ ಎಂಬುದು  ಹೆಚ್ಚೆಚ್ಚು ನಿಚ್ಚಳವಾಗುತ್ತಿದೆ. ಇದರಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ವಾಸ್ತವಗಳಿಗಿಂತ ಮಿಗಿಲಾಗಿ, ಯಾವ ಪಕ್ಷವು ತನ್ನ ವಾದವನ್ನು ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿ ಸಂವಹನ ಮಾಡುತ್ತದೋ ಅದು ಮೇಲುಗೈ ಸಾಧಿಸುತ್ತದೆ.

ಲಿಂಗಾಯತದ ಸ್ವತಂತ್ರ ಧರ್ಮದ ಮಾನ್ಯತೆ ವಿಷಯವು ಆರ್ಥಿಕ ಅಭಿವೃದ್ಧಿ, ಸಾಮಾಜಿಕ ನ್ಯಾಯ, ಸಾರ್ವಜನಿಕ ಕಲ್ಯಾಣದಂತಹ ಮುಖ್ಯ ವಿಷಯಗಳನ್ನು ಬದಿಗೆ ದೂಡಲು ಒಂದು ಅವಕಾಶ ಸೃಷ್ಟಿಸಿಕೊಟ್ಟಂತಾಗಿದೆ. ಮಾತ್ರವಲ್ಲದೆ ಭಾವೋನ್ಮಾದ, ಧಾರ್ಮಿಕ ಹಾಗೂ ಜಾತಿ ಆಧಾರಿತ ಧ್ರುವೀಕರಣದ ಛಾಯೆಯಿಂದ ಕೂಡಿದ ಚರ್ಚೆಗಳಿಗೆ ಎಲ್ಲಾ ಪ್ರಮುಖ ಪಕ್ಷಗಳಿಗೂ ಸುವರ್ಣಾವಕಾಶ ಒದಗಿಸಿದೆ ಎಂಬುದೂ ಇದರಿಂದ ಸ್ಪಷ್ಟವಾಗಿದೆ.

ಲಿಂಗಾಯತ, ವೀರಶೈವ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವಂತಹ ವಿಷಯವು, ತನ್ನ ಪ್ರಮುಖ ಎದುರಾಳಿಯಾದ ಬಿಜೆಪಿಯ ಜನಬೆಂಬಲದ ಬುನಾದಿಯನ್ನು ದುರ್ಬಲಗೊಳಿಸುವ ಉದ್ದೇಶದ ಕಾಂಗ್ರೆಸ್ಸಿನ ವಿಶಾಲ ಕಾರ್ಯಸೂಚಿಗೆ ಅನುಗುಣವಾಗಿಯೇ ಇದೆ. ಸುಮಾರು 25 ವರ್ಷಗಳಿಗೂ ಮುನ್ನ (1990) ವೀರೇಂದ್ರ ಪಾಟೀಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಅತ್ಯಂತ ಹೀನಾಯವಾಗಿ ಪದಚ್ಯುತಗೊಳಿಸಿದ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಲಿಂಗಾಯತ ಸಮುದಾಯದ ಗಟ್ಟಿ ಬೆಂಬಲವನ್ನು ಪುನಃ ಗಳಿಸಿಕೊಳ್ಳಲು ಇದುವರೆಗೆ ಸಾಧ್ಯವಾಗಿಯೇ ಇಲ್ಲ. ಈ ಹಿನ್ನೆಲೆಯಲ್ಲಿ ನೋಡಿದರೆ, ಕಾಂಗ್ರೆಸ್ ಪಕ್ಷದ ಈಗಿನ ನಡೆಯು ಈ ಪ್ರಬಲ ವರ್ಗದ ಬೆಂಬಲ ಪಡೆಯುವ ಕಾರ್ಯತಂತ್ರ ಎಂಬುದು ಸ್ಪಷ್ಟವಾಗಿ ಮನದಟ್ಟಾಗುತ್ತದೆ.

ಇದರ ಜತೆಗೆ, ಈ ಸಮುದಾಯವು ಕಳೆದ ಎರಡು ದಶಕಗಳಲ್ಲಿ ಬಿಜೆಪಿಯನ್ನು ಪ್ರಬಲವಾಗಿ ಬೆಂಬಲಿಸುತ್ತಾ ಬಂದಿರುವುದಕ್ಕೆ ಕಡಿವಾಣ ಹಾಕುವ ಉದ್ದೇಶವನ್ನೂ ಇದು ಹೊಂದಿದೆ. ಇದೇ ವೇಳೆ ಲಿಂಗಾಯತ, ವೀರಶೈವ ಲಿಂಗಾಯತರಿಗೆ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ನೀಡುವ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲೇ ಬಿರುಕು ಮೂಡಿದೆ. ಈ ಬಿರುಕು ಇನ್ನಷ್ಟು ತೀವ್ರಗೊಂಡರೆ ಅದು ಪಕ್ಷಕ್ಕೆ ತಿರುಗುಬಾಣವಾಗಬಹುದು. ಜೊತೆಗೆ ತೀವ್ರ ದುಬಾರಿಯಾಗಿಯೂ ಪರಿಣಮಿಸಬಹುದು. ಚುನಾವಣಾ ಇತಿಹಾಸವನ್ನು ನೋಡಿದರೆ, ಕಾಂಗ್ರೆಸ್‌ ಪಕ್ಷವನ್ನು ಸೋಲಿಸಲು ಎದುರಾಳಿಗಳೇ ಬೇಕು ಎಂದೇನಿಲ್ಲ ಎಂಬುದು ಗೊತ್ತಾಗುವಂತಹ ಸಂಗತಿಯೇ ಆಗಿದೆ. ಈ ಪಕ್ಷವು ಪದೇಪದೇ ತನ್ನದೇ ಒಳಜಗಳ ಮತ್ತು ಆಂತರಿಕ ಗುಂಪುಗಾರಿಕೆಗಳಿಂದಾಗಿ ಸೋಲನ್ನು ಅನುಭವಿಸಿದೆ. ಈಗ ಲಿಂಗಾಯತ ಸ್ವತಂತ್ರ ಧರ್ಮದ ವಿಷಯಕ್ಕೆ ಸಂಬಂಧಿಸಿದಂತೆ ಪಕ್ಷವನ್ನು ಎಷ್ಟರಮಟ್ಟಿಗೆ ಒಗ್ಗಟ್ಟಿನಲ್ಲಿ ಇರಿಸಲಾಗುವುದು ಎಂಬುದು ಅದರ ನಾಯಕತ್ವದ ಕೌಶಲಕ್ಕೆ ಸಹ ಅಗ್ನಿಪರೀಕ್ಷೆಯೇ ಆಗಲಿದೆ.

ಇದಕ್ಕೆ ಈಗ ಮತ್ತೊಂದು ಆಯಾಮವೂ ಇದೆ. ಸಮುದಾಯದ ಮುಖಂಡರು ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬಣವಾಗಿ ಹೋಳಾಗಿದ್ದರೂ ಈ ಪ್ರಬಲ ಜನವರ್ಗಕ್ಕೆ ಸೇರಿದ ಮತದಾರರು ಇದಕ್ಕೆ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದು ಸಹ ಆಸಕ್ತಿದಾಯಕ ಆಗಿದೆ. ಸಮುದಾಯದಲ್ಲಿ ಆಳವಾಗಿ ಬೇರೂರಿರುವ ಸಾಂಪ್ರದಾಯಿಕತೆ ಮತ್ತು ಸಮುದಾಯದ ಆಚರಣೆ- ಅನುಷ್ಠಾನಗಳು ಹಿಂದೂ ಮತದ ರೀತಿ ರಿವಾಜುಗಳೊಂದಿಗೆ ಮಿಳಿತವಾಗಿವೆ. ಇದರಿಂದ ಜನರು ಪ್ರತ್ಯೇಕ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನದ ಬೇಡಿಕೆಯನ್ನು ಬೆಂಬಲಿಸುತ್ತಾರೋ ಅಥವಾ ಅದನ್ನು ಕೇವಲ ರಾಜಕೀಯ ಸಾಧನವಾಗಿಯಷ್ಟೇ ನೋಡುತ್ತಾರೋ ಎಂಬ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆಗೆ ಮುಂಬರುವ ಚುನಾವಣೆಯಲ್ಲಿ ಸೂಕ್ತ ಉತ್ತರ ಸಿಗಲಿದೆ. ಚುನಾವಣಾ ಪ್ರಚಾರ ಬಿರುಸು ಪಡೆದು, ಮತದಾನದ ದಿನ ಈ ಸಮುದಾಯದ ಮತದಾರರು ಮತಗಟ್ಟೆಗೆ ಹೋಗುವ ತನಕ ಈ ಪ್ರಶ್ನೆಯು ಅವರನ್ನು ಕಾಡದೇ ಬಿಡದು ಎಂದು ಸಹ ಅನ್ನಿಸುತ್ತದೆ.

ಇದೇ ವೇಳೆ, ಕಾಂಗ್ರೆಸ್ ಪಕ್ಷವು ಈ ವಿಷಯವನ್ನು ತನ್ನ ಅಹಿಂದ+ (ಅಹಿಂದ ಪ್ಲಸ್) ಜನಬೆಂಬಲ ಸೃಷ್ಟಿಸಿಕೊಳ್ಳುವ ಕಾರ್ಯಸೂಚಿಗೆ ಎಷ್ಟರಮಟ್ಟಿಗೆ ಸಂಬಂಧ ಬೆಸೆಯಲಿದೆ ಎಂಬುದು ಮಹತ್ವದ ಪ್ರಶ್ನೆಯಾಗಿ ನಿಲ್ಲುತ್ತದೆ. ಸ್ಥಳೀಯ ವಿಷಯಗಳು, ಸ್ಥಳೀಯ ಅಸ್ಮಿತೆಗಳು ಹಾಗೂ ಪ್ರಾದೇಶಿಕ ಹೆಮ್ಮೆಗಳನ್ನು ಆಧರಿಸಿ ಪ್ರಚಾರವನ್ನು ಮುನ್ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧರಿಸಿರುವುದರಿಂದ, ಈ ವಿಷಯಗಳನ್ನು ಅವರು ಹೇಗೆ ಜನರಿಗೆ ತಲುಪಿಸುತ್ತಾರೆ ಎಂಬುದೂ ಸೂಕ್ಷ್ಮವಾಗಿ ಗಮನಿಸತಕ್ಕ ಸಂಗತಿಯೇ ಆಗಿದೆ.

ಮತ್ತೊಂದೆಡೆ ಬಿಜೆಪಿಯು ಈಗಾಗಲೇ ತಾನು ಯಶಸ್ಸು ಗಳಿಸಿರುವ ಹಾದಿಯಲ್ಲಿ ಮುನ್ನಡೆದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಮುಖ ಪ್ರಚಾರಕರನ್ನಾಗಿಸಿಕೊಂಡಿದೆ. ಅದರ ಪ್ರಕಾರ, ರಾಷ್ಟ್ರೀಯ ಕಾರ್ಯತಂತ್ರ ಪ್ರಚಾರ ಯೋಜನೆಯನ್ನು ಆಧರಿಸಿ ಬಿಜೆಪಿ ಮತ ಕೋರಲಿದೆ. ಪ್ರಧಾನಿ ಮೋದಿ ರಾಜ್ಯ ಸರ್ಕಾರದ ಮೇಲೆ ಆಗಿಂದಾಗ್ಗೆ ದಾಳಿ ಮಾಡುತ್ತಲೇ ಇದ್ದಾರೆ. ಆದರೂ ಪಕ್ಷವು ರಾಜ್ಯದಲ್ಲಿ 2008ರಿಂದ 2013ರವರೆಗೆ ನಡೆಸಿದ ಅಧಿಕಾರಾವಧಿಯ ಬಗ್ಗೆ ಅದು ಪ್ರತ್ಯಾರೋಪಗಳಿಗೆ ಸಿಲುಕುತ್ತಲೇ ಇದೆ. ಹೀಗಾಗಿ ಪಕ್ಷಕ್ಕೆ ಸ್ಥಳೀಯ ಮಟ್ಟದಲ್ಲಿ ಲಾಭ ಮಾಡಿಕೊಳ್ಳಲು ಮತ್ತು ಸ್ಥಳೀಯ ನಾಯಕರಿಗೆ ಅದರ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ. ಇದೀಗ ರಾಜ್ಯ ಸರ್ಕಾರವು ಲಿಂಗಾಯತರಿಗೆ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ನೀಡುವುದರ ಪರ ನಿಲುವು ತಳೆದಿರುವುದು ಬಿಜೆಪಿಗೆ ತನ್ನ ನೆಚ್ಚಿನ ಹಿಂದುತ್ವದ ವಿಷಯಕ್ಕೆ ಮರಳಲು ಅವಕಾಶವನ್ನೂ ಮಾಡಿಕೊಟ್ಟಿದೆ. ಪಕ್ಷವು ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಖಂಡಿಸಿ, ಇದು ಹಿಂದೂ ಸಮುದಾಯವನ್ನು ಛಿದ್ರಗೊಳಿಸುವ ಕಾಂಗ್ರೆಸ್‌ ಪಕ್ಷದ ಕುತಂತ್ರ ಎಂದು ಟೀಕಿಸಬಹುದು. ರಾಜ್ಯದ ಚುನಾವಣಾ ಪ್ರಚಾರಕ್ಕಾಗಿ ಬೇರೆ ರಾಜ್ಯಗಳ ಬಿಜೆಪಿ ನಾಯಕರು ಇಲ್ಲಿಗೆ ಬರುವುದರಿಂದ, ಇದು ಮುಖ್ಯ ಚುನಾವಣಾ ವಿಷಯವಾಗುವ ಸಾಧ್ಯತೆಯೂ ಹೆಚ್ಚಾಗಿದೆ. ಇನ್ನು ಈ ವಿಷಯದ ಬಗ್ಗೆ ಕೇಂದ್ರ ಸರ್ಕಾರವು ವಿಧಾನಸಭಾ ಚುನಾವಣೆ ಮುಗಿಯುವ ತನಕ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯೂ ಇಲ್ಲ ಎನ್ನಿಸುತ್ತಿದೆ.

ಅಂತಿಮವಾಗಿ ಹೇಳಬೇಕೆಂದರೆ, ಚರ್ಚೆಗೆ ಒಳಪಡಲೇಬೇಕಾದ ರಾಜ್ಯದ ಜನಸಾಮಾನ್ಯರ ದೈನಂದಿನ ಬದುಕಿನ ಮಹತ್ವದ ಸಂಗತಿಗಳು, ಚುನಾವಣಾ ವಿಷಯಗಳಾಗಿ ಚರ್ಚೆಗೆ ಒಳಗಾಗದೇ ಮೂಲೆಗುಂಪಾಗಲಿವೆ. ಕಾಂಗ್ರೆಸ್ ಪಕ್ಷದ ಸದ್ಯದ ಪರಿಸ್ಥಿತಿಯನ್ನು ನೋಡಿದರೆ, ಅದು ಸಂಘಟಿತವಾಗಿ ಕಾರ್ಯಶೀಲವಾಗುವ ಅವಕಾಶವನ್ನು ಕಳೆದುಕೊಳ್ಳುತ್ತಿರುವಂತೆ ತೋರುತ್ತಿದೆ. ರಾಜ್ಯ ಸರ್ಕಾರವನ್ನು ಬಲವಾಗಿ ಸಮರ್ಥಿಸಿಕೊಳ್ಳುವ ಜವಾಬ್ದಾರಿಯನ್ನು ಅದು ಮುಖ್ಯಮಂತ್ರಿಯೊಬ್ಬರಿಗೇ ಬಿಟ್ಟಿರುವಂತೆ ತೋರುತ್ತಿದೆ. ಪಕ್ಷ ಮತ್ತು ಸರ್ಕಾರದ ಇತರ ಪ್ರಮುಖ ಮುಖಂಡರು ಕೇವಲ ತಮ್ಮ ‘ರಾಜಕೀಯ ಲಾಭ’ ಗಳಿಕೆಯ ಬಗ್ಗೆಯಷ್ಟೇ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿದ್ದಾರೆ. ಮತ್ತೊಂದೆಡೆ, ಬಿಜೆಪಿ ಸ್ಥಳೀಯ ನಾಯಕತ್ವ ಕೂಡ ಶೋಚನೀಯ ಎನ್ನುವಂತೆ ಇತ್ತಂಡವಾಗಿದೆ. ಹೊಸ ಮಿತ್ರ ಪಕ್ಷಗಳೊಂದಿಗೆ ಜನತಾದಳ ನಾಯಕತ್ವವು ಹೊಸ ಪರಿಭಾಷೆಯಲ್ಲಿ ರಾಜಕೀಯವಾಗಿ ಸದ್ದನ್ನೇನೋ ಮಾಡುತ್ತಿದೆ. ಆದರೂ ಗಂಭೀರವಾಗಿ ಸವಾಲೊಡ್ಡುವ ವಿಸ್ತೃತವಾದ ತಳಹದಿಯನ್ನು ಅದು ಹೊಂದಿರುವಂತೆ ಕಾಣುತ್ತಿಲ್ಲ. ಇಂತಹ ಸ್ಥಿತಿಯಲ್ಲಿ, ಕರ್ನಾಟಕದ ಮತದಾರರಿಗೆ ನಿಶ್ಚಿತವಾಗಿಯೂ ಇದಕ್ಕಿಂತ ಉತ್ತಮ ಆಯ್ಕೆಯ ಅವಕಾಶ ಇರಬೇಕಿತ್ತು!

**

ಲಿಂಗಾಯತದ ಸ್ವತಂತ್ರ ಧರ್ಮದ ಮಾನ್ಯತೆ ವಿಷಯಕ್ಕೆ ಸಂಬಂಧಿಸಿದಂತೆ ಸಮುದಾಯದ ಮುಖಂಡರು ಈಗಾಗಲೇ ಇಬ್ಬಣವಾಗಿ ಹೋಳಾಗಿದ್ದಾರೆ. ಆದರೂ ಈ ಪ್ರಬಲ ಜನವರ್ಗಕ್ಕೆ ಸೇರಿದ ಮತದಾರರು ಇದಕ್ಕೆ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದು ಆಸಕ್ತಿದಾಯಕ ಸಂಗತಿಯಾಗಿದೆ. ಸಮುದಾಯದಲ್ಲಿ ಆಳವಾಗಿ ಬೇರೂರಿರುವ ಸಾಂಪ್ರದಾಯಿಕತೆ ಮತ್ತು ಸಮುದಾಯದ ಆಚರಣೆ- ಅನುಷ್ಠಾನಗಳು ಹಿಂದೂ ಮತದ ರೀತಿ ರಿವಾಜುಗಳೊಂದಿಗೆ ಮಿಳಿತವಾಗಿವೆ. ಇದರಿಂದ ಜನರು ಪ್ರತ್ಯೇಕ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನದ ಬೇಡಿಕೆಯನ್ನು ಬೆಂಬಲಿಸುತ್ತಾರೋ ಅಥವಾ ಅದನ್ನು ಕೇವಲ ರಾಜಕೀಯ ಸಾಧನವಾಗಿಯಷ್ಟೇ ನೋಡುತ್ತಾರೋ ಎಂಬ ಪ್ರಶ್ನೆಗೆ ಮುಂಬರುವ ಚುನಾವಣೆಯಲ್ಲಿ ಸೂಕ್ತ ಉತ್ತರ ಸಿಗಲಿದೆ. ಚುನಾವಣಾ ಪ್ರಚಾರ ಬಿರುಸು ಪಡೆದು, ಮತದಾನದ ದಿನ ಈ ಸಮುದಾಯದ ಮತದಾರರು ಚುನಾವಣೆಗೆ ಹೋಗುವ ತನಕ ಈ ಪ್ರಶ್ನೆಯು ಅವರನ್ನು ಕಾಡದೇ ಬಿಡದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT