ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯದ ಭವಿಷ್ಯ ನಿರ್ಧರಿಸಲಿರುವ ವರ್ಷ

Last Updated 4 ಜನವರಿ 2017, 19:30 IST
ಅಕ್ಷರ ಗಾತ್ರ
2016ನೇ ಸಾಲಿನಲ್ಲಿ ಅನೇಕ ಹಠಾತ್ ತಿರುವುಗಳು ಮತ್ತು ಅನಿರೀಕ್ಷಿತ ಬೆಳವಣಿಗೆಗಳು ದಾಖಲಾಗಿದ್ದು, ದುಡುಕಿನ  ನಿರ್ಧಾರಗಳು ಮತ್ತು ಉತ್ಸಾಹ ಮೂಡಿಸದ ಅನೇಕ ವಿದ್ಯಮಾನಗಳೂ ಘಟಿಸಿದವು. ಕಾತರದ ಮತ್ತು ಹತಾಶೆ ಮೂಡಿಸುವ ಕ್ಷಣಗಳಿಗೂ ಹಳೆಯ ವರ್ಷ ಸಾಕ್ಷಿಯಾಯಿತು. ವರ್ಷಾರಂಭದಲ್ಲಿಯೇ ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳನಾಡು ಮತ್ತು ಕೇರಳ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆದಿತ್ತು.  ಈ  ರಾಜಕೀಯ ಮುನ್ನುಡಿಯೊಂದಿಗೆ ಹೊಸ ವರ್ಷ ಆರಂಭವಾಗಿತ್ತು.  ವರ್ಷಾಂತ್ಯದಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿಯು  ಭಾರಿ ಸದ್ದು ಮಾಡಿತು.  ಈ ಐತಿಹಾಸಿಕ ನಿರ್ಧಾರವು ದೇಶಿ ರಾಜಕಾರಣಕ್ಕೆ ಹೊಸ ವ್ಯಾಖ್ಯಾನ  ನೀಡಲಿದ್ದು, ಪಕ್ಷಗಳು ಮತ್ತು ರಾಜಕೀಯ ಮುಖಂಡರ ಭವಿಷ್ಯವನ್ನೂ ನಿರ್ಧರಿಸಲಿದೆ.
 
ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿಯು ಆಡಳಿತ ಮತ್ತು  ರಾಜಕೀಯದಲ್ಲಿ ತನಗಿರುವ ಬಿಗಿ ಹಿಡಿತವನ್ನು  ಸದ್ಯಕ್ಕಂತೂ ಸ್ಪಷ್ಟವಾಗಿ ಸಾಬೀತುಪಡಿಸಿದೆ. ವಿರೋಧ ಪಕ್ಷಗಳು ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರಕ್ಕೆ ಸವಾಲೊಡ್ಡಲು ತಮ್ಮ ಕಾರ್ಯತಂತ್ರ ಬದಲಿಸಲು ನಿರಂತರವಾಗಿ ಹತಾಶ ಪ್ರಯತ್ನ ಮಾಡುತ್ತಲೇ ಇವೆ.
 
ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು ವರ್ಷಾಂತ್ಯದ ಹೊತ್ತಿಗೆ ತನ್ನ ಐದು ವರ್ಷಗಳ ಅಧಿಕಾರಾವಧಿಯ ಮಧ್ಯ ಭಾಗವನ್ನು ತಲುಪಿದಂತಾಗಿದೆ.  ಯುಪಿಎ–2 ಸರ್ಕಾರ ವಿರುದ್ಧದ ಜನಾಭಿಪ್ರಾಯ ಅಲೆಯ ಬೆನ್ನೇರಿ  ಅಧಿಕಾರದ ಗದ್ದುಗೆಗೆ ಏರಿದ ಹೊಸ ಸರ್ಕಾರವು ಭಾರಿ ನಿರೀಕ್ಷೆಯೊಂದಿಗೆ ಅಧಿಕಾರ ವಹಿಸಿಕೊಂಡಿತ್ತು. ‘ಉತ್ತಮ ದಿನ’ಗಳನ್ನು (ಅಚ್ಛೆ ದಿನ್‌) ತರುವ ಭರವಸೆಯು ಮಾತಿನ ಜಾಣ್ಮೆಯಿಂದ ಕೂಡಿದ್ದರೂ, ಸರ್ಕಾರ ಈಗಾಗಲೇ ಅರ್ಧ ದೂರ ಕ್ರಮಿಸಿಯಾಗಿದೆ. ಜನರಿಗೆ ನೀಡಿದ್ದ ವಾಗ್ದಾನವು ನಿಜಾರ್ಥದಲ್ಲಿ ಕಾರ್ಯಗತಗೊಳ್ಳಬೇಕಾಗಿದೆ.
 
ಹಗರಣಗಳ ಭಾರಕ್ಕೆ ನಲುಗಿದ್ದ ಯುಪಿಎ–2 ಸರ್ಕಾರದ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಹೊಸ ಯೋಜನೆಗಳ ಸೊಲ್ಲೇ ಕೇಳಿ ಬರುತ್ತಿರಲಿಲ್ಲ.  ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ   ಹೊಸ  ಪರಿಕಲ್ಪನೆಯ ನವನವೀನ ಆಕರ್ಷಕ ಯೋಜನೆಗಳನ್ನು ಸರಣಿಯೋಪಾದಿಯಲ್ಲಿ ಕಾರ್ಯಗತಗೊಳಿಸಲಾಯಿತು. ಈ ಉದ್ದೇಶಕ್ಕೆ ಆಧುನಿಕ ಪ್ರಚಾರದ ವೇದಿಕೆಗಳನ್ನೆಲ್ಲ ಸಮರ್ಥವಾಗಿ ಬಳಸಿಕೊಳ್ಳಲಾಯಿತು. 
 
ಇದನ್ನೆಲ್ಲ ನೋಡಿದ ಅನೇಕರು ‘ಒಳ್ಳೆಯ ದಿನಗಳು’ ಬಂದೇ ಬಿಟ್ಟವು ಎಂದು ಸಂಭ್ರಮಿಸಿದರು.  ಇನ್ನೂ ಕೆಲವರು ಇನ್ನೂ ಬರಬೇಕಾಗಿದೆ ಎಂದು ಕಾದು ನೋಡಲು ಕುಳಿತರು. ಆದರೆ,  ಯಾವುವು ಒಳ್ಳೆಯ ದಿನಗಳು ಎನ್ನುವ ಅನುಮಾನ ಈಗಲೂ ಅನೇಕರನ್ನು ಕಾಡುತ್ತಲೇ ಇದೆ. 2016ನೇ ವರ್ಷದ ಉದ್ದಕ್ಕೂ ಇಂತಹ ಸಂಭ್ರಮ ಮತ್ತು ಸಂದೇಹಗಳು ಜನಮಾನಸವನ್ನು  ಕಾಡುತ್ತಲೇ  ಹೋದವು. ಪರಸ್ಪರ ಸಂಬಂಧ ಹೊಂದಿರುವ ಈ ಎರಡೂ ವಿದ್ಯಮಾನಗಳು ವರ್ಷದ ಉದ್ದಕ್ಕೂ ನಿಯಮಿತವಾಗಿ ಜನರ ಗಮನ ಸೆಳೆಯುತ್ತಲೇ ಹೋದವು. 
 
ರಾಷ್ಟ್ರೀಯತೆಯ ಭಾವನೆಗೆ ಹೊಸ ಸುಸಂಬದ್ಧ ತಿರುವು ನೀಡಿ  ದೇಶಭಕ್ತಿಯ ಭಾವೋದ್ವೇಗ ಉದ್ದೀಪನಗೊಳಿಸಿ ರಾಷ್ಟ್ರೀಯ ಹೆಮ್ಮೆಯ ಭಾವನೆ  ಪುನಶ್ಚೇತನಗೊಳಿಸಲು ಆದ್ಯತೆ ನೀಡಲಾಯಿತು.  ಬಿಜೆಪಿ ನೇತೃತ್ವದಲ್ಲಿನ ಸರ್ಕಾರ ಮತ್ತು  ಪಕ್ಷದ ನಾಯಕತ್ವವು ದೇಶದಲ್ಲಿ ಏಕತೆ, ನ್ಯಾಯ, ಸಮಾನತೆಗೆ ಸಂಬಂಧಿಸಿದಂತೆ ಹೊಸ ಬೆಳಗು ತರುವ   ಘೋಷಣೆಗಳನ್ನು   ಕೂಗುವುದರಲ್ಲಿ ನಿರತವಾಗಿದ್ದರೆ, ಇನ್ನೊಂದೆಡೆ ಸಮಾಜದಲ್ಲಿ ಅದರಲ್ಲೂ ವಿಶೇಷವಾಗಿ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ನೆಮ್ಮದಿ ಮೂಡಿಸದ  ಅಹಿತಕರ ಬೆಳವಣಿಗೆಗಳು ಕಂಡು ಬಂದವು. ಅಂದರೆ ಸರ್ಕಾರ ತಳೆದ ಧೋರಣೆಗೂ, ವಾಸ್ತವದಲ್ಲಿ ಕಾರ್ಯಗತಗೊಂಡ ಅದರ ನಡವಳಿಕೆಗಳಿಗೂ  ಭಾರಿ ವ್ಯತ್ಯಾಸ ಇರುವುದು ಸ್ಪಷ್ಟವಾಗಿತ್ತು. 
 
ರಾಷ್ಟ್ರೀಯ ಚುನಾವಣಾ ಅಧ್ಯಯನವು ಮಹತ್ವದ ಸಂಗತಿಯೊಂದರ ಮೇಲೆ ಬೆಳಕು ಚೆಲ್ಲಿರುವುದನ್ನು ಇಲ್ಲಿ ಉಲ್ಲೇಖಿಸಲೇಬೇಕು. ಈ ಅಧ್ಯಯನದ ವರದಿ ಪ್ರಕಾರ, 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದಲ್ಲಿನ ಎನ್‌ಡಿಎ ಮಿತ್ರ ಪಕ್ಷಗಳು, ಮುಸ್ಲಿಂ ಮತ್ತು ಕ್ರೈಸ್ತರ ಕೇವಲ ಶೇ 8ರಷ್ಟು ಮತಗಳನ್ನಷ್ಟೇ ಪಡೆದಿವೆ. ಇದು ಎನ್‌ಡಿಎ ಮೈತ್ರಿಕೂಟದ ರಾಷ್ಟ್ರೀಯ ಸರಾಸರಿ ಮತ ಗಳಿಕೆಗೆ ಹೋಲಿಸಿದರೆ ಶೇ 23ರಷ್ಟು ಕಡಿಮೆ ಇದೆ.
 
2017ರಲ್ಲಿ ನಡೆಯಲಿರುವ ಬೆಳವಣಿಗೆಗಳು,  ಎಲ್ಲರನ್ನೂ ಜತೆಯಲ್ಲಿ ಕರೆದುಕೊಂಡು ಹೋಗುವ ಸರ್ಕಾರದ ಘೋಷಣೆ ಮತ್ತು ಪ್ರಯತ್ನಗಳ ಅಂತಿಮ ಫಲಿತಾಂಶದ ಸ್ಪಷ್ಟ ಸಂಕೇತವಾಗಿರಲಿದ್ದು, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ನೆರವಾಗಲಿವೆ. ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿಯ ಕಸರತ್ತು ಮತ್ತು ಅದು ಬೀರಿದ ವ್ಯಾಪಕ ಪರಿಣಾಮಗಳು 2016ರ ಅತ್ಯಂತ ಪ್ರಮುಖ ಬದಲಾವಣೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದರಿಂದ ಬಿಜೆಪಿಗೆ ದೊಡ್ಡ ಮಟ್ಟದ ರಾಜಕೀಯ ಲಾಭದ ಪ್ರಯೋಜನ ದೊರೆಯುವುದೇ ಅಥವಾ ಸ್ವಯಂ ಗೋಲು ಬಾರಿಸಿಕೊಂಡ ಅನಾಹುತ ತಂದೊಡ್ಡಲಿದೆಯೇ ಎನ್ನುವ  ರಹಸ್ಯ 2017ರ ಕಾಲಗರ್ಭದಲ್ಲಿ ಅಡಗಿದೆ.
 
ಭ್ರಷ್ಟಾಚಾರ ಮತ್ತು ಕಪ್ಪುಹಣದ ಬಗ್ಗೆ ಜನಸಾಮಾನ್ಯರಲ್ಲಿ ಮಡುಗಟ್ಟಿರುವ ಆಕ್ರೋಶವನ್ನೇ ಬಂಡವಾಳ ಮಾಡಿಕೊಳ್ಳಲು ಹೊರಟಿರುವ ಬಿಜೆಪಿ ಸರ್ಕಾರವು ನೋಟು ರದ್ದತಿಯು ಸಮಾಜಕ್ಕೆ ಅಂಟಿಕೊಂಡಿರುವ ಈ ಎರಡು ಪ್ರಮುಖ ಆರ್ಥಿಕ ಕೆಡುಕುಗಳ ವಿರುದ್ಧದ ಸಮರ ಎಂದೇ ಬಿಂಬಿಸಲು ಹೊರಟಿದೆ. 
 
ಹೊಸ ವರ್ಷದ ಮುನ್ನಾದಿನ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಜನಮಾನಸದಲ್ಲಿ ಇರುವ ಇಂತಹ ಆಕ್ರೋಶವನ್ನೇ ನಗದನ್ನಾಗಿಸಲು ಪ್ರಯತ್ನಿಸಿದರು. ಆದರೆ, ನಂತರದ ದಿನಗಳಲ್ಲಿ ಕಪ್ಪುಹಣ ವಿರುದ್ಧದ ಹೋರಾಟದ ದಿಕ್ಕನ್ನು ಬದಲಿಸಿರುವುದು ಜನರಲ್ಲಿ ಗೊಂದಲ ಮೂಡಿಸಿರುವುದರ ಜತೆಗೆ ಕಳವಳಕ್ಕೂ ಎಡೆಮಾಡಿಕೊಟ್ಟಿದೆ.
 
ನೋಟುಗಳ ಅಮಾನ್ಯದಿಂದ ಜನಸಾಮಾನ್ಯರು ದಿನನಿತ್ಯದ ಬದುಕಿನಲ್ಲಿ ಎದುರಿಸುತ್ತಿರುವ ಬವಣೆಗಳು ಹೊಸ ವರ್ಷದಲ್ಲಿ ದೂರವಾಗಲಿವೆ ಎನ್ನುವ ಭರವಸೆ ನಿಜವಾಗಿಯೂ ಕಾರ್ಯಗತಗೊಳ್ಳುವುದೇ ಎನ್ನುವುದನ್ನು ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಈ ಕ್ರಮ ಸಾರ್ವಜನಿಕರಿಗೆ ತಂದೊಡ್ಡಿರುವ ಸಂಕಷ್ಟಗಳ ಸರಮಾಲೆಯು ಸದ್ಯದಲ್ಲೇ ದೂರವಾದರೆ, ಈ ನಿರ್ಧಾರಕ್ಕೆ ಸಿಗುವ ಬೆಂಬಲ ಹೆಚ್ಚಲಿದೆ. ಇದರಿಂದ ಬಿಜೆಪಿಗೂ ಗರಿಷ್ಠ ರಾಜಕೀಯ ಲಾಭ ದೊರೆಯಲಿದೆ. 
 
ಕಾಂಗ್ರೆಸ್‌ ಪಾಲಿಗಂತೂ 2016ನೇ ವರ್ಷ ತುಂಬ ನಿರಾಶಾದಾಯಕವಾಗಿತ್ತು. 2014ರ ಸಾರ್ವತ್ರಿಕ ಚುನಾವಣೆಯಲ್ಲಿನ ಸೋಲಿನ ನಂತರ ಪಕ್ಷವು ಇದುವರೆಗೂ ಯಾವುದೇ ರಾಜ್ಯದಲ್ಲಿ ತನ್ನ ಬಲವನ್ನು ನಿರ್ಣಾಯಕವಾಗಿ ಸಾಬೀತುಪಡಿಸಿಲ್ಲ. ಬಿಹಾರದಲ್ಲಿ ಜೆಡಿಯು ಬೆಂಬಲದಿಂದ ಕೆಲಮಟ್ಟಿಗೆ ಮುಖ ಉಳಿಸಿಕೊಂಡಿದೆಯಷ್ಟೆ. ಪ್ರಮುಖ ಪ್ರತಿಪಕ್ಷವಾಗಿಯೂ ತನ್ನ ಪ್ರಭಾವ ಸಾಬೀತುಪಡಿಸುವಲ್ಲಿ ನಿರಂತರವಾಗಿ ವಿಫಲಗೊಳ್ಳುತ್ತಿದೆ. ದಿನಗಳು ಉರುಳಿದಂತೆ ತನ್ನ ಪಾತ್ರವನ್ನು ಇತರ ರಾಜಕೀಯ ಪಕ್ಷಗಳಿಗೆ ಬಿಟ್ಟುಕೊಡುತ್ತಿರುವಂತೆ ಭಾಸವಾಗುತ್ತಿದೆ. 
 
ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ  ಈಗಲೂ ಹಿಂದೇಟು ಹಾಕುವ ಮುಖಂಡನಂತೆ ಕಂಡು ಬರುತ್ತಾರೆ. ದಿನದ 24 ಗಂಟೆಗಳ ಕಾಲ ರಾಜಕೀಯ ಮಾಡುವ ಹುಮ್ಮಸ್ಸು, ಹಸಿವು  ಅವರಲ್ಲಿ ಕಂಡು ಬರುವುದೇ ಇಲ್ಲ. ಕೆಲವೊಮ್ಮೆ ಹೋರಾಟದ ಕಿಚ್ಚು ತೋರಿಸುವ  ರಾಹುಲ್‌, ಮತ್ತೊಮ್ಮೆ ಉತ್ಸಾಹವನ್ನೇ  ಕಳೆದುಕೊಂಡ ಜನನಾಯಕನಂತೆ ಕಂಡು ಬರುತ್ತಾರೆ. ನೋಟು ರದ್ದತಿ ನಿರ್ಧಾರದಿಂದ ಕಂಡುಬಂದಿರುವ ಬೆಳವಣಿಗೆಗಳು, ಪ್ರತಿಪಕ್ಷಗಳ ಪೈಕಿ ಕೇಂದ್ರಬಿಂದುವಾಗಿ ಹೊರಹೊಮ್ಮಲು ಕಾಂಗ್ರೆಸ್‌ ಪಕ್ಷ ಮತ್ತು ಅದರ ಮುಖಂಡರಿಗೆ ಅತ್ಯುತ್ತಮ ಅವಕಾಶಗಳನ್ನು ಒದಗಿಸಿದ್ದವು. ಆಡಳಿತಾರೂಢ ಬಿಜೆಪಿಯು ತುಂಬ ಜಾಣತನದಿಂದ ಹೆಣೆದ   ರಾಜಕೀಯ ಕಾರ್ಯತಂತ್ರದ ಎದುರು ಇಂತಹ ಪ್ರಯತ್ನಗಳೆಲ್ಲ ಚೂರುಚೂರಾದವು. ಬಿಜೆಪಿಯು ಪ್ರತಿಪಕ್ಷಗಳ ಒಗ್ಗಟ್ಟನ್ನು ಮುರಿಯುವಲ್ಲಿಯೂ ಸಫಲವಾಯಿತು. ಇನ್ನೊಂದೆಡೆ ವಿರೋಧ ಪಕ್ಷಗಳೂ  ಬಿಜೆಪಿಯನ್ನು ಹಣಿಯಲು  ಒದಗಿದ  ಸುವರ್ಣಾವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲಿಕ್ಕಾಗದೆ ಕೈಚೆಲ್ಲಿದವು. ಬಹುಶಃ ಇಂತಹದೇ ಬೆಳವಣಿಗೆಗಳು 2017ರಲ್ಲಿಯೂ ಮುಂದುವರೆದರೆ, ವಿವಿಧ ರಾಜ್ಯಗಳಿಗೆ ಸೀಮಿತವಾಗಿರುವ  ಪ್ರಾದೇಶಿಕ ಪಕ್ಷಗಳು ಮತ್ತು ಅವುಗಳ ಮುಖಂಡರೇ ಪ್ರತಿಪಕ್ಷದ ಸ್ಥಾನ ತುಂಬಲು ಕಾಂಗ್ರೆಸ್‌ ಪಕ್ಷವು  ಅನಿವಾರ್ಯವಾಗಿ ಜಾಗ ಬಿಟ್ಟುಕೊಡಬೇಕಾಗಿ ಬರಬಹುದು.
 
ಮೋದಿ ನಾಯಕತ್ವಕ್ಕೆ ನಿಜವಾದ ಸವಾಲು ಎದುರಾಗಿರುವುದು ಪ್ರಾದೇಶಿಕ ಮುಖಂಡರಿಂದಲೇ ಹೊರತು  ಕಾಂಗ್ರೆಸ್‌ನಿಂದಲ್ಲ. ಬಿಹಾರದ ನಿತೀಶ್‌ಕುಮಾರ್‌, ದೆಹಲಿಯ ಅರವಿಂದ ಕೇಜ್ರಿವಾಲ್‌ ಮತ್ತು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ  ಅವರನ್ನು ಎದುರಿಸುವುದೇ ಮೋದಿ ಅವರಿಗೆ ಮುಖ್ಯ ಸವಾಲಾಗಿರಲಿದೆ.
ಉತ್ತರ ಪ್ರದೇಶ, ಗುಜರಾತ್‌ ಮತ್ತು  ಪಂಜಾಬ್‌ನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶವು  ದೇಶದಲ್ಲಿ  ರಾಜಕೀಯ ಗಾಳಿಯು ಯಾವ ದಿಕ್ಕಿನಲ್ಲಿ ಬೀಸಲಿದೆ ಎನ್ನುವುದನ್ನು ಸ್ಪಷ್ಟವಾಗಿ ಸೂಚಿಸಲಿದೆ. ಹೀಗಾಗಿ ರಾಜ್ಯಗಳೇ ಈಗ ದೇಶದ ರಾಜಕಾರಣದ ಕೇಂದ್ರ ಬಿಂದುಗಳಾಗಿ ಗಮನ ಸೆಳೆಯಲಿವೆ. 
 
ಉತ್ತರ ಪ್ರದೇಶದ ಚುನಾವಣಾ ಫಲಿತಾಂಶವು  ಬಿಜೆಪಿ ಪಾಲಿಗೆ ನಿಜವಾದ ಪರೀಕ್ಷೆಯಾಗಿರಲಿದೆ ಎಂದು ಅನೇಕರು ನಂಬಿದ್ದಾರೆ.  ಈ ವಿಷಯದಲ್ಲಿ ಗುಜರಾತ್‌  ರಾಜ್ಯದ ಮಹತ್ವವನ್ನೂ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಲಿಕ್ಕಾಗದು. ಪ್ರಧಾನಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ತವರು ರಾಜ್ಯವಾಗಿರುವ ಗುಜರಾತ್‌ನಲ್ಲಿ  ಪಕ್ಷವು ಒಂದು ವೇಳೆ  ಕಳಪೆ ಸಾಧನೆ ಪ್ರದರ್ಶಿಸಿದರೆ ಅದು ಪಕ್ಷ ಮತ್ತು ಅದರ ವರ್ಚಸ್ಸಿನ ಮೇಲೆ ಖಂಡಿತವಾಗಿಯೂ ಪ್ರತಿಕೂಲ ಪರಿಣಾಮ ಬೀರಲಿದೆ. 
 
ಈ ಮೂರೂ ರಾಜ್ಯಗಳಲ್ಲಿನ ಚುನಾವಣೆಯಲ್ಲಿ ತೀವ್ರ ಹಣಾಹಣಿ ನಡೆಯಲಿದೆ.   ಸಮಾಜವಾದಿ ಪಕ್ಷದಲ್ಲಿನ ಒಳಜಗಳವನ್ನು ಇತರ ರಾಜಕೀಯ ಪಕ್ಷಗಳು ಕುತೂಹಲದಿಂದ ವೀಕ್ಷಿಸುತ್ತಿವೆ. ಯುವ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರಿಗೆ ವ್ಯಾಪಕ ಬೆಂಬಲ ಕಂಡುಬರುತ್ತಿದೆ. ಅಖಿಲೇಶ್‌ ಅವರು  ಪಕ್ಷದ ಹಳೆಯ ತಲೆಮಾರಿನವರನ್ನು ಎದುರು ಹಾಕಿಕೊಂಡು ಗೆಲುವಿನ ನಗೆ ಬೀರುವರೇ ಅಥವಾ ಬಿಜೆಪಿ ನೆಲೆ ಗಟ್ಟಿಯಾಗಲು ಅವಕಾಶ ಮಾಡಿಕೊಡುವರೇ ಎನ್ನುವುದನ್ನು ಕಾದು ನೋಡಬೇಕಾಗಿದೆ.
 
ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಹೊಸ ವರ್ಷದಲ್ಲಿನ ವಿದ್ಯಮಾನಗಳ ಬಗ್ಗೆ ಕುತೂಹಲ ಇನ್ನಷ್ಟು ಹೆಚ್ಚಿದ್ದು, ನಿರೀಕ್ಷೆಗಳು ಗರಿಗೆದರಿವೆ.   ಹೊಸ ವರ್ಷವು ದೇಶದ ಭವಿಷ್ಯವನ್ನು ಅಸದೃಶ ರೀತಿಯಲ್ಲಿ ವಿಶೇಷವಾಗಿ ರೂಪಿಸಲಿರುವುದಂತೂ ಖಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT