ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯದ ಆಚೆ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ?

Last Updated 16 ಜುಲೈ 2016, 19:30 IST
ಅಕ್ಷರ ಗಾತ್ರ

ರಾಜಕೀಯ ಎಂದರೆ ಹೀಗೆಯೇ ಇರುತ್ತದೆ: ಒಬ್ಬ ಡಿವೈಎಸ್‌ಪಿ ರಾಜೀನಾಮೆ ಕೊಟ್ಟಿದ್ದಾರೆ. ಇನ್ನಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರು ಕೇವಲ ಆರು ವರ್ಷ ಇಲಾಖೆಯಲ್ಲಿ ಇದ್ದವರು. ಪ್ರಾಮಾಣಿಕರು ಎಂದು ಹೆಸರು ಮಾಡಿದವರು. ಇನ್ನೊಬ್ಬರು ಸಾಕಷ್ಟು ಹಿರಿಯರು. ಇಲಾಖೆಯಲ್ಲಿ ಕೆಳ ಹಂತದಿಂದ ಮೇಲೆ ಬಂದವರು. ಮೂವರಲ್ಲಿ ಇಬ್ಬರು ಇಲಾಖೆಯಲ್ಲಿ ಐಬು ಇದೆ ಎಂದು ಹೇಳಿದ್ದಾರೆ. ಒಬ್ಬರು ಏನು ಐಬು ಎಂಬುದನ್ನು ಬಿಚ್ಚಿ ಹೇಳಿಲ್ಲ. ಇನ್ನೊಬ್ಬರು, ಮಾಜಿ ಗೃಹ ಸಚಿವ ಮತ್ತು ಇಬ್ಬರು  ಹಿರಿಯ ಅಧಿಕಾರಿಗಳ ವಿರುದ್ಧ ನೇರ ಆರೋಪ ಮಾಡಿ ನೇಣಿಗೆ ಕೊರಳು ಒಡ್ಡಿದ್ದಾರೆ. ಕೂಡ್ಲಿಗಿ ಡಿವೈಎಸ್‌ಪಿ ಆಗಿದ್ದ ಅನುಪಮಾ ಶೆಣೈ ಅವರಿಗೆ ರಾಜೀನಾಮೆ ಕೊಟ್ಟುದು ತಪ್ಪು ಎಂದು ಇದುವರೆಗೆ ಅನಿಸಿದಂತೆ ಕಾಣುವುದಿಲ್ಲ. ಬಹುಶಃ ಅವರಿಗೆ ಇಲಾಖೆಯಲ್ಲಿ ಇರುವುದು ಸಾಧ್ಯವೇ ಇಲ್ಲ ಎಂದು ಅನಿಸಿದ್ದಿರಬಹುದು.

ಮಂಗಳೂರಿನಲ್ಲಿ ಡಿವೈಎಸ್‌ಪಿ ಆಗಿದ್ದ ಎಂ.ಕೆ.ಗಣಪತಿಯವರು ಆತ್ಮಹತ್ಯೆ ಮಾಡಿಕೊಂಡ ನಂತರ ಇಂಗ್ಲಿಷ್‌ ಪತ್ರಿಕೆಯೊಂದಕ್ಕೆ ಅನುಪಮಾ ಸಂದರ್ಶನ ಕೊಟ್ಟಿದ್ದಾರೆ. ತಾವು ಇಲಾಖೆಯಲ್ಲಿ ಬಹುಕಾಲ ಉಳಿಯುವುದಿಲ್ಲ ಎಂದು ತರಬೇತಿ ಅವಧಿಯಲ್ಲಿಯೇ ತಮಗೆ ಅನಿಸಿತ್ತು ಎಂದು ಅವರು ಹೇಳಿದ್ದಾರೆ.  ‘ಗಣಪತಿಯವರು ಆತ್ಮಹತ್ಯೆ ಮಾಡಿಕೊಂಡುದು ಕೆಲಸದ ಒತ್ತಡದಿಂದ ಅಲ್ಲ; ಅದು ಹತಾಶೆಯಿಂದ’ ಎಂದೂ ಅವರು ದೂರಿದ್ದಾರೆ. ಒತ್ತಡ ಮತ್ತು ಹತಾಶೆ ನಡುವೆ ಬಹಳ ಅಂತರ ಇದೆ. ಅನುಪಮಾಗೂ ಇದೇ ಹತಾಶೆ ಇದ್ದಂತೆ  ಇತ್ತು. ಕಲ್ಲಪ್ಪ ಹಂಡಿಬಾಗ್‌, ಅಪಹರಣಕಾರರ ಜೊತೆಗೆ ತಮ್ಮ ಮೊಬೈಲ್‌ ಮೂಲಕ ಹಣಕಾಸಿನ ಸಂಧಾನ ಮಾಡಿದ್ದು ನಿಜವೇ ಆದರೆ ಅದು ಗಂಭೀರ ಕರ್ತವ್ಯ ಲೋಪ. ಹಾಗಾಗಿಯೇ ಅವರ ಆತ್ಮಹತ್ಯೆಗೆ ಸಿಗಬೇಕಿದ್ದ  ಸಹಾನುಭೂತಿ ಸಿಕ್ಕಿಲ್ಲ.

ಆದರೆ, ಗಣಪತಿ ಅವರ ಪ್ರಕರಣ ಇಡೀ ಸರ್ಕಾರದ ಆಡಳಿತಕ್ಕೆ  ಹಿಡಿದ ಒಂದು ಕನ್ನಡಿಯಂತೆ ಇದೆ. ಡಿವೈಎಸ್‌ಪಿ ದರ್ಜೆಯ ಒಬ್ಬ ಅಧಿಕಾರಿ ತನ್ನ ಊರಿಗೆ ಬಂದು ಅಲ್ಲಿನ ಟೀವಿ ಸ್ಟುಡಿಯೊಕ್ಕೆ  ಹೋಗಿ ತನ್ನ ಇಡೀ ಸೇವಾವಧಿಯ ಕಥೆಯನ್ನೆಲ್ಲ ಹೇಳಿ ತನಗೆ ಯಾರು ಕಿರುಕುಳ ಕೊಡುತ್ತಿದ್ದಾರೆ ಎಂದೂ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂಥ ಘಟನೆ  ನಡೆದಿರುವುದು ಇದೇ ಮೊದಲು. ಈಗ ಸರ್ಕಾರ ತನ್ನ ಹೊಣೆಯಿಂದ ತಪ್ಪಿಸಿಕೊಳ್ಳಲು ಗಣಪತಿಯವರು ಟೀವಿಗೆ  ಕೊಟ್ಟ ಸಂದರ್ಶನ ಸಾವಿಗೂ ಮುಂಚೆ ಕೊಟ್ಟ ಹೇಳಿಕೆ ಹೌದೇ ಅಲ್ಲವೇ ಎಂದು ಚರ್ಚೆಯಲ್ಲಿ ತೊಡಗಿದೆ. ಸಹಜವಾಗಿಯೇ, ‘ಅದು ಸಾವಿಗಿಂತ ಮುಂಚೆ ಕೊಟ್ಟ  ಹೇಳಿಕೆಯಲ್ಲ’ ಎಂದು ಹೇಳಿ ತನ್ನ ಹೊಣೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ.

ಸರ್ಕಾರ ತನ್ನ ಹೊಣೆಯಿಂದ ತಪ್ಪಿಸಿಕೊಳ್ಳಲು ಇನ್ನೂ ಒಂದು ಕೆಲಸ ಮಾಡಿದೆ. ಅದು ಗಣಪತಿಯವರ ಸಾವನ್ನು ಒಂದು ಅಸಹಜ ಸಾವು ಎಂದು ಸಿಆರ್‌ಪಿಸಿ 174ರ ಅಡಿ ಪ್ರಕರಣ ದಾಖಲು ಮಾಡಿಕೊಂಡಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ)ಯಡಿ ಆತ್ಮಹತ್ಯೆಯನ್ನು ಅಪರಾಧ ಎಂದು ಪರಿಗಣಿಸಿಲ್ಲ. ಹೀಗಾಗಿ  ಸಿಆರ್ ಪಿಸಿ ಅಡಿ ಪ್ರಕರಣ ದಾಖಲಾಗಿದೆ. ಹಾಗಾದರೆ, ಟೀವಿ ಸಂದರ್ಶನದಲ್ಲಿ ತಮಗೆ ಯಾರು ಕಿರುಕುಳ ಕೊಡುತ್ತಿದ್ದಾರೆ ಎಂದು ಗಣಪತಿ ಅವರು ಹೇಳಿರುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಏನು ಕ್ರಮ ತೆಗೆದುಕೊಳ್ಳುತ್ತದೆ? ಈಗಿನ ಪ್ರಕಾರ ಸಿಐಡಿ ತನಿಖೆ ಮತ್ತು ನ್ಯಾಯಾಂಗ ತನಿಖೆಯಲ್ಲಿ ಯಾರ  ವಿರುದ್ಧ ಆರೋಪದ ಬೆರಳು ಬರುತ್ತದೆಯೋ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ  ಭರವಸೆ ನೀಡಿದ್ದಾರೆ. ಇದೆಲ್ಲ ನಂಬುವ ಮಾತೇ?

ಈ ನಡುವೆ ಈ ಮೂವರು ಅಧಿಕಾರಿಗಳನ್ನು ‘ಭಜರಂಗಿ’ಗಳು ಎಂದು ಹಣೆಪಟ್ಟಿ ಹಚ್ಚುವ ಕೆಲಸ ವ್ಯವಸ್ಥಿತವಾಗಿ ನಡೆದಿದೆ. ಗಣಪತಿಯವರು, 2008ರಲ್ಲಿ ಮಂಗಳೂರಿನ ಚರ್ಚ್‌ವೊಂದರ ಮುಂದೆ ಸೇರಿದ್ದ ಕ್ರೈಸ್ತರ ಮೇಲೆ ಲಾಠಿ ಪ್ರಹಾರ ಮಾಡಿದ್ದು ಈಗ ವಾಟ್ಸ್ ಆ್ಯಪ್‌ ಸಂದೇಶಗಳಲ್ಲಿ ಹರಿದಾಡುತ್ತಿದೆ. ಅಲ್ಲಿನ ಸಂದೇಶಗಳನ್ನು ಓದಿದರೆ ಕ್ರೈಸ್ತರ ಮೇಲೆ ಲಾಠಿ ಪ್ರಹಾರ ಮಾಡುವುದು ಮಾನವ ಹಕ್ಕುಗಳ ಉಲ್ಲಂಘನೆ ಎನ್ನುವಂತೆ ಬಿಂಬಿತವಾಗುತ್ತಿದೆ. ಅಲ್ಲಿನ ವಾದವನ್ನು ನಂಬಬಹುದಾದರೆ ಪೊಲೀಸರು ಇನ್ನು ಮುಂದೆ ಯಾವ ಸಮುದಾಯದವರ ಮೇಲೂ ಲಾಠಿ ಬೀಸುವಂತೆ ಇಲ್ಲ. ಏಕೆಂದರೆ ಸಾಮಾಜಿಕ ಮಾಧ್ಯಮ ಪ್ರಬಲವಾಗಿರುವ ಈಗಿನ ಕಾಲದಲ್ಲಿ ಯಾವ ಕ್ರಮಕ್ಕೆ ಯಾವ ಬಣ್ಣ ಬಳಿಯುತ್ತಾರೆ ಎಂದು ಹೇಳುವುದು ಕಷ್ಟ.

ವಾಟ್ಸ್‌ ಆ್ಯಪ್‌ ಸಂದೇಶಗಳ ಧ್ವನಿ ಹೇಗಿದೆ ಎಂದರೆ, ‘ಕ್ರೈಸ್ತರ ಮೇಲೆ ದಾಳಿ ಮಾಡಿದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರೆ ಅವರಿಗೆ ಹೀರೊ ಪಟ್ಟ ಏಕೆ ಕಟ್ಟಬೇಕು’ ಎನ್ನುವಂತೆ ಇದೆ! ಅಂದರೆ ಗಣಪತಿಯ ಸಾವಿಗೆ ನ್ಯಾಯ ಕೇಳಬಾರದು ಎಂದೂ ಅರ್ಥ ಮಾಡಿಕೊಳ್ಳಬಹುದು! ಗಣಪತಿ ಆತ್ಮಹತ್ಯೆಯ  ಹೊಣೆಯನ್ನು ವಿರೋಧ ಪಕ್ಷಗಳು ಹಿಂದಿನ ಗೃಹ ಸಚಿವ ಮತ್ತು ಈಗಿನ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅವರ ತಲೆಗೆ ಕಟ್ಟುತ್ತಿರುವುದರ ವಿರುದ್ಧ ಒಂದು ಅಸ್ತ್ರವಾಗಿ ಈ ಸಂದೇಶಗಳು ಬಳಕೆಯಾಗುತ್ತಿರಬಹುದು ಎಂದು ಭಾಸವಾಗುತ್ತದೆ. ಅಥವಾ ಕೆಥೋಲಿಕ್‌ ಕ್ರೈಸ್ತರ, ಅದರಲ್ಲಿಯೂ ವಿಶೇಷವಾಗಿ ಪಾದ್ರಿಗಳು ಮತ್ತು ಸನ್ಯಾಸಿನಿಯರ, ಮೇಲೆ ಲಾಠಿ ಪ್ರಹಾರ ನಡೆದುದಕ್ಕೂ ಮತ್ತು ಜಾರ್ಜ್‌ ಅವರು ಗಣಪತಿ ಅವರಿಗೆ ಕಿರುಕುಳ ಕೊಟ್ಟರು ಎಂಬ ಆರೋಪಕ್ಕೂ ಎಲ್ಲಿಯೋ ಒಂದು ಸಂಬಂಧ ಇದ್ದರೂ ಇರಬಹುದು!

ಗಣಪತಿಯವರು 1994ರಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಆಗಿ ಸೇವೆಗೆ ಸೇರಿದವರು. ಅಂದರೆ ಇದುವರೆಗೆ ಅವರು ಇಲಾಖೆಯಲ್ಲಿ 22 ವರ್ಷಗಳ ಕಾಲ ಸೇವೆ ಮಾಡಿದ್ದಾರೆ. ಅವರ ಸೇವಾವಧಿಯಲ್ಲಿ ಕೆಲವು ಕಪ್ಪು ಚುಕ್ಕೆಗಳೂ ಇವೆ ಎಂದು ಇಲಾಖೆಯ ಕಡತಗಳು ಹೇಳುತ್ತವೆ. ಅವರು ಟೀವಿ ಸಂದರ್ಶನದಲ್ಲಿ ನೀಡಿದ ಹೇಳಿಕೆಯಲ್ಲಿ ಅಲ್ಲಲ್ಲಿ ಕೆಲವು ಸಡಿಲ ಕೊಂಡಿಗಳು ಇರುವುದು ನಿಜವಾದರೂ ಪೊಲೀಸ್‌ ಇಲಾಖೆಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಮಾತ್ರ ಸ್ಪಷ್ಟವಾಗಿ ಗೊತ್ತಾಗುತ್ತಿದೆ.

ಗಣಪತಿ ಮತ್ತು ಅನುಪಮಾ ಅವರ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮೇಲಿನಿಂದ ಕೆಳಗೆ ಸಮಾನಾಂತರವಾಗಿ ಇಲಾಖೆ ಹೋಳಾದಂತೆ ಕಾಣುತ್ತದೆ. ಐಪಿಎಸ್‌ ಅಧಿಕಾರಿಗಳು ಒಂದು ಕಡೆ ಆಗಿದ್ದರೆ ಕರ್ನಾಟಕ ಆಡಳಿತ ಸೇವೆಯ ಪೊಲೀಸ್‌ ಅಧಿಕಾರಿಗಳು ಇನ್ನೊಂದು ಕಡೆ ಇದ್ದಾರೆ. ಸಂಪೂರ್ಣವಾಗಿ ರಾಜಕೀಕರಣಗೊಂಡಿರುವ ಆಡಳಿತ ವ್ಯವಸ್ಥೆಯಲ್ಲಿ  ಕರ್ನಾಟಕ ಆಡಳಿತ ಪೊಲೀಸ್‌ ಅಧಿಕಾರಿಗಳು ಒಂದು ರೀತಿ ದಿಕ್ಕೇಡಿಗಳಾಗಿರುವಂತಿದೆ. ಇಲಾಖೆಗೆ ಸೇರುವಾಗಲೇ ಭಾರಿ ಪ್ರಮಾಣದ ಲಂಚ ಕೊಟ್ಟು ನೇಮಕ ಆಗುವ ಅವರು ಮೊದಲ ದಿನದಿಂದಲೇ ಆಯಕಟ್ಟಿನ ಜಾಗಗಳನ್ನು ಹುಡುಕಲು ರಾಜಕಾರಣಿಗಳ ಬೆನ್ನು ಹತ್ತುತ್ತಾರೆ. ಸಬ್‌ ಇನ್ಸ್‌ಪೆಕ್ಟರ್‌ನಿಂದ ಡಿವೈಎಸ್‌ಪಿವರೆಗೆ ವಿವಿಧ ದರ್ಜೆಯ ಅಧಿಕಾರಿಗಳನ್ನು ವರ್ಗ ಮಾಡುವ ಅಧಿಕಾರವುಳ್ಳ ಪೊಲೀಸ್‌ ಮಹಾ ನಿರ್ದೇಶಕರ ನೇತೃತ್ವದ  ಪೊಲೀಸ್‌ ಆಡಳಿತ ಮಂಡಳಿಯ ಶಿಫಾರಸುಗಳಿಗೆ ಯಾವ ಬೆಲೆಯೂ ಇಲ್ಲವಾಗಿದೆ.

ಇಡೀ ಪೊಲೀಸ್‌ ವ್ಯವಸ್ಥೆ ಕೊಳೆಯುತ್ತಿರುವುದು ಈ ಕಾರಣದಿಂದಾಗಿ. ಒಂದು ಸಾರಿ ರಾಜಕೀಯ ವ್ಯವಸ್ಥೆಯ ದಾಳವಾಗಿ ಬಿಟ್ಟರೆ ಯಾವ ಅಧಿಕಾರಿಯಾದರೂ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡು ಬಿಡುತ್ತಾನೆ ಮತ್ತು ಆತ ಸಾರ್ವಜನಿಕರಿಗೆ  ನ್ಯಾಯ ಒದಗಿಸಲು ಆಗುವುದಿಲ್ಲ. ಪೊಲೀಸ್‌  ಆಡಳಿತದಲ್ಲಿ ಎಲ್ಲರೂ ಭ್ರಷ್ಟರು ಎಂದು ಹೇಳಲಾಗದು. ಆದರೆ, ಒಟ್ಟಾರೆ ಪೊಲೀಸ್‌ ಆಡಳಿತ ವ್ಯವಸ್ಥೆ ಎಂಬುದು ಭ್ರಷ್ಟವಾಗಿ ಬಿಟ್ಟಿದೆ. ಕಡಲೆ ಬೀಜ ಮಾರುವವರಿಂದಲೂ ಹಫ್ತಾ ಸಂಗ್ರಹಿಸಿ ಮೇಲಧಿಕಾರಿಗಳ ಜೊತೆ ಹಂಚಿಕೊಳ್ಳುವಂಥ ಅತ್ಯಂತ ನಿರ್ಲಜ್ಜ ಸ್ಥಿತಿಯನ್ನು ಪೊಲೀಸ್‌ ಆಡಳಿತ ಮುಟ್ಟಿದೆ.

ಅಕ್ರಮವಾಗಿ ಹಣ ಸಂಗ್ರಹಿಸುವುದು ಮತ್ತು ಅದನ್ನು ಒಯ್ದು ಮೇಲಿನವರಿಗೆ ಕೊಟ್ಟು ತನ್ನ ಜಾಗವನ್ನು ಭದ್ರ ಮಾಡಿಕೊಳ್ಳುವುದೇ ಒಂದು ದೊಡ್ಡ ಕೆಲಸ ಆಗಿರುವಾಗ ಮತ್ತು ಈ ಪ್ರಕ್ರಿಯೆ ಅವರ ಕೆಲಸದ ಮೇಲೆ ತೀವ್ರ ಒತ್ತಡ ಹೇರುವಾಗ ವೃತ್ತಿ ಸಂತೋಷ ಎಂಬುದು ಸಹಜವಾಗಿಯೇ ಹೊರಟು ಹೋಗುತ್ತದೆ. ಇದೆಲ್ಲ ಆಗಿರುವುದು ಇಂದು ನಿನ್ನೆಯ ಬೆಳವಣಿಗೆಯಲ್ಲ. ಪೊಲೀಸ್‌ ವರ್ಗಾವಣೆಯಲ್ಲಿ ಶಾಸಕರ ಮನವಿಗೆ ಸಚಿವರು ಮಿನಿಟು ಹಾಕುವುದು ಶುರುವಾಗಿ ಮೂರು ದಶಕಗಳೇ ಆಗಿ ಹೋಯಿತು. ತಮ್ಮ ತಮ್ಮ ಕ್ಷೇತ್ರದಲ್ಲಿ ಪೊಲೀಸ್‌ ಮತ್ತು ಕಂದಾಯ ಅಧಿಕಾರಿಗಳು ತಮ್ಮ ಮಾತು ಕೇಳುವವರೇ ಆಗಿರಬೇಕು ಎಂದು ಆಡಳಿತ ಪಕ್ಷದ ಶಾಸಕರು ಬಯಸುತ್ತಾರೆ. ಆಡಳಿತ ಪಕ್ಷದ ಅಭ್ಯರ್ಥಿಗಳು ಸೋತ ಕಡೆಗಳಲ್ಲಿ ಸೋತ ಅಭ್ಯರ್ಥಿಯ ಕೋರಿಕೆಯನ್ನು ಆಧರಿಸಿಯೇ ಈ ಅಧಿಕಾರಿಗಳ ‘ನೇಮಕ’ ಆಗುತ್ತದೆ. ಯಾವ ಪಕ್ಷದ ಆಡಳಿತ ಇದ್ದರೂ ಇದೇ ಪುನರಾವರ್ತನೆ ಆಗುತ್ತದೆ.

ಗಣಪತಿಯವರು ಆತ್ಮಹತ್ಯೆ ಮಾಡಿಕೊಂಡ ನಂತರ ವಿಧಾನ ಮಂಡಲದಲ್ಲಿ ನಡೆದಿರುವ ಚರ್ಚೆ, ಗಲಾಟೆ, ಧರಣಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೊಳೆತು ಹೋಗಿರುವ ಆಡಳಿತ ವ್ಯವಸ್ಥೆಯನ್ನು ಸರಿದಾರಿಗೆ ತರಬೇಕು ಎಂದು ಯಾರಿಗಾದರೂ ಕಾಳಜಿಯಿದೆ ಎಂದು ಅನಿಸುವುದಿಲ್ಲ. ತಮ್ಮ ಭದ್ರ ಕೋಟೆಯಾಗಿರುವ ಕೊಡಗನ್ನು ಇನ್ನಷ್ಟು ಭದ್ರ ಮಾಡಿಕೊಳ್ಳಬೇಕು ಎಂದು ಬಿಜೆಪಿಯವರು ಲೆಕ್ಕ ಹಾಕುತ್ತಿದ್ದಾರೆ. ಗಣಪತಿ ಕೊಟ್ಟ ಏಟಿಗೆ ಜಾರ್ಜ್‌ ರಾಜೀನಾಮೆ ಕೊಟ್ಟರೆ ಸರ್ಕಾರದ ಮತ್ತೊಂದು ಹುದ್ದರಿ ಬಿದ್ದಂತೆ ಆಗುತ್ತದೆ. ಅಷ್ಟರ ಮಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿಯನ್ನು ಅಭದ್ರ ಮಾಡಿದಂತೆ ಆಗುತ್ತದೆ ಎಂದೂ ಅವರು ಎಣಿಕೆ ಹಾಕಿದ್ದಾರೆ. ಬಿಜೆಪಿಯವರ ಜೊತೆಗೆ ಜೆ.ಡಿ.(ಎಸ್‌)ನವರೂ ಸೇರಿರುವುದು ಕುತೂಹಲಕರವಾಗಿದೆ. ಬಹುಶಃ, ರಾಜ್ಯಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ತಮಗೆ ಕೊಟ್ಟ ಏಟಿಗೆ ಪ್ರತಿ ಏಟು ನೀಡಲು ಇಷ್ಟು ಬೇಗ ಅವಕಾಶ ಸಿಗುತ್ತದೆ ಎಂದು ಕುಮಾರಸ್ವಾಮಿ ಅಂದುಕೊಂಡಿರಲಿಲ್ಲವೋ ಏನೋ!

ಟಿಪ್ಪು ಜಯಂತಿ ಆಚರಣೆ ನಂತರದಿಂದ ಕೊಡಗು ರಾಜಕೀಯ ಬೇರೆ  ತಿರುವನ್ನೇ ತೆಗೆದುಕೊಂಡಿದೆ. ಈಗ ವಿರೋಧಿಗಳ ಕೈಗೆ ಇನ್ನೊಂದು ಅಸ್ತ್ರವನ್ನು ಅದೇ ಜಿಲ್ಲೆ ಅನಾಯಾಸವಾಗಿ ಒದಗಿಸಿಕೊಟ್ಟಿದೆ. ಆದರೆ, ಇಂಥ ತಕ್ಷಣದ ರಾಜಕೀಯ ಲಾಭದ ಆಚೆಗೆ  ರಾಜ್ಯದ ಆಡಳಿತ ವ್ಯವಸ್ಥೆಯನ್ನು ಸರಿದಾರಿಗೆ ತರಬೇಕು ಎಂಬ ನೈಜ ಕಾಳಜಿಯೂ ತನಗಿದೆ ಎಂದು ವಿರೋಧ ಪಕ್ಷ ತೋರಿಸಬೇಕಿತ್ತು. ರಾಜಕೀಯ ಹಸ್ತಕ್ಷೇಪ ಎಂಬ ಆಕ್ಟೋಪಸ್‌ ಹಿಡಿತದಿಂದ ಒಟ್ಟಾರೆ ಆಡಳಿತವನ್ನು ಹೇಗೆ  ಬಿಡಿಸಬೇಕು ಎಂಬ ಕುರಿತು ಸದನದಲ್ಲಿ ಚರ್ಚೆ ಆಗಬೇಕಿತ್ತು. ಒತ್ತಡಕ್ಕೋ, ಹತಾಶೆಗೋ ಒಳಗಾಗಿ ರಾಜೀನಾಮೆ ಕೊಡುವ ಮತ್ತು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವ ಅಧಿಕಾರಿಗಳಿಗೆ ಸಾಂತ್ವನ ನೀಡುವುದು ಹೇಗೆ? ಅವರು ಎಲ್ಲಿ ತಮ್ಮ ಒತ್ತಡಕ್ಕೆ, ಕಿರುಕುಳಕ್ಕೆ ಪರಿಹಾರ ಕಂಡುಕೊಳ್ಳಬೇಕು? ಅದಕ್ಕೆ ಒಂದು ನಿಷ್ಪಕ್ಷಪಾತ ಮತ್ತು ಕರುಣಾಳು  ವೇದಿಕೆಯನ್ನು ನಿರ್ಮಿಸುವುದು ಹೇಗೆ ಎಂದು ಚರ್ಚೆ ನಡೆಯಬೇಕಿತ್ತು.

ವಿರೋಧಿಗಳು ಅಂಥ ಒಂದು ವೇದಿಕೆಗೆ ಕೇಳದೇ ಇದ್ದರೂ ಮುಖ್ಯಮಂತ್ರಿಯವರಾದರೂ ತಾವೇ ಮುಂದಾಗಿ ಎಲ್ಲ ಇಲಾಖೆಗಳ ನೌಕರರಿಗೂ ಇಂಥ ಒಂದು ವ್ಯವಸ್ಥೆಯನ್ನು ಹುಟ್ಟು ಹಾಕುತ್ತಿರುವುದಾಗಿ ಪ್ರಕಟಿಸಬೇಕಿತ್ತು. ಅಂದರೆ, ಒಂದು ರಾಜೀನಾಮೆ, ಎರಡು ಆತ್ಮಹತ್ಯೆಗಳು ಸರ್ಕಾರದ ಅಂತಃಕರಣವನ್ನು ಎಲ್ಲಿಯೋ ಕಲಕಿವೆ ಎಂದು ಅರ್ಥವಾಗುತ್ತಿತ್ತು. ಸಿದ್ದರಾಮಯ್ಯ ಅವರಂಥ ದೀರ್ಘ ಆಡಳಿತದ ಅನುಭವ ಇರುವವರಿಂದ  ಇಷ್ಟನ್ನೂ ನಿರೀಕ್ಷಿಸಬಾರದು ಎಂದರೆ ಹೇಗೆ? ಆದರೆ, ವಾಸ್ತವದಲ್ಲಿ, ಇದೆಲ್ಲ ಸರ್ಕಾರಕ್ಕೂ  ಬೇಡ; ವಿರೋಧ ಪಕ್ಷಗಳಿಗೂ ಬೇಡ. ನೀನು ಸತ್ತಂತೆ ಮಾಡು, ನಾನು ಅತ್ತಂತೆ ಮಾಡುವೆ ಎನ್ನುವ ವರಸೆಯೇ ಎಲ್ಲರದೂ. ಏನು ಮಾಡಿದರೂ ಜಾರ್ಜ್‌ ರಾಜೀನಾಮೆ ಕೊಡುವುದಿಲ್ಲ. ವಿರೋಧ ಪಕ್ಷ ಆ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ. ಸರ್ಕಾರಕ್ಕೆ ಎಷ್ಟು ದಿನ ಬೇಕೋ ಅಷ್ಟು ದಿನ ಸದನ ನಡೆಸಿ ಅನಿರ್ದಿಷ್ಟ ಕಾಲಕ್ಕೆ ಅಧಿವೇಶನ ಮುಂದೂಡಿ ಹೊರಟು ಹೋಗುತ್ತದೆ. ಅಲ್ಲಿಗೆ ಗಣಪತಿಯವರ ಸಾವಿಗೆ ನ್ಯಾಯ ದೊರೆತಂತೆ ಆಗುತ್ತದೆಯೇ? ಪೊಲೀಸ್‌ ಆಡಳಿತ ಸರಿ ಹೋಗುತ್ತದೆಯೇ?

ರಾಜಕೀಯ ಬೇರೆ, ನೈತಿಕತೆ ಬೇರೆ. ಗಣಪತಿಯವರು, ಸಚಿವ ಜಾರ್ಜ್‌ ಮತ್ತು ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ನೇರವಾಗಿ ಕಿರುಕುಳದ ಆರೋಪ ಮಾಡಿದ್ದಾರೆ.  ಆ ಮೂವರ ವಿರುದ್ಧ  ಆತ್ಮಹತ್ಯೆಗೆ  ಕುಮ್ಮಕ್ಕು ನೀಡಿದ ಆರೋಪದ ಮೇಲೆ (ಭಾರತೀಯ ದಂಡ ಸಂಹಿತೆಯ 306ನೇ ಕಲಮಿನ ಪ್ರಕಾರ) ಮೊಕದ್ದಮೆ ದಾಖಲು ಮಾಡಿಕೊಳ್ಳಬೇಕಿತ್ತು. ದೂರು ದಾಖಲಾದ ತಕ್ಷಣ ಜಾರ್ಜ್‌ ಅವರು ರಾಜೀನಾಮೆ ನೀಡಬೇಕಿತ್ತು. ಏಕೆಂದರೆ ತಮಗಿಂತ ಸರ್ಕಾರ ದೊಡ್ಡದು ಮತ್ತು ಪಕ್ಷ ದೊಡ್ಡದು ಎಂದು ಅವರು ತಿಳಿದುಕೊಳ್ಳಬೇಕಿತ್ತು. ಅವರ ಪರ ವಕಾಲತ್ತು ವಹಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ವೈಯಕ್ತಿಕ ಸಂಬಂಧಗಳನ್ನು ಮೀರಿ, ಜಾರ್ಜ್‌ಗೆ ಅಧಿಕಾರ ಬಿಡಲು ಹೇಳಬೇಕಿತ್ತು.

ತನಿಖೆ  ಮುಗಿದು, ಗಣಪತಿ ಮಾಡಿದ ಆರೋಪಗಳಲ್ಲಿ ಯಾವುದೇ ಹುರುಳು ಇಲ್ಲ ಎಂದು ಸಾಬೀತಾಗಿದ್ದರೆ, ಮತ್ತೆ ಜಾರ್ಜ್‌ ಅವರನ್ನು ಮಂತ್ರಿ ಮಾಡಬಹುದಿತ್ತು. ಸಾರ್ವಜನಿಕ ಜೀವನದಲ್ಲಿ ಮಾದರಿಗಳನ್ನು ಹಾಕುವುದು ಹೀಗೆ. ಈಗ ಹೇಳುತ್ತಿರುವ ಹಾಗೆಯೇ ಜಾರ್ಜ್‌ ತಪ್ಪು ಮಾಡಿಲ್ಲ ಎನ್ನುವುದಾದರೆ ಅವರಿಗೆ ಯಾವ ಭಯ? ಇವೆಲ್ಲ ಒಬ್ಬರ ರಾಜಕೀಯ ಜೀವನದಲ್ಲಿ ಸಿಗುವ ಅಪರೂಪದ ಅವಕಾಶಗಳು. ಈಗ ಏನಾಗಿದೆ ಎಂದರೆ ಜಾರ್ಜ್‌ ಬೆಂಬಲಕ್ಕೆ ನಿಂತಿರುವ ಸಿದ್ದರಾಮಯ್ಯ ಕಾಂಗ್ರೆಸ್‌ ಅನ್ನು ಮುಗಿಸುವ ದಾರಿಯಲ್ಲಿ ಇನ್ನೊಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ ಎನ್ನುವಂತೆ ಆಗಿದೆ! ಹಿರಿಯ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿ ಅದೇ ಮಾತನ್ನು ಹೇಳಿದ್ದಾರೆ. ಕಾಂಗ್ರೆಸ್ಸಿಗರೇ ಕಾಂಗ್ರೆಸ್‌ ಮುಗಿಸುತ್ತಿದ್ದರೆ ಬಿಜೆಪಿ ಮತ್ತು ಜೆ.ಡಿ.ಎಸ್‌ಗೆ ಇನ್ನೇನು ಕೆಲಸ?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT