ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯಕ್ಕೆ ಬಲಿಯಾಗದಿರಲಿ ಜನಹಿತ ಯೋಜನೆ...

Last Updated 25 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಕಳಸಾ- ಬಂಡೂರಿ ನಾಲಾ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಲು, ಇತ್ತೀಚೆಗೆ ಧಾರವಾಡ, ಬೆಳಗಾವಿ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳಲ್ಲಿ ಬಂದ್‌ಗೆ ಕರೆ ನೀಡಲಾಗಿತ್ತು. ಸರ್ಕಾರದ ಪ್ರಕಾರ, ಹುಬ್ಬಳ್ಳಿ-ಧಾರವಾಡ ನಗರದ ನಿವಾಸಿಗಳಿಗೆ, ನದಿ ದಂಡೆಯ ಹಲವು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಈ ಯೋಜನೆ ರೂಪಿಸಲಾಗಿದೆ. ವಿಪರ್ಯಾಸವೆಂದರೆ ಹುಬ್ಬಳ್ಳಿ- ಧಾರವಾಡದಲ್ಲಿ ಈ ಬಂದ್ ಕರೆಗೆ ಯಾರೂ ಓಗೊಡಲಿಲ್ಲ. ಆದರೆ ಗ್ರಾಮೀಣ ಪ್ರದೇಶದ ರೈತಾಪಿ ವರ್ಗದವರು ಒಂಬತ್ತು ತಾಲ್ಲೂಕುಗಳಲ್ಲಿ ನಡೆಸಿದ ಬಂದ್ ಯಶಸ್ವಿಯಾಯಿತು!

ರೈತರು ಈ ಬಂದ್‌ನಲ್ಲಿ ಪಾಲ್ಗೊಳ್ಳಲು ಮುಖ್ಯ ಕಾರಣ, ಯೋಜನೆ ಪೂರ್ಣಗೊಂಡು ಮಹಾದಾಯಿ ಉಪ ನದಿಗಳಾದ ಕಳಸಾ-ಬಂಡೂರಿ ತೊರೆಗಳಿಂದ ಮಲಪ್ರಭೆಗೆ ನೀರು ಹರಿದರೆ ಕನಿಷ್ಠ ಅರೆನೀರಾವರಿ ಬೆಳೆಯನ್ನಾದರೂ ಬೆಳೆಯಬಹುದೆಂಬ ಆಸೆ.

ನವಿಲುತೀರ್ಥದಲ್ಲಿ ಮಲಪ್ರಭೆಗೆ ನಿರ್ಮಿಸಿರುವ ಅಣೆಕಟ್ಟೆಯಿಂದ ನೀರಾವರಿ ಸೌಲಭ್ಯದ ಬೆಳಗಾವಿಯ ಸವದತ್ತಿ, ಬೈಲಹೊಂಗಲ, ರಾಮದುರ್ಗ, ಬಾಗಲಕೋಟೆ ಜಿಲ್ಲೆಯ ಬಾದಾಮಿ, ಗದಗ ಜಿಲ್ಲೆಯ ನರಗುಂದ, ರೋಣ, ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕುಗಳ ಅಚ್ಚುಕಟ್ಟು ಪ್ರದೇಶದ ರೈತರಿಗೆ ಯೋಜನೆ ಅನುಷ್ಠಾನದಿಂದ ಅನುಕೂಲವಾಗಲಿದೆ.

1972-73ರಲ್ಲಿ ಪೂರ್ಣಗೊಂಡ ಈ ಅಣೆಕಟ್ಟೆಯ ನೀರು ಸಂಗ್ರಹ ಸಾಮರ್ಥ್ಯ 37.731 ಟಿಎಂಸಿ ಅಡಿ. ಈ 40 ವರ್ಷಗಳ ಅವಧಿಯಲ್ಲಿ ಈ ಅಣೆಕಟ್ಟೆ ತುಂಬಿರುವುದು ಆರು ವರ್ಷ ಮಾತ್ರ! ಜಲಾನಯನ ಪ್ರದೇಶದ ವ್ಯಾಪ್ತಿ ಕಡಿಮೆ ಇರುವ ಕಾರಣ ಜಲಾಶಯಕ್ಕೆ ಒಳಹರಿವು ತೀರಾ ಕಡಿಮೆ ಇರುತ್ತದೆ. ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು ಬಹುತೇಕ ಎಲ್ಲ ಜಲಾಶಯಗಳು ಭರ್ತಿಯಾಗಿ, ಕ್ರೆಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಿದ್ದರೂ ಮಲಪ್ರಭಾ ಮಾತ್ರ ಇನ್ನೂ ತುಂಬಿಲ್ಲ. ಈ ಅಣೆಕಟ್ಟೆಯಲ್ಲಿ 34 ಟಿಎಂಸಿ ಅಡಿ ನೀರು ಸಂಗ್ರಹವಾಗುವುದೇ ಕಷ್ಟಕರ. ಜತೆಗೆ ನದಿಯಲ್ಲಿ ಹರಿಯುವ ನೀರನ್ನು ರೈತರು ಅನಧಿಕೃತವಾಗಿ ಪಂಪ್‌ಸೆಟ್ ಮೂಲಕ ಜಮೀನಿಗೆ ಹರಿಸಿಕೊಳ್ಳುತ್ತಾರೆ. ಇದನ್ನು ತಡೆಯಲು ಜಲಸಂಪನ್ಮೂಲ ಇಲಾಖೆಯಲ್ಲಿ ಕೆಳಹಂತದ ಸಿಬ್ಬಂದಿಯೂ ಸಾಕಷ್ಟಿಲ್ಲ. ಪೊಲೀಸರನ್ನು ಕರೆದೊಯ್ದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ರಾಜಕೀಯ ಮುಖಂಡರ ಬೆಂಬಲವೂ ಅವರಿಗೆ ಇರುವುದರಿಂದ ನಿಯಂತ್ರಿಸಲು ಇಲಾಖೆಗೆ ಆಗುತ್ತಿಲ್ಲ.

ನೀರಿನ ಲಭ್ಯತೆ ಕಡಿಮೆ ಇದ್ದರೂ ಈ ಅಣೆಕಟ್ಟೆಯ ಅಚ್ಚುಕಟ್ಟು ವ್ಯಾಪ್ತಿ 1,96,132 ಹೆಕ್ಟೇರ್ ಇದೆ. ಅಣೆಕಟ್ಟೆ ತುಂಬುವುದು ಕಷ್ಟ ಎಂಬುದು ಗೊತ್ತಿದ್ದರೂ ಅಚ್ಚುಕಟ್ಟು ಪ್ರದೇಶವನ್ನು ಹೆಚ್ಚು ಮಾಡಿರುವುದು ಸರಿಯಲ್ಲ. ಇಷ್ಟು ಜಮೀನಿಗೆ ಅರೆನೀರಾವರಿ ಬೆಳೆ ಬೆಳೆಯುವುದಕ್ಕೇ 26 ಟಿಎಂಸಿ ಅಡಿ ನೀರು ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಆದರೂ ನಾಲೆಯ ಕೊನೆಯ ಭಾಗದ ಜಮೀನಿಗೆ ನೀರು ಹರಿಯುವುದೇ ಇಲ್ಲ. ಜತೆಗೆ ಹುಬ್ಬಳ್ಳಿ-ಧಾರವಾಡದಂತಹ ದೊಡ್ಡ ನಗರ, ನದಿ ಹಾಗೂ ನಾಲೆ ಪಾತ್ರದ ಇತರೆ ಪಟ್ಟಣಗಳು, ಗ್ರಾಮಗಳ ಜನರಿಗೆ ಕುಡಿಯುವ ನೀರು ಪೂರೈಕೆಗೆ 4 ಟಿಎಂಸಿ ಅಡಿ ನೀರು ಬೇಕಾಗುತ್ತದೆ.

ಇನ್ನು 4 ಟಿಎಂಸಿ ಅಡಿಯಷ್ಟು ನೀರನ್ನು ಬಳಸಲಾಗದು. ಹಾಗಾಗಿ ಕೊರತೆ ಬೀಳುವ ಈ 8 ಟಿಎಂಸಿ ಅಡಿ ನೀರನ್ನು ಕಳಸಾ-ಬಂಡೂರಿ ತೊರೆಯಿಂದ ಪಡೆದು ಕುಡಿಯಲು ಬಳಕೆ ಮಾಡಿದರೆ, ಅಣೆಕಟ್ಟೆಯಲ್ಲಿ ಸಂಗ್ರಹವಾಗುವ 34 ಟಿಎಂಸಿ ಅಡಿ ನೀರನ್ನು ಪೂರ್ತಿಯಾಗಿ ನೀರಾವರಿಗೆ ಬಳಸಲು ಸಾಧ್ಯವಾಗುತ್ತದೆ ಎಂಬ ಉದ್ದೇಶದಿಂದ ಗ್ರಾಮೀಣ ಪ್ರದೇಶದ ಜನರು ಹೋರಾಟಕ್ಕಿಳಿದಿದ್ದಾರೆ. ಆದರೆ, ತಮಗಂತೂ ನೀರು ಸಿಕ್ಕೇ ಸಿಗುತ್ತದೆ ಎಂಬ ಭಾವನೆಯಲ್ಲಿ ನಗರಪ್ರದೇಶದವರು ನಿರುಮ್ಮಳವಾಗಿದ್ದಾರೆ.

ನಿಜ. ಕಳಸಾ-ಬಂಡೂರಿ ನಾಲಾ ಯೋಜನೆ ಒಂದು ಒಳ್ಳೆ ಯೋಜನೆ. ರಾಜ್ಯದ ಹಿತದೃಷ್ಟಿಯಿಂದ ಜರೂರಾಗಿ ಆಗಬೇಕಾದ ಯೋಜನೆ ಕೂಡ. ಬಹಳ ಹಿಂದೆಯೇ ಮಹಾದಾಯಿಯಿಂದ ನಮ್ಮ ಪಾಲಿನ ಹಕ್ಕಿನ ನೀರು ಪಡೆಯಲು ಹೋರಾಟ ಆರಂಭವಾಗಿತ್ತು. ಆದರೆ ಫಲ ಸಿಗಲಿಲ್ಲ.

ಮಹಾದಾಯಿ ನದಿಯಿಂದ ನೀರು ಪಡೆಯುವ ಬದಲಿಗೆ, 7.56 ಟಿಎಂಸಿ ಅಡಿ ನೀರನ್ನು ಕಳಸಾ-ಬಂಡೂರಿ ತೊರೆಯಿಂದ ಪಡೆಯಬಹುದು ಎಂದು ಜಲಸಂಪನ್ಮೂಲ ಇಲಾಖೆಯ ಕಿರಿಯ ಎಂಜಿಯರ್ ಒಬ್ಬರು ನೀಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಆಗಿನ ಜಲಸಂಪನ್ಮೂಲ ಸಚಿವ ಎಚ್.ಕೆ.ಪಾಟೀಲರು ಯೋಜನೆಗೆ ನಿರ್ದಿಷ್ಟ ರೂಪ ಕೊಟ್ಟರು. ಅಲ್ಲದೇ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ತಂದು ಸಲ್ಲಿಸಿದ ಪ್ರಸ್ತಾವಕ್ಕೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯ 2002ರಲ್ಲಿ ಅನುಮೋದನೆ ನೀಡಿತು.

ಅದೇ ವೇಳೆಗೆ ಗೋವಾ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. `ಇದು ಕುಡಿಯುವ ನೀರಿನ ಯೋಜನೆ ಹೆಸರಿನಲ್ಲಿ ಕೈಗೆತ್ತಿಕೊಂಡಿರುವ ನೀರಾವರಿ ಯೋಜನೆ' ಎಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಎನ್‌ಡಿಎ ಸರ್ಕಾರದ ಮೇಲೆ ಒತ್ತಡ ಹೇರಿ, ಗೋವಾ ಅಡ್ಡಿಯಾಗಿ ನಿಂತಿತು. ಅಲ್ಲದೇ ಅನುಮೋದನೆ ನೀಡಿದ ಸಚಿವಾಲಯ ಕಾರ್ಯದರ್ಶಿ ಬಿ.ಎನ್. ನವಲ್‌ವಾಲಾ ಅವರನ್ನು ಸ್ಥಾನಪಲ್ಲಟ ಮಾಡಿಸುವಲ್ಲೂ ಯಶಸ್ವಿಯಾಯಿತು. ಆದರೆ ಇದೇ ವೇಳೆಗೆ ರಾಜ್ಯದಲ್ಲಿ ಸಾಕಷ್ಟು ಪ್ರಬಲವಾಗಿದ್ದ ಬಿಜೆಪಿ ಕೂಡ ಎನ್‌ಡಿಎ ಸರ್ಕಾರದ ಮೇಲೆ ಒತ್ತಡ ಹೇರಿದ್ದರೆ ಕೆಲಸ ಸುಗಮವಾಗುತ್ತಿತ್ತೋ ಏನೋ? ಆ ಕೆಲಸವನ್ನು ಬಿಜೆಪಿ ರಾಜ್ಯ ಮುಖಂಡರು ಮಾಡಲಿಲ್ಲ.

ರಾಜ್ಯ ಸರ್ಕಾರ ಕೂಡ ನಂತರ ಈ ಕಾಮಗಾರಿ ಕೈಗೊಳ್ಳಲು ಉತ್ಸಾಹ ತೋರಲಿಲ್ಲ. ಆದರೆ, ಆಗಿನ ಕೋಲಾರ ಜಿಲ್ಲೆಯ ಬಾಗೇಪಲ್ಲಿ ಸಮೀಪ ಚಿತ್ರಾವತಿ ನದಿಗೆ ಅಡ್ಡಲಾಗಿ ಪರಗೋಡಿನಲ್ಲಿ ಬ್ಯಾರೇಜ್ ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಂಡಾಗ ಆಂಧ್ರಪ್ರದೇಶದಿಂದ ತೀವ್ರ ವಿರೋಧ ಎದುರಾಯಿತು. ಆಂಧ್ರವನ್ನು ಮಣಿಸಲು ಕೃಷ್ಣ ಸರ್ಕಾರ ಉನ್ನತ ಮಟ್ಟದ ನಿಯೋಗವನ್ನು ದೆಹಲಿಗೆ ಕರೆದೊಯ್ದು ಪರಗೋಡು ಯೋಜನೆಯು ಕುಡಿಯುವ ನೀರು ಪೂರೈಕೆಗಾಗಿ ಎಂಬುದನ್ನು ಮನದಟ್ಟು ಮಾಡಿಕೊಟ್ಟು ಅಡಚಣೆಯಾಗದಂತೆ ಎಚ್ಚರವಹಿಸಿತು.

ಯೋಜನೆ ಪೂರ್ಣಗೊಂಡು 2007ರಲ್ಲಿಯೇ ನೀರು ಸಂಗ್ರಹ ಆರಂಭವಾಗಿದೆ. ಆದರೆ, ಅದೇ ಧಾವಂತವನ್ನು ಕಳಸಾ- ಬಂಡೂರಿ ಯೋಜನೆ ಮೇಲೆ  ಸರ್ಕಾರ ತೋರಲಿಲ್ಲ. ಬದಲಿಗೆ ಯೋಜನೆ ಜಾರಿಗೆ ಮುತುವರ್ಜಿ ವಹಿಸಿದ್ದ  ಸಚಿವ ಎಚ್.ಕೆ.ಪಾಟೀಲರ ಖಾತೆ ಬದಲಾಯಿತು ಅಷ್ಟೆ. ನಂತರವೂ ಅಧಿಕಾರಕ್ಕೆ ಬಂದ ಸರ್ಕಾರಗಳು ಉತ್ತರ ಕರ್ನಾಟಕದ ಜನರಿಗೆ ಅನುಕೂಲವಾಗುವ ಯೋಜನೆಗಳ ಜಾರಿಗೆ ಹೆಚ್ಚು ಗಮನ ಕೊಡಲಿಲ್ಲ. ಇಲ್ಲಿಯ ಜನರ ಕೂಗು ವಿಧಾನಸೌಧವನ್ನು ತಲುಪುವುದೇ ಇಲ್ಲ.

ಚುನಾಯಿತ ಪ್ರತಿನಿಧಿಗಳು ಬಣ್ಣದ ಮಾತನಾಡಿ, ಭರವಸೆಯಲ್ಲಿಯೇ ಬೆಟ್ಟ ಕಟ್ಟಿ ಅಮಾಯಕ ರೈತರು, ಗ್ರಾಮೀಣ ಪ್ರದೇಶದ ಜನರನ್ನು ಸಮಾಧಾನಪಡಿಸುವುದನ್ನು ಚೆನ್ನಾಗಿ ರೂಢಿಸಿಕೊಂಡಿದ್ದಾರೆ. ತಮಗೆ ದಕ್ಕಬೇಕಾದುದನ್ನು ಪಡೆದುಕೊಳ್ಳಬೇಕು ಎಂಬ ಛಾತಿ ಈ ಭಾಗದ ಜನರಲ್ಲೂ ಕಾಣುವುದಿಲ್ಲ.

ಬಾದಾಮಿ ಮಾಜಿ ಶಾಸಕ ಬಿ.ಎಂ. ಹೊರಕೇರಿಯವರು ತಮ್ಮ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಹಾಗೂ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಹೋರಾಟ ಮಾಡಿದ್ದವರು. ಮಹಾದಾಯಿ ಯೋಜನೆ ಜಾರಿಯಿಂದಾಗುವ ಅನುಕೂಲ, ನದಿ ಬಗ್ಗೆ ಮಾಹಿತಿ ನೀಡಲು ಬನಶಂಕರಿ ಜಾತ್ರೆಯಲ್ಲಿ ಪ್ರದರ್ಶನ ಏರ್ಪಡಿಸಿದ್ದರು; ಅದೂ 80ರ ದಶಕದಲ್ಲಿಯೇ! ತಮ್ಮ ಜೀಪಿಗೂ `ಮಲಪ್ರಭಾ- ಮಹಾದಾಯಿ' ಎಂದು ಬರೆಯಿಸಿಕೊಂಡಿದ್ದರು. ಅಂತಹ ಬದ್ಧತೆ ಇತ್ತು ಅವರಲ್ಲಿ. ಪರಿಣಾಮವಾಗಿ ಬಾದಾಮಿ ತಾಲ್ಲೂಕಿನಲ್ಲಿ ಜಮೀನಿಗೆ ನೀರು ಹರಿಯಿತು. ಇದರಲ್ಲಿ ಪ್ರಖ್ಯಾತ ಸಿವಿಲ್ ಎಂಜಿನಿಯರ್ ಎಸ್.ಜಿ. ಬಾಳೇಕುಂದ್ರಿಯವರ ಪಾತ್ರವೂ ಇತ್ತು.

ಇಷ್ಟೆಲ್ಲದರ ನಡುವೆ, 2006ರಲ್ಲಿ ಕೊನೆಗೂ ಧೈರ್ಯ ಮಾಡಿ ಕರ್ನಾಟಕ ಸರ್ಕಾರ ಈ ಯೋಜನೆ ಅನುಷ್ಠಾನಕ್ಕೆ ಮುಂದಾಯಿತು. ಆದರೆ ಕಾಮಗಾರಿ ಆರಂಭಿಸಿ ಆರು ವರ್ಷಗಳು ಕಳೆದಿದ್ದರೂ 5.15 ಕಿ.ಮೀ ಉದ್ದದ ನಾಲೆ ನಿರ್ಮಾಣ ಕಾರ್ಯ ಪೂರ್ಣವಾಗಿಲ್ಲ. ಅಂದರೆ ಸರ್ಕಾರದ ಬದ್ಧತೆ ಎಂತಹವರಿಗೂ ಅರ್ಥವಾಗುತ್ತದೆ. ಯೋಜನೆ ಜಾರಿಗೆ ಕಾಳಜಿ ತೋರದ ರಾಜಕಾರಣಿಗಳು ಈ ವಿಷಯವನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದಾರೆ ಅಷ್ಟೆ. ಹಾಗಾಗಿ ಯೋಜನೆ ಕುಂಟುತ್ತಾ ಸಾಗಿದೆ. ಇದನ್ನು ನೋಡಿ ರೈತರು ಮತ್ತೆ ಸಿಟ್ಟಿಗೆದ್ದಿದ್ದಾರೆ. ಕೈಯಲ್ಲಿ ಅವಕಾಶವಿದ್ದಾಗ ಸುಮ್ಮನೆ ಕುಳಿತಿದ್ದ ಸರ್ಕಾರದ ವರ್ತನೆಯಿಂದ ಆಕ್ರೋಶಗೊಂಡಿದ್ದಾರೆ. ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಅಥವಾ ಯೋಜನೆ ಬಗ್ಗೆ ನೆನಪಿಸಲು ಆಗೊಮ್ಮೆ, ಈಗೊಮ್ಮೆ ಪ್ರತಿಭಟನೆ, ಮೆರವಣಿಗೆ, ಬಂದ್ ನಡೆಸಿ, ತಮ್ಮ ಹೋರಾಟ ತಣ್ಣಗಾಗಿಲ್ಲ ಎಂಬುದನ್ನು ನೆನಪಿಸುತ್ತಿದ್ದಾರೆ.

ಮಹಾದಾಯಿ ನದಿಯಲ್ಲಿ ತನ್ನ ಪಾಲಿನ ನೀರು ಪಡೆದುಕೊಳ್ಳಲು ಕರ್ನಾಟಕ ಮೊದಲು ಚಿಕ್ಕ ಚಿಕ್ಕ ಬ್ಯಾರೇಜ್‌ಗಳನ್ನು ಕಟ್ಟಲು ಉದ್ದೇಶಿಸಿತ್ತು. ಗೋವಾ ಸರ್ಕಾರದ ಆಕ್ಷೇಪದ ಹಿನ್ನೆಲೆಯಲ್ಲಿ ಈ ಯೋಜನೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಕಳಸಾ-ಬಂಡೂರಿ ನಾಲಾ ತಿರುವು ಯೋಜನೆ ಮೂಲಕ ಕರ್ನಾಟಕ ನೀರು ಪಡೆದುಕೊಂಡರೆ ತನಗೆ ತೊಂದರೆಯಾಗುತ್ತದೆ ಎಂದು ಗೋವಾ ಆಕ್ಷೇಪ ಎತ್ತಿದ ಹಿನ್ನೆಲೆಯಲ್ಲಿ, ಮಹಾದಾಯಿ ಜಲವಿವಾದ ನ್ಯಾಯಮಂಡಳಿಯೂ ರಚನೆಯಾಗಿದೆ. ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಬೇಕು ಎಂಬುದರ ಕುರಿತು ಸುಪ್ರೀಂ ಕೋರ್ಟ್ ಆದೇಶವಿದೆ. ಕರ್ನಾಟಕ ಕೂಡ ಈ ಯೋಜನೆಯನ್ನು ಕೈಗೆತ್ತಿಕೊಂಡಿರುವುದು ಕುಡಿವ ನೀರು ಪೂರೈಕೆಗಾಗಿಯೇ. ಆದರೆ ಪರಿಸರ ಇಲಾಖೆಯ ಅನುಮತಿ ದೊರೆತಿಲ್ಲದ ಕಾರಣ ಅರಣ್ಯ ಪ್ರದೇಶದ ಒಳಗಿರುವ ಬಂಡೂರಿ ಯೋಜನೆ ಇನ್ನೂ ಆರಂಭವಾಗಿಲ್ಲ.

ಕಳಸಾದಿಂದ ನೀರು ಪಡೆಯಲು ತೋಡುತ್ತಿರುವ ನಾಲೆ ಕಾಮಗಾರಿ ಪೂರ್ಣವಾದರೆ 1.5 ಟಿಎಂಸಿ ಅಡಿ ನೀರು ಮಲಪ್ರಭಾ ನದಿಗೆ ಹರಿಯಲಿದೆ. ನ್ಯಾಯಮಂಡಳಿ ಮುಂದಿರುವ ಈ ಪ್ರಕರಣ ಇತ್ಯರ್ಥವಾಗಲು ಹೆಚ್ಚು ಕಾಲ ಹಿಡಿಯುತ್ತದೆ. ಹಾಗಾಗಿ ಈ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಮಧ್ಯಸ್ಥಿಕೆ ವಹಿಸಬೇಕು. ಕೇಂದ್ರ ಹಾಗೂ ರಾಜ್ಯದಲ್ಲಿ ಈಗ ಕಾಂಗ್ರೆಸ್ ಪಕ್ಷದ ಸರ್ಕಾರವೇ ಇರುವುದರಿಂದ ಸಮಸ್ಯೆಯನ್ನು ಇತ್ಯರ್ಥಪಡಿಸಲು ಆ ಪಕ್ಷ ಮನಸ್ಸು ಮಾಡಬೇಕಿದೆ. ಫಲಾನುಭವಿ ರಾಜ್ಯ ಸರ್ಕಾರಗಳ ಪ್ರತಿನಿಧಿಗಳನ್ನು ಕರೆದು, ಚರ್ಚಿಸಿ, ಸಮಸ್ಯೆಯನ್ನು ಬಗೆಹರಿಸಲು ಪ್ರಧಾನಿ ಮುಂದಾಗಬೇಕು. ಇಲ್ಲವಾದಲ್ಲಿ ಜನಹಿತ ಯೋಜನೆಯೊಂದು ರಾಜಕೀಯಕ್ಕೆ ಬಲಿಯಾದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT